ಬಾಂಬೆ ಸಹೋದರಿಯರು
ಬಾಂಬೆ ಸಹೋದರಿಯರಾದ ಸರೋಜಾ - ಲಲಿತ
ಸುಶ್ರಾವ್ಯ ಕರ್ನಾಟಕ ಸಂಗೀತಕ್ಕೆ ಹೆಸರಾದ ಬಾಂಬೆ ಸಹೋದರಿಯರು ಸಿ. ಸರೋಜಾ - ಸಿ. ಲಲಿತಾ ಜೋಡಿ.
ಸಿ. ಸರೋಜಾ ಮತ್ತು ಸಿ. ಲಲಿತಾ ಸಹೋದರಿಯರು ಕೇರಳದ ತ್ರಿಚೂರಿನಲ್ಲಿ ಮುಕ್ತಾಂಬಾಳ್ ಮತ್ತು ಎನ್. ಚಿದಂಬರಂ ಅಯ್ಯರ್ ದಂಪತಿಗಳಿಗೆ ಜನಿಸಿದರು. ಸರೋಜಾ ಅವರು 1936ರ ಡಿಸೆಂಬರ್ 7ರಂದು ಜನಿಸಿದರು. ಸಿ. ಲಲಿತಾ ಅವರು 1938ರ ಆಗಸ್ಟ್ 26ರಂದು ಜನಿಸಿದರು.
ಸಿ. ಸರೋಜಾ ಮತ್ತು ಸಿ. ಲಲಿತಾ ಸಹೋದರಿಯರು ಮುಂಬೈನಲ್ಲಿ ಬೆಳೆದರು. ಸರೋಜಾ ಮತ್ತು ಲಲಿತಾ ಅವರು ಎಸ್‌ಐಇಎಸ್ ಮಾತುಂಗಾದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. ಭೋಪಾಲ್‌ನಿಂದ ಖಾಸಗಿಯಾಗಿ ಇಂಟರ್‌ಮೀಡಿಯೇಟ್ ಓದಿದರು. ಮಧ್ಯಪ್ರದೇಶ ಮತ್ತು ದೆಹಲಿ ವಿಶ್ವವಿದ್ಯಾಲಯದಿಂದ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು. ಎಚ್.ಎ.ಎಸ್.ಮಣಿ, ಮುಸಿರಿ ಸುಬ್ರಮಣ್ಯ ಅಯ್ಯರ್ ಮತ್ತು ಟಿ.ಕೆ.ಗೋವಿಂದ ರಾವ್ ಅವರ ಬಳಿ ಸಂಗೀತ ಸಾಧನೆ ಮಾಡಿದರು.
ಮುಂಬೈನಲ್ಲಿ ಕರ್ನಾಟಕ ಸಂಗೀತದಲ್ಲಿ ಬೆಳೆದ ಸಿ. ಸರೋಜಾ ಮತ್ತು ಸಿ. ಲಲಿತಾ ಸಹೋದರಿಯರು ಮುಂದೆ ಚೆನ್ನೈಗೆ ಬಂದರು. ಸ್ವಾಮೀಜಿಯೊಬ್ಬರು ಅವರನ್ನು ‘ಬಾಂಬೆ ಸಹೋದರಿಯರು' ಎಂದು ಸಂಬೋಧಿಸಿ ಆಶೀರ್ವದಿಸಿದ್ದರಿಂದ ಅದೇ ಹೆಸರು ಅಂಟಿಕೊಂಡಿತು. ಸರೋಜಾ ಅವರ ಪತಿ ರಾಜಾರಾಮ್ ಅವರು ಲಲಿತ ಕಲಾ ಅಕಾಡೆಮಿಯ ಮುಖ್ಯ ಕಾರ್ಯದರ್ಶಿಯಾಗಿದ್ದರು ಮತ್ತು ಲಲಿತಾ ಅವರ ಪತಿ ಚಂದ್ರನ್ ವಕೀಲರಾಗಿದ್ದರು. ಮದುವೆಯಾದ ನಂತರವೂ ಒಟ್ಟಿಗೆ ಕಚೇರಿ ಗಾಯನ ಪ್ರದರ್ಶನವನ್ನು ಮುಂದುವರಿಸಲು ಇಬ್ಬರೂ ಕುಟುಂಬದವರು ಒಪ್ಪಿ ಸಹಕರಿಸಿದರು.
1950ರ ದಶಕದಲ್ಲಿ ರಾಧಾ-ಜಯಲಕ್ಷ್ಮಿ ಮತ್ತು ಸೂಲಮಂಗಲಂ-ಸಿಸ್ಟರ್ಸ್ ಅವರಂತಹ ಕಲಾವಿದರಿಂದ ಪ್ರಾರಂಭವಾದ ಕರ್ನಾಟಕ ಸಂಗೀತದಲ್ಲಿ ಜೋಡಿಯಾಗಿ ಹಾಡುವ ರೀತಿಯಲ್ಲಿ ಬಾಂಬೆ ಸಿಸ್ಟರ್ಸ್ ಜೋಡಿಯೂ 1963ರಿಂದ ಲಘು ಶಾಸ್ತ್ರೀಯ ಸಂಗೀತದಿಂದ ಗಾಯನ ಪ್ರಾರಂಭಿಸಿ ನಂತರ ಶಾಸ್ತ್ರೀಯ ಕರ್ನಾಟಕ ಸಂಗೀತಕ್ಕೆ ಮುನ್ನಡೆದರು. ಅವರು ಸಂಸ್ಕೃತ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಮರಾಠಿ ಸೇರಿದಂತೆ ಬಹು ಭಾಷೆಗಳಲ್ಲಿ ಹಾಡುತ್ತಾ ಬಂದರು.
ಅಂದಿನ ದಿನಗಳಲ್ಲಿ ಬಹುತೇಕ ಕನ್ನಡದ ದಾಸರ ಕೀರ್ತನೆಗಳನ್ನು ಅತಿ ಹೆಚ್ಚು ಪ್ರಸಿದ್ಧಿ ಪಡಿಸಿದವರಲ್ಲಿ ಸಿ. ಸರೋಜಾ ಮತ್ತು ಸಿ. ಲಲಿತಾ ಸಹೋದರಿಯರು ಪ್ರಮುಖರು. ಅವರು ಹಾಡಿರುವ ದಾಸ ಕೀರ್ತನೆಯ ಕ್ಯಾಸೆಟ್ಗಳು ಇಂದೂ ನನ್ನ ಬಳಿ ಇವೆ. ಇದಲ್ಲದೆ ಎಲ್ಲ ರೀತಿಯ ಶಾಸ್ತ್ರೀಯ ರಚನೆಗಳು, ಸಂಸ್ಕೃತ ಮತ್ತು ಇನ್ನಿತರ ಭಾಷೆಗಳ ಸುಪ್ರಭಾತಗಳ ಪ್ರಸ್ತುತಿಯನ್ನು ಸಹಾ ಈ ಸಹೋದರಿಯರು ಸುಶ್ರಾವ್ಯವಾಗಿ ಧ್ವನಿ ಸುರುಳಿಗಳಲ್ಲಿ ಮೂಡಿಸಿದ್ದರು. ಅವರ ಲಲಿತಾ ಸಹಸ್ರನಾಮವಂತೂ ಮನೆಮನೆಗಳಲ್ಲಿ ಜನಪ್ರಿಯ.
ಸಿ. ಸರೋಜಾ ಮತ್ತು ಸಿ. ಲಲಿತಾ ಸಹೋದರಿಯರು ದತ್ತಿ ಮತ್ತು ವಿದ್ಯಾರ್ಥಿವೇತನಗಳ ಮೂಲಕ ಯುವ ಸಂಗೀತಗಾರರನ್ನು ಉತ್ತೇಜಿಸಲು ಸಹಾ ಹೆಸರುವಾಸಿ.
ಬಾಂಬೆ ಸಹೋದರಿಯರಿಗೆ ಪದ್ಮಶ್ರೀ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ತಮಿಳುನಾಡಿನ ಕಲೈಮಾಮಣಿ ಪ್ರಶಸ್ತಿಗಳೂ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿದ್ದವು.
ನಮ್ಮ ಕಾಲದ ಶ್ರೇಷ್ಠ ಸಂಗೀತದ ನಿಧಿಯಂತಿದ್ದ ಬಾಂಬೆ ಸಿಸ್ಟರ್ಸ್ ಜೋಡಿಯ ಸಿ. ಲಲಿತಾ ಅವರು 2023ರ ಜನವರಿ 31ರಂದು ನಿಧನರಾದರು.
Bombay Sisters Saroja Lalitha
ಕಾಮೆಂಟ್‌ಗಳು