ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಂದಿನಿ ಹೆದ್ದುರ್ಗ


ನಂದಿನಿ ವಿಶ್ವನಾಥ್ ಹೆದ್ದುರ್ಗ


ನಂದಿನಿ ಹೆದ್ದುರ್ಗ ಇಂದಿನ ದಿನಗಳಲ್ಲಿ ಎಲ್ಲ ಪತ್ರಿಕೆಗಳಲ್ಲಿ ಹಾಗೂ ಅಂತರಜಾಲದಲ್ಲಿ ಕಥೆ, ಕವನ, ಲಲಿತ ಬರಹ, ಅಂಕಣ ಹೀಗೆ ವೈವಿಧ್ಯಮುಖಿ ಬರಹಗಳಲ್ಲಿ ಕಂಗೊಳಿಸುತ್ತಿರುವ ಹೆಸರು. ಅವರದ್ದು ಸಾಹಿತ್ಯ ಕೃಷಿ ಮಾತ್ರವೇ? ಉಹುಂ...  ಅವರು ಮಣ್ಣಿನೊಡನೆ ಆಪ್ತವಾಗಿ ಕೈಯಾಡಿಸುವ ನೈಜ ಕೃಷಿಯಲ್ಲೂ ತಮ್ಮನ್ನರ್ಪಿಸಿಕೊಂಡಿರುವ ಕೃಷಿಕರಾಗಿದ್ದಾರೆ. 

ಮೇ 13 ನಂದಿನಿ ಅವರ ಜನ್ಮದಿನ.‍ ಅವರ ವಾಸ ಹಾಸನ ಜಿಲ್ಲೆ ಆಲೂರು ತಾಲೂಕಿನ ಹೆದ್ದುರ್ಗ ಎನ್ನುವ ಪುಟ್ಟ ಹಳ್ಳಿಯಲ್ಲಿ.  ಸಣ್ಣ ವಯಸ್ಸಿನಲ್ಲೇ ಮದುವೆಯಾಗಿ, ತಾಯಾಗಿ ದೊಡ್ಡ ಕುಟುಂಬದ ಭಾಗವಾಗಿದ್ದರೂ ಬಿ.ಎಸ್ಸಿ ಓದಿದರು.

ಬದುಕನ್ನು ಎರಡು ರೀತಿಯಲ್ಲಿ ಕಾಣಬಹುದಾದ ಸಾಧ್ಯತೆಗಳಿವೆಯೇನೋ!  ಮೊದಲನೆಯದು, ಇದು ನನಗೆ ಬದುಕು ದಕ್ಕಿರುವ ರೀತಿ.  ಹಾಗೂ, ಹೀಗೂ ಅದರಲ್ಲಿ ನನ್ನ ಕಳೆದುಕೊಂಡರಾಯ್ತು ಎನ್ನುವ ತೆರನಾದದ್ದು.  ಎರಡನೆಯದು, ಇದು ನನ್ನ ವಾಸ್ತವ ಎಂಬ ಅರಿವಿದ್ದು, ಇದು ವಾಸ್ತವ ಎಂಬ ಮಾತ್ರಕ್ಕೆ,  ಇದಕ್ಕಿಂತ ನನ್ನ ಬದುಕು ಬೇರೆಯದಾಗಬಾರದು ಎಂಬ ನಿಯಮವೇನಿಲ್ಲವಲ್ಲ ಎಂಬ ಜಾಗೃತ ಪ್ರಜ್ಞೆಯಲ್ಲಿ ಸಾಧ್ಯತೆಗಳನ್ನರಸುವುದು.  

ಮನೆಗೆಲಸ, ಆಗೊಂದು ಈಗೊಂದು ಎಂಬುವ ಯಾವುದೋ ಕುಟುಂಬಕ್ಕೆ ಸಂಬಂಧಿಸಿದ ಸಮಾರಂಭಗಳಿದ್ದರೆ ಉಂಟು;  ಉಳಿದಂತೆ ಬದುಕು ಎಂಬುದು ಎಲ್ಲವೂ ಇದ್ದದ್ದು ಇದ್ದ ಹಾಗೆ ಎಂಬಂತಹ ಬಾಳಿನಲ್ಲಿ ನಂದಿನಿ ಅವರಿಗೆ "ಆಳದಾಳದ ಕೊನೆಯಿಂದ ಸಣ್ಣದೊಂದು ಧ್ವನಿ ಹೊರಟಿದ್ದು; ಇದು ನಾನಲ್ಲ ಇನ್ನೇನೋ ಆಗುವುದಿದೆ, ಆಗಬೇಕಿದೆ."  ಇಂಗ್ಲಿಷಿನಲ್ಲಿ ಪ್ರಾಜ್ಞರು ಹೇಳುವ "Often I try to have a better version of myself” ಎಂಬ ಹೊಳಹು ನನಗಿಲ್ಲಿ ಕಾಣುತ್ತಿದೆ.

ಅಂತರಂಗದ ಆಳವಾದ ಅನಿಸಿಕೆಗೆ ಆಗದಿರುವುದೇನಿದೆ. ನಂದಿನಿ ಹೆದ್ದುರ್ಗ ತಾವೇ ಕೃಷಿಗಾಗಿ ಮಣ್ಣಿಗಿಳಿವ ಜವಾಬ್ದಾರಿ ಹೊತ್ತರು. ಎಲ್ಲೋ ಸೋತಂತಾಗುತ್ತಿದೆ ಎನಿಸುತ್ತಿರುವಾಗಲೂ ಬದುಕಿನ ಅರ್ಥೈಕೆಯ ಬೆಳಕನ್ನು, ತಮ್ಮ ಸಾರ್ಥಕ ಶ್ರಮದ ಮೂಲಕ ಕಂಡುಕೊಂಡು, ಗೆಲುವನ್ನು ಸಾಧಿಸುತ್ತಾ ಬಂದರು.  ಕೃಷಿಯ ಹಾದಿ ತಮ್ಮ ಬದುಕಿನ ಪಯಣವಾಗುತ್ತಲೇ,  ತಮ್ಮ ಹಾದಿಯ ಅನುಭವವನ್ನು, ತಲ್ಲಣಗಳನ್ನು, ಅಂತರಂಗದ ಭಾವಗಳನ್ನು ಬರಹಕ್ಕಿಳಿಸುವ ಕೃಷಿಗೂ ಇಂಬುಕೊಡುತ್ತಾ ಸಾಹಿತ್ಯಲೋಕದಲ್ಲೂ ವ್ಯಾಪಿಸುತ್ತಾ ಬಂದರು.

ಹೀಗೆ ನಂದಿನಿ ಹೆದ್ದುರ್ಗಾ ಅವರು ಬದುಕಿಗೆ ಕಾಫಿ ತೋಟ ಮತ್ತಿತರ ಕೃಷಿಯಲ್ಲಿ ತೊಡಗಿಕೊಂಡು  ಸಾಹಿತ್ಯ ಮತು ತಿರುಗಾಟಗಳಲ್ಲಿಯೂ ಆಸಕ್ತಿ ಕಂಡುಕೊಂಡರು. ಮೊದಲಿಗೆ ಅವರ ಬರಹಗಳು ಹಾಸನದ ಪ್ರಾದೇಶಿಕ ಪತ್ರಿಕೆ ಜನತಾ ಮಾದ್ಯಮದಲ್ಲಿ ಅಂಕಣ ರೂಪದಲ್ಲಿ ಮೊದಲುಗೊಂಡವು.  2016 ಅಕ್ಟೋಬರ್ ಮಾಸದಲ್ಲಿ ಸಕಲೇಶಪುರದಲ್ಲಿ ನಡೆದಂತಹ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ "ಅಸ್ಮಿತೆ" ಎನ್ನುವ ಅವರ  ಕವನ ಸಂಕಲನ ಖ್ಯಾತ ಕವಿ ಬಿ ಆರ್ ಲಕ್ಷ್ಮಣರಾವ್ ಅವರಿಂದ ಬಿಡುಗಡೆಗೊಂಡಿತು. ಆ ನಂತರದಲ್ಲಿ ನಂದಿನಿ ಅವರು ಲಕ್ಷ್ಮಣರಾವ್ ಅವರ ಮಾರ್ಗದರ್ಶನದಲ್ಲಿ ಕವಿತೆ ಬರೆಯಲು ಆರಂಭ ಮಾಡಿದರು. ಜನವರಿ 1, 2017ರಲ್ಲಿ ಅವರ ಕವನಗಳ ಗುಚ್ಛ ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡಿತು. 2018 ಜನವರಿಯಲ್ಲಿ ಬೆಂಗಳೂರಿನ ಅಂಕಿತ ಪ್ರಕಾಶನದಿಂದ ಎರಡನೇ ಸಂಕಲನ 'ಒಳಸೆಲೆ' ಬಿಡುಗಡೆಗೊಂಡಿತು. ಇದಕ್ಕೆ
ವಿಮರ್ಶಕಿ ಎಮ್. ಎಸ್. ಆಶಾದೇವಿಯವರ ಮುನ್ನುಡಿ ಮತ್ತು ಕವಿ ಎಚ್. ಎಸ್. ವೆಂಕಟೇಶ ಮೂರ್ತಿ ಅವರ ‌ಬೆನ್ನುಡಿಯಿದೆ. ಮುಂದೆ ನಂದಿನಿ ಅವರ 'ಬ್ರೂನೋ ದಿ ಡಾರ್ಲಿಂಗ್’ ಲವಲವಿಕೆಯ ಬರಹಗಳ ಸಂಕಲನ ಪ್ರಕಟಗೊಂಡಿತು. ‘ರತಿಯ ಕಂಬನಿ’ ಎಂಬುದು ಅವರ ಜನಮೆಚ್ಚುಗೆಗೆ ಪಾತ್ರವಾದ ಮತ್ತೊಂದು ಕವನ ಸಂಕಲನ. 'ಒಂದು ಆದಿಮ ಪ್ರೇಮ' ಮತ್ತೊಂದು ಕವಿತೆಗಳ ಸಂಕಲನ.   ಅವರ ಕಥೆ, ಕವನ, ಚಿಂತನ, ಅಂಕಣಗಳು ನಿರಂತರ ಮಾಧ್ಯಮಗಳಲ್ಲಿ ಪ್ರಕಾಶಿಸುತ್ತ ಬಂದಿವೆ.

ನಂದಿನಿ ಹೆದ್ದುರ್ಗ ಅವರ 'ಒಳಸೆಲೆ' ಸಂಕಲನಕ್ಕೆ ಶಿವಮೊಗ್ಗದ ಕರ್ನಾಟಕ ಸಂಘ ಕೊಡುವ ಪ್ರತಿಷ್ಠಿತ ಜಿ. ಎಸ್. ಎಸ್ ಪ್ರಶಸ್ತಿ.  ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಗೌರವದ ಪುರಸ್ಕಾರ ಹಾಗೂ ಮಂಡ್ಯದ ಅಡ್ಡ್ವೆಸರ್ ಕೊಡಮಾಡುವ ಅಡ್ಡ್ವೆಸರ್ ವರ್ಷದ ಸಂಕಲನ ಪುರಸ್ಕಾರಗಳು ಸಂದಿವೆ. ಇದಲ್ಲದೆ ಅವರಿಗೆ ಅನೇಕ ನಿಯತಕಾಲಿಕೆಗಳಲ್ಲಿನ ಕಥೆ, ಕವಿತೆ, ಪ್ರಬಂಧ ಸ್ಪರ್ಧೆಗಳ ಬಹುಮಾನಗಳೂ ಬಂದಿವೆ.

ನಂದಿನಿ ಹೆದ್ದುರ್ಗಾ ಅವರು ದಸರಾಕವಿಗೋಷ್ಠಿ,ಆಳ್ವಾಸ್ ನುಡಿಸಿರಿ, ಬಾಗಲಕೋಟೆಯ ನುಡಿ ಸಡಗರ, ಧಾರವಾಡದಲ್ಲಿ ನಡೆದ ರಾಜ್ಯ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಕವನ ವಾಚನ ಮಾಡಿದ್ದಾರೆ.

ಸಾಹಿತ್ಯ ಕೃಷಿಯು ನಂದಿನಿ ಹೆದ್ದುರ್ಗ ಅವರ ಭೂಕೃಷಿಯ ಉತ್ಸಾಹವನ್ನೇನೂ ಕಸಿದಿಲ್ಲ.  ಅವರ ಬರಹದಲ್ಲಿ ಮೂಡಿದ ಮಾತೊಂದು ಈ ನಿಟ್ಟಿನಲ್ಲಿ ಗಮನ ಸೆಳೆಯುವಂತದ್ದಾಗಿದೆ:  “ಕೆರೆ ಹೇಗೇ ನೋಡಿದರೂ ಸಾಕ್ಷಾತ್ ದೇವತೆ. ಸುರಿವ ಮಳೆ ನೀರನ್ನು ಉಳಿಸಿಕೊಂಡು ಇಂಗಿಸುವ ಆ ಮೂಲಕ ಭೂಮಿಯ ಅಂತರ್ಜಲದ ಮಟ್ಟ ಹೆಚ್ಚಿಸುವ ತವನಿಧಿ. ಕೆರೆಯ ಬಗ್ಗೆ ಓದುವುದು, ಕೆರೆಯನ್ನು ನೋಡುವುದು, ಕೆರೆಯೊಳಗೆ ಇಳಿಯುವುದಕ್ಕಿಂತ ಕೆರೆ ತೆಗೆಸುವುದೇ ನಿಜವಾದ ಸಂತೋಷ. ತೆಗೆಸುವುದಕ್ಕೆ ಕೇವಲ ಹಣ ಜಮೀನು ಇದ್ದರೆ ಸಾಲದು ಅಂತ ಹಿರಿಯರು ಹೇಳ್ತಾರೆ. ಆ ಕೆರೆ ತೆಗೆಸುವ ಯೋಗ ನಮ್ಮ ವಿಧಿಯಲ್ಲಿ ಇರಬೇಕಂತೆ. ವಿಧಿ ಎಂದರೆ ನಾನಿಲ್ಲಿ ಸೂಕ್ತ ಸಂದರ್ಭದಲ್ಲಿ, ಸೂಕ್ತ ಜಾಗದಲ್ಲಿ ಸೂಕ್ತ ಪ್ರಯತ್ನವೆಂದುಕೊಳ್ಳುತ್ತೇನೆ. ತೆಗೆಸಿದ ಕೆರೆ ತುಂಬುವುದನ್ನು, ಜೀವ ತಳೆಯುವುದನ್ನು ಗಮನಿಸುವುದೇ ಒಂದು ಅನುಭಾವ. ಉಳಿದ ಆಯಸ್ಸಿನಲ್ಲಿ ಇನ್ನೊಂದೇ ಒಂದು ಕೆರೆಯನ್ನು ತೆಗೆಸುವ ಸೌಭಾಗ್ಯ ನನ್ನದಾಗಲಿ ಎನ್ನುವುದು ನನ್ನ ಕನಸು.” ಈ ಮಾತುಗಳು ಅವರ ಭೂಕೃಷಿಯೊಡನೆಯ ಅನುಭಾವವನ್ನು ತೆರೆದಿಡುವುದರ ಜೊತೆಗೆ,  ಹೇಗೆ ಅವರ ಬದುಕು ಮತ್ತು ಬರಹಗಳೆರಡೂ ಅವಿನಾವಭಾವವನ್ನು ಹೊಂದಿವೆ ಎಂಬ ಸೂಚಕವೂ ಆಗಿದೆ.

ನಂದಿನಿ ಅವರ ಸೂಕ್ಷ್ಮಗ್ರಾಹಿ ಸಂವೇದನಾತ್ಮಕ ಬರಹಗಳು ವಿವಿಧ ರೀತಿಯ ಚಿಂತನೆಗಳು ಮತ್ತು ಬರಹರೂಪದ ಎಲ್ಲ ವ್ಯಾಪ್ತಿಗಳಲ್ಲೂ ಮೂಡಿಬರುತ್ತಿವೆ. ಈ ಪ್ರತಿಭಾನ್ವಿತೆಯ ಬದುಕಿನ ಕೃಷಿ ಉತ್ತಮ ರೀತಿಯ ಫಸಲಿನಲ್ಲಿ ಪ್ರತಿಫಲಿಸುತ್ತಿರಲಿ ಎಂದು ಆಶಿಸುತ್ತಾ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳನ್ನು ಹೇಳೋಣ.  ನಮಸ್ಕಾರ.

Happy birthday Nandini Vishwanath

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ