ಹೊಯ್ಸಳ ವಿಷ್ಣುವರ್ಧನ
ಹೊಯ್ಸಳ ವಿಷ್ಣುವರ್ಧನ
ಒಂದನೆಯ ಬಲ್ಲಾಳನ (ಸು. 1100-08) ಕಾಲದಲ್ಲಿ ಹೊಯ್ಸಳ ಇತಿಹಾಸದಲ್ಲಿ ಒಂದು ಮುಖ್ಯ ತಿರುವು ಕಂಡುಬರುತ್ತದೆ. ಈ ಹಿಂದಿನ ದೊರೆಗಳಂತೆ ಈತನೂ ತ್ರಿಭುವನಮಲ್ಲ ಎಂಬ ಬಿರುದನ್ನು ಧರಿಸಿ ಚಾಳುಕ್ಯ ಸಾಮಂತತ್ವವನ್ನು ಒಪ್ಪಿಕೊಂಡಿದ್ದರೂ ಪ್ರಾಯಃ ಚಾಳುಕ್ಯ ವಿಕ್ರಮಾದಿತ್ಯನ ತಪ್ಪುನಡೆಯಿಂದಾಗಿ ಅವನ ಮಿತ್ರ ಸಾಮಂತ ಹೊಯ್ಸಳರ ಮೇಲೆರಗಿ ಬಂದು ಚಾಳುಕ್ಯ-ಹೊಯ್ಸಳ ಸಂಬಂಧವನ್ನು ಕಲಕಿದ. ಈ ಸಂದರ್ಭದಲ್ಲಿ ಶೌರ್ಯದಿಂದ ಹೋರಾಡಿ ವಿಜಯಿಗಳಾದ ಬಲ್ಲಾಳ-ವಿಷ್ಣುವರ್ಧನರಲ್ಲಿ ಹೊಸ ಧೈರ್ಯ, ಹುಮ್ಮಸ್ಸು ಬೆಳೆದುಬಂದು ಸುತ್ತಣ ಚೆಂಗಾಳ್ವ, ಆಳುಪ ರಾಜ್ಯಗಳನ್ನೇ ಅಲ್ಲದೆ ಚಾಳುಕ್ಯರ ಸಾಮಂತರಾದ ಉಚ್ಚಂಗಿ ಪಾಂಡ್ಯರ ಮೇಲೂ ಜಯಗಳಿಸಿದರು. ಇದು ಮಂಡಲೇಶ್ವರರಾಗಿದ್ದ ಹೊಯ್ಸಳರು ಸ್ವತಂತ್ರ ರಾಜ್ಯವನ್ನು ಸಾಧಿಸುವತ್ತ ಇಟ್ಟ ಮೊದಲ ಹೆಜ್ಜೆ ಎಂದು ಗುರುತಿಸಬಹುದು.
ವಿಷ್ಣುವರ್ಧನನ 1108-42ರ ಕಾಲದಲ್ಲಿ 34 ವರ್ಷಗಳ ಕಾಲ ರಾಜ್ಯವಾಳಿದ. ಈ ಕಾಲ ಹೊಯ್ಸಳ ಇತಿಹಾಸದಲ್ಲಿ ಮಹತ್ತ್ವಪೂರ್ಣವಾದುದು. ಚಿಕ್ಕ ನಾಡಾಗಿದ್ದ ಹೊಯ್ಸಳ ರಾಜ್ಯ ಸಾಮ್ರಾಜ್ಯ ಪದವನ್ನು ರೂಢಿಸಿಕೊಂಡಿದ್ದು ಈ ಕಾಲದಲ್ಲಿ. ವಿಷ್ಣುವರ್ಧನ ತಾನು ಪಟ್ಟವೇರುವ ಮೊದಲೇ ತಂದೆ ಎರೆಯಂಗ ಮತ್ತು ಅಣ್ಣ ಬಲ್ಲಾಳರ ಕಾಲದಲ್ಲಿ ಯುದ್ಧ ಮತ್ತು ರಾಜ್ಯಾಡಳಿತದಲ್ಲಿ ಭಾಗಿಯಾಗಿದ್ದು ಅಪಾರ ಅನುಭವವನ್ನು ಸಾಧಿಸಿದ್ದ. ಇದರ ಪೂರ್ಣ ಉಪಯೋಗವನ್ನು ಪಡೆದುಕೊಂಡು, ಆ ಪ್ರದೇಶದ ಶೂರಯೋಧರನ್ನು ಕಲೆಹಾಕಿ, ಗಂಗವಾಡಿಯನ್ನು ಪರಕೀಯರ ಆಳಿಕೆಯಿಂದ ಮುಕ್ತಗೊಳಿಸಿ, ಹೊಯ್ಸಳ ರಾಜ್ಯವನ್ನು ಚಾಳುಕ್ಯಾಧೀನತ್ವದಿಂದ ಪಾರುಮಾಡುವ ಎರಡು ಗುರಿಗಳನ್ನಿಟ್ಟುಕೊಂಡು ಕಾರ್ಯಾರಂಭ ಮಾಡಿದ.
ಚೋಳರೂ ಚಾಳುಕ್ಯರೂ ಪ್ರಬಲ ಸಾಮ್ರಾಟರಾದ್ದರಿಂದ ಅವರನ್ನು ಮೊದಲು ಎದುರಿಸುವುದು ಆತ್ಮಘಾತಕವಾದೀತೆಂದು ಭಾವಿಸಿ, ತನ್ನ ರಾಜ್ಯಾಡಳಿತದ ಆರಂಭದಲ್ಲಿ ಮೊದಲಿಗೆ ರಾಜ್ಯದ ಸುತ್ತಲಿದ್ದ ಚಿಕ್ಕಪುಟ್ಟ ತುಂಡರಸರನ್ನು ಮೆಟ್ಟಿ ತನ್ನ ಸೈನ್ಯಬಲ ಹಾಗೂ ಕೋಶವನ್ನು ವೃದ್ಧಿಸಿಕೊಂಡ. ಈ ಕಾರ್ಯಾಚರಣೆಯಲ್ಲಿ ಚೆಂಗಾಳ್ವರೂ, ಕೊಂಗಾಳ್ವರೂ ಆಳುಪರೂ ಪ್ರಾಯಶಃ ಉಚ್ಚಂಗಿಯ ಪಾಂಡ್ಯರೂ ಪೆಟ್ಟು ತಿಂದರು. ಇವರುಗಳ ಮೇಲೆ ಗಳಿಸಿದ ಜಯ ವಿಷ್ಣುವರ್ಧನನಿಗೆ ಹೆಚ್ಚು ಕೆಚ್ಚನ್ನು ಒದಗಿಸಿತು. ಕುಲೋತ್ತುಂಗ ಚೋಳ ವೆಂಗಿಯ ರಾಜಕೀಯದಲ್ಲಿ ಮಗ್ನನಾಗಿದ್ದ ಸುಸಂದರ್ಭವನ್ನು ಉಪಯೋಗಿಸಿಕೊಂಡು ತಲಕಾಡಿನ ಮೇಲೆ ದಾಳಿ ಮಾಡಿ (1116) ಅಲ್ಲಿದ್ದ ಆದಿಯಮನೆಂಬ ಚೋಳಪ್ರತಿನಿಧಿಯನ್ನೂ ಇನ್ನಿತರ ಚೋಳಾಧಿಕಾರಿಗಳನ್ನೂ ಓಡಿಸಿ ತಲಕಾಡನ್ನು ವಶಪಡಿಸಿಕೊಂಡದ್ದೇ ಅಲ್ಲದೆ, ಅದೇ ಭರದಲ್ಲಿ ಅವರುಗಳನ್ನು ಅಟ್ಟಿಸಿಕೊಂಡು ಘಟ್ಟದ ಮೇಲೆ ಈಗಿನ ಕೋಲಾರ, ಬೆಂಗಳೂರು ಜಿಲ್ಲೆಯ ಪ್ರದೇಶಗಳೂ ಘಟ್ಟದ ಕೆಳಗಿನ ಕೊಯಮತ್ತೂರು, ಸೇಲಂ, ಧರ್ಮಪುರಿ, ಉತ್ತರ ಆರ್ಕಾಟು ಜಿಲ್ಲೆಗಳ ಭಾಗಗಳ ಮೇಲೂ ದಾಳಿಮಾಡಿ, ಪ್ರಾಯಶಃ ಕಾಂಚೀಪುರದವರೆಗೂ ಮುನ್ನಡೆದ. ಇದೇ ಹುರುಪಿನಲ್ಲೇ ಉಚ್ಚಂಗಿ ಪಾಂಡ್ಯರನ್ನೂ ಸೋಲಿಸಿದ. ಒಂದು ಚಿಕ್ಕ ಅಧೀನ ರಾಜ್ಯದ ಚಿಕ್ಕ ಅರಸೊಬ್ಬ ಬೃಹತ್ ಚೋಳ ಸಾಮ್ರಾಟನ ಮೇಲೆ ಜಯಗಳಿಸಿದುದು ನಿಜಕ್ಕೂ ಮಹತ್ತ್ವದ ಸಂಗತಿ. ಈ ಎಲ್ಲ ಸಾಧನೆಗಳಿಂದ 1117ರ ಒಂದು ಶಾಸನ ವಿವರಿಸುವಂತೆ ದಕ್ಷಿಣದಲ್ಲಿ ಚೇರಮನ ಮಲೆ, ಕೊಂಗು ವಿಷಯದಿಂದ ಹಿಡಿದು (ನೀಲಗಿರಿ, ಕೊಯಮತ್ತೂರು ಬಳಿಯ ಭಾಗಗಳು) ಉತ್ತರದಲ್ಲಿ ಸಾವಿಮಲೆಯ (ಬಳ್ಳಾರಿ ಜಿಲ್ಲೆ ಸಂಡೂರು) ವರೆಗೂ ಪೂರ್ವದಲ್ಲಿ ಸಂಗಲಿಘಟ್ಟದಿಂದ (ಕೋಲಾರ ಜಿಲ್ಲೆ ಮುಳಬಾಗಲು ನಂಗಲಿ) ಪಶ್ಚಿಮದಲ್ಲಿ ಬಾರಕನೂರು ಘಟ್ಟದ (ಸಹ್ಯಾದ್ರಿಯ ಪಶ್ಚಿಮ ಅಂಚು) ವರೆಗೂ ಹೊಯ್ಸಳ ರಾಜ್ಯ ವಿಸ್ತೃತವಾಯಿತು. ಹಿಂದೆ ಗಂಗರ ಅನೂಚಾನ ಆಧಿಪತ್ಯಕ್ಕೊಳಪಟ್ಟಿದ್ದ ರಾಜ್ಯವೆಲ್ಲ, ವಿಷ್ಣುವರ್ಧನನ ಏಕಚ್ಛತ್ರದಡಿಗೆ ಬಂದು, ಹೊಯ್ಸಳರು ಗಂಗವಾಡಿ 96000ದ ನಾಯಕರೆಂಬ ಹೇಳಿಕೆಯೂ ಇವನ ವೀರಗಂಗನೆಂಬ ಬಿರುದೂ ಸಫಲವಾದುವು.
ಚಾಳುಕ್ಯ 6ನೆಯ ವಿಕ್ರಮಾದಿತ್ಯ ಮೊದಲಿಗೆ ತನ್ನ ಸಾಮಂತರಾಗಿದ್ದ ಈ ಹೊಯ್ಸಳರ ಏಳ್ಗೆಯನ್ನು ಗಮನಿಸುತ್ತಲೇ ಬಂದಿದ್ದ. ಅವನು ತನ್ನ ರಾಜ್ಯದ ದಕ್ಷಿಣದಲ್ಲಿ ಪ್ರಬಲವಾಗುತ್ತಿದ್ದುದಲ್ಲದೆ ಹಿಂದೆ ಉಂಟಾದ ಚಾಳುಕ್ಯ-ಹೊಯ್ಸಳ ವಿರಸದಿಂದ ಹೆಚ್ಚುಕಡಿಮೆ ಸ್ವತಂತ್ರರಂತೆಯೇ ವರ್ತಿಸುತ್ತ, ನಿಷ್ಠಾವಂತ ಚಾಳುಕ್ಯ ಸಾಮಂತರಾಗಿದ್ದ ಉಚ್ಚಂಗಿ ಪಾಂಡ್ಯರ ಮೇಲೂ ಹೊಯ್ಸಳರ ದಾಳಿ ನಡೆದದ್ದನ್ನು ಸಹಿಸಲಿಲ್ಲ. 1118ರಲ್ಲಿ ವಿಷ್ಣುವರ್ಧನನನ್ನು ಬಗ್ಗಿಸಲು ಬೃಹತ್ ಸೈನ್ಯವೊಂದನ್ನು ಕಳುಹಿಸಿದಾಗ ಹೊಯ್ಸಳ ದಂಡನಾಯಕರು ಶೌರ್ಯದಿಂದ ಎದುರಿಸಿ, ಚಾಳುಕ್ಯ ಬಲವನ್ನು ಹಿಮ್ಮೆಟ್ಟಿಸಿದರು. ಚಾಳುಕ್ಯ ಶೃಂಖಲೆ ಮುರಿಯಿತು. ಹೊಯ್ಸಳ ಸಾರ್ವಭೌಮತ್ವ ಸಿದ್ಧವಾಯಿತು. ಮುಂದಿನ ವರ್ಷಗಳಲ್ಲಿ ವಿಷ್ಣುವರ್ಧನ ತಾನು ಗಳಿಸಿದ ನಾಡಿನ ಸುವ್ಯವಸ್ಥೆಗೆ ಗಮನ ಕೊಟ್ಟುದಲ್ಲದೆ ಅವಕಾಶ ಒದಗಿದಾಗ ಚಾಳುಕ್ಯ ರಾಜ್ಯದ ಒಳಕ್ಕೂ ತನ್ನ ಆಧಿಪತ್ಯವನ್ನು ವಿಸ್ತರಿಸಲು ಯತ್ನಿಸಿದ. ಈ ಕೆಲಸ ಸುಲಭಸಾಧ್ಯವಾಗಿರಲಿಲ್ಲ. ಆತ ಪ್ರತಿ ಹೆಜ್ಜೆಯಲ್ಲೂ ಚಾಳುಕ್ಯರು ಮತ್ತು ಅವರ ನಿಷ್ಠ ಸಾಮಂತರೊಡನೆ ಸತತ ಹೋರಾಟ ನಡೆಸಬೇಕಾಯಿತು. 6ನೆಯ ವಿಕ್ರಮಾದಿತ್ಯನ ಅನಂತರ ಬಂದ ಭೂಲೋಕಮಲ್ಲ ಅಷ್ಟೇನೂ ಶಕ್ತನಾಗಿರಲಿಲ್ಲವಾಗಿ ಅವನ ರಾಜ್ಯದಲ್ಲೇ ಸ್ವಹಿತ ಸಾಧಕರು ಬೆಳೆದಿದ್ದು, ಸ್ವಲ್ಪಮಟ್ಟಿಗೆ ವಿಷಮ ಪರಿಸ್ಥಿತಿಯೂ ಇದ್ದಿತಾದ್ದರಿಂದ ವಿಷ್ಣುವರ್ಧನ ಹಲವು ಸಂದರ್ಭಗಳಲ್ಲಿ ಹಾನುಗಲ್ಲಿನ ಕದಂಬರು ಮುಂತಾದವರನ್ನು ಸೋಲಿಸಿ ಕೃಷ್ಣಾ ನದಿಯ ವರೆಗೂ ಮುನ್ನಡೆದನಲ್ಲದೆ ತನ್ನ ಆಳಿಕೆಯ ಕೊನೆಯ ಘಟ್ಟದಲ್ಲಿ ಬೆಳ್ವೊಲ ಪ್ರಾಂತವನ್ನೆಲ್ಲ ಆಕ್ರಮಿಸಿ, ಬಂಕಾಪುರವನ್ನು ನೆಲೆವೀಡಾಗಿ ಮಾಡಿಕೊಂಡ. ಪ್ರಾಯಶಃ ಈ ಕಾಲದಲ್ಲಿ ದಕ್ಷಿಣದಲ್ಲಿದ್ದ ಚೋಳರೂ ಬಲಗುಂದಿದ್ದು, ಅತ್ತ ಕಡೆಯಿಂದ ಆಕ್ರಮಣ ಭಯವೂ ಇಲ್ಲದ್ದು, ಉತ್ತರದಲ್ಲಿ ಹೊಯ್ಸಳ ರಾಜ್ಯದ ವಿಸ್ತರಣೆಗೆ ಕಾರಣವಾಗಿರಬೇಕು. ವಿಷ್ಣುವರ್ಧನನ ಶೌರ್ಯ, ರಾಜಕೀಯ ಮುತ್ಸದ್ದಿತನ, ಇವನ ದಂಡನಾಯಕರು ಮತ್ತು ಸಾಮಂತರ ಅಚಲ ನಿಷ್ಠೆ-ಇವುಗಳಿಂದ ಹೊಯ್ಸಳರು ದಕ್ಷಿಣ ಭಾರತದ ರಾಜಕೀಯದ-ಚೋಳ-ಚಾಳುಕ್ಯರ ಜೊತೆಗೆ-ಇನ್ನೊಂದು ಮುಖ್ಯ ಬಲವಾಗಿ ನೆಲೆಗೊಂಡರು.
ಹೊಯ್ಸಳರ ಆಡಳಿತದಲ್ಲಿ ರಾಜನು ಸವೋಚ್ಚ ಸೇನಾನಿಯೂ ನ್ಯಾಯಾಧಿಪತಿಯೂ ಆಗಿರುತ್ತಿದ್ದ. ಆದರೆ ಸ್ವೇಚ್ಛಾಧಿಕಾರಿಯಾಗಿರುತ್ತಿರಲಿಲ್ಲ. ಪರಂಪರಾನುಗತವಾದ ಪದ್ಧತಿಗಳು, ಧರ್ಮ, ಮಂತ್ರಿ ಪರಿಷತ್ತು ಮತ್ತು ಇತರ ಅಂಗವ್ಯವಸ್ಥೆಗಳು ರಾಜನ ಸ್ವೇಚ್ಛಾಧಿಕಾರಕ್ಕೆ ಇದ್ದ ತಡೆಗಳಾಗಿದ್ದವು. ಹೊಯ್ಸಳ ರಾಜರು ಧರ್ಮಶಾಸ್ತ್ರಕ್ಕನುಗುಣವಾಗಿ ಆಡಳಿತ ನಡೆಸುವುದು ತಮ್ಮ ಕರ್ತವ್ಯವೆಂದು ನಂಬಿದ್ದರು. ಅನೇಕಾನೇಕ ಶಾಸನಗಳಲ್ಲಿ ಮನು, ಯಾಜ್ಞವಲ್ಕ್ಯ, ಕೌಟಿಲ್ಯ ಮೊದಲಾದ ರಾಜನೀತಿಕರ್ತೃಗಳನ್ನು ಸ್ಮರಿಸಲಾಗಿದೆ. ರಾಜ್ಯ ಸಪ್ತಾಂಗಗಳಿಂದ ಕೂಡಿದುದೆಂಬ ನಂಬಿಕೆಯಿತ್ತು. ದುಷ್ಟಶಿಕ್ಷಣ, ಶಿಷ್ಟರಕ್ಷಣ ರಾಜನ ಪ್ರಮುಖ ಕರ್ತವ್ಯವೆಂಬ ನಂಬಿಕೆಯಿತ್ತು. ರಾಜ ಆಗಾಗ ರಾಜ್ಯದಲ್ಲಿ ಸಂಚರಿಸಿ ಪ್ರಜೆಗಳ ಕುಂದುಕೊರತೆಗಳನ್ನು ನಿವಾರಿಸುವುದಲ್ಲದೆ ಗ್ರಾಮ ಮುಂತಾದ ರಾಜ್ಯದ ಉಪಾಂಗಗಳಲ್ಲಿ ಉದ್ಭವಿಸಿದ ಸಮಸ್ಯೆಗಳನ್ನೂ ಪರಿಹರಿಸುತ್ತಿದ್ದ; ಕೆರೆಕಾಲುವೆಗಳನ್ನು ಕಟ್ಟಿಸಿ ಅಗ್ರಹಾರಗಳನ್ನು ಸ್ಥಾಪಿಸಿ ವ್ಯವಸಾಯ, ವ್ಯಾಪಾರ, ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿದ್ದ. ಹೊಯ್ಸಳ ರಾಜರು ಯುದ್ಧಗಳಲ್ಲಿ ಸ್ವತಃ ಸೈನ್ಯವನ್ನು ನಡೆಸಿ ಪರಾಕ್ರಮದಿಂದ ಹೋರಾಡಿ ಸೈನಿಕರಿಗೆ ಸ್ಫೂರ್ತಿ ನೀಡುತ್ತಿದ್ದರು. ವೀರಯೋಧರನ್ನು ಸನ್ಮಾನಿಸುತ್ತಿದ್ದರು. ಹೊಯ್ಸಳರ ಆಡಳಿತ ವ್ಯವಸ್ಥೆಯಲ್ಲಿ ರಾಣಿಯರು ಜವಾಬ್ದಾರಿಯುತವಾದ ಪಾತ್ರವನ್ನು ವಹಿಸುತ್ತಿದ್ದರು. ಪಟ್ಟಮಹಿಷಿ ಮತ್ತು ಇತರ ರಾಣಿಯರು ವಿಷ್ಣುವರ್ಧನನ ಆಳಿಕೆಯ ಪ್ರಾರಂಭದಿಂದ ಹೊಯ್ಸಳ ಸಂತತಿಯ ಕೊನೆಯವರೆಗೂ ಆಡಳಿತದಲ್ಲಿ ಪಾಲ್ಗೊಂಡಿದ್ದ ಸಾಕಷ್ಟು ನಿದರ್ಶನಗಳು ಶಾಸನಗಳಿಂದ ತಿಳಿದುಬರುತ್ತವೆ.
ದೊಡ್ಡ ದೊಡ್ಡ ಪಟ್ಟಣಗಳ ಆಡಳಿತಕ್ಕಾಗಿ ಪುರಸಭೆಗಳಿದ್ದುವು. ದೋರಸಮುದ್ರ, ಅರಸೀಕೆರೆ, ಶ್ರವಣಬೆಳಗೊಳ, ಬಳ್ಳಿಗಾಮೆ ಮೊದಲಾದ ಪಟ್ಟಣ ಸಭೆಗಳ ಹಾಗೂ ಆಡಳಿತ ಮುಖ್ಯರ ಹೆಸರುಗಳು ಶಾಸನಗಳಲ್ಲಿ ದೊರೆಯುತ್ತವೆ.
ಈ ಕಾಲದಲ್ಲಿ ರಾಜ್ಯ ಸುಭಿಕ್ಷವಾಗಿತ್ತು. ರಾಜ್ಯದ ಆದಾಯದ ಹೆಚ್ಚಿನ ಪಾಲು ಕೃಷಿ, ವ್ಯಾಪಾರ ಕ್ಷೇತ್ರಗಳಿಂದ ಸಲ್ಲುತ್ತಿತ್ತು. ಪ್ರಜೆಗಳು ತೆರಬೇಕಾಗಿದ್ದ ತೆರಿಗೆಗಳು ಹಲವಿದ್ದುವು. ಭೂಕಂದಾಯ, ವ್ಯಾಪಾರ ಸಂಬಂಧದ ತೆರಿಗೆಗಳ ಜೊತೆಗೆ ವೃತ್ತಿತೆರಿಗೆ, ಜಾತಿತೆರಿಗೆ, ಸಾಮಾಜಿಕ ಸಮಾರಂಭಗಳ ಮೇಲೆ ವಿಧಿಸಲಾಗುತ್ತಿದ್ದ ತೆರಿಗೆ ಮುಂತಾದವೂ ಇದ್ದುವು. ಗದ್ಯಾಣ, ಹಣ, ಹಾಗ, ಅಡ್ಡ, ಬೇಳೆ ಮುಂತಾದ ವಿವಿಧ ಮೌಲ್ಯದ ನಾಣ್ಯಗಳು ಚಲಾವಣೆಯಲ್ಲಿ ಇದ್ದುವು. ಖಂಡುಗ, ಸಲಗೆ, ಕೊಳಗ, ಕಂಬ, ಬಳ್ಳ, ಮಾನ ಮುಂತಾದವು ಅಳತೆಯ ಮಾನಗಳಿದ್ದವು. ನಿಯತವಾಗಿ ಭೂಮಾಪನೆ ನಡೆಯುತ್ತಿತ್ತು. ಭೂ ವಿವಾದ ಉಂಟಾದಾಗ ಹೊಸದಾಗಿ ಭೂಮಾಪನೆ ನಡೆಯುತ್ತಿತ್ತು.
ರಾಜ್ಯದಲ್ಲಿ ಧಾರ್ಮಿಕ ಸಹಿಷ್ಣುತೆ ನೆಲಸಿತ್ತು. ಸರ್ವಧರ್ಮಗಳಿಗೂ ಸಮಾನ ಪೋಷಣೆ ಪ್ರೋತ್ಸಾಹ ದೊರೆಯಿತು. ವಿಭಿನ್ನ ಧರ್ಮಗಳಿಗೆ ಸೇರಿದವರು ವಿವಾಹವಾಗಿ ಸಹಬಾಳ್ವೆ ನಡೆಸಿದ ದೃಷ್ಟಾಂತ ಈ ಕಾಲದಲ್ಲಿ ಕಾಣಸಿಗುತ್ತದೆ. ಚಂದ್ರಮೌಳಿ ಎಂಬ ಅಧಿಕಾರಿ ಶೈವ, ಆದರೆ ಇವನ ಪತ್ನಿ ಅಚ್ಚಿಯಕ್ಕ ಜೈನಧರ್ಮಾವಲಂಬಿ. ಬ್ರಾಹ್ಮಣರಿಗೆ, ಜೈನಗುರುಗಳಿಗೆ, ಶ್ರೀವೈಷ್ಣವ ಆಚಾರ್ಯರಿಗೆ ಪೂಜ್ಯಸ್ಥಾನವಿತ್ತು. ತಮಿಳು ವಿದ್ವಾಂಸರು ಹೊಯ್ಸಳನಾಡಿಗೆ ಬಂದು ವೈಷ್ಣವ ಧರ್ಮಪ್ರಸಾರದಲ್ಲಿ ನಿರತರಾದರು. ಆಗಾಗ ಧಾರ್ಮಿಕ ವಿಷಯಗಳಲ್ಲಿ ಚರ್ಚಾಸಭೆಗಳು ನಡೆಯುತ್ತಿದ್ದುವು. ಅರಸರ ಬಿರುದುಗಳಲ್ಲಿ ಚತುಸ್ಸಮಯಸಮುದ್ಧರಣ ಎಂಬುದೂ ಒಂದು. ವೇದಾಧ್ಯಯನ, ಲಲಿತಕಲೆಗ ಳಿಗೆ ಪ್ರೋತ್ಸಾಹ ದೊರೆಯಿತು. ರಾಜನೂ ಅಧಿಕಾರಿಗಳೂ ವ್ಯಾಪಾರಿಗಳೂ ಖಾಸಗಿ ವ್ಯಕ್ತಿಗಳೂ ಧರ್ಮಕಾರ್ಯನಿರತರಾಗಿದ್ದನ್ನು ಈ ಕಾಲದಲ್ಲಿ ಕಾಣುತ್ತೇವೆ.
ಸ್ತ್ರೀಯರಿಗೆ ಲಲಿತಕಲೆ ಮುಂತಾದ ಕೆಲವು ರಂಗಗಳಲ್ಲಿ ವಿಶೇಷ ಪ್ರೋತ್ಸಾಹಗಳಿದ್ದುವು. ವಿಷ್ಣುವರ್ಧನನ ಪತ್ನಿ ಶಾಂತಲೆ ಸಂಗೀತನಾಟ್ಯ ಸರಸ್ವತಿ ಎಂದು ಖ್ಯಾತಳಾಗಿದ್ದಳು. ಕೆಲವು ಸ್ತ್ರೀ ಅಧಿಕಾರಿಗಳೂ ಇದ್ದರು.
ಸೋಮನಾಥಪುರ, ಬೆಳ್ಳೂರು, ಸರ್ವಜ್ಞಪುರ, ಕೆಲ್ಲಂಗೆರೆ ಮುಂತಾದವು ಈ ಕಾಲದ ಕೆಲವು ವಿದ್ಯಾಕೇಂದ್ರಗಳು. ದೇವಾಲಯಗಳು ಚಿಕ್ಕ ಸಾಮಾಜಿಕ ಕೇಂದ್ರಗಳಾಗಿ ಜನರಿಗೆ ಮಾರ್ಗದರ್ಶಕವಾಗಿದ್ದುವು.
ಮಧ್ಯಕಾಲೀನ ಭಾರತೀಯ ವಾಸ್ತು-ಶಿಲ್ಪ ಕ್ಷೇತ್ರದಲ್ಲಿ 11 ರಿಂದ 13ನೆಯ ಶತಮಾನದ ಕೊನೆಯ ವರೆಗೆ ಅಸ್ತಿತ್ವದಲ್ಲಿದ್ದ ಹೊಯ್ಸಳ ಶೈಲಿ ನೋಡುಗರ ಮನಸ್ಸನ್ನು ಸೆರೆಹಿಡಿದಿಡುವ, ಮರೆಯಲಾಗದಂಥ ದೃಶ್ಯಗಳನ್ನು ನಿರ್ಮಿಸುವ ತನ್ನ ಗುಣಗಳಿಂದ ಒಂದು ವಿಶಿಷ್ಟ ಸ್ಥಾನವನ್ನು ಗಳಿಸಿಕೊಂಡಿದೆ. ಹೊಯ್ಸಳ ರೂವಾರಿಗಳು ವಾಸ್ತುಶಿಲ್ಪ ಕ್ಷೇತ್ರದಲ್ಲಿ ಔತ್ತರೇಯ-ದಾಕ್ಷಿಣಾತ್ಯ ವಾಸ್ತುಶೈಲಿಗಳ ಪ್ರಮುಖ ಲಕ್ಷಣಗಳನ್ನು ತಮ್ಮ ಕಾಲದ ನಿರ್ಮಾಣಗಳಲ್ಲಿ ಅಳವಡಿಸಿಕೊಂಡರೂ ಅವಕ್ಕೆ ತಮ್ಮ ಪ್ರತಿಭಾಶಕ್ತಿಯ ದ್ಯೋತಕವಾಗಿ ಹೊಸ ರೂಪವನ್ನು ಕೊಟ್ಟು ಶೈಲಿಯ ಸೊಬಗನ್ನು ದ್ವಿಗುಣಗೊಳಿಸಿದ್ದಾರೆ. ಹೊಯ್ಸಳ ಶೈಲಿ ಇತರ ಶೈಲಿಗಳ ಪ್ರಧಾನ ಲಕ್ಷಣಗಳ ಹೊರರೂಪದ ಒಗ್ಗೂಡಿಕೆಗೆ ಸೀಮಿತವಾಗಿ ನಿಲ್ಲದೆ ಅವುಗಳ ಸಮಗ್ರ ಸಂಯೋಜನೆಯನ್ನು ಸಾಧಿಸುವುದರೊಂದಿಗೆ ಕೆಲವು ಹೊಸ ವಿಶಿಷ್ಟ ಅಂಶಗಳನ್ನೂ ಸೃಷ್ಟಿಸಿತು.
ಹೊಯ್ಸಳ ಶೈಲಿಯ ಉಗಮಕ್ಕೆ ದಕ್ಷಿಣ ಭಾರತದ ಚೋಳ-ಪಾಂಡ್ಯ ವಾಸ್ತುಶೈಲಿಯೂ ದಖನ್ನಿನ ಕಲ್ಯಾಣ ಚಾಳುಕ್ಯ ಶೈಲಿಯೂ ಮೈಸೂರು ಪ್ರದೇಶದಲ್ಲೇ ಬಳಕೆಯಲ್ಲಿದ್ದ ಗಂಗ, ನೊಳಂಬ ಕಟ್ಟಡಗಳೂ ಸ್ಫೂರ್ತಿಯನ್ನೊದಗಿಸಿದುವು. ಹೊಯ್ಸಳ ವಾಸ್ತುಶಿಲ್ಪಿಗಳು ಇವುಗಳಲ್ಲಿ ಯಾವೊಂದು ಪದ್ಧತಿಯ ಅನುಕರಣೆ ಮಾಡುವುದರಿಂದಲೂ ತೃಪ್ತರಾಗಲಿಲ್ಲ; ಅವೆಲ್ಲವುಗಳ ಅಂಶಗಳನ್ನು ಅಳವಡಿಸಿಕೊಂಡರೂ ಅಪೂರ್ವ ಪ್ರಯೋಗಪರರಾಗಿ ಹೊಸ ಪದ್ಧತಿಯೊಂದರ ಸೃಷ್ಟಿಯತ್ತ ದಿಟ್ಟ ಹೆಜ್ಜೆಯನ್ನಿಟ್ಟರು. ಅವರ ವಿಶಿಷ್ಟ ಗುಣಗಳೆಂದರೆ ಸರಳತೆಯನ್ನು ತಿರಸ್ಕರಿಸಿದುದು, ಅನುಕರಣೆಯ ಮಾರ್ಗವನ್ನು ತ್ಯಜಿಸಿದುದು; ಮತ್ತು ಅಲಂಕರಣಶೀಲ ಸೂಕ್ಷ್ಮಕೆತ್ತನೆಗಳನ್ನು ಸೃಷ್ಟಿಸುವ ಮೂಲಕ ಇತರ ಶೈಲಿಗಳಲ್ಲಿ ರೂಢಿಯಲ್ಲಿದ್ದ ಸುಂದರ ವಾಸ್ತುರೂಪಗಳನ್ನು ಭವ್ಯಕಲಾಭಾಂಡಾರಗಳಾಗಿ ಪರಿವರ್ತಿಸಿದುದು. ಬೇಲೂರು, ಹಳೇಬೀಡು ದೇವಾಲಯಗಳ ಬಾಗಿಲುಗಳ ಮೇಲಿನ ಮಕರ ತೋರಣಗಳಲ್ಲಿ ಕಾಣುವ ಸೂಕ್ಷ್ಮತರವಾದ ಕೆತ್ತನೆ ಅಕ್ಕಸಾಲಿಗರ ಕುಸುರಿ ಕೆಲಸವನ್ನೂ ಮೀರಿಸುವಂಥದು. ಬೇಲೂರು ದೇವಾಲಯದ ಕೆಲವು ಕಂಬಗಳ ಮೇಲಿನ ಸೂಕ್ಷ್ಮಕೆತ್ತನೆಗಳು ರೂವಾರಿಗಳ ಕಲಾಪ್ರೌಢಿಮೆಯ ಅಪೂರ್ವ ನಿದರ್ಶನಗಳು. ಶಿಲಾಬಾಲಿಕೆಯರೆಂದು ಪ್ರಸಿದ್ಧವಾಗಿರುವ ಸಾಲಭಂಜಿಕೆಗಳು-ಅದರಲ್ಲೂ ಬೇಲೂರಿನ ಚೆನ್ನಕೇಶವ ದೇವಾಲಯದ ನವರಂಗದ ಕಂಬಗಳ ಮೇಲಿರುವ ನಾಲ್ಕು ವಿಗ್ರಹಗಳು ಹೊಯ್ಸಳ ಶಿಲ್ಪಿಗಳನ್ನು ಅಮರ ಕೀರ್ತಿ ಭಾಜನರನ್ನಾಗಿಸಿವೆ. ಹೊಯ್ಸಳ ಶೈಲಿ ಎಂದು ಕರೆಯಬಹುದಾದ ಈ ಎಲ್ಲ ವೈಶಿಷ್ಟ್ಯಗ ಳನ್ನೂ ಉಳ್ಳ ಸು. 60 ದೇವಾಲಯಗಳು ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ತುಮಕೂರು, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಉಳಿದು ಬಂದಿವೆ. ಇವುಗಳಲ್ಲಿ ಅತಿಪ್ರಾಚೀನವಾದುದು ಬೇಲೂರಿನ ಚೆನ್ನಕೇಶವ ದೇವಾಲಯ (1117). ದೊಡ್ಡಗದ್ದವಳ್ಳಿಯ ಲಕ್ಷ್ಮೀದೇವಾಲಯದಲ್ಲಿ (ಸು. 1113) ಈ ಶೈಲಿಯ ಉಗಮದ ಸೂಚನೆಗಳು ಕಂಡುಬರುತ್ತವೆ. ಆದರೆ ಪೂರ್ಣ ರೂಪಣೆ ಇಲ್ಲ. ಹಳೇಬೀಡು, ಸೋಮನಾಥಪುರ, ಬಸರಾಳು, ನಾಗಮಂಗಲ, ಅರಸೀಕೆರೆ, ಹರಿಹರ, ನಂದಿತಾವರೆ, ಅರಳಗುಪ್ಪೆ, ರಾಮನಾಥಪುರ, ಮರಲೆ, ಬೆಳ್ಳೂರು, ನಾಗಲಾಪುರ, ನೊಣವಿನಕೆರೆ, ವಿಘ್ನಸಂತೆ, ನುಗ್ಗೇಹಳ್ಳಿ, ಹೊಸಹೊಳಲು, ಹಾರ್ನಹಳ್ಳಿ, ಹುಲ್ಲೇಕೆರೆ, ಜಾವಗಲ್ಲು, ಬೆಳವಾಡಿ, ತುರುವೇಕೆರೆ, ಭದ್ರಾವತಿ, ಜಿನನಾಥಪುರ ಮೊದಲಾದೆಡೆಗಳಲ್ಲಿ ಕಟ್ಟಿದ ಈ ವಿಶಿಷ್ಟ ಹೊಯ್ಸಳ ಶೈಲಿಯ ದೇವಾಲಯಗಳು ಬೆಳಕಿಗೆ ಬಂದಿವೆ. ಬೇಲೂರಿನಲ್ಲಿ ಸ್ಪಷ್ಟವಾಗಿ ರೂಪಿತವಾದ ಈ ಶೈಲಿ ಸುಮಾರು ಎರಡು ಶತಮಾನಗಳ ವರೆಗೆ ಮುಂದುವರಿಯಿತು. ತುಮಕೂರು ಜಿಲ್ಲೆಯ ವಿಘ್ನಸಂತೆಯಲ್ಲಿರುವ ಲಕ್ಷ್ಮೀನರಸಿಂಹ ದೇವಾಲಯ (1286) ಪ್ರಾಯಶಃ ಈ ಶೈಲಿಯಲ್ಲಿ ರಚಿತವಾದ ಕೊನೆಯ ಕಟ್ಟಡ.
ಒಟ್ಟಿನಲ್ಲಿ ಹೊಯ್ಸಳ ಸಾಮ್ರಾಜ್ಯದ ಸುಮಾರು ಎರಡೂವರೆ ಶತಮಾನದ ಅಸ್ತಿತ್ವದ ಅವಧಿಯಲ್ಲಿ ಕಟ್ಟಿದ 150ಕ್ಕೂ ಹೆಚ್ಚಿನ ದೇವಾಲಯಗಳು ಈಗ ಉಳಿದಿರುವುವಲ್ಲದೆ ಇನ್ನೂ ಅನೇಕ ದೇವಾಲಯ ಗಳು ಆ ಕಾಲದಲ್ಲಿ ಕಟ್ಟಲಾಗಿದ್ದುವು ಎಂಬುದಕ್ಕೆ ಶಾಸನಾಧಾರಗಳು ದೊರಕುತ್ತವೆ. ಈ ಅಸಂಖ್ಯಾತ ದೇಗುಲಗಳ ಸೃಷ್ಟಿಗೆ ಆ ಕಾಲದಲ್ಲಿದ್ದ ಶಾಂತ, ಸಮೃದ್ಧ ಸ್ಥಿತಿ ಮತ್ತು ಧರ್ಮಶ್ರದ್ಧೆ ಮುಖ್ಯಕಾರಣ. ರಾಜರುಗಳೇ ಅಲ್ಲದೆ, ರಾಜವಂಶದ ಇತರರು, ಸಾಮಂತರು, ವಣಿಕರು, ವಣಿಕಾ ಸಂಘಗಳು, ವೃತ್ತಿಸಂಘಗಳು ಹಾಗೂ ಸಾಮಾನ್ಯರು ದೇವಾಲಯಗಳನ್ನು ಕಟ್ಟಿಸಿರುವರಲ್ಲದೆ, ಅವುಗಳ ಜೀರ್ಣೋದ್ಧಾರ ಮತ್ತು ಪೂಜಾದಿಗಳಿಗೂ ದತ್ತಿಗಳನ್ನು ನೀಡಿದ್ದಾರೆ. ಹೊಯ್ಸಳ ದೇವಾಲಯಗಳಲ್ಲಿ ಹೆಚ್ಚಿನವು ಶೈವ ಮತ್ತು ವೈಷ್ಣವ ಪಂಥಕ್ಕೆ ಸೇರಿದವು. ಇವಲ್ಲದೆ ಹಲವಾರು ಜೈನಬಸದಿಗಳೂ ಈ ಕಾಲದಲ್ಲಿ ಹುಟ್ಟಿದುವು.
ಸಾಮಾಜಿಕ ನೆಮ್ಮದಿ ನೆಲೆಯೂರಿದ್ದ ಹೊಯ್ಸಳ ಯುಗ ಸಾಹಿತ್ಯ, ಕಲೆ ಇವುಗಳ ಸಂವರ್ಧನೆಯ ಕಾಲ. ಹೊಯ್ಸಳ ಅರಸರು ಬೇರೆ ಸಂತತಿಯ ಕೆಲವು ರಾಜರು ಹೇಳಿಕೊಂಡಿರು ವಂತೆ ತಾವೇ ಗ್ರಂಥರಚನೆಗೆ ಕೈಹಾಕದಿದ್ದರೂ ಕವಿಗಳಿಗೂ ದಾರ್ಶನಿಕರಿಗೂ ವಿಶೇಷ ಪ್ರೋತ್ಸಾಹ ನೀಡಿದರು. ಇವರ ಕಾಲದಲ್ಲಿ ಧರ್ಮ, ದರ್ಶನ, ಪುರಾಣ, ಗಣಿತ, ವೈದ್ಯ, ವ್ಯಾಕರಣ ಮೊದಲಾದ ಶಾಸ್ತ್ರಗಂಥಗಳಲ್ಲದೆ ಹಲವು ಕಾವ್ಯಗಳೂ ಚಂಪೂ, ರಗಳೆ, ಷಟ್ಟದಿ, ನಾಟಕ, ದ್ವಿಪದಿ, ವಚನ ಮೊದಲಾದ ಪ್ರಕಾರಗಳಲ್ಲಿ ಸಂಸ್ಕೃತ, ಪ್ರಾಕೃತ, ಕನ್ನಡ ಭಾಷೆಗಳಲ್ಲಿ ರಚಿತವಾದವು. ಹೊಯ್ಸಳರ ಕಾಲದಲ್ಲಿ ರಚಿತವಾದ ಕನ್ನಡ ಮತ್ತು ಸಂಸ್ಕೃತ ಸಾಹಿತ್ಯ ಗ್ರಂಥಗಳು ತತ್ಕಾಲೀನ ಸಾಮಾಜಿಕ ಸ್ಥಿತಿಗತಿಗಳು, ನಂಬಿಕೆ ಮತ್ತು ನಡೆವಳಿಕೆಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಒದಗಿಸುತ್ತವೆ.
ಸಂಗೀತ ಮತ್ತು ನೃತ್ಯಗಳು ಹೆಚ್ಚು ಜನಪ್ರಿಯವಾಗಿದ್ದುವು. ಬೇಲೂರು, ಹಳೇಬೀಡು ಮತ್ತು ಸೋಮನಾಥಪುರ ದೇವಾಲಯದಲ್ಲಿ ಕೆತ್ತಿರುವ ನೃತ್ಯಕಲಾ ಶಿಲ್ಪಗಳು ರಸ, ರಾಗ ಮತ್ತು ವಿವಿಧ ಭಂಗಿಗಳಲ್ಲಿ ವಿರಾಜಿಸುತ್ತಿವೆ. ರಾಜಾಸ್ಥಾನಗಳು ಮತ್ತು ದೇವಾಲಯಗಳಲ್ಲಿ ಸರ್ವೇಸಾಮಾನ್ಯವಾಗಿ ನೃತ್ಯಕಲೆಯ ಏರ್ಪಾಟಿರುತ್ತಿತ್ತು. ಸಂಗೀತ ಮತ್ತು ನೃತ್ಯ ಧಾರ್ಮಿಕ ಜೀವನ ಮತ್ತು ಭಕ್ತಿಭಾವದ ಅಂಗವಾಗಿದ್ದುದರಿಂದ ಮುಖ್ಯ ದೇವಾಲಯಗಳಲ್ಲಿ ನರ್ತನಕ್ಕೆ ವ್ಯವಸ್ಥೆ ಮಾಡಿ ನರ್ತಕಿಯರ ಜೀವನಕ್ಕಾಗಿ ಭೂಮಿಯನ್ನು ಸರ್ವಮಾನ್ಯವಾಗಿ ನೀಡಲಾಗುತ್ತಿತ್ತು. ಮುಖ್ಯ ಪಟ್ಟಣಗಳಲ್ಲಿ ನೃತ್ಯಕ್ಕೇ ಮೀಸಲಾದ ದೊಡ್ಡಕಟ್ಟಡಗಳೂ ಇದ್ದವು.
ಹೊಯ್ಸಳ ರಾಜರು ಸಂಗೀತ ಮತ್ತು ನೃತ್ಯಕ್ಕೆ ವಿಶೇಷ ಪ್ರೋತ್ಸಾಹ ನೀಡಿದರು. ವಿಷ್ಣುವರ್ಧನನ ಪಟ್ಟದ ರಾಣಿಯಾದ ಶಾಂತಲೆ ಸಂಗೀತ ಮತ್ತು ನೃತ್ಯದಲ್ಲಿ ವಿಶೇಷ ಅಭಿರುಚಿ ಮತ್ತು ಪರಿಣತಿಯನ್ನು ಪಡೆದಿದ್ದಳೆಂದು ಅನೇಕ ಶಾಸನಗಳಿಂದ ತಿಳಿದುಬರುತ್ತದೆ. ಶಾಂತಲದೇವಿಯನ್ನು ನಾಟ್ಯ ಸರಸ್ವತಿ ಎಂದು ಸಂಬೋಧಿಸಲಾಗಿದೆ.
Hoysala Vishnuvardhana
ನಿಮ್ಮ ಮಾಹಿತಿ ಬಾಹಳ ಚಾನಾಗಿ ತು
ಪ್ರತ್ಯುತ್ತರಅಳಿಸಿ