ಗೀತಗೋವಿಂದ23
ಜಯದೇವಕವಿಯ ಗೀತಗೋವಿಂದ
ಅಷ್ಟಪದಿ 22
*ಸಂಕ್ಷಿಪ್ತ ಭಾವ*
ಆನಂದದಿಂದ ರಾಧೆಯು ಗೆಜ್ಜೆಗಳು ಘಲಿಘಲಿರೆನುತಿರಲು ಮಾಧವನಿದ್ದ ಜಾಗದ ಒಳಹೊಕ್ಕಳು.
ಅಲ್ಲಿ ರಾಧೆಯು ಶೃಂಗಾರಕ್ಕೆ ಐಸಿರಿಯಾದಂತಹಾ , ಹೆಚ್ಚಿನ ಹರ್ಷವಂತನಾದ ವಿಲಾಸವಂತನಾದ ಹರಿಯನ್ನು ಕಂಡಳು. ರಾಧೆಯ ಮುಖವನ್ನು ಕಂಡ ಕೂಡಲೆ ಅವನ ಮೊಗದಲ್ಲಿ ವಿವಿಧ ಭಾವಗಳು ಉಕ್ಕಿ ಹರಿದವು. ಚಂದ್ರನನ್ನು ಕಂಡ ಸಾಗರವು ಮೇರೆದಪ್ಪಿ ಉಕ್ಕುವಂತೆ ಅವನ ಮುಖದ ಭಾವಗಳು ಉಕ್ಕಿದವು.
ತೊಳೆದ ಮುತ್ತಿನ ಹಾರವನ್ನು ಎದೆಯಲ್ಲಿ ಧರಿಸಿಕೊಂಡವನನ್ನು, ಯಮುನೆಯ ಬೆಳ್ಳನೆಯ ತೆರೆಗಳ ನೊರೆಯಂತೆ ಹೋಲುವವನನ್ನು ಕಂಡಳು.
ಶ್ಯಾಮಲವರ್ಣದ ಕೋಮಲ ಶರೀರದಲ್ಲಿ ನೀಲಿಯ ವಸ್ತ್ರಗಳನ್ನು ಧರಿಸಿರುವವನನ್ನು ನೋಡಿದಳು. ಹಳದಿ ವರ್ಣದ ಪರಾಗದ ತೆರೆಯಲ್ಲಿ ನೀಲಿಯ ನೈದಿಲೆಯಿರುವಂತೆ ಅವನು ಇದ್ದನು.
ಕಣ್ಣುಗಳಲ್ಲಿ ಒಲವನ್ನು ಸೂಸುವ ಕಟಾಕ್ಷಗಳ ಚೆಲುವಾದಮೊಗದವನನ್ನು, ಸರೋವರದಲ್ಲಿನ ಕಮಲದ ದಳಗಳಂತೆ ಕಣ್ಣುಗಳನ್ನು ಹೊಂದಿ ಮೆರೆಯುತ್ತಿದ್ದವನನ್ನು ಕಂಡಳು.
ಸುಂದರವಾದ ಮುಖಕಮಲದ ಎಡಬಲಗಳಲ್ಲಿ ಲೋಲಾಡುವ ಕುಂಡಲಗಳನ್ನು ಧರಿಸಿರುವವನನ್ನು, ಕೆಂಪಾದ ತುಟಿಗಳಲ್ಲಿ ಒಲವಿನ ನಗೆಯನ್ನು ಮಿನುಗಿಸುತ್ತ ಒಲವನ್ನು ಕೆರಳಿಸುತ್ತುರುವವನನ್ನು ನೋಡಿದಳು.
ಚಂದ್ರಕಿರಣಗಳಿಂದ ಕೂಡಿದ ಆಕಾಶದ ಮಧ್ಯಭಾಗ ತಾನೆಂಬಂತೆ ತಲೆಯಲ್ಲಿ ವಿವಿಧ ಹೂಗಳನ್ನು ಮುಡಿದಿರುವವನನ್ನು, ಕತ್ತಲನ್ನು ತೊಡೆಯಲು ಬಂದ ಚಂದ್ರ ಮಂಡಲದಂತೆ ಹೊಳೆಯುವ ತಿಲಕವನ್ನು ಇಟ್ಟುಕೊಂಡಿರುವ ಹರಿಯನ್ನು ಕಂಡಳು.
ರತಿಕೇಳಿಯನ್ನು ನೆನೆನೆನೆದು ಅಡಿಯಿಂದ ಮುಡಿವರೆಗೆ ರೋಮಾಂಚನ ಹೊಂದಿದವನನ್ನು, ರತ್ನಾಭರಣಗಳು, ಮಣಿಮಾಲೆಗಳಿಂದ ಭೂಷಿತನಾದ ಸುಂದರ ಶರೀರವನ್ನು ಹೊಂದಿದವನನ್ನು ಕಂಡಳು.
ಜಯದೇವನ ವಚನದ ವೈಭವದಿಂದ ಎರಡುಪಟ್ಟು ಬೆಳಗಿದ ಮಣಿಭೂಷಣನನ್ನು, ಪರಮ ಸುಂದರನಾದ ಪುಣ್ಯಪ್ರದನಾದ ಹರಿಯನ್ನು ನೀವೆಲ್ಲರೂ ಸದಾ ಹೃದಯದಲ್ಲಿಟ್ಟುಕೊಳ್ಳಿರಿ.
(ಹನ್ನೊಂದನೆಯ ಸರ್ಗ ಮುಗಿಯಿತು )
*ಪರಮೇಶ್ವರ ಭಟ್ಟರ ಕನ್ನಡ ರೂಪ*
ಅಷ್ಟಪದಿ ೨೨
ರಾಧಿಕೆ ಕಂಡಳು ಶೃಂಗಾರೈಕರ ಸಾಶ್ರಯಹರಿಯನು ಚಿರಮಭಿಲಷಿತವಿಲಾಸನನು ಗುರುಹರ್ಷಭರಾನನಹರಿಯನನಂಗವಿಕಾಸನನು. 1
ರಾಧೆಯ ಮೊಗವನ್ನು ನೋಡಿದ ಒಡನೆಯೆ ವಿವಿಧವಿಕಾರವಿಭಂಗಗಳೊಗೆದವು ಕೃಷ್ಣನೊಳು
ವಿಧುಮಂಡಲವನು ಕಂಡೊಡನುಕ್ಕುವ ತರಲಿತ ತುಂಗ ತರಂಗದ ಸಾಗರದಂದದೊಳು. 2
ತೊಳತೊಳತೊಳಗುವ ಬೆಳ್ಳನೆ ಮುತ್ತಿನ ಮೂರೆಳೆಹಾರವನುರದೊಳು ತಳೆದ ಮುರಾರಿಯನು
ಬೆಳ್ಳ೦ಗೆಡೆಯುತೆ ತೆರೆ ನೊರೆಯುಕ್ಕುವ ಯಮುನಾ ಪೂರವ ಹೋಲುವವೋಲಿರುವಾತನನು. 3
ಶ್ಯಾಮಲ ಕೋಮಲ ತನುಮಂಡಲದೊಳು ಸುಂದರ ಗೌರದುಕೂಲವ ತಳೆದಿರುವಾತನನು ಪೀತ ಪರಾಗದ ಪಟಲದೆ ಪೊರೆದಿಹ ನೀಲಿಯ ನೈದಿಲೆವೋಲಿರುವಾತನನು. 4
ಕಣ್ಣಿನ ಕೊನೆಯೊಳು ರಾಗವನುಕ್ಕಿಪ ಕುಡಿನೋಟಗಳನು ಬೀರುವ ಚೆಲುಮೊಗವಿರುವವನು
ಶರದತಟಾಕದೊಳಂಬುಜದೊಡಲಿನೊಳಾಡುವ ಖಂಜನ ಯುಗವೆನೆ ಕಂಗಳು ಮೆರೆವನನು. 5
ಸುಂದರ ವದನ ಕಮಲದೆಡಬಲದಲಿ ತೊನೆಯುವ ರವಿಯನೆ ಹೋಲುವ ಕುಂಡಲ ಶೋಭನನು
ಚೆಂದುಟಿ ಚಿಗುರನು ಮೊಳೆನಗೆಯೊಳು ಮಿಗೆ ಮಿನುಗಿಸುತೊಲವನು ಕೆರಳಿಪ ಕಡುರತಿಲೋಭನನು, 6
ಶಶಿಕಿರಣಂಗಳಿನೊಪ್ಪುವ ಜಲಧರಮಧ್ಯವೊ ತಾನೆನೆ ಹೂಗಳ ಮುಡಿ ಮೆರೆವಾತನನು
ಕತ್ತಲ ನಡುವಣ ವಿಧುಮಂಡಲವೆನೆ ತೊಳಗುವ ನಿರ್ಮಲ ಮಲಯಜ ತಿಲಕದೊಳೆಸೆವನನು. 7
ಅಂಗಜಕೇಳಿಯ ನೆನೆನೆನೆದಡಿಯಿಂ ಮುಡಿವರಮಹ ಗುಡಿಟ್ಟಿದ ಮೈಯ ಅಧೀರನನು
ಮಣಿಗಣಕಿರಣ ಸಮೂಹ ಸಮುಜ್ವಲ ಭೂಷಣ ರಾಜಿತ ಸುಭಗಶರೀರ ಮುರಾರಿಯನು. 8
ಶ್ರೀ ಜಯದೇವನ ವಚನದ ವಿಭವದೊಳಿಮ್ಮಡಿ ಬೆಳಗುವ ಮಣಿಗಣಭೂಷಣಭಾರನನು
ಮಣಿವುದು ನೀಂ ಚಿರಮೆದೆಯೊಳಗಿರಿಸುತೆ ಸುಂದರ ಹರಿಯನು ವರಸುಕೃತೋದಯಸಾರನನು. 9
*ಮೂಲಭಾಗ*
ಗೀತಂ - ಅಷ್ಟಪದೀ – 22- ಸಾನಂದ ಗೋವಿಂದ ರಾಗಶ್ರೇಣಿ ಕುಸುಮಾಭರಣಮ್
ವರಾಡೀರಾಗ, ಯತಿ ತಾಲ
ರಾಧಾವದನವಿಲೋಕನವಿಕಸಿತವಿವಿಧವಿಕಾರವಿಭಂಗಂ
ಜಲನಿಧಿಮಿವ ವಿಧುಮಂಡಲದರ್ಶನತರಲಿತತುಂಗತರಂಗಂ ೧
ಹರಿಮೇಕರಸಂ ಚಿರಮಭಿಲಷಿತವಿಲಾಸಂ
ಸಾ ದದರ್ಶಗುರುಹರ್ಷ
ವಶಂವದವದನಮನಂಗನಿವಾಸಂ
||ದ್ರುವಮ್||
ಹಾರಮಮಲತರತಾರಮುರಸಿ ದಧತಂ ಪರಿರಭ್ಯ ವಿದೂರಂ ಸ್ಪುಟತರಫೇನಕದಂಬಕರಂಬಿತಮಿವ ಯಮುನಾಜಲಪೂರಂ ೨
ಶ್ಯಾಮಲಮೃದುಲಕಲೇವರಮಂಡಲಮಧಿಗತಗೌರದುಕೂಲಂ
ನೀಲನಲಿನಮಿವ ಪೀತಪರಾಗಪಟಲಭರವಲಯಿತಮೂಲಂ ೩
ತರಲದೃಗಂಚಲವಲನಮನೋಹರವದನಜನಿತರತಿರಾಗಂ ಸ್ಪುಟಕಮಲೋದರಖೇಲಿತಖಂಜನಯುಗಮಿವ ಶರದಿ ತಡಾಕಂ ೪
ವದನಕಮಲಪರಿಶೀಲನಮಿಲಿತಮಿಹಿರಸಮಕುಂಡಲಶೋಭಂ
ಸ್ಮಿತರುಚಿರುಚಿರಸಮುಲ್ಲಸಿತಾಧರವಲ್ಲ ವಕೃತರತಿಲೋಭಂ ೫
ಶಶಿಕಿರಣಚ್ಛುರಿತೋದರಜಲಧರಸುಂದರಸಕುಸುಮಕೇಶಂ
ತಿಮಿರೋದಿತವಿಧುಮಂಡಲನಿರ್ಮಲಮಲಯಜತಿಲಕನಿವೇಶಂ ೬
ವಿಪುಲಪುಲಕಭರದಂತುರಿತಂ ರತಿಕೇಲಿಕಲಾಭಿರಧೀರಂ
ಮಣಿಗಣಕಿರಣಸಮೂಹಸಮುಜ್ವಲಭೂಷಣಸುಭಗಶರೀರಂ ೭
ಶ್ರೀಜಯದೇವಭಣಿತವಿಭವದ್ವಿಗುಣೀಕೃತಭೂಷಣಭಾರಂ
ಪ್ರಣಮತ ಹೃದಿ ವಿನಿಧಾಯ ಹರಿಂ ಸುಚಿರಂ ಸುಕೃತೋದಯಸಾರಂ ೮
ಅತಿಕ್ರಮ್ಮಾಪಾಂಗಂ ಶ್ರವಣಪಥಪರ್ಯಂತಗಮನ - ಪ್ರಯಾಸೇನೇವಾಕ್ಷ್ಣೋರಮಲತರತಾರಂ ಗಮಿತಯೋಃ ೯
ತದಾನೀಂ ರಾಧಾಯಾಃ ಪ್ರಿಯತಮಸಮಾಯಾತಸಮಯೇ ಪಪಾತ ಸ್ಟೇದಾಂಬುಪ್ರಸರ ಇವ ಹರ್ಷಾಶ್ರನಿಕರಃ ೧೦
ಭಜಂತ್ಯಾಸ್ತಲ್ಪಾಂತಂ ಕೃತಕಪಟಕಂಡೂತಿಪಿಹಿತ -
ಸ್ಮಿತಂ ಯಾತೇ ಗೇಹಾದಹಿರವಹಿತಾಲೀಪರಿಜನೇ ಪ್ರಿಯಾಸ್ಯಂ ಪಶ್ಯಂತ್ಯಾಃ ಸ್ಮರಪರವಶಾಕೂತಸುಭಗಂ
ಸಲಜ್ಜಾ ಲಜ್ಜಾsಪಿ ವ್ಯಗಮದಿವ ದೂರಂ ಮೃಗದೃಶಃ ೧೧
ಸಾನಂದಂ ನಂದಸೂನುರ್ದಿಶತು ಮಿತಪರಂ ಸಮ್ಮದಂ ಮಂದಮಂದಂ ರಾಧಾಮಾಧಾಯ ಬಾಹ್ವೋರ್ವಿವರಮನು ದೃಢಂ ಪೀಡಯನ್ ಪ್ರೀತಿಯೋಗಾತ್
ತುಂಗೌ ತಸ್ಯಾ ಉರೋಜಾವ ತನುವರತನೋರ್ನಿರ್ಗತೌ ಮಾ ಸ್ಮಭೂತಾಂ
ಪೃಷ್ಟಂ ನಿರ್ಭಿದ್ಯ ತಸ್ಮಾದ್ಬಹಿರಿತಿ ವಲಿತಗ್ರೀವಮಾಲೋಕಯನ್ನಃ ೧೨
ಜಯಶ್ರೀವಿನ್ಯಸ್ತೈರ್ಮಹಿತ ಇವ ಮಂದಾರಕುಸುಮೈಃ
ಸ್ವಯಂ ಸಿಂದೂರೇಣ ದ್ವಿಪರಣಮುದಾ ಮುದ್ರಿತ ಇವ ಭುಜಾಪೀಡಕ್ರೀಡಾಹತಕುವಲಯಾಪೀಡಕರಿಣಃ
ಪ್ರಕೀರ್ಣಾಸ್ಯಗ್ಬಿಂದುರ್ಜಯತಿ ಭುಜದಂಡೋ ಮುರಜಿತಃ ೧೩
ಸೌಂದರ್ಯೈಕನಿಧೇರನಂಗಲಲನಾಲಾವಣ್ಯಲೀಲಾಪುಷೋ
ರಾಧಾಯಾ ಹೃದಿ ಪಲ್ಟಲೇ ಮನಸಿಜಕ್ರೀಡೈಕರಂಗಸ್ಥಲೇ ರಮ್ಮೋರೋಜಸರೋಜಖೇಲನರಸಿತ್ಪಾದಾತ್ಮನಃಖ್ಯಾಪಯ_ ನ್ಧ್ಯಾತುರ್ಮಾನಸರಾಜಹಂಸನಿಭತಾಂ ದೇಯಾನ್ನು ಕುಂದೋ ಮುದಂ ೧೪
|| ಇತಿ ಶ್ರೀ ಗೀತಗೋವಿಂದೇ ಮಹಾಕಾವ್ಯೇ ಅಭಿಸಾರಿಕಾವರ್ಣನೇ ಸಾನಂದ ದಾಮೋದರೋನಾಮ ಏಕಾದಶ ಸರ್ಗಃ||
ಕೃತಜ್ಞತೆ:
1. ಮೂಲ: ಜಯದೇವ ಕವಿಯ 'ಗೀತಗೋವಿಂದ'
2. ಎಸ್. ವಿ. ಪರಮೇಶ್ವರ ಭಟ್ಟರ ಕನ್ನಡ ಕಾವ್ಯರೂಪ
3. ಸಂಕ್ಷಿಪ್ತ ಭಾವ ನೀಡಿದ: ಸುಬ್ಬುಲಕ್ಷ್ಮಿ Lrphks Kolar
ಕಾಮೆಂಟ್‌ಗಳು