ಚಾರುಕೀರ್ತಿ ಭಟ್ಟಾರಕ
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನ
ಶ್ರವಣಬೆಳಗೊಳದ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಇಂದು ನಿಧನರಾಗಿದ್ದಾರೆ. ಅವರೊಬ್ಬ ಮಹಾನ್ ವಿದ್ವಾಂಸರಾಗಿ, ಕನ್ನಡ ಭಾಷೆಯ ಪ್ರೋತ್ಸಾಹಕರಾಗಿ ಮಾಡಿ ಸಹಾ ಹೆಸರಾಗಿದ್ದರು.
ಚಾರುಕೀರ್ತಿ ಭಟ್ಟಾರಕರು 1949ರ ಮೇ 3 ರಂದು ಜನಿಸಿದರು. ಅವರ ಪೂರ್ವಾಶ್ರಮದ ಹೆಸರು ರತ್ನಾಕರ. ಅವರ ತವರೂರು ಕಾರ್ಕಳ ತಾಲ್ಲೂಕಿನ ವರಂಗ. ಇವರು ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿ ಧರ್ಮಾಚಾರ್ಯ ಪೀಠವನ್ನು ಏರಿದ್ದರು.
ಚಾರುಕೀರ್ತಿ ಭಟ್ಟಾರಕ ಅವರು ಇತಿಹಾಸ ತಜ್ಞರು, ತತ್ವಜ್ಞಾನಿಗಳು ಮತ್ತು ಶ್ರೇಷ್ಠ ವಾಗ್ಮಿಗಳೂ ಆಗಿದ್ದರು. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಇತಿಹಾಸ, ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ತತ್ವಶಾಸ್ತ್ರಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಅವರು, ಕನ್ನಡ, ಸಂಸ್ಕೃತ ಮತ್ತು ಪ್ರಾಕೃತದಲ್ಲೂ ಸ್ನಾತಕೋತ್ತರ ಪದವಿ ಪಡೆದಿದ್ದರು. ಪ್ರಾಕೃತವೂ ಸೇರಿದಂತೆ ಆರು ಭಾಷೆಗಳ ಪ್ರಾಜ್ಞರಾಗಿದ್ದರು.
ಚಾರುಕೀರ್ತಿ ಭಟ್ಟಾರಕ ಅವರು ಪೀಠದಲ್ಲಿ ಇದ್ದುಕೊಂಡೇ ಮಠದ ಸಮಸ್ತ್ರ ಕಾರ್ಯನಿರ್ವಹಣೆಯೊಂದಿಗೆ ಸಂಶೋಧನೆ, ಗ್ರಂಥ ರಚನೆಯಲ್ಲಿ ಕ್ರಿಯಾಶೀಲರಾಗಿದ್ದರು. 1981ರಲ್ಲಿ ಗೊಮ್ಮಟೇಶ್ವರ ಸಹಸ್ರಾಬ್ಧಿ ಮಹಾಮಸ್ತಕಾಭಿಷೇಕವನ್ನು ಯಶಸ್ವಿಯಾಗಿ ನೆರವೇರಿಸಿದ್ದರು. ಇದನ್ನು ಮೆಚ್ಚಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಕರ್ಮಯೋಗಿ ಎಂಬ ಬಿರುದು ನೀಡಿ ಗೌರವಿಸಿದ್ದರು. ಸ್ವಾಮೀಜಿ ಅವರು 1981, 1993, 2006 ಹಾಗೂ 2018 ರಲ್ಲಿ ನಡೆದ ಮಹಾಮಸ್ತಕಾಭಿಷೇಕವನ್ನು ಯಶಸ್ವಿಯಾಗಿ ನೆರವೇರಿಸಿದ್ದರು.
ಚಾರುಕೀರ್ತಿ ಭಟ್ಟಾರಕರು 40 ಕ್ಕೂ ಹೆಚ್ಚು ಜಿನಾಲಯಗಳನ್ನು ಜೀರ್ಣೋದ್ಧಾರಗೊಳಿಸಿ, ಅಲ್ಲಿ ನಿತ್ಯ ಪೂಜೆ ನಡೆಯುವಂತೆ ಮಾಡಿದ್ದರು. ಸುತ್ತಲಿನ 10ಕ್ಕೂ ಹೆಚ್ಚು ಗ್ರಾಮಗಳನ್ನು ದತ್ತು ಪಡೆದು, ಪ್ರಾಥಮಿಕ ಸೌಲಭ್ಯಗಳನ್ನು ಕಲ್ಪಿಸಿದ್ದರು. ಸಹಸ್ರಮಾನದ ಮಸ್ತಕಾಭಿಷೇಕದಲ್ಲಿ ಸಹಸ್ರಾರು ಮಂದಿಗೆ ಉಚಿತ ನೇತ್ರ ತಪಾಸಣೆ ಶಿಬಿರ ನಡೆಸಿದ್ದರು. ಆರೋಗ್ಯ, ಶಿಕ್ಷಣಕ್ಕೆ ಮಹತ್ವ ನೀಡುತ್ತಿದ್ದ ಸ್ವಾಮೀಜಿ, ಪಾಲಿಟೆಕ್ನಿಕ್, ಎಂಜಿನಿಯರಿಂಗ್, ನರ್ಸಿಂಗ್ ಕಾಲೇಜು, ಗೊಮ್ಮಟೇಶ್ ವಿದ್ಯಾಪೀಠ, ಪಾಕೃತ ಭಾಷೆಯ ಅಭಿವೃದ್ಧಿಗೆ ಬೆಂಗಳೂರಿನಲ್ಲಿ ಪ್ರಾಕೃತ ಜ್ಞಾನ ಭಾರತ ಟ್ರಸ್ಟ್ ಸ್ಥಾಪಿಸಿದ್ದರು. ಆಯುರ್ವೇದ ಆಸ್ಪತ್ರೆ, ಸಂಚಾರಿ ಆಸ್ಪತ್ರೆ, ಕ್ಲಿನಿಕಲ್ ಲ್ಯಾಬ್‌ಗಳನ್ನು ಸ್ಥಾಪಿಸಿದ ಸ್ವಾಮೀಜಿ, ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಉಳಿದ ಹಣದಿಂದ ಆಧುನಿಕ ಮಕ್ಕಳ ಆಸ್ಪತ್ರೆ ನಿರ್ಮಿಸಿದ್ದರು.
ಚಾರುಕೀರ್ತಿ ಸ್ವಾಮೀಜಿ ರಾಷ್ಟ್ರಪತಿ ಶಂಕರ ದಯಾಳ ಶರ್ಮರಿಂದ ರಾಷ್ಟ್ರೀಯ ಪ್ರಾಕೃತ ಸಂಶೋಧನೆ ಮತ್ತು ಅಧ್ಯಯನ ಸಂಸ್ಥೆ ಉದ್ಘಾಟನೆ ನೆರವೇರಿಸಿದರು. ಅದರ ಆಸರೆಯಲ್ಲಿ ಪ್ರಾಕೃತದಲ್ಲಿ ತರಗತಿಗಳನ್ನು ರಾಜ್ಯಾದ್ಯಂತ ತೆರೆದರು. ಸಮಗ್ರ ಭಾರತದಲ್ಲಿ ಈ ತೆರನಾದ ವ್ಯವಸ್ಥೆ ಇರುವುದು ಶ್ರವಣಬೆಳಗೊಳದಲ್ಲಿ ಮಾತ್ರ ಎಂಬುದು ಇದರ ಹಿರಿಮೆಗೆ ಸಾಕ್ಷಿ. ಶ್ರವಣಬೆಳಗೊಳದಲ್ಲಿ ರಾಷ್ಟ್ರೀಯ ಪ್ರಾಕೃತ ಅಧ್ಯಯನ – ಸಂಶೋಧನಾ ಸಂಸ್ಥೆಯಲ್ಲಿ ತಾಳೆಗರಿಗಳನ್ನು ಸಂರಕ್ಷಿಸುವ ಹಾಗೂ ಪ್ರಾಕೃತ ಗ್ರಂಥಗಳ ಕನ್ನಡ ಅನುವಾದ ಯೋಜನೆಯನ್ನು ರೂಪಿಸಿದ್ದರು.
�2015ರಲ್ಲಿ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಶ್ರವಣಬೆಳಗೊಳದಲ್ಲಿ ನಡೆಯಿತು. ಸ್ವಾಮೀಜಿ ಅವರು ಸಮ್ಮೇಳನಕ್ಕಾಗಿ ವಿನೂತನ ನಗರವನ್ನು ರೂಪಿಸಿದರು. ಮೂರೂ ಕಡೆಯಿಂದ ಗಾಳಿಬೆಳಕು ಧಾರಾಳವಾಗಿ ಬರುವಂತೆ ಬೃಹತ್ತಾದ ತೆರೆದ ಒಪ್ಪವಾದ ಚೆಲುವು ಚಿಮ್ಮುವ ಶಾಮಿಯಾನ ಹಾಕಿಸಿದರು. ಉಚಿತ ಊಟದ ಏರ್ಪಾಡು ಮಾಡಿದರು. ಸಾಹಿತ್ಯ-ಸಂಗೀತ-ಕವಿ ಗೋಷ್ಠಿಗಳು, ನಾಟಕ ನೃತ್ಯ ಪ್ರದರ್ಶನಗಳು, ಊಟ ವಸತಿ ವಾಹನ ಸೌಕರ್ಯಗಳು ಎಲ್ಲವೂ ಸುವ್ಯವಸ್ಥಿತವಾಗಿ ನಡೆದವು. ಶ್ರವಣಬೆಳಗೊಳ ಶ್ರೀಮಠದ ವತಿಯಿಂದ ನಾಲ್ಕು ದಿನಗಳ ಬೃಹತ್ ಸಮ್ಮೇಳನದ ಸಮಸ್ತ ಏರ್ಪಾಟು ನಡೆದಿತ್ತು. ಈ ಸಂಬಂಧವಾಗಿ ತಗಲಿದ ಒಂದೂವರೆ ಕೋಟಿ ವೆಚ್ಚವನ್ನು ಭರಿಸಲು ಮುಂದಾಗಿ ಬಂದಾಗ ಪೂಜ್ಯ ಚಾರುಕೀರ್ತಿ ಶ್ರೀಗಳು ಆಹಾರದಾನ ಪರಮಪುಣ್ಯಕಾರ್ಯ, ಮೂರುನಾಲ್ಕು ದಿವಸ ಲಕ್ಷಾಂತರ ಕನ್ನಡಿಗರು ಭೋಜನ-ಫಲಾಹಾರ ಮಾಡಿರುವುದು ತುಂಬ ಸಂತೋಷ ಕೊಟ್ಟಿದೆ. ಕನ್ನಡಕ್ಕೂ ಕರ್ನಾಟಕಕ್ಕೂ ಈ ಸೇವೆ ಮಾಡುವ ಸುವರ್ಣಾವಕಾಶ ದೊರೆತ ಧನ್ಯತೆಯೇ ಸಾಕು. ಅದು ಅಮೂಲ್ಯ. ಅದಕ್ಕೆ ಹಣವನ್ನು ಪಡೆಯುವುದು ಸರಿಯಲ್ಲ ಎಂದು ವಿನಯದಿಂದ ನಿರಾಕರಿಸಿದರು.
�ಚಾರುಶ್ರೀಯವರು ಕನ್ನಡದ ಭಟ್ಟಾರಕರು, ಅದರಲ್ಲಿಯೂ ಹಳಗನ್ನಡ ಸಾಹಿತ್ಯದ ಪರಮ ಆರಾಧಕರು. ಕನ್ನಡ ಸಾಹಿತ್ಯ ಪರಿಷತ್ತಿಗಾಗಿ ಹಳಗನ್ನಡ ಸಾಹಿತ್ಯ ಸಮ್ಮೇಳನವನ್ನೂ ನಡೆಸಿದರು.�
ಭಟ್ಟಾರಕರ ಭಾಷಣಗಳಲ್ಲಿ ವಿಚಾರದ ದೀಪ್ತಿ ಪ್ರಖರವಾಗಿ ಮಿಂಚುತ್ತಿತ್ತು ಎಂಬುದು ವಿದ್ವಾಂಸರ ಅಭಿಮತ. ಅವರು ಅಮೆರಿಕ, ಇಂಗ್ಲೆಂಡು, ಕೆನ್ಯಾ, ಸಿಂಗಪುರ ಮುಂತಾದ ದೇಶಗಳನ್ನು ಸಂದರ್ಶಿಸಿದ್ದರು. ಇಂಗ್ಲೆಂಡಿನ ಲೆಸ್ಟರ್ ನಗರದಲ್ಲಿ ಜಿನಮಂದಿರ ಪ್ರಾರಂಭೋತ್ಸವವನ್ನು ನೆರವೇರಿಸಿದರು ಹಾಗೂ ಅದರಲ್ಲಿ ಬಾಹುಬಲಿ ಬಿಂಬ ಪ್ರತಿಷ್ಠಾಪನೆಯನ್ನೂ ವಿದ್ಯುಕ್ತವಾಗಿ ನೆರವೇರಿಸಿದರು.
ಭಟ್ಟಾರಕರ ನಿರ್ಗಮನ ಜೈನ ಸಮಾಜಕ್ಕಷ್ಟೇ ಅಲ್ಲ, ಅಹಿಂಸೆ ಮತ್ತು ಸಮಾನತೆಯನ್ನು ಗೌರವಿಸಿ ಪ್ರೀತಿಸುವ ಪ್ರತಿಯೊಬ್ಬರಿಗೂ ನಷ್ಟ ಎಂಬುದು ಸಕಲರ ಒಕ್ಕೊರಲಿನ ಮಾತು.
ಕಾಮೆಂಟ್‌ಗಳು