ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂಜೆವಾಣಿ ಶಿವಣ್ಣ


 ಸಂಜೆವಾಣಿ ಶಿವಣ್ಣ 

ಸಂಜೆವಾಣಿ ಶಿವಣ್ಣ ಎಂದೇ ಪತ್ರಿಕಾಲೋಕದಲ್ಲಿ ಪ್ರಖ್ಯಾತರಾದವರು ಅ. ಚ. ಶಿವಣ್ಣ ಅವರು.

ಶಿವಣ್ಣ ಅವರು 1941ರ ಡಿಸೆಂಬರ್ 10ರಂದು ದೊಡ್ಡಬಳ್ಳಾಪುರ ಸಮೀಪದ ಅರಳು ಮಲ್ಲಿಗೆಯಲ್ಲಿ ಜನಿಸಿದರು. ಮಹಾನ್ ವಿದ್ವಾಂಸರಾದ‍ ಅರಳು ಮಲ್ಲಿಗೆ ಪಾರ್ಥಸಾರಥಿ ಹೇಳುತ್ತಾರೆ: "ಶಿವಣ್ಣನ ಮನೆ ನಮ್ಮ ಮನೆ ಎದುರುಬದುರಿನದು.  ನಮ್ಮಿಬ್ಬರ ಮನೆಗಳಲ್ಲೂ ಬಡತನದ ಹೊರತು ಬೇರೇನೂ ಇರಲಿಲ್ಲ.  ಶಿವಣ್ಣ ಬೆಳೆದು ನಿಂತ ರೀತಿ ಅಸಾಮಾನ್ಯವಾದದ್ದು".  ಮುಂದೆ ಶಿವಣ್ಣ ದೇವನಹಳ್ಳಿ ತಾಲ್ಲೂಕು ವಿಜಯಪುರದಲ್ಲಿ ಬೆಳೆದು, ಮೈಸೂರಿನಲ್ಲಿ ಕಾಲೇಜು ಓದಿ,   ಬೆಂಗಳೂರಿಗೆ ಬಂದರು. 

ಶಿವಣ್ಣ ಅವರು 'ಲೋಕವಾಣಿ’ ಮೂಲಕ ಲೇಖನಿ ಹಿಡಿದು ಪತ್ರಕರ್ತರಾಗಿ ಅತ್ಯಂತ ಕ್ಲಿಷ್ಪಕರ ತಿರುವು-ಮುರುವಿನ ಹಾದಿಯಲ್ಲಿ ನಡೆದು ಯಶಸ್ವಿ ಪತ್ರಕರ್ತರಾಗಿ ಬೆಳೆದರು. ಲೋಕವಾಣಿಯಲ್ಲಿ ವರದಿಗಾರರಾಗಿ ಚಲನಚಿತ್ರ ವಿಮರ್ಶಕರಾಗಿ ಸೇವೆ ಸಲ್ಲಿಸಿ ಕಾಲಾನುಕ್ರಮದಲ್ಲಿ ಪ್ರಧಾನ ವರದಿಗಾರರಾಗಿ ಕಾರ್ಯ ನಿರ್ವಹಿಸಿ ಅಲ್ಲಿಂದ ಜನಪ್ರಿಯ ಸಂಜೆ ದಿನಪತ್ರಿಕೆ “ಸಂಜೆವಾಣಿ” ಯಲ್ಲಿ 26 ವರ್ಷಗಳ ಕಾಲ ಮುಖ್ಯವರದಿಗಾರರಾಗಿ ಅವರು ಸಲ್ಲಿಸಿದ ಸೇವೆ ಮಹತ್ವವಾದದ್ದು.

ಪತ್ರಿಕಾಲೋಕದ ಹಿರಿಯರಾದ ಶೇಷಚಂದ್ರಿಕ ಹೀಗೆ ಹೇಳುತ್ತಾರೆ: "ತಕ್ಷಣ, ಅಂದರೆ ಘಟನೆ
ನಡೆದ ಮರುಕ್ಷಣದಲ್ಲಿ, ಸುದ್ದಿಯನ್ನು ಹುಡುಕಿತೆಗೆಯುವ ಅಸಾಧಾರಣ ಸಾಮರ್ಥ್ಯ 'ಸಂಜೆವಾಣಿ ಶಿವಣ್ಣ' ಅವರದು.  ಮುಂಜಾನೆ ಪ್ರಕಟವಾಗುವ ಪತ್ರಿಕೆಗಳ ವರದಿಗಾರರಿಗೆ ದಿನವಿಡೀ ಸುದ್ದಿ ಹುಡುಕುವ ಅವಕಾಶವಿರುತ್ತದೆ. ಆದರೆ ಸಂಜೆ ಪತ್ರಿಕೆಗೆ ಹಾಗಲ್ಲ. ಹೀಗಾಗಿ ಶಿವಣ್ಣ ಹೊಸಮಾರ್ಗಗಳನ್ನು ಹುಡುಕುತ್ತಿದ್ದ ಕಲೆ, ಬೆಂಗಳೂರು ಪತ್ರಿಕಾವಲಯದಲ್ಲಿ ಆಸಕ್ತಿ-ಅಚ್ಚರಿ ತರುತ್ತಿತ್ತು".  ಸುದ್ದಿ ಹೆಕ್ಕಿ ತೆಗೆಯುವಲ್ಲಿ ಅವರ ಜಾಣ್ಮೆ, ಸುದ್ದಿಗೆ ರೂಪ ಕೊಡುತ್ತಿದ್ದ ರೀತಿ-ನೀತಿ ವಿಸ್ಮಯಕಾರಿ ಎನಿಸಿತ್ತು. ಮಾರನೇ ದಿನದ ಸುದ್ದಿಯನ್ನು ಅಂದೇ ಓದುವಂತೆ ಮಾಡುತ್ತಿದ್ದ ಅವರ ಪರಿಶ್ರಮ ಅಸಾಧಾರಣವಾದದ್ದು. ರಾಜಕೀಯ ಸುದ್ದಿಗಳನ್ನು ಗ್ರಹಿಸಿ ಅವರು ವರದಿ ಮಾಡುತ್ತಿದ್ದ ರೀತಿ, ಅದೆಷ್ಟೋ ಜನರನ್ನು ನಿದ್ದೆಗೆಡುವಂತೆ  ಮಾಡುತ್ತಿತ್ತು.  ಬೆಂಗಳೂರಿನ ರಸ್ತೆಯ ಸಿಗ್ನಲ್ಲುಗಳ ಬಳಿ ಮಧ್ಯಾಹ್ನದಿಂದಲೇ ಪೇಪರ್ ಮಾರುವ ಹುಡುಗರ ಬಾಯಲ್ಲಿ ನಲಿಯುತ್ತಿದ್ದ ಸಂಜೆವಾಣಿಯ ಕುತೂಹಲಕಾರಿ ಶೀರ್ಷಿಕೆಗಳನ್ನು ಜನ ಮರೆಯುವಂತೆಯೇ ಇಲ್ಲ. 
ಪತ್ರಿಕೆಗಳಿಗೆ ‘ಸಂಜೆವಾಣಿ’ ಕೈಗನ್ನಡಿಯಾಗಿದ್ದು ವೃತ್ತಿಯಲ್ಲಿ ಶಿವಣ್ಣ ಅವರಿಗಿದ್ದ ಚಾಕಚಕ್ಯತೆ ಎಂದರೆ ತಪ್ಪಾಗಲಾರದು. ಈಗಲೂ ಅವರನ್ನು ಜನ 'ಸಂಜೆವಾಣಿ’ ಶಿವಣ್ಣ ಎಂದೇ ಗುರುತಿಸುತ್ತಾರೆ. 

ಶಿವಣ್ಣ ಅವರು ಕೇವಲ ಪತ್ರಿಕೋದ್ಯಮ ಅಲ್ಲದೆ ಅದಕ್ಕೆ ಸಂಬಂಧಿಸಿದ ಸಂಸ್ಥೆಗಳ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಿ ಪಾಲ್ಗೊಂಡು ಅವುಗಳ ಬೆಳವಣಿಗೆಗೂ ಕಾರಣೀಭೂತರಾಗಿದ್ದರು.  ವಿಶೇಷವಾಗಿ ಬೆಂಗಳೂರು ಪ್ರೆಸ್‌ಕ್ಲಬ್‌, ಬೆಂಗಳೂರು ವರದಿಗಾರರ ಕೂಟಗಳಿಗೆ ಹೊಸ ರೂಪ ನೀಡುವಲ್ಲಿಯೂ ಅವರ ಪಾತ್ರ ಸ್ಮರಣೀಯ. ಪ್ರೆಸ್‌ಕ್ಲಬ್‌ನ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಉಪಾಧ್ಯಕ್ಷರಾಗಿ, ಬೆಂಗಳೂರು ವರದಿಗಾರರ ಕೂಟದ ಅಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಸಲ್ಲಿಸಿದ ಅವರ ಸೇವೆ ಮಹತ್ವದ್ದು. ಸಾರ್ಕ್ ದೇಶಗಳ-ಬಾಂಗ್ಲಾದೇಶ ಪ್ರೆಸ್ ಕ್ಲಬ್ಬಿನ ಸಂಸ್ಥಾಪಕ ಸದಸ್ಯರೂ ಆಗಿರುವ ಶಿವಣ್ಣ ಅವರು ಅಮೆರಿಕಾ, ಯೂರೋಪ್ ದೇಶಗಳೂ ಸೇರಿದಂತೆ ಹಲವಾರು ದೇಶಗಳಿಗೆ ಭೇಟಿ ನೀಡಿದ್ದಾರೆ.

ಶಿವಣ್ಣ ಅವರಿಗೆ ರಾಜ್ಯ ಸರ್ಕಾರ 1992ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು.  ಬೆಂಗಳೂರು ಮಹಾನಗರ ಪಾಲಿಕೆಯ ಕೆಂಪೇಗೌಡ ಪ್ರಶಸ್ತಿ (1999), ಕನ್ನಡ ಸಾಹಿತ್ಯ ಪರಿಷತ್ತಿನ ಕಿಡಿ ಶೇಷಪ್ಪ ಪ್ರಶಸ್ತಿ (1999), 2004ರಲ್ಲಿ ಡಾ. ವಿಶ್ವೇಶ್ವರಯ್ಯ ಪ್ರಶಸ್ತಿ, 2009ರಲ್ಲಿ ಕನ್ನಡ ಸಾಹಿತ್ಯ ಪ್ರಶಸ್ತಿ, ಬೆಂಗಳೂರು ಪ್ರೆಸ್‌ಕ್ಲಬ್ ಪ್ರಶಸ್ತಿ ಹಾಗೂ ಬೆಂಗಳೂರು ಕೆ. ಯು. ಡಬ್ಲ್ಯೂ. ಜೆ ಪ್ರಶಸ್ತಿ, ಎಸ್. ವಿ. ಜಯಶೀಲರಾವ್ ಪ್ರಶಸ್ತಿ, ಅ. ನ. ಕೃ. ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿವೆ.‌

ಶಿವಣ್ಣನವರ ಪತ್ನಿ ಇಂದಿರಾ ಶಿವಣ್ಣ Indira Shivanna ಅವರು ನಾಡಿನ ಪ್ರಸಿದ್ಧ ಸಾಹಿತಿಗಳಾಗಿದ್ದಾರೆ.   ಕನ್ನಡ ಲೋಕಕ್ಕೆ ಈ ದಂಪತಿಗಳಿಂದ ಸಂದಿರುವ ಭಾಗ್ಯ ಬಲುದೊಡ್ಡದು.  ಹಿರಿಯರಾದ ಅ. ಚ. ಶಿವಣ್ಣ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ಅವರ ಸಮಸ್ತ ಕುಟುಂಬಕ್ಕೆ ಶುಭಹಾರೈಕೆಗಳು. 

ಮಾಹಿತಿ ಕೃಪೆ: ವೈ. ಜಿ. ಅಶೋಕ್ ಕುಮಾರ್, ಶೇಷಚಂದ್ರಿಕ Sesha Chandrika


On the birthday of great journalist A. C. Shivanna Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ