ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಕ್ರಮಾದಿತ್ಯ 6


 ವಿಕ್ರಮಾದಿತ್ಯ 6


ಆರನೇ ವಿಕ್ರಮಾದಿತ್ಯ ಕಲ್ಯಾಣ ಚಾಳುಕ್ಯ ವಂಶದ ಸುಪ್ರಸಿದ್ಧ ಚಕ್ರವರ್ತಿ (1076-1127). ತ್ರಿಭುವನಮಲ್ಲ ಎಂಬ ಬಿರುದನ್ನು ಧರಿಸಿದ್ದ ಈತ ಒಂದನೆಯ ಸೋಮೇಶ್ವರನ ಮಗ. ಎರಡನೆಯ ಸೋಮೇಶ್ವರನ ತಮ್ಮ ಮತ್ತು ಉತ್ತರಾಧಿಕಾರಿ.

ವಿಕ್ರಮಾದಿತ್ಯ ತನ್ನ ತಂದೆಯ ಕಾಲದಿಂದಲೇ ರಾಜಕೀಯದಲ್ಲಿ ಪ್ರಮಖ ಪಾತ್ರವಹಿಸಿದ್ದ. ಆಗ ಉತ್ತರದಲ್ಲಿ ಜಯಸಿಂಹ ಮತ್ತು ಉದಯಾದಿತ್ಯ ಎಂಬವರು ಪರಮಾರ ಸಿಂಹಾಸನಕ್ಕಾಗಿ ಸೆಣಸುತ್ತಿದ್ದಾಗ ವಿಕ್ರಮಾದಿತ್ಯ ಜಯಸಿಂಹನ ಪರವಾಗಿ ಹೋರಾಡಿ ಅವನಿಗೆ ರಾಜ್ಯವನ್ನು ದೊರಕಿಸಿಕೊಟ್ಟ. ಒಂದನೆಯ ಸೋಮೇಶ್ವರ ಇವನ ಶೌರ್ಯವನ್ನು ಮೆಚ್ಚಿ ಇವನನ್ನೇ ಯುವರಾಜನನ್ನಾಗಿ ಮಾಡಲು ಇಚ್ಛಿಸಿದ್ದನೆಂಬ ಹೇಳಿಕೆ ಇದೆ. ಆದರೆ ತಂದೆಯ ಮರಣಾನಂತರ ಇವನ ಹಿರಿಯಣ್ಣ 2ನೆಯ ಸೋಮೇಶ್ವರ ಪಟ್ಟಕ್ಕೆ ಬಂದ. ಅಂದಿನಿಂದ ಅಣ್ಣತಮ್ಮಂದಿರಲ್ಲಿ ಸಾಮರಸ್ಯವಿರಲಿಲ್ಲ. 2ನೆಯ ಸೋಮೇಶ್ವರ ವಿಕ್ರಮಾದಿತ್ಯನ ನಿಷ್ಠೆಯನ್ನು ಸಂದೇಹಿಸಿದ. ಉತ್ತರದ ಪರಮಾರ, ಚಾಳುಕ್ಯ, ಕಳಚುರಿಗಳೊಡನೆ ಇವನು ಸಾಧಿಸಿಕೊಂಡಿದ್ದ ಸ್ನೇಹಬಲದಿಂದ ತನ್ನ ಅಧಿಕಾರಕ್ಕೇ ಕುಂದು ತರಬಹುದೆಂಬ ಶಂಕೆಯಿಂದ ಸೋಮೇಶ್ವರ ವಿಕ್ರಮಾದಿತ್ಯನನ್ನು ಪರಮಾರ ರಾಜ್ಯದಿಂದ ಹಿಂದಕ್ಕೆ ಕರೆಸಿಕೊಂಡ. ತಾನೇ ನೇರವಾಗಿ ಅಲ್ಲಿನ ರಾಜಕೀಯ ಪರಿಸ್ಥಿತಿಯನ್ನು ಸರಿಪಡಿಸಲು ನಡೆದನಾದರೂ ಸೋಲನ್ನನುಭವಿಸಬೇಕಾಯಿತು. ಇದರಿಂದ ವಿಕ್ರಮಾದಿತ್ಯನ ವರ್ಚಸ್ಸು ಹೆಚ್ಚಿತೆಂದೇ ಹೇಳಬಹುದು. 

ಉತ್ತರದಿಂದ ಹಿಂದೆ ಬಂದ ವಿಕ್ರಮಾದಿತ್ಯ ತನ್ನ ಜೀವ ಅಥವಾ ಗೌರವಕ್ಕೆ ಸೋಮೇಶ್ವರನಿಂದ ಹಾನಿಯಾಗಬಹುದೆಂದು ಬಗೆದು ತನ್ನ ತಮ್ಮ ಜಯಸಿಂಹನನ್ನು ಜೊತೆಯಲ್ಲಿಟ್ಟುಕೊಂಡು ರಾಜಧಾನಿ ಕಲ್ಯಾಣದಿಂದ ಹೊರಬಿದ್ದ. ಇವನನ್ನು ಹಿಂಬಾಲಿಸಿದ ಸೋಮೇಶ್ವರನ ಸೈನ್ಯಕ್ಕೂ ಇವನಿಗೂ ಯುದ್ಧವಾದರೂ ವಿಕ್ರಮಾದಿತ್ಯನಿಗೆ ತೊಂದರೆಯೇನೂ ಆಗಲಿಲ್ಲ. ಮುಂದೆ ಸ್ವಲ್ಪಕಾಲ ತುಂಗಭದ್ರಾ ದಂಡೆಯಲ್ಲಿ ಕಳೆದು ಅನಂತರ ಚೋಳ ಆಕ್ರಮಣವನ್ನು ತಡೆಯಲು ಬನವಾಸಿಗೆ ಹೋದ. ಅಲ್ಲಿಂದ ಕದಂಬ ಜಯಕೇಶಿಯ ಮೇಲೆ ಬಿದ್ದು ಅವನನ್ನು ಸಾಮಂತನಾಗಿಸಿಕೊಂಡ. ಅವನ ಜೊತೆ ಸೇರಿ ಚೋಳ ದೊರೆ ವೀರರಾಜೇಂದ್ರನನ್ನು ಸೋಲಿಸಿದ. ವೀರರಾಜೇಂದ್ರ ತನ್ನ ಮಗಳನ್ನು ಇವನಿಗೆ ಮದುವೆ ಮಾಡಿಕೊಟ್ಟು ಸ್ನೇಹ ಬೆಳೆಸಿದ (ಸು. 1069). ಅತಿ ಶೀಘ್ರದಲ್ಲಿಯೇ ಆಗತಾನೇ ಹಿಂತಿರುಗಿದ್ದ ವೀರರಾಜೇಂದ್ರನ ಮರಣ ವಾರ್ತೆಯನ್ನು ಕೇಳಿ ವಿಕ್ರಮಾದಿತ್ಯ ಚೋಳ ರಾಜಧಾನಿ ಗಂಗೈಕೊಂಡಚೋಳಪುರಕ್ಕೆ ಧಾವಿಸಿ ಅಲ್ಲಿ ಕಂಟಕಪ್ರಾಯರಾಗಿದ್ದವರನ್ನು ನಿಗ್ರಹಿಸಿ ತನ್ನ ಮೈದುನ ಅಧಿರಾಜೇಂದ್ರನನ್ನು ಚೋಳ ಸಿಂಹಾಸನದ ಮೇಲೆ ಕೂರಿಸಿದ. 

1073-76ರ ಅವಧಿಯಲ್ಲಿ ವೆಂಗಿಯ ಇಮ್ಮಡಿ ರಾಜೇಂದ್ರ ಚೋಳ ಚಕ್ರವರ್ತಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ವೆಂಗಿ ಸಹ ಚೋಳ ರಾಜ್ಯದ ಭಾಗವಾಯಿತು. ಇದು ಚಾಳುಕ್ಯರ ಗೌರವಕ್ಕೆ ಹಾನಿಯುಂಟುಮಾಡಿತು. ಸೋಮೇಶ್ವರನ ನಿರ್ವೀರ್ಯ ವರ್ತನೆಯೇ ಇದಕ್ಕೆ ಕಾರಣವೆಂದು ತರ್ಕಿಸಿದ ವಿಕ್ರಮಾದಿತ್ಯ ತಾನೇ ರಾಜ್ಯವನ್ನು ವಹಿಸಿಕೊಳ್ಳುವ ಸನ್ನಾಹ ಮಾಡಿದ. 

1071ರ ಕೆಲವು ಶಾಸನಗಳು ವಿಕ್ರಮಾದಿತ್ಯನನ್ನು ಚಾಳುಕ್ಯ ಸಮ್ರಾಟನೆಂದು ಹೇಳಿರುವುದು ಆ ಹೊತ್ತಿಗೆ ವಿಕ್ರಮಾದಿತ್ಯ ಈ ದಿಶೆಯಲ್ಲಿ ಕಾರ್ಯಪ್ರವೃತ್ತನಾಗಿದ್ದನೆಂಬ ಸೂಚನೆಯನ್ನು ಒದಗಿಸುತ್ತವೆ. 1076ರ ಹೊತ್ತಿಗೆ ಸೋಮೇಶ್ವರನಿಗೂ ವಿಕ್ರಮಾದಿತ್ಯನಿಗೂ ಯುದ್ಧ ನಡೆದು ವಿಕ್ರಮಾದಿತ್ಯ ಜಯಗಳಿಸಿದ. 1075-76ರ ಹೊತ್ತಿಗೆ ಚಾಳುಕ್ಯ ರಾಜ್ಯ ವಿಕ್ರಮಾದಿತ್ಯನ ಕೈವಶವಾದರೂ ಹಲವು ಆಂತರಿಕ ಶತ್ರುಗಳನ್ನು ನಿಗ್ರಹ ಮಾಡಬೇಕಾಗಿದ್ದು ಕೊನೆಗೆ ಪಿಂಗಳ ಸಂವತ್ಸರದ ಚೈತ್ರಶುದ್ಧ ಪಾಡ್ಯಮಿಯಂದು (1077 ಫೆಬ್ರವರಿ 26) ಪಟ್ಟಾಭಿಷಿಕ್ತನಾದ. ಅಂದಿನಿಂದ ಚಾಳುಕ್ಯ ವಿಕ್ರಮಶಕೆ ಎಂಬ ಕಾಲಗಣನೆಯನ್ನು ಉದ್ಘಾಟಿಸಿದ (ಈ ಗಣನೆ ಮುಂದೆ ಸುಮಾರು ಐವತ್ತು ವರ್ಷಗಳ ಕಾಲ ಪ್ರಚಲಿತವಾಗಿದ್ದಿತು). 

ವಿಕ್ರಮಾದಿತ್ಯ ಸಿಂಹಾಸನವೇರಿದಾಗ ಚೋಳ ಕುಲೋತ್ತುಂಗ ಪ್ರಬಲನಾಗಿದ್ದ. ಇದನ್ನು ಗಮನಿಸಿದ ವಿಕ್ರಮಾದಿತ್ಯ ಚಾಳುಕ್ಯರ ಕೈಬಿಟ್ಟ ವೆಂಗಿಯನ್ನು ಹಿಂತೆಗೆದುಕೊಳ್ಳುವ ಪ್ರಯತ್ನ ಮಾಡಲಿಲ್ಲ. ಅತ್ತ ಕುಲೋತ್ತುಂಗನಿಗೂ ಸೋಮೇಶ್ವರನಿಗೂ ಸಹಾಯ ಮಾಡಿ ವಿಕ್ರಮಾದಿತ್ಯನ ಏಳ್ಗೆಯನ್ನು ತಡೆಯುವ ಪ್ರಯತ್ನದಲ್ಲಿ ಅಸಫಲನಾದ್ದರಿಂದ, ಇಬ್ಬರೂ ಪರಸ್ಪರರ ಶಕ್ತಿಯನ್ನು ಅರಿತು ತೆಪ್ಪಗಾದರು. ಆದರೆ ಇವನ ರಾಜ್ಯದಲ್ಲೇ ತಮ್ಮನಾದ ಯುವರಾಜ ಜಯಸಿಂಹ ದಂಗೆಯೆದ್ದ. ಹಿಂದೆ ಅಣ್ಣನಿಗೆ ಸಹಾಯ ಮಾಡಿದ್ದರ ಪ್ರತಿಫಲವಾಗಿ ಯುವರಾಜ ಪದವಿಯನ್ನೂ ಅನೇಕ ಪ್ರಾಂತ್ಯಗಳ ಅಧಿಕಾರವನ್ನೂ ವಹಿಸಿಕೊಂಡಿದ್ದ ಜಯಸಿಂಹ ಕುಲೋತ್ತುಂಗನ ಸ್ನೇಹ ಬಯಸಿ ಅಣ್ಣನ ವಿರುದ್ಧ ನಿಂತಿದ್ದರಿಂದ ಎಲ್ಲ ಅಧಿಕಾರಗಳನ್ನು ಕಳೆದುಕೊಂಡ (1082). ಅದೇ ವರ್ಷ ವಿಕ್ರಮಾದಿತ್ಯನ ಮಗ ಮಲ್ಲಿಕಾರ್ಜುನನಿಗೆ ಯುವರಾಜತ್ವ ದಕ್ಕಿತು. ವಿಕ್ರಮಾದಿತ್ಯ ಮೂರು ಬಾರಿ ಮಾಳವದ ಮೇಲೆ ದಾಳಿ ಮಾಡಿದ. ಪಟ್ಟಾಭಿಷಿಕ್ತನಾದ ತರುಣದಲ್ಲೇ (ಸು. 1077) ಅಣ್ಣ ಸೋಮೇಶ್ವರ ಅಲ್ಲಿಯ ಉದಯಾದಿತ್ಯನಿಂದ ಅನುಭವಿಸಿದ್ದ ಸೋಲಿನ ಸೇಡು ತೀರಿಸಲು ತೆರಳಿದನಾದರೂ ಇದರ ಫಲಿತಾಂಶ ಸ್ಪಷ್ಟವಾಗಿಲ್ಲ. ಪ್ರಾಯಃ ಉದಯಾದಿತ್ಯನ ಮಗ ಜಗದ್ದೇವನಿಗೆ ಸಿಂಹಾಸನ ದೊರಕಿಸಿಕೊಡುವ ಉದ್ದೇಶದಿಂದ ಪುನಃ 1088ರ ಹೊತ್ತಿಗೆ ಮಾಳವಕ್ಕೆ ನುಗ್ಗಿ ಉದಯಾದಿತ್ಯನನ್ನು ಸೋಲಿಸಿ, ಪ್ರಾಯಃ ಕೊಂದು ರಾಜಧಾನಿ ಧಾರಾ ನಗರವನ್ನು ಸುಟ್ಟ. 

ಮತ್ತೊಮ್ಮೆ 1096-97ರಲ್ಲಿ ಧಾರಾ ನಗರವನ್ನು ಇವನು ಹಾಳುಗೆಡವಿದನೆಂದು ಶಾಸನಗಳಿಂದ ತಿಳಿಯುತ್ತದೆ. ಈ ದಾಳಿಗಳಿಂದಾಗಿ ನರ್ಮದೆಯ ದಕ್ಷಿಣಕ್ಕಿದ್ದ ಪ್ರದೇಶವೆಲ್ಲ ಚಾಳುಕ್ಯ ರಾಜ್ಯಕ್ಕೆ ಸೇರಿತ್ತು. ವಿಕ್ರಮಾದಿತ್ಯ ಪೈವೆಯ(ಹೈವೆಯ) ಗೊಗ್ಗಿ, ನಾಗವರ್ಮ, ಕರಾಡದ ಶಿಲಾಹಾರ ವಂಶದ ಒಂದನೆಯ ಭೋಜ ಇವರನ್ನು ನಿಗ್ರಹಿಸಿದ. ಇವನ ಸೇನಾನಿ ಶ್ರೀಪತಿಯರಸ ರತ್ನಪುರಿಯ ಕಳಚುರಿಗಳ ಮೇಲೆ ವಿಜಯ ಸಾಧಿಸಿದ. 

ವಿಕ್ರಮಾದಿತ್ಯ ಮೊದಲು ವೆಂಗಿ ರಾಜ್ಯದ ಆಸೆಯನ್ನು ಬಿಟ್ಟಿದ್ದರೂ ಕೆಲಕಾಲಾನಂತರ ಅಲ್ಲಿ ಉಂಟಾಗಿದ್ದ ರಾಜಕೀಯ ಅಸ್ತವ್ಯಸ್ತ ಪರಿಸ್ಥಿತಿಯ ಲಾಭ ಪಡೆಯಲು ಉದ್ದೇಶಿಸಿದ. 1087, 1098, 1118ರಲ್ಲಿ ಕೊಂಡೆಯ ಮಹಾರಾಜ ಮತ್ತು ದಂಡನಾಯಕ ಚಿದ್ದರಸರು ಕೊಲ್ಲಿಪಾಕಿಯನ್ನು ಇವನ ಸಾಮಂತನಾಗಿ ಆಳುತ್ತಿದ್ದರೆಂದು ಶಾಸನಗಳಿಂದ ತಿಳಿಯುತ್ತದೆ. ಸು. 1120ರ ಹೊತ್ತಿಗೆ ವೆಂಗಿ ಪೂರ್ಣವಾಗಿ ವಿಕ್ರಮಾದಿತ್ಯನ ಕಕ್ಷೆಗೆ ಬಂದು ಇವನ ಸಾಮ್ರಾಜ್ಯ ಪೂರ್ವ ಪಶ್ಚಿಮ ಸಮುದ್ರಪರ್ಯಂತ ಹರಡಿತು. ಇವನ ಆಳಿಕೆಯ ಕೊನೆಗಾಲದಲ್ಲಿ ಹೊಯ್ಸಳರು ಸ್ವತಂತ್ರರಾಗುವ ಪ್ರಯತ್ನಗಳನ್ನು ನಡೆಸಿದರು. ಹೊಯ್ಸಳ ಎರೆಯಂಗ ವಿಕ್ರಮಾದಿತ್ಯನ ಬಲಗೈಯಂತಿದ್ದು ಚಾಳುಕ್ಯರು ನಡೆಸಿದ ಹಲವು ಯುದ್ಧಗಳಲ್ಲಿ ಪಾಲ್ಗೊಂಡಿದ್ದರೂ ಅವನ ಮಗ ಬಲ್ಲಾಳ ಸ್ವತಂತ್ರನಾಗಲಿಚ್ಛಿಸಿದ. ಬೆಳೆಯುತ್ತಿದ್ದ ಇವನ ಬಲವನ್ನು ಮುರಿಯಲು ವಿಕ್ರಮಾದಿತ್ಯ ತನ್ನ ನೆಚ್ಚಿನ ದಂಡನಾಯಕ ಪರಮಾರ ಜಗದ್ದೇವನನ್ನು ಇವನ ನಿಗ್ರಹಕ್ಕಾಗಿ ನಿಯೋಜಿಸಿದ. ಆದರೆ ಬಲ್ಲಾಳ ಮತ್ತು ಅವನ ತಮ್ಮ ವಿಷ್ಣುವರ್ಧನರ ಪ್ರತಾಪದೆದುರು ಜಗದ್ದೇವ ಸೋತ. ಇದರಿಂದ ಉತ್ತೇಜಿತನಾದ ಬಲ್ಲಾಳ ಉಚ್ಚಂಗಿಯ ಪಾಂಡ್ಯರೇ ಮೊದಲಾದ ವಿಕ್ರಮಾದಿತ್ಯನ ಇತರ ಸಾಮಂತರೊಡನೆ ಸಮರ ಹೂಡಿದ. ಈ ಉದ್ಧಟತನವನ್ನು ಸಹಿಸದ ವಿಕ್ರಮಾದಿತ್ಯ ತನ್ನ ಸಾಮಂತ ಸಿಂದ ಆಚುಗಿಯನ್ನು ಕಳುಹಿಸಿ ಬಲ್ಲಾಳನನ್ನು ಸೋಲಿಸಿದ. ಬಲ್ಲಾಳ ಕೊನೆಗೆ ಸಾಮಂತತ್ವವನ್ನು ಒಪ್ಪಿದ. ಅವನ ಉತ್ತರಾಧಿಕಾರಿ ವಿಷ್ಣುವರ್ಧನ ಮೊದಲು ಚೋಳರನ್ನು ತಲಕಾಡಿನಿಂದ ಓಡಿಸಿ, ನೀಲಗಿರಿ ಮುಂತಾದ ಪ್ರಾಂತ್ಯಗಳನ್ನು ವಶಪಡಿಸಿಕೊಂಡು ಚಾಳುಕ್ಯ ಸಾಮ್ರಾಟ ತಲೆದೂಗುವಂತೆ ಮಾಡಿದ. ಆದರೆ ಮುಂದೆ ಆಳುಪರ ಮೇಲೆ ಮತ್ತು ನಿಡುಗಲ್ಲು, ಹೆಂಜೇರುಗಳ ಮೇಲೆ ವಿಷ್ಣುವರ್ಧನ ದಂಡೆತ್ತಿಹೋದುದನ್ನು ವಿಕ್ರಮಾದಿತ್ಯ ಸಹಿಸದೆ ಅನೇಕ ಮಂಡಲೇಶ್ವರರು ಮತ್ತು ಸಾಮಂತರನ್ನು ಕೂಡಿಸಿ ವಿಷ್ಣುವರ್ಧನನ ನಿಗ್ರಹಕ್ಕೆ ಕಳುಹಿಸಿದ. 

ಸು. 1117-18ರಲ್ಲಿ ಕಣ್ಣೇಗಾಲದಲ್ಲಿ ನಡೆದ ಕದನದಲ್ಲಿ ವಿಷ್ಣುವರ್ಧನನ ದಂಡನಾಯಕ ಗಂಗರಾಜ ಚಾಳುಕ್ಯ ಸೈನ್ಯವನ್ನು ಸದೆಬಡಿದ. ಅಲ್ಲದೆ ಈ ವಿಜಯ ಹೊಯ್ಸಳ ರಾಜ್ಯದ ವಿಸ್ತರಣೆಗೆ ನಾಂದಿಯಾಯಿತು. ವಿಷ್ಣುವರ್ಧನ ಹಾನಗಲ್ಲು, ಬಳ್ಳಾರಿ, ಕುಮ್ಮಟ ಮೊದಲಾದವನ್ನಲ್ಲದೆ ಬೆಳ್ವೊಲವನ್ನು ವಶಪಡಿಸಿಕೊಂಡು ಮಲಪ್ರಭಾ ನದಿಯವರೆಗೂ ಮುನ್ನಡೆದ. ಈ ಸಂದರ್ಭದಲ್ಲಿ ವಿಷ್ಣುವರ್ಧನನ ಪೆಟ್ಟಿಗೆ ಸಿಕ್ಕಿ ಅವಮಾನಿತರಾಗಿದ್ದ ಹಾನಗಲ್ಲು ಮತ್ತು ಗೋವೆಯ ಕದಂಬರು ಮತ್ತು ಸಿಂದರನ್ನು ವಿಕ್ರಮಾದಿತ್ಯ ಒಟ್ಟುಕೂಡಿಸಿ ವಿಷ್ಣುವರ್ಧನನನ್ನು ತುಳಿಯಲು ಸನ್ನಾಹ ನಡೆಸಿದ. 1122ರ ಸುಮಾರಿನಲ್ಲಿ ಶಿವಮೊಗ್ಗ ಜಿಲ್ಲೆಯ ಹಲಸೂರು, ಮೈಸೂರು ಜಿಲ್ಲೆಯ ಹೊಸವೀಡುಗಳ ಬಳಿ ನಡೆದ ಯುದ್ಧಗಳಲ್ಲಿ ವಿಷ್ಣುವರ್ಧನ ಸೋತು, ಅವನು ಹೊಸದಾಗಿ ಆಕ್ರಮಿಸಿದ ಭಾಗಗಳನ್ನೆಲ್ಲ ಬಿಟ್ಟುಕೊಡಬೇಕಾಯಿತು. 

ಸು. 50 ವರ್ಷಗಳ ದೀರ್ಘ ಆಳ್ವಿಕೆಯ ಅನಂತರ 1127ರಲ್ಲಿ ವಿಕ್ರಮಾದಿತ್ಯ ಮೃತನಾದ. ಇವನಿಗೆ ಚಂದಲದೇವಿ, ಮಲಯಮತೀದೇವಿ, ಪದ್ಮಲದೇವಿ, ಜೌಕಲದೇವಿ ಮೊದಲಾದ ಹಲವರು ಪತ್ನಿಯರಿದ್ದರು. ಇವರಲ್ಲಿ ಚಂದಲದೇವಿ ಶಿಲಾಹಾರ ವಂಶದವಳು. ಇವಳು ನೃತ್ಯವಿದ್ಯಾಧರೆ, ಅಭಿನವಸರಸ್ವತಿ ಇತ್ಯಾದಿ ಬಿರುದು ಗಳಿಸಿದ್ದು ಹಲವು ಕಲೆಗಳಲ್ಲಿ ನಿಪುಣಳಾಗಿದ್ದಳಲ್ಲದೆ, ಕವಿಕಲಾಪೋಷಕಳಾಗಿದ್ದಳು. 

ಮಲ್ಲಿಕಾರ್ಜುನ, ಸೋಮೇಶ್ವರ 3 ಜಯಕರ್ಣ ಮತ್ತು ತೈಲಪ ವಿಕ್ರಮಾ ದಿತ್ಯನ ಮಕ್ಕಳು. ಯುವರಾಜನೂ ಹಿರಿಯ ಮಗನೂ ಆಗಿದ್ದ ಮಲ್ಲಿಕಾ ರ್ಜುನ ತಂದೆಗಿಂತ ಮೊದಲೇ ಗತಿಸಿದ್ದರಿಂದ, 3ನೆಯ ಸೋಮೇಶ್ವರ ಇವನ ಅನಂತರ ಪಟ್ಟಕ್ಕೆ ಬಂದ. 

ವಿಕ್ರಮಾದಿತ್ಯನ ಆಳಿಕೆಯ ಕಾಲ ವೈಭವಯುತವಾಗಿತ್ತು. ಹಲವು ದೇವಾಲಯಗಳ ನಿರ್ಮಾಣ, ಧರ್ಮ, ದತ್ತಿಗಳ ಸ್ಥಾಪನೆ ಇವನ ಕಾಲದಲ್ಲಿ ಆದುವೆಂದು ಇವನ ನೂರಾರು ಶಾಸನಗಳು ಸಾರುತ್ತವೆ. ವಿಕ್ರಮಾದಿತ್ಯ ತನ್ನ ಆಸ್ಥಾನದಲ್ಲಿ ಪ್ರತಿಭಾವಂತರಾದ ವಿದ್ವಾಂಸರಿಗೆ ಪ್ರೋತ್ಸಾಹವನ್ನಿತ್ತಿದ್ದ. 

ಬಿಲ್ಹಣ ವಿಕ್ರಮಾದಿತ್ಯನ ಆಸ್ಥಾನಕವಿಯಾಗಿದ್ದು ವಿಕ್ರಮಾಂಕದೇವಚರಿತವೆಂಬ ಗ್ರಂಥವನ್ನು ರಚಿಸಿದ. ಇದರಲ್ಲಿ ತನ್ನ ಪ್ರಭುವಿನ ಮಹಾಕಾರ್ಯಗಳನ್ನು ಮೂರ್ತಿಮತ್ತಾಗಿ ಅಡಕವಾಗಿಸಿದ್ದಾನೆ. ಮಿತಾಕ್ಷರವನ್ನು ಬರೆದ ಪ್ರಸಿದ್ಧ ನ್ಯಾಯವಾದಿ ವಿಜ್ಞಾನೇಶ್ವರ (ನೋಡಿ- ವಿಜ್ಞಾನೇಶ್ವರ) ಇವನ ಆಸ್ಥಾನದಲ್ಲಿದ್ದ. ಈ ಗ್ರಂಥ ಇಂದಿಗೂ ಹಿಂದು ನ್ಯಾಯಶಾಸ್ತ್ರದ ಮೂಲಾಧಾರವಾಗಿ ಬಳಕೆಯಲ್ಲಿದೆ. ಕಲ್ಯಾಣದಂಥ ನಗರವಾಗಲೀ ವಿಕ್ರಮಾದಿತ್ಯನಂಥ ಅರಸನಾಗಲೀ ಬೇರೆಲ್ಲೂ ಇಲ್ಲ ಎಂದು ಈ ಗ್ರಂಥದಲ್ಲಿ ಹೊಗಳಿದ್ದಾನೆ

ಮಾಹಿತಿ ಆಧಾರ: ಮೈಸೂರು ವಿಶ್ವಕೋಶ

Vikramaditya 6

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ