ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮೋನಿಯರ್ ವಿಲಿಯಮ್ಸ್


 ಮೋನಿಯರ್ ವಿಲಿಯಮ್ಸ್ 


ಮೋನಿಯರ್ ವಿಲಿಯಮ್ಸ್ ಪ್ರಸಿದ್ಧ ಸಂಸ್ಕೃತ ವಿದ್ವಾಂಸ ಮತ್ತು ಪೌರಸ್ತ್ಯ ಭಾಷಾ ಸಾಹಿತ್ಯ ಪಂಡಿತ. 

ಮೋನಿಯರ್ ವಿಲಿಯಮ್ಸ್ 1819ರ ನವೆಂಬರ್ 12ರಂದು ಮುಂಬಯಿಯಲ್ಲಿ ಜನಿಸಿದ. ಇಂಗ್ಲೆಂಡಿನ ಕಿಂಗ್ಸ್ ಕಾಲೇಜ್ ಸ್ಕೂಲ್ ಹಾಗೂ ಆಕ್ಸ್‍ಫರ್ಡಿನಲ್ಲಿ ವಿದ್ಯಾಭ್ಯಾಸ ಪಡೆದ. 1839ರಲ್ಲಿ ಪ್ರೊಫೆಸರ್ ಎಚ್. ಎಚ್. ವಿಲ್ಸನ್ ಅವರಿಂದ ಸಂಸ್ಕೃತ ಕಲಿಯಲು ಪ್ರೇರಣೆ ಹೊಂದಿ ಬೋಡನ್‍ಸ್ಕಾಲರ್‍ಶಿಪ್ (1843) ಪಡೆದು 1844ರಲ್ಲಿ ಬಿ. ಎ. ಪದವಿ ಗಳಿಸಿದ. ಇದೇ ವರ್ಷ ಹೈಲ್‍ಬರಿಯ ಈಸ್ಟ್ ಇಂಡಿಯಾ ಕಾಲೇಜಿನಲ್ಲಿ ಸಂಸ್ಕೃತ, ಪರ್ಶಿಯನ್ ಮತ್ತು ಹಿಂದೂಸ್ಥಾನಿ ಭಾಷೆಯ ಪ್ರಾಧ್ಯಾಪಕನಾದ, 1858ರ ತನಕ ಇದೇ ಹುದ್ದೆಯಲ್ಲಿದ್ದ. 1860ರಲ್ಲಿ ವಿಲ್ಸನ್ ನಿವೃತ್ತರಾದ ಮೇಲೆ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಲ್ಲಿ ಬೋಡನ್ ಸಂಸ್ಕೃತ ಪ್ರಾಧ್ಯಾಪಕ ಎಂಬ ಉನ್ನತ ಪದವಿಗೆ ನೇಮಿತನಾದ. 1875ರಲ್ಲಿ ಆಕ್ಸ್‍ಫರ್ಡಿನ ಆನರರಿ ಫೆಲೋ ಆಗಿ ಗೌರವಿಸಲ್ಪಟ್ಟ.  

ಮೋನಿಯರ್ ವಿಲಿಯಮ್ಸ್ ಕಲ್ಕತ್ತದಲ್ಲಿ ಹಿಂದೂಸ್ಥಾನಿ ಮತ್ತು ಸಂಸ್ಕೃತ ಕಾಲೇಜುಗಳನ್ನೂ ವೈಜ್ಞಾನಿಕ ಮತ್ತು ವೈದ್ಯಕೀಯ ಶಿಕ್ಷಣ ಕೇಂದ್ರವನ್ನೂ ಸ್ಥಾಪಿಸಲು ಕಾರಣನಾದ. 1885ರಲ್ಲಿ ಯುರೋಪ್ ಹಾಗೂ ಭಾರತದಿಂದ ಹಣ ಸಂಗ್ರಹಿಸಿ ಆಕ್ಸ್‍ಫರ್ಡಿನಲ್ಲಿದ್ದ ಇಂಡಿಯನ್ ಇನ್‍ಸ್ಟಿಟ್ಯೂಟ್ ಎಂಬ ಸಂಸ್ಥೆಯನ್ನು ಚೆನ್ನಾಗಿ ಬೆಳೆಸಿ, ತನ್ನಲ್ಲಿದ್ದ ಸಹಸ್ರಾರು ಭಾರತೀಯ ಭಾಷಾ ಗ್ರಂಥಗಳನ್ನು ಆ ಸಂಸ್ಥೆಯ ಗ್ರಂಥಭಂಡಾರಕ್ಕೆ ಕೊಟ್ಟು ಪೌರಸ್ತ್ಯ ಭಾಷಾ ಸಾಹಿತ್ಯಗಳ ಸಂಶೋಧನೆಗೆ ನೆರವಾದ.  ಇಂಗ್ಲೆಂಡಿನ ರಾಯಲ್ ಏಷಿಯಾಟಿಕ್ ಸೊಸೈಟಿ ಶಾಖೆಯ ಮೂಲಕ ಹಲವು ಮೋನಿಯರ್ ವಿಲಿಯಮ್ ಗ್ರಂಥಗಳ ಭಾಷಾಂತರ, ಪ್ರಕಟಣೆ ಮತ್ತು ಪ್ರಚಾರಕ್ಕೆ ಕಾರಣನಾದ ಈತ ಶ್ರೇಷ್ಠ ಮಟ್ಟದ ಉಪನ್ಯಾಸಕ, ವಿಮರ್ಶಕ, ಸಂಶೋಧಕ ಮತ್ತು ಭಾಷಾಂತರಕಾರನಾಗಿದ್ದ. ಕ್ರೈಸ್ತ ಧರ್ಮಿಯನಾದರೂ ಭಾರತದ ಚಿತ್ರಕಲೆ, ಶಿಲ್ಪಕಲೆ, ಧರ್ಮ, ಸಂಸ್ಕೃತಿ, ಸಾಹಿತ್ಯವನ್ನು ಚೆನ್ನಾಗಿ ತಿಳಿದಿದ್ದ. ಈತ ಸಂಸ್ಕೃತ ಗ್ರಂಥಗಳ ಮೇಲೆ ತತ್ತ್ವಗರ್ಭಿತವಾದ ಮತ್ತು ಗಮನಾರ್ಹವಾದ ವ್ಯಾಖ್ಯಾನವನ್ನು ಬರೆದು ಅಂದಿನ ಭಾರತೀಯ ಹಾಗೂ ಪಾಶ್ಚಾತ್ಯ ವಿದ್ವಾಂಸರ ಪ್ರಶಂಸೆಗೆ ಪಾತ್ರನಾದ. ಇವನಿಗೆ ಕಲ್ಕತ್ತ ವಿಶ್ವವಿದ್ಯಾಲಯ ಗೌರವ ಡಾಕ್ಟೊರೇಟ್ ಪದವಿಯನ್ನು ಬ್ರಿಟಿಷ್ ಸರ್ಕಾರ ಸರ್ ಎಂಬ ಪದವಿಯನ್ನೂ ಕೊಟ್ಟು ಗೌರವಿಸಿತು. ಈತ 1899ರ ಏಪ್ರಿಲ್ 11 ರಂದು ಫ್ರಾನ್ಸಿನ ಕೆನಸ್ ಎಂಬಲ್ಲಿ ನಿಧನ ಹೊಂದಿದ.

ಮೋನಿಯರ್ ವಿಲಿಯಮ್ಸ್ ಅನೇಕ ಗ್ರಂಥಗಳನ್ನು ರಚಿಸಿದ್ದಾನೆ. ಎನ್ ಎಲಿಮೆಂಟರಿ ಗ್ರಾಮರ್ ಆಫ್ ದಿ ಸ್ಯಾನ್ಸ್ಕ್ರಿಟ್ ಲಾಂಗ್ವೇಜ್ (1846), ದ ಲಾಸ್ಟ್ ರೀಗ್ (ಶಾಕುಂತಲದ ಅನುವಾದ, 1853), ಎ ಪ್ರಾಕ್ಟಿಕಲ್ ಗ್ರಾಮರ್ ಆಫ್ ದಿ ಸ್ಯಾನ್ಸ್ಕ್ರಿಟ್ ಲಾಂಗ್ವೇಜ್ (1857), ರೂಢಿಮೆಂಟ್ಸ್ ಅಫ್ ಹಿಂದೂಯಿಸಂ (1858), ಹಿಂದೂಸ್ಥಾನಿ ಪ್ರೈಮರ್ (1860), ಸ್ಯಾನ್ಸಕ್ರಿಟ್ ಮ್ಯಾನ್ಯೂಅಲ್ (1882), ಇಂಡಿಯನ್ ಎಪಿಕ್ ಪೊಯಿಟ್ರಿ (1863), ಹಿಂದೂಯಿಸಂ (1877), ಮಾಡರ್ನ್ ಇಂಡಿಯಾ (1878). ಇಂಡಿಯನ್ ವಿಸ್‍ಡಂ (1875-ವೇದ. ನೀತಿಶಾಸ್ತ್ರ, ಹಿತೋಪದೇಶ, ಪ್ರಾಚೀನ ಕಾವ್ಯ, ಪುರಾಣಗಳೆಲ್ಲದರ ಸಾರವನ್ನು ಸಂಗ್ರಹಿಸಿ ಬರೆದ ಪುಸ್ತಕ) ರಿಲಿಜಿಯಸ್ ಥಾಟ್ ಅಂಡ್ ಲೈಫ್ ಇನ್ ಇಂಡಿಯಾ (1883), ದ ಹೋಲಿ ಬೈಬಲ್ ಅಂಡ್ ಸೆಕ್ರೆಡ್ ಬುಕ್ಸ ಆಫ್ ದ ಈಸ್ಟ್ (1887), ಬುದ್ಧಿಸಂ (1890), ಬ್ರಾಹ್ಮಣಿಸಂ (1891), ರೆಮಿನಿಸೆನ್ಸ್ ಆಫ್ ಓಲ್ಡ್ ಹೈಲ್‍ಬರಿ (1894) ಮುಂತಾದವು ಇವನ ಮುಖ್ಯ ಕೃತಿಗಳು.

1899ರಲ್ಲಿ ಪ್ರಕಟವಾದ ಸಂಸ್ಕೃತ-ಇಂಗ್ಲಿಷ್ ಡಿಕ್ಷನರಿ ಮೋನಿಯರ್ ವಿಲಿಯಮ್ಸನ ಮೇರುಕೃತಿ. ಈತ ನಿಧನವಾಗುವುದಕ್ಕೆ ಕೆಲವು ದಿನ ಮೊದಲು ಪ್ರಕಟವಾದ ಈ ನಿಘಂಟು ಸಂಸ್ಕೃತ ಸಾಹಿತ್ಯಕ್ಕೆ ಅಭೂತಪೂರ್ವ ಕಾಣಿಕೆಯಾಗಿದೆ. ಭಾಷಾಶಾಸ್ತ್ರ, ಉತ್ಪತ್ತಿ ಶಾಸ್ತ್ರಗಳನ್ನು ಅನುಲಕ್ಷಿಸಿ ಅತ್ಯಂತ ಶಾಸ್ತ್ರೀಯವಾಗಿ ಸಿದ್ಧಪಡಿಸಲಾದ ಈ ಕೋಶ ಸಂಸ್ಕೃತಾಭ್ಯಾಸಿಗಳಿಗೆ, ಅನುವಾದಕರಿಗೆ ತುಂಬಾ ಉಪಯುಕ್ತವಾದುದಾಗಿದೆ.

ಮಾಹಿತಿ ಆಧಾರ: ಮೈಸೂರು ವಿಶ್ವಕೋಶ

On Remembrance Day of Sir Monier Monier-Williams who gave great contribution to Sanskrit 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ