ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕಡಲೆಕಾಯಿ ಪರಿಷೆ


ಬಸವನಗುಡಿ ಕಡಲೆಕಾಯಿ ಪರಿಷೆ

ಬಸವನಗುಡಿ ಕಡಲೆಕಾಯಿ ಪರಿಷೆಗೆ ಹೋಗಿದ್ರಾ? 😊 ಆ ಪಾಟಿ ಜನಜುಂಗುಳಿ!  ನಾನು "ನೆನಪುಗಳ ಮಾತು ಮಧುರ" ಅಂತ ಹಾಡಿ ಇದ್ದಲ್ಲೇ  ನನಗಿಷ್ಟವಾದ ಕಾರದ ಕಡ್ಲೇಕಾಯಿ ಬೀಜ ತಿಂತೀನಿ 😊😊😊.

ಬೆಂಗಳೂರು ಮಹಾನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಬಸವನಗುಡಿಯೂ ಒಂದು. ಈ ಪ್ರದೇಶಕ್ಕೆ ಬಸವನಗುಡಿ ಎಂದು ಹೆಸರು ಬರಲು ಕಾರಣವೇ ಇಲ್ಲಿರುವ ಪುರಾತನ ಬೃಹತ್ ಬಸವನ ದೇವಾಲಯ. ಎತ್ತರದ ಗುಡ್ಡದ ಮೇಲೆ ಕಟ್ಟಲಾಗಿರುವ ಪುರಾತನ ದೇವಾಲಯದಲ್ಲಿ 15 ಅಡಿ ಎತ್ತರ 20 ಅಡಿ ಉದ್ದದ ದೊಡ್ಡ ಬಸವಣ್ಣನ ವಿಗ್ರಹವಿದೆ. ಹೀಗಾಗಿ ಈ ದೇವಾಲಯಕ್ಕೆ ದೊಡ್ಡ ಬಸವನಗುಡಿ ಎಂಬ ಹೆಸರೂ ಇದೆ.

ಈ ದೇವಾಲಯವನ್ನು ಕೆಂಪೇಗೌಡರು 1537ರಲ್ಲಿ ಕಟ್ಟಿಸಿದರಂತೆ. ದೇವಾಲಯದ ಮುಂದೆ ಸುಂದರವಾದ ದ್ವಜಸ್ತಂಭವಿದೆ. ಈ ಕಲ್ಲು ಕಂಬದಲ್ಲಿ ತಂತಿ ವಾದ್ಯ ನುಡಿಸುತ್ತಿರುವ ಸ್ತ್ರೀ ಮೊದಲಾದ ಉಬ್ಬು ಶಿಲ್ಪಗಳಿವೆ. ದೇವಾಲಯಕ್ಕೆ ಭವ್ಯವಾದ ಗೋಪುರವಿದ್ದು, ಒಳ ಪ್ರಾಕಾರದಲ್ಲಿಯೂ ವಿಶಾಲವಾದ ಗುಡಿ, ಪ್ರದಕ್ಷಿಣ ಪಥವಿದೆ. ಬಾಗಿಲಲ್ಲಿ ದ್ವಾರಪಾಲಕರ ಶಿಲ್ಪಗಳಿವೆ. ಈ ಗರ್ಭಗೃಹದಲ್ಲಿರುವ ಕಪ್ಪು ಶಿಲೆಯ ಬಸವ ಉದ್ಭವಮೂರ್ತಿಯೆಂಬ ನಂಬಿಕೆಯಿದೆ.  ಪರಶಿವನ ವಾಹನ ಬಸವ ಇಲ್ಲಿ ಬಂದು ಶಿಲೆಯಾದ ಎಂಬ ಪ್ರತೀತಿ ಇದೆ. ಅದಕ್ಕೆ ಪೂರಕವಾಗಿ ಒಂದು ಕಥೆ ಇದೆ. 

ಐತಿಹ್ಯ: ಈಗ ಬಸವಣ್ಣನ ದೇವಸ್ಥಾನ ಇರುವ ಸ್ಥಳ, ಹಿಂದೆ ಸುಂಕೇನ ಹಳ್ಳಿ ಎಂದು ಹೆಸರಾಗಿತ್ತು. ಇಲ್ಲಿ ಹೊಲ ಗದ್ದೆಗಳಿದ್ದವು. ರೈತಾಪಿವರ್ಗದ ಜನ ಇಲ್ಲಿ ವಾಸಿಸುತ್ತಿದ್ದರು. ಇವರು ಪ್ರಧಾನವಾಗಿ ತಮ್ಮ ಹೊಲಗಳಲ್ಲಿ ಕಡಲೇಕಾಯಿ ಬೆಳೆಯುತ್ತಿದ್ದರು. ಸರ್ವರಿಗೂ ಸಮಪಾಲು, ಸರ್ವರದು ಸಹಬಾಳ್ವೆ ಎಂದು ಬದುಕುತ್ತಿದ್ದ ಆ ರೈತಾಪಿ ವರ್ಗ, ಕಡಲೆಕಾಯಿ ಫಸಲು ಬರುವ ಕಾರ್ತೀಕದಲ್ಲಿ ತಾವು ಬೆಳೆದ ಕಡಲೆಕಾಯಿಯನ್ನು ರಾಶಿ ಮಾಡಿ ಕಣದ ಪೂಜೆ ಮಾಡಿ ಮಾರನೆ ದಿನ ಸಮನಾಗಿ ಹಂಚಿಕೊಳ್ಳುತ್ತಿದ್ದರು. ಒಮ್ಮೆ ಹೀಗೆ ಕಣ ಮಾಡಿದ್ದ ಸಂದರ್ಭದಲ್ಲಿ ಗೂಳಿಯೊಂದು ಬಂದು ರಾಶಿ ರಾಶಿ ಕಡಲೆಕಾಯಿ ತಿಂದು ಹೋಗುತ್ತಿತ್ತಂತೆ.

ಈ ಗೂಳಿ ಅರ್ಥಾತ್ ಬಸವನ ಕಾಟ ತಾಳಲಾರದೆ ರೈತರು ಒಂದು ದಿನ ರಾತ್ರಿಯಿಡೀ ಕಾದಿದ್ದು ಬಡಿಗೆ ಹಿಡಿದು ಬಸವನ ಬಡಿಯಲು ಕಾದಿದ್ದರಂತೆ. ನಿರೀಕ್ಷೆಯಂತೆ ಬಸವ ಬಂದ, ಕಡಲೆಕಾಯಿ ತಿನ್ನುತ್ತಿದ್ದ. ಇದನ್ನು ನೋಡಿ ಕೋಪಗೊಂಡ ರೈತರು, ತಾವು ತಂದಿದ್ದ ಬಡಿಗೆ ಹಿಡಿದು ಬಸವನ್ನು ಅಟ್ಟಿಸಿಕೊಂಡು ಹೋದರಂತೆ ಆಗ ರೈತರ ಹೊಡೆತ ತಪ್ಪಿಸಿಕೊಳ್ಳಲೆಂದು ಓಡಿದ ಬಸವ ಸುಂಕೇನಹಳ್ಳಿಯಿಂದ ಸ್ವಲ್ಪದೂರ ಓಡಿಬಂದು ಗುಡ್ಡ ಏರಿ ಕಲ್ಲಾದನಂತೆ. ಈ ಸೋಜಿಗವನ್ನು ಕಣ್ಣಾರೆ ಕಂಡ ರೈತರಿಗೆ ಇದು ಸಾಮಾನ್ಯ ಗೂಳಿಯಲ್ಲ. ಶಿವನ ವಾಹನ ನಂದಿ ಎಂಬ ಸತ್ಯ ತಿಳಿಯಿತಂತೆ. ಕೈಲಾಸದಿಂದ ಧರೆಗಿಳಿದು ಬಂದ ನಂದಿಕೇಶ್ವರನನ್ನೇ ಹೊಡೆದು ಎಂಥ ತಪ್ಪು ಮಾಡಿದೆವೆಂದು ಮರುಗಿದರಂತೆ. ಅರಿಯದೆ ತಾವು ಮಾಡಿದ ತಪ್ಪು ಮನ್ನಿಸೆಂದು ಪರಿಪರಿಯಾಗಿ ಬೇಡಿದರಂತೆ. ಅಂದಿನಿಂದ ರೈತರು ತಪ್ಪೊಪ್ಪಿಗೆಯಾಗಿ ಪ್ರತಿವರ್ಷ ಕಡಲೆಕಾಯಿ ಬೆಳೆ ಬಂದ ಕ್ಷಣ  ತಮ್ಮ ಮೊದಲ ಬೆಳೆಯನ್ನು ಈ ಕಲ್ಲಿನ ಬಸವಣ್ಣನಿಗೆ ತಂದು ಒಪ್ಪಿಸಿ ನೇವೇದ್ಯ ಮಾಡಿ, ಕ್ಷಮಿಸೆಂದು ಕೇಳಿ ನಂತರ ಮಾರಾಟ ಮಾಡುತ್ತಿದ್ದರಂತೆ. ಇಂದಿಗೂ ಈ ಪರಂಪರೆ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಪ್ರತಿವರ್ಷ ಕಾರ್ತೀಕ ಮಾಸದಲ್ಲಿ ನಡೆಯುವ ಜಾತ್ರೆ ಕಡಲೆಕಾಯಿ ಪರಿಷೆ ಎಂದೇ ಖ್ಯಾತವಾಗಿದೆ.

ಈ ಜಾತ್ರೆಗೆ ಬಸವನ ಭಕ್ತರು ಬಂದು ಕಡಲೇ ಕಾಯಿ ತಿಂದರೆ, ನಂದಿ ತೃಪ್ತನಾಗುತ್ತಾನೆಂಬುದು ಹಲವು ಹಿರಿಯರ ನಂಬಿಕೆ. ಭಕ್ತರು ತಿಂದು ಎಸೆವ ಸಿಪ್ಪೆಯನ್ನು ರಾತ್ರಿಯ ವೇಳೆ ಕಲ್ಲು ಬಸವ ನಿಜರೂಪ ತಾಳಿ  ತಿನ್ನುತ್ತಾನೆ ಎಂದು ಇಂದಿಗೂ ಜನ ನಂಬಿದ್ದಾರೆ. 

ಹಾಗೇ ಬಸವನಿಗೆ ಕಡಲೇಕಾಯನ್ನು ಮನೆಯಲ್ಲೇ ನೈವೇದ್ಯ ಮಾಡಿ.  ಬಸವನಗುಡಿಗೆ ಪ್ಲಾಸ್ಟಿಕ್ ಕವರ್ನಲ್ಲಿ ಸಿಪ್ಪೆ ತೊಗೊಂಡು ಎಸೆಯೋಕೆ ಹೋಗಬೇಡಿ!  ನನಗಿಷ್ಟವಾದ ಬಸವನ ಗುಡಿ ಕ್ಷೇತ್ರದ ಅಂದ ಅಳಿಯದೆ ಉಳಿಯಲಿ.🌷🙏🌷ಬಸವನ ಗುಡಿ ಪ್ರದೇಶದಲ್ಲಿ ವಾಸಿಸೊ ಜನಕ್ಕೆ ಯಾಕಾದ್ರೂ ಈ ಪರಿಷೆ ಬರುತ್ತೊ ಅಂತ ಜುಗುಪ್ಸೆ ಮೂಡದಂತಹ ವಾತಾವರಣ ಕಾಯುವ ವ್ಯವಸ್ಥೆಗೆ ಪ್ರಾಧಿಕಾರ, ಪ್ರಾಧಿಕಾರದ ಅಥವ ಉತ್ಸವ ನಿರ್ವಹಣಾ ಸಮಿತಿ ಸಿಬ್ಬಂದಿ, ವ್ಯಾಪಾರೀ ಜನ ಹಾಗೂ ಜನಸಮುದಾಯ ಪ್ರಜ್ಞೆಯಿಂದ ವರ್ತಿಸಲಿ. 🌷🙏🌷


Basavanagudi and Kadalekayi Parishe


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ