ಎಚ್. ಎನ್. ಶುಭದಾ
ಎಚ್.ಎನ್. ಶುಭದಾ
ಡಾ. ಎಚ್.ಎನ್.ಶುಭದಾ ಅವರು ಹೆಸರಾಂತ ಶಿಕ್ಷಣತಜ್ಞರು. ಮಾನಸಿಕ ಮತ್ತು ದೈಹಿಕ ಬೆಳವಣಿಗೆಯ ತೊಂದರೆಗೊಳಗಾದ ವಿಶೇಷ ಮಕ್ಕಳ ಕುರಿತಾದ ಅಭಿವೃದ್ಧಿಗೆ ಅವರು ನೀಡುತ್ತಿರುವ ಕೊಡುಗೆ ಅಪಾರ.
ಫೆಬ್ರುವರಿ 18 ಶುಭದಾ ಅವರ ಜನ್ಮದಿನ. 16ನೇ ವಯಸ್ಸಿನಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅವರಿಗೆ ಏನನ್ನಾದರೂ ಮಾಡಬೇಕೆಂಬ ಅಂತರಂಗದ ತುಡಿತವಿತ್ತು.
ಶುಭದಾ ಅವರು ಬೆಂಗಳೂರಿನ ಕುಮಾರನ್ ಶಾಲೆಯಲ್ಲಿ ಶಿಕ್ಷಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ತರಗತಿಯಲ್ಲಿ ಶೈಕ್ಷಣಿಕವಾಗಿ ಕಲಿಕೆಯ ಸಮಸ್ಯೆಗಳಿರುವ ಮಕ್ಕಳಿದ್ದರು. ಅವರಿಗೆ ಹೇಗಾದರೂ ಸಹಾಯ ಮಾಡಬೇಕೆಂಬ ಆಶಯದಲ್ಲಿ, "ಕಲಿಕೆಯಲ್ಲಿ ಅಸಮರ್ಥತೆ ಹೊಂದಿರುವ ಮಕ್ಕಳಲ್ಲಿ ಆಸಕ್ತಿಗಳನ್ನು ಮೂಡಿಸುವ ನಿಟ್ಟಿನಲ್ಲಿ" ಹಲವಾರು ಕೋರ್ಸ್‌ಗಳನ್ನು ಮಾಡಿದರು. ಆದರೆ ಪ್ರಾಯೋಗಿಕ ಕಲಿಕೆಯನ್ನು ಅಳವಡಿಸಲು ಯಾವುದೇ ಶಾಲೆಯ ಆಡಳಿತವು ಒಪ್ಪುವುದು ಕಷ್ಟಸಾಧ್ಯ ಎಂಬ ಚಿಂತನೆಯಿಂದ ತಾವೇ 'ಭಾಂದವ್ಯ' ಎಂಬ ಶಾಲೆಯನ್ನು ಮೂಡಿಸಿದರು.
‘ಭಾಂದವ್ಯ' ಶಾಲೆಯು ಅಂಗವಿಕಲ ಮತ್ತು ಕಲಿಯಲು ಅಸಮಾರ್ಥ್ಯತೆ ಹೊಂದಿರುವ ಮಕ್ಕಳನ್ನು ಮುಖ್ಯವಾಹಿನಿಗೆ ಸೇರಿಸುವ ಗುರಿಯನ್ನು ಹೊಂದಿರುವ ಶಾಲೆ. ಇಲ್ಲಿ ಶುಭದಾ ಅವರು ಮೆದು ಬುದ್ಧಿಮಾಂದ್ಯ, ಸ್ವಲೀನತೆ, ಕಡಿಮೆ ದೃಷ್ಟಿ, ಅನೇಕ ನರವೈಜ್ಞಾನಿಕ ಕಾಯಿಲೆಗಳು, ದೈಹಿಕ ನ್ಯೂನತೆಗಳುಳ್ಳ ಮಕ್ಕಳನ್ನು ಸಾಮಾನ್ಯ ಮಕ್ಕಳ ಬಾಳ್ವೆಯೊಂದಿಗೆ ಸಂಯೋಜಿಸಲು ಶ್ರಮಿಸುತ್ತಿದ್ದಾರೆ. ಹೀಗೆ ಇದೊಂದು ಭಾಂದವ್ಯ ಬೆಸುಗೆಯ ಪ್ರಯೋಗ ಶಾಲೆ.
ವಿಶೇಷವಾಗಿ ವಿಶೇಷ ಮಕ್ಕಳೊಂದಿಗೆ ಕೆಲಸ ಮಾಡುವುದು ಸವಾಲಿನ ಕೆಲಸ. ಆದರೂ ಶುಭದಾ ಅವರೊಳಗಿನ ಅಂತರಂಗದ ಕರೆ ಅವರನ್ನು ಈ ನಿಟ್ಟಿನಲ್ಲಿ ಮುನ್ನಡೆಯುವಂತೆ ಮಾಡಿತು. ತಾವೂ ಹೆಚ್ಚು ಹೆಚ್ವು ಕಲಿತು ಬೆಳೆದರು. ತಮಗೆ ಮೂರು ಮಕ್ಕಳು ಜನಿಸಿದ ನಂತರ ನಾಲ್ಕು ಪದವಿಗಳಾದ ಬಿಎ, ಬಿಎಡ್, ಎಂಎ ಮತ್ತು ಪಿಎಚ್‌ಡಿ ಪದವಿಗಳನ್ನು ಗಳಿಸಿದರು. ಶುಭದಾ 1991 ರಲ್ಲಿ ದಿವಂಗತ ಡಾ. ಶಂಕರ್ ದಯಾಳ್ ಶರ್ಮಾ ಅವರಿಂದ ಶಿಕ್ಷಣದ ಕುರಿತಾದ ತಮ್ಮ ಪ್ರಬಂಧಕ್ಕಾಗಿ ಪ್ರಶಸ್ತಿಯನ್ನು ಪಡೆದರು. 2005ರಲ್ಲಿ ಡಾ. ಅಬ್ದುಲ್ ಕಲಾಂ ಅವರಿಂದಲೂ ತಮ್ಮ ಒಂದು ಸಂಶೋಧನಾ ಬರೆವಣಿಗೆಗೆ ಪ್ರಶಸ್ತಿಯನ್ನು ಪಡೆದರು.
ಶುಭದಾ ಅವರು ಹಲವಾರು ಕೃತಿಗಳನ್ನೂ ರಚಿಸಿದ್ದು, ಅವುಗಳಲ್ಲಿ 'ನೆಲದ ನಕ್ಷತ್ರಗಳ ನಂಟು' 'ಸ್ತ್ರೀ’, 'ನನ್ನ ಗೆಳೆಯ ಗಿಬ್ರಾನ್’ ಮುಂತಾದವು ಸೇರಿವೆ. ಇವರ ಅನೇಕ ಕಥೆ, ಕವಿತೆ, ಚಿಂತನೆ ಮತ್ತು ವಿಶೇಷ ಬರಹಗಳು ಮಾಧ್ಯಮದಲ್ಲಿ ಮೂಡಿವೆ. ಅವರ ಇತ್ತೀಚಿನ ಕೃತಿಯಾದ 'ದೇವಿ ಕುರುಬತಿ' ದಂತಕಥೆಯಾದ ಈಜಿಪ್ಟ್ ರಾಣಿ ಅನೆಪ್ ಕುರಿತಾದ ಐತಿಹಾಸಿಕ ಕಾದಂಬರಿಯಾಗಿದ್ದು ಸಾಹಿತ್ಯಲೋಕದಲ್ಲಿ ಅಪಾರ ಮೆಚ್ಚುಗೆ ಗಳಿಸಿದೆ.
ಶುಭದಾ ಅವರು ಬಹುತೇಕ ವರ್ಷದ ಎಲ್ಲ ದಿನಗಳಲ್ಲೂ ಕೆಲಸ ಮಾಡುತ್ತಾರೆ. ತಮ್ಮ ಶಾಲೆಯಲ್ಲಿ ಸಂಜೆ ತರಗತಿಗಳ ಮೂಲಕ ಆಸಕ್ತರಿಗೆ ಮಾತನಾಡುವ ಇಂಗ್ಲಿಷ್, ಸಂವಹನ ಮತ್ತು ಮಹಿಳೆಯರಿಗೆ ಹೊಲಿಗೆ ತರಗತಿಗಳು ಮುಂತಾದವುಗಳನ್ನು ನಡೆಸುತ್ತಾರೆ. ತಮ್ಮ ಸ್ತ್ರೀ ಸಂಘಟನೆಯ ಮೂಲಕ ವಸ್ತ್ರ ವಿನ್ಯಾಸಗೊಳಿಸುವುದು, ಸೀರೆಗಳನ್ನು ತಯಾರಿಸುವುದು, ದುಪಟ್ಟಾಗಳನ್ನು ಚಿತ್ರಿಸುವುದು, ಹೊಲಿಗೆ ಬ್ಯಾಗ್‌ಗಳನ್ನು ಮತ್ತು ಬಹಳಷ್ಟು ಅಡಿಗೆ ವಸ್ತುಗಳನ್ನು ವಿನ್ಯಾಸಗೊಳಿಸುವುದು ಮುಂತಾದ ಕರಕುಶಲತೆಗೂ ಇಂಬುಕೊಟ್ಟಿದ್ದಾರೆ. ಪ್ರತಿ ವರ್ಷ ಇವುಗಳ 'ವಸ್ತ್ರಾಭರಣ್' ಎಂಬ ಪ್ರದರ್ಶನವನ್ನೂ ಏರ್ಪಡಿಸುತ್ತಾರೆ.
ಶುಭದಾ ಅವರಿಗೆ ಶೈಕ್ಷಣಿಕ ಸಂಶೋಧನೆಗಾಗಿ ಕರ್ನಾಟಕ ಸರ್ಕಾರದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯೂ ಸೇರಿದಂತೆ ಮೂರು ರಾಜ್ಯ ಪ್ರಶಸ್ತಿಗಳು ಮತ್ತು 20 ರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ.
ಎಚ್.ಎನ್. ಶುಭದಾ ಅವರ ಕುರಿತು ನಾನು ಇಲ್ಲಿ ಹೇಳುತ್ತಿರುವುದು ಅಲ್ಲಲ್ಲಿ ತಿಳಿದ ಕಿರು ಮಾಹಿತಿ ಮಾತ್ರ. ಖಂಡಿತ ಇದು ಅವರ ಸಮಗ್ರ ಸಾಧನೆಯ ನೋಟವಲ್ಲ. ಅವರ ಅಪಾರ ಶ್ರದ್ಧೆ, ಅವರೊಂದಿಗಿರುವ ಕುಟುಂಬ, ಅವರ ಸಹೊದ್ಯೋಗಿಗಳು, ಅವರು ನಿರ್ಮಿಸಿರುವ ಸಮುದಾಯ ಇವೆಲ್ಲ ಇಲ್ಲಿ ಶ್ಲಾಘನೀಯ ಯೋಗ್ಯ. ಅಂತೆಯೇ ಶುಭದಾ ಅವರಿಗಿರುವ ವ್ಯಾಸಂಗ, ಸಾಂಸ್ಕೃತಿಕ ಮತ್ತು ಸಾಮಾಜಿಕ ಶ್ರದ್ಧೆ; ನಮ್ಮಂತಹವರು ಸೋಷಿಯಲ್ ಮೀಡಿಯಾದಲ್ಲಿ ಮಾಡುವ ಸಣ್ಣ ಪುಟ್ಟಗಳನ್ನೂ ಮೆಚ್ಚಿ ಪ್ರೋತ್ಸಾಹಿಸುವ ಸಹೃದಯತೆ ಇವೆಲ್ಲವು ಬಹಳಷ್ಟನ್ನು ಹೇಳುತ್ತದೆ.
ಆತ್ಮೀಯರಾದ ಶುಭದಾ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday to great educationist Dr. Shubhada Hn 🌷🙏🌷
ಕಾಮೆಂಟ್‌ಗಳು