ಚೈತ್ರಾ ಶಿವಯೋಗಿಮಠ
ಚೈತ್ರಾ ಶಿವಯೋಗಿಮಠ
ಹಸನ್ಮುಖಿ ಚೈತ್ರಾ ಶಿವಯೋಗಿಮಠ ಅವರು ಬರಹಗಾರ್ತಿಯಾಗಿ ಮತ್ತು ಅನೇಕ ಬರಹಗಳಿಗೆ ಧ್ವನಿಯಾಗಿ ಎಲ್ಲೆಡೆ ಗಮನ ಸೆಳೆದಿದ್ದಾರೆ.
ನವೆಂಬರ್ 25, ಚೈತ್ರಾ ಅವರ ಜನ್ಮದಿನ. ಅವರು ವಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಕವಡಿಮಟ್ಟಿಯವರು. ತಂದೆ ನಿಜಲಿಂಗಯ್ಯ ಶಿವಯೋಗಿಮಠ. ತಾಯಿ ರತ್ನಾ. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ನಡೆಸಿದ ನಂತರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಬಿ.ಇ. ಮತ್ತು ಎಂ.ಟೆಕ್. ಪದವಿ ಗಳಿಸಿರುವ ಅವರು ಪ್ರಸಿದ್ಧ ಅಂತರರಾಷ್ಟ್ರೀಯ ಸಂಸ್ಥೆಯಲ್ಲಿ ತಂತ್ರಜ್ಞೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಓದು-ಬರಹ, ಚಾರಣ-ಪ್ರವಾಸ ಮುಂತಾದವು ಚೈತ್ರಾ ಅವರ ವೈವಿಧ್ಯಮಯ ಅಭಿರುಚಿಗಳಲ್ಲಿ ಪ್ರಮುಖವಾದವು. ಓದಿನ ದಿನಗಳಲ್ಲೇ ಅನೇಕ ಬಹುಮಾನಗಳನ್ನು ಗೆದ್ದವರು. ಕನ್ನಡದ ಬಹುತೇಕ ನಿಯತಕಾಲಿಕಗಳಲ್ಲಿ ಮತ್ತು ಅಂತರಜಾಲ ಮಾಧ್ಯಮಗಳಲ್ಲಿ ಅವರ ಕವಿತೆ ಮತ್ತು ಇತರ ಬರಹಗಳು ಮೂಡಿಬರುತ್ತಿವೆ. ಅವರು ಉತ್ತಮವಾಗಿ ಕತೆಗಳನ್ನು ವಾಚನ ಕೂಡ ಮಾಡಿರುವುದನ್ನು ಯೂಟ್ಯೂಬ್‌ನಲ್ಲಿ ಕಾಣಬಹುದು. ಚೈತ್ರಾ ಅವರು ವಿಶ್ವದೆಲ್ಲ ಶ್ರೇಷ್ಠ ಕವಿತೆಗಳನ್ನು ಕನ್ನಡದ ಭಾವದಲ್ಲಿ ಹೊರಹೊಮ್ಮಿಸುವ ರೀತಿ ವಿಶಿಷ್ಟವೆನಿಸುತ್ತದೆ.
ಚೈತ್ರಾ ಅವರ ಮೊದಲ ಕವನ ಸಂಕಲನ 'ಪೆಟ್ರಿಕೋರ್' ಓದುಗರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಗಳಿಸಿವೆ. ಈ ಕೃತಿಗೆ 'ಅವ್ವ' ಪ್ರಶಸ್ತಿ ಮತ್ತು 'ಅಮ್ಮ' ಪ್ರಶಸ್ತಿಗಳೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಆತ್ಮೀಯರಾದ ಚೈತ್ರಾ ಶಿವಯೋಗಿಮಠ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Chaitra Shivayogimath
ಕಾಮೆಂಟ್‌ಗಳು