ಕೆ. ಎಂ. ಮುನ್ಷಿ
ಕೆ. ಎಂ. ಮುನ್ಷಿ
ಕೆ. ಎಂ. ಮುನ್ಷಿ ಅವರು ವಿದ್ವಾಂಸರು, ರಾಜಕಾರಣಿ, ವಕೀಲ, ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ, ಶಿಕ್ಷಣತಜ್ಞರು ಮತ್ತು ಭಾರತೀಯ ವಿದ್ಯಾಭವನದ ಸ್ಥಾಪಕರು.
ಕನ್ನ್ಹೈಯಲಾಲ್ ಮನೆಕ್‍ಲಾಲ್ ಮುನ್ಷಿ ಅವರು ಗುಜರಾತಿನ ಬರೂಚ್‍ನಲ್ಲಿ 1887ರ ಡಿಸೆಂಬರ್ 30ರಂದು ಜನಿಸಿದರು. ಬಡೋದೆಯಲ್ಲಿ ಶಿಕ್ಷಣ ಮುಗಿಸಿದ ಬಳಿಕ ವಕೀಲರಾದರು (1913). ಭುಲಾಭಾಯಿ ದೇಸಾಯಿಯವರ ಕೈಕೆಳಗೆ ವಕೀಲ ವೃತ್ತಿಯನ್ನು ಇವರು ಆರಂಭಿಸಿದ ಸ್ವಲ್ಪಕಾಲದಲ್ಲೇ ಒಂದನೆಯ ಮಹಾಯುದ್ಧ ಆರಂಭವಾಯಿತು. ಯುದ್ಧ ಮುಗಿಯುವ ವೇಳೆಗೆ ಇವರು ತಮ್ಮ ವೃತ್ತಿಯಲ್ಲಿ ಪ್ರಸಿದ್ಧರಾದರು. ಹಿಂದೂ ಕಾನೂನಿನಲ್ಲಿ ಮುನ್ಷಿಯವರು ವಿಶೇಷ ಜ್ಞಾನ ಪಡೆದಿದ್ದರಲ್ಲದೆ ಕಾನೂನಿನ ಇತರ ಕ್ಷೇತ್ರಗಳಲ್ಲೂ ಪರಿಣಿತರಾಗಿದ್ದರು. ಇವರು ರಚಿಸಿದ ಹಲವು ಪ್ರತಿವಾದಗಳು ಅತ್ಯಂತ ತರ್ಕಬದ್ಧವಾದ ಸಾಹಿತ್ಯಕೃತಿಗಳೆಂದು ಹೆಸರಾಗಿವೆ. ಯಾವುದೇ ವ್ಯಾಜ್ಯದ ಯಾವುದೇ ಪಕ್ಷದ ವಕೀಲಿಯನ್ನಾದರೂ ಇವರು ಅತ್ಯಂತ ಸಮರ್ಥವಾಗಿ ನಿರ್ವಹಿಸಬಲ್ಲವರಾಗಿದ್ದರು. ಎದುರು ಪಕ್ಷದ ವಕೀಲರೊಂದಿಗೆ ಹಾಗೂ ನ್ಯಾಯಮೂರ್ತಿಗಳೊಂದಿಗೆ ಇವರು ನಡೆಸುತ್ತಿದ್ದ ಸಂವಾದಗಳು ರಸಭರಿತವಾದ ಚತುರೋಕ್ತಿಗಳು ಎನಿಸಿದ್ದವು.
ಮುನ್ಷಿಯವರು ಮಹಾತ್ಮ ಗಾಂಧಿಯವರ ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಹಲವಾರು ಬಾರಿ ಸೆರೆಮನೆ ಶಿಕ್ಷೆ ಅನುಭವಿಸಿದರು. 1937ರಲ್ಲಿ ಭಾರತದ ಹಲವು ಪ್ರಾಂತ್ಯಗಳಲ್ಲಿ ವಿಧಾನಸಭೆಗಳಿಗೆ ಕಾಂಗ್ರೆಸ್ ಸ್ಪರ್ಧಿಸಿದಾಗ ಮುನ್ಷಿಯವರು ಅಂದಿನ ಮುಂಬಯಿ ಪ್ರಾಂತ್ಯದ ವಿಧಾನಸಭೆಗೆ ಆಯ್ಕೆಯಾದರಲ್ಲದೆ ಅಲ್ಲಿಯ ಕಾಂಗ್ರೆಸ್ ಸರ್ಕಾರದಲ್ಲಿ ಗೃಹಮಂತ್ರಿಯಾದರು. 1940ರಲ್ಲಿ ತಮ್ಮ ಪಕ್ಷದ ಇತರ ಮಂತ್ರಿಗಳೊಂದಿಗೆ ಇವರೂ ರಾಜೀನಾಮೆ ನೀಡಿ ಹೊರಬಂದರು. ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಇವರು ದೇಶದ ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ಗಮನಾರ್ಹವಾದ ಕೆಲಸ ಮಾಡಿದರು. ಭಾಷೆ ಮುಂತಾದ ಹಲವು ವಿಚಾರಗಳಲ್ಲಿ ಉತ್ತರ ದಕ್ಷಿಣ ಭಾರತದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಉಂಟಾದಾಗ ಮುನ್ಷಿಯವರು ಸಾಮರಸ್ಯ ಕುದುರಿಸಲು ಯತ್ನಿಸಿದರು. ಕೇಂದ್ರ ಪ್ರಾಬಲ್ಯವುಳ್ಳ ಒಕ್ಕೂಟದ ರಚನೆಗಾಗಿ ಇವರು ವಾದಿಸಿದರೆಂದು ಹೇಳಲಾಗಿದೆ. ರಾಷ್ಟ್ರಪತಿಯನ್ನು ಲೋಕಸಭೆಯಿಂದ ಮಾತ್ರ ಆಯ್ಕೆಮಾಡಲಾಗದೆಂದು ಅವರ ಚುನಾವಣೆಯ ಕ್ಷೇತ್ರ ಇನ್ನೂ ವ್ಯಾಪಕವಾಗಿರಬೇಕೆಂದು ವಾದಿಸಿದವರ ಪೈಕಿ ಮುನ್ಷಿಯವರೂ ಒಬ್ಬರು.
ಭಾರತಕ್ಕೆ ಸ್ವಾತಂತ್ರ್ಯ ಬಂದ ಆರಂಭದ ದಿನಗಳಲ್ಲಿ ಹೈದರಾಬಾದ್ ಸಂಸ್ಥಾನವನ್ನು ಒಕ್ಕೂಟದಲ್ಲಿ ವಿಲೀನಗೊಳಿಸಲು ಮುನ್ಷಿಯವರು ವಿಶೇಷವಾಗಿ ಶ್ರಮಿಸಿದರು. ಆ ಸಂಸ್ಥಾನದ ಮೇಲೆ ನಡೆಸಲಾದ ಪೋಲೀಸ್ ಕಾರ್ಯಾಚರಣೆಯ ಸಂದರ್ಭದಲ್ಲಿ ಇವರು ಹೈದರಾಬಾದಿನಲ್ಲಿ ಭಾರತ ಸರ್ಕಾರದ ಮಹಾಪ್ರತಿನಿಧಿ ಆಗಿದ್ದರು. ನಿಜಾಮರು ಹೈದರಾಬಾದನ್ನು ಭಾರತದಲ್ಲಿ ವಿಲೀನಗೊಳಿಸುವಂತೆ ಮಾಡುವಲ್ಲಿ ಮುನ್ಷಿಯವರ ಪಾತ್ರ ಇತ್ತು. 1950ರಲ್ಲಿ ಇವರು ಕೇಂದ್ರ ಸಂಪುಟದಲ್ಲಿ ಕೃಷಿ ಮತ್ತು ಆಹಾರ ಮಂತ್ರಿಯಾದರು. ಇವರು ಆರಂಭಿಸಿದ ವನಮಹೋತ್ಸವ ಆಗ ಬಹಳಷ್ಟು ಅವಜ್ಞೆಗೆ ಗುರಿಯಾಗಿದ್ದರೂ ಮುಂದೆ ಅದೊಂದು ವ್ಯಾಪಕ ಚಳವಳಿಯಾಗಿ ಪರಿಣಮಿಸಿತು. ಅನಂತರ ಇವರು ಉತ್ತರ ಪ್ರದೇಶದ ರಾಜ್ಯಪಾಲರಾಗಿದ್ದರು.
ಮುನ್ಷಿಯವರು ಗುಜರಾತಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ಆಧುನಿಕ ಗುಜರಾತಿ ಸಾಹಿತ್ಯ ಸಂಪದ್ಯುಕ್ತವಾಗುವಂತೆ ಮಾಡಿದ ಪ್ರಮುಖರಲ್ಲಿ ಮುನ್ಷಿಯವರೂ ಒಬ್ಬರು. 1920ರ ದಶಕದಲ್ಲಿ ಇವರು ಸಂಪಾದಿಸುತ್ತಿದ್ದ 'ಗುಜರಾತ್' ಎಂಬ ಪತ್ರಿಕೆ ಅತ್ಯುತ್ತಮ ಸಾಹಿತ್ಯ ಸತ್ತ್ವವುಳ್ಳದ್ದೆಂದು ಪರಿಗಣಿತವಾಗಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಮಂತ್ರಿಮಂಡಲ ರಾಜೀನಾಮೆ ನೀಡಿದಾಗ ಇವರು ಇನ್ನೊಂದು ಪತ್ರಿಕೆ ನಡೆಸುತ್ತಿದ್ದರು. ಅದರ ಹೆಸರು ಸೋಷಿಯಲ್ ವೆಲ್‍ಫೇರ್. ಮುನ್ಷಿಯವರು ನಾಲ್ಕು ಸಾಮಾಜಿಕ ಕಾದಂಬರಿಗಳನ್ನೂ ಒಂದು ಬೃಹತ್ ಕಥೆಯನ್ನೂ ಏಳು ಐತಿಹಾಸಿಕ ರಮ್ಯಕಾದಂಬರಿಗಳನ್ನೂ ಒಂದು ಕಥಾಸಂಕಲನವನ್ನೂ ಎರಡು ಜೀವನಚರಿತ್ರೆಗಳನ್ನೂ ಹತ್ತು ಸಾಮಾಜಿಕ ನಾಟಕಗಳನ್ನೂ ಹನ್ನೊಂದು ಐತಿಹಾಸಿಕ ನಾಟಕಗಳನ್ನೂ ಗುಜರಾತಿಯಲ್ಲಿ ಬರೆದರು. ಇಂಗ್ಲಿಷಿನಲ್ಲಿ ಇವರು ಬರೆದ ಕೃತಿಗಳು ಇಪ್ಪತ್ತೊಂಬತ್ತು. ಕೃಷ್ಣಾವತಾರದ ಕಥೆಯನ್ನು ಹಲವು ಸಂಪುಟಗಳಲ್ಲಿ ಮೂಡಿಸಿದ್ದು ಅವು ಕನ್ನಡವೂ ಸೇರಿದಂತೆ ಅನೇಕ ಭಾಷೆಗಳಲ್ಲಿ ಭಾಷಾಂತರಗೊಂಡಿವೆ. ಅಲ್ಲದೆ ಇವರು ತಮ್ಮ ಆತ್ಮಕಥೆಯನ್ನೂ ರಚಿಸಿದರು.
ಮುನ್ಷಿಯವರಿಗೆ ಭಾರತೀಯ ಸಂಸ್ಕೃತಿಯಲ್ಲಿ ಹಾಗೂ ಸಂಸ್ಕೃತ ಭಾಷೆಯಲ್ಲಿ. ಬಹಳ ಅಭಿಮಾನವಿತ್ತು. ಭಾರತೀಯ ಸಂಸ್ಕೃತಿಯ ಪ್ರಚಾರ ಹಾಗೂ ಅಭ್ಯಾಸಕ್ಕಾಗಿ ಮುನ್ಷಿಯವರು 1938ರ ನವೆಂಬರ್‍ನಲ್ಲಿ ಭಾರತೀಯ ವಿದ್ಯಾಭವನವನ್ನು ಸ್ಥಾಪಿಸಿದರು. ಭಾರತೀಯ ವಿದ್ಯಾಭವನವು ಇಂದು ಭಾರತದಲ್ಲಿ ಎಲ್ಲೆಡೆಯಲ್ಲಿ ಅಲ್ಲದೆ ವಿಶ್ವದ ಹಲವೆಡೆಗಳಲ್ಲಿ ತನ್ನ ಶಾಖೆಗಳನ್ನು ಹೊಂದಿ ಪ್ರಸಿದ್ಧವಾಗಿದೆ. ಸಹಸ್ರಾರು ಪುಸ್ತಕಗಳನ್ನು ಪ್ರಕಟಿಸಿದೆ. ಹನ್ನೊಂದು ಬೃಹತ್ ಸಂಪುಟಗಳಲ್ಲಿ ಪ್ರಕಟವಾಗಿರುವ 'ಭಾರತೀಯ ಇತಿಹಾಸ ಮತ್ತು ಸಂಸ್ಕೃತಿ' ಎಂಬುದು ಭವನದ ಮಹತ್ತ್ವದ ಕೃತಿಗಳಲ್ಲಿ ಒಂದು. 'ಭವನ್ಸ್ ಜರ್ನಲ್' ಎಂಬ ಪತ್ರಿಕೆಯೊಂದನ್ನು ಇದು ಇಂಗ್ಲಿಷ್‍ನಲ್ಲಿ ಪ್ರಕಟಿಸುತ್ತಿದೆ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ.
ಕೆ. ಎಂ. ಮುನ್ಷಿಯವರು 1971ರ ಫೆಬ್ರುವರಿ 8ರಂದು ನಿಧನಹೊಂದಿದರು.
On the birth anniversary of founder of Bharatiya Vidhya Bhavan, freedom fighter, scholar and politician K. M. Munshi
ಕಾಮೆಂಟ್‌ಗಳು