ಶ್ರೀನಿವಾಸ ಕಲ್ಯಾಣ
ಶ್ರೀ ಶ್ರೀನಿವಾಸ ಕಲ್ಯಾಣ
ಮೂಲ ಲೇಖಕರು: ವಿಜಯವಿಠ್ಠಲ
On wedding day of Lord Venkateshwara and Padmavathi
ವೈಶಾಕ ಶುಕ್ಲ ದಶಮಿ ಭಗವಾನ್ ಶ್ರೀನಿವಾಸ ಮತ್ತು ಪದ್ಮಾವತಿಯರ ವಿವಾಹದ ದಿನ ಎಂದು ಹಿರಿಯರು ನನ್ನ ಗಮನಕ್ಕೆ ತಂದರು. ನಮ್ಮಮ್ಮ ಅಕ್ಕಪಕ್ಕದ ಮಂದಿಯನ್ನೆಲ್ಲ ವಠಾರದಲ್ಲಿ ಕರೆದು ಹಲವು ದಿನ ಶ್ರೀನಿವಾಸ ಕಲ್ಯಾಣ ಓದುತ್ತಿದ್ದ ನೆನಪಾಯಿತು. ಕಥಾನಕದ ಸ್ವಾರಸ್ಯಕ್ಕೆ ಅಡ್ಡಿ ಬಾರದ ಹಾಗೆ ಸಂಕ್ಷಿಪ್ತಗೊಳಿಸಲು ಯತ್ನಿಸಿರುವೆ. (ಆದರೂ ಇಂದಿನವರ ಓದಿಗೆ ದೊಡ್ಡದು.)
ಒಮ್ಮೆ ಶೌನಕರು ಸೂತ ಮುನಿಗಳ ಬಳಿ ಬಂದು ಹಿಂದೆ ನಿಮ್ಮಿಂದ ಅನೇಕ ಭಗವಂತನ ಮಹಿಮೆಯನ್ನು ಸಾರುವ ವಿಷಯಗಳನ್ನು ತಿಳಿದು ಸುಕೃತಿಗಳಾಗಿದ್ದೇವೆ. ಈಗ ವೆಂಕಟಾಚಲಪತಿಯಾದ ಶ್ರೀ ಹರಿಯ ಮಹಿಮೆಯನ್ನು ಕೇಳಲು ಆಶಿಸಿದ್ದೇವೆ. ಅದನ್ನು ತಿಳಿಸಬೇಕು ಎಂದು ಕೇಳಲು, ಅವಾಗ ಸೂತರು ಹೇಳುತ್ತಾರೆ. "ಮುನಿವರ್ಯರೆ!! ಬಹಳ ಆನಂದದಾಯಕವಾದ ಕೋರಿಕೆಯನ್ನು ಸಲ್ಲಿಸಿದ್ದೀರಿ. ಶ್ರೀ ವೇದವ್ಯಾಸ ದೇವರು ನನಗೆ ಉಪದೇಶ ಮಾಡಿದ ಕ್ರಮದಲ್ಲಿ ನಿಮಗೆ ಹೇಳುತ್ತೇನೆ ಕೇಳಿ."
ಪೂರ್ವದಲ್ಲಿ ಧರ್ಮಿಷ್ಟನಾದ ಜನಕ ರಾಜನು ಧರ್ಮದಿಂದ ರಾಜ್ಯಭಾರ ಮಾಡುತ್ತಾ ಇದ್ದನು. ಅವನಿಗೆ ಕುಶಕೇತುವೆಂಬ ತಮ್ಮ ಇದ್ದನು. ಅವನ ಪತ್ನಿ ಬಹು ಪತಿವ್ರತೆಯು. ಆ ದಂಪತಿಗಳಿಗೆ ಮೂರು ಜನ ಪುತ್ರಿಯರು. ಜನಕರಾಜನಿಗೆ ಜಾನಕಿ ಎಂಬ ನಾಮದಿಂದ ಕರೆಯಲ್ಪಡುವ ಜಗನ್ಮಾತೆ ಪುತ್ರಿಯಾಗಿದ್ದಾಳೆ. ಹೀಗೆ ಜನಕರಾಜನು ಪತ್ನಿ ಪುತ್ರಿ ಮತ್ತು ಸಹೋದರನ ಜೊತೆಯಲ್ಲಿ ಆನಂದವಾಗಿ ರಾಜ್ಯ ಭಾರ ಮಾಡುತ್ತಾ ಇದ್ದನು. ಒಂದು ದಿನ ರಾಜನ ಮನಸ್ಸಿನಲ್ಲಿ ನಾನು ಸರ್ವದಾ ಸುಖವಾಗಿಯೇ ಇರಬೇಕು.ದುಃಖಗಳನ್ನು ಕಣ್ಣಿನಿಂದ ನೋಡಬಾರದು ಎಂದು ಅಪೇಕ್ಷೆ ಪಟ್ಟನು. ಅವನ ಅಪೇಕ್ಷೆ ಪಟ್ಟಿದ್ದು ಶಾಸ್ತ್ರ ಸಮ್ಮತವಲ್ಲವಾದುದರಿಂದ ಭಗವಂತನು ಅವನಿಗೆ ದುಃಖ ಪ್ರದರ್ಶನ ಮಾಡಿದನು. ಜನಕರಾಜನ ತಮ್ಮ ಕುಶಕೇತು ಮರಣ ಹೊಂದಿದ. ಅವನ ಪತ್ನಿ ಸಹ ಅವನ ಜೊತೆಗೆ ಸಹಗಮನ ಮಾಡಿದಳು.
ಅನಾಥರಾದ ಮಕ್ಕಳನ್ನು ಕಂಡು ಕಡು ದುಃಖಿತನಾದ ಜನಕರಾಜನು ಅನ್ನಾಹಾರಗಳನ್ನು ತ್ಯಜಿಸಿದನು. ಆಗ ದೈವಯೋಗದಿಂದ ಕುಲಪುರೋಹಿತರು, ವಾಮದೇವ ಮುನಿಗಳ ಸಹೋದರರು ಆದ ಶತಾನಂದರು ಮಿಥಿಲೆಗೆ ಬಂದರು. ಅರ್ಘ್ಯ ಪಾದಾದಿಗಳಿಂದ ಅವರನ್ನು ಪೂಜಿಸಿ ಸತ್ಕರಿಸಿ ತನಗೆ ಪ್ರಾಪ್ತವಾದ ದುಃಖವನ್ನು ಅವರ ಬಳಿ ಹೇಳಿಕೊಂಡನು. ಆಗ ಶತಾನಂದರು ಹೇಳುತ್ತಾರೆ.
ರಾಜನ್ ಕಲಿಯುಗದಲ್ಲಿ ವೆಂಕಟಗಿರಿ ಮಹಾತ್ಮೆಯನ್ನು ಶ್ರವಣ ಮಾಡುವದರಿಂದ ಸರ್ವಪಾಪವು ಪರಿಹಾರವಾಗುವದು. ನಿನ್ನ ಶತೃನಾಶ, ಪುತ್ರಿಯರ ವಿವಾಹ, ಸಕಲ ಶ್ರೇಯಸ್ಸುಗಳು ಅದರ ಶ್ರವಣದಿಂದ ದೊರಕುತ್ತವೆ. ಈ ಪರ್ವತಕ್ಕೆ ಕೃತಯುಗದಲ್ಲಿ ವೃಷಭಾಚಲವೆಂದು, ತ್ರೇತಾಯುಗದಲ್ಲಿ ಅಂಜನಾಚಲವೆಂದು, ದ್ವಾಪರದಲ್ಲಿ ಶೇಷಾಚಲವೆಂದು, ಕಲಿಯುಗದಲ್ಲಿ ವೆಂಕಟಾಚಲವೆಂದು ಯುಗಭೇದದಿಂದ ಹೆಸರುಂಟಾಗಿದೆ.
ನಾಲ್ಕು ಯುಗದಲ್ಲಿ ಆಯಾ ಹೆಸರು ಬರಲು ಕಾರಣವನ್ನು ಕೇಳಿದಾಗ ಅದಕ್ಕೆ ಶತಾನಂದರು ರಾಜನ್! ಕೃತಯುಗದಲ್ಲಿ ವೃಷಭ ಎಂಬ ರಾಕ್ಷಸನು ಈ ಪರ್ವತದಲ್ಲಿ ವಾಸವಾಗಿದ್ದು ಅಲ್ಲಿದ್ದ ಋಷಿಗಳ ಸಮೂಹಕ್ಕೆ ತೊಂದರೆ ಕೊಡುತ್ತಾ ಇದ್ದನು. ಅವನು ಕೊಡುವ ಕಷ್ಟ ತಾಳದೆ ಮುನಿಗಳು ಭಗವಂತನ ಬಳಿ ಮೊರೆಹೋಗುತ್ತಾರೆ. ಆಗ ಶ್ರೀ ಹರಿಯು ಪ್ರತ್ಯಕ್ಷವಾಗಿ ಅವರಿಗೆ ಅಭಯವಿತ್ತು ಆ ರಾಕ್ಷಸನ ಸಂಹಾರ ಮಾಡುವೆನೆಂದು ಹೇಳುತ್ತಾನೆ. ಆ ವೃಷಭ ಎಂಬ ರಾಕ್ಷಸನು ಪ್ರತಿದಿನವು ತುಂಬುರು ತೀರ್ಥದಲ್ಲಿ ಸ್ನಾನ ಮಾಡಿ, ಅವನ ಬಳಿಯಿರುವ ನರಸಿಂಹ ದೇವರ ಶಾಲಗ್ರಾಮವನ್ನು ಪೂಜಿಸುತ್ತಾ, ಪೂಜೆ ಮುಗಿದ ಮೇಲೆ, ಫಲ ಸಮರ್ಪಣ ರೂಪದಲ್ಲಿ ತನ್ನ ಶಿರಸ್ಸನ್ನು ಖಡ್ಗದಿಂದ ಕತ್ತರಿಸಿ ನರಸಿಂಹ ರೂಪಿಯಾದ ಆ ಶ್ರೀಹರಿಗೆ ಸಮರ್ಪಣೆ ಮಾಡುತ್ತಾ ಇದ್ದ. ಅಚ್ಚರಿಯೆಂದರೆ ಮತ್ತೆ ಅವನ ಶಿರವು ಮತ್ತೆ ಅವನ ದೇಹಕ್ಕೆ ಬಂದು ಕೂಡುತ್ತಾ ಇತ್ತು.
ಶ್ರೀ ಹರಿ ಪ್ರತ್ಯಕ್ಷವಾಗಿ ದರುಶನ ನೀಡುತ್ತಾನೆ. ಭಗವಂತನ ದರ್ಶನದಿಂದ ಆನಂದ ತಡೆಯಲಾರದೆ ಆತ ಮೂರ್ಛೆ ಹೋಗುತ್ತಾನೆ. ನಂತರ ಎಚ್ಚರವಾದ ಮೇಲೆ ಭಗವಂತನ ಬಳಿ ಹೀಗೆಂದು ಕೇಳುತ್ತಾನೆ. ಹೇ ನಾರಾಯಣ!! ನೀನು ದೋಷ ರಹಿತನು. ರಮಾ, ಬ್ರಹ್ಮಾದಿ ಸಕಲ ದೇವತೆಗಳಿಂದ ನೀನು ನಿತ್ಯ ಪೂಜೆಗೊಂಬುವನು ಮತ್ತು ಎಲ್ಲರಿಗಿಂತ ಅತ್ಯುತ್ತಮನಾದವನು ಆಗಿದ್ದೀಯಾ. ನಿನ್ನ ಬಳಿ ನಾನು ಯುದ್ಧ ಮಾಡಬೇಕು ಅನ್ನುವ ಅಪೇಕ್ಷೆ ಉಂಟಾಗಿದೆ. ಅದನ್ನು ನಡೆಸಿಕೊಡಲು ಕೇಳುತ್ತಾನೆ. ಭಗವಂತನು ತಥಾಸ್ತು! ಎಂದು ಹೇಳಿ ಅವನ ಜೊತೆಯಲ್ಲಿ ಯುದ್ಧವನ್ನು ಮಾಡುತ್ತಾನೆ. ಸಕಲ ದೇವತಾ ಋಷಿ ಪರಿವಾರ ಆಗಸದಲ್ಲಿ ನಿಂತು ಈ ಯುದ್ದವನ್ನು ನೋಡುತ್ತಾರೆ. ಅವನ ಯುದ್ದ ಕೌಶಲ್ಯ ಕಂಡು ಭಗವಂತನು ಹರ್ಷಿತನಾಗಿ ಅವನ ಶಿರವನ್ನು ತರಿಯಲು ತನ್ನ ಚಕ್ರವನ್ನು ಪ್ರಯೋಗ ಮಾಡಲು ಸಿದ್ದನಾಗುತ್ತಾನೆ. ಅದಕ್ಕೆ ಅವನು ಭಗವಂತನ ಪಾದಕ್ಕೆ ಎರಗಿ ಸ್ವಾಮಿ! ನಿನ್ನ ಚಕ್ರದ ಪ್ರಭಾವ ಕೇಳಿದ್ದೇನೆ. ಅದರಿಂದ ಮೃತನಾಗಿ ನಾನು ನಿನ್ನ ಮಂದಿರವನ್ನು ಸೇರುತ್ತೇನೆ. ಈ ಪರ್ವತಕ್ಕೆ ನನ್ನ ಹೆಸರು ಬರುವಂತೆ ಅನುಗ್ರಹ ಮಾಡು ಎಂದು ಪ್ರಾರ್ಥನೆ ಮಾಡಿದ. ಆಗ ಶ್ರೀ ಹರಿಯು ಅವನಿಗೆ ವರವನ್ನು ಇತ್ತು ಚಕ್ರದಿಂದ ಅವನನ್ನು ಸಂಹರಿಸಿ, ಮುನಿಗಳ ಕಷ್ಟವನ್ನು ಪರಿಹರಿಸಿದನು. ಈ ಕಾರಣದಿಂದ ಈ ಪರ್ವತಕ್ಕೆ ವೃಷಭಾಚಲ ಹೆಸರು ಬಂದಿತು ಎನ್ನುತ್ತಾರೆ.
ನಂತರ ತ್ರೇತಾಯುಗದಲ್ಲಿ ಕಪಿಶ್ರೇಷ್ಠನಾದ ಕೇಸರಿಯ ಪತ್ನಿಯಾದ ಅಂಜನಾ ದೇವಿಯು ಪುತ್ರ ಸಂತಾನಕ್ಕಾಗಿ ಮತಂಗ ಮುನಿಗಳ ಆದೇಶದಂತೆ ಸ್ವಾಮಿ ಪುಷ್ಕರಣಿಯಲ್ಲಿ ಸ್ನಾನ ಮಾಡಿ ವರಾಹದೇವರ ದರುಶನ ಮಾಡಿ ಆಕಾಶಗಂಗಾ ತೀರ್ಥಕ್ಕೆ ಹೋಗಿ ಬಹು ಕಠಿಣವಾದ ತಪಸ್ಸು ಇಲ್ಲಿ ಆಚರಿಸಿ ವಾಯುದೇವರ ಅನುಗ್ರಹದಿಂದ ಗರ್ಭವತಿಯಾಗಿ ಹನುಮಂತ ದೇವರನ್ನು ಮಗನಾಗಿ ಪಡೆದಳು. ಹಾಗಾಗಿ ಇದಕ್ಕೆ ಅಂಜನಾದ್ರಿ ಎಂದು ಹೆಸರು ಬಂದಿತು.
ದ್ವಾಪರ ಯುಗದಲ್ಲಿ ಒಮ್ಮೆ ಶ್ರೀ ಹರಿಯು ಲಕ್ಷ್ಮೀ ದೇವಿಯ ಜೊತೆಯಲ್ಲಿ ವೈಕುಂಠದಲ್ಲಿ ಏಕಾಂತದಲ್ಲಿ ಇದ್ದನು. ಅಂತಃಪುರದ ಬಾಗಿಲು ಕಾಯಲು ಶೇಷದೇವನ ನೇಮಿಸಿ ಯಾರನ್ನು ಒಳಗಡೆ ಬಿಡಬಾರದೆಂದು ಆಜ್ಞೆ ಮಾಡಿದ್ದನು. ಭಗವಂತನ ದರುಶನಕ್ಕೆ ವಾಯುದೇವರು ಬಂದಾಗ ಶೇಷದೇವನು ಸುವರ್ಣದಂಡ ಹಿಡಿದು ವೈಕುಂಠ ಪುರದ ಬಾಗಿಲನ್ನು ಭಗವಂತನ ಅಪ್ಪಣೆಯಂತೆ ಕಾಯುತ್ತಿದ್ದರು. ವಾಯುದೇವರಿಗೆ ಒಳಗಡೆ ಬಿಡುವುದಿಲ್ಲ. ಕಾರ್ಯ ನಿಮಿತ್ತವಾಗಿ ಬಂದಿದ್ದೇನೆ ತಡೆಯಬೇಡ!! ಅಂತ ವಾಯುದೇವರು ಹೇಳಿದರು ಸಹ, ಭಗವಂತನ ಆಜ್ಞೆಯಂತೆ ಯಾರನ್ನು ಒಳಗಡೆ ಬಿಡುವುದಿಲ್ಲ. ನೀನು ಹೋಗಕೂಡದು ಅಂತ ಹೇಳುತ್ತಾರೆ. ಅದಕ್ಕೆ ವಾಯುದೇವರು ಹಿಂದೆ ನಡೆದ ಜಯ ವಿಜಯರ ದೃಷ್ಟಾಂತ ಹೇಳಿ ಭಗವಂತನ ದರುಶನಕ್ಕೆ ಅಡ್ಡಿ ಮಾಡಿದ ಅವರ ಘಟನೆಯನ್ನು ನೆನಪು ಮಾಡಿಕೊಡುತ್ತಾರೆ. ಆದರೂ ಸಹ ಶೇಷದೇವನು ಕೋಪದಿಂದ. "ಎಲೈ !! ವಾಯುದೇವ !! ಬಹಳ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾ ಇರುವಿಯೆಲ್ಲ? ನಿನಗೆ ಬದುಕುವ ಅಪೇಕ್ಷೆ ಇಲ್ಲವೇನು?? ಕೇಳು! ನನ್ನ ಶಕ್ತಿ ಸಾಮರ್ಥ್ಯದ ಬಗ್ಗೆ ಈ ಪ್ರಪಂಚದಲ್ಲಿ ನನಗೆ ಸರಿ ಸಮಾನರಾದವರು ಯಾರೂ ಇಲ್ಲ ಮೇಲಾಗಿ ಸದಾ ಶ್ರೀ ಹರಿಗೆ ಹಾಸಿಗೆಯಾಗಿ ಅವನ ಅಂತಪುರದಲ್ಲಿ ಇರುವವನು."
ತನ್ನ ಬಗ್ಗೆ ತಾನೇ ಸ್ವಪ್ರಶಂಸೆ ಮಾಡಿಕೊಂಡ ಶೇಷದೇವನಿಗೆ ವಾಯುದೇವರು ಈ ರೀತಿ ಹೇಳುತ್ತಾರೆ. "ಹೇ ಶೇಷದೇವನೇ! ಅರಮನೆಯಲ್ಲಿ ಇರುವ ಬೆಕ್ಕು ಸಹ ರತ್ನ ಮಂಚದಲ್ಲಿ ಸುಪ್ಪತ್ತಿಗೆಯ ಮೇಲೆ ಪವಡಿಸಿರುವ ಅರಸನ ಜೊತೆ ಮಲಗಿದ್ದ ಮಾತ್ರಕ್ಕೆ ಪಟ್ಟದ ಆನೆಗೆ ಸಮವಾದೀತೇ? ಮಹಾರಾಜನ ಸೇವೆಗೆ ಇರುವ ಸೇವಕನು ಅರಸನ ಹಾಸಿಗೆಯಲ್ಲಿ ಕುಳಿತು ಪಾದ ಸೇವೆ ಮಾಡುತ್ತಾ ಇದ್ದರೆ ಅವನು ಅರಸನಿಗೆ ಸಮವಾಗುತ್ತಾನೆಯೆ?ಅದು ಅವನ ದೊಡ್ಡಸ್ತಿಕೆಯೆ ?? ರಾಜಕುಮಾರನು ಅರಸನ ಮಂಚವೇರಿಲ್ಲ ಅಂದ ಮಾತ್ರ ಅವನು ರಾಜಕುಮಾರ ಅಲ್ಲ ಅಂತ ಹೇಳಲು ಸಾಧ್ಯವೇ??. ದೊಡ್ಡವರ ಬಳಿ ಇದ್ದಾಗ ಈ ರೀತಿಯ ಅಹಂಕಾರ ವರ್ತನೆ ಸಲ್ಲದು" ಎಂದು ವಾಯುದೇವರು ಉಪದೇಶ ಮಾಡುತ್ತಾರೆ.
ಇವರಿಬ್ಬರ ಗದ್ದಲವನ್ನು ಕೇಳಿ ಲಕ್ಷ್ಮೀ ದೇವಿಯು ಭಗವಂತನ ಹತ್ತಿರ ವಿಷಯವನ್ನು ಅರುಹುವಳು. ಆಗ ಶ್ರೀಹರಿಯು ಹೊರಗಡೆ ಬಂದು. ಶೇಷ !! ಏಕಿಂತು ಕೂಗಾಡುತ್ತಿರುವೆ!! ಇಲ್ಲಿ ಯಾರಾದರು ಬೇರೆಯವರು ಬಂದಿದ್ದಾರೆಯೇ?? ಎಂದು ಪ್ರಶ್ನಿಸಲು ಅದಕ್ಕೆ ಶೇಷದೇವನು ಪ್ರಭು ಮಲಯಾಚಲವಾಸಿಯು, ಬಹು ಗರ್ವಿಷ್ಟನು, ದುರಭಿಮಾನಿಯು, ಆದ ವಾಯುದೇವನು ಆಡಬಾರದ ಮಾತುಗಳನ್ನು ಆಡುತ್ತಾ ಇದ್ದಾನೆ. ಅದಕ್ಕಾಗಿ ಈ ಕಲಹ ಎಂದು ಹೇಳುತ್ತಾನೆ..
ಭಗವಂತನು ಬಂದು ನಿಂತಿದ್ದು ಕಂಡು ವಾಯುದೇವರು ಭಕ್ತಿ ಇಂದ ನಮಸ್ಕರಿಸಿ ವಿನೀತರಾಗಿ ನಿಂತರು..
ಭಗವಂತನು ಮುಖ್ಯ ಪ್ರಾಣನನ್ನು ಕಂಡು ಕುಮಾರ!! ಪವಮಾನ!! ಅತಿ ದುರಭಿಮಾನಿಯಾದ ಆ ಶೇಷನೊಡನೆ ನಿನಗೇಕೆ ಕಲಹ?? ಎಂದು ಮಧುರವಾಣಿ ಇಂದ ನುಡಿದನು. ಇದನ್ನು ಕಂಡು ಶೇಷದೇವನಿಗೆ ಬಹು ಅಸಮಾಧಾನವಾಯಿತು. ಅಹಂಕಾರದಿಂದ ತಾನು ಮಹಾನ್ ಶಕ್ತಿಶಾಲಿ. ನನಗೆ ಸಮಾನರಾದವರು ಈ ಮೂರು ಲೋಕದಲ್ಲಿ ಸಹಾ ಯಾರು ಇಲ್ಲ ಎಂದು ಹೇಳುವನು. ಅದಕ್ಕೆ ಭಗವಂತನು ಶೇಷ !! ಬರಿಯ ಮಾತಿನಿಂದ ಯಾರೊಬ್ಬರೂ ಸಮರ್ಥ ಅಂತ ಎನಿಸುವದಿಲ್ಲ. ಕೃತಿ ಇಂದ ಅವರ ಶಕ್ತಿ ಸಾಮರ್ಥ್ಯ ನೋಡಿ ಅವರ ಸಾಮರ್ಥ್ಯವನ್ನು ನೋಡಿ ಹೇಳಬಹುದು.. ಆದ್ದರಿಂದ ನಿಮ್ಮ ಇಬ್ಬರಿಗೂ ಪರೀಕ್ಷೆ ಇಡುವೆನು. ಇಲ್ಲಿ ಉತ್ತರ ದಿಕ್ಕಿನಲ್ಲಿ ಮೇರುಪರ್ವತ ರಾಜಕುಮಾರನಾದ ಆನಂದಾದ್ರಿ ಬೆಟ್ವಿದೆ. ನೀನು ನಿನ್ನ ದೇಹವೆಂಬ ಹಗ್ಗ ದಿಂದ ಅದನ್ನು ಬಿಗಿಯಾಗಿ ಸುತ್ತುವರೆದು ಕುಳಿತಿಕೊ. ವಾಯುದೇವ ಅದನ್ನು ಹಾರಿಸಿಕೊಂಡು ಹೋಗಲಿ. ಅದರಿಂದ ಯಾರು ಶ್ರೇಷ್ಠರು ಅಂತ ತಿಳಿಯುತ್ತದೆ ಅಂತ ಆಜ್ಞೆ ಮಾಡಿದನು. ಅದರಂತೆ ಶೇಷದೇವನು ತಾನೇ ಶಕ್ತಿ ಶಾಲಿ. ತನ್ನ ಸಮ ಯಾರು ಇಲ್ಲ ಎನ್ನುವ ಅಹಂಭಾವದಿಂದ ಆ ಪರ್ವತಕ್ಕೆ ಸುತ್ತಲೂ ಬಿಗಿಯಾಗಿ ತನ್ನ ದೇಹವನ್ನು ಸುತ್ತಿ ನಿಂತನು. ಸಮಸ್ತ ದೇವತೆಗಳು ಆಗಸದಲ್ಲಿ ನಿಂತು ಈ ದೃಶ್ಯವನ್ನು ನೋಡಲು ನಿಂತರು.
ವಾಯುದೇವರು ಆನಂದಗಿರಿಯ ಸಮೀಪಕ್ಕೆ ಬಂದು ಭಗವಂತನ ನಾಮ ಸ್ಮರಣೆಯನ್ನು ಮಾಡುತ್ತಾ ತಮ್ಮ ಪಾದದ ಕಿರು ಬೆರಳಿನಿಂದ ಆನಂದಾದ್ರಿಯ ಸ್ಪರ್ಶವನ್ನು ಮಾಡುತ್ತಾರೆ. ಏನಾಶ್ಚರ್ಯ!! ಬರಿಯ ವಾಯು ದೇವರ ಕಿರುಬೆರಳಿನ ಸ್ಪರ್ಶದ ಮಾತ್ರದಿಂದಲೇ ಆ ಪರ್ವತವು ಆದಿಶೇಷನ ಸಹಿತವಾಗಿ ಭರದಿಂದ ಮೇಲಕ್ಕೆ ಹಾರಿ 51 ಸಾವಿರ ಯೋಜನದಷ್ಟು ದೂರದವರೆಗೆ ವೇಗವಾಗಿ ಹೋಯಿತು. ತನ್ನ ಪುತ್ರನಿಗೆ ಬಂದ ಗತಿಯನ್ನು ಕಂಡು ಮೇರು ಪರ್ವತವು ವಾಯುದೇವರ ಬಳಿಬಂದು ಪ್ರಾರ್ಥನೆ ಮಾಡಲು ಕರುಣಾಶಾಲಿಗಳಾದ ವಾಯುದೇವರು ಆನಂದಾದ್ರಿ ಪರ್ವತವನ್ನು ಶೇಷದೇವನ ಸಹಿತವಾಗಿ ನದಿಯ ದಡದ ಮೇಲೆ ಇರಿಸಿದರು.
ಆಗ ಸಮಸ್ತ ದೇವತೆಗಳು ಬಲ, ಜ್ಞಾನ, ಮತ್ತು ಶ್ರೀ ಹರಿಯಲ್ಲಿ ಭಕ್ತಿ ಇವುಗಳಲ್ಲಿ ನೋಡಲಾಗಿ ವಾಯುದೇವರೆ ಶ್ರೇಷ್ಠ. ಶೇಷದೇವನು ಅಲ್ಲ ಅಂತ. ನಿರ್ಣಯ ಮಾಡುತ್ತಾರೆ. ಶೇಷದೇವನ ಗರ್ವ ಪರಿಹಾರವಾಗಿ ಅವರಲ್ಲಿ ಇದ್ದ ಅಜ್ಞಾನ, ಅಹಂಕಾರ ಇಳಿದು ಹೋಗಿ ಜಗತ್ಪ್ರಾಣನಾದ, ಜೀವೊತ್ತಮರು ಆದ ಶ್ರೀ ಮುಖ್ಯ ಪ್ರಾಣದೇವರನ್ನು ಅವಹೇಳನ ಮಾಡಿದ್ದಕ್ಕಾಗಿ ಪಶ್ಚಾತ್ತಾಪ ಪಟ್ಟು ಅವರಿಗೆ ನಮಸ್ಕರಿಸಿ ನಾನು ಮಾಡಿದ ನಿಂದಾರೂಪ ಕಾರ್ಯವನ್ನು ಕ್ಷಮಿಸಿ ಅಂತ ಪ್ರಾರ್ಥನೆ ಮಾಡುತ್ತಾರೆ. ಆಗ ವಾಯುದೇವರು ಕರುಣಾಳುಗಳು, ಯಾರಲ್ಲಿಯು ದ್ವೇಷವಿಲ್ಲದವರು ಶೇಷದೇವನ ಅಪರಾಧವನ್ನು ಕ್ಷಮಿಸಿ, ಅನುಗ್ರಹ ಮಾಡಿ "ಶೇಷದೇವ ! ಇದೆಲ್ಲಾ ಶ್ರೀ ಹರಿಯ ಇಚ್ಛೆಯ ಪ್ರಕಾರ ನಡೆದಿದೆ. ಮುಂದೆ ಈ ಪರ್ವತಕ್ಕೆ ಶ್ರೀ ಹರಿಯು ಬಂದು ವಾಸ ಮಾಡುವನು. ಅದರಿಂದ ನಿನ್ನ ಹೆಸರು ಸಹ ಪ್ರಖ್ಯಾತವಾಗುವುದು" ಎಂದು ಹೇಳಿ ಅವರನ್ನು ಆನಂದಗೊಳಿಸಿದರು.
"ಹೇ! ಜನಕ ಮಹಾರಾಜ ಶೇಷದೇವನ ಗರ್ವ ಅಳಿದ ಕಾರಣದಿಂದ ಈ ಪರ್ವತಕ್ಕೆ ಶೇಷಾಚಲವೆಂದು ಪ್ರಸಿದ್ಧ ಆಯಿತು" ಎಂದು ಶತಾನಂದರು ಜನಕನಿಗೆ ಹೇಳಿದರು. ಜನಕ ಮಹಾರಾಜ!! ಕಲಿಯುಗದಲ್ಲಿ ಇದಕ್ಕೆ ವೆಂಕಟಾಚಲವೆಂದು ಹೆಸರು ಬರಲು ಕಾರಣವಾದ ಸಂಗತಿಯನ್ನು ಹೇಳುತ್ತೇನೆ ಕೇಳು. ಹಿಂದೆ ಕಾಳಹಸ್ತಿ ಎಂಬ ಪಟ್ಟಣದಲ್ಲಿ ಪುರಂದರನೆಂಬ ಬ್ರಾಹ್ಮಣನಿದ್ದನು. ಅವನಿಗೆ ಮಾಧವ ಎಂಬ ಮಗನಿದ್ದನು. ಅವನ ಪತ್ನಿ ಚಂದ್ರ ರೇಖೆ. ವೇದವೇದಾಂಗ ಪಾರಂಗತನು, ಸದಾಚಾರಯುತನು ಆದ ಮಾಧವನು ಒಂದು ದಿನ ಪತ್ನಿಯೊಂದಿಗೆ ದಿವಾ ಸಂಗಮವನ್ನು ಅಪೇಕ್ಷೆ ಪಡಲು ಅದಕ್ಕೆ ಅವನ ಪತ್ನಿಯು "ಅದು ಈ ಸಮಯದಲ್ಲಿ ಯೋಗ್ಯವಲ್ಲ" ಎಂದು ಬಹು ಹಿತನುಡಿಗಳನ್ನು ಹೇಳಿದರೂ, ಮಾಧವನು ಒಪ್ಪದೆ ವಿಹಾರಕ್ಕೆ ಕರೆದನು. ಆಗ ಅವನ ಪತ್ನಿಯು ಧರ್ಭೆ ತರುವ ನೆಪದಲ್ಲಿ ನೀವು ನದಿಯ ಕಡೆ ಹೋಗಿ ನಾನು ನೀರಿನ ನೆಪದಿಂದ ಬರುತ್ತೇನೆ ಎಂದು ಹೇಳಿ ಅದರಂತೆ ಬಂದಳು. ಅದೇ ಸಮಯದಲ್ಲಿ ವನದಲ್ಲಿ ಶ್ವೇತವಸ್ತ್ರ ಧಾರಿಣಿಯಾಗಿಯು, ಸುಂದರಿಯು ಆದ ಕುಂತಳಾ ಎಂಬ ಚಂಡಾಲ ಕನ್ಯೆಯನ್ನು ಮಾಧವನು ನೋಡಿ ಅವಳಲ್ಲಿ ಮೋಹಗೊಳ್ಳುವನು. ಅವಳಲ್ಲಿ ಅನುರಕ್ತನಾದ ಮಾಧವನು ಹೆಂಡತಿಯು ಬಂದದ್ದು ನೋಡಿ “ಪ್ರಿಯೆ!! ನಿನ್ನ ಪತಿಭಕ್ತಿಯನ್ನು ಪರೀಕ್ಷೆ ಮಾಡಲು ಇಲ್ಲಿಗೆ ಬರಹೇಳಿದ್ದು. ನಿನ್ನ ಭಕ್ತಿ ಯನ್ನು ಕಂಡು ಸಂತೋಷವಾಗಿದೆ. ನೀನಿನ್ನು ಮನೆಗೆ ತೆರಳು” ಎಂದು ಹೇಳಲು ಹರ್ಷಿತಳಾದ ಅವಳು ಮನೆಗೆ ತೆರಳಿದಳು. ನಂತರ ಪತ್ನಿ ಹೋಗಿದ್ದು ನೋಡಿ ಆ ಕುಂತಳೆಯ ಬಳಿ ಸಾರಿ ತನ್ನ ಆಸೆಯನ್ನು ಅವಳಿಗೆ ತಿಳಿಸುವನು. ಅವಳಾದರು ಅನೇಕ ಧರ್ಮ ಶಾಸ್ತ್ರ ,ನೀತಿ, ತತ್ವಗಳನ್ನು, ಹೇಳಿ ಚಂಡಾಲ ಸ್ತ್ರೀಯ ಸಂಗಮ ನಿನಗೆ ವಿಹಿತವಲ್ಲವೆಂದು ಹೇಳಿದರೂ ಮಾಧವನು ಕಾಮಾಂಧನಾಗಿ ಅವಳನ್ನು ಬಲಾತ್ಕರಿಸುತ್ತಾನೆ. ಆಗ ಕುಂತಳೆಯು ಅವನಿಗೆ "ಇಂದಿನಿಂದ ನೀನೆ ನನ್ನ ಪತಿ ನಿನ್ನ ಬ್ರಾಹ್ಮಣ್ಯವನ್ನು ತ್ಯಜಿಸಿ ಚಂಡಾಲ ಕರ್ಮವನ್ನು ಸ್ವೀಕರಿಸು" ಎಂದು ಹೇಳಿದಳು.
ವಿಧಿಯಿಂದ ಪ್ರೇರಿತನಾದ ವೇದಪಂಡಿತನಾದ ಮಾಧವನು ಅವಳ ಮೇಲಿನ ಮೋಹದಿಂದ ತನ್ನ ಯಜ್ನೋಪವಿತವನ್ನು ಕಿತ್ತು ಎಸೆದು, ತಲೆಯನ್ನು ಬೋಳಿಸಿಕೊಂಡು, ಮಾಂಸ ಮಧ್ಯವನ್ನು ಸೇವಿಸುತ್ತಾ ಅವಳ ಜೊತೆಯಲ್ಲಿ ವಾಸ ಮಾಡಿದ. ಹೀಗೆ ಅವಳ ಅಂಗ ಸಂಗ ಮಾಡಿ ಹನ್ನೆರಡು ವರ್ಷಗಳ ಕಾಲ ಸಂಸಾರವನ್ನು ಅವಳ ಜೊತೆಯಲ್ಲಿ ಮಾಡುತ್ತಾನೆ. ಆವ ಕಾಲ ತಪ್ಪಿಸಿದರು ಸಾವ ಕಾಲ ತಪ್ಪಿಸನು ಅನ್ನುವಂತೆ ಈ ದೇಹವು ಅಶಾಶ್ವತವಾದ್ದರಿಂದ ಕುಂತಳೆಯು ಕೃಷ್ಣ ವೇಣಿ ತೀರದಲ್ಲಿ ಇರುವಾಗ ಮರಣ ಹೊಂದಿದಳು. ಪ್ರಿಯಕರಳ ಮರಣದಿಂದ ದುಃಖದಿಂದ ಮಾಧವನು ಹುಚ್ಚು ಹಿಡಿದವನಂತೆ ಅಲೆಯುತ್ತಾ ಉತ್ತರ ದೇಶದ ರಾಜರು ಶೇಷಾಚಲ ಯಾತ್ರೆ ಹೊರಟಿರುವದನ್ನು ನೋಡಿ ಅವರ ಜೊತೆಯಲ್ಲಿ ತಾನು ಹೊರಡುತ್ತಾನೆ. ಅವರು ಉಂಡು ಉಳಿಸಿದ ಎಂಜಲನ್ನವನ್ನು ತಿನ್ನುತ್ತಾ ದೈವಯೋಗದಿಂದ ಶೇಷಾಚಲ ಪರ್ವತಕ್ಕೆ ಬರುತ್ತಾನೆ. ಆ ರಾಜರು ಕಪಿಲ ತೀರ್ಥದಲ್ಲಿ ಸ್ನಾನ ಮಾಡಿ ಭಕ್ತಿಯಿಂದ ತೀರ್ಥ ಕ್ಷೇತ್ರದ ಪದ್ದತಿಯ ಪ್ರಕಾರ ಕೇಶ ಮುಂಡನ ಮಾಡಿಸಿಕೊಂಡು ತಮ್ಮ ಹಿರಿಯರ ಶ್ರಾದ್ಧ ಕರ್ಮಗಳನ್ನು ಮಾಡಿ ಪಿಂಡ ಪ್ರಧಾನ ಮಾಡುತ್ತಾರೆ. ಮಾಧವನು ಸಹ ಅವರಂತೆ ಕಪಿಲ ತೀರ್ಥದಲ್ಲಿ ಸ್ನಾನ ಮಾಡಿ ಶಿರೋ ಮುಂಡನ ಮಾಡಿಸಿಕೊಂಡು ತನ್ನ ಪಿತೃಗಳಿಗೆ ಮಣ್ಣಿನಿಂದ ಪಿಂಡ ಪ್ರಧಾನ ಮಾಡಿದನು. ಪೂರ್ವಜನ್ಮದಲ್ಲಿ ಮಾಡಿದ ಸುಕೃತದ ಫಲದಿಂದ ಅವನ ಪಾಪಗಳೆಲ್ಲ ಪರಿಹಾರವಾಯಿತು. ಆದುದರಿಂದ ಯಾರೇ ಆಗಲಿ ಭಕ್ತಿ ಇಂದ ಕಪಿಲ ತೀರ್ಥದಲ್ಲಿ ಅವಗಾಹನ ಮಾಡಿ ಸ್ನಾನ ಮಾಡಿದರೆ ಅವರ ಪಾಪರಾಶಿ ನಾಶವಾಗುವದು. ಅನಾದಿಯು ಪುಣ್ಯ ಪ್ರದವು ಆದ ಶೇಷಾದ್ರಿಯಲ್ಲಿ ಮಾಧವನು ಮಣ್ಣಿನಿಂದ ಮಾಡಿದ ಪಿಂಡ ಪ್ರಧಾನ ಮಾಡಿದ್ದಕ್ಕಾಗಿ ಅವನ ಪಿತೃಗಳು ಶ್ರೀ ಹರಿಯ ಕೃಪೆ ಇಂದ ಶಾಶ್ವತವಾದ ಸುಖವನ್ನು ಪಡೆದರು.
ಮರುದಿನರಾಜನ ಪರಿವಾರ ಆ ಬೆಟ್ಟವನ್ನು ಏರುವಾಗ ಇವನು ಸಹ ಅವರನ್ನು ಅನುಸರಿಸಿ ಬೆಟ್ಟದ ತುದಿಯ ಭಾಗಕ್ಕೆ ಬಂದಾಗ, ಆ ಪರ್ವತದ ಸ್ಪರ್ಶ ಮಾತ್ರದಿಂದ ಅವನ ಪಾಪರಾಶಿಯೆಲ್ಲವು ಸುಟ್ಟು ಬೂದಿಯಾಯಿತು. "ಹೇಗೆ ನೊಣವನ್ನು ನುಂಗಿದವನು ವಾಂತಿ ಮಾಡುವನೊ", ಅದರಂತೆ ಅವನ ಹೊಟ್ಟೆಯಲ್ಲಿ ಇದ್ದ ಪಾಪ ಕಲ್ಮಶವೆಲ್ಲ ಹೊರ ಹೊಮ್ಮಿದವು. ವೆಂಕಟಗಿರಿಯ ಮಹಿಮೆ ಇಂದ ಅವನ ದೇಹದಿಂದ ಉದ್ಬವಿಸಿದ ಒಂದಾನೊಂದು ಬೆಂಕಿಯು ಪ್ರಜ್ವಲಿಸಿ ಅಂತ್ಯಜಳಾದ ಸ್ತ್ರೀ ಸಂಗಮ, ಮದ್ಯ , ಮಾಂಸ ಭಕ್ಷಣದಿಂದ ಬಂದ ಪಾಪ ಇವುಗಳನ್ನು ಸುಟ್ಟು ಹಾಕಿತು. ಆಗ ಬಂದ ದುರ್ವಾಸನೆಯ ದಟ್ಟ ಹೊಗೆ ಸಕಲ ಲೋಕಗಳಿಗು ತಲುಪಿತು. ತನ್ನ ಪಾಪವನ್ನು ವೆಂಕಟಗಿರಿಯ ಮಹಿಮೆ ಇಂದ ಕಳೆದುಕೊಂಡ ಮಾಧವನಿಗೆ ಅನುಗ್ರಹ ಮಾಡಲು ಸಕಲ ದೇವತೆಗಳು, ಬ್ರಹ್ಮ ರುದ್ರಾದಿ ದೇವತೆಗಳು ತಮ್ಮ ಕಾಂತಿಯಿಂದ ಅಲ್ಲಿಗೆ ಆಗಮಿಸಿದರು. ದೇವತೆಗಳು ಅವನ ಮೇಲೆ ಪುಷ್ಪ ವೃಷ್ಟಿಯನ್ನು ಕರೆದರು.
ವೇದ ಪ್ರತಿಪಾದ್ಯನು ಕಾಂತಿ ಸಂಪನ್ನನು, ಸರಸ್ವತಿ ದೇವಿಯ ಪತಿಯಾದ ಭಗವಂತನ ನಾಭಿ ಕಮಲದಿಂದ ಜನಿಸಿದ ಬ್ರಹ್ಮ ದೇವನು ಮಾಧವನ ಸಮೀಪಕ್ಕೆ ಬಂದು ಅವನ ತಲೆಯನ್ನು ಸ್ಪರ್ಶಿಸಿ ಇಂತೆಂದು ಹೇಳುತ್ತಾರೆ.. ವತ್ಸ!! ಮಾಧವ!! ನಿನ್ನ ಪಾಪಗಳು ಪರಿಹಾರವಾದವು. ನೀನು ಸ್ವಾಮಿ ಪುಷ್ಕರಣಿಯಲ್ಲಿ ಸ್ನಾನ ಮಾಡಿ ಶ್ರೀ ವರಾಹ ರೂಪಿಯಾದ ಶ್ರೀ ಹರಿಯನ್ನು ಧ್ಯಾನಿಸುತ್ತಾ ನಿನ್ನ ದೇಹವನ್ನು ತ್ಯಜಿಸು... ಮುಂದೆ ಪಾಂಡವರ ದೌಹಿತ್ರರ ವಂಶದಲ್ಲಿ ನೀನು ಜನಿಸಿ ಅತ್ಯಂತ ಕೀರ್ತಿ ಸಂಪನ್ನನಾಗಿ ಮಹಾರಾಜನಾಗಿ ರಾಜ್ಯ ಭಾರವನ್ನು ಮಾಡುವೆ. ಸುಧರ್ಮರಾಜನ ಮಗನಾಗಿ ಆಕಾಶರಾಜನೆಂಬ ಹೆಸರಿನಿಂದ ದಕ್ಷಿಣ ದೇಶದಲ್ಲಿ ಇರುವ ತೋಂಡದೇಶಕ್ಕೆ ಅಧಿಪತಿಯಾಗುವೆ. ಎಲೈ !!ಮಾಧವನೇ ನಿನ್ನ ಭಾಗ್ಯವೇನೆಂದು ಹೇಳಲಿ!! ಲೋಕಕ್ಕೆ ಹಾಗು ನನಗು ಜನನಿಯಾದ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯು ನಿನಗೆ ಮಗಳಾಗಿ ಬರುವಳು. ಸಕಲ ಜಗತ್ತಿನ ಹಾಗು ನನಗೆ ಸಹ ಪ್ರಭುವಾದ, ನನ್ನ ಪಿತನಾದ ಆ ದೇವ ದೇವನಾದ ಶ್ರೀಮನ್ ನಾರಾಯಣನು ನಿನಗೆ ಅಳಿಯನಾಗುವನು. ಬಹುಕಾಲ ರಾಜ್ಯದ ಭಾರವನ್ನು ಮಾಡಿ ಅನಂತರ ಮೋಕ್ಷವನ್ನು ಪಡೆಯುತ್ತೀಯೇ ಎಂದು ಹೇಳಿ ವರವನ್ನು ಕರುಣಿಸಿ ಆಶೀರ್ವಾದ ಮಾಡಿ ಬ್ರಹ್ಮ ದೇವರು ಅದೃಶ್ಯರಾದರು. ಮಾಧವನ ಸಕಲ ಪಾಪವನ್ನು ಹರಣ ಮಾಡಿದ್ದರಿಂದ ಆ ಪರ್ವತಕ್ಕೆ ವೆಂಕಟಾಚಲವೆಂದು ಸಕಲ ದೇವತೆಗಳು ಹೆಸರನ್ನು ಇಟ್ಟರು. ಪಾಪವನ್ನು ಸುಡುವದರಿಂದ, ಪಾಪ ದಹನ ಶಕ್ತಿ ಯುಕ್ತವಾದ್ದರಿಂದ ಆ ಪರ್ವತಕ್ಕೆ ವೆಂಕಟಾಚಲವೆಂದು ಹೆಸರು ಬಂದಿತು. ಎಲೈ ಜನಕ ರಾಜನೇ! ಪ್ರಾತಃ ಕಾಲದಲ್ಲಿ ಯಾರು ಈ ವೆಂಕಟಗಿರಿಯನ್ನು ಸ್ತುತಿಸುವರೋ, ಕೀರ್ತಿಸುವರೋ ಅಂಥವರಿಗೆ ದೊರಕುವ ಸುಕೃತ ಫಲವನ್ನು ಹೇಳುವೆನು ಕೇಳು. ಸಮಗ್ರಭೂಮಿ, ಗಂಗಾನದಿ, ರಾಮಸೇತುಗಳ ಯಾತ್ರೆ ಮಾಡಿದರೆ ಎಷ್ಟು ಫಲವೋ ಅದಕ್ಕೆ ಸಾವಿರ ಪಟ್ಟು ಫಲವು ಅಧಿಕ ಪುಣ್ಯವು ಬರುವದು. ಬಹು ಪುಣ್ಯಕರವಾದ ಮಂಗಳಕರವಾದ ಈ ವೆಂಕಟಗಿರಿಯ ಮಹಾತ್ಮೆಯನ್ನು ನಿನಗೆ ಹೇಳಿದ್ದೇನೆ. ಇದನ್ನು ಶ್ರವಣ, ಪಾರಾಯಣ ವನ್ನು ಭಕ್ತಿ ಇಂದ ಮಾಡಿದರೆ ಶುಭ ಪ್ರದವಾಗುವದು ಎಂದು ಹೇಳಿದರು.
ಇಂತು ಭವಿಷ್ಯೊತ್ತರ ಪುರಾಣದ ಶ್ರೀ ವೆಂಕಟೇಶ ಮಹಾತ್ಮೆ ಯ ಚತುರ್ಯುಗಗಳ ಮಹಿಮೆಯನ್ನು ವರ್ಣನೆ ಮಾಡುವ ಮೊದಲನೆಯ ಅಧ್ಯಾಯ ಮುಗಿಯಿತು. ಇದನ್ನು ಕೇಳಿ ಸಂತುಷ್ಟನಾದ ಜನಕನು ಆನಂದಾದ್ರಿ ಪರ್ವತಕ್ಕೆ ಶ್ರೀ ಹರಿಯು ಬಂದು ವಾಸ ಮಾಡಿದ ಬಗೆಯನ್ನು ಕೇಳುತ್ತಾನೆ.
******
ಹೇ ರಾಜನ್!! ಕೇಳು! ಪೂರ್ವದಲ್ಲಿ ಸಕಲ ಮುನಿಶ್ರೇಷ್ಟರು ಗಂಗಾನದಿಯ ತಟದಲ್ಲಿ ಒಂದು ಶ್ರೇಷ್ಠವಾದ ಯಜ್ಞ ವನ್ನು ಆಚರಿಸಿದರು. ಆ ಯಾಗ ನಡೆಯುವ ಸುಸಂಧರ್ಭದಲ್ಲಿ ದೇವರ್ಷಿಯಾದ ನಾರದರು ಅಲ್ಲಿಗೆ ಆಗಮಿಸಿ ಕಶ್ಯಾಪಾದಿ ಋಷಿಗಳನ್ನು ನೋಡಿ ಈ ಉತ್ತಮವಾದ ಯಜ್ಞವನ್ನು ಯಾವ ಉದ್ದೇಶದಿಂದ ಮಾಡುವಿರಿ?? ಈ ಯಜ್ಞಕ್ಕೆ ದೇವತೆ ಯಾರು?? ಮತ್ತು ಈ ಯಜ್ಞದ ಫಲವನ್ನು ಯಾವ ಸರ್ವೋತ್ತಮ ದೇವತೆಗೆ ಅರ್ಪಿಸುವಿರಿ?? ಶ್ರೀಹರಿಗೋ??ವಾರಿಜೋದ್ಬವನಿಗೋ?? ಅಥವಾ ಶಂಕರನಿಗೋ?? ಅಂತ ಕೇಳಿದಾಗ ಸಕಲ ಮುನಿಗಳಲ್ಲಿ ಇದರ ಬಗ್ಗೆ ಚರ್ಚೆ ಯಾಗಿ ನಿಜ ಇದನ್ನು ಯಾರಿಗೆ ಅರ್ಪಿಸಬೇಕು ಎಂದು ಚರ್ಚಿಸಿ ಕೊನೆಗೆ ಸಾಧ್ಯವಾಗದೇ ಋಷಿಗಳ ಸಮೂಹದಲ್ಲಿ ಶ್ರೇಷ್ಠರಾದ ಭೃಗು ಮುನಿಗಳ ಹತ್ತಿರ ಬಂದು ಸ್ವಾಮಿ ಭೃಗುಮುನಿಗಳೇ!! ದೇವತೆಗಳಲ್ಲಿ ಉತ್ತಮನಾದ ಪರಮ ಪುರುಷನು ಯಾರೆಂದು ತಿಳಿದು ಬರಲು ದಯಮಾಡಿ ಹೊರಡಿರಿ ಎಂದು ಕೋರಿದರು. ಆಗ ಭೃಗು ಮುನಿಗಳು ಅವರ ಕೋರಿಕೆಯನ್ನು ಮನ್ನಿಸಿ ಸರ್ವೋತ್ತಮ ದೇವತೆ ಯಾರೆಂದು ತಿಳಿಯಲು ಕಮಲ ಮಂದಿರನಾದ ಸತ್ಯಲೋಕದಲ್ಲಿ ಸರಸ್ವತಿ ಸಮೇತನಾಗಿ ಇರುವ ಬ್ರಹ್ಮದೇವರ ಬಳಿ ಬಂದರು. ಆ ಸಮಯದಲ್ಲಿ ನಾಲ್ಕು ಮುಖಗಳಿಂದ ಬ್ರಹ್ಮ ದೇವರು ವೇದಘೋಷವನ್ನು ಮಾಡುತ್ತಾ ಇದ್ದರು. ಅವರಿಗೆ ಭಕ್ತಿ ಇಂದ ನಮಸ್ಕರಿಸಿದರು ಸಹ. ಬ್ರಹ್ಮ ದೇವರು ಭೃಗು ಋಷಿಗಳ ಕಡೆ ಗಮನ ಹರಿಸಲಿಲ್ಲ. ನೋಡಿದರು, ಮಾತನಾಡಿಸದೆ ಸುಮ್ಮನೆ ಮೌನ ವಹಿಸಿದರು. ಶ್ರೀ ಹರಿ ಸರ್ವೋತ್ತಮ ಸಿದ್ದಾಂತ ಸ್ಥಾಪಿಸಲೋಸುಗ ಅವರು ಸುಮ್ಮನೆ ಸರಸ್ವತಿ ದೇವಿಯರೊಡನೆ ಧ್ಯಾನಾಸಕ್ತರಾಗಿ ಕುಳಿತಿದ್ದರು. ಇದನ್ನು ಕಂಡ ಭೃಗು ಮುನಿಗಳು ಬ್ರಹ್ಮ ದೇವನು ಸ್ವಲ್ಪ ಅಜ್ಞಾನ ಉಳ್ಳವನಾಗಿದ್ದಾನೆ, ಆದ್ದರಿಂದ ಇವನು ಸರ್ವೋತ್ತಮ ದೇವತೆ ಅಲ್ಲವೆಂದು ತಿಳಿದು ಕಲಿಯುಗದಲ್ಲಿ ಇವರ ಪೂಜೆ ಆಗದಿರಲಿ ಎಂದು ಶಾಪವನ್ನು ಕೊಟ್ಟು ಮುಂದೆ ಕೈಲಾಸ ಪರ್ವತಕ್ಕೆ ಬರುವರು. ಭೃಗುಋಷಿಗಳು ಸತ್ಯಲೋಕದಿಂದ ಕೈಲಾಸ ಪರ್ವತಕ್ಕೆ ಹೋದಾಗ ಅಲ್ಲಿ ರುದ್ರದೇವರು ತಮ್ಮ ಪತ್ನಿಯಾದ ಪಾರ್ವತಿದೇವಿಯರೊಂದಿಗೆ ಏಕಾಂತದಲ್ಲಿದ್ದರು. ಅಲ್ಲಿಯು ಸಹ ರುದ್ರದೇವರು "ಶ್ರೀಹರಿಯೇ ಸರ್ವೋತ್ತಮ"ನೆಂದು ತಮ್ಮಿಂದಲೂ ಸ್ಥಾಪಿಸಬೇಕೆಂದು ಭೃಗುಋಷಿಗಳು ಬಂದದ್ದನ್ನು ನೋಡದಂತೆ ನಟಿಸಿ, ಅವರ ಯೋಗ-ಕ್ಷೇಮವನ್ನು ವಿಚಾರಿಸದೆ, ತಮ್ಮ ಪತ್ನಿಯೊಡನೆಯಿರುವ ಏಕಾಂತಕ್ಕೆ ಭಂಗ ತಂದಿರುವಿರೆಂದು ಋಷಿಗಳಿಗೆ ತಮ್ಮ ತ್ರಿಶೂಲದಿಂದ ಸಂಹರಿಸಲು ಹೋದಂತೆ ನಟಿಸಿದಾಗ, ಅಗ ಭೃಗು ಋಷಿಗಳು ಕೋಪದಿಂದ "ಭೋಗಾಸಕ್ತರಾದ ನಿಮಗೆ ಇನ್ನು ಮುಂದೆ ಭೂ-ಲೋಕದಲ್ಲಿ ನಿಮ್ಮ ಮೂರ್ತಿಯನ್ನು ಪೂಜಿಸದೆ ಲಿಂಗ ಪೂಜೆಯಾಗಲಿ"ಎಂದು ಶಾಪವನ್ನು ಕೊಡುತ್ತಾರೆ. ಅವರು ಕೊಟ್ಟು ಶಾಪವನ್ನು ತೆಗೆದುಕೊಂಡು ಪರಮ ವೈಷ್ಣವಾಗ್ರೇಸರಾದ ಹಾಗು ಮನೋನಿಯಾಮಕರಾದ ರುದ್ರದೇವರೆ ವೈಕುಂಠ ಲೋಕಕ್ಕೆ ಹೋಗುವಂತೆ ಭೃಗುಋಷಿಗಳಿಗೆ ಮನಃ ಪ್ರೇರಿಸಿದರು. ಆ ನಂತರ ವೈಕುಂಠಕ್ಕೆ ಬಂದರು.
ಅಲ್ಲಿ ಶ್ರೀ ಮನ್ನಾರಾಯಣನು ಶೇಷಮಂಚದಲ್ಲಿ ಸುಪ್ಪತ್ತಿಗೆ ಮೇಲೆ ನಿದ್ರಾ ವಶದವನಂತೆ ನಟನೆ ಮಾಡುತ್ತಾ ಪವಡಿಸಿದ್ದನು. ಇದನ್ನು ಕಂಡ ಭೃಗು ಋಷಿಗಳು ಪರಮ ಕೋಪದಿಂದ ಶ್ರೀ ಹರಿಯ ವಕ್ಷಸ್ಥಳಕ್ಕೆ ತಮ್ಮ ಪಾದದಿಂದ ತಾಡನೆ ಮಾಡಿದರು. ತಕ್ಷಣ ರಮಾಪತಿಯು ಮೇಲೆದ್ದು ತಾನು ಅಪರಾಧ ಮಾಡಿದವನಂತೆ ಕ್ಷಮೆ ಯಾಚಿಸುತ್ತಾ “ಯಾಕೆನ್ನ ಮೇಲೆ ಇಷ್ಟು ಸಿಟ್ಟು?? ನೀ ಬೇಕಾದ್ದು ಕೇಳು ಕೊಡುವೆನು ಕಾಲಕಾಲಕ್ಕೆ... ಸುಮ್ಮನೆ ಯಾರಿಗು ತಿಳಿಸದೇ ನನ್ನ ಮನೆಗೆ ಬಂದು ಒದ್ದ ಕಾರಣವೇನು?? ನನ್ನ ವಜ್ರ ಕಠಿಣವಾದಂತಹ ಎದೆಗೆ ಒದ್ದು ನಿಮ್ಮ ಮೃದುವಾದ ಕೋಮಲವಾದ ಪಾದ ಎಷ್ಟು ನೊಂದಿತೋ ನಾನರಿಯೇ!! ಅಂತ ಹೇಳಿ ಭೃಗು ಋಷಿಗಳನ್ನು ಅರ್ಘ್ಯಪಾದಾದಿಗಳಿಂದ ಸತ್ಕರಿಸಿ ಆ ಪಾದೋದಕವನ್ನು ತಾನು ಶಿರಸ್ಸಿನಲ್ಲಿ ಧರಿಸಿ, ತನ್ನ ಪತ್ನಿಯಾದ ರಮಾದೇವಿಯರಿಗು ಪ್ರೋಕ್ಷಣೆ ಮಾಡಿ, ಎಲ್ಲಾ ಕಡೆಗೆ, ತನ್ನ ಸಕಲ ಪರಿವಾರದವರಿಗು ಪ್ರೋಕ್ಷಣೆಯನ್ನು ಶ್ರೀ ಹರಿಯು ಮಾಡುತ್ತಾನೆ. ಭೃಗು ಋಷಿಗಳು ಭೂಲೋಕಕ್ಕೆ ಬಂದು ಶ್ರೀ ಹರಿಯೇ ಸರ್ವೋತ್ತಮನೆಂದು ಎಲ್ಲರಿಗೂ ಉಪದೇಶ ಮಾಡಿದರು.ಸಕಲ ಋಷಿಗಳು ಪರಮ ಪುರುಷನಾದ ಆ ಶ್ರೀ ಹರಿಗೆ ಯಜ್ಞ ಫಲವನ್ನು ಸಮರ್ಪಣೆ ಮಾಡಿದರು.
********
ಇತ್ತ ಭೃಗು ಋಷಿಗಳು ವೈಕುಂಠದಿಂದ ಹೊರಟು ಹೋದ ಮೇಲೆ, ಏಕಾಂತದಲ್ಲಿ ರಮಾದೇವಿಯ ಜೊತೆಯಲ್ಲಿ ಭಗವಂತನು ಇರುವಾಗ ಮಹಾಲಕ್ಷ್ಮಿ ದೇವಿಯ "ಜಗನ್ನಿಯಾಮಕನಾದ, ದೇವೋತ್ತಮನಾದ ಪ್ರಭುವೇ, ನಾನು ನಿನ್ನನ್ನು ತೊರೆದು ಹೋಗುವೆನು. ನಿನ್ನ ಶ್ರೀವತ್ಸ ಸದಾ ಎನ್ನ ಆಲಿಂಗನವನ್ನು ಮಾಡಿಕೊಂಡಿರುವದು.
ಅಂತಹ ಸ್ಥಳ ಭೂಸುರನಿಂದ ಪಾದದಿಂದ ಸ್ಪರ್ಶವಾಗಿದೆ. ಹಾಗಾಗಿ ನಾನು ಇಲ್ಲಿ ಇರುವುದಿಲ್ಲ. ಎಲ್ಲರಿಗಿಂತ ಉತ್ತಮನು ನೀನು ಎಂದು ಇಲ್ಲಿ ಇದ್ದೆ. ನಿನಗೆ ಭಕ್ತವತ್ಸಲ ಎಂಬ ಬಿರುದು ಬೇಕಾಗಿತ್ತು ಅಂದರೆ ಈ ತರ ಮಾನವ ಚರಣವನ್ನು ಎದೆಯಲ್ಲಿ ಧರಿಸುವದು ಸರಿಯೇ!! ಕರವೀರಪುರಕ್ಕೆ ಹೋಗುತ್ತೇನೆ ಅಂತ ಹೇಳಿ ಜಗನ್ಮಾತೆಯು ಪ್ರೇಮ ಕಲಹವನ್ನು ನಟಿಸಿ ವೈಕುಂಠ ಪುರವನ್ನು ಬಿಟ್ಟು ಕರವೀರಪುರಕ್ಕೆ ಬರುತ್ತಾಳೆ.
ದ್ವಾಪರಯುಗದ ಕೊನೆಯ ಭಾಗದಲ್ಲಿ ಕಲಿಯುಗದಲ್ಲಿ ಮಹಾಲಕ್ಷ್ಮಿಯು ಕರವೀರಪುರಕ್ಕೆ ತೆರಳಿದ ಮೇಲೆ ಭಗವಂತನು ಸಿರಿ ಇಲ್ಲದ ವೈಕುಂಠ ಸರಿ ಬಾರದು ಎನಗೆ, ಏನು ಮಾಡಲಿ !! ನನ್ನ ಕಣ್ಣಿಗೆ ವೈಕುಂಠ ಅರಣ್ಯದಂತೆ ತೋರುತ್ತಿದೆ!!... ಎಲ್ಲಿ ಹೋಗಲಿ?? ಅಂತ ಚಿಂತೆ ಮಾಡುವರಂತೆ, ನಟಿಸುತ್ತಾ ಯಾವುದೇ ಚಿಂತೆ, ಸಂತಾಪ, ಮುಂತಾದ ದೋಷ ವಿದೂರನಾಗಿದ್ದರು, ಸ್ವರಮಣನಾದ ಶ್ರೀ ಹರಿಯು ರಮಾದೇವಿಯ ವಿರಹ ದುಃಖವನ್ನು ತಾಳದವನಂತೆ ನಟಿಸುತ್ತಾ ಆಜ್ಞ ಜನರನ್ನು ಮೋಹಗೊಳಿಸುತ್ತಾ , ವೈಕುಂಠ ವನ್ನು ಬಿಟ್ಟು ಸುವರ್ಣಮುಖಿ ನದಿಯ ತಟದಲ್ಲಿ ಹಿಂದೆ ವಾಯುದೇವರು ಶೇಷದೇವನ ಗರ್ವಭಂಗವನ್ನು ಮಾಡಿದ ಶೇಷಾಚಲಕ್ಕೆ ಬಂದು ಸ್ವಾಮಿ ಪುಷ್ಕರಣಿ ತೀರದಲ್ಲಿ ಹುಣಿಸೇ ಮರದ ಬುಡದಲ್ಲಿ ಇರುವ ವಲ್ಮೀಕದಲ್ಲಿ ಅವಿತುಕೊಂಡು ರಹಸ್ಯವಾಗಿ ವಾಸಮಾಡತೊಡಗಿದನು.
ಶೇಷಾಚಲವೂ ಅನೇಕ ಜಾತಿಯ ಗಿಡ ಮರಗಳಿಂದ, ಫಲ ಪುಷ್ಪಗಳಿಂದ, ವೃಕ್ಷಭರಿತವಾದ ಪರ್ವತ.ಅನೇಕ ಜಾತಿಯ ಪಕ್ಷಿಗಳು, ಮೃಗಗಳು ಮತ್ತು ಅನೇಕ ಬಗೆಯ ಹೂ ಬಳ್ಳಿ ಗಳು ಹೀಗೆ ಅದರಲ್ಲಿ ಅಲಂಕೃತವಾಗಿದೆ. ಇಂತಹ ಮನೋಹರವಾದ ನಯನಾನಂದವಾದ ಸಕಲ ವೃಕ್ಷ, ಸಂಪತ್ತನ್ನು ಹೊಂದಿದ ವೆಂಕಟಾಚಲಕ್ಕೆ ಸ್ವಾಮಿ ಆಗಮಿಸಿ ಹುತ್ತದಲ್ಲಿ ವಾಸ ಮಾಡಿದನು..
ಇಂತು ಭವಿಷ್ಯೊತ್ತರ ಪುರಾಣ ಅಂತರ್ಗತವಾದ ಶ್ರೀ ವೆಂಕಟೇಶ ಮಹಾತ್ಮೆಯ ಶೇಷಗಿರಿ ಪರ್ವತದ ವರ್ಣನೆ ಎಂಬ ಎರಡನೆಯ ಅಧ್ಯಾಯ ಮುಗಿಯಿತು
*****
ಶತಾನಂದರು ಮುಂದುವರೆಸಿದರು ಎಲೈ! ರಾಜನೇ ಕೇಳು. ಶ್ರೀ ವೆಂಕಟಗಿರಿಯ ಮೇಲ್ಭಾಗದಲ್ಲಿ ಸ್ವಾಮಿ ಪುಷ್ಕರಣಿ ಎಂಬ ಪವಿತ್ರ ತೀರ್ಥವು ವಿರಾಜಿಸುತ್ತಿದೆ. ಅದು ಬಹು ಉತ್ತಮ ವಾದ ತೀರ್ಥವು. ಸಕಲ ಜಲಚರಗಳಿಂದ ಅದುಕೂಡಿದೆ. ಸಕಲ ನದಿತೀರ್ಥಗಳಿಂದ ಕೂಡಿದ ಆ ಪುಷ್ಕರಣಿಯಲ್ಲಿ ಸ್ನಾನ ಮಾಡುವವರು ಕೃತಾರ್ಥರು ಮತ್ತು ಪುಣ್ಯ ಶಾಲಿಗಳು.
ಸೂರ್ಯನು ಧನುರಾಶಿಯಲ್ಲಿ ಇರುವಾಗ ಶುಕ್ಲ ಪಕ್ಷದ ದ್ವಾದಶಿಯ ದಿನದಂದು ಅರುಣೋದಯ ಕಾಲದಲ್ಲಿ ಸಮಸ್ತ ದೇವತೆಗಳು, ಋಷಿಗಳು ಪರಮ ಮಂಗಳಕರವಾದ ಸ್ವಾಮಿ ಪುಷ್ಕರಣಿಯಲ್ಲಿ ಸ್ನಾನ ಮಾಡಲು ಅಪೇಕ್ಷೆ ಪಡುತ್ತಾರೆ.. ಹಿಂದೆ ಶಂಕನೆಂಬ ರಾಜನು ಸ್ವಾಮಿ ಪುಷ್ಕರಣಿಯಲ್ಲಿ ಸ್ನಾನ ಮಾಡಿದ ಮಾತ್ರ ದಿಂದಲೇ ಸ್ವರ್ಗಲೋಕವನ್ನು ಪಡೆದನು.. ಪೂರ್ವದಲ್ಲಿ ನಾರಾಯಣನೆಂಬ ಹೆಸರಿನ ಅಂಗಿರಸರಿಗೆ ಪುತ್ರನಾದ ಭೂಸುರನು ಸ್ನಾನ ಮಾಡಿದರ ಫಲದಿಂದ ಭಗವಂತನ ದರುಶನವಾಗಿ ಮೋಕ್ಷವನ್ನು ಪಡೆದನು..
ತ್ರೇತಾಯುಗದಲ್ಲಿ ಶ್ರೀ ರಾಮಚಂದ್ರ ದೇವನು ಸಹ ಇಲ್ಲಿ ಬಂದು ಸ್ನಾನ ಮಾಡಿದ ಫಲದಿಂದ ರಾವಣನ ಸಂಹಾರ ಮಾಡಿ ಸೀತಾದೇವಿಯನ್ನು ಪಡೆದನು. ಇಂತು ಶುಭಕರವಾದ ಸ್ವಾಮಿ ಪುಷ್ಕರಣಿ ಸಕಲ ತೀರ್ಥ ಗಳಲ್ಲಿ ಶ್ರೇಷ್ಠ ವಾಗಿ ಕಂಗೊಳಿಸುತ್ತದೆ. ಆ ಸ್ವಾಮಿ ಪುಷ್ಕರಣಿಯ ಪಶ್ಚಿಮ ದಿಕ್ಕಿನಲ್ಲಿ ತನ್ನ ಸತಿಯಾದ ಭೂದೇವಿಯನ್ನು ಆಲಂಗಿಸಿಕೊಂಡು ವರಾಹರೂಪಿಯಾದ ಶ್ರೀಹರಿ ಅಶ್ವತ್ಥ ವೃಕ್ಷದಿಂದ ಶೋಭಿಸುವ ಆ ಸ್ಥಳದಲ್ಲಿ ವಿರಾಜಿಸಿದ್ದಾನೆ. ಮೂರು ಕೋಟಿ ಸಂಖ್ಯೆಯ ವಿವಿಧ ತೀರ್ಥಗಳಿಗೆ ಈ ವೆಂಕಟ ಗಿರಿಯು ಮಾತೃ ಸ್ಥಾನವಾಗಿದೆ. ಇಂತಹ ಶ್ರೇಷ್ಠ ವಾದ ವೆಂಕಟಾಚಲಕ್ಕೆ ಬಂದು ಸ್ವಾಮಿಯು ವಿಹಾರ ಮಾಡುತ್ತಾ ಇದ್ದನು. ಇಂತು ತಿರುಗಾಡುತ್ತಿರುವ ಶ್ರೀ ರಮಾ ಪತಿಯು ರಹಸ್ಯ ವಾಗಿ ವಾಸಿಸಲು ಸರಿಯಾದ ಜಾಗವು ದೊರಕಲಿಲ್ಲವಲ್ಲಾ ಎಂದು ಯೋಚಿಸುತ್ತಿರುವಾಗ ಸ್ವಾಮಿ ಪುಷ್ಕರಣಿಯ ದಕ್ಷಿಣ ಭಾಗದಲ್ಲಿ ನಿರ್ಮಲವು, ದೇವತಾ ಯೊಗ್ಯವು ಆದ ಹುಣಸೇಮರದ ಅಡಿಯಲ್ಲಿ ಇರುವ ಒಂದು ಹುತ್ತವನ್ನು ಕಂಡು ಜಗತ್ಪ್ರಭುವಾದ ಭಗವಂತನು ಇದೇ ತಾನು ಗುಪ್ತವಾಗಿರಲು ಯೋಗ್ಯವಾದ ಸ್ಥಳವೆಂದು ಆಲೋಚಿಸಿ ಆ ಹುತ್ತದಲ್ಲಿ ಮರೆಯಾದನು.
ಹಿಂದೆ ಸರಸ್ವತಿ ದೇವಿಯು ತಾನು ಗಂಗಾದಿ ಸಕಲ ತೀರ್ಥಗಳಲ್ಲಿ ಶ್ರೇಷ್ಠಳಾಗಬೇಕೆಂದು ಬ್ರಹ್ಮಾವರ್ತದಲ್ಲಿ ತಪಸ್ಸು ಆಚರಣೆ ಮಾಡುತ್ತಾ ಇದ್ದಳು. ಆಗ ಪುಲಸ್ತ್ಯ ಅಲ್ಲಿಗೆ ಬಂದನು. ಪುಲಸ್ತ್ಯನು ತನ್ನ ಮಗನೆಂದು ಸರಸ್ವತಿ ದೇವಿಯು ಉದಾಸೀನ ಭಾವದಿಂದ ಇದ್ದುದ್ದನ್ನು ಕಂಡು ಪುಲಸ್ತ್ಯನು “ನೀನು ಯಾವ ಉದ್ದೇಶದಿಂದ ತಪಸ್ಸು ಮಾಡುತ್ತಾ ಇರುವೆ ಅದು ಸಫಲವಾಗದೇ ಹೋಗಲಿ" ಅಂತ ಶಾಪ ಕೊಟ್ಟನು. ಅವಾಗ ಸರಸ್ವತಿ ದೇವಿಯು ಸಹ ನಿನ್ನ ವಂಶದಲ್ಲಿ ರಾಕ್ಷಸರೇ ಹುಟ್ಟಲಿ ಅಂತ ಶಾಪ ಕೊಟ್ಟಳು. ಆ ನಂತರ ಪುನಃ ಸರಸ್ವತಿ ದೇವಿಯು ತಪಸ್ಸು ಆಚರಿಸಿ ಭಗವಂತನ ಸಾಕ್ಷತ್ಕಾರ ಮಾಡಿಕೊಂಡು ಅವನಲ್ಲಿ ತನ್ನ ನಿರಂತರ ಸಾನಿಧ್ಯ ಬೇಡಿದಳು. ಗಂಗಾ ನದಿಗಿಂತ ಶ್ರೇಷ್ಠ ವಾದ ಸ್ಥಾನವನ್ನು ಫಲಿಸದೇ ಹೋಗಲಿ ಅಂತ ಶಾಪ ಬಂದ ಬಗೆ ಹೇಳಿದಾಗ ಅದಕ್ಕೆ ಭಗವಂತನು ನದಿಗಳಲ್ಲಿ ಶ್ರೇಷ್ಠತೆ ಬೇಡ ಅಂತ ಶಾಪ ಇದೆ ಹೊರತು ಪುಷ್ಕರಣಿಯಲ್ಲಿ ಅಲ್ಲ. ನೀನು ಶೇಷಗಿರಿ ಪರ್ವತಕ್ಕೆ ಹೋಗು.ಆ ಗಿರಿಯ ದಕ್ಷಿಣ ಭಾಗದಲ್ಲಿ ಸುಖವಾಗಿ ನೆಲೆಸು.ನಾನು ಸಹ ನಿನ್ನ ಪಕ್ಕದಲ್ಲಿ ವಾಸ ಮಾಡುವೆ ಅಂತ ಹೇಳುವನು. ಇದು ಸ್ವಾಮಿ ಪುಷ್ಕರಣಿ ತೀರ್ಥದ ಹಿನ್ನೆಲೆ.
ದ್ವಾಪರಯುಗ ಕಳೆದು 28ನೆಯ ಕಲಿಯುಗದಲ್ಲಿ ಕೆಲ ಸಂವತ್ಸರಗಳು ಗತಿಸಿದ ನಂತರ ನಾಗಕನ್ನಿಕೆಯ ಉದರದಲ್ಲಿ ಚೋಳರಾಜನೆಂಬ ಒಬ್ಬ ರಾಜೋತ್ತಮನು ಜನಿಸಿದನು. ಅವನು ಪುಣ್ಯ ಪ್ರದವಾದ ಆ ಭೂಭಾಗದಲ್ಲಿ ಸಕ್ರಮವಾಗಿ ರಾಜ್ಯ ಭಾರ ಮಾಡುತ್ತಾ ಇದ್ದನು. ಅವನ ರಾಜ್ಯವು ಕಾಲಕಾಲಕ್ಕೆ ಮಳೆ ಬೆಳೆಗಳಿಂದ ಸಮೃದ್ಧವಾಗಿ ಇತ್ತು. ಹೀಗಿರುವಾಗ ಲಕ್ಷ್ಮೀ ದೇವಿಯು ಲೋಕ ವಿಡಂಬನಾರ್ಥವಾಗಿ ತನ್ನ ಪತಿಯನ್ನು ಹುಡುಕುವ ಪ್ರಯುಕ್ತ ಮತ್ತು ಭಗವಂತನ ಸೇವೆಗಾಗಿ ಗೊಲ್ಲತಿಯ ವೇಷ ಧರಿಸಿ ಬ್ರಹ್ಮ ದೇವರನ್ನು, ಆಕಳನ್ನಾಗಿಯು ಮತ್ತು ರುದ್ರ ದೇವರನ್ನು ಕರುವನ್ನಾಗಿ ಮಾಡಿಕೊಂಡು ಚೋಳರಾಜನ ಅರಮನೆಗೆ ಬರುತ್ತಾಳೆ.
ಬಂದಂತಹ ಗೊಲ್ಲತಿಯನ್ನು ನೋಡಿ ರಾಜನು "ಈ ಆಕಳು ಕರುವಿನ ಬೆಲೆ ಎಷ್ಟು" ಎಂದು ಕೇಳಿದಾಗ ಅದಕ್ಕೆ ರಮಾದೇವಿಯು ಇದನ್ನು ನಿನಗೆ ಉಚಿತವಾದ ಮೌಲ್ಯಕ್ಕೆ ಮಾರುತ್ತೇನೆ. ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹಾಗು ಸಂಪತ್ತಿನ ಒಡತಿಯಾದ ನನಗೆ ನಿನ್ನ ಧನವು ಬೇಡ. ಆದರೆ ಒಂದು ಶರತ್ತು. ಮಾಮೂಲಿ ಆಕಳಲ್ಲ, ಇದು ಹತ್ತರಲ್ಲಿ ಹನ್ನೊಂದು ಅಂತ ಪಾಲನೆ ಮಾಡುವ ಹಾಗಿಲ್ಲ. ಚೆನ್ನಾಗಿ ಪಾಲಿಸಬೇಕು. ಈ ಆಕಳು ಕೇಳಿದಷ್ಟು ಹಾಲನ್ನು ಕರೆಯುತ್ತದೆ. ಇದರ ಹಾಲನ್ನು ಕುಡಿದವರಿಗೆ ರೋಗ ರುಜಿನಗಳ ಭಯವಿಲ್ಲ. ಈ ಹಾಲನ್ನು ತನ್ನ ಸ್ವಂತಕ್ಕೆ ಬಳಸಬಾರದು. ಹಾಗೇನಾದರು ಬಳಸುವೆ ಅಂದರೆ ಬೇರೆ ಕಡೆ ಮಾರಲು ಹೋಗುತ್ತೇನೆ. ಈ ಗೋವಿನ ಹಾಲನ್ನು ಭಗವಂತನಿಗೋಸ್ಕರವೇ ಮೀಸಲಿಡಬೇಕು. ಇದೇ ಇದರ ಬೆಲೆ ಅಂತ ಹೇಳಿದಾಗ, ಆ ಶರತ್ತಿಗೆ ರಾಜ ಒಪ್ಪಿ ಒಪ್ಪಂದಕ್ಕೆ ಬರುವನು. ನಂತರ ಅವನಿಗೆ ಕೊಟ್ಟು ರಮಾದೇವಿ ಕೊಲ್ಹಾಪುರಕ್ಕೆ ಹೊರಡುವಳು. ಭಗವಂತನ ಅನುಗ್ರಹದಿಂದ ಬ್ರಹ್ಮದೇವನಿಗೆ ಬ್ರಹ್ಮ ಪದವಿ ಮತ್ತು ರುದ್ರಾದಿಗಳಿಗೆ ಮೋಕ್ಷವನ್ನು ಕೊಡುವವಳಿಗೆ ಅವರನ್ನು ಆಕಳು ಕರುವನ್ನು ಮಾಡುವದು ರಮಾದೇವಿಗೆ ಅಸಾಧ್ಯವಾದ ಕಾರ್ಯವಲ್ಲ. ಮೇಲಾಗಿ ಬ್ರಹ್ಮ ದೇವರು ಜೇಷ್ಠರು ಹಾಗಾಗಿ ಅವರನ್ನು ಆಕಳ ರೂಪದಿಂದ ಮತ್ತು ರುದ್ರ ದೇವರಿಗೆ ಕರುವನ್ನು ಮಾಡಿದಳು. ಹೀಗಿರುವಾಗ ಬ್ರಹ್ಮ ದೇವರು ಗೋರೂಪದಿಂದ ಅ ರಾಜನ ಎರಡುಸಾವಿರ ಗೋವುಗಳ ಹಿಂಡಿನಲ್ಲಿ ಸೇರಿಕೊಂಡು ಭಗವಂತನು ಇರುವ ಸ್ಥಳವನ್ನು ಹುಡುಕಿಕೊಂಡು ಹೊರಟರು.
ತಾಯಿಯ ಆಜ್ಞೆಯಂತೆ ಆಕಳು-ಕರು ವೇಷ ಧಾರಿಗಳಾದ ಬ್ರಹ್ಮ-ರುದ್ರದೇವರು ಜಗತ್ಪತಿಯನ್ನು ಹುಡುಕುವ ಹಾಗೆ ನಟಿಸುತ್ತ, ಸ್ವಾಮಿಯು ಕುಳಿತಿರುವ ಹುತ್ತಿನಲ್ಲಿಗೆ ಬಂದು,ಆ ಹುತ್ತಿನಲ್ಲಿರುವ ತನ್ನ ಮತ್ತು ಜಗತ್ಸ್ವಾಮಿಗೆ ಕ್ಷೀರಾಭಿಷೇಕವನ್ನು ಮಾಡುತ್ತಾ, ರಾಜನ ಮನೆಯವರಿಗೆ ಹಾಲನ್ನು ಕೊಡದ ಹಾಗಾಯಿತು.
ಇಲ್ಲಿ "ಗೋ"ಎಂದರೆ ಸರ್ವ ವೇದ ಮಂತ್ರಗಳೆಂದರ್ಥ, "ಕ್ಷೀರ"ಎಂದರೆ ಸರ್ವ ವೇದಗಳಿಂದ ಪ್ರತಿಪಾದ್ಯನಾದ ಎಲ್ಲರಿಂದಲೂ, ಎಲ್ಲಾ ಕಾಲಗಳಲ್ಲಿಯು ನವರಸ ಭರಿತವಾದ ನವವಿಧ ಭಕ್ತಿಯು, ಧ್ಯಾನಕ್ಕೆ ಮಾಧ್ಯಮವಾಗಿ ಬಿಂಬಾಪರೋಕ್ಷವನ್ನು ಉಣಿಸುವ ಅಮೃತ ರಸವೆಂದರ್ಥ.
ಈ ರಸವನ್ನು ಜಗತ್ಸ್ವಾಮಿಗೆ ಒಂದು ಬಿಟ್ಟು ಬೇರೆಯವರು ಅನರ್ಹರು ಎಂಬ ಉದ್ದೇಶದಿಂದ ಆಕಳ ರೂಪದಿಂದಯಿರುವ ಬ್ರಹ್ಮದೇವರು ರಾಜನ ಮನೆಯಲ್ಲಿ ಒಂದು ದಿನವು ಹಾಲು ಕೊಡುವುದಿಲ್ಲ. ಆ ಹುತ್ತಕ್ಕೆ ಅದರಲ್ಲಿ ಅಡಗಿರುವ ಸ್ವಾಮಿಗೆ ತನ್ನ ಕೆಚ್ಚಲು ಹಾಲಿನಿಂದ ಧಾರಾಕಾರವಾಗಿ ಅಭಿಷೇಕ ವನ್ನು ಮಾಡಿಹೋಗುತ್ತಾ ಇದ್ದರು.. ಬ್ರಹ್ಮ ದೇವರು ಆಕಳ ರೂಪದಿಂದ ಬಂದು ಚೋಳರಾಜನ ಅರಮನೆಯಲ್ಲಿದ್ದುಕೊಂಡೆ ಅಲ್ಲಿರುವ ಬೇರೆ ಹಸುವಿನೊಂದಿಗೆ ಬೆರೆತು, ಪರಮಾತ್ಮನಿಗೆ ನಿತ್ಯದಲ್ಲಿಯೂ ಕ್ಷೀರಾಭಿಷೇಕವನ್ನು ಮಾಡತೊಡಗಿದರು. ಆದ ಕಾರಣ ಮನೆಯಲ್ಲಿ ಚೋಳರಾಜನಿಗೆ ಒಂದು ದಿವಸವು ಕೂಡಾ ಹಾಲನ್ನು ಕೊಡದಂತಾಯಿತು. ಆಗ ಚೋಳರಾಜನ ಪತ್ನಿಯು ಗೋಪಾಲಕನನ್ನು ಕರೆದು "ಅದರ ಕ್ಷೀರವನ್ನು ನೀನೇ ಕುಡಿಯುತ್ತಿಯೋ?ಅಥವಾ ಬೇರೆ ಯಾರಿಗಾದರು ಕೊಡುತ್ತಿಯೋ?"ಎಂದು ಕೋಪಿಸಿಕೊಂಡು ಅವನಿಗೆ ದಂಡಿಸಿ ಬೆದರಿಸಿದಳು. ಅದಲ್ಲದೆ ಇದೆ ರೀತಿಯು ಮುಂದುವರಿಸಿದರೆ ನಿನ್ನನ್ನು ಉಗ್ರವಾಗಿ ದಂಡಿಸಬೇಕಾಗುವದೆಂದು ಗದರಿಸಿದಳು.
ಆಗ ಮರುದಿನ ಗೋ- ಪಾಲಕನು ಆ ಹಸುವಿನ ಹಿಂದೆಯೆ ಹೋಗಿ, ಪ್ರತಿನಿತ್ಯ ಹಾಲು ಕರೆಯುವಂತೆ ಕರೆಯುವದನ್ನು ಕಂಡು, ಕುಪಿತನಾಗಿ ಹಸುವನ್ನು ತನ್ನಲ್ಲಿರುವ ಕೊಡಲಿಯಿಂದ ಹೊಡೆಯಲು ಹೋದಾಗ ಸ್ವಾಮಿಯು ಹಸುವಿನ ರೂಪದಿಂದಿರುವ ಬ್ರಹ್ಮದೇವರನ್ನು ರಕ್ಷಿಸಿ, ಆಕಳಿಗೆ ಬೀಳುವ ಕೊಡಲಿ ಪ್ರಹಾರವನ್ನು ತಾನೆ ಸ್ವತಃ ತೆಗೆದುಕೊಂಡನು. ಆಗ ದೇವರ ತಲೆಯಿಂದ ಸಪ್ತ ತಾಳ ಪ್ರಮಾಣದಷ್ಟು ರಕ್ತವು ಚಿಲುಮೆಯಾಗಿ ಹರಿಯ ತೊಡಗಿತು. ಇಲ್ಲಿ ತಾಳ ಎಂಬ ಅಳತೆಯು "ಒಂದು ಮೊಳ, ಪ್ರಾದೇಶ ಪ್ರಮಾಣ ಮಾತ್ರವೆಂದು ತಿಳಿಯುವದು". ಆ ರಕ್ತದ ಚಿಲುಮೆಯನ್ನು ಕಂಡ ಗೋಪಾಲಕನು ಮೂರ್ಛಿತನಾಗಿ ಬಿದ್ದು ಅಲ್ಲಿಯೆ ಅಸು ನೀಗಿದನು.. ಇದನ್ನು ಕಂಡ ಹಸುವು ಅರಮನೆಗೆ ಬಂದು ಚೋಳರಾಜನನ್ನು ಆ ಬೆಟ್ಟಕ್ಕೆ ಕರೆದೊಯ್ದು ನಡೆದ ವೃತ್ತಾಂತವನ್ನು ವೆಂಕಟೇಶನಿಂದಲೇ ತಿಳಿಸಿತು.
ತಕ್ಷಣ ಚೋಳರಾಜನು ಮೇನೆಯಲ್ಲಿ ಕುಳಿತು ಆ ಪರ್ವತಕ್ಕೆ ಆಗಮಿಸಿದ. ನೋಡಿ ಆಶ್ಚರ್ಯಕರವಾಗಿ ಯಾರು ಇದನ್ನು ಮಾಡಿರಬಹುದು ಅಂತ ತನ್ನಲ್ಲಿ ಮಾತನಾಡುತ್ತಾ ಇರುವಾಗ ಹುತ್ತದಿಂದ ಹಾವು ಹೇಗೆ ಹೊರ ಬರುವದು ಅದೇ ರೀತಿಯಲ್ಲಿ ಸರಸರಸನೇ ಶ್ರೀನಿವಾಸ ಬಂದನು. ಆಗ ಪ್ರಭುವಾದ ಸ್ವಾಮಿಯು ತನ್ನ ಭಕ್ತರಿಗಾದ ಅವಮಾನವನ್ನು ಸಹಿಸಲಾರದೆ ಚೋಳರಾಜನಿಗೆ "ನೀನು ಮಾಡಿದ ಅಪರಾಧಕ್ಕೆ ಪಿಶಾಚಿ ಜನ್ಮವನ್ನು ತಾಳು"ಎಂದು ಶಾಪವನ್ನಿತ್ತನು. ಶ್ರೀ ಹರಿಯ ಶಾಪವನ್ನು ಪಡೆದ ಚೋಳರಾಜನು ಮೂರ್ಚಿತನಾಗಿ ಧರಾಶಾಯಿಯಾಗಿ ಬಿದ್ದನು. ಕೆಲ ಸಮಯದ ನಂತರ ಪರಮಾತ್ಮನ ಬಳಿ ಪ್ರಾರ್ಥನೆ ಮಾಡಿದನು. ನಾ ಮಾಡಿದ ತಪ್ಪು ಆದರು ಏನು?? ಯಾಕೆ ಶಾಪವನ್ನು ಕೊಟ್ಟಿದ್ದು?? ಇದರಿಂದ ವಿಮುಕ್ತಿ ಹೇಗೆ?? ಅಂತ ಕೇಳಿದಾಗ ಅದಕ್ಕೆ ಭಗವಂತನು ಹೇಳುತ್ತಾನೆ.
ಎಲೈ !!ರಾಜನೇ ಕೇಳು!! ನನ್ನ ಶಾಪವು ಎಂದಿಗು ಹುಸಿಯಾಗದು.. ಯಾವ ಯಜಮಾನನು ತನ್ನಹೆಂಡತಿ ಮಕ್ಕಳು ಕಾರ್ಯವನ್ನು ಮಾಡುವಾಗ ಧರ್ಮ, ಅಧರ್ಮಗಳನ್ನು ವಿಚಾರ ಮಾಡುವದಿಲ್ಲವೋ ಅವನು ಅವನ ಹೆಂಡತಿ ಮಕ್ಕಳು ಮಾಡಿದ ಪಾಪಕ್ಕೆ ಗುರಿಯಾಗಿ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಸೇವಕನು ಮಾಡಿದ ತಪ್ಪಿಗೆ ಯಜಮಾನ ಹೊಣೆಯಾಗುವನು. ಇದರ ಅಭಿಪ್ರಾಯ ಇಷ್ಟೇ. ನೀನು ನನ್ನ ಭಕ್ತನೆಂದು ತಿಳಿದು ಲಕ್ಷ್ಮೀ ದೇವಿಯು ಗೋರೂಪದಲ್ಲಿದ್ದ ಬ್ರಹ್ಮ ರುದ್ರಾದಿಗಳನ್ನ ನೀಡಿದರೆ ಅದನ್ನು ನಿನ್ನ ಹೆಂಡತಿಯು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡು, ಬಲವಂತವಾಗಿ ಆ ಆಕಳ ಹಾಲನ್ನು ಕರೆದುಕೊಂಡು ತನ್ನ ಮಗನಿಗೆ ಬಳಸಿದಳು. ಈ ಮೂಲಕ ರಮಾದೇವಿ ಹೇಳಿದ ಮಾತು ಭಗವಂತನಿಗೋಸ್ಕರವೇ ಇದರ ಹಾಲನ್ನು ಬಳಸಬೇಕೆಂದು ಹೇಳಿದ ಮಾತನ್ನು ಉಲ್ಲಂಘನೆ ಮಾಡಿದಳು. ನಂತರ ಹಾಲು ಕೊಡದೆ ಇದ್ದುದ್ದನ್ನು ನೋಡಿ ಗೋಪಾಲಕನಿಗೆ ತಾಡನೆ ಮಾಡಿದಾಗ, ಅವನಿಗೆ ಗೋವನ್ನು ಕೊಲ್ಲುವ ದುರ್ಬುದ್ಧಿ ಬರುತ್ತದೆ. ನೀನಾದರು ಸಹ ಗೋವು ಹಾಲನ್ನು ಏಕೆ ಕೊಡಲಿಲ್ಲ!! ಅಂತ ವಿಚಾರಣೆ ಮಾಡಲಿಲ್ಲ. ಹೀಗಾಗಿ ನೀನು ಪರೋಕ್ಷವಾಗಿ ಕಾರಣವಾಗಿರುವೆ. ಆದ್ದರಿಂದ ರುದ್ರ ದೇವರ ಪರಿವಾರದಲ್ಲಿ ಒಬ್ಬನಾಗು ಅಂದರೆ ಪಿಶಾಚಿಯಾಗು ಅಂತ ಶಾಪ ಕೊಟ್ಟಿದ್ದು. ಆದರು ನೀನು ಮಾಮೂಲಿನ ಪಿಶಾಚಿ ಯಂತೆ ರಕ್ತ ಮಾಂಸ ತಿನ್ನುವ ಬೇರೆ ಪಿಶಾಚಿಗಳ ಹಾಗೆ ನಿನಲ್ಲ.ಇದು ನಾನು ಮಾಡುವ ಅನುಗ್ರಹ. ಈ ಪಿಶಾಚಿ ರೂಪವು ಕಲಿಯುಗ ಪೂರ್ತಿ ಇರುತ್ತದೆ. ಮುಂದೆ ಆಕಾಶರಾಜನು ಜನಿಸಿ ಅವನ ಮಗಳನ್ನು ನನಗೆ ಕೊಟ್ಟು ಕನ್ಯಾದಾನ ಮಾಡುವನು. ಆ ಸಮಯದಲ್ಲಿ ವರದಕ್ಷಿಣೆ ರೂಪವಾಗಿ ಎರಡು ಸಾವಿರ ತೊಲೆಗಳಷ್ಟು ತೂಕವಿರುವ ನವರತ್ನ ಖಚಿತವಾದ ಕಿರೀಟವನ್ನು ಕೊಡುವನು. ನಾನದನ್ನು ಶುಕ್ರವಾರ ಧರಿಸುವೆನು. ಆ ಸಮಯದಲ್ಲಿ ನನ್ನ ಕಣ್ಣಿಂದ ಆನಂದಾಶ್ರು ಬರುವದು. ಅದನ್ನು ನೋಡಿದ ನಿನಗೆ ಸುಖವುಂಟಾಗುವದು. ಆ ಸಂಧರ್ಭದಲ್ಲಿ ಆರು ಘಳಿಗೆ ನಿನಗೆ ಸುಖ ವುಂಟಾಗುವದು ಅಂತ ಹೇಳಿ ಚೋಳರಾಜನಿಗೆ ಸಮಾಧಾನ ಮಾಡುವನು. ಆರು ಘಳಿಗೆ ಅಂದರೆ ದೇವಮಾನದ ಆರು ಘಳಿಗೆ. ಶನಿವಾರದಿಂದ ಹಿಡಿದು ಗುರುವಾರದವರೆಗು ಆರು ದಿನ ಪರ್ಯಂತ ಸುಖವು ವ್ಯಾಪಿಸಿರುತ್ತದೆ.. ಶುಕ್ರವಾರ ಪುನಃ ಕಿರೀಟವನ್ನು ಧರಿಸುವನು. ಅಂತು ಜೀವನ ಪೂರ್ತಿಯಾಗಿ ಚೋಳರಾಜನಿಗೆ ಸುಖವನ್ನು ಅನುಭವಿಸುವಂತೆ ಮಾಡಿದ್ದಾನೆ.
ಅದೇ ಸಮಯದಲ್ಲಿಯೇ ಶ್ರೀನಿವಾಸನಿಗೆ ವರಾಹರೂಪಿ ಪರಮಾತ್ಮನ ಭೇಟಿಯಾಯಿತು. ನಡೆದ ವೃತ್ತಾಂತವನ್ನು ವರಾಹ ದೇವರಿಗೆ ತಿಳಿಸಿದನು ಅವರಿಬ್ಬರ ಪರಸ್ಪರ ಸಂಭಾಷಣೆ ನಡೆಯಿತು. ಲೋಕ ಶಿಕ್ಷಣಾರ್ಥವಾಗಿ ಶ್ರೀನಿವಾಸನು ವರಾಹರೂಪಿ ಪರಮಾತ್ಮನಿಂದ ತಾನು ನೆಲೆಸುವ ಸ್ಥಳವನ್ನು ಸ್ವೀಕರಿಸಿದ ಪ್ರಯುಕ್ತ ನನಗಿಂತ ಮೊದಲು ಪೂಜೆ-ನೈವೇದ್ಯಾದಿ ಸರ್ವ ಪೂಜಾದಿ ಗೌರವಾದಿಗಳು ನಿನಗೆ ಆಗಲೆಂದು ವಚನವಿತ್ತು ಅಲ್ಲಿಯೆ ನೆಲೆಸಿದನು.
ವರಾಹದೇವನು ಶ್ರೀನಿವಾಸನ ಶುಶ್ರೂಶೆ ಪ್ರಯುಕ್ತ ತನ್ನಲ್ಲಿರುವ ಬಕುಲಮಾಲಿಕ ಎಂಬ ತಾಯಿಯ ಸ್ವರೂಪದಂತಿರುವ ಹೆಣ್ಣು ಮಗಳನ್ನು ಶ್ರೀನಿವಾಸನೊಂದಿಗೆ ಕಳುಹಿಸಿಕೊಟ್ಟನು. ನಂತರ ಗೋಪಾಲಕನಿಂದಾದ ತಲೆಯ ಪೆಟ್ಟನ್ನು ಅತ್ತಿ-ಎಕ್ಕೆ ಮುಂತಾದ ವನಸ್ಪತಿಗಳ ಮುಖಾಂತರ ಗುಣವಾದಂತೆ ನಟಿಸಿ, ತನ್ನ ತಾಯಿಯ ಸ್ಥಾನದಲ್ಲಿರುವ ಬಕುಲಮಾಲಿಕೆಗೆ ತನ್ನ ಪರಿಚಯವನ್ನು ಹೇಳಿ, ಅವಳ ವೃತ್ತಾಂತವನ್ನು ಲೋಕ ವಿಡಂಬನಾರ್ಥವಾಗಿ ತಿಳಿದುಕೊಂಡನು.
ಒಮ್ಮೆ ಆಕಾಶ ರಾಜನು ಸಂತಾನ ಪ್ರಾಪ್ತಿಗಾಗಿ ಪುತ್ರ ಕಾಮೇಷ್ಟಿಯಾಗವನ್ನು ಮಾಡಲು ಯಾಗ ಸ್ಥಳ ಶುದ್ಧ ಮಾಡಲೋಸುಗ ಸುವರ್ಣ ನಿರ್ಮಿತ ನೇಗಿಲಿನಿಂದ ಭೂಮಿಯನ್ನು ಉಳುತ್ತಿರುವಾಗ ಆ ಸ್ಥಳದಲ್ಲಿ ತಾವರೆಯಲ್ಲಿ ಮಲಗಿದ್ದ ಕೂಸು ಸಿಗುತ್ತದೆ. ಮಕ್ಕಳಿಲ್ಲದೇ ಅಸಂತುಷ್ಟನಾದ ರಾಜನು ಮಗುವನ್ನು ತನ್ನ ಪಟ್ಟದರಸಿಗೆ ತಂದೊಪ್ಪಿಸಿ ಮಗುವು ಕಮಲದಲ್ಲಿ ದೊರಕಿರುವುದರಿಂದ "ಪದ್ಮಾವತಿ"ಯೆಂದು ನಾಮಕರಣ ಮಾಡಿದರು. ಪದ್ಮಾವತಿಯು ಪ್ರಾಪ್ತವಯಸ್ಕಳಾದಾಗ ಒಮ್ಮೆ ಗೆಳತಿಯರೊಡನೆ ಉದ್ಯಾನವನದಲ್ಲಿ ವಿಹರಿಸುತ್ತಿರುವಾಗ ಅಲ್ಲಿಗೆ ಬಂದ ನಾರದಮಹರ್ಷಿಗಳು ಅವಳ ಹಸ್ತ ಸಾಮುದ್ರಿಕಾ ಮುಖೇನ "ಶ್ರೀಮನ್ನಾರಾಯಣನೆ ನಿನ್ನ ಪತಿಯಾಗುವನೆಂದು ಭವಿಷ್ಯವನ್ನು ನುಡಿಯುವರು. ಇದಾದ ನಂತರ ಪದ್ಮಾವತಿಯು ಮತ್ತೊಮ್ಮೆ ತನ್ನ ಸಖಿಯರೊಂದಿಗೆ ಉದ್ಯಾನವನದಲ್ಲಿ ವಿಹರಿಸಲು ಹೋದಾಗ,ಇತ್ತಕಡೆ ಶ್ರೀನಿವಾಸನು ಬೇಟೆಗೆ ಕಾಡಿಗೆ ಬಂದಾಗ ಒಂದು ಆನೆಯನ್ನು ಬೆನ್ನಟ್ಟಿಕೊಂಡು ಹೋದನು. ಆಗ ಆನೆಯು ಸಖಿಯರಿದ್ದ ಉದ್ಯಾನವನದಲ್ಲಿ ಪ್ರವೇಶಿಸಿ ಪದ್ಮಾವತಿಯೆಂಬ ಕನ್ಯೆಗೆ ವಂದಿಸಿ ಮುಂದೆ ಹೋಯಿತು. ಆಗ ಅಲ್ಲಿ ಪರಸ್ಪರ ಪದ್ಮಾವತಿಯ ವೆಂಕಟೇಶನ ಭೇಟಿಯಾಯಿತು. ಆನೆಯನ್ನು ಕಂಡು ಹೆದರಿದ ಪದ್ಮಾವತಿ ಮತ್ತು ಅವರ ಸಖಿಯರ ಗುಂಪಿನ ಬಳಿಗೆ ವೆಂಕಟೇಶನು ಕುದುರೆ ಏರಿ ಅವರ ಬಳಿಗೆ ಬಂದನು. ಆಗ ವೆಂಕಟೇಶನು ಹಾಗು ಪದ್ಮಾವತಿಯು ಪರಸ್ಪರ ಅವರವರ ಕುಲಗೋತ್ರಗಳನ್ನು ತಿಳಿಸಿದರು. ತನ್ನ ಮೇಲೆ ಪ್ರೇಮವನ್ನು ತೋರಿಸಿದ ವೆಂಕಟೇಶ್ವರನ ಮೇಲೆ ಪದ್ಮಾವತಿಗೆ ಕೋಪ ಬಂದಂತೆ ನಟಿಸಿದಳು. ಇದರ ಅಂತರಂಗ ಮರ್ಮವನ್ನರಿಯದ ಸಖೀಯರು ಕೋಪಿಸಿಕೊಂಡು ಕುದುರೆಗೆ ಕಲ್ಲನ್ನು ಎಸೆದರು.ಆಗ ಪದ್ಮಾವತಿಯು ತಾನೇ ಸ್ವತಃ ವೆಂಕಟೇಶ್ವರನಿಗೆ ಕಲ್ಲನ್ನು ಎಸೆದಳು. ಆಗ ಕುದುರೆಯು ಅಲ್ಲಿಯೇ ಮರಣ ಹೊಂದಿತು. ಶ್ರೀನಿವಾಸನಿಗೆ ತಲೆಯು ಒಡೆಯಿತು. ಇದರ ಗುಹ್ಯಾರ್ಥವೆನೆಂದರೆ "ವರದೋ ವಾಯು ವಾಹನ" ಎಂಬಂತೆ ವಾಯುದೇವರು ಜಗದೊಡೆಯನಾದ ನಾರಾಯಣನು ಪತ್ನಿಯ ಸಂಗಡವಿರುವಾಗ ನನ್ನ ಕೆಲಸ ಏನು ಇಲ್ಲವೆಂದು, ವಾಹನರಾಗಿ ಬಂದಿದ್ದ ವಾಯುದೇವರು ಸಖಿಯರ ಕೋಪವನ್ನು ನಿಮಿತ್ತ ಮಾಡಿಕೊಂಡು ಅಲ್ಲಿಂದ ಅದೃಶ್ಯರಾದರು."
ಪದ್ಮಾವತಿ ವರ್ತನೆಯಿಂದ ಶ್ರೀನಿವಾಸನು ವ್ಯಥೆಗೊಂಡಂತೆ ನಟನೆ ಮಾಡುವ,
ಮನೆಗೆಬಂದು ಮುಸುಗು ಹೊದ್ದು ಮಲಗಿದ್ದ ಮಗನನ್ನು ಕಂಡು ತಾಯಿ ಆತಂಕದಿಂದ ವಿಚಾರಿಸಲು, ಬಕುಲಾದೇವಿಯೊಡನೆ ಅಲ್ಲಿ ನಡೆದ, ವೃತ್ತಾಂತವನ್ನು ತಿಳಿಸಿ ಪದ್ಮಾವತಿಯ ಪೂರ್ವ ಚರಿತ್ರೆಯನ್ನು ತಿಳಿಸಿದನು.
ರಾವಣನು ಹಿಂದೆ ವೇದವತಿಯ ರೂಪದಲ್ಲಿದ್ದ ಲಕ್ಷ್ಮೀಯನ್ನು ಮೋಹಿಸಲು ಹೋಗಿ, ತನ್ನ ವಂಶ ಸ್ತ್ರೀ-ಅಪಹರಣದಿಂದಲೇ ನಾಶವಾಗುವಂತೆ ಶಾಪವನ್ನು ಪಡೆದಿದ್ದನು. ಆ ವೇದವತಿಯು ತನ್ನ ರಕ್ಷಣೆಗೋಸ್ಕರ ಅಗ್ನಿಯಲ್ಲಿ ಪ್ರವೇಶ ಮಾಡಿದಳು. ರಾವಣನು ಸೀತಾಪಹರಣ ಕಾಲದಲ್ಲಿ ಅಗ್ನಿದೇವನು ವೇದವತಿಯೇ ಸೀತೆಯಾಗಿರುವಳೆಂದು ಬೋಧಿಸಿ ವೇದವತಿಯನ್ನೆ ರಾವಣನಿಗೆ ಅರ್ಪಿಸಿ ನಿಜವಾದ ಸೀತೆಯನ್ನು ತನ್ನಲ್ಲಿಯೇ ಉಳಿಸಿಕೊಂಡು ಕೆಲಕಾಲ ಜಗನ್ಮಾತೆಗೆ ಸೇವೆಮಾಡಿದನು. ರಾವಣನ ಸಂಹಾರವಾದ ಬಳಿಕ ನಿಜವಾದ ಸೀತೆಯನ್ನು ರಾಮನಿಗೆ ಒಪ್ಪಿಸಲು ಬಂದಾಗ, ಸೀತೆಯು ತನ್ನ ಪತಿಯಾದ ರಾಮದೇವರಿಗೆ ನಿಜವಾದ ಐತಿಹ್ಯವನ್ನು ತಿಳಿಸಿ, ವೇದವತಿಯನ್ನು ವಿವಾಹವಾಗಲು ಕೇಳಿಕೊಂಡಳು. ಆಗ ಏಕಪತ್ನಿ ವೃತಸ್ಥನಾದ ನಾನು ನಿನ್ನ ಇಚ್ಛೆಯನ್ನು ಮುಂದೆ ಇಪ್ಪತ್ತೆಂಟನೆ ಕಲಿಯುಗದಲ್ಲಿ ಪೂರ್ತಿಗೊಳಿಸುವೆನೆಂದು ಹೇಳಿದ ವಚನವನ್ನು ಸ್ಮರಣೆಗೆ ತಂದುಕೊಂಡ. ಪದ್ಮಾವತಿಯು ಶ್ರೀನಿವಾಸನ ಸ್ಮರಣೆಯಲ್ಲಿ ನಿರತಳಾಗಿ, ತನ್ನ ತಂದೆ-ತಾಯಿಗೆ, ಬಂಧು-ಬಾಂಧವರಿಗೆ ಹಾಗೂ ಸಖಿಯರಿಗೆ ಮನೋರೋಗ ಬಾಧೆಗೆ ಪೀಡಿತಳಾದಂತೆ ವರ್ತಿಸಿದಳು. ಆಕಾಶರಾಜ ಮಾತ್ತು ಧರಣಿದೇವಿಯು ಮಗಳ ವೇದನೆಯನ್ನು ನೋಡಲಾಗದೆ ದೇವಗುರುಗಳಾದ ಬೃಹಸ್ಪತ್ತ್ಯಾಚಾರ್ಯರೊಂದಿಗೆ ತಮ್ಮ ಸಂಕಟ ಹೇಳಿಕೊಂಡಾಗ, ಅದನ್ನರಿತ ಅವರು ಮನೋನಿಯಾಮಕರಾದ ಪರಮ ವೈಷ್ಣವರಾದ ರುದ್ರದೇವರಾರಾಧನೆ ಮಾಡಲು ಹೇಳಿದರು. ಗುರುಗಳ ಸಲಹೆಯಂತೆ ರಾಜನು ಅಲ್ಲಿರುವ ಅಗಸ್ತೇಶ್ವರನ ದೇವಾಲಯಕ್ಕೆ ತಮ್ಮ ಪರಿಚಾರಕಿಯರ ಮೂಲಕ ಪೂಜೆಗೆಂದು ಕಳುಹಿಸಿದನು. ಇತ್ತಕಡೆ ಶ್ರೀನಿವಾಸನು ಬಕುಲಮಾಲಿಕೆಯನ್ನು ಆಕಾಶರಾಜನ ಪಟ್ಟಣಕ್ಕೆ ಕಳುಹಿಸಿ ಕೊಟ್ಟಿದ್ದನು. ಆಗ ರಾಜನ ಸೇವಕಿಯರ ಗುಂಪಿನ ಭೇಟಿಯು ಬಕುಲಮಾಲಿಕೆಗೆ ಆಗಿ, ಇದ್ದ ವೃತ್ತಾಂತ ತಿಳಿಸಿದಳು.
ಅಷ್ಟರ ಮಧ್ಯ ವೇಳೆಯಲ್ಲಿ ಶ್ರೀನಿವಾಸನು ಕೊರವಂಜಿಯ ವೇಷವನ್ನು ಧರಿಸಿ ಬ್ರಹ್ಮದೇವರನ್ನು ಕೂಸು ಮಾಡಿಕೊಂಡು, ರುದ್ರದೇವರನ್ನು ಊರುಗೋಲಾಗಿ ಮಾಡಿಕೊಂಡು, ಬ್ರಹ್ಮಾಂಡವನ್ನೇ ಬುಟ್ಟಿಯನ್ನಾಗಿ ಮಾಡಿಕೊಂಡು ಆಕಾಶರಾಜನ ಅರಮನೆಗೆ ಬಂದು ಪದ್ಮಾವತಿಯ ಭವಿಷ್ಯವನ್ನು ಹೇಳುವುದರೊಂದಿಗೆ ಬಕುಲಮಾಲಿಕೆಯ ಕಾರ್ಯವು ಬೇಗನೆ ಸಿದ್ಧಿಸುವಂತೆ ಅವರ ಮನದಲ್ಲಿ ಮೂಡಿಸಿ ಆಕೆಯು ತಂದ ವರನಿಗೆ ಕನ್ಯಾದಾನ ಮಾಡಲು ಭಾಷೆ ತೆಗೆದುಕೊಂಡು ತನ್ನ ಸ್ವ-ಸ್ಥಾನಕ್ಕೆ ಬಂದನು. ರಾಜನಾಜ್ಞೆಯಂತೆ ಅಗಸ್ತೇಶ್ವರ ದೇವಾಲಯಕ್ಕೆ ಹೋದ ಸೇವಕಿಯರ ಸಂಗಡ ಬಂದ ಬಕುಲಮಾಲಿಕೆಯನ್ನು ಕಂಡು ಕೊರವಂಜಿಯ ಮಾತು ನಿಜವಾಯಿತೆಂದು ಸಂತೋಷಪಟ್ಟರು.
ಆಕಾಶರಾಜನು ಬಕುಲದೇವಿಯು ಬಂದುದನ್ನು ಕಂಡು ಗುರುಗಳಾದ ಬೃಹಸ್ಪತ್ತ್ಯಾಚಾರ್ಯರನ್ನು, ಶುಕಾಚಾರ್ಯರನ್ನು ಬರಮಾಡಿಕೊಂಡು ವಿವಾಹ ಸಂಸ್ಕಾರಕ್ಕೆ ಅವಶ್ಯವಾಗಿ ಬೇಕಾಗುವ ಘಟಿತಾರ್ಥ ನಿರ್ಣಯಗಳನ್ನು ತಮ್ಮ ಕುಲಗೋತ್ರಾ-ಬಕುಲಮಾಲಿಕೆಯ ಕುಲ-ಗೋತ್ರಾದಿಗಳನ್ನು ಕೂಡಿಸಿ ನೋಡುವುದರ ಮೂಲಕ ನಿಶ್ಚಯ ಪತ್ರವನ್ನು ಬರೆಯಲು ನಿರ್ಧರಿಸಿ, ಆ ಪತ್ರವನ್ನು ಶ್ರೀನಿವಾಸನಿಗೆ ತಲುಪಿಸಲು ಶುಕಾಚಾರ್ಯರಿಗೆ ವಿಜ್ಞಾಪಿಸಿದನು. ಅದರಂತೆ ರಾಜನು ತಮ್ಮಬಂಧು-ಬಾಂಧವರನ್ನು ಕೂಡಿಕೊಂಡು, ತಮ್ಮ ಕುಲ ಗುರುಗಳ ಸಮ್ಮುಖದಲ್ಲಿ ವಿವಾಹ ನಿಶ್ಚಯ ಪತ್ರ ಬರೆದು ಶುಕಾಚಾರ್ಯರೊಂದಿಗೆ ಶ್ರೀನಿವಾಸದೇವರಿಗೆ ಕಳುಹಿಸಿಕೊಟ್ಟನು. ಅದನ್ನು ಶುಕಾಚಾರ್ಯರು ತಮ್ಮ ಶಿರಸ್ಸಿನಲ್ಲಿಟ್ಟಕೊಂಡು ಸ್ವಾಮಿಗೆ ತಲುಪಿಸಿ, ಇಲ್ಲಿಯ ಒಪ್ಪಿಗೆಯನ್ನು ರಾಜನಿಗೆ ಹೇಳಿ, ಮುಂದಿನ ವಿವಾಹ ಕಾರ್ಯಾರಂಭಗಳನ್ನು ಮಾಡಲು ಅನುಮತಿ ಕೊಟ್ಟರು. ಆ ನಂತರ ಶ್ರೀನಿವಾಸನು ತನ್ನ ತಾಯಿಯಾದ ಬಕುಳೆಗೆ ನನಗೀ ವಿವಾಹವು ಬೇಡವೆನಿಸಿದೆ. ನನಗೆ ಯಾರು ಬಂಧು, ಬಳಗ ಇಲ್ಲ. ಏಕಾಂಗಿ ನಾನು. ಮದುವೆ ನಿಬ್ಬಣಕ್ಕೆ ನಾವಿಬ್ಬರೇ ಹೋಗುವದು ಸರಿಯೇ!!. ಆಕಾಶರಾಜ ಮಹಾರಾಜ. ಅವನಿಗೆ ಬಂಧು ಬಳಗ ಎಲ್ಲಾ ಇದೆ. ಬಂಧು ಬಳಗ ಇಲ್ಲದ ನಾನು ಹೇಗೆ ಸಂಬಂಧ ಬೆಳೆಸಲಿ?? ಅದಕ್ಕೆ ಚಿಂತೆ ಆಗಿದೆ ಎಂದು ಸಾಮಾನ್ಯ ಮಾನವನಂತೆ ನಟಿಸುತ್ತಾ ಹೇಳಿದ. ಅದಕ್ಕೆ ಬಕುಳೆಯು ಇದೆಂತಹ ಮಾತು!! ನಿನ್ನಂತಹ ಪುರುಷರು ಸುಳ್ಳು ಹೇಳಬಾರದು. ನೀನು ಹೇಳುವದೆಲ್ಲ ಸುಳ್ಳು. ನೀನು ಜಗತ್ಕುಟುಂಬಿ. ರಮಾ, ಬ್ರಹ್ಮ ರುದ್ರಾದಿ ದೇವತೆಗಳೇ ನಿನಗೆ ಪರಿವಾರ. ಜಗತ್ತಿನ ಸುಜೀವರೆಲ್ಲರೂ ನಿನ್ನ ಬಂಧುಗಳು.ಇಂತಹ ನೀನು ನಾನು ಒಬ್ಬೊಂಟಿಗ.ನನಗಾರು ಇಲ್ಲ ಅಂತ ಏಕೆ ನಟಿಸುವಿ??..
ನಿನ್ನ ಕಪಟನಾಟಕವನ್ನು ಸಾಕುಮಾಡು. ಬ್ರಹ್ಮ,ವಾಯು, ರುದ್ರಾದಿ ದೇವತೆಗಳನ್ನು, ಮತ್ತು ನಿನ್ನ ಸೊಸೆಯರು, ಮೊಮ್ಮಕ್ಕಳು, ಮರಿ ಮಕ್ಕಳು ಇವರೆನೆಲ್ಲ ಸ್ಮರಿಸು ಅಂತ ಪ್ರಾರ್ಥನೆ ಮಾಡಿದಾಗ ತಕ್ಷಣ ಗರುಡ, ಶೇಷರನ್ನು ಸ್ಮರಿಸಿದನು. ಅವರಿಬ್ಬರೂ ಬಂದ ಕೂಡಲೆ ಗರುಡನಿಗೆ ಬ್ರಹ್ಮ ದೇವರನ್ನು, ಶೇಷನಿಗೆ ರುದ್ರ ದೇವರನ್ನು ನನ್ನ ವಿವಾಹ ಕಾರ್ಯಕ್ರಮಕ್ಕೆ ಬರಲು ಅವರ ಮುಖಾಂತರ ಪತ್ರ ಮುಖೇನ ಆಹ್ವಾನವನ್ನು ನೀಡಿದನು.
ಬ್ರಹ್ಮ ದೇವರು ತನ್ನ ತಂದೆಯು ಬರೆದ ಪತ್ರವನ್ನು ಓದಿ ಕೇಳಿ ತನ್ನ ಸತಿಯರಾದ ಸರಸ್ವತಿ, ಗಾಯತ್ರಿ, ಸಾವಿತ್ರಿ ದೇವಿಯರೊಡನೆ, ತನ್ನ ಮಕ್ಕಳು ಮೊಮ್ಮಕ್ಕಳು ಅವರ ಪರಿವಾರದೊಡನೆ ಶೇಷಗಿರಿ ಕಡೆ ಪಯಣ ಬೆಳೆಸಿದನು. ಅದೇ ಕಾಲಕ್ಕೆ ವಾಯುದೇವರು ಭಾರತಿದೇವಿಯರ ಸಹಿತವಾಗಿ, ರುದ್ರದೇವರು ಪಾರ್ವತಿ ಸಹಿತವಾಗಿ ಇಂದ್ರಾದಿ ದೇವತೆಗಳು ತಮ್ಮ ಪತ್ನಿಯರು ಸಮೇತವಾಗಿ, ಸಕಲ ಋಷಿಗಳು ಅವರ ಪರಿವಾರ ಸಮೇತರಾಗಿ ವೆಂಕಟಾದ್ರಿಗೆ ಬಂದರು. ಭಗವಂತನನ್ನು ಕಂಡು ಬ್ರಹ್ಮ ದೇವನು ಪಾದಕ್ಕೆ ಎರಗಿದಾಗ ಪ್ರೀತಿಯಿಂದ ಆಲಂಗಿಸಿ ಕುಮಾರ!! ನಿನಗೆ ಮಂಗಳವಾಗಲಿ. ಬಹುಕಾಲವಾದ ಮೇಲೆ ನನ್ನ ನೋಡಲು ಬಂದಿರುವೆಯಲ್ಲ. ಒಮ್ಮೆಯಾದರು ನನ್ನನ್ನು ನೋಡಬೇಕು ಎಂಬ ಕೂತುಹಲ ನಿನಗೆ ಬರಲಿಲ್ಲವಲ್ಲ! ಇವಾಗ ಬಂದೆಯಲ್ಲ! ಅದೇ ದೊಡ್ಡದು. ನಿನ್ನನ್ನು ಬಿಟ್ಟು ನನಗೆ ಜಗತ್ತಿನಲ್ಲಿ ಯಾವುದು ಇಲ್ಲ ಅಂತ ಕಣ್ಣೀರು ಹಾಕುತ್ತಾ ಆಲಂಗಿಸಿಕೊಂಡನು. ಸಕಲ ದೇವತೆಗಳು ಈ ಲೀಲೆಯನ್ನು ನೋಡಿ ಆನಂದಭರಿತರಾದರು. ಆನಂತರ ಮಗನನ್ನು ಕೂಡಿಸಿಕೊಂಡು ಹಿಂದೆ ನಡೆದ ವಿಷಯವನ್ನು ಹೇಳಿ ನನ್ನ ಸಲುಹಿದ ಈ ತಾಯಿ ಯಾದ ಬಕುಳೆಗೆ ನಮಸ್ಕಾರ ಮಾಡು ಎಂದು ಹೇಳುತ್ತಾನೆ.
ಆ ಸಮಯದಲ್ಲಿ ಸಕಲ ವಾಧ್ಯಗಳ ಧ್ವನಿ ಕೇಳಲು ಬಂದವರು ಯಾರು?? ಎಂದು ಕೇಳಲು ಜಿಂಕೆಯನ್ನು ಏರಿಕೊಂಡು ಸುವಾಸನೆಯನ್ನು ಬೀರುತ್ತಾ ಭಾರತಿಪತಿಯಾದ ಮುಖ್ಯ ಪ್ರಾಣದೇವರು ತಮ್ಮ ಸತಿಯಾದ ಭಾರತಿದೇವಿಯರೊಡನೆ ಅಲ್ಲಿಗೆ ಬರುತ್ತಾರೆ.. ತನ್ನ ಮಗನಾದ ವಾಯುದೇವರ ಆಗಮನದಿಂದ ಸಂತಸ ಗೊಂಡಂತೆ ನಟಿಸಿದ. ನಂತರ ಕೆಲ ಕ್ಷಣದಲ್ಲಿ ರುದ್ರ ದೇವರು ಸಹ ಅಲ್ಲಿ ಗೆ ಬರುತ್ತಾರೆ. ಹೀಗೆ ಸಕಲ ದೇವತಾ ಪರಿವಾರದವರು ಬಂದಾಗ ಸಂತೋಷದಿಂದ ಎಲ್ಲರನ್ನೂ ಆದರಿಸಿ ಭಗವಂತನು ಸತ್ಕಾರ ಮಾಡುತ್ತಾನೆ. ನಂತರ ದೇವಶಿಲ್ಪಿಯಾದ ವಿಶ್ವ ಕರ್ಮನ ಮೇಲೆ ಸಿಟ್ಟು ಬಂದಂತೆ ನಟಿಸಿ ಆನಂತರ ಅನುಗ್ರಹಿಸಿ ಇಂದ್ರದೇವರ ಮುಖಾಂತರ ನಾರಾಯಣ ಪುರದಲ್ಲಿ ಉಳಿದುಕೊಳ್ಳಲು ದೊಡ್ಡ ಸೌಧವನ್ನು ನಿರ್ಮಿಸಿದನು. ಸಕಲ ದೇವತೆಗಳಿಗೆ ಅವರವರ ಯೋಗ್ಯತೆ ಅನುಗುಣವಾಗಿ ಕಾರ್ಯವನ್ನು ಒಪ್ಪಿಸಿದನು.
ವಿವಾಹಾಂಗವಾಗಿ ಪುಣ್ಯಾಹ, ನಾಂದೀ ಮುಂತಾದ ಶುಭಕಾರ್ಯಗಳನ್ನು ಮಾಡುವ ಸಮಯದಲ್ಲಿ ತನ್ನ ಪತ್ನಿಯಾದ ಲಕ್ಷ್ಮೀ ದೇವಿಯನ್ನು ನೆನೆಸಿಕೊಂಡು ಸಾಮಾನ್ಯ ಮಾನವನಂತೆ ಶೋಕಿಸತೊಡಗಿದ.. ನಂತರ ಬ್ರಹ್ಮ ದೇವನ ಕುರಿತು ಸಿರಿ ಇಲ್ಲದ ಸಭೆಯು ಸರಿಬಾರದಯ್ಯ. ಗಗನದಲ್ಲಿ ನಕ್ಷತ್ರಗಳು, ಚಂದ್ರ ಇಲ್ಲದೇ ಹೇಗೆ ಶೋಭಿಸದೋ, ಮರಗಳು ಇಲ್ಲದ ಅರಣ್ಯ, ರೆಕ್ಕೆ ಇಲ್ಲದ ಪಕ್ಷಿಗಳು, ಅದೇ ರೀತಿ ಲಕ್ಷ್ಮೀದೇವಿ ಇಲ್ಲದ ಈ ಸಭೆ ಶೋಭಿಸದು ಅಂತ ಹೇಳಿದನು.
ಅದಕ್ಕೆ ರುದ್ರ ದೇವನು ಭಗವಂತನಿಗೆ ಹೇಳುವರು. ನೀನು ಸ್ವರಮಣನು, ಸಂಗ ರಹಿತನು. ಕ್ಲೇಶವೆಂಬುವದೇ ನಿನ್ನ ಬಳಿ ಇಲ್ಲ. ಯಾಕೆ ಈ ರೀತಿಯಲ್ಲಿ ಕಣ್ಣೀರು ಹಾಕುವದು?? ಅಂತ ಕೇಳಿದಾಗ ನೀನಿನ್ನು ಬಾಲಕ!!. ನಿನಗೇನು ತಿಳಿಯದು. ಪ್ರಳಯ ಕಾಲದಲ್ಲಿ ನನ್ನ ಜೊತೆಯಲ್ಲಿ ನನಗೆ ಹಾಸಿಗೆಯಾಗಿ, ಆಭರಣವಾಗಿ ಗೆಳತಿಯಾಗಿ ನನ್ನೊಡನೆ ಸದಾ ಇರುವಂತಹ ಲಕ್ಷ್ಮೀಯನ್ನು ಬಿಟ್ಟು ನನಗೆ ಇರಲು ಆಗುವುದಿಲ್ಲ ಅಂತ ಹೇಳಿ ಸೂರ್ಯದೇವನನ್ನು ಕರೆದು ಕೊಲ್ಹಾಪುರಕ್ಕೆ ಲಕ್ಷ್ಮೀಯನ್ನು ಕರೆತರಲು ಹೇಳುತ್ತಾನೆ. ಅದಕ್ಕೆ ಸೂರ್ಯನು ನಾನು ಕರೆದರೆ ಹೇಗೆ ಜಗನ್ಮಾತೆ ಬರುವಳು ಪ್ರಭು!!?? ಎನ್ನುವನು. ಅದಕ್ಕೆ ಭಗವಂತನು ಯುಕ್ತಿಯನ್ನು ಹೇಳುವ.. ನೀನು ಕಣ್ಣೀರು ಸುರಿಸುತ್ತಾ, ಒರೆಸಿಕೊಳ್ಳುತ್ತಾ ರಮಾದೇವಿಯ ಮನೆ ಬಾಗಿಲಲ್ಲಿ ನಿಂತು ಕರೆದಾಗ ಬಂದು ಸಮಾಧಾನ ಮಾಡುವಳು.. ಅವಾಗ ನೀನು ತಾಯಿ! ನಿನ್ನ ಪತಿಯಾದ ನಾರಾಯಣನು ಹಾಸಿಗೆ ಹಿಡಿದು ಮಲಗಿದ್ದಾನೆ. ಬದುಕುವನೋ ಅಥವಾ ಇಲ್ಲವೊ ತಿಳಿಯದು ಬಹಳ ಅಶಕ್ತನಾಗಿದ್ದಾನೆ ಬೇಗ ಹೊರಡು ಅಂತ ಅವಸರಿಸು.. ಎಂದು ಹೇಳುವನು.
ಅದಕ್ಕೆ ಸೂರ್ಯನು ಸ್ವಾಮಿ!! ಸಕಲಲೋಕಗಳಲ್ಲಿಯು ಸರ್ವಜ್ಞೆಯಾದ ಸಕಲವನ್ನು ತಿಳಿದ ಆ ತಾಯಿ ನನ್ನ ಮಾತನ್ನು ಹೇಗೆ ನಂಬುವಳು?? ಯಾವಾತನ ನಾಮ ಸ್ಮರಣೆ ಇಂದ ಸಕಲ ರೋಗ ನಿವಾರಣೆ ಆಗುವದೋ ಅವನು ರೋಗಗ್ರಸ್ಥ ಅಂತ ಹೇಳಿದರೆ ತಾಯಿ ನಂಬುವಳೇ?? ಎಂದಾಗ ವತ್ಸ!! ಸೂರ್ಯನೇ ಚಿಂತಿಸಬೇಡ. ನನ್ನ ಮಾಯೆಯಿಂದ ಲಕ್ಷ್ಮೀ ದೇವಿಯು ಮೋಹಿತಳಾಗಿ ನಿನ್ನ ಜೊತೆ ಬರುವಳು ಎಂದು ಹೇಳಿ ರಥವನ್ನು ಕೊಟ್ಟು ಕಳುಹಿಸುವನು.
ಅದರಂತೆ ಲಕ್ಷ್ಮೀ ದೇವಿಯು ಶ್ರೀಹರಿಯ ಆದೇಶದಂತೆ ದೇಶ ಕಾಲಗಳಿಗೆ ತಕ್ಕಂತೆ ಶ್ರೀ ಹರಿಯ ಆಚರಣೆಗೆ ತಕ್ಕಂತೆ ತಾನು ಸಹ ಅವನ ಮಾತನ್ನು ನಂಬಿದವಳಂತೆ ನಟಿಸುತ್ತಾ ಶೀಘ್ರವಾಗಿ ರಥದಲ್ಲಿ ಕುಳಿತು ಬರುವಳು. ರಮಾದೇವಿ ಬಂದ ವಿಚಾರವನ್ನು ತಿಳಿದು ಭಗವಂತನು ಅಶಕ್ತನು, ರೋಗಗ್ರಸ್ತನು ಆದವನಂತೆ ಆಕಾರಧರಿಸಿ ತನ್ನ ಬಲತೋಳನ್ನು ಬ್ರಹ್ಮ ದೇವನಮೇಲೆ, ಎಡತೋಳನ್ನು ರುದ್ರ ದೇವನ ಮೇಲೆ ಇಟ್ಟು ಕೊಂಡು ಮೆಲ್ಲಗೆ ಹೆಜ್ಜೆಗಳನ್ನು ಇಡುತ್ತಾ ಬಂದನು.. ತನಗೆ ಬೇಕಾದ ಹಾಗೆ ರೂಪಧಾರಣೆ ಮಾಡುವ ಭಗವಂತನ ಈ ನಾಟಕವು ಸಕಲ ದೇವತೆಗಳಿಗು ಋಷಿಗಳಿಗು ಆಶ್ಚರ್ಯಕರವಾಗಿ ತೋರಿತು. ಬಂದ ರಮಾದೇವಿ ಈ ರೂಪವನ್ನು ಕಂಡು ಭಗವಂತನಿಗೆ ನಮಸ್ಕರಿಸಿ ಅವನನ್ನು ಆಲಂಗಿಸಿಕೊಂಡಳು. ಕೆಲ ಕ್ಷಣದಲ್ಲಿ ಭಗವಂತನು ಅತೀ ಪುಷ್ಟಿ ಉಳ್ಳವನಾಗಿ ಸುಂದರವಾಗಿ ಪತ್ನಿ ಸಮೇತ ಸಿಂಹಾಸನದ ಮೇಲೆ ಕುಳಿತನು. ವಿವಾಹಕ್ಕೆ ಅತಿ ಮುಖ್ಯವಾಗಿ ಬೇಕಾಗುವ ದ್ರವ್ಯರಾಶಿ ನಾಲ್ಕು ಲಕ್ಷ ಸುವರ್ಣವನ್ನು ಕುಬೇರನಿಂದ ಸಾಲವಾಗಿ ತೆಗೆದುಕೊಂಡನು. ನಂತರ ವಿವಾಹ ಸಂಸ್ಕಾರಕ್ಕೆ ಪೂರಕವಾದ ಸುರಗಿಯ, ಮಂಗಳಸ್ನಾನ, ಅಲಂಕಾರ ಮಾಡಿಕೊಂಡು, ಮಂಟಪ-ಕುಲದೇವತಾ ಸ್ಥಾಪನೆಯನ್ನು ಶ್ರೀವರಾಹಸ್ವಾಮಿಯ ಗುಡಿಯಲ್ಲಿ ಪ್ರತಿಷ್ಠಾಪಿಸಿ, ತಾನೇ ತನ್ನ ಕುಲದೈವವೆಂದು ಹೇಳಿಕೊಂಡ ಅಹೋಬಲ ಶ್ರೀಲಕ್ಷ್ಮೀ ನರಸಿಂಹದೇವರಿಗೆ ಭೂರಿಭೋಜನದ ಅಡುಗೆಯನ್ನು ಸಮರ್ಪಣೆ ಮಾಡಿ, ದೇವತೆಗಳಿಗೆ ಭೂರಿ ಭೋಜನಾದಿಗಳನ್ನು ಮಾಡಿಸಿ, ದೇವತೆಗಳ ಸಂಗಡ ಆಕಾಶರಾಜನ ಪಟ್ಟಣಕ್ಕೆ ತನ್ನ ಬಂಧು-ಬಾಂಧವರ ಜೊತೆಗೂಡಿ ಬಂದು ನವಮಿ ದಿನ ಅಂದರೆ ವಿವಾಹಕ್ಕೆ ಹಿಂದಿನ ದಿನದಲ್ಲಿ ಆತಿಥ್ಯ ಸ್ವೀಕಾರ ಮಾಡುವನು.
ಶ್ರೀನಿವಾಸದೇವರು ಆಕಾಶರಾಜನಿಂದ ದಿಬ್ಬಣ ಪೂಜೆಯನ್ನು ಮುಗಿಸಿಕೊಂಡು, ರಾಜಗೃಹಕ್ಕೆ ಬಂದು, ಆ ರಾತ್ರಿಯ ಆದರ-ಆತಿಥ್ಯಗಳನ್ನು ಸ್ವಿಕರಿಸಿ ಅಲ್ಲಿಯೇ ವಿಶ್ರಾಂತಿ ತೆಗೆದುಕೊಂಡು ಮರುದಿನ ವೈಶಾಖ ಶುದ್ಧ ದಶಮಿಯಂದು ಬ್ರಹ್ಮಾದಿ ಸರ್ವ ದೇವತೆಗಳ ಅಧಿಷ್ಠಾನದಲ್ಲಿ ಬೃಹಸ್ಪತ್ತ್ಯಾಚಾರ್ಯಾದಿ ಅನೇಕ ಋಷಿಮುನಿಗಳ ಅಧ್ವರ್ಯದಲ್ಲಿ "ದೇವಾಗ್ನಿ ದ್ವಿಜ ಸನ್ನಿಧೌ"ಎಂದು ಮುಂದಿನ ಜನಾಂಗದ ಅನುಕರಣೆಗೊಸ್ಕರ ನಮಗೆ ವಿವಾಹದ ಕ್ರಮ ತಿಳಿಸಲೋಸುಗ ಶ್ರೀಪದ್ಮಾವತಿಯನ್ನು ಶ್ರೀ ಶ್ರೀನಿವಾಸದೇವರು ಪಾಣಿಗ್ರಹಣವನ್ನು ಮಾಡಿಕೊಂಡು, ಮಾವನೊಂದಿಗೆ ಎಲ್ಲಾ ಗೌರವಾದಿಗಳನ್ನು ಸ್ವಿಕರಿಸಿ ಅಗಸ್ತ್ಯಾಶ್ರಮಕ್ಕೆ ಬಂದು ಆರು ತಿಂಗಳುಗಳ ಕಾಲ ಅಲ್ಲಿಯೇ ಇದ್ದು ನಂತರ ಬೆಟ್ಟವನ್ನೇರಿ ತನ್ನ ಸ್ವಸ್ಥಾನವನ್ನು ಅಲಂಕರಿಸಿ ಅಂದಿನಿಂದ ಇಂದಿಗೂ ಭಕ್ತರನ್ನು ಉದ್ದರಿಸುತ್ತ ವೆಂಕಟಾದ್ರಿಯಲ್ಲಿ ನೆಲಸಿರುವನು..
ಶತಾನಂದರು ಜನಕರಾಜನಿಗೆ ಈ ಶ್ರೀನಿವಾಸ ಕಲ್ಯಾಣವನ್ನು ಶ್ರವಣ ಮಾಡಿದರ ಫಲವನ್ನು ಹೇಳುತ್ತಾರೆ. ಕೋಟಿ ಕನ್ಯಾದಾನ ಮಾಡಿದ ಫಲ, ಭೂದಾನ ಮಾಡಿದ ಫಲ, ಈ ಕಥೆಯನ್ನು ಕೇಳುವದರಿಂದ ಬರುವದು..
ಇದನ್ನು ಶ್ರವಣ ಮಾಡಿಸಿದವರಿಗು, ಕಥೆಯನ್ನು ಹೇಳಿದವರಿಗು, ಕೇಳಿದವರಿಗು ಸಹ ಸಮಸ್ತ ಅಭೀಷ್ಟಗಳು ನೆರವೇರುತ್ತದೆ.. ಸರ್ವರಿಗೂ ಇದರಿಂದ ಮಂಗಳುಂಟಾಗುವದು. ಅಂತ ಹೇಳಿ ಮಂಗಳವನ್ನು ಆಚರಿಸಿದರು. ಇಂತು ಭವಿಷ್ಯೊತ್ತರ ಪುರಾಣ ಅಂತರ್ಗತ ವಾದ ಶ್ರೀ ವೆಂಕಟೇಶ ಮಹಾತ್ಮೆ ಸಂಪೂರ್ಣವಾದುದು.
Sri Sreenivasa Padmavati Kalyana
ಕಾಮೆಂಟ್‌ಗಳು