ಪಾರ್ವತಿ ವಟ್ಟಂ
ಪಾರ್ವತಿ ವಟ್ಟಂ
ಪಾರ್ವತಿ ವಟ್ಟಂ ಅಂದರೆ ಬಹುಮುಖಿ ವ್ಯಕ್ತಿತ್ವಗಳು ಒಂದೆಡೆ ಸೇರಿದ ಸಂಗಮದಂತೆ.
ಫೆಬ್ರುವರಿ 10, ಪಾರ್ವತಿ ಅವರ ಜನ್ಮದಿನ. ಹುಟ್ಟಿ ಓದಿ ಬೆಳೆದ ಊರು ಮೈಸೂರು. ತಂದೆ ಪತ್ರಿಕಾಲೋಕದ ಭೀಷ್ಮರಲ್ಲಿ ಒಬ್ಬರೆನಿಸಿದ್ದ ಕೃಷ್ಣ ವಟ್ಟಂ.
ಪಾರ್ವತಿ ಅವರು ತಮ್ಮ ಆಸಕ್ತಿಗಳ ಹಿಂದೆ ಹೊರಟವರು. ಬಿಎಸ್.ಸಿ ಓದಿದವರು ಸಾಹಿತ್ಯದಲ್ಲಿ ಉಪನ್ಯಾಸಕಿ ಆಗಬೇಕು ಎಂದು ಸಾಹಿತ್ಯದಲ್ಲಿ ಎಂ. ಎ. ಗಳಿಸಿದರು. ಆದರೆ ಅವರಿಗೆ ಹುದ್ದೆ ಲಭಿಸಿದ್ದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ. ಅಲ್ಲಿ 30 ವರ್ಷಕಾಲ ಸೇವೆ ಸಲ್ಲಿಸಿ ಬದುಕಿನ ಇತರ ಕ್ಷೇತ್ರಗಳ ಬಗ್ಗೆ ಆಸಕ್ತಿ ತಾಳಬೇಕು ಎಂದು ಡೆಪ್ಯೂಟಿ ಮ್ಯಾನೇಜರ್ ಹುದ್ದೆಯಿಂದ ಐಚ್ಛಿಕ ನಿವೃತ್ತಿ ಪಡೆದರು. ತಂದೆಯವರ ವೃತ್ತಿಯಾದ ಪತ್ರಿಕೋದ್ಯಮ ಸದಾ ಆಕರ್ಷಕ ಎಂಬ ಭಾವಿಸಿದ್ದ ಅವರು ಎಂ.ಎ. ಇನ್ ಜರ್ಮಲಿಸಂ ಮತ್ತು ಮಾಸ್ ಕಮ್ಯೂನಿಕೇಷನ್ ಮಾಡಿದರು. ನಂತರದಲ್ಲಿ ಮನಃಶಾಸ್ತ್ರದಲ್ಲಿ ಆಸಕ್ತಿ ಹೊರಳಿ ಆ ಕುರಿತು ಅನೇಕ ಸರ್ಟಿಫಿಕೇಟ್ ಕೋರ್ಸಸ್ ಮಾಡಿರುವುದರ ಜೊತೆಗೆ ಇನ್ನೇನು ಮನಃಶಾಸ್ತ್ರದಲ್ಲಿ ತಮ್ಮ ಮೂರನೆಯ ಸ್ನಾತಕೋತ್ತರ ಪದವಿಯ ಸನಿಹದಲ್ಲಿದ್ದಾರೆ. ಅವರಿಗೆ ಮನಃಶಾಸ್ತ್ರವನ್ನು ವೃತ್ತಿಧರ್ಮವಾಗಿ ಸ್ವೀಕರಿಸಿ ಜನರಿಗೆ ಸಹಾಯಕವಾಗಿ ಬದುಕುವ ತುಡಿತ ಆವರಿಸಿದೆ. ಎಲ್ಲ ಜನರೊಂದಿಗೆ ಬೆರೆಯುವ ಆಪ್ತ ಹೃದಯವಿರುವ ಅವರಿಗೆ ಈ ಕುರಿತು ಅಪಾರ ಒಲವಿದೆ.
ಸಂಗೀತದಲ್ಲಿ ಅಪಾರ ಒಲವಿರುವ ಪಾರ್ವತಿ ಅವರಿಗೆ ಆತ್ಮಸಂತೋಷಕ್ಕಾಗಿ ಹಾಡುವ ಭಾವ ಅತ್ಯಂತ ಆಪ್ತವಾದದ್ದು. ವಿಶೇಷವಾಗಿ ಅವರಿಗೆ ಸುಗಮ ಸಂಗೀತ, ಭಕ್ತಿ ಗೀತೆ ಗಾಯನ ಮತ್ತು ಜಾನಪದಗಳಲ್ಲಿ ಅಪರಿಮಿತ ಒಲವು. ಕಳೆದ ಏಳು ವರ್ಷಗಳಿಂದ ನಿರತ ಸಂಗೀತಾಭ್ಯಾಸದಲ್ಲಿ ತೊಡಗಿದ್ದಾರೆ. ಯಕ್ಷಗಾನದ ಬಗ್ಗೆ ಚಿಕ್ಕಂದಿನಿಂದ ಒಲವು ತುಂಬಿಕೊಂಡಿರುವ ಅವರು ಕಳೆದ ಎರಡು ವರ್ಷಗಳಲ್ಲಿ ಯಕ್ಷಗಾನವನ್ನು ಕಲಿತಿದ್ದು ಜೊತೆಗೆ ಚಂಡೆ ಮತ್ತು ಡೋಲು ವಾದನವನ್ನೂ ಅಭ್ಯಾಸ ಮಾಡಿದ್ದಾರೆ.
ಜೀವನದ ಕುರಿತು ಸಕಾರಾತ್ಮಕ ನಿಲುವು ಹೊಂದಿರುವ ಪಾರ್ವತಿ ವಟ್ಟಂ ಅವರು ಎಲ್ಲವನ್ನೂ ಕಲಿಯಬೇಕು, ಬದುಕು ಬಂದ ಹಾಗೆ ಸಂತೋಷವಾಗಿ ಸ್ವೀಕರಿಸಬೇಕು ಎಂಬುದರ ಜೊತೆಗೆ ಎಲ್ಲವೂ ನಮ್ಮ ಕೈಲಿ ಇಲ್ಲ ಎಂಬುದರ ಕುರಿತು ಸಹಾ ಚಿಂತಿಸುತ್ತಾರೆ. ಪ್ರಾಣಿಕ್ ಹೀಲಿಂಗ್ ಮತ್ತು ರೇಖಿ ಮೆಡಿಟೇಷನ್ ಕುರಿತಾಗಿ ಸಹಾ ಅವರ ಸಾಧನೆಗಳಿವೆ.
ಮಕ್ಕಳಾದ ರೋಹಿಣಿ ಮತ್ತು ರುಕ್ಮಿಣಿ ತಮ್ಮ ವೃತ್ತಿ, ಬದುಕು ಮತ್ತು ಸಕ್ರಿಯ ಆಸಕ್ತಿಗಳಲ್ಲಿ ಉತ್ತಮ ಸಾಧನೆ ಮಾಡಿರುವುದು ಪಾರ್ವತಿ ವಟ್ಟಂ ಅವರಿಗೆ ಸಂತಸದ ವಿಷಯ.
ಬಹುಮುಖಿ ಆಸಕ್ತಿಗಳನ್ನು ಹೊಂದಿ, ಅನೇಕ ನೆಲೆಗಳಲ್ಲಿ ಸಾಧನೆ ಮಾಡಿ, ಬದುಕಿನ ಏರಿಳಿತಗಳ ಕುರಿತು ಸಮಾಧಾನ ಚಿತ್ತ ಹೊಂದಿ, ಬದುಕೆಂಬುದು ಸುಂದರ ಕಲಿಯುವ ತಾಣ ಎಂದು ಕ್ರಿಯಾಶೀಲರಾಗಿರುವ ಪಾರ್ವತಿ ಅವರ ಉತ್ಸಾಹ ಪ್ರೇರಿಸುವಂತದ್ದು. ಆತ್ಮೀಯರಾದ ಪಾರ್ವತಿ ವಟ್ಟಂ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆ.
ಕೃತಜ್ಞತೆ:. ಆತ್ಮೀಯರಾದ ಪಾರ್ವತಿ ವಟ್ಟಂ ಮತ್ತು ಸರಸ್ವತಿ ವಟ್ಟಂ Saraswathi Vattam
Happy birthday Parvathi Vattam
ಕಾಮೆಂಟ್‌ಗಳು