ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪದ್ಮಪಾಣಿ ಜೋಡಿದಾರ


 ಪದ್ಮಪಾಣಿ ಜೋಡಿದಾರ


ಪದ್ಮಪಾಣಿ ಜೋಡಿದಾರ ಅವರು ಸಂಗೀತ ಕಾರ್ಯಕ್ರಮಗಳ ಸಂಯೋಜಕರಾಗಿ,  ಅಪಾರ ಜ್ಞಾನ ಸಂಪತ್ತುಳ್ಳವರಾಗಿ, ಉತ್ತಮ ವಾಗ್ಮಿಗಳಾಗಿ ಮತ್ತು ಸ್ನೇಹಜೀವಿಗಳಾಗಿ ಎದ್ದುಕಾಣುತ್ತಾರೆ.

ಅಕ್ಟೋಬರ್ 20, ಪದ್ಮಪಾಣಿ ಅವರ ಜನ್ಮದಿನ. ಅವರದ್ದು ಮಹಾನ್ ವಿದ್ವಾಂಸರ ಕುಟುಂಬ. ಅವರು ಮೆಕಾನಿಕಲ್ ಇಂಜಿನಿಯರ್ ಆಗಿ ಸಾರ್ವಜನಿಕ ಉದ್ದಿಮೆಯಲ್ಲಿ ಅಧಿಕಾರಿಗಳಾಗಿದ್ದವರು.  

ಪದ್ಮಪಾಣಿ ಅವರ ದಾಂಪತ್ಯದಲ್ಲಿ ಜೋಡಿದಾರರಾಗಿದ್ದು,  ಕನ್ನಡದ ಮಹತ್ವದ ಗಾಯನ ಪ್ರತಿಭೆಗಳಲ್ಲಿ ಒಬ್ಬರಾದ ಬಿ. ಆರ್. ಛಾಯಾ ಅವರು.  ಛಾಯಾ ಅವರಿಗಿರುವ ಸಂಗೀತದಲ್ಲಿನ ಸಾಧ್ಯತೆಗಳ ಆಳವನ್ನು ಮನಗಂಡ ಪದ್ಮಪಾಣಿ, ತಮ್ಮ ಪತ್ನಿಯ ಕಲಾಸೇವೆಗೆ ಬೇಕಾದ ಎಲ್ಲ ರೀತಿಯ ಪೋಷಣೆ ಬೆಂಬಲಗಳನ್ನು ನೀಡಿದರು. ಜೊತೆಗೆ ತಾವೂ ಸಂಗೀತಲೋಕದಲ್ಲಿ ಇಳಿದು ಅಗಾಧ ಅಧ್ಯಯನ ಕೈಗೊಂಡರು.  ಮೂಲತಃ ಅಪಾರ ಉತ್ತಮ ಅಧ್ಯಯನ ಅಸಕ್ತಿ ಉಳ್ಳವರಾಗಿದ್ದ ಪದ್ಮಪಾಣಿ ಸಂಗೀತದ ಕುರಿತಾದ ಅಧ್ಯಯನವನ್ನೂ ವ್ಯಾಪಕವಾಗಿ ಕೈಗೊಂಡರು.  ವೇದ, ಪುರಾಣ, ವಚನ, ದಾಸ ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ನವ್ಯ ಸಾಹಿತ್ಯ, ಪ್ರಚಲಿತ ವಿದ್ಯಮಾನಗಳು ಹೀಗೆ ಎಲ್ಲದರ ಅವರ ಚಿಂತನೆಯ ಆಳ ವಿಶಾಲವಾದದ್ದು. 

ಪದ್ಮಪಾಣಿ ಅವರು ಸಾಹಿತ್ಯ ರೂಪಿಸಿ, ನಿರ್ದೇಶಿಸಿ, ಮೂಡಿಸಿದ ಕಾರ್ಯಕ್ರಮಗಳಲ್ಲಿ ರವಿ ಬೆಳಗೆರೆ ನಿರೂಪಣೆಯಲ್ಲಿ ಮೂಡಿಬಂದ 'ಎಂದೂ ಮರೆಯದ ಹಾಡು'; ಪ್ರಸಿದ್ಧ ಕನ್ನಡ ಗಾಯನ ಪ್ರತಿಭೆಗಳ ಸಮಗ್ರ ಸಾಮರ್ಥ್ಯದ ಒಳನೋಟ  ನೀಡಿದ 'ನನ್ನ ಹಾಡು ನನ್ನದು', ಕರ್ನಾಟಕದ ಎಲ್ಲ ಪ್ರಮುಖ ಕೇಂದ್ರಗಳಲ್ಲೂ ಸ್ಥಳೀಯ ಪ್ರತಿಭೆಗಳ ಜೊತೆಗೂಡಿ ಮೂಡಿಸಿದ 'ಹಾಡಿಗೊಂದು ಹಾಡು', 'ಮ್ಯೂಸಿಕ್ ಥೆರಪಿ' ಆಧಾರಿತ ಸಂಗೀತ ಸರಣಿ ಮುಂತಾದ ಹಲವು ಕಾರ್ಯಕ್ರಮಗಳು ನೆನಪಾಗುತ್ತವೆ.  ಅಂತೆಯೇ ಕನ್ನಡದ ಅನೇಕ ವಿಶಿಷ್ಟ ಸಂಗೀತ ಧ್ವನಿಮುದ್ರಿಕೆಗಳನ್ನು ಮೂಡಿಸುವಲ್ಲಿ ಸಹಾ ಅವರ ಅಪಾರ ಪರಿಶ್ರಮವಿದೆ.

ಪದ್ಮಪಾಣಿ ಅವರು ಬರೆಯುವಲ್ಲಿ, ಮತ್ತು ಮಾತಿನಲ್ಲಿ ಹೇಳುವಲ್ಲಿ, ಅವರಿಗಿರುವ ಆಳ ಅಧ್ಯಯನಾಸಕ್ತಿ, ಸ್ಪಷ್ಟ ಚಿಂತನೆ, ಸೂಕ್ತ ಅಭಿವ್ಯಕ್ತಿ, ಸುಲಲಿತ ಹಾಸ್ಯ ಮನೋಭಾವ ಮತ್ತು ಆತ್ಮೀಯ ಸಂವೇದನಗಳ ಸ್ಪರ್ಶ ಎದ್ದು ಕಾಣುತ್ತದೆ.

ಆತ್ಮೀಯರಾದ ಪದ್ಮಪಾಣಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Padmapani Jodidar🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ