ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹೇಮಾ ಪಟ್ಟಣಶೆಟ್ಟಿ


 ಹೇಮಾ ಪಟ್ಟಣಶೆಟ್ಟಿ


ಡಾ. ಹೇಮಾ ಪಟ್ಟಣಶೆಟ್ಟಿ ಅವರು ಪ್ರಾಧ್ಯಾಪಕಿಯಾಗಿ ಮತ್ತು ಬರಹಗಾರ್ತಿಯಾಗಿ ಹೆಸರಾಗಿದ್ದಾರೆ.
 
ಹೇಮಾ ಅವರು 1954ರ ಫೆಬ್ರುವರಿ 10ರಂದು ಧಾರವಾಡದಲ್ಲಿ ಜನಿಸಿದರು. ತಂದೆ ಚಂದ್ರಶೇಖರಸ್ವಾಮಿ ಹೊನ್ನಾಪುರಮಠ ಅವರು. ತಾಯಿ ಗೌರಾಂಬಿಕಾ. ಹೇಮಾ ಅವರು ಎಂ.ಎ. (ಮನೋವಿಜ್ಞಾನ) ಮತ್ತು ಎಂ.ಎ. (ಕನ್ನಡ) ಸಾಧನೆಗಳ ಜೊತೆಗೆ 'ಕನ್ನಡ ನಾಟಕಗಳಲ್ಲಿ ಸ್ತ್ರೀ ಪಾತ್ರಗಳು' ಎಂಬ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಗಳಿಸಿದರು. 
​              
ಹೇಮಾ ಅವರು ಮನೋವಿಜ್ಞಾನ ಉಪನ್ಯಾಸಕರಾಗಿ ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜು, ಕಿಟೆಲ್ ಕಾಲೇಜು;  ಕನ್ನಡ ಉಪನ್ಯಾಸಕರಾಗಿ ಕಿತ್ತೂರು ಕಲಾ ವಾಣಿಜ್ಯ ಮಹಾವಿದ್ಯಾಲಯ; ಹಾಗೂ ಮಂಗಳೂರು ಆಕಾಶವಾಣಿಯಲ್ಲಿ  ಕೆಲಕಾಲ ಪ್ರೊಡಕ್ಷನ್ ಅಸಿಸ್ಟಂಟ್ ಆಗಿ ದುಡಿದರು. 

ಡಾ. ಹೇಮಾ ಪಟ್ಟಣಶೆಟ್ಟಿ ಅವರು 1979ರಲ್ಲಿ ಪ್ರಕಾಶನ ಕ್ಷೇತ್ರಕ್ಕಿಳಿದು 'ಅನನ್ಯ ಪ್ರಕಾಶನ ಸಂಸ್ಥೆ ಸ್ಥಾಪಿಸಿದರು. ಆ ಮೂಲಕ ಅವರು 150ಕ್ಕೂ ಹೆಚ್ಚು ಪುಸ್ತಕಗಳ ಪ್ರಕಟಣೆ ಮಾಡಿದ್ದಾರೆ. 2002-2008 ಅವಧಿಯಲ್ಲಿ ಅವರು 'ಸಂಕಲನ’ ದ್ವೈಮಾಸಿಕ ಸಾಹಿತ್ಯ ಪತ್ರಿಕೆಯ ಸಂಪಾದಕರೂ ಆಗಿದ್ದರು.

ಹೇಮಾ ಪಟ್ಟಣಶೆಟ್ಟಿ ಅವರು ಇದುವರೆವಿಗೂ ಸುಮಾರು 40 ಸಾಹಿತ್ಯ ಕೃತಿಗಳನ್ನು ಮೂಡಿಸಿದ್ದಾರೆ. ಮುಸುಕಿದೀ ಮಬ್ಬಿನಲಿ ಅವರ ಕಥಾ ಸಂಕಲನ. ವಿರಹೋತ್ಸವ, ಹೊಸ ಹಾಡು, ಕಣ್ಣುಗಳಲಿ ಕನಸು ತುಂಬಿ, ಉಸಿರ ಬದುವಿನ ಗುಂಟ, ಬಾಳೆ ಗರ್ಭದಲಿ ಅವರ ಕಾವ್ಯ ಸಂಕಲನಗಳು.  ತುಂಟ ಮಕ್ಕಳ ತಂಟೆ, ಬಗಾಟ ಬಗರಿ, ಹೆಣ್ಣು ಹೆಜ್ಜೆ, ಚೆಕಾವ್ ಟು ಶಾಂಪೇನ್ ಮಕ್ಕಳ ನಾಟಕಗಳು. ಅವರ ವೈಚಾರಿಕ  ಕೃತಿಗಳಲ್ಲಿ ಮರ್ಯಾದೆಯ ಮುಸುಕಿನಲ್ಲಿ, ಅನುಲೇಖ, ರಂಗದಂಗಳ,  ಆಕಲನ, ಕನ್ನಡ ನಾಟಕಗಳಲ್ಲಿ ಸ್ತ್ರೀಲೋಕ, ರಂಗ ವೃತ್ತಾಂತ,ಅಕ್ಕರದ ಸುಯಿಧಾನ ಸೇರಿವೆ. ಪ್ರಸನ್ನ, ಸಾಲಿ ರಾಮಚಂದ್ರರಾಯ ಇವರು ರಚಿಸಿದ ಜೀವನ ಚರಿತ್ರೆಗಳು.  ಹೊನ್ನಪುರ, ಕತೆಗಳು; ನನ್ನ ಅವ್ವ ನನ್ನ ಅಪ್ಪ -೧, ನನ್ನ ಅವ್ವ ನನ್ನ ಅಪ್ಪ-೨, ನನ್ನ ಶಾಲಾ ಗುರುಗಳು ಇವರ‍ ಸಂಪಾದನೆಗಳು. ಡಾ. ಲೋಹಿಯ, ಅದೃಶ್ಯ ವ್ಯಕ್ತಿಯ ಆತ್ಮಹತ್ಯೆ, ವಾತ್ಸಲ್ಯ ವಿಷ, ಮಾಡು ಸಿಕ್ಕದಲ್ಲಾ, ಜಾತಿಯವನೇ ಬೇಕು, ಅಪ್ಪಾಜಿ ಕಳೆದು ಹೋಗಿದ್ದಾರೆ, ಬೆವರು! ಬೆವರು!, ಬಾಬಿ, ಸೀಗಲ್, ಪೇಶಂಟ್ ಪಾರ್ಕಿಂಗ್, ಅನಿವಾಸಿ ಭಾರತೀಯರು, ತೆಂಡುಲಕರ ಮಕ್ಕಳ ನಾಟಕಗಳು, ರಕ್ತ ಪುಷ್ಪ,  ಹೋಳಿ ಮುಂತಾದವು ಇತರ ಭಾಷೆಗಳಿಂದ ಮೂಡಿದ ಇವರ ಅನುವಾದಗಳು. ವಿಶ್ವದ ಅನೇಕ ಭಾಗಗಳಲ್ಲಿ ಪ್ರವಾಸ ಮಾಡಿ ವಿಫುಲ ಅನುಭವ ಗಳಿಸಿದ್ದಾರೆ. 

ಡಾ. ಹೇಮಾ ಪಟ್ಟಣಶೆಟ್ಟಿ ಅವರು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಪಠ್ಯ ರಚನಾ ಸಲಹಾ ಸಮಿತಿ ಸದಸ್ಯರಾಗಿ, ಕರ್ನಾಟಕ ಸರಕಾರದ ಜಲ ಸಂವರ್ಧನೆ ಯೋಜನಾ ಸಂಘದ ಆಡಳಿತ ಮಂಡಳಿ ಸದಸ್ಯರಾಗಿ ಹೀಗೆ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ರಾಷ್ಟ್ರೀಯ - ಅಂತಾರಾಷ್ಟ್ರೀಯ ಮಹತ್ವದ ಕಥಾ ಹಾಗೂ ಕಾವ್ಯ ಸಂಪುಟಗಳಲ್ಲಿ ಇವರ ಕಥೆ, ಕವಿತೆಗಳು ಪ್ರಕಟಗೊಂಡಿವೆ. ರಾಜ್ಯಮಟ್ಟದ ಹಾಗೂ ರಾಷ್ಟ್ರಮಟ್ಟದ ಬಹುಭಾಷಾ ಲೇಖಕಿಯರ ಸಂವಾದ ಕೂಟಗಳಲ್ಲಿ ವಿಚಾರ                               ಮಂಡನೆ ಮಾಡಿದ್ದಾರೆ. ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಉತ್ತರ ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ, ಕೋಶಾಧ್ಯಕ್ಷರಾಗಿ, ಕಾರ್ಯಾಧ್ಯಕ್ಷರಾಗಿ,‍ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ‘ರಂಗಭೂಮಿಕಾ’ ಹವ್ಯಾಸಿ ನಾಟಕ ಸಂಸ್ಥೆ,ಯ ಸ್ಥಾಪಕ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಹೇಮಾ ಪಟ್ಟಣಶೆಟ್ಟಿ ಅವರು ಮಹಿಳಾ ಸಂಬಂಧೀ ಕಾರ್ಯಗಳಲ್ಲಿ ರಾಷ್ಟ್ರಮಟ್ಟದ ‘ಜಾಯಿಂಟ್ ವಿಮೆನ್ಸ್ ಪ್ರೋಗ್ರಾಂ’ ಸಂಸ್ಥೆಯ ಉತ್ತರ ಕರ್ನಾಟಕದ ಸಂಚಾಲಕರಾಗಿ, 'ಸಾಂತ್ವನ’ ಕೌಟುಂಬಿಕ ಸಲಹೆ-ಸಹಾಯ ಕೇಂದ್ರದ ನಿರ್ದೇಶಕರಾಗಿ,  ರಾಷ್ಟ್ರಮಟ್ಟದಲ್ಲಿ ಮಹಿಳೆ ಮತ್ತು ಬಾಲಕಿಯರ ಸಾಗಾಣಿಕೆ ತಡೆಗಟ್ಟುವ ಸಮಿತಿ ಸದಸ್ಯರಾಗಿ, ಮಹಿಳಾ ಜಾಗೃತಿ ವೇದಿಕೆ ಸ್ಥಾಪಕ ಕಾರ್ಯದರ್ಶಿಯಾಗಿ ಹೀಗೆ ಆನೇಕ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ದೇವದಾಸಿ ಮಹಿಳೆಯರ ಮೇಲೆ ಸರಕಾರಿ ನೀತಿ ಮತ್ತು ಯೋಜನಾ ಸೌಲಭ್ಯಗಳ ಪರಿಣಾಮ ಹಾಗೂ ಅವರ ಸ್ಥಾನಮಾನ ಕುರಿತು ಪುನರ್ಮೌಲ್ಯೀಕರಣ ಅಧ್ಯಯನ ಮಾಡಿದ್ದಾರೆ.‍ ಪೊಲೀಸ್ ಅಧಿಕಾರಿಗಳಿಗೆ ಲಿಂಗ ಸಂವೇದನಾ ಜಾಗೃತಿ ಕಾರ್ಯಾಗಾರವನ್ನು ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಸಂಘಟಿಸಿದ್ದಾರೆ. ಕೌಟುಂಬಿಕ ಜನತಾ ನ್ಯಾಯಾಲಯ ಆಯೋಜಿಸಿ-ಧಾರವಾಡ, ಬೆಳಗಾವ, ಅಥಣಿ - ನ್ಯಾಯಾಲಯಗಳಲ್ಲಿ ಉಳಿದು ಹೋದ ಪ್ರಕರಣಗಳಲ್ಲಿ 85 ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದಾರೆ. ಅಮ್ಮಿನಭಾವಿ,  ಉಪ್ಪಿನಬೆಟಗೇರಿ,  ಬ್ಯಾಹಟ್ಟಿ  ಗ್ರಾಮಗಳಲ್ಲಿ ಪ್ರತೀ ಗ್ರಾಮದಲ್ಲಿ 50 ಮಹಿಳೆಯರಿಗೆ 'ಸಶಕ್ತೀಕರಣ’ದ ತರಬೇತಿಯನ್ನು 22 ತಿಂಗಳ ಕಾಲ ನೀಡಿದ್ದಾರೆ. ರಾಜ್ಯ, ರಾಷ್ಟ್ರಮಟ್ಟದ ವಿಚಾರ ಸಂಕಿರಣ,  ಕಾರ್ಯಾಗಾರ,  ಪ್ರತಿಭಟನಾ ಮೆರವಣಿಗೆ, ಉಪವಾಸ ಸತ್ಯಾಗ್ರಹಗಳಲ್ಲಿ ಭಾಗವಹಿಸಿದ್ದಾರೆ.
    ​ 
ಡಾ. ಹೇಮಾ ಪಟ್ಟಣಶೆಟ್ಟಿ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಪ್ರೊ. ಎಸ್. ವಿ. ಪರಮೇಶ್ವರ ಭಟ್ಟ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ (ಮುಸಕಿದೀ ಮಬ್ಬಿನಲಿ), ಮುದ್ದಣ ಕಾವ್ಯ ಪ್ರಶಸ್ತಿ, ಮಲ್ಲಿಕಾ ಪ್ರಶಸ್ತಿ, ಅಂತಾರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ (ವಿರಹೋತ್ಸವ), ಅಂತಾರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ (ಅನುಲೇಖ), ರತ್ನಮ್ಮ ಹೆಗ್ಗಡೆ ಬಹುಮಾನ (ಹೊಸ ಹಾಡು, ಕಣ್ಣುಗಳಲಿ ಕನಸು ತುಂಬಿ,  ಕನ್ನಡ ನಾಟಕಗಳಲ್ಲಿ ಸ್ತ್ರೀಲೋಕ, ಉಸಿರ ಬದುವಿನ ಗುಂಟ, ಮಹಿಳಾ ಪ್ರಕಾಶಕ ಪ್ರಶಸ್ತಿ- ಕರ್ನಾಟಕ ಲೇಖಕಿಯರ ಸಂಘ, ಮಹಿಳಾ ಸಾಧಕರ ಪ್ರಶಸ್ತಿ- ಸಾಹಿತ್ಯ ಪ್ರತಿಷ್ಠಾನ, ಬೆಳಗಾವಿ, ಸೀತಾಸುತ ಸಾಹಿತ್ಯ ಪ್ರಶಸ್ತಿ, ಕೀರಂ ಪ್ರಶಸ್ತಿ, ಧಾರವಾಡ ತಾಲ್ಲೂಕು ಸಾಹಿತ್ಯ ಸಮ್ಮೇಳನ-7 ರ ಸರ್ವಾಧ್ಯಕ್ಷತೆ, ದಸರಾ ಕವಿಗೋಷ್ಠಿ ಅಧ್ಯಕ್ಷತೆ, ಧಾರವಾಡ ಜಿಲ್ಲಾ ಉತ್ಸವ-೮ ಸಾಂಸ್ಕೃತಿಕ ಸಮಿತಿ ಅಧ್ಯಕ್ಷತೆ, ದಸರಾ ವಿಶಿಷ್ಟ ಕವಿಗೋಷ್ಠಿ ಅಧ್ಯಕ್ಷತೆ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ. ಧಾರವಾಡದ ಇನ್ನರ್ ವ್ಹೀಲ್ ಕ್ಲಬ್ ಇವರಿಗೆ ಉತ್ಕೃಷ್ಟ ಸಮಾಜ ಕಾರ್ಯ ಪ್ರಶಸ್ತಿ ನೀಡಿ ಗೌರವಿಸಿದೆ. 
    
ಹಿರಿಯ ಸಾಧಕಿ ಹೇಮಾ ಪಟ್ಟಣಶೆಟ್ಟಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 
 

On the birthday of writer, publisher and activist Dr. Hema Pattanashetty 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ