ಟಿಎಸ್ಸಾರ್
ಟಿ. ಎಸ್. ರಾಮಚಂದ್ರರಾವ್
ಟಿಎಸ್ಸಾರ್ ಎಂದೇ ಪ್ರಖ್ಯಾತರಾದ ಟಿ. ಎಸ್. ರಾಮಚಂದ್ರರಾವ್ ಕನ್ನಡ ಪತ್ರಿಕೋದ್ಯಮದ ಶ್ರೇಷ್ಠತೆಯ ಪ್ರತೀಕರು. ಇಂದು ಈ ಮಹನೀಯರ ಸಂಸ್ಮರಣೆ ದಿನ.
ಟಿ. ಎಸ್. ರಾಮಚಂದ್ರರಾಯರು 1922ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದಲ್ಲಿ ಜನಿಸಿದರು. ಇವರ ತಂದೆ ತೀರ್ಥಹಳ್ಳಿ ಸೂರ್ಯನಾರಾಯಣ ರಾಮಚಂದ್ರರಾವ್. ತಾಯಿ ಬನಶಂಕರಮ್ಮ. ಇವರ ಪತ್ನಿ ಲಲಿತಾ ಸಂಸ್ಕೃತ ಪ್ರಾಧ್ಯಾಪಕಿಯಾಗಿದ್ದರು. ಜನಪ್ರಿಯ ಲೇಖಕಿ ಎಂ.ಕೆ.ಇಂದಿರಾ ಇವರ ಸೋದರಿ.
ರಾಮಚಂದ್ರರಾಯರು ಶಿವಮೊಗ್ಗ ಮತ್ತು ಮೈಸೂರುಗಳಲ್ಲಿ ವಿದ್ಯಾಭ್ಯಾಸ ನಡೆಸಿದರು. ಸೀನಿಯರ್ ಇಂಟರ್‍ಮೀಡಿಯೆಟ್‍ಗೆ
ಓದು ನಿಲ್ಲಿಸಬೇಕಾಯಿತು. ರಾಶಿ ಅವರ ಪ್ರೋತ್ಸಾಹದಿಂದ ಕೊರವಂಜಿ ಮಾಸಪತ್ರಿಕೆಗೆ ಲೇಖನಗಳನ್ನು ಬರೆಯುತ್ತಿದ್ದರು. ‘ಮಧುವನ’ ಹಾಗು ‘ಮೂನ್‍ಲೈಟ್’ ಎನ್ನುವ ಪತ್ರಿಕೆಗಳನ್ನೂ ನಡೆಸುತ್ತಿದ್ದರು.
ರಾಮಚಂದ್ರರಾವ್ 1948ರಲ್ಲಿ ಪ್ರಜಾವಾಣಿ ದಿನಪತ್ರಿಕೆ ಪ್ರಾರಂಭಗೊಂಡಾಗ ಸೇರಿ ಉಪಸಂಪಾದಕರು. ಪ್ರಜಾವಾಣಿಯ ಮೊದಲ ಸಂಪಾದಕರು ಬಿ.ಪುಟ್ಟಸ್ವಾಮಯ್ಯ ಅವರ ನಂತರ ಸಂಸ್ಥೆಯ ಜನರಲ್ ಮ್ಯಾನೇಜರ್ ಸಿ.ಜಿ.ಕೆ. ರೆಡ್ಡಿ ಕೆಲಕಾಲ ಸಂಪಾದಕರಾಗಿದ್ದರು. 1949ರಲ್ಲಿ 27ರ ಹರೆಯದ ಟಿ.ಎಸ್. ರಾಮಚಂದ್ರರಾವ್ ಪ್ರಜಾವಾಣಿ ಸಂಪಾದಕರಾದರು. ಪ್ರಜಾವಾಣಿಯನ್ನು ಕನ್ನಡದ ಒಂದು ಅತ್ಯುತ್ತಮ ಹಾಗು ಜನಪ್ರಿಯ ಪತ್ರಿಕೆಯನ್ನಾಗಿ ಮಾಡಿದ ಶ್ರೇಯಸ್ಸು ಇವರದು. 27 ವರ್ಷಕಾಲ ಸಮರ್ಥವಾಗಿ ಪತ್ರಿಕೆಯನ್ನು ಮುನ್ನಡೆಸಿದರು. ಪ್ರಜಾವಾಣಿಯಲ್ಲಿ ದಿನನಿತ್ಯ ಬರೆಯುತ್ತಿದ್ದ ‘ಛೂಬಾಣ’ ಇವರ ಹಾಸ್ಯಲೇಪನದ ಚುಚ್ಚುಬಾಣವಾಗಿ ಅತ್ಯಂತ ಜನಪ್ರಿಯ ಅಂಕಣವಾಗಿತ್ತು. ರಾಜ್ಯದ ರಾಜಕೀಯ, ಸಾಮಾಜಿಕ ಆಗುಹೋಗುಗಳಿಗೆ ಟೀಕೆ ಟಿಪ್ಪಣೆಗಳನ್ನು ಛೂಬಾಣ ಒದಗಿಸುತ್ತಿತ್ತು.
ಅಂದಿನ ಯುಗದಲ್ಲಿ ಬಹುತೇಕ ಪತ್ರಿಕೆಗಳು ಸುದ್ದಿಮನೆಗೆ ಸುದ್ದಿ ಸರಬರಾಜು ಮಾಡುವ ಟೆಲಿಪ್ರಿಂಟರ್ ಯಂತ್ರಕ್ಕೆ ಅಂಟಿಕೊಂಡಿದ್ದವು. ಸ್ವಾತಂತ್ರ್ಯ ಬಂದ ಮೇಲೂ ಹೋರಾಟದ ಗುಂಗಿನಲ್ಲಿಯೇ ಇದ್ದ ಪತ್ರಿಕೆಗಳು ಮುಂದಿನ ಹಾದಿ ಯಾವುದೆನ್ನುವ ಸ್ಪಷ್ಟ ಕಲ್ಪನೆ ಇಲ್ಲದೆ ತೊಳಲಾಡುತ್ತಿದ್ದವು. ಈ ಸಂದರ್ಭದಲ್ಲಿ ಟಿಎಸ್ಸಾರ್ ಅವರ ಸಾಮರ್ಥ್ಯದಿಂದ ಪ್ರಜಾವಾಣಿ ಜನರ ಆಶೋತ್ತರಗಳಿಗೆ ಸ್ಪಂದಿಸಿ ಜನವಾಣಿಯಾಗಿ ಮೆರೆಯಿತು. ಅಠಾರ ಕಛೇರಿ-ವಿಧಾನಸೌಧದ ಆಳರಸರು, ಅಧಿಕಾರಿಗಳು ಮಾತ್ರ ಸುದ್ದಿಯಾಗಲಿಲ್ಲ. ವಿಧಾನಸೌಧದ ಲಿಫ್ಟ್ ಚಾಲಕನೂ ಸುದ್ದಿಯಾದ, ಮುಂಜಾನೆ ಬಿದಿಯಲ್ಲಿ ಚಿಂದಿ ಆಯುವ ಪೋರನೂ ಸುದ್ದಿಗೆ ಮೂಲವಾದ. ಪಟ್ಟಣಿಗರು ಮತ್ತ ಗ್ರಾಮೀಣ ಜನತೆಯನ್ನು ಕಾಡುವ ಸಮಸ್ಯೆಗಳೆಲ್ಲಾ ಪತ್ರಿಕೆಗೆ ಗ್ರಾಸವಾದುವು. ದನಿಯಿಲ್ಲದವರ ದನಿಯಾಯಿತು ಪ್ರಜಾವಾಣಿ. ಜನರಿಗೆ ಲೋಕವಿಚಾರವನ್ನು ಸರಳವಾಗಿ ತಿಳಿಸಿ ಅದರ ಹಿನ್ನಲೆ ಪರಿಣಾಮಗಳ ಬಗೆಗೆ ಮಾಹಿತಿ ನಿಡಿ ಅವರ ವಿಚಾರ ಶಕ್ತಿ ಬೆಳೆಸುವುದಕ್ಕೆ ಪ್ರಜಾವಾಣಿ ಆದ್ಯತೆ ನಿಡಿತು. ಅದಕ್ಕೆ ಪೂರಕವಾಗಿ ಹಲವಾರು ಅಂಕಣಗಳು, ಪ್ರಜಾವಾಣಿಯ ವಾಚಕರ ವಾಣಿ ಇಂದಿಗೂ ಅತ್ಯಂತ ಪ್ರಭಾವಶಾಲಿ.
ಪ್ರಜಾವಾಣಿ ದಿನಪತ್ರಿಕೆಯನ್ನು ಕಟ್ಟಿ ಬೆಳೆಸಿದ ಟಿ.ಎಸ್.ರಾಮಚಂದ್ರರಾವ್ ಕನ್ನಡ ಪತ್ರಿಕೋದ್ಯಮ ಕಂಡ ಅಪರೂಪದ ನಿಷ್ಟಾವಂತ ಹಾಗೂ ನಿಷ್ಟುರ ಪತ್ರಕರ್ತರಲ್ಲಿ ಪ್ರಮುಖರು. ಕರ್ನಾಟಕದ ಮುಖ್ಯಮಂತ್ರಿಗಳೆಲ್ಲ ಅವರಿಗೆ ಆಪ್ತರಾಗಿದ್ದರು. ಆದರೆ ತಮ್ಮ ಖಾಸಗಿ ಗೆಳೆತನವನ್ನೆಂದೂ ಅವರು ಪತ್ರಿಕೋದ್ಯಮದಲ್ಲಿ ಬಳಸಲಿಲ್ಲ. ಎಲ್ಲ ಮುಖ್ಯಮಂತ್ರಿಗಳ ಕಾಲದಲ್ಲೂ ಆಡಳಿತದ ಲೋಪ ದೋಷಗಳನ್ನು ಪತ್ರಿಕೆಯ ಮೂಲಕ ಮುಲಾಜಿಲ್ಲದೆ ಎತ್ತಿ ತೋರಿಸುತ್ತಿದ್ದರು. ಅವರು ಪ್ರಜಾವಾಣಿಯಲ್ಲಿ ಬರೆಯುತ್ತಿದ್ದ ವ್ಯಂಗ್ಯೋಕ್ತಿಗಳ “ಛೂಬಾಣ” ಅಂಕಣ ಇಂದಿಗೂ ಜನರ ಮಾತಿನಲ್ಲಿ ನಲಿಯುತ್ತಿದೆ. ಟಿಎಸ್ಸಾರ್ ಅವರಿಂದಾಗಿ ಪ್ರಜಾವಾಣಿ ಪತ್ರಿಕೆ ಶ್ರೇಷ್ಠ ಸಾಹಿತ್ಯದ ಸೃಷ್ಟಿ ತಾಣವೂ ಆಯಿತು. ಬಹತೇಕ ಶ್ರೇಷ್ಠ ಸಾಹಿತಿಗಳ ಸಾಹಿತ್ಯಕ್ಕೆ ನೆಲೆ ಒದಗಿಸುವುದರ ಜೊತೆಗೆ ಅನೇಕ ನವ್ಯ ಪ್ರತಿಭೆಗಳು ಹೊರಹೊಮ್ಮುವ ತಾಣವಾಗಿಯೂ ಬೆಳೆಯಿತು. ಹಲವಾರು ಶ್ರೇಷ್ಠ ಪತ್ರಕರ್ತರು, ಕಲಾವಿದರು ಮತ್ತು ಸಾಹಿತಿಗಳ ಪಡೆಯನ್ನು ಬೆಳೆಸಿ - ಬೆಳಗಿಸಿದ ಕೀರ್ತಿ ಕೂಡಾ ಟಿಎಸ್ಸಾರ್ ಅವರದಾಗಿದೆ.
ಪರ್ತಕರ್ತರಿಗೆ ಮನರಂಜನೆ ಇರಬೇಕು, ಜೊತೆಗೆ ಅವರಿಗೊಂದು ಖಾಸಗಿತನವಿರಬೇಕು ಎಂದು ಮೊದಲು ಮನಗಂಡವರಲ್ಲಿ ಟಿಎಸ್ಸಾರ್ ಪ್ರಮುಖರು. ಅವರ ಈ ಪ್ರಯತ್ನದಿಂದಾಗಿ 1966ರಲ್ಲಿ ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ಹೈಕೋರ್ಟ್ ಕಟ್ಟಡದ ಬಲಭಾಗದಲ್ಲಿ 'ಬೆಂಗಳೂರು ಪ್ರೆಸ್ ಕ್ಲಬ್' ಎಂಬ ಪತ್ರಕರ್ತರ ಖಾಸಗಿ ತಾಣವೊಂದು ತಲೆಯೆತ್ತಲು ಸಾಧ್ಯವಾಯಿತು.ಇಂದು ಈ ಕ್ಲಬ್ ರಾಜ್ಯದ ಪ್ರತಿಷ್ಟಿತ ಕ್ಲಬ್‍ಗಳಲ್ಲಿ ಒಂದಾಗಿದ್ದು, ಬೆಂಗಳೂರುನಗರ ಸುದ್ದಿಮಾಧ್ಯಮಗಳ ಚಟುವಟಿಕೆಯ ತಾಣವಾಗಿದೆ.
ಟಿಎಸ್ಸಾರ್ ಅವರ ಕೃತಿಗಳಲ್ಲಿ ‘ಲೇಡಿ ಡಾಕ್ಟರ್’ (ಪ್ರಹಸನ) ಜನಪ್ರಿಯ ಕೃತಿಯಾಗಿತ್ತು.
ರಾಮಚಂದ್ರರಾಯರು ಟಿಎಸ್ಸಾರ್ ಪದವನ್ನೇ ʼತಿಳಿಸಾರ್’ ಎಂದು ವಿಡಂಬಿಸಿಕೊಂಡು ತಾವು ತಿಳಿಸಾರು ಮಾಡುವುದರಲ್ಲಿ ನಳಪಾಕ ಹಸ್ತರೆಂದು ಹೇಳಿಕೊಳ್ಳುತ್ತಿದ್ದರಂತೆ. ಜೊತೆಗೆ ಊಟದ ವೇಳೆ ಸಹೋದ್ಯೋಗಿಗಳಿಗೆ ತಿಳಿಸಾರಿನ ರುಚಿಯನ್ನೂ ತೋರಿಸುತ್ತಿದ್ದರಂತೆ.
ಹಲವು ಕಾಲ ಅಸ್ವಸ್ಥರಾಗಿದ್ದ ಟಿಎಸ್ಸಾರ್ 1977ರ ಏಪ್ರಿಲ್ 11ರಂದು ಇಹಲೋಕ ತ್ಯಜಿಸಿದರು. ಹೀಗೆ ಪತ್ರಿಕೋದ್ಯಮದ ಒಂದು ಪರ್ವವೇ ಮುಕ್ತಾಯಗೊಂಡಿತ್ತು.
ಮಹಾನ್ ಪತ್ರಕರ್ತರಾಗಿ ಶ್ರೇಷ್ಠತೆಗೆ ಹೆಸರಾಗಿದ್ದ ಟಿ. ಎಸ್. ರಾಮಚಂದ್ರರಾಯರ ನೆನಪಿನಲ್ಲಿ ಪತ್ರಿಕೋದ್ಯಮದಲ್ಲಿ ಅಪ್ರತಿಮ ಸಾಧನೆ ಮಾಡಿದ ನಾಡಿನ ಪತ್ರಕರ್ತರೊಬ್ಬರಿಗೆ ಪ್ರತಿ ವರ್ಷ ಟಿಎಸ್ಸಾರ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
On Remembrance Day of great name in Kannada journalism T. S. Ramachandra Rao 🌷🙏🌷
ಕಾಮೆಂಟ್‌ಗಳು