ಗಂಗಮ್ಮ ಕೇಶವಮೂರ್ತಿ
ಗಂಗಮ್ಮ ಕೇಶವಮೂರ್ತಿ
ಗಂಗಮ್ಮ ಕೇಶವಮೂರ್ತಿ ಅವರು ನಾಡಿನ ಪ್ರಸಿದ್ಧ ಗಮಕಿ.
ಗಂಗಮ್ಮ ಕೇಶವಮೂರ್ತಿ ಅವರು 1940ರ ಏಪ್ರಿಲ್ 12ರಂದು ಹಾಸನದಲ್ಲಿ ಜನಿಸಿದರು. ಗಂಗಮ್ಮನವರ ತಂದೆ ವೆಂಕಟರಾಮಯ್ಯನವರು ಅಧ್ಯಾಪಕರಾಗಿದ್ದು ತಾವು ಪಾಠ ಮಾಡುತ್ತಿದ್ದ ಪದ್ಯಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. ತಮಗೆ ತಿಳಿದಿದ್ದ ಸಂಗೀತ, ಮತ್ತು ಗಮಕ ಕಲೆಯನ್ನು ಮಗಳಿಗೆ ಹೇಳಿಕೊಡುತ್ತಿದ್ದರು. ಗಂಗಮ್ಮನವರು ಸಂಗೀತವನ್ನು ತಂದೆ ವೆಂಕಟರಾಮಯ್ಯನವರಲ್ಲೇ ಕಲಿತು ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ತೇರ್ಗಡೆಯಾದರು. ತಾಯಿ ಸೋಮನಾಯಕಮ್ಮ ಅವರಿಗೂ ಸೋಬಾನೆ ಪದ, ತುಳಸಿಪದ, ಮೊದಲಾದ ಅನೇಕ ಸಾಂಪ್ರದಾಯಿಕ ಹಾಡುಗಳನ್ನು ಹಾಡುವ ಅಭ್ಯಾಸವಿತ್ತು. ಅವರು ತಮ್ಮ ಜ್ಞಾಪಕ ಶಕ್ತಿಯಿಂದ ಪುಸ್ತಕ ನೋಡದೆ ಸುಮಾರು 2000 ಪದ್ಯಗಳನ್ನು ಹಾಡುವಷ್ಟು ಸಮರ್ಥರಾಗಿದ್ದರು. ಈ ವಾತಾವರಣದಲ್ಲಿ ಹುಟ್ಟಿ ಬೆಳೆದ ಗಂಗಮ್ಮನವರಿಗೆ ಸಹಜವಾಗಿಯೇ ಸಂಗೀತದಲ್ಲಿ ಆಸಕ್ತಿ ಬೆಳೆಯಿತು.
ಗಂಗಮ್ಮನವರು ಆಗಿನ ಕಾಲದ ಸುಪ್ರಸಿದ್ಧ ಗಮಕಿಗಳಾದ ಎಂ.ರಾಘವೇಂದ್ರರಾವ್, ನಂ. ಅಶ್ವತ್ಥನಾರಾಯಣ, ಬಿಎಸ್‌ಎಸ್ ಕೌಶಿಕ್ ಸತ್ಯವತಿ ಕೇಶವಮೂರ್ತಿ ಮುಂತಾದವರ ಬಳಿ ಗಮಕವನ್ನು ಕಲಿತರು. ಹರಿಹರದ ಪೇಟೆ ರಾಮಚಂದ್ರಾಚಾರ್ ಅವರಲ್ಲಿ ಸಾಹಿತ್ಯಾಭ್ಯಾಸವಾಯಿತು.
ತಮ್ಮ ಹತ್ತನೆಯ ವಯಸ್ಸಿನಿಂದಲೇ ಹಾಡುತ್ತಾ ಬಂದ ಗಂಗಮ್ಮ ಕೇಶವಮೂರ್ತಿ ಅವರು ಸಹಸ್ರಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ರಾಜ್ಯದ ಎಲ್ಲಾ ಭಾಗಗಳಲ್ಲೂ ಹಾಗೂ ಹೊರ ರಾಜ್ಯಗಳಲ್ಲೂ ಕಾರ್ಯಕ್ರಮಗಳನ್ನು ನೀಡಿದ್ದಾರೆ. ವಿವಾಹವಾಗಿ ಹರಿಹರದಲ್ಲಿ ನೆಲಸಿದ್ದಾಗ, ಅಲ್ಲಿ ಗಮಕ ತರಗತಿಗಳನ್ನು ಪ್ರಾರಂಭಿಸಿ ಅನೇಕ ವಿದ್ಯಾರ್ಥಿಗಳನ್ನು ತಯಾರು ಮಾಡಿ ಗಮಕ ಕ್ಷೇತ್ರಕ್ಕೆ ನೀಡಿದರು. ವಾಚನ ಮತ್ತು ವ್ಯಾಖ್ಯಾನಗಳೆರಡರಲ್ಲೂ ಪಾಂಡಿತ್ಯ ಗಳಿಸಿರುವ ಗಂಗಮ್ಮನವರು, ತಮ್ಮ ಅನೇಕ ಶಿಷ್ಯರನ್ನೂ ಅಂತೆಯೇ ನಿಷ್ಣಾತರನ್ನಾಗಿ ಮಾಡಿದ್ದಾರೆ.
ಗಂಗಮ್ಮನವರು 1960ರಿಂದಲೇ ಆಕಾಶವಾಣಿಯಲ್ಲಿ ಕಾವ್ಯ ವಾಚನ ದೇವರನಾಮ, ಭಾವಗೀತೆಗಳ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ.
ಗಂಗಮ್ಮನವರು ಬೆಂಗಳೂರಿಗೆ ಬಂದು ನೆಲಸಿದ ನಂತರ ’ಲಕ್ಷ್ಮೀಶ ಗಮಕ ಪಾಠಶಾಲೆ’ಯನ್ನು ಸ್ಥಾಪಿಸಿ ನೂರಾರು ಗಮಕ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮಾರ್ಗದರ್ಶನ ನೀಡುತ್ತಿರುವುದೇ ಅಲ್ಲದೆ ಸಮಗ್ರ ಕಾವ್ಯ ವಾಚನ ಮಾಲೆಯಲ್ಲಿ ಅನೇಕ ಕಾವ್ಯಗಳ ವಾಚನ ವ್ಯಾಖ್ಯಾನಗಳನ್ನು ವಿವಿಧ ಗಮಕಿಗಳಿಂದ ನಡೆಸಿದ್ದಾರೆ. ಪರಿಷತ್ತು ನಡೆಸುವ ಪರೀಕ್ಷೆಗಳ ಪರೀಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆ. ಗಮಕ ಕಲಾ ಪರಿಷತ್ತಿನ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಸಂಚಾಲಕರಾಗಿ ಕೆಲಸ ಮಾಡಿದ್ದಾರೆ.
ವಿದುಷಿ ಗಂಗಮ್ಮ ಕೇಶವಮೂರ್ತಿಯವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ 1997-98ನೇ ಸಾಲಿನ 'ಕರ್ನಾಟಕ ಕಲಾಶ್ರೀ' ಪ್ರಶಸ್ತಿ ಸಂದಿತ್ತು. ಅವರು 2013ರಲ್ಲಿ ಬೆಂಗಳೂರಿನ ಗಮಕ ಕಲಾ ಸಮ್ಮೇಳನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆ ಸಂದರ್ಭದಲ್ಲಿ ಅವರಿಗೆ 'ಗಮಕ ಕಲಾರತ್ನ' ಬಿರುದನ್ನು ಇತ್ತು ಗೌರವಿಸಲಾಯಿತು. ಗಂಗಮ್ಮ ಕೇಶವಮೂರ್ತಿ ಅವರು ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು. 2017ರಿಂದ ಅವರು ಕರ್ನಾಟಕ ಗಮಕ ಕಲಾಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗಂಗಮ್ಮ ಕೇಶವಮೂರ್ತಿ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರತಿಷ್ಠಿತ ಕುಮಾರವ್ಯಾಸ ಪ್ರಶಸ್ತಿಯೂ ಸಂದಿದೆ.
ಮುಳಿಯ ತಿಮ್ಮಪ್ಪಯ ಪ್ರಶಸ್ತಿಯೂ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಗೌರವಗಳೂ ಅವರಿಗೆ ಸಂದಿವೆ.
ಸುಶ್ರಾವ್ಯತೆಗೆ ಹೆಸರಾದ ಹಿರಿಯರಾದ ಗಂಗಮ್ಮ ಕೇಶವಮೂರ್ತಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು.
Happy birthday Gangamma Keshavamurthy Amma 🌷🙏🌷
ಕಾಮೆಂಟ್‌ಗಳು