ಶಾಂತಕುಮಾರಿ
ಶಾಂತಕುಮಾರಿ
ಶಾಂತಕುಮಾರಿ ಹಲವು ಕ್ಷೇತ್ರಗಳಲ್ಲಿ ಹೆಜ್ಜೆ ಗುರುತು ಮೂಡಿಸಿರುವ ಬಹುಮುಖಿ ಸಾಧಕಿ.
ಫೆಬ್ರುವರಿ 18, ಶಾಂತಕುಮಾರಿ ಅವರ ಜನ್ಮದಿನ. ಅವರು ಹುಟ್ಟಿ ಬೆಳೆದದ್ದು ಸಾಗರದಲ್ಲಿ. ಸಾಗರ ಮತ್ತು ಶಿವಮೊಗ್ಗಗಳಲ್ಲಿ ಅವರ ವಿದ್ಯಾಭ್ಯಾಸ ನೆರವೇರಿತು. ಶೈಕ್ಷಣಿಕವಾಗಿ ಅವರದ್ದು ಎಂಎ ಕನ್ನಡ ಸಾಹಿತ್ಯ(ಪಿಎಚ್.ಡಿ) ಸಾಧನೆ. ಇವರದ್ದು ಅಂತರಜಾತೀಯ ಪ್ರೇಮ ವಿವಾಹ. ಪತಿ ಎಂ. ನಾಗೇಂದ್ರ ಸ್ವಾಮಿ ಅವರು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಷನಲ್ ಡೈರೆಕ್ಟರ್ ಜನರಲ್ ಆಗಿದ್ದವರು. ಈ ದಂಪತಿಗಳಿಗೆ ಇಬ್ಬರು ಪುತ್ರರು.
ಶಾಂತಕುಮಾರಿ ಅವರು ಶಾಲಾ ಕಾಲೇಜುಗಳಲ್ಲಿ ಅಭಿನಯಿಸಿದ್ದರು. ನೃತ್ಯ ಸಂಗೀತ ಸಾಹಿತ್ಯಗಳಲ್ಲಿ ಅವರಿಗೆ ಅಪರಿಮಿತ ಆಸಕ್ತಿ. ಅಭಿನಯದಲ್ಲಿ ತುಂಬಾ ಆಸಕ್ತಿ ಇದ್ದರೂ ಮನೆಯ ಸಾಂಪ್ರದಾಯಿಕ ವಾತಾವರಣದಿಂದಾಗಿ ಅಭಿನಯ ಕ್ಷೇತ್ರವನ್ನು ಆಯ್ದುಕೊಳ್ಳಲಾಗಲಿಲ್ಲ. ಕೆಲವು ವರ್ಷಗಳ ಹಿಂದೆ ಅವಕಾಶ ಸಿಕ್ಕಿದ್ದರಿಂದ ಮತ್ತು ಮನೆಯವರ ಪ್ರೋತ್ಸಾಹವೂ ಇದ್ದದ್ದರಿಂದ 'ಬಬ್ಲೂಷ' ಚಿತ್ರದಲ್ಲಿ ನಾಯಕನ ತಾಯಿಯಾಗಿ ಅಭಿನಯಿಸಿದ್ದರು. ಆ ಸಿನಿಮಾಕ್ಕೆ ಇವರು ಹಾಡುಗಳನ್ನೂ ಬರೆದರು. ಹಂಪಿ ಉತ್ಸವದಲ್ಲಿ ಕೃಷ್ಣದೇವರಾಯ ನಾಟಕದಲ್ಲಿ ಚಿನ್ನಾಂಬೆಯಾಗಿ ಅಭಿನಯಿಸಿದರು.
ಶಾಂತಕುಮಾರಿ ಅವರು ಹೈಸ್ಕೂಲಿನಲ್ಲಿ ಓದುವ ದಿನಗಳಿಂದಲೇ ಬರೆಯಲು ಆರಂಭಿಸಿದರು. ನಾಡಿನ ಎಲ್ಲಾ ಪ್ರಸಿದ್ಧ ಪತ್ರಿಕೆಗಳಲ್ಲೂ ಇವರ ಕವಿತೆ, ಲೇಖನ, ಕತೆಗಳು ಪ್ರಕಟಗೊಂಡವು. ವಿಶೇಷಾಂಕಗಳಲ್ಲಿ ಆಹ್ವಾನಿತರಾಗಿ ಬರೆದರು.
ಶಾಂತಕುಮಾರಿ ಅವರು ಸಂಯುಕ್ತ ಕರ್ನಾಟಕದಲ್ಲಿ ಉಪಸಂಪಾದಕಿಯಾಗಿ ಹಾಗೂ ವಿದ್ಯಾವರ್ಧಕ ಸಂಸ್ಥೆಯಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದರು. ಚಂದನದಲ್ಲಿ 'ಬೆಳಗು' ಕಾರ್ಯಕ್ರಮ ನಿರ್ವಹಿಸಿದರು. ಪಬ್ಲಿಕ್ ಟಿವಿ ,ಈ ಟಿವಿ , ಟಿವಿ9, ಸುವರ್ಣ24/7 ಮುಂತಾದ ಹಲವಾರು ಚಾನೆಲ್ ಗಳಲ್ಲಿ ಪ್ಯಾನಲಿಸ್ಟ್ ಆಗಿ ಭಾಗವಹಿಸಿದ್ದರು.
ಶಾಂತಕುಮಾರಿ ಅವರು ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ ಎರಡು ಅವಧಿಗಳಲ್ಲಿ ಕೆಲಸ ಮಾಡಿದರು.
ಶಿವರಾಮ ಕಾರಂತ ವೇದಿಕೆಯಲ್ಲಿ ಉಪಾಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದರು.
ಶಾಂತಕುಮಾರಿ ಅವರ ಅಂಕಣ ಬರಹ 'ಸೂರಂಚಿನ ನೀರು' ಪ್ರಕಟಗೊಂಡಿತು. ಪ್ರಕಟಣೆಗೆ ಸಿದ್ಧಗೊಂಡಿರುವುದು ಸುಮಾರು ಹತ್ತು ಪುಸ್ತಕಗಳಾಗುವಷ್ಟಿದೆ. ಆದರೆ, ಆದ್ಯತೆ ಬೇರೆ ಇದ್ದಿದ್ದರಿಂದ ಆ ಕಡೆಗೆ ಗಮನ ಹರಿಸಲಿಲ್ಲ. ಇನಿಯನ ಪದಗಳು ಮತ್ತು ದಹನ ಇವರ ಕವಿತಾ ಸಂಕಲನಗಳು.'ದಹನ' ಸಂಕಲನ ಕರಾವಳಿ ಪ್ರತಿಷ್ಠಾನ ಪ್ರಶಸ್ತಿ ಹಾಗೂ ಇನ್ನೊಂದೆರಡು ಪ್ರಶಸ್ತಿ ಪಡೆದುಕೊಂಡಿತು, ಇವರ 'ಮುಟ್ಟು' ಕಥಾಸಂಕಲನ ಮುಂಬೈನ ಸುಶೀಲಾಶೆಟ್ಟಿ ಪ್ರಶಸ್ತಿ ಮಾಸ್ತಿ ಪುರಸ್ಕಾರ, ಪಾಟೀಲಪುಟ್ಟಪ್ಪ ಪುರಸ್ಕಾರ ಪಡೆದುಕೊಂಡಿತು. ಇವೆಲ್ಲ ಸುಮಾರು ಇಪ್ಪತ್ತು ವರ್ಷಗಳ ಹಿಂದೆ. ಆದರೂ ಇಂದಿಗೂ ಬರಹ ಅವರಲ್ಲಿ ಉಸಿರು ಎನ್ನುವಷ್ಟು ಸೇರಿಕೊಂಡಿದೆ. ಅದು ಅವರಿಗೆ ಹವ್ಯಾಸವಲ್ಲ. ಸಹ ಜೀವನದ ಅನುಭವಗಳನ್ನು ವಿಶ್ಲೇಷಿಸಿ ನೋಡುವ ಗುಣವಿರುವ ಅವರಿಗೆ, ಬರಹ ತಮ್ಮ ಅಸ್ತಿತ್ವ ಪ್ರಜ್ಞೆ ಎನಿಸುತ್ತದೆ.
ಶಾಂತಕುಮಾರಿ ಅವರು 1996ರಲ್ಲಿ ಧಮಂಥ ಇನ್ಫೋಟೆಕ್ ಎಂಬ ಸಾಫ್ಟ್ ವೇರ್ ಟ್ರೈನಿಂಗ್ ಮತ್ತು ಡೆವಲಪ್ ಮೆಂಟ್ ಕಂಪನಿ ಸ್ಥಾಪಿಸಿ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟರು. ಹತ್ತು ವರ್ಷ ಆ ಉದ್ಯಮದಲ್ಲಿದ್ದು ನಂತರ ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಬಂದು ಹತ್ತು ವರ್ಷ ಕಟ್ಟಡಗಳನ್ನು ನಿರ್ಮಾಣ ಮಾಡಿದರು. ನಂತರ ಸಿನಿಮಾ ಟೆಕ್ನಾಲಜಿ ಕ್ಷೇತ್ರದಲ್ಲಿ "ಕರ್ನಾಟಕ ಸಿನಿಮಾ ಟೆಕ್ನಾಲಜೀಸ್ ಕಂಪನಿ "( ಕೆಸಿಟಿ) ಮತ್ತು "ಸಿನಿಮಾ ನೋಡಿ" ಎಂಬ ಓಟಿಟಿ ಪ್ರಾರಂಭ ಮಾಡಿದರು. ಸಧ್ಯಕ್ಕೆ ಓಟಿಟಿ ಸ್ಥಗಿತಗೊಂಡಿದೆ. ಈಗ ಪ್ರಸ್ತುತ 'ಸಿನಿಮಾ ಟೆಕ್ನಾಲಜಿ ಕಂಪನಿ' ಮತ್ತು 'ಇಳಾ ನೆಟ್ ಪೋಡಿ ಸರ್ವೀಸಸ್' ಎಂಬ ರಿಯಲ್ ಎಸ್ಟೇಟ್ ಕಂಪನಿ ನಡೆಸುತ್ತಿದ್ದಾರೆ.
ಶಾಂತಕುಮಾರಿ ಅವರು ಮಹಿಳಾ ಪ್ರಧಾನ ಪಕ್ಷ ಎಂಬ ರಾಜಕೀಯ ಪಕ್ಷ ಸ್ಥಾಪಿಸಿ ಅವರನ್ನೂ ಒಳಗೊಂಡಂತೆ ಐದು ಜನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ, ಇಂದಿನ ಅನೈತಿಕ ರಾಜಕಾರಣದಲ್ಲಿ ನೈತಿಕ ರಾಜಕಾರಣಕ್ಕೆ ಅವಕಾಶವಿಲ್ಲ ಎಂಬ ವಿಷಾದದಿಂದ ಹಿಂದೆ ಸರಿದರು.
ಶಾಂತಕುಮಾರಿ ಅವರು ಒಂದಷ್ಟು ವ್ಯವಸಾಯದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೌನ್ಸೆಲಿಂಗ್ ಕೋರ್ಸ್ ಮಾಡಿರುವುದರಿಂದ ಆಗಾಗ್ಗೆ ಬಿಡುವು ಮಾಡಿಕೊಂಡು ಕೌನ್ಸೆಲಿಂಗ್ ಸಹಾ ಮಾಡುತ್ತಾರೆ
ಹೀಗೆ ಶಾಂತಕುಮಾರಿ ಅವರಿಗೆ ಕಲೆ, ನೃತ್ಯ, ಸಂಗೀತ, ಸಾಹಿತ್ಯ, ಉದ್ಯಮ, ವ್ಯವಸಾಯ ರಾಜಕೀಯ ಎಲ್ಲದರಲ್ಲೂ ಆಸಕ್ತಿ ಇದೆ. ಹೀಗೆ ಎಲ್ಲ ಆಸಕ್ತಿಗಳನ್ನೂ ಬದುಕಿನ ಆಪ್ತ ಭಾವವಾಗಿ ಕಂಡಿರುವ ಶಾಂತಕುಮಾರಿ ಅವರಿಗೆ ಆತ್ಮೀಯ ಶುಭಹಾರೈಕೆಗಳು.
Happy birthday Shantha Kumari
ಕಾಮೆಂಟ್‌ಗಳು