ವೆಂಕಟಕೃಷ್ಣ ಭಟ್
ವೆಂಕಟಕೃಷ್ಣ ಭಟ್
ಗಾನಭೂಷಣ ವೆಂಕಟಕೃಷ್ಣ ಭಟ್ ಶ್ರೇಷ್ಠ ಗಾಯನಕ್ಕೆ ಹೆಸರಾದವರು.
ಏಪ್ರಿಲ್ 23 ವೆಂಕಟಕೃಷ್ಣ ಭಟ್ ಅವರ ಜನ್ಮದಿನ. ಶ್ರೀಯುತರು ಕಾಸರಗೋಡಿನ ಗುಂಡ್ಯಡ್ಕದ ಶ್ರೀ ಶಂಕರ ನಾರಾಯಣ ಭಟ್ ಮತ್ತು ಶ್ರೀಮತಿ ಲಕ್ಷ್ಮೀ ಅಮ್ಮನವರ ಸುಪುತ್ರರು. ಎಳವೆಯಿಂದಲೇ ಶಾಸ್ತ್ರೀಯ ಸಂಗೀತದ ಆರಾಧಕರಾದ ವೆಂಕಟಕೃಷ್ಣ ಭಟ್ ಅವರು ಎಂಟನೇ ವಯಸ್ಸಿನಲ್ಲಿಯೇ ವಿದ್ವಾನ್ ಗೋಪಾಲಕೃಷ್ಣ ಮನೋಳಿತ್ತಾಯರ ಪ್ರಿಯ ಶಿಷ್ಯರಾಗಿ “ಪಾಲ್ಫಾಟಿನ ಚೆಂಬೈ ಸ್ಮಾರಕ ಸಂಗೀತ ಅಕಾಡೆಮಿ” ಕಾಲೇಜಿನ ಪ್ರಾಂಶುಪಾಲರಾದ ಗಾನಪ್ರವೀಣ ಕುಮಾರ್ ಕೇರಳವರ್ಮರವರಿಂದ "ಅನುಪಮ ಸಂಗೀತ ಸಾಧಕ” ಎಂಬ ಬಿರುದನ್ನಲ್ಲದೆ ಶ್ರೀಮತಿ ಮೀರಾಬಾಯಿ, ತ್ರಿಶೂರು ವಿ. ರಾಮಚಂದ್ರನ್, ಪದ್ಮವಿಭೂಷಣ ಡಾ| ಕೆ. ಜೆ. ಯೇಸುದಾಸ್ ಮೊದಲಾದ ಸಂಗೀತ ವಿದ್ವಾಂಸರ ಮಾರ್ಗದರ್ಶನ ಪಡೆದು 1992-93 ರಲ್ಲಿ ತಮ್ಮ 22ನೇ ವಯಸ್ಸಿಗೆ “ಗಾನ ಭೂಷಣ" ಪದವಿ ಪಡೆದ ಸಾಧಕರು.
ವೆಂಕಟಕೃಷ್ಣ ಭಟ್ಟರು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಬಂಟ್ವಾಳ ಬಳಿಯ ಮೊಡಂಕಾಪು ನಿವಾಸಿಯಾಗಿ “ಶ್ರೀ ರಾಗಂ” ಎಂಬ ಸಂಗೀತ ವಿದ್ಯಾ ಸಂಸ್ಥೆಯನ್ನು ಆರಂಭಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ಧಾರೆಯನೆರೆಯುತ್ತ ಬಂದಿದ್ದಾರೆ. ಸಂಗೀತದ ಎಲ್ಲ ಮಜಲುಗಳಲ್ಲಿ ಸಂಚರಿಸಿ ಅದರ ರಸಗ್ರಹಣವನ್ನು ಮಾಡಿ ಸಾಧನೆಯ ಉತ್ತುಂಗದ ಶಿಖರವೇರಿ ಸವಿಯುಂಡವರಾಗಿದ್ದಾರೆ. ಶಾಸ್ತ್ರೀಯ ಸಂಗೀತ ಕಛೇರಿ, ಸುಗಮ ಸಂಗೀತ ಕಛೇರಿ, ಸಂಗೀತ ರಸಸಂಜೆ ಕಾರ್ಯಕ್ರಮಗಳನ್ನು
ಮಾಡಿ ತಮ್ಮ ಮಧುರ ಕಂಠದಿಂದ ಹೊನ್ನ ಕಂಠದ ಗಾಯಕರಾಗಿ ಎಲ್ಲಡೆ ಜನರ ಮನ ಮನೆಗಳಲ್ಲಿ ಪ್ರೀತಿಗಳಿಸಿದ್ದಾರೆ. ಯಾವುದೇ ಹಾಡನ್ನು ತಮ್ಮ ಮನೋಹರವಾದ ವಿಶಿಷ್ಟ ವಿನ್ಯಾಸದ ಸ್ವರ ಜೋಡಣೆಯ ಮನೋಧರ್ಮದಿಂದ ಮನಮೋಹಕವಾಗುವಂತೆ ಹಾಡಬಲ್ಲವರೆಂದು ಖ್ಯಾತಿ ಗಳಿಸಿದ್ದಾರೆ.
ವೆಂಕಟಕೃಷ್ಣ ಭಟ್ಟ ಅವರ ಶ್ರೀಮತಿಯವರಾದ ವಿದ್ಯಾ ಭಟ್ ಅವರು ಸಹಾ ಸಂಗೀತ ಸಾಧಕರಾಗಿದ್ದು ತಮ್ಮ ಪತಿಯವರ ಸಂಗೀತ ಸಾಧನೆಗೆ ಮತ್ತು "ಶ್ರೀ ರಾಗಂ ಸಂಗೀತ" ಸಂಸ್ಥೆಯ ಏಳಿಗೆಯಲ್ಲಿ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಈ ದಂಪತಿಗಳ ಸುಪುತ್ರರಾದ ಶಶಾಂಕ ಅವರು ತಾಳವಾದ್ಯಗಳಲ್ಲಿನ ಸಾಧನೆಯ ಮೂಲಕ ನಿಷ್ಣಾತರಾಗಿರುವುದರ ಜೊತೆಗೆ ತಮ್ಮ ಕೊನೆಯ ವರ್ಷದ ಇಂಜಿನಿಯರಿಂಗ್ ವಿದ್ಯಾಭ್ಯಾಸದಲ್ಲೂ ಉತ್ತಮ ಸಾಧನೆ ಮಾಡುತ್ತ ಸಾಗಿದ್ದಾರೆ.
ವೆಂಕಟಕೃಷ್ಣ ಭಟ್ ಅವರಿಗೆ ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ ಹಾಗೂ ಅನೇಕ ಪ್ರತಿಷ್ಠಿತ ಸಂಗೀತ ವೇದಿಕೆ ಹಾಗೂ ಸಂಘ ಸಂಸ್ಥೆಗಳ ಗೌರವಗಳು ಸಂದಿವೆ.
ಸಂಗೀತ ಸಾಧಕರಾದ ವೆಂಕಟಕೃಷ್ಣ ಭಟ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ವೆಂಕಟಕೃಷ್ಣ ಭಟ್ - ವಿದ್ಯಾ ಭಟ್ ದಂಪತಿಗಳು ಮತ್ತು ಅವರ ಪುತ್ರ ಶಶಾಂಕ್ ಅವರಿಗೆ ಶುಭಹಾರೈಕೆಗಳು.
On the birthday of Ganabhushana Venkata Krishna Bhat
ಕಾಮೆಂಟ್‌ಗಳು