ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕುಸುಮಾಗ್ರಜ್


ಕುಸುಮಾಗ್ರಜ್

ವಿಷ್ಣು ವಾಮನ್ ಶಿರ್ವಾಡ್ಕರ್ ಅವರು ಕುಸುಮಾಗ್ರಾಜ್ ಎಂಬ ಅವರ ಕಾವ್ಯನಾಮದಿಂದ ಜನಪ್ರಿಯರಾಗಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಇವರು ಮರಾಠಿ ಕವಿ, ನಾಟಕಕಾರ, ಕಾದಂಬರಿಕಾರ ಮತ್ತು ಸಣ್ಣ ಕಥೆಗಾರರಾಗಿ ಹೆಸರಾಗಿದ್ದವರು.

ಕುಸುಮಾಗ್ರಜ್ 1912ರ ಫೆಬ್ರುವರಿ 27ರಂದು ನಾಸಿಕ್‌ನಲ್ಲಿ ಗಜಾನನ ರಂಗನಾಥ ಶಿರ್ವಾಡ್ಕರ್ ಆಗಿ ಜನಿಸಿದರು. ಅವರು 1930ರ ದಶಕದಲ್ಲಿ ಕೆಲವು ಕವನಗಳನ್ನು ಈ ಹೆಸರಿನಲ್ಲಿ ಪ್ರಕಟಿಸಿದ್ದರು. 1930ರ ದಶಕದಲ್ಲಿ ದತ್ತು ಸ್ವೀಕಾರದ ದೆಸೆಯಿಂದ ಅವರ ಹೆಸರು ವಿಷ್ಣು ವಾಮನ್ ಶಿರ್ವಾಡ್ಕರ್ ಎಂದು ಬದಲಾಯಿತು. ನಂತರ ಅವರು 'ಕುಸುಮಾಗ್ರಜ್' ಎಂಬ ಹೆಸರನ್ನು ಅಳವಡಿಸಿಕೊಂಡರು. 

ಕುಸುಮಾಗ್ರಜ್  ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಿಂಪಲ್‌ಗಾಂವ್‌ನಲ್ಲಿ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ನಾಸಿಕ್‌ನ ನ್ಯೂ ಇಂಗ್ಲಿಷ್ ಸ್ಕೂಲ್‌ನಲ್ಲಿ ಪಡೆದರು. ಮುಂಬೈ ವಿಶ್ವವಿದ್ಯಾನಿಲಯದಿಂದ ಮೆಟ್ರಿಕ್ಯುಲೇಷನ್ ಪಾಸಾದರು. ಅವರು ಕೊಲ್ಲಾಪುರದ ರಾಜಾರಾಂ ಕಾಲೇಜಿನೊಂದಿಗೆ ಸಂಬಂಧ ಹೊಂದಿದ್ದರು. ಖ್ಯಾತ ವಿಮರ್ಶಕ ಕೇಶವ ರಂಗನಾಥ್ ಶಿರ್ವಾಡ್ಕರ್ (1926-2018) ಅವರ ಕಿರಿಯ ಸಹೋದರ.

ಶಿರ್ವಾಡ್ಕರ್ ಅವರು ನಾಸಿಕ್‌ನ ಎಚ್‌ಪಿಟಿ ಕಲಾ ಕಾಲೇಜಿನಲ್ಲಿದ್ದಾಗ ಅವರ ಕವಿತೆಗಳು ರತ್ನಾಕರ್ ಪತ್ರಿಕೆಯಲ್ಲಿ ಪ್ರಕಟವಾದವು. 1932ರಲ್ಲಿ, 20ನೇ ವಯಸ್ಸಿನಲ್ಲಿ, ಶಿರ್ವಾಡ್ಕರ್ ಅವರು ನಾಸಿಕ್‌ನ ಕಲಾರಾಮ್ ದೇವಾಲಯದಲ್ಲಿ ಅಸ್ಪೃಶ್ಯರಿಗೆ ಪ್ರವೇಶವನ್ನು ಅನುಮತಿಸುವ ಬೇಡಿಕೆಯನ್ನು ಬೆಂಬಲಿಸಲು ಸತ್ಯಾಗ್ರಹದಲ್ಲಿ ಭಾಗವಹಿಸಿದರು.

1933ರಲ್ಲಿ ಶಿರ್ವಾಡಕರ್ ಅವರು 'ಧ್ರುವ ಮಂಡಲ'ವನ್ನು ಸ್ಥಾಪಿಸಿದರು ಮತ್ತು 'ನವ ಮನು' ಎಂಬ ಪತ್ರಿಕೆಯಲ್ಲಿ ಬರೆಯಲು ಪ್ರಾರಂಭಿಸಿದರು. ಅದೇ ವರ್ಷದಲ್ಲಿ ಅವರ ಮೊದಲ ಕವನ ಸಂಕಲನ 'ಜೀವನಲಹರಿ' ಪ್ರಕಟವಾಯಿತು. 1934ರಲ್ಲಿ, ಶಿರ್ವಾಡ್ಕರ್ ನಾಸಿಕ್‌ನ ಎಚ್‍ಪಿಟಿ ಕಾಲೇಜಿನಿಂದ ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದರು.

ಶಿರ್ವಾಡ್ಕರ್ ಅವರು 1936 ರಲ್ಲಿ ಗೋದಾವರಿ ಸಿನಿಟೋನ್ ಲಿಮಿಟೆಡ್‌ ಸಂಸ್ಥೆ ಸೇರಿ  'ಸತಿ ಸುಲೋಚನಾ' ಚಿತ್ರಕ್ಕೆ ಚಿತ್ರಕಥೆ ಬರೆದರು. ಸಿನಿಮಾದಲ್ಲಿ ಲಕ್ಷ್ಮಣನಾಗಿಯೂ ನಟಿಸಿದ್ದರು. ಆದರೆ, ಚಿತ್ರ ಯಶಸ್ವಿಯಾಗುವಲ್ಲಿ ವಿಫಲವಾಯಿತು.

ಮುಂದೆ ಕುಸುಮಾಗ್ರಜ್  ಅವರು ಪತ್ರಕರ್ತರಾಗಿ ಕೆಲಸ ಮಾಡಿದರು. ಅವರು ಸಾಪ್ತಾಹಿಕ್ ಪ್ರಭಾ, ದೈನಿಕ್ ಪ್ರಭಾತ್, ಸಾರಥಿ, ಧನುರ್ದಾರಿ, ನವಯುಗ್ ಮುಂತಾದ ನಿಯತಕಾಲಿಕಗಳಲ್ಲಿ ಬರೆದರು. 1942ರಲ್ಲಿ ಮರಾಠಿ ಸಾಹಿತ್ಯದ ಪಿತಾಮಹ ವಿಷ್ಣು ಸಖಾರಾಮ್ ಖಂಡೇಕರ್ ಅವರು  ಕುಸುಮಗ್ರಜ್ ಅವರ ಕವನ ಸಂಕಲನ, 'ವಿಶಾಖ'ವನ್ನು ತಮ್ಮ ಸ್ವಂತ ಖರ್ಚಿನಲ್ಲಿ ಪ್ರಕಟಿಸಿದರು. ಇದರ ಪ್ರಕಟಣೆಯು ಕ್ವಿಟ್ ಇಂಡಿಯಾ ಚಳುವಳಿಯೊಂದಿಗೆ ಹೊಂದಿಕೆಯಾಗಿ ಸ್ವಾತಂತ್ರ್ಯದ ಸಂದೇಶವನ್ನು ಸಾರಿ, ಗುಲಾಮಗಿರಿಯ ವಿರುದ್ಧ ನಿಂತಿತು.‍ ಶೀಘ್ರದಲ್ಲೇ ಅದರಲ್ಲಿನ ಪದಗಳು ಅಂದಿನ ಯುವಕರು ಮತ್ತು ಯುವತಿಯರಲ್ಲಿ ಜನಪ್ರಿಯವಾಯಿತು.

1943 ರ ನಂತರ, ಕುಸುಮಾಗ್ರಜ್ ಅವರು ಆಸ್ಕರ್ ವೈಲ್ಡ್, ಮೋಲಿಯರ್, ಮಾರಿಸ್ ಮೇಟರ್ಲಿಂಕ್ ಮತ್ತು ಷೇಕ್ಸ್‌ಪಿಯರ್‌ರಂತಹ ಸಾಹಿತ್ಯ ದಿಗ್ಗಜರ ನಾಟಕಗಳನ್ನು ಮರಾಠಿಗೆ ಅಳವಡಿಸಲು ಪ್ರಾರಂಭಿಸಿದರು. ವಿಶೇಷವಾಗಿ ಅವರು ಬರೆದ ದುರಂತ ನಾಟಕಗಳು ಆ ಕಾಲದ ಮರಾಠಿ ರಂಗಭೂಮಿಯ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಅವರ ಮೇರುಕೃತಿ 'ನಟಸಾಮ್ರಾಟ್' ಷೇಕ್ಸ್‌ಪಿಯರ್‌ನ ಕಿಂಗ್ ಲಿಯರ್ ನಾಟಕದ ಶೈಲಿಯನ್ನು ಹೊಂದಿತ್ತು. 1970 ರಲ್ಲಿ ಮಹಾನ್ ಕಲಾವಿದ ಶ್ರೀರಾಮ್ ಲಾಗೂ ಈ ನಾಟಕದ ನಾಯಕನಾಗಿ ಅಭಿನಯಿಸಿದರು. 1946 ರಲ್ಲಿ, ಅವರು ತಮ್ಮ ಮೊದಲ ಕಾದಂಬರಿ 'ವೈಷ್ಣವ್' ಹಾಗೂ  ನಾಟಕ 'ದೂರ್ಚೆ ದಿವೆ' ಅನ್ನು ಬರೆದರು. 1946ರಿಂದ 1948ರವರೆಗೆ ಅವರು ಸ್ವದೇಶ್ ಎಂಬ ವಾರಪತ್ರಿಕೆಯನ್ನು ಸಂಪಾದಿಸಿದರು. 1950 ರಲ್ಲಿ, ಅವರು ನಾಸಿಕ್‌ನಲ್ಲಿ ಸಾಮಾಜಿಕ ಒಳಿತಿಗಾಗಿ 'ಲೋಕಹಿತವಾದಿ ಮಂಡಲ್' ಸ್ಥಾಪಿಸಿದರು. ಅದು ಈಗಲೂ ಅಸ್ತಿತ್ವದಲ್ಲಿದೆ. ಅವರು ಶಾಲಾ ವಿದ್ಯಾರ್ಥಿಗಳಿಗಾಗಿ ಕೆಲವು ಶೈಕ್ಷಣಿಕ ಪಠ್ಯಪುಸ್ತಕಗಳನ್ನೂ ಸಂಪಾದಿಸಿದರು. 

ಕುಸುಮಾಗ್ರಜ್‌ ಅವರು  1954ರಲ್ಲಿ, ಷೇಕ್ಸ್ಪಿಯರ್ನ 'ಮ್ಯಾಕ್ಬೆತ್' ಅನ್ನು 'ರಾಜ್ಮುಕುಟ್' ಆಗಿ ಮರಾಠಿಗೆ ಅಳವಡಿಸಿಕೊಂಡರು. ಇದರಲ್ಲಿ ನಾನಾಸಾಹೇಬ್ ಫಾಟಕ್ ಮತ್ತು ದುರ್ಗಾ ಖೋಟೆ (ಲೇಡಿ ಮ್ಯಾಕ್‌ಬೆತ್) ನಟಿಸಿದ್ದರು. ಅವರು 1960ರಲ್ಲಿ ಒಥೆಲೋವನ್ನು ನಾಟಕಕ್ಕೆ ಅಳವಡಿಸಿದರು.‍ಅವರು ಮರಾಠಿ ಸಿನಿಮಾದಲ್ಲಿ ಗೀತರಚನೆಕಾರರಾಗಿಯೂ ಕೆಲಸ ಮಾಡಿದರು. ಶಿರ್ವಾಡ್ಕರ್ ಅವರು ಸಂಯುಕ್ತ ಮಹಾರಾಷ್ಟ್ರ ಚಳವಳಿಯಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದರು.

ಭಾರತದ ಸ್ವಾತಂತ್ರ್ಯ ಪೂರ್ವದ ಐದು ದಶಕಗಳ ವೃತ್ತಿಜೀವನದಲ್ಲಿ ಕುಸುಮಾಗ್ರಜ್ ಅವರು 16 ಕವನ ಸಂಕಲನಗಳು, ಮೂರು ಕಾದಂಬರಿಗಳು, ಎಂಟು ಸಣ್ಣ ಕಥೆಗಳ ಸಂಪುಟಗಳು, ಏಳು ಪ್ರಬಂಧಗಳ ಸಂಪುಟಗಳು, 18 ನಾಟಕಗಳು ಮತ್ತು ಆರು ಏಕಾಂಕ ನಾಟಕಗಳನ್ನು ಬರೆದರು. ಸಾಹಿತ್ಯದ ಸಂಗ್ರಹವಾದ 'ವಿಶಾಖ' (1942) ನಂತಹ ಅವರ ಕೃತಿಗಳು ಭಾರತೀಯ ಸ್ವಾತಂತ್ರ್ಯ ಚಳವಳಿಗೆ ಒಂದು ಪೀಳಿಗೆಯನ್ನು ಪ್ರೇರೇಪಿಸಿತು. ಇದನ್ನು ಭಾರತೀಯ ಸಾಹಿತ್ಯದ ಮೇರುಕೃತಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. 

ಕುಸುಮಗ್ರಜ್ ಅವರಿಗೆ ಪದ್ಮಭೂಷಣ, ಜ್ಞಾನಪೀಠ ಪ್ರಶಸ್ತಿ, ಕೇಂದ್ರಸಾಹಿತ್ಯ ಅಕಾಡೆಮಿ ಪುರಸ್ಕಾರ, ಹಲವು ವಿಶ್ವವಿದ್ಯಾಲಯಗಳ ಡಾಕ್ಟೊರೇಟ್ ಸೇರಿದಂತೆ  ಅನೇಕ ಗೌರವಗಳು ಸಂದಿದ್ದವು. 

ಅವರು 1964ರಲ್ಲಿ ಮಾರ್ಗೋದಲ್ಲಿ ನಡೆದ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಕುಸುಮಾಗ್ರಜ್ 1999ರ ಮಾರ್ಚ್ 10ರಂದು  ನಾಸಿಕ್‌ನಲ್ಲಿ ನಿಧನರಾದರು. ಅವರು ಹೆಸರಿನಲ್ಲಿ ಭಾರತೀಯ ಭಾಷೆಗಳಲ್ಲಿನ ಶ್ರೇಷ್ಠ ಸಾಹಿತ್ಯ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಅವರ ಜನ್ಮದಿನವನವನ್ನು ಮಹಾರಾಷ್ಟ್ರ ಮತ್ತು ಗೋವಾಗಳಲ್ಲಿ 'ಮರಾಠಿ ದಿವಸ್' ಎಂದು ಆಚರಿಸಲಾಗುತ್ತಿದೆ.

On the birth anniversary of great poet Kusumagraj 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ