ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಂ.ಎಸ್‌. ವಿದ್ಯಾ


 ಎಂ.ಎಸ್‌. ವಿದ್ಯಾ


ಡಾ. ಎಂ. ಎಸ್. ವಿದ್ಯಾ ಅವರು ರಂಗಕಲಾವಿದೆಯಾಗಿ ಅಪಾರ ಸಾಧನೆ ಮಾಡಿದ್ದಾರೆ. ಕನ್ನಡ ಪ್ರಾಧ್ಯಾಪಕರೂ, ಪ್ರಾಚಾರ್ಯರೂ ಆಗಿರುವ ಅವರ ಇತರ ಸಾಂಸ್ಕೃತಿಕ ಕೊಡುಗೆಗಳೂ ಗಣನೀಯವಾದದ್ದು. 

ಏಪ್ರಿಲ್ 12 ವಿದ್ಯಾ ಅವರ ಜನ್ಮದಿನ.  ತಾಯಿ  ಎಚ್. ಎಸ್.  ಪಾರ್ವತಿ ಅವರು ಆಕಾಶವಾಣಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಪ್ರಸಿದ್ಧರಾಗಿದ್ದವರು.  ತಂದೆ ಎಮ್. ಎಸ್. ಶ್ರೀಹರಿ.  ಪತಿ ರಂಗಭೂಮಿ, ಕಿರುತೆರೆ ಮತ್ತು ಬೆಳ್ಳಿತೆರೆಯ ಹೆಸರಾಂತ ಕಲಾವಿದರಾದ ಕಲಾಗಂಗೋತ್ರಿ ಕಿಟ್ಟಿ ಅವರು. 

ವಿಜಯ ಹೈಸ್ಕೂಲು, ನ್ಯಾಷನಲ್ ಕಾಲೇಜುಗಳಲ್ಲಿ ಓದಿದ ವಿದ್ಯಾ, ಬೆಂಗಳೂರು ವಿಶ್ವವಿದ್ಯಾಲಯದಿಂದ ನಾಟಕ ವಿಷಯದಲ್ಲಿ , ನೃತ್ಯ ನಾಟಕ, ಸಂಗೀತ ವಿಭಾಗದಿಂದ 3 ಚಿನ್ನದ ಪದಕಗಳೊಡನೆ ಬಿ. ಎ.ಪದವಿ, ಎಂ. ಎ ಕನ್ನಡ ತೌಲನಿಕ ಅಧ್ಯಯನ ಪದವಿಗಳನ್ನು ಪಡೆದರು. ಮಹಿಳಾ ಅಧ್ಯಯನದಲ್ಲಿ ಡಿಪ್ಲೊಮಾ ಅವರ ಮತ್ತೊಂದು ಶೈಕ್ಷಣಿಕ ಸಾಧನೆ.  "ಕನ್ನಡ ರಂಗಭೂಮಿಯಲ್ಲಿ ಹಾಸ್ಯ - ಒಂದು ಅಧ್ಯಯನ" ಮಹಾಪ್ರಬಂಧಕ್ಕಾಗಿ  ಬೆಂಗಳೂರು ವಿಶ್ವವಿದ್ಯಾಲಯದಿಂದ ಅವರಿಗೆ ಪಿಎಚ್.ಡಿ ಗೌರವ ಸಂದಿದೆ. 

ವಿದ್ಯಾ ಅವರು ಬೆಂಗಳೂರಿನ ಅಬ್ಬಾಸ್‌ ಖಾನ್‌ ಮಹಿಳಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಮತ್ತು ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಮನೆಯಲ್ಲಿನ ಪರಿಸರ, ಅದರಲ್ಲೂ ಮುಖ್ಯವಾಗಿ ತಾಯಿಯ ಪ್ರೇರಣೆಯಿಂದ ವಿದ್ಯಾ ಅವರಿಗೆ ಕಲೆ ಮತ್ತು ಸಾಹಿತ್ಯದಲ್ಲಿ ಬಾಲ್ಯದಿಂದಲೇ ಆಸಕ್ತಿ ಚಿಗುರಿತು. ಬಾಲ್ಯದಲ್ಲೇ ಪ್ರಭಾತ್‌ ಕಲಾವಿದರ ಸಿಂಡ್ರೆಲಾ ನಾಟಕದ 'ಇಲಿ' ಪಾತ್ರದ ಮೂಲಕ ರಂಗ ಪ್ರವೇಶಿಸಿದರು. ಬಾಲಭವನ ಬೇಸಿಗೆ ಶಿಬಿರ ನಾಟಕದಲ್ಲಿ ಭಾಗವಹಿಸಿದರು.  ಪ್ರೇಮಾ ಕಾರಂತರ ನಿರ್ದೇಶನದಲ್ಲಿ ಬೆನಕ ನಾಟಕ ಮತ್ತು ಮಕ್ಕಳ ಬೇಸಿಗೆ ಶಿಬಿರದಲ್ಲಿ ಎರಡು ವರ್ಷ ತರಬೇತಿ ಗಳಿಸಿ 'ಜಯಂಟ್‌ ಮಾಮಾ', 'ನಕ್ಕಳಾ ರಾಜಕುಮಾರಿ' ಅಂತಹ ನಾಟಕಗಳಲ್ಲಿ ಅಭಿನಯಿಸಿದರು.

ಮುಂದೆ ವಿದ್ಯಾ ಅವರು ರಂಗಭೂಮಿಯ ಪ್ರಸಿದ್ಧ  ತಂಡಗಳ ಹೆಸರಾಂತ ನಿರ್ದೇಶಕರುಗಳ ಮಾರ್ಗದರ್ಶನದಲ್ಲಿ ನಟಿಸುತ್ತ ಬಂದಿದ್ದಾರೆ.  ಕಲಾಗಂಗೋತ್ರಿ ತಂಡದ ಮೂಲಕ ಡಾ. ಬಿ.ವಿ. ರಾಜಾರಾಂ ನಿರ್ದೇಶನದ  300 ಪ್ರದರ್ಶನಗಳನ್ನು ಮೀರಿದ ಮೈಸೂರು ಮಲ್ಲಿಗೆ, ಮೈಮನಗಳ ನಡುವೆ, ಮೂಕಜ್ಜಿಯ ಕನಸುಗಳು,  ಮುಖ್ಯಮಂತ್ರಿ (ಸುಮಾರು 300 ಪ್ರದರ್ಶನಗಳಲ್ಲಿ ಅಭಿನಯ), ಮಂದ್ರ, ಅಂತರ, ಫಾದರ್‌, ಸಂಚಯನ, ಸಂಜೀವಿನಿ, ಆಷಾಢ ಭೂತಿ, ಸಂಸ ನಾಟಕ ಚಕ್ರ, ಪರಹಿತ ಪಾಷಾಣ ಸೇರಿದಂತೆ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಸ್ಪಂದನ ತಂಡದಲ್ಲಿ ಡಾ. ಬಿ. ಜಯಶ್ರೀ  ನಿರ್ದೇಶನದಲ್ಲಿ ಲಕ್ಷಾಪತಿ ರಾಜನ ಕಥೆ, ಕರಿಮಾಯಿ, ಅಗ್ನಿಪಥ, ಘಾಶಿರಾಂ ಕೊತ್ವಾಲ್‌, ಬ್ಲ್ಯಾಕ್‌ ಔಟ್‌, ಸಂತ ಶಿಶುನಾಳ ಶರೀಫ ನಾಟಕಗಳಲ್ಲಿ ಅಭಿನಯಿಸಿದ್ದಾರೆ.  ಎಂ.ಎಸ್‌ ಸತ್ಯು ನಿರ್ದೇಶನದಲ್ಲಿ ಮೋಟೇ ರಾಮನ ಸತ್ಯಾಗ್ರಹ, ಕುರುಕ್ಷೇತ್ರದಿಂದ ಕಾರ್ಗಿಲ್‌ವರೆಗೆ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅಂಕಿತ ತಂಡದಲ್ಲಿ ಜರ್ಮನ್‌ Gripps ರಂಗಭೂಮಿ ತಂಡದ ನಿರ್ದೇಶಕರಾದ Wolfgang colonedor ಅವರ 'ಗುಮ್ಮ ಬಂದ ಗುಮ್ಮ' ನಾಟಕದಲ್ಲಿ ಅಭಿನಯಿಸಿದ್ದಾರೆ. ಶ್ರೀನಿವಾಸ ಪ್ರಭು ನಿರ್ದೇಶನದಲ್ಲಿ ಪ್ರಯೋಗರಂಗದ ಮೂಲಕ 'ಬ್ರಹ್ಮಚಾರಿ ಶರಣಾದ', ನಾಟ್ಯದರ್ಪಣ ಮೂಲಕ ಗುಳ್ಳೇನರಿ, ಕಲಾ ಗಂಗೋತ್ರಿ ಮೂಲಕ 'ಹೀಗೊಂದು ಪ್ರೇಮ ಪ್ರಸಂಗ’ ನಾಟಕಗಳಲ್ಲಿ ಅಭಿನಯಿಸಿದ್ದಾರೆ. 'ಪ್ರಯೋಗ ರಂಗ'ದ ಮೂಲಕ ನಾಗೇಂದ್ರ ಷಾ ನಿರ್ದೇಶನದಲ್ಲಿ 'ನಮ್ಮ ನಿಮ್ಮೊಳಗೊಬ್ಬ’ ನಾಟಕದ ಸುಮಾರು 100ಕ್ಕಿಂತ ಹೆಚ್ಚು ಪ್ರದರ್ಶನಗಳಲ್ಲಿ ಅಭಿನಯಿಸಿದ್ದಾರೆ. 'ಪ್ರಯೋಗ ರಂಗ'ದಲ್ಲಿ ಕೆ.ವಿ.ನಾಗಾರಾಜ ಮೂರ್ತಿ ನಿರ್ದೇಶನದಲ್ಲಿ 'ಎಲ್ಲಿಗೆ’, ‘ಕಂಬ್ಳಿ ಸೇವೆ’, 'ಸಿಂಗಿರಾಜ ಸಂಪಾದನೆ’ ಇತ್ಯಾದಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಡಿ.ಡಿ.ಎಂ ಮೂಲಕ  ಡಾ. ಆರ್‌.ಟಿ. ರಮಾ ನಿರ್ದೇಶನದಲ್ಲಿ 'ಷಾಜಹಾನ್‌'ನಲ್ಲಿ ಅಭಿನಯಿಸಿದ್ದಾರೆ. ‘ರಂಗ ನಿರಂತರ’ದ ಮೂಲಕ ಸಿಜಿಕೆ ನಿರ್ದೇಶನದಲ್ಲಿ 'ಕಾಲಾಜ್ಞಾನಿ ಕನಕ'ದಲ್ಲಿ ಅಭಿನಯ ಹಾಗೂ  ಪ್ರೊ. ಕಿ.ರಂ.ನಾಗರಾಜು ಮತ್ತು ಸಿ. ಬಸವಲಿಂಗಯ್ಯನವರ ಜೊತೆ "ಕುಸುಮ ಬಾಲೆ' ಕಾದಂಬರಿಯ ವಿಶಿಷ್ಟ ಓದು ನಡೆಸಿದ್ದಾರೆ. 'ಚಿತ್ತಾರ ತಂಡ'ದ ಮೂಲಕ ರಾಜೇಂದ್ರ ಕಾರಂತ  ನಿರ್ದೇಶನದಲ್ಲಿ 'ಅಬ್ಬಿ ಎಸ್ಟೇಟ್‌', 'ಆರಕ್ಕೆ', 'ಮೈಮನಗಳ ನಡುವೆ', 'ನಮ್ಮ ನಿಮ್ಮೊಳಗೊಬ್ಬ' ನಾಟಕಗಳಲ್ಲಿ ಅಭಿನಯಿಸಿದ್ದಾರೆ. ‘ರಂಗ ಸಂಪದ' ಮೂಲಕ ಆರ್‌.ನಾಗೇಶ್‌ ನಿರ್ದೇಶನದಲ್ಲಿ 'ಯಯಾತಿ'ಯಲ್ಲಿ ಅಭಿನಯಿಸಿದ್ದಾರೆ.

ಕೆ.ಆರ್‌.ಸುಧೀಂದ್ರ ಶರ್ಮ ನಿರ್ದೇಶನದಲ್ಲಿ
'ಉದಯ ಕಲಾನಿಕೇತನ'ದ ಮೂಲಕ 'ಈಡಿಪಸ್‌',  'ಅಭಿನಯ ತರಂಗ'ದ ಮೂಲಕ 'ಆಷಾಡದ ಒಂದು ದಿನ'.  'ಡಿ.ಡಿಎಂ' ಮೂಲಕ ' ಸಿದ್ಧತೆ', 'ಸಿರಿ ಪುರಂದರ', ‘ಕಲಾ ಗಂಗೋತ್ರಿ’ ಮೂಲಕ 'ಆರ್ಟಿಸ್ಟ್ಸ್‌ ಕಾಲೋನಿ' ನಾಟಕಗಳಲ್ಲಿ ಅಭಿನಯಿಸಿದ್ದಾರೆ. 'ಅಂಬಾ ತಂಡ'ದಲ್ಲಿ  ವೈಶಾಲಿ ಕಾಸರವಳ್ಳಿ  ನಿರ್ದೇಶನದಲ್ಲಿ 'ಸೇವಂತಿ ಪ್ರಸಂಗ'ದಲ್ಲಿ ಅಭಿನಯಿಸಿದ್ದಾರೆ. 'ಸಂಚಯ ತಂಡ' ಮೂಲಕ ಸುರೇಶ್‌ ಆನಗಳ್ಳಿ ನಿರ್ದೇಶನದ  'ಪ್ರತಿಬಿಂಬಗಳು' ವಿಶಿಷ್ಟ ಪ್ರಯೋಗದಲ್ಲಿ ಅಭಿನಯಿಸಿದ್ದಾರೆ.‍ 'ನ್ಯೂ ಆಕ್ಟಿವ್‌ ಥಿಯೇಟರ್' ಮೂಲಕ ಉದಯ್‌ ಕುಮಾರ್‌ ಕುಲಕರ್ಣಿ ನಿರ್ದೇಶನದ  'ಏನ ಬೇಡಲಿ ನಿನ್ನ ಬಳಿಗೆ ಬಂದು', ಸಂಚಯ ತಂಡದ ಕೀರ್ತಿಭಾನು ನಿರ್ದೇಶನದ 'ದಶಮಿ', 'ದೃಷ್ಟಿ ತಂಡ'ದ ಕೆ.ಎಂ. ಚೈತನ್ಯ  ನಿರ್ದೇಶನದ 'ವಾಸಾಂಸೀಜೀರ್ಣಾನಿ’, ಕಲಾಗಂಗೋತ್ರಿಯ ತುಳಸಿಧರ ಕುರುಪ್‌ ನಿರ್ದೇಶನದ  (ಎನ್‌.ಎಸ್‌.ಡಿ) ಸಾಯೋನಾರ, ಸಮುದಾಯದ ಎನ್‌.ಎ. ಸೂರಿ ನಿರ್ದೇಶನದ 'ಈ ಕೆಳಗಿನವರು’, ಕಲಾಗಂಗೋತ್ರಿಯ  ಶಶಿಧರ್‌ ಭಾರಿಘಾಟ್‌ ನಿರ್ದೇಶನದ 'ಚಿರಸ್ಮರಣೆ', ಪ್ರಯೋಗ ರಂಗದ ರವಿ  ನಿರ್ದೇಶನದ 'ಗೆಳೆಯ ನೀನು ಹಳೆಯ ನಾನು' ಮುಂತಾದ ಅನೇಕ ನಾಟಕಗಳು ವಿದ್ಯಾ ಅವರ ಅಭಿನಯದಲ್ಲಿ ಸೇರಿವೆ.

ವಿದ್ಯಾ ಅವರು ಶಾಂತಾ ನಾಗರಾಜ್ ನಿರ್ದೇಶನದಲ್ಲಿ ನಡೆದ ಬೇಸಿಗೆ ಶಿಬಿರಕ್ಕಾಗಿ ನಕ್ಕಳಾ ರಾಜಕುಮಾರಿ, ನೀಲಿ ಕುದುರೆ, ಬೆಟ್ಟಕ್ಕೆ ಚಳಿಯಾದರೆ ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಕಲಾಗಂಗೋತ್ರಿಗೆ ದೂತ ಘಟೋತ್ಕಜ, ನೇಪಥ್ಯ ನಾಟಕಗಳನ್ನು ನಿರ್ದೇಶಿಸಿದ್ದಾರೆ.

ವಿದ್ಯಾ ಅವರು ರಂಗಭೂಮಿಗೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳಿಗೆ ನಿರೂಪಕಿಯಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ.  ರಂಗಭೂಮಿಗೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳಿಗೆ ಮುಖ್ಯ ಅತಿಥಿಯಾಗಿ ಆಹ್ವಾನಿಸಲ್ಪಟಿದ್ದಾರೆ.  ಪ್ರತಿಷ್ಠಿತ ರಂಗಸ್ಪರ್ಧೆಗಳ ತೀರ್ಪುಗಾರರಾಗಿ ಭಾಗಿಯಾಗಿದ್ದಾರೆ.

ಶ್ರೀವಿದ್ಯಾ ಅವರ  'ಕರ್ನಾಟಕ ರಂಗಭೂಮಿಯಲ್ಲಿ ಹಾಸ್ಯ - ಸಾಹಿತ್ಯ ಮತ್ತು ಪ್ರಯೋಗ ಪುಸ್ತಕ' ಪ್ರಕಟಗೊಂಡಿದ್ದು ಈ ಕೃತಿಯ ಕುರಿತು ಉತ್ತಮ ವಿಮರ್ಶೆಗಳು ಮೂಡಿಬಂದಿವೆ. ಬೆಂಗಳೂರು ವಿಶ್ವವಿದ್ಯಾಲಯ ಪ್ರದರ್ಶನ ಕಲಾ ವಿಭಾಗದ ಕಲಾಧ್ವನಿ ಪತ್ರಿಕೆಯಲ್ಲಿ, ಕ್ರಿಯೇಟಿವ್‌ ಥಿಯೇಟರ್‌ ವಿಶೇಷ ಸಂಚಿಕೆಯಲ್ಲಿ, ಸಾಧನೆ, ಮೋದಕ, ಕನ್ನಡ ಅಧ್ಯಯನ, ಮೊದಲಾದವುಗಳಲ್ಲಿ ಕನ್ನಡ ರಂಗಭೂಮಿಗೆ ಸಂಬಂಧಿಸಿದಂತೆ ವಿದ್ಯಾ ಅವರ ಲೇಖನಗಳು ಪ್ರಕಟಗೊಂಡಿವೆ. 

ವಿದ್ಯಾ ಅವರು ಡಾ.ಬಿ.ವಿ.ರಾಜಾರಾಂ ನೇತೃತ್ವದಲ್ಲಿ ದ ರಾಜ್ಯದ ಮೊದಲ ಮಹಿಳಾ ರಂಗ ಸಮಾವೇಶದ ಸಂಘಟಕಿ ಆಗಿದ್ದರು. ಅದೇ ಸಂದರ್ಭದಲ್ಲಿ ಕರ್ನಾಟಕ ನಾಟಕ ಅಕಾಡಮಿ ಡಾ. ಎಚ್‌.ಎಲ್‌. ಪುಷ್ಟಾ ಅವರ ಸಂಪಾದನೆಯಲ್ಲಿ ಹೊರತಂದ 'ರಂಗ ಭೂಮಿ ಮತ್ತು ಮಹಿಳೆ' ಪುಸ್ತಕದಲ್ಲಿ ಇವರ “ಮಹಿಳೆ ಮತ್ತು ಹಾಸ್ಯ ನಾಟಕಗಳು” ಲೇಖನ ಮೂಡಿಬಂದಿದೆ. ಡಾ. ಎಚ್‌.ಎಸ್‌. ಪಾರ್ವತಿ ಅವರ ಕುರಿತಾದ “ಸ್ನೇಹ ಚಿಂತನ”, ಕರ್ನಾಟಕ ನಾಟಕ ಅಕಾಡೆಮಿಯಿಂದ ಸಿಜಿಕೆ ಸಂಪಾದಕತ್ಹದಲ್ಲಿ ಹೊರಬಂದ 'ರಂಗಕಲಾವಿದರು' ಭಾಗ-2, ಕೆ.ಆರ್‌.ಸುಧೀಂದ್ರ ಶರ್ಮ ಅವರ ಅಭಿನಂದನಾ ಗ್ರಂಥ ಮುಂತಾದ ಕೃತಿಗಳಿಗೆ ಉಪಸಂಪಾದಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಡಾ. ಬಿ.ಎನ್. ಪೂರ್ಣಿಮಾ ‌ ಸಂಪಾದಿಸಿದ “ಸಾಹಿತ್ಯದ ಓದು” ಕೃತಿಯಲ್ಲಿ ಇವರ ಲೇಖನ ಮೂಡಿಬಂದಿದೆ.  ಆರ್‌.ಸಿ ಕಾಲೇಜು ಹೊರತಂದಿರುವ Development, effects and challenges of Covid -19 in India -ISBN ಪುಸ್ತಕದಲ್ಲಿ ಪದವಿ ತರಗತಿಗಳ ಮೇಲೆ ಕೋವಿಡ್‌-19 ರ ಪರಿಣಾಮ ಕುರಿತು ಇವರ ಲೇಖನ ಮೂಡಿಬಂದಿದೆ. 'ಸುಧಾ' ವಾರಪತ್ರಿಕೆಯಲ್ಲಿ 'ಆ ಕಣ್ಣುಗಳು' ಎಂಬ ಅನುವಾದಿತ ಕಥೆ ಪ್ರಕಟಗೊಂಡಿದೆ. 'ಪ್ರಜಾವಾಣಿ'ಯಲ್ಲಿ "ಕನ್ನಡದಲ್ಲಿ ಸ್ಟಾಂಡ್‌ ಅಪ್‌ ಕಾಮಿಡಿಗಳು" ಎಂಬ ಲೇಖನ ಪ್ರಕಟಗೊಂಡಿದೆ.  ಅಲ್ಲದೆ ISBN - ISSN ಪುಸ್ತಕಗಳಲ್ಲಿ ಶೈಕ್ಷಣಿಕ ಬರಹಗಳು ಹಾಗೂ ನಾಟಕಗಳಿಗೆ ಸಂಬಂಧಪಟ್ಟ ಬರಹಗಳು,  'ಅಪರಂಜಿ'ಯಲ್ಲಿ ಹಾಸ್ಯ ಲೇಖನಗಳು, 'ಅವಧಿ'ಯಲ್ಲಿ ಮೂಡಿಬಂದ ಲೇಖನಗಳು, ಹಲವಾರು ಜರ್ನಲ್‌ಗಳಲ್ಲಿ ರಂಗಭೂಮಿಗೆ ಸಂಬಂಧಿಸಿದಂತೆ ಲೇಖನಗಳು ಇವರ ಬರಹ ವೈವಿಧ್ಯಗಳಲ್ಲಿ ಸೇರಿವೆ.  ಹಲವಾರು ವೇದಿಕೆಗಳಲ್ಲಿ ವಿಚಾರ ಮಂಡನೆ ಮಾಡಿದ್ದಾರೆ.  ರಂಗಶಂಕರದ ವಿಶೇಷ ವಿಷಯಾಧಾರಿತ ಕಾವ್ಯ ಉತ್ಸವಗಳಲ್ಲಿ ಕವಿತೆ ವಾಚಿಸಿದ್ದಾರೆ. 

ಆಕಾಶವಾಣಿಹಲ್ಲಿ ನಾಟಕ ಕಲಾವಿದೆಯಾಗಿರುವ ವಿದ್ಯಾ ಅವರು ರೇಡಿಯೋ ವೈಜ್ಞಾನಿಕ ಕಾರ್ಯಕ್ರಮಕ್ಕೆ ಸಂಬಂಧಿಸಿದ ರೂಪಕಗಳಲ್ಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಾಗಿ ಧಾರಾವಾಹಿಯಲ್ಲಿ, ರೇಡಿಯೋದ ಮೊದಲ ಧಾರಾವಾಹಿ 'ಬೆಳಕಿನಂಗಳ' ಮುಂತಾದವುಗಳಲ್ಲಿ ಅಭಿನಯಿಸಿದ್ದಾರೆ ಶ್ರೀಮತಿ ಯಮುನಾಮೂರ್ತಿ, ಎಚ್‌.ಎಸ್‌.ಪಾರ್ವತಿ, ಎನ್‌.ರಘು, ಉಮೇಶ್‌, ಉದಯಾದ್ರಿ, ಎಚ್‌.ಎಸ್‌.ಸರಸ್ವತಿ ಮೊದಲಾದವರ ನಿರ್ದೇಶನದಲ್ಲಿ ರೇಡಿಯೋದ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ.  

ವಿದ್ಯಾ ಅವರು FM Rainbow ನಿರೂಪಕರ ಆಯ್ಕೆ - ಸಮಿತಿಯ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದಾರೆ.  ಕನ್ನಡದ ದಿಗ್ಗಜರಾದ ಕವಿ ಕೆ.ಎಸ್‌.ನರಸಿಂಹಸ್ಣಾಮಿ, ಲೇಖಕಿ ಉಷಾ ನವರತ್ನರಾಮ್‌, ಶ್ರೀ ಎಂ.ಎಸ್‌.ಸತ್ಯು, ಅರುಂಧತಿನಾಗ್‌ ಮುಂತಾದವರುಗಳ ಸಂದರ್ಶನ ಮಾಡಿದ್ದಾರೆ.  

ವಿದ್ಯಾ ಅವರು ದೂರದರ್ಶನದಲ್ಲಿ ಪ್ರೇಮಾ ಕಾರಂತ ನಿರ್ದೇಶನದಲ್ಲಿ "ಸದ್ದು ವಿಚಾರಣೆ ನಡೀತಿದೆ” ನಾಟಕದಲ್ಲಿ ಅಭಿನಯಿಸಿದ್ದಾರೆ.  ಎಂ.ಸಿ.ವೆಂಕಟೇಶ್‌ ನಿರ್ದೇಶನದಲ್ಲಿ ದೇವಿ ರೂಪಕ-1997 ಸ್ಥಾತಂತ್ರೋತ್ಸವದ ಐವತ್ತನೆಯ ವರ್ಷಕ್ಕೆ ಪ್ರಯೋಗದಲ್ಲಿ ದೇವಿ ಪಾತ್ರ ಮಾಡಿದ್ದಾರೆ. ಶ್ರೀನಿವಾಸ ಪ್ರಭು ನಿರ್ದೇಶನದ "ಬ್ರಹ್ಮಚಾರಿ ಶರಣಾದ' ನಾಟಕದಲ್ಲಿ ಅಭಿನಯಿಸಿದ್ದಾರೆ. ಡಾ.ಬಿ.ವಿ.ರಾಜಾರಾಂ, ಟಿ.ಎನ್‌.ಸೀತಾರಾಂ ಮೊದಲಾದವರ ನಿರ್ದೇಶನದಲ್ಲಿ ಅಭಿನಯಿಸಿದ್ದಾರೆ.  ರಾಷ್ಟ್ರೀಯ ವಾಹಿನಿಯಲ್ಲಿ ಪ್ರಸಾರವಾದ ಎಂ.ಎಸ್‌. ಸತ್ಯು ನಿರ್ದೇಶನದ ಹಿಂದಿ ಧಾರಾವಾಹಿ 'ಕಯರ್‌' ನಲ್ಲಿ ಅಭಿನಯಿಸಿದ್ದಾರೆ.  ಮಾಯಾಮೃಗ, ಪರಿಸರ, ಕ್ಷಮಯಾಧರಿತ್ರಿ, ಕತೆಗಾರ ಮೊದಲಾದ ಪ್ರಸಿದ್ಧ ಧಾರವಾಹಿಗಳಲ್ಲಿ ಹಾಗೂ ದೂರದರ್ಶನ ಕೇಂದ್ರದಲ್ಲಿ ಪ್ರಸಾರವಾಗುತ್ತಿದ್ದ ಹಲವಾರು ಎಪಿಸೋಡ್‌ಗಳಲ್ಲಿ ಟಿ.ಎನ್‌.ಸೀತಾರಾಂ, ಪಿ.ಶೇಷಾದ್ರಿ, ನಾಗೇಂದ್ರ ಷಾ, ವಿಜಯಪ್ರಸಾದ, ಮೈನಾಚಂದ್ರು, ಎನ್‌.ಎಸ್‌.ಶಂಕರ್‌ ಮೊದಲಾದವರ ನಿರ್ದೇಶಕರುಗಳ ಅಡಿಯಲ್ಲಿ ನಟಿಸಿದ್ದಾರೆ. 'ಯಶಸ್ವಿನಿ' ಸಾಕ್ಷ್ಯಚಿತ್ರಕ್ಕೆ ಸಹನಿರ್ದೇಶನ ಮಾಡಿದ್ದಾರೆ.  ಈಟಿವಿಗೆ ನಾಗೇಂದ್ರ ಷಾ ನಿರ್ದೇಶಿಸಿದ ಕಿರುಚಿತ್ರ “ವ್ಯೂಹ”ದಲ್ಲಿ ಅಭಿನಯಿಸಿದ್ದಾರೆ.  ಹಲವು ಟಿ.ವಿ. ಕಾರ್ಯಕ್ರಮಗಳ ನಿರೂಪಕಿಯಾಗಿದ್ದಾರೆ. 

ಎ.ಎಸ್‌. ಮೂರ್ತಿ  ಅವರ 'ಉಲ್ಟಾ ಪಲ್ಟಾ’ ಧ್ವನಿ ಸುರುಳಿಯಲ್ಲಿ ಪ್ರಮೀಳಾ ಜೋಷಾಯ್‌ ಅವರ ಜೊತೆ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.‍ ಅ.ನ.ಕೃ. ಅವರ "ಸಂಧ್ಯಾರಾಗ' ಕಾದಂಬರಿ ಆಧಾರಿತ ದ್ವನಿ ಸುರುಳಿಯಲ್ಲಿ ಅಭಿನಯಿಸಿದ್ದಾರೆ.‍ ಹಲವಾರು ರೇಡಿಯೋ ಜಾಹಿರಾತುಗಳಿಗೆ ಹಾಗೂ ಸಾಕ್ಷ್ಯಚಿತ್ರಗಳಿಗೆ ಧ್ವನಿ ನೀಡಿದ್ದಾರೆ  ಪಿ.ಶೇಷಾದ್ರಿ ನಿರ್ದೇಶನದಲ್ಲಿ ‘ಅತಿಥಿ’, ಋತ್ವಿಕ್‌ ಸಿಂಹ ನಿರ್ದೇಶನದಲ್ಲಿ ‘ರಸಖಷಿ ಕುವೆಂಪು’, ಅರವಿಂದ ಕುಪ್ಲೀಕರ್ ನಿರ್ದೇಶನದಲ್ಲಿ ‘ಪುಗ್ಗಟ್ಟೆ ಲೈಫು ಪುರುಸೊತ್ತೇ ಇಲ್ಲ’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.‍

ವಿದ್ಯಾ ಅವರು ನಾಟಕಗಳ ಪ್ರದರ್ಶನಕ್ಕಾಗಿ ಈಜಿಪ್ಟ್, ತಾಷ್ಕೆಂಟ್, ಕೈರೋ, ನ್ಯೂಜಿಲ್ಯಾಂಡ್‌, ಆಸ್ಟ್ರೇಲಿಯ, ಸಿಂಗಪೂರ್‌, ಮಲ್ಲೇಷ್ಯಾ ಹಾಗೂ ಭಾರತದ ಅನೇಕ ಸ್ಥಳಗಳಲ್ಲಿ ಪ್ರವಾಸ ಮಾಡಿದ್ದಾರೆ. 

ವಿದ್ಯಾ ಅವರ ಸಂದರ್ಶನ ದೂರದರ್ಶನದ 'ಬೆಳಗು' ಮತ್ತು 'ಶುಭೋದಯ' ಕಾರ್ಯಕ್ರಮಗಳಲ್ಲಿ ಹಾಗೂ ಅನೇಕ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಮೂಡಿಬಂದಿವೆ. “ಥಟ್‌ ಅಂತ ಹೇಳಿ" ರಸಪ್ರಶ್ನೆ ವಿಶೇಷ ಸಂಚಿಕೆಯಲ್ಲಿ ಭಾಗವಹಿಸಿದ್ದಾರೆ.

ವಿದ್ಯಾ ಅವರು ಯು.ಜಿ.ಸಿ ಪ್ರಾಯೋಜಿತ ರಾಜ್ಯಮಟ್ಟದ ವಿಚಾರ ಸಂಕಿರಣ, ವೆಬಿನಾರ್‌ಗಳ ಸಂಯೋಜಕಿಯಾಗಿ, ಕ್ರೈಸ್ಟ್‌ ಯುನಿವರ್ಸಿಟಿ ಹಾಗೂ ಎನ್‌.ಎಂ.ಕೆ.ಆರ್‌.ವಿ ಕಾಲೇಜುಗಳ BOS ಸದಸ್ಯೆಯಾಗಿ, ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರದ ಪಠ್ಯಪುಸ್ತಕ ರಚನೆ ಸಮಿತಿಯ ಸದಸ್ಯೆಯಾಗಿ, ಕನ್ನಡ ಸಾಹಿತ್ಯ ಪರಿಷತ್ತು, ಕ್ರೈಸ್ಟ್‌ ಹಾಗೂ ಬೆಂಗಳೂರು ವಿಶ್ವವಿದ್ಯಾಲಯಗಳಿಗೆ ಪ್ರಶ್ನೆ ಪತ್ರಿಕೆ ಸಿದ್ಧತೆ ಮಾಡುವವರಾಗಿ, ಕೆಪಿಎಸ್‍ಸಿ ಮೌಲ್ಯಮಾಪಕಿಯಾಗಿ, ಬೆಂಗಳೂರು ನಗರ ವಿವಿಗೆ ಪಠ್ಯಪುಸ್ತಕ ರಚನೆ ಸಮಿತಿಯ ಮತ್ತು ಪರೀಕ್ಷಾ ಸಮಿತಿ ಸದಸ್ಯೆಯಾಗಿ, ಎನ್‌.ಎಂ.ಕೆ.ಆರ್‌.ವಿ ಬಿ.ಎಡ್‌ ಕಾಲೇಜಿನಲ್ಲಿ ಪರೀಕ್ಷಾ ಮಂಡಳಿಯ ಸದಸ್ಯೆಯಾಗಿ ಹಾಗೂ ತಾವು ಕೆಲಸ ಮಾಡುವ ಕಾಲೇಜಿನ ಸಾಂಸ್ಕೃತಿಕ ವೇದಿಕೆಯ ಸಂಘಟಕಿಯಾಗಿ ಹೀಗೆ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.

ಡಾ. ಎಂ. ಎಸ್. ವಿದ್ಯಾ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ರಂಗಭೂಮಿಯಲ್ಲಿ ಹಾಸ್ಯ - ಸಾಹಿತ್ಯ ಮತ್ತು ಪ್ರಯೋಗ  ಕೃತಿಗೆ - ಲೇಖಿಕಾ ಸಾಹಿತ್ಯ ಪ್ರಶಸ್ತಿ, ಭಾರತಯಾತ್ರಾ ಕೇಂದ್ರದಿಂದ ಸಂಸರಂಗ ಪ್ರಶಸ್ತಿ, Rotary club south parade vocational excellence award for performing arts, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ "ಕನ್ನಡ ಸೇವಾ ರತ್ನ' ಪ್ರಶಸ್ತಿ;  ಸುರಾನಾ ಕಾಲೇಜಿನಿಂದ  ಮಹಿಳಾ ಸಾಧಕಿ, ರೋಟರಿ ಕ್ಲಬ್ ಸೌತ್ ಪೆರೇಡ್ ಇಂದ ವೊಕೇಶನಲ್ ಎಕ್ಸಲೆನ್ಸ್ ಪರ್ಫಾರ್ಮಿಂಗ್ ಆರ್ಟ್ಸ್, ಲಾಸ್ಯ ವರ್ಧನ ಟ್ರಸ್ಟ್ ವತಿಯಿಂದ ರಂಗ ಗೌರವ, ಸ್ಪೂರ್ತಿ ಸೌಧ ಬಳಗದಿಂದ ಸಾಧಕಿ ಪ್ರಶಸ್ತಿ, ಕಲಾಗಂಗೋತ್ರಿ ಪ್ರಯೋಗರಂಗ, ಸುಚಿತ್ರ ಕಲಾ ಕೇಂದ್ರ, ಸ್ಫೂರ್ತಿಸೌಧ ಸಂಸ್ಥೆಗಳಿಂದ  (ಸಾಧಕಿ) ಸನ್ಮಾನ; ಕೆ.ಎಸ್‌.ನರಸಿಂಹಸ್ವಾಮಿ ಪ್ರತಿಷ್ಠಾನ, ತಾಯಿಮಡಿಲು ಸಂಸ್ಥೆಗಳಿಂದ ಸನ್ಮಾನ ಸೇರಿದಂತೆ ಅನೇಕ ಗೌರವಗಳು ಸಂದಿವೆ. 

ಆತ್ಮೀಯರೂ ಮಹತ್ವದ ಸಾಧಕರೂ ಆದ ಡಾ. ಎಂ. ಎಸ್. ವಿದ್ಯಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 


Happy birthday Vidya Malavalli M S 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ