ಚೇತನಾ ಪ್ರಸಾದ್
ಚೇತನಾ ಪ್ರಸಾದ್
ರಂಗಭೂಮಿ ಕಲಾವಿದೆ ಮತ್ತು ಯೋಗ ತರಬೇತುದಾರರಾಗಿರುವ ಚೇತನಾ ಪ್ರಸಾದ್ ಬಹುಮುಖಿ ಪ್ರತಿಭೆ.
ಮೇ 13 ಚೇತನಾ ಅವರ ಹುಟ್ಟುಹಬ್ಬ. ಅವರು ಹುಟ್ಟಿದ್ದು ಉಡುಪಿಯ ಕುಂದಾಪುರ ತಾಲೂಕಿನ ಕೊರವಡಿ ಎಂಬಲ್ಲಿ. ತಂದೆ ರಾಮಚಂದ್ರ ಉಪಾಧ್ಯ ಅವರು ಅಧ್ಯಾಪಕರಾಗಿದ್ದರು. ತಾಯಿ ಕಸ್ತೂರಿ ಉಪಾಧ್ಯ. ಚೇತನಾ ಅವರು ಹುಟ್ಟೂರಿನಲ್ಲಿ ಪ್ರಾಥಮಿಕ ವಿಧ್ಯಾಭ್ಯಾಸ ಮಾಡಿ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಬಿ.ಕಾಂ. ಪದವಿ, ಕಂಪ್ಯೂಟರ್ ಡಿಪ್ಲೋಮಾ ಪದವಿ, ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಯೋಗದಲ್ಲಿ ಒಂದು ವರ್ಷದ ಇನ್ಟ್ರಕ್ಟರ್ ಪದವಿ ಪಡೆದರು. ಮುಂದೆ ಮದುವೆಯಾಗಿ ಬೆಂಗಳೂರಿಗೆ ಬಂದರು. ಪತಿ ಗುರುಪ್ರಸಾದ್ ಹೆಬ್ಬಾರ್, ಪ್ರತಿಷ್ಠಿತ ಕಂಪನಿಯೊಂದರಲ್ಲಿ ಅಧಿಕಾರಿಗಳಾಗಿದ್ದು ಯಕ್ಷಗಾನ, ಸಂಗೀತ ಮತ್ತು ಕ್ರೀಡಾ ಆಸಕ್ತಿ ಹೊಂದಿದವರಾಗಿದ್ದು ವಿಚಾರ ಶೀಲ ಮನೋಭಾವದವರು. ಮಗಳು ಸಿಂಚನ ಇಂಜನೀಯರಿಂಗ್ ವ್ಯಾಸಂಗದ ಜೊತೆಗೆ ಭರತನಾಟ್ಯ ಕಲಿಯುತ್ತಿದ್ದಾರೆ. ಮಗ ಚಿರಂತನ್ ಹೆಬ್ಬಾರ್ ಹೈಸ್ಕೂಲು ವಿದ್ಯಾಭ್ಯಾಸದ ಜೊತೆಗೆ ಡ್ರಮ್ಸ್ ಹಾಗೂ ಕ್ರಿಕೆಟ್ ಕಲಿಯುತ್ತಿದ್ದಾನೆ.
ಚೇತನಾ ಅವರು ಹಲವಾರು ವರ್ಷ ಮೆಡಿಕಲ್ ಟ್ರಾನ್ಸ್ಕ್ರಿಪ್ಷನ್ ಕ್ಷೇತ್ರ ಹಾಗೂ ಹೆಸರಾಂತ ಎಲೆಕ್ಟ್ರಾನಿಕ್ಸ್ ಸಂಸ್ಥೆಯಲ್ಲಿ ವೃತ್ತಿ ನಿರ್ವಹಿಸಿದ್ದರು. ಪ್ರಸ್ತುತ ಅವರು ಯೋಗ ತರಬೇತುದಾರರಾಗಿ ನೇರ ತರಗಗತಿಗಳು ಮತ್ತು ಆನ್ಲೈನ್ ತರಗತಿಗಳ ಮೂಲಕ ಶಿಕ್ಷಣ ನೀಡುತ್ತಿದ್ದಾರೆ.
ಚೇತನಾ ಅವರು ಕಾಲೇಜು ದಿನಗಳಲ್ಲಿ ಪ್ರಾಧ್ಯಾಪಕರಾದ ಚಿ. ಉಪೇಂದ್ರ ಸೋಮಯಾಜಿ, ಹೆಚ್. ವಿ. ನರಸಿಂಹಮೂರ್ತಿ, ಹಾಗೂ ವಸಂತ್ ಬನ್ನಾಡಿಯವರ ಪ್ರೋತ್ಸಾಹದಿಂದ ಓದುವ
ಹವ್ಯಾಸದಲ್ಲಿ ತೊಡಗುವುದರ ಜೊತೆಗೆ
ಕಾಲೇಜು ಮ್ಯಾಗಜಿನ್ಗಳಿಗೆ ಬರಹಗಳನ್ನೂ ಮಾಡತೊಡಗಿದರು. ಕೋ. ಶಿವಾನಂದ ಕಾರಂತರ ಒತ್ತಾಸೆಯಿಂದ ಇವರು ಬರೆದ ಕವಿತೆಗಳು ಸ್ಥಳೀಯ ಪತ್ರಿಕೆ 'ಕುಂದಪ್ರಭ'ದಲ್ಲಿ ಮೂಡಿಬರುತ್ತಿದ್ದವು. ಕವನಗಳೆಂದರೆ ಇವರಿಗೆ ಬಹಳ ಪ್ರೀತಿ... ಓದುವುದು, ಬರೆಯುವುದು, ವಾಚಿಸುವುದು ಎಲ್ಲವೂ. 2000 ವರ್ಷದಲ್ಲಿ ಯುವ ಸಾಹಿತ್ಯ ಸಮ್ಮೇಳನದಲ್ಲಿ ಕಾವ್ಯ ವಾಚಿಸಿದ್ದರು.
ಅಭಿನಯ ಕಲೆ ಚೇತನಾ ಅವರಿಗೆ ಅವರ
ತಂದೆಯಿಂದ ಬಂದ ಬಳುವಳಿ. ಅಧ್ಯಾಪಕರಾಗಿದ್ದ ಇವರ ತಂದೆಯವರು ಮಕ್ಕಳಿಗೆ ನಾಟಕ ಮಾಡಿಸುವುದರ ಜೊತೆಗೆ, ತಾವೇ ಸಂಘ ಸಂಸ್ಥೆಗಳನ್ನು ಕಟ್ಟಿ ನಾಟಕ ಆಡಿಸಿ ಅಭಿನಯಿಸುತ್ತಿದ್ದರು. ಅವರೊಂದಿಗೆ ಸುಮಾರು 10ನೇ ವಯಸ್ಸಿನಲ್ಲಿ "ಪಾದುಕಾ ಪ್ರದಾನ"ದ ಭರತ, "ಶಾಕುಂತಲ"ದ ಶಕುಂತಳೆ ಮುಂತಾದ ಪಾತ್ರ ನಿರ್ವಹಿಸಿಗಳಲ್ಲಿ ಅಭಿನಯಿಸಿದ್ದರು. ಕಾಲೇಜು ದಿನಗಳಲ್ಲಿ ಕಾಲೇಜಿನ ಭಾಗವಾಗಿದ್ದ ಕುಂದಾಪುರದ ರಂಗ ಅಧ್ಯಯನ ಕೇಂದ್ರ ಇವರ ನಾಟಕದ ಆಸಕ್ತಿಗೆ ಇನ್ನಷ್ಟು ನೀರೆರೆದು ಬೆಳೆಸಿತು. ಕೇಂದ್ರದ ಸಂಚಾಲಕರಾಗಿದ್ದ ಪ್ರೊ. ವಸಂತ್ ಬನ್ನಾಡಿಯವರ ನಿರ್ದೇಶನದಲ್ಲಿ ಸಾಹೇಬರು ಬರುತಾರೆ, ಸಂಕ್ರಾಂತಿ, ತಲೆದಂಡ, ಯಯಾತಿ, ಅಗ್ನಿಲೋಕ ಹಾಗೂ ಜಯಪ್ರಕಾಶ್ ಮಾವಿನಕುಳಿಯವರ 'ಅಕಬರ' ಸೇರಿದಂತೆ ಹಲವಾರು ನಾಟಕಗಳಲ್ಲಿ ಹಾಗೂ ರಂಗಶಿಬಿರಗಳಲ್ಲಿ ತೊಡಗಿಕೊಂಡಿದ್ದರು. ಕಾರ್ಯಕ್ರಮ ನಿರ್ವಹಣೆ, ನಿರೂಪಣೆ ಸಹಾ ಮಾಡುತ್ತಿದ್ದರು. ರಂಗೋಲಿ ಸ್ಫರ್ಧೆಗಳಲ್ಲಿ ಭಾಗವಹಿಸಿ, ಅನೇಕ ಬಹುಮಾನಗಳನ್ನು ಗೆದ್ದಿದ್ದರು.
ಚೇತನಾ ಅವರು ಮದುವೆಯಾಗಿ ಬೆಂಗಳೂರಿಗೆ ಬಂದ ನಂತರ ವೃತ್ತಿ, ಮನೆ, ಮಕ್ಕಳು ಎನ್ನೋ ಬದುಕಿನ ಖುಷಿ, ಒತ್ತಡಗಳ ಮಧ್ಯೆ ಮುಳುಗಿ, ಯಾರ ಕಡಿವಾಣವೂ ಇರದಿದ್ದರೂ ಇವರ ಹವ್ಯಾಸಿ ಚಟುವಟಿಕೆಗಳು ವಿರಾಮ ಪಡೆದಿದ್ದವು.
ಚೇತನಾ ಅವರು ಚಿಕ್ಕಂದಿನಲ್ಲೇ ಯೋಗ ಕಲಿತು ಸ್ಪರ್ಧೆಗಳಲ್ಲೂ ಭಾಗವಹಿಸಿದ್ದರು. ಶಿಬಿರಗಳಲ್ಲಿ ಭಾಗವಹಿಸುತ್ತಿದ್ದುದಲ್ಲದೆ ತಂದೆಯವರು ನಡೆಸುತ್ತಿದ್ದ ಯೋಗ ಶಿಬಿರಗಳ ಆಯೋಜನೆಯಲ್ಲಿ ಜೊತೆಗೂಡುತ್ತಿದ್ದರು. 2017ರ ಹೊತ್ತಿಗೆ ಮೈಗ್ರೇನ್ ಸಂಬಂಧಿತ ಚಿಕಿತ್ಸೆ ನೀಡಿದ ವೈದ್ಯರ ಸಲಹೆಯ ಮೇರೆಗೆ ಚಿಕ್ಕಂದಿನಲ್ಲಿ ಮಾಡಿ ಮರೆತುಬಿಟ್ಟಿದ್ದ ಯೋಗಭ್ಯಾಸವನ್ನು ಮತ್ತೆ ಆರಂಭ ಮಾಡಿದರು. ಇದೇ ಆಸಕ್ತಿ ಬೆಳೆದು, ಕರ್ನಾಟಕ ವಿಶ್ವವಿದ್ಯಾಲಯದಿಂದ ಯೋಗಶಿಕ್ಷಕಿಯ ಪದವಿಯನ್ನು ಉನ್ನತ ದರ್ಜೆಯಲ್ಲಿ ಪಡೆದುಕೊಂಡರು. ಯೋಗಬಂಧು ಡಾ. ನಾಗೇಶ್ ಹಾಗೂ ಡಾ. ನಿರಂಜನ್ ಮೂರ್ತಿಗಳು ಇವರ ಯೋಗಗುರುಗಳಾಗಿದ್ದರು. ಕೆಲವಾರು ರಾಜ್ಯ ಮಟ್ಟದ ಯೋಗಸ್ಫರ್ಧೆಗಳಲ್ಲಿ ಭಾಗವಹಿಸಿ, ಪ್ರಶಸ್ತಿಗಳನ್ನೂ ಗೆದ್ದರು.
ಗುರುಗಳಾದ ವಸಂತ್ ಬನ್ನಾಡಿ ಅವರು ಚೇತನಾ ಅವರ ಮೈಗ್ರೇನ್ ವೃತ್ತಾಂತವನ್ನು ಕೇಳಿ ಮತ್ತೆ ಇಷ್ಟದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆಕೊಟ್ಟು, ತಾವು ಕುಂದಾಪುರದಲ್ಲಿ ಮೂಡಿಸುತ್ತಿದ್ದ ಅಕಿರೋ ಕುರೋಸೋವಾ ಅವರ "ಅಗ್ನಿಲೋಕ" ನಾಟಕದಲ್ಲಿ ಮುಖ್ಯಪಾತ್ರವೊಂದನ್ನು ನೀಡಿದರು. ಆ ದಿನದ ಪ್ರೇಕ್ಷಕರ ಆ ಚಪ್ಪಾಳೆ ಮತ್ತೆ ಇವರಲ್ಲಿ ಹೊಸ ಭರವಸೆ ಮೂಡಿಸಿತು. 2018 ರಲ್ಲಿ ಕೃಷ್ಣಮೂರ್ತಿ ಕವತ್ತಾರ್ ಅವರು "ಥೇಯಟರ್ ಥೆರಪಿ" ತಂಡದೊಂದಿಗೆ "ಪರಿತ್ಯಕ್ತ" ನಾಟಕದ ಕುಂತಿಯಾಗಿ ಬೆಂಗಳೂರು ರಂಗಭೂಮಿಗೆ ಇವರನ್ನು ಪರಿಚಯಿಸಿದರು. ರಾಜ್ಯ ಮಟ್ಟದ ನಾಟಕ ಸ್ಫರ್ಧೆಯೊಂದರಲ್ಲಿ ಅದೇ ಪಾತ್ರಕ್ಕೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯೂ ಲಭಿಸಿತು. ನಂತರದ ದಿನಗಳಲ್ಲಿ ಚೇತನಾ ಅವರು ರಾಮಕೃಷ್ಣ ಬೆಳ್ತೂರು, ಬೇಲೂರು ರಘುನಂದನ್, ಸುರೇಶ್ ಆನಗಳ್ಳಿ ಮೊದಲಾದ ನಿರ್ದೇಶಕರ ನಿರ್ದೇಶನದಲ್ಲಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇದಲ್ಲದೆ ಸಾತ್ವಿಕ ರಂಗಪಯಣ ತಂಡದ ರಾಜ್ಗುರು ಹೊಸಕೋಟೆ, ನಯನ ಸೂಡ ನಿರ್ದೇಶನದಲ್ಲಿ "ಗಾರ್ಗಿ", "ಚಂದ್ರಗಿರಿ ತೀರದಲ್ಲಿ", "ಪೂಲನ್ ದೇವಿ" ನಾಟಕಗಳಲ್ಲಿ ಅಭಿನಯಿಸುತ್ತಿದ್ದಾರೆ. ಹಲವು ದಿನಗಳ ಬದ್ಧತೆಯ ಸಮಯ ನೀಡಬೇಕಾದ ಕಾರಣ ಧಾರವಾಹಿಗಳಿಗೆ ಬಂದ ಕೆಲವು ಅವಕಾಶಗಳನ್ನು ಸ್ವೀಕರಿಸಿಲ್ಲ. ಒಂದೆರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೂ ರಂಗದ ಮೇಲೆ ಸಿಗುವ ಖುಷಿ, ಆತ್ಮತೃಪ್ತಿ, ಬೇರೆ ಮಾಧ್ಯಮಗಳಲ್ಲಿ ಸಿಗಲಾರದು ಎಂಬುದು ಚೇತನಾ ಅವರ ಭಾವನೆ. ಜೊತೆಗೆ ಮೇಲೆ ಹೇಳಿದಂತೆ ಯೋಗ ತರಬೇತಿಯಲ್ಲೂ ಇವರ ಸೇವೆ ಸಲ್ಲುತ್ತಿದೆ.
ಚೇತನ ಅವರ ವೈವಿಧ್ಯಮಯ ಆಸಕ್ತಿಗಲ್ಲಿ ಅಡುಗೆ ವೈವಿಧ್ಯ, ಛಾಯಾಗ್ರಹಣ, ಗಿಡ ಬೆಳೆಸುವಿಕೆ, ಟೆರ್ರಕೋಟಾ ಆಭರಣ ಕಲೆಗಾರಿಕೆ, ಉಲ್ಲನ್ ಕಲೆಗಾರಿಕೆ, ಓದು, ಬರವಣಿಗೆ, ಪ್ರವಾಸ ಮುಂತಾದ ದೊಡ್ಡ ಪಟ್ಟಿ ಇದೆ.
ಬಹುಮುಖಿ ಪ್ರತಿಭಾನ್ವಿತೆ, ಆತ್ಮೀಯ ಚೇತನಾ ಪ್ರಸಾದ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Chethana Prasad 🌷🌷🌷
ಕಾಮೆಂಟ್‌ಗಳು