ಗೀತಗೋವಿಂದ22
ಜಯದೇವಕವಿಯ ಗೀತಗೋವಿಂದ
ಅಷ್ಟಪದಿ 21
*ಸಂಕ್ಷಿಪ್ತ ರೂಪ*
ಲತಾಕುಂಜದ ಸಮೀಪ ಬಂದ ರಾಧೆ ಅಲ್ಲಿದ್ದ ಮಾಧವನನ್ನು ಕಂಡು ನಾಚಿದಳು. ಆಗ ಅವಳ ಸಖಿ ಆಡುವ ಮಾತುಗಳು ಇಲ್ಲಿವೆ.
ರತಿಸುಖಕ್ಕಾಗಿ ಕಾತರಿಸಿರುವ ರಾಧೆ, ನಡೆ. ಮಾಧವನ ಸಮೀಪಕ್ಕೆ ಹೋಗು. ಅಲ್ಲಿ ಅವನೊಡನೆ ರಮಿಸು. ಅಶೋಕವನದಲ್ಲಿ ಕೊಡದಂತಹ ಮೊಲೆಗಳು ತೊನೆದಾಡುವಂತೆ ಅವನೊಡನೆ ವಿಹರಿಸು.
ಹೂಗಳಿಂದ ಅಲಂಕೃತವಾದ, ನಿರ್ಮಲವಾದ ನಿಲಯದಲ್ಲಿ ನಿನ್ನ ಸುಕುಮಾರತನು ವಿಹರಿಸಲಿ. ಸುಗಂಧಭರಿತವಾದ ಗಾಳಿಯು ಸುಳಿಯುತ್ತಲಿದೆ. ಮದನನ ಬಾಣಗಳಿಂದ ನೊಂದ ನೀನು ಅಲ್ಲಿ ವಿಹರಿಸು.
ಬಳ್ಳಿಬಳ್ಳಿಗಳಿಂದ ಎಳೆಯದಾದ ಕೆಂಪಾದ ಚಿಗುರುಗಳ ತೋರಣವಿದೆ ಇಲ್ಲಿ. ಹೇ, ವಿಶಾಲವಾದ ನಿತಂಬವನ್ನು ಹೊಂದಿದವಳೆ, ನೀನು ಇಲ್ಲಿ ಮಾಧವನೊಡನೆ ವಿಹರಿಸು.
ಮಕರಂದವನ್ನು ಹೀರಿದ ದುಂಬಿಗಳು ನಾದಗೈಯುತ್ತಿವೆ. ಕುಸುಮಶರನಿಂದ ನೊಂದ ಓ ಹೆಣ್ಣೆ, ನೀನು ಇಲ್ಲಿ ವಿಹರಿಸು. ಕೋಗಿಲೆಗಳ ಗಾನವು ಇಂಪಾಗಿರುವುದಿಲ್ಲಿ. ಎಲೈ ರಾಧೆ, ಸುಂದರವಾದ ದಂತಪಃಕ್ತಿಯುಳ್ಳವಳೆ, ಇಲ್ಲಿ ವಿಹರಿಸು.
ಪದ್ಮಾವತಿಯೊಂದಿಗೆ ಸದಾ ಸುಖದಿಂದಿರಲು ಬಯಸುವ ಜಯದೇವ ಕವಿಯು ನುಡಿದ ಈ ಸಾಲುಗಳಿಂದ ನಮಗೆಲ್ಲರಿಗೂ ಶ್ರೀ ಹರಿಯು ಶುಭವನ್ನು ತರಲಿ.
*ಪರಮೇಶ್ವರ ಭಟ್ಟರ ಕನ್ನಡ ರೂಪ*
ಅಷ್ಟಪದಿ ೨೧
ಮಾಧವಸಮೀಪವನು ಸಾರು ನೀನೆಲೆ ಅಲಸಗಮನೆ
ರತಿರಭಸ ದರಹಸಿತದರವಿಂದ ವದನೆ ರಮಿಸು ನೀ ಮಂಜುತರ ಕುಂಜದೊಳು ರಾಧೆ. 1
ವಿಹರಿಪುದಶೋಕದಳ ಶಯನದೊಳು ಲೋಲೆ ಕೊಡಮೊಲೆಯೊಳೆಕ್ಕಸರ ತೊನೆದಾಡುವೋಲೆ. 2
ಕುಸುಮಚಯ ರಚಿತವಹ ಶುಚಿನಿಲಯದೊಳಗೆ ಕುಸುಮ ಸುಕುಮಾರತನು ವಿಹರಿಸುವುದೆಲಗೆ. 3
ಕಂಪಿಡಿದ ತೆಂಕಣೆಲರಿದೊ ಸುಳಿಯುತಿಹುದು ಕಂದರ್ಪ ಶರನಿಕರ ಭೀತೆ ವಿಹರಿಪುದು. 4
ಲತೆಲತೆಯ ಚೆಂದಳಿರು ಕೋದಿರುವುದಿಲ್ಲಿ
ಹೇ ಪೀನ ಜಘನೆ ನೀ ವಿಹರಿಸುವುದಿಲ್ಲಿ. 5
ಮಧು ಮುದಿತ ಮಧುಪಕುಲ ಝೇಂಕರಿಸುತಿಹವು
ವಿಹರಿಪುದು ಎಲೆ ಕುಸುಮಶರ ಸರಸ ಭಾವೆ. 6
ಪಿಕನಿಕರ ನಿನದವಹ ಮಧುರತರವಿಹುದು ಎಲೆ ರಾಧೆ ದಶನ ರುಚಿರುಚಿರೆ ವಿಹರಿಪುದು. 7
ಜಯದೇವ ಬಯಸಿ ಪದ್ಮಾವತಿಯ ಸುಖವ ನುಡಿದನಿದನೆಲೆ ಹರಿಯ ಕುಡು ನೂರು ಶುಭವ. 8
*ಮೂಲರೂಪ*
ಗೀತಂ – ಅಪ್ಪಪದೀ– 21 ಸಾನಂದ ದಾಮೋದರ ಪ್ರೇಮದ್ರುಮ ಪಲ್ಲವಮ್
ವರಾಡೀರಾಗ, ರೂಪಕತಾಲ
ಮಂಜುತರಕುಂಜತಲಕೇಲಿಸದನೇ
ಇಹ ವಿಲಸ ರತಿರಭಸಹಸಿತವದನೇ
ಪ್ರವಿಶರಾಧೇ ಮಾಧವಸಮೀಪಮಿಹ ||ಧ್ರುವಮ್|| ೧
ನವಭವದಶೋಕದಲಶಯನಸಾರೇ
ಇಹ ವಿಲಸ ಕುಚಕಲಶತರಲಹಾರೇ ೨
ಕುಸುಮಚಯರಚಿತಶುಚಿವಾಸಗೇಹೇ
ಇಹ ವಿಲಸ ಕುಸುಮಸುಕುಮಾರದೇಹೇ ೩
ಮೃದುಚಲಮಲಯಪವನಸುರಭಿಶೀತೇ
ಇಹ ವಿಲಸ ಮದನಶರನಿಕರಭೀತೇ ೪
ವಿತತ ಬಹುವಲ್ಲಿನವಪಲ್ಲವಘನೇ
ಇಹ ವಿಲಸ ಚಿರಮಲಸಪೀನಜಘನೇ ೫
ಮಧುಮುದಿತಮಧುಪಕುಲಕಲಿತರಾವೇ
ಇಹ ವಿಲಸಕುಸುಮಶರಸರಸಭಾವೇ ೬
ಮಧುರತರಪಿಕನಿಕರನಿನದಮುಖರೇ
ಇಹ ವಿಲಸ ದಶನರುಚಿರುಚಿರಶಿಖರೇ ೭
ವಿಹಿತಪದ್ಮಾವತೀಸುಖಸಮಾಜೇ
ಕುರುಮುರಾರೇ ಮಂಗಲಶತಾನಿ
ಕಣತಿ ಜಯದೇವಕವಿರಾಜರಾಜೇ ೮
ತ್ವಾಂ ಚಿತ್ತೇನ ಚಿರಂ ವಹನ್ನಯ ಮತಿಶ್ರಾಂತೋ ಭೃಶಂ ತಾಪಿತಃ
ಕಂದರ್ಪೇಣ ಚ ಪಾತುಮಿಚ್ಛತಿ ಸುಧಾಸಂಬಾಧಬಿಂಬಾಧರಂ
ಅಸ್ಯಾಂಕಂ ತದಲಂಕುರು ಕ್ಷಣಮಿಹ ಭ್ರೂಕ್ಷೇಪಲಕ್ಷ್ಮೀಲವ_
ಕ್ರೀತೇ ದಾಸ ಇವೋಪಸೇವಿತಪದಾಂಭೋಜೇ ಕುತಃ ಸಂಭ್ರಮಃ
ಸಾ ಸಸಾಧ್ವಸಸಾನಂದಂ ಗೋವಿಂದೇ ಲೋಲಲೋಚನಾ
ಸಿಂಜಾನಮಂಜುಮಂಜೀರಂ ಪ್ರವಿವೇಶಾಭಿವೇಶನಂ ೯
ಕೃತಜ್ಞತೆ:
1. ಮೂಲ: ಜಯದೇವ ಕವಿಯ 'ಗೀತಗೋವಿಂದ'
2. ಎಸ್. ವಿ. ಪರಮೇಶ್ವರ ಭಟ್ಟರ ಕನ್ನಡ ಕಾವ್ಯರೂಪ
3. ಸಂಕ್ಷಿಪ್ತ ಭಾವ ನೀಡಿದ: ಸುಬ್ಬುಲಕ್ಷ್ಮಿ ಕೋಲಾರ್
ಕಾಮೆಂಟ್‌ಗಳು