ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಲ್. ವಿ. ಶಾಂತಕುಮಾರಿ


ಎಲ್‌.ವಿ. ಶಾಂತಕುಮಾರಿ 


ಎಲ್. ವಿ. ಶಾಂತಕುಮಾರಿ ಮಹತ್ವದ ಲೇಖಕಿ.  ಕಾವ್ಯ, ಲಲಿತ ಪ್ರಬಂಧಗಳು, ವಿಮರ್ಶೆ ಮತ್ತು ಅನುವಾದಗಳಿಗೆ ಇವರು ಹೆಸರಾಗಿದ್ದಾರೆ.‍

ಶಾಂತಕುಮಾರಿ ಅವರು 1938ರ ಮಾರ್ಚ್ 10ರಂದು ಮೈಸೂರಿನಲ್ಲಿ ಜನಿಸಿದರು. ಬಾಲ್ಯದಿಂದಲೂ ಓರಗೆಯ ಮಕ್ಕಳೊಂದಿಗೆ ಆಡುವುದಕ್ಕಿಂತಲೂ ಸಣ್ಣ ಸಣ್ಣ ಕಥೆ ಪುಸ್ತಕಗಳನ್ನು ಪದೇ ಪದೇ ಓದುವುದು, ಅಮ್ಮ ಹಾಡುತ್ತಿದ್ದ ಹಾಡುಗಳನ್ನೂ ನುಡಿಸುತ್ತಿದ್ದ ವೀಣೆಯನ್ನೂ ಕೇಳುವುದು- ಇವರಿಗೆ ಬಹಳ ಇಷ್ಟವಾದ ಸಂಗತಿಗಳಾಗಿದ್ದವು. ಎಸ್‌ಎಸ್‌ಎಲ್‌ಸಿ ಪಾಸಾದ ನಂತರ ಸರ್ಕಾರಿ ವಿದ್ಯಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಸಿ.ಎನ್‌. ಗಣೇಶಮೂರ್ತಿ ಅವರೊಡನೆ ವಿವಾಹವಾಯಿತು. ಖಾಸಗಿಯಾಗಿ ಓದಿ ಇಂಗ್ಲೀಷ್ ಎಂ.ಎ. ಮಾಡಿದ ನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿದರು.

ಶಾಂತಕುಮಾರಿ ಅವರು ಹಿಂದಿ (ವಿಶಾರದ) ಪದವಿಯನ್ನೂ ಗಳಿಸಿದರು. ಆ ಸಂದರ್ಭದಲ್ಲಿ ಹಿಂದೀ ಕವಿತೆಯನ್ನು ಕನ್ನಡಕ್ಕೆ ಅನುವಾದಿಸಿದರು. ಎಂ.ಎ. ಪದವಿಗೆ ಓದುತ್ತಿದ್ದಾಗ ಹಲವಾರು ಆಂಗ್ಲ ಕವಿಗಳ ಕವಿತೆಗಳನ್ನು ಅನುವಾದಿಸುವ ಹಂಬಲದಿಂದ ಎಮಿಲಿ ಡಿಕಿನ್‌ಸನ್‌, ರಾಬರ್ಟ್‌ ಫ್ರಾಸ್ಟ್‌, ವ್ಯಾಲೇಸ್‌ ಸ್ಟೀವನ್ಸ್‌, ವಿಲಿಯಮ್‌ ಬ್ಲೇಕ್‌ ಹೀಗೆ ಹಲವಾರು ಕವಿಗಳ ತಮಗಿಷ್ಟವಾದ ಕವನಗಳನ್ನು ಅನುವಾದಿಸಿದರು. ಕೆಲವು ಕವನಗಳನ್ನು ಸಿದ್ಧಲಿಂಗ ಪಟ್ಟಣಶೆಟ್ಟಿಯವರು ತಮ್ಮ ಸಂಕಲನ ಪತ್ರಿಕೆಯಲ್ಲಿ ಪ್ರಕಟಿಸಿದರು. ಹಾಗೆಯೇ ಆಸ್ಟ್ರೇಲಿಯಾದ ಕೆಲವು ಕವಿಗಳ ಮತ್ತು ಪಾಬ್ಲೋ ನೆರೂಡನ ಕವನಗಳನ್ನು ಅನುವಾದಿಸಿಟ್ಟರು. ಕನ್ನಡದಿಂದ ಇಂಗ್ಲಿಷಿಗೂ ಜಿ.ಎಸ್‌. ಶಿವರುದ್ರಪ್ಪನವರ  ಸುಮಾರು 40 ಕವನಗಳನ್ನು ಭಾಷಾಂತರಿಸಿಟ್ಟರು.  ಆದರೆ ಪ್ರಕಟಿಸಲು ಅವಕಾಶವಾಗಲಿಲ್ಲ. 

ಶಾಂತಕುಮಾರಿ ಅವರು ಎಸ್‌. ಎಲ್‌. ಭೈರಪ್ಪನವರ ಮಂದ್ರ, ಭಿತ್ತಿ ಕೃತಿಗಳನ್ನು ಎಸ್‌. ರಾಮಸ್ವಾಮಿ ಅವರ ಜತೆಗೆ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ದಾಟು ಕಾದಂಬರಿಯನ್ನು ಪ್ರಧಾನ ಗುರುದತ್ತರೊಂದಿಗೆ ಅನುವಾದ ಮಾಡಿದ್ದಾರೆ.‍ 'ಸಾಕ್ಷಿ' ಮತ್ತು 'ಗೃಹಭಂಗ' ಕಾಂದಬರಿಗಳ ಅನುವಾದವನ್ನು ಸ್ವಯಂ ತಾವೇ ಮಾಡಿದ್ದಾರೆ. ಪೆಪೆ ಮತ್ತು ಇತರ ಕಥೆಗಳು ಮತ್ತು ಮಾರ್ಕಸ್‌ ಔರಿಲಿಯಸ್‌ ಇವರ ಇತರ ಅನುವಾದಿತ ಕೃತಿಗಳು. ಕುವೆಂಪು ಭಾಷಾ ಭಾರತಿಗಾಗಿ ವಿಲ್‌ ಡ್ಯುರಾಂಟ್‌ ಅವರ ದಿ ಸ್ಟೋರಿ ಆಫ್ ಸಿವಿಲಿಸೇಶನ್‌ ಕೃತಿಯ ಹಲವು ಸಂಪುಟಗಳನ್ನೂ, ಪಂಡಿತ ದೀನದಯಾಳ ಉಪಾಧ್ಯಾಯರ ರಾಜಕೀಯ ದಿನಚರಿಯನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಗುಜರಾತಿ ಜ್ಞಾನಪೀಠ ವಿಜೇತ ಸಾಹಿತಿ ಪನ್ನಾಲಾಲ ಪಟೇಲ್‌ರ ಮಾನವೀನಿ ಭಾವೈ ಕೃತಿಯನ್ನೂ ಕನ್ನಡಕ್ಕೆ ಅನುವಾದಿಸಿದ್ದಾರೆ.
  
ವಿರಾಟ್‌ ಪ್ರತಿಭೆಯ ಗಾರುಡಿಗ (ಭೈರಪ್ಪನವರ ಕಿರು ಪರಿಚಯ), ಸೂಕ್ತಿ ಸಂಪದ (ಶತಾವಧಾನಿ ಗಣೇಶರೊಂದಿಗೆ ಭೈರಪ್ಪನವರ ಕೃತಿಗಳಲ್ಲಿ ಸೂಕ್ತಿಗಳ ಸಂಪಾದನೆ), ಸಾಕ್ರಟೀಸ್‌ ಸತ್ಯ ಪಥಿಕ, ಅನುಭಾವಿತ್ರಯರು (ಅಕ್ಕ, ಅಲ್ಲಮ ಮತ್ತು ಬಸವಣ್ಣರ ಕುರಿತು), ಚೈತನ್ಯದ ಚಿಲುಮೆ ನೆನಪು ಗರಿಬಿಚ್ಚಿದಾಗ (ಲಲಿತ ಪ್ರಬಂಧಗಳು), ಕಾವ್ಯ ಮನನ (ಕವಿತೆಗಳ ವಿಮರ್ಶೆ), ಕಗ್ಗದ ಕಾಣಿಕೆ (ಮಂಕುತಿಮ್ಮನ ಕಗ್ಗದ ವಿಮರ್ಶೆ), ಪು.ತಿ .ನ. ಅವರ ಶ್ರೀಹರಿ ಚರಿತೆಯ ವ್ಯಾಖ್ಯಾನ, ಕೌದಿ (ನೀಳ್ಗಥೆಗಳು), ಅಪ್ರಚಲಿತ ವಚನಕಾರ್ತಿಯರು ಮೊದಲಾದ ಕೃತಿ ಮೂಡಿಸಿದ್ದಾರೆ.  ಶಿವರಾಮ ಕಾರಂತರ ಕಾದಂಬರಿಗಳ ಕುರಿತಾದ ವಿಮರ್ಶೆ ಕೂಡಾ ಬಂದಿದೆ. ಎಚ್.ವಿ.ಸಾವಿತ್ರಮ್ಮ-2006,  ಅನುಪಮಾ ನಿರಂಜನ -2016, ಸಿ.ಎನ್. ಜಯಲಕ್ಷ್ಮೀದೇವಿ -2007, ಸುಧಾ ಮೂರ್ತಿ-2010 ಇವರ ಪ್ರಕಟಿತ ಕೃತಿಗಳಲ್ಲಿ ಸೇರಿವೆ. ಯುಗಸಾಕ್ಷಿ-2009 ರಲ್ಲಿ  ಇವರ ವಿಮರ್ಶಾ ಬರಹಗಳು ಪ್ರಕಟವಾಗಿವೆ. ಇವರ ಪ್ರತಿಭಾನ - (ಭೈರಪ್ಪನವರ ಕೃತಿಗಳಲ್ಲಿ ತಂದೆ ) 700 ಪುಟಗಳ ಪುಸ್ತಕ. ತಾಯ್ತನದ ತೆರೆಗಳು (ಭೈರಪ್ಪನವರ ಕೃತಿಗಳಲ್ಲಿ ತಾಯಿ),  ಪರ್ಷಿಯಾದ ಪ್ರತಿಭೆಗೆ ಕನ್ನಡದ ಕಂಪು (ಉಮರ್ ಖಯ್ಯಾಮ್ ಕವಿತೆಗಳ ವ್ಯಾಖ್ಯಾನ), ಗ್ರೀಕ್ ತತ್ವಜ್ಞಾನಿ ಎಪಿಕ್ವೆಟಸ್ (560 ಪುಟಗಳ ಪುಸ್ತಕ) ಇವರ ಇನ್ನಿತರ ಹೆಸರಾಂತ ಕೃತಿಗಳು.

ಎಲ್‌.ವಿ. ಶಾಂತಕುಮಾರಿ ಅವರಿಗೆ ಎಸ್‌.ಎಲ್‌. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ, ಪಿ.ಕೆ. ನಾರಾಯಣ ಸಾಹಿತ್ಯ ದತ್ತಿ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳು ಸಂದಿವೆ.

On the birthday of great writer L. V. Shanthakumari 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ