ಹರೀಂದ್ರನಾಥ
ಹರೀಂದ್ರನಾಥ ಚಟ್ಟೋಪಾಧ್ಯಾಯ
ಹರೀಂದ್ರನಾಥ ಚಟ್ಟೋಪಾಧ್ಯಾಯ ಭಾರತೀಯ ನಾಟಕಕಾರ, ಕವಿ, ಸಂಗೀತಗಾರ, ನಟ ಮತ್ತು ರಾಜಕಾರಣಿ.
ಹರೀಂದ್ರನಾಥ ಚಟ್ಟೋಪಾಧ್ಯಾಯ ಅವರು 1898ರ ಏಪ್ರಿಲ್ 2ರಂದು ಹೈದರಾಬಾದ್‌ನಲ್ಲಿ ಜನಿಸಿದರು. ಅವರ ತಾಯಿ ಸುಂದರಿ ದೇವಿ ಬಂಗಾಳಿ ಕವಯತ್ರಿಯಾಗಿ ಪ್ರಸಿದ್ಧರಾಗಿದ್ದರು. ತಂದೆ ಎಡಿನ್‌ಬರ್ಗ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದು ಹೈದರಾಬಾದ್‌ನ ನಿಜಾಮ್ ಕಾಲೇಜು ಸ್ಥಾಪಕರಾಗಿ ಹೆಸರಾಗಿದ್ದವರು. ಭಾರತದ ಕೋಗಿಲೆ ಎಂದು ಪ್ರಸಿದ್ಧರಾದ ಸ್ವಾತಂತ್ರ್ಯ ಹೋರಾಟಗಾರ್ತಿ ಸರೋಜಿನಿ ನಾಯ್ಡು ಹರೀಂದ್ರನಾಥರ ಸಹೋದರಿ.
ಹರೀಂದ್ರನಾಥ್ ವೈವಿಧ್ಯಪೂರ್ಣ ಆಸಕ್ತಿಗಳಲ್ಲಿ ಸಾಹಿತ್ಯ, ಸಂಗೀತ, ರಾಜಕೀಯ, ರಂಗಭೂಮಿ ಮತ್ತು ಬೆಳ್ಳಿತೆರೆ ಇದ್ದವು. ಅವರು 1973 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದರು.
ಹರೀಂದ್ರನಾಥ್ ಅವರು ಮಹಿಳಾ ಪ್ರವರ್ತಕಿ ಮತ್ತು ಸಮಾಜವಾದಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರನ್ನು ಪ್ರೇಮಿಸಿ ವಿವಾಹವಾದರು. ಕನ್ನಡತಿ ಕಮಲಾದೇವಿ ಅವರು ಭಾರತೀಯ ಸಹಕಾರ ಒಕ್ಕೂಟ ಮತ್ತು ಅಖಿಲ ಭಾರತ ಮಹಿಳಾ ಸಮ್ಮೇಳನವನ್ನು ಸ್ಥಾಪನೆ ಮಾಡಿದವರು. ಹತ್ತೊಂಬತ್ತನೇ ಶತಮಾನದಲ್ಲಿ ಬ್ರಿಟನ್‌ನಲ್ಲಿ ಮೂಡಿದ ಕೈಗಾರಿಕಾ ಕ್ರಾಂತಿಯಿಂದ ನಾಶವಾದ ನೇಯ್ಗೆ ಮತ್ತು ಕುಂಬಾರಿಕೆಯಂತಹ ಭಾರತೀಯ ಕರಕುಶಲ ಕಲೆಗಳನ್ನು ಪುನರುಜ್ಜೀವನಗೊಳಿಸಿದ ಆಲ್ ಇಂಡಿಯನ್ ಹ್ಯಾಂಡಿಕ್ರಾಫ್ಟ್ಸ್ ಬೋರ್ಡ್ ಸಂಸ್ಥೆಗೆ ಪ್ರೇರಣೆಯಾಗಿದ್ದವರು.
ಮದುವೆಯಾದ ಸ್ವಲ್ಪ ಸಮಯದಲ್ಲೇ ಹರೀಂದ್ರನಾಥ್ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದರು. ಕೆಲ ಕಾಲದ ನಂತರ ಕಮಲಾದೇವಿ ಅವರ ಜೊತೆಗೂಡಿದರು. ಹರೀಂದ್ರನಾಥ್ ಅಲ್ಲಿ ಸಾನೆಟ್‌ಗಳು ಮತ್ತು ನಾಟಕಗಳನ್ನು ರಚಿಸಿ ಖ್ಯಾತರಾದರು.
ಹರೀಂದ್ರನಾಥ್ ಅವರಮೊದಲ ಕವನ ಸಂಕಲನ 'ದಿ ಫೀಸ್ಟ್ ಆಫ್ ಯೂತ್' ಅವರು 19 ವರ್ಷದವರಾಗಿದ್ದಾಗ ಪ್ರಕಟಗೊಂಡಿತು. ಆರ್ಥರ್ ಕ್ವಿಲ್ಲರ್-ಕೌಚ್ ಮತ್ತು ಜೇಮ್ಸ್ ಹೆನ್ರಿ ಕಸಿನ್ಸ್ ಮುಂತಾದವರಿಂದ ಪ್ರಶಂಸೆಯನ್ನು ಪಡೆದರು. ಅವರು ಪ್ರಾಚೀನ ಭಾರತೀಯ ಸಂಸ್ಕೃತಿ ಮತ್ತು ವೈದಿಕ ವಿಚಾರಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಇಂಗ್ಲಿಷ್‌ನಲ್ಲಿ ಅನೇಕ ಬರಹಗಳನ್ನು ಮಾಡಿದರು.
ದ ಮ್ಯಾಜಿಕ್ ಟ್ರೀ, ಏನ್ಷಂಟ್ ವಿಂಗ್ಸ್, ಬ್ಲಡ್ ಆಫ್ ಸ್ಟೋನ್ಸ್, ಸ್ಪ್ರಿಂಗ್ ಇನ್ ವಿಂಟರ್,
ವರ್ಜಿನ್ ಅಂಡ್ ವೈನ್ಯಾರ್ಡ್ಸ್, ದ ಲೇಡೀಸ್ ಜಿಯಂಟ್ ಹ್ಯಾಟ್, ದ ಅರ್ಥನ್ ಗ್ಲೋಬ್ಲೆಟ್,
ಸೆಲ್ಯೂಟ್ ಟು ಆರ್-ಡೇ, ತಟಿ ತಟಿ ತೋತಾ (ಹಿಂದಿಯಲ್ಲಿ), ವೋಯೇಜ್, ಥಿಂಗ್ಸ್ ಐ ಲವ್, ಕ್ಯೂರಿಯಸ್ ಟೌನ್ ಮುಂತಾದವು ಹರೀಂದ್ರನಾಥರ ಕೃತಿಗಳಲ್ಲಿ ಸೇರಿವೆ. ಅವರ ಕಾವ್ಯ ರವೀಂದ್ರನಾಥ ಠಾಗೂರರಿಂದ ಮೆಚ್ಚುಗೆ ಗಳಿಸಿತ್ತು.
ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಬೆಳವಣಿಗೆಯು ಬಲಗೊಂಡಂತೆ, ಹರೀಂದ್ರನಾಥ್ ಮತ್ತು ಕಮಲಾದೇವಿ ಭಾರತಕ್ಕೆ ಮರಳಲು ನಿರ್ಧರಿಸಿ, ಹರೀಂದ್ರನಾಥ್ ಅವರು ಕೇಂಬ್ರಿಡ್ಜ್ ಪದವಿಯನ್ನು ತ್ಯಜಿಸಿದರು. ಯುರೋಪಿನಲ್ಲಿ ಅವರು ತಮ್ಮ ಸೋದರ ಕ್ರಾಂತಿಕಾರಿ ವೀರೇಂದ್ರನಾಥ್ ಚಟ್ಟೋಪಾಧ್ಯಾಯ ಮತ್ರು ಮತ್ತು ಮಹಾನ್ ಸ್ವಾತಂತ್ರ್ಯ ಹೋರಾಟಗಾರ್ತಿ ಮೇಡಮ್ ಕಾಮಾ ಅವರ ಸಂಪರ್ಕದಲ್ಲಿದ್ದರು.
ಹರೀಂದ್ರನಾಥರ ‘ತುಕಾರಾಂ’ ನಾಟಕವು ಲಂಡನ್‌ನ ಲಿಟಲ್ ಥಿಯೇಟರ್‌ನಲ್ಲಿ 1928 ರಲ್ಲಿ ಪ್ರದರ್ಶನಗೊಂಡಿತು.
ಹರೀಂದ್ರನಾಥರು ಭಾರತಕ್ಕೆ ಆಗಮಿಸಿದ ನಂತರ ಕಲಾವಿದರಾಗಿ, ನಾಟಕಕಾರರಾಗಿ ಮತ್ತು ಕಲಾವಿದರಾಗಿ ವೃತ್ತಿಯನ್ನು ಮುಂದುವರೆಸಿದರು. ಹರೀಂದ್ರನಾಥ್ ಕಮಲಾದೇವಿ ದಂಪತಿಗಳ ಒಂದು ಮಗು ಸಾವಿಗೀಡಾಯಿತು. ಇನ್ನೊಂದು ಮಗು ಉಳಿಯಿತು. ಕಮಲಾದೇವಿ ಮತ್ತು ಹರೀಂದ್ರನಾಥ್ ಅವರ ವಿವಾಹ ವಿಚ್ಛೇದನವು ಭಾರತದ ನ್ಯಾಯಾಲಯಗಳು ಅಂಗೀಕರಿಸಿದ ಮೊದಲ ಕಾನೂನುಬದ್ಧ ವಿಚ್ಛೇದನವಾಗಿದೆ. ಆಕಾಶವಾಣಿಯಲ್ಲಿ ಹರೀಂದ್ರನಾಥ್ ಅವರು ತಮ್ಮ ಪ್ರಸಿದ್ಧ ಕಾವ್ಯ 'ರೈಲ್ ಗಾಡಿ'ಯನ್ನು ವಾಚನ ಮಾಡಿದ್ದರು.
ಅಶೋಕ್ ಕುಮಾರ್ ಅವರು 'ಆಶೀರ್ವಾದ್' ಚಿತ್ರದಲ್ಲಿ ಹರೀಂದ್ರನಾಥ್ ಅವರ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದ್ದಾರೆ. ಹರೀಂದ್ರನಾಥ್ ಅನೇಕ ಪದ್ಯಗಳನ್ನು ಸಂಯೋಜಿಸಿದರು, ಸಂಗೀತವನ್ನು ಮಾಡಿದರು ಮತ್ತು ಹಾಡಿದರು. ಅವುಗಳಲ್ಲಿ ತರುಣ್ ಅರುಣ್ ಸೆ ರಂಜಿತ್ ಧರಣಿ ಮತ್ತು ಸೂರ್ಯ ಅಸ್ತ್ ಹೋ ಗಯಾ ಮುಂತಾದವು ಜನಪ್ರಿಯವಾದವು.
ಹರೀಂದ್ರನಾಥ್ ಅವರು ವಿಜಯವಾಡ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಬೆಂಬಲದೊಂದಿಗೆ ಗೆದ್ದು. 1952 ರಿಂದ 1957 ಅವಧಿಯಲ್ಲಿ ಲೋಕಸಭಾ ಸದಸ್ಯರಾಗಿದ್ದರು.
ಹರೀಂದ್ರನಾಥ್ 1972ರಲ್ಲಿ ಹೃಷಿಕೇಶ್ ಮುಖರ್ಜಿಯವರ ಹಿಂದಿ ಚಲನಚಿತ್ರ 'ಬಾವರ್ಚಿ'ಯಲ್ಲಿ ಅದ್ಭುತವಾಗಿ ನಟಿಸಿದ್ದರು. ಅವರು ಮೂರು ಸತ್ಯಜಿತ್ ರೇ ಚಲನಚಿತ್ರಗಳಲ್ಲಿ ಅತಿಥಿ ಪಾತ್ರಗಳೂ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಅಡೋಸ್ ಪಡೋಸ್ ಅಂತಹ ಹಲವು ದೂರದರ್ಶನದ ಸರಣಿಗಳಲ್ಲೂ ನಟಿಸಿದ್ದರು.
ಹರೀಂದ್ರನಾಥ ಚಟ್ಟೋಪಾಧ್ಯಾಯ 1990 ಜೂನ್ 23 ರಂದು ನಿಧನರಾದರು.
On the birth anniversary of great poet, playwright, actor and politician Harindranath Chattopadhyay
ಕಾಮೆಂಟ್‌ಗಳು