ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಲೀಲಾ ಸೇಠ್


ಲೀಲಾ ಸೇಠ್


ಲೀಲಾ ಸೇಠ್ ಭಾರತದ ಕಾನೂನು ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದವರು. ಅವರು ದೆಹಲಿ ಹೈಕೋರ್ಟ್‌ನಲ್ಲಿ ಮೊದಲ ಮಹಿಳಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು. 1991ರ ಆಗಸ್ಟ್ 5ರಂದು ಹಿಮಾಚಲ ಪ್ರದೇಶ ಹೈಕೋರ್ಟ್‌ನ ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾದ ಅವರು,   ಭಾರತದ ರಾಜ್ಯವೊಂದರ ಪ್ರಫ್ರಥಮ ಹೈಕೋರ್ಟ್ ಮುಖ್ಯ ಮಹಿಳಾ ನ್ಯಾಯಾಧೀಶರೆನಿಸಿದರು.

ಲೀಲಾ ಸೇಠ್ 1930ರ ಅಕ್ಟೋಬರ್ 20ರಂದು ಲಕ್ನೋದಲ್ಲಿ ಜನಿಸಿದರು.  ರೈಲ್ವೇ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಆಕೆಯ ಪ್ರೀತಿಯ ತಂದೆ, ಆಕೆಗೆ ಇನ್ನೂ 11 ವರ್ಷವಿದ್ದಾಗ ತೀರಿಕೊಂಡರು. ತಂದೆಯ ಮರಣದ ನಂತರ ಕುಟುಂಬವು ಆರ್ಥಿಕವಾಗಿ ಸಂಕಷ್ಟಕ್ಕೆದುರಾಯಿತು. ಆದರೆ ಲೀಲಾಳ ತಾಯಿ ಡಾರ್ಜಿಲಿಂಗ್‌ನ ಲೊರೆಟೊ ಕಾನ್ವೆಂಟ್‌ನಲ್ಲಿ ಲೀಲಾಗೆ ಶಿಕ್ಷಣ ದೊರಕಿಸಿದರು. ಶಾಲಾ ಶಿಕ್ಷಣವನ್ನು ಮುಗಿಸಿದ ನಂತರ, ಲೀಲಾ ಕೋಲ್ಕತ್ತಾದಲ್ಲಿ ಸ್ಟೆನೋಗ್ರಾಫರ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ಇಲ್ಲಿ  ಪರಿಚಯವಾದ ಪ್ರೇಮ್ ಸೇಠ್ ಅವರನ್ನು ವಿವಾಹವಾದರು.

ಮದುವೆಯ ನಂತರ, ಲೀಲಾ ಬಾಟಾದಲ್ಲಿ ಕೆಲಸ ಮಾಡುತ್ತಿದ್ದ ಪತಿ ಪ್ರೇಮ್ ಸೇಠ್ ಅವರೊಂದಿಗೆ ಲಂಡನ್‌ಗೆ ತೆರಳಿದರು. ಲಂಡನ್‌ ಸ್ಥಳಾಂತರವು ಅವರಿಗೆ ಕಾನೂನು ಅಧ್ಯಯನದ ಅವಕಾಶವನ್ನು ನೀಡಿತು. ಮಗುವಿನ ತಾಯಿಯಾಗಿದ್ದ ಅವರು ತರಗತಿಗಳಿಗೆ ಹಾಜರಾಗುವ ಅಗತ್ಯವಿಲ್ಲ ಎಂಬ ಸರಳ ಕಾರಣಕ್ಕಾಗಿ ಕಾನೂನನ್ನು ಆರಿಸಿಕೊಂಡರು. 

1958ರಲ್ಲಿ, ಲೀಲಾ ಸೇಠ್ ಅವರು ಲಂಡನ್ ಬಾರ್ ಪರೀಕ್ಷೆಯನ್ನು ಬರೆದರು.  ತಮ್ಮ 27ನೇ ವಯಸ್ಸಿನಲ್ಲಿ ಅಗ್ರಸ್ಥಾನ ಪಡೆದ ಪ್ರಥಮ  ಮಹಿಳೆಯಾದರು. ಅವರು 1959ರಲ್ಲಿ ಬಾರ್ ಸೇರಿದರು. ಅದೇ ವರ್ಷದಲ್ಲಿ ಅವರು ಐಎಎಸ್ ಅಧಿಕಾರಿಯಾಗಿ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಇಂಗ್ಲೆಂಡ್‌ನಲ್ಲಿ ಬಾರ್‌ನಲ್ಲಿ ಅಗ್ರಸ್ಥಾನ ಪಡೆದ ನಂತರ, ಲಂಡನ್ ಪತ್ರಿಕೆಯೊಂದು ಸೇಠ್ ಅವರನ್ನು "Mother-in-Law" (ಕಾನೂನಿನಲ್ಲಿ ತಾಯಿ) ಎಂದು ಕೊಂಡಾಡಿ,  ಪರೀಕ್ಷೆಗಳಿಗೆ ಕೆಲವೇ ತಿಂಗಳುಗಳ ಮೊದಲು ಜನಿಸಿದ ಮಗನೊಂದಿಗಿನ   ಲೀಲಾ ಸೇಥ್ ಅವರ ಛಾಯಾಚಿತ್ರವನ್ನು ಪ್ರಕಟಿಸಿತು . ಅದೇ ಸಮಯದಲ್ಲಿ, ಇತರ ಪತ್ರಿಕೆಗಳು ಬಾರ್ ಪರೀಕ್ಷೆಯನ್ನು ತೆಗೆದುಕೊಂಡ 580 ವಿದ್ಯಾರ್ಥಿಗಳಲ್ಲಿ ವಿವಾಹಿತ ಮಹಿಳೆ ಹೇಗೆ ಅಗ್ರಸ್ಥಾನ ಗಳಿಸಿದರು ಎಂಬ ದುಃಖ ತೋಡಿಕೊಂಡವು!.

ಮುಂದೆ ಲೀಲಾ ಮತ್ತು ಪ್ರೇಮ್ ಸೇಠ್ ಭಾರತಕ್ಕೆ ಹಿಂತಿರುಗಿದರು.  ಲೀಲಾ ಪಾಟ್ನಾದಲ್ಲಿ ವಕೀಲಿ ವೃತ್ತಿಯ ಅಭ್ಯಾಸ ಮಾಡಲು ಪ್ರಾರಂಭಿಸಿದರು. ಅವರು ಆರಂಭದಲ್ಲಿ ಸಚಿನ್ ಚೌಧರಿ ಎಂಬ ಹಿರಿಯ ವಕೀಲರ ಸಹಾಯಕರಾಗಿ ಕೆಲಸ ಮಾಡಿದರು. ಮುಂದೆ ಅಶೋಕ್ ಕುಮಾರ್ ಸೇನ್ ಅವರ ಜೂನಿಯರ್ ಆಗಿ ಕೆಲಸ ಮಾಡಿದರು. 10 ವರ್ಷಗಳ ಕಾಲ ಪಾಟ್ನಾ ಹೈಕೋರ್ಟ್‌ನಲ್ಲಿ ಕೆಲಸ ಮಾಡಿದರು. ಪುರುಷ ಪ್ರಧಾನ ಕಾನೂನು ಕ್ಷೇತ್ರದಲ್ಲಿ ಮಹಿಳೆ ಎಂಬ ಕಾರಣಕ್ಕಾಗಿ ತಾವು ಹೇಗೆ ತಾರತಮ್ಯ ಧೋರಣೆಗಳನ್ನು ಎದುರಿಸಬೇಕಾಯಿತು ಎಂದು ಅವರು ಹೇಳಿದ್ದಾರೆ.

ಲೀಲಾ ಸೇಠ್ ಅವರು ತೆರಿಗೆ ವಿಷಯಗಳಿಂದ (ಆದಾಯ ತೆರಿಗೆ, ಮಾರಾಟ ತೆರಿಗೆ, ಅಬಕಾರಿ ಮತ್ತು ಕಸ್ಟಮ್ಸ್), ಕಂಪನಿ ಕಾನೂನು, ಸಾಂವಿಧಾನಿಕ ಕಾನೂನು, ಸಿವಿಲ್, ಕ್ರಿಮಿನಲ್ ಪ್ರಕರಣಗಳು, ವೈವಾಹಿಕ ಮೊಕದ್ದಮೆಗಳು ಮತ್ತು ಸಾರ್ವಜನಿಕ ಹಿತಾಸಕ್ತಿ ದಾವೆಗಳವರೆಗೆ ವಿವಿಧ ಪ್ರಕರಣಗಳನ್ನು ನಿರ್ವಹಿಸಿದ್ದರು. 10 ವರ್ಷಗಳ ಕಾಲ ಪಾಟ್ನಾ ಹೈಕೋರ್ಟ್‌ನಲ್ಲಿ ಅಭ್ಯಾಸ ಮಾಡಿದ ನಂತರ, ಲೀಲಾ ಸೇಠ್ 1972ರಲ್ಲಿ ದೆಹಲಿ ಹೈಕೋರ್ಟ್‌ಗೆ ತೆರಳಿದರು. ಅಲ್ಲಿ ಸಿವಿಲ್ ಅರ್ಜಿಗಳು, ಕ್ರಿಮಿನಲ್ ವಿಷಯಗಳು, ಕಂಪನಿಯ ಅರ್ಜಿಗಳು, ಪರಿಷ್ಕರಣೆಗಳು ಮತ್ತು ಮೇಲ್ಮನವಿಗಳ ವಿಚಾರದಲ್ಲಿ ಕೆಲಸ ಮಾಡಿದರು. ಅದೇ ವರ್ಷದಲ್ಲಿ, ಅವರು ತಮ್ಮ ಸುಪ್ರೀಂ ಕೋರ್ಟ್ ವಕೀಲಿ ಅಭ್ಯಾಸವನ್ನು ಪ್ರಾರಂಭಿಸಿ ತೆರಿಗೆ ವಿಷಯಗಳು, ರಿಟ್ ಅರ್ಜಿಗಳು ಮತ್ತು ಸಾಂವಿಧಾನಿಕ ಸಿವಿಲ್ ಮತ್ತು ಕ್ರಿಮಿನಲ್ ಮೇಲ್ಮನವಿಗಳನ್ನು ನಿರ್ವಹಿಸಿದರು. ಅವರು ಜೂನ್ 1974 ರಿಂದ ಸುಪ್ರೀಂ ಕೋರ್ಟ್‌ ನೇಮಿಸಿದ ಪಶ್ಚಿಮ ಬಂಗಾಳ ಸರ್ಕಾರದ ವಕೀಲರ ಸಮಿತಿಯಲ್ಲಿದ್ದರು. 10ನೇ ಜನವರಿ 1977ರಂದು, ಅವರು ಸುಪ್ರೀಂ ಕೋರ್ಟ್‌ನಿಂದ ಹಿರಿಯ ವಕೀಲರಾಗಿ ನೇಮಕಗೊಂಡರು.

1978ರಲ್ಲಿ, ಲೀಲಾ ಸೇಠ್ ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡರು.  ಹೀಗೆ ದೇಶದಲ್ಲಿ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮುಂದೆ ಅವರು ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ, ದೇಶದ ರಾಜ್ಯವೊಂದರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾದ ಮೊದಲ ಮಹಿಳೆಯಾದರು.

ಲೀಲಾ ಸೇಠ್ ವಿವಿಧ ನ್ಯಾಯಾಂಗ ಮತ್ತು ಮಾನವೀಯ ಸಂಸ್ಥೆಗಳ ಅಧ್ಯಕ್ಷತೆ ವಹಿಸಿದ್ದರು. ಅವರು 1997ರಿಂದ 2000 ರವರೆಗೆ ಭಾರತದ 15ನೇ ಕಾನೂನು ಆಯೋಗದ ಸದಸ್ಯರಾಗಿದ್ದರು.  ಆ ಸಮಯದಲ್ಲಿ ಅವರು ಹಿಂದೂ ಉತ್ತರಾಧಿಕಾರ ಕಾಯಿದೆ (1956)ಯಲ್ಲಿ ಪೂರ್ವಜರ ಆಸ್ತಿಯ ಮೇಲೆ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಹಕ್ಕುಗಳನ್ನು ನೀಡುವ ಅಭಿಯಾನವನ್ನು ಮುನ್ನಡೆಸಿದರು. ಅವರು ಹಲವಾರು ವರ್ಷಗಳ ಕಾಲ ಕಾಮನ್‌ವೆಲ್ತ್ ಮಾನವ ಹಕ್ಕುಗಳ ಉಪಕ್ರಮದ (CHRI) ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಅವರು 2012 ರಿಂದ 2016 ರವರೆಗೆ ಇನ್ಫೋಸಿಸ್ ಪ್ರಶಸ್ತಿಗಾಗಿ ಹ್ಯುಮಾನಿಟೀಸ್ ಜ್ಯೂರಿಯಲ್ಲಿ ಸೇವೆ ಸಲ್ಲಿಸಿದರು.

ಜಸ್ಟಿಸ್ ಲೀಲಾ ಸೇಠ್ ಅವರು ವಿವಿಧ ವಿಚಾರಣಾ ಆಯೋಗಗಳ ಭಾಗವಾಗಿದ್ದರು, ದೂರದರ್ಶನದ ಧಾರಾವಾಹಿ ಶಕ್ತಿಮಾನ್ (ಜನಪ್ರಿಯ ಸೂಪರ್ ಹೀರೋ ಬಗ್ಗೆ) ಮಕ್ಕಳ ಮೇಲೆ ಪರಿಣಾಮಗಳನ್ನು ಅಧ್ಯಯನ ಮಾಡುವ ಜವಾಬ್ದಾರಿಯೂ  ಇದರಲ್ಲೊಂದಾಗಿತ್ತು. ಶಕ್ತಿಮಾನ್ ಮಕ್ಕಳಿಗಾಗಿ ಜನಪ್ರಿಯ ಟಿವಿ ಸರಣಿಯಾಗಿತ್ತು.  ಜೊತೆಗೆ ವಿವಾದದ ಕೇಂದ್ರವಾಗಿತ್ತು.  ಏಕೆಂದರೆ ಅನೇಕ ಮಕ್ಕಳು ಶಕ್ತಿಮಾನ್ ಬಂದು ತಮ್ಮನ್ನು ರಕ್ಷಿಸುತ್ತಾನೆ ಎಂದು ಆಶಿಸುತ್ತಾ ಬೆಂಕಿ ಹಚ್ಚಿಕೊಳ್ಳುವುದು, ಕಟ್ಟಡಗಳಿಂದ ಧುಮುಕುವುದು ಮುಂತಾದ ದುಸ್ಸಾಹಸಗಳಿಗೆ ತೊಡಗಿದ್ದರು.  

ಲೀಲಾ ಸೇಠ್ ಅವರು "ಬಿಸ್ಕತ್ ಬ್ಯಾರನ್" ಎಂದು ಹೆಸರಾಗಿದ್ದ ಉದ್ಯಮಿ ರಾಜನ್ ಪಿಳ್ಳೈ ಅವರ ಕಸ್ಟಡಿಯಲ್ ಸಾವಿನ ಬಗ್ಗೆ ವಿಚಾರಣೆ ನಡೆಸಿದ ಆಯೋಗದ ಏಕ ಸದಸ್ಯರಾಗಿದ್ದರು. ಗಮನಾರ್ಹವಾಗಿ, ನ್ಯಾಯಮೂರ್ತಿ ಸೇಠ್ ಅವರು 2012ರ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತರ ಭಾರತದಲ್ಲಿ ಅತ್ಯಾಚಾರ ಕಾನೂನುಗಳ ಕೂಲಂಕಷ ಪರಿಶೀಲನೆಗಾಗಿ ಸ್ಥಾಪಿಸಲಾದ ಮೂವರು ಸದಸ್ಯರ ನ್ಯಾಯಮೂರ್ತಿ ವರ್ಮಾ ಆಯೋಗದ ಭಾಗವಾಗಿದ್ದರು.

ನ್ಯಾಯಮೂರ್ತಿ ಲೀಲಾ ಸೇಠ್ ಅವರು 20 ವರ್ಷದವರಾಗಿದ್ದಾಗ ಪ್ರೇಮ್ ಸೇಠ್ ಅವರನ್ನು ವಿವಾಹವಾದರು. ಅವರಿಗೆ ಮೂವರು ಮಕ್ಕಳಿದ್ದರು - ವಿಕ್ರಮ್ ಸೇಠ್, ಶಾಂತುಮ್ ಸೇಠ್ ಮತ್ತು ಆರಾಧನಾ ಸೇಠ್. ವಿಕ್ರಮ್ ಸೇಠ್ ಅವರು ಮೆಚ್ಚುಗೆ ಪಡೆದ ಕವಿ ಮತ್ತು ಲೇಖಕರಾಗಿ ಮುಂದುವರೆದರು, ಶಾಂತುಮ್ ಸೇಠ್ ಬೌದ್ಧ ಶಿಕ್ಷಕರಾಗಿದ್ದಾರೆ ಮತ್ತು ಆರಾಧನಾ ಚಲನಚಿತ್ರ ನಿರ್ಮಾಪಕರಾಗಿದ್ದಾರೆ. ಸ್ವಯಂ ಲೀಲಾ ಸೇಠ್ ಉತ್ತಮ ಬರಹಗಾರ್ತಿಯಾಗಿದ್ದರು. 

ನ್ಯಾಯಮೂರ್ತಿ ಲೀಲಾ ಸೇಠ್ 2017ರ ಮೇ 5ರಂದು ತಮ್ಮ  86ನೇ ವಯಸ್ಸಿನಲ್ಲಿ ನಿಧನರಾದರು. ಅವರ ಇಚ್ಛೆಯಂತೆ ಅವರ ಕಣ್ಣುಗಳು ಮತ್ತು ಇತರ ಅಂಗಗಳನ್ನು ಕಸಿ ಅಥವಾ ವೈದ್ಯಕೀಯ ಸಂಶೋಧನೆ ಉದ್ದೇಶಗಳಿಗಾಗಿ ದಾನ ಮಾಡಲಾಯಿತು. 

On the birth anniversary first women High Court Judge, Leila Seth 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ