ಕಲಾಗಂಗೋತ್ರಿ ಕಿಟ್ಟಿ
ಕಲಾಗಂಗೋತ್ರಿ ಕಿಟ್ಟಿ
ಕಲಾಗಂಗೋತ್ರಿ ಕಿಟ್ಟಿ ಕನ್ನಡ ರಂಗಭೂಮಿ, ಮತ್ತು ಕಿರುತೆರೆಗಳ ಹೆಸರಾಂತ ಕಲಾವಿದರು.
ಮೇ 17 ಕಿಟ್ಟಿ ಅವರ ಜನ್ಮದಿನ. ಅವರು ಓದಿದ್ದು ಮೆಕಾನಿಕಲ್ ಡಿಪ್ಲೊಮಾ. ಸುಮಾರು 25 ವರ್ಷ ಸ್ಟಂಪ್ ಶೋಲೆ ಸೋಮಪ್ಪ ಸ್ಪ್ರಿಂಗ್ಸ್ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದರು. ನಂತರದ ಅವರ ಸಮಯವೆಲ್ಲ ಕಲೆಗೆ ಮೀಸಲಾಯಿತು. ನಾಟಕ ಮತ್ತು ಕಿರುತೆರೆಯಲ್ಲಿ ಪೂರ್ಣ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡರು.
ಕಿಟ್ಟಿ ಅವರಿಗೆ ಶಾಲಾ ದಿನಗಳಿಂದಲೇ ನಾಟಕಗಳಲ್ಲಿ ಆಸಕ್ತಿ. ಶಾಲೆಯಲ್ಲಿ ಷೇಕ್ಸ್‌ಪಿಯರನ 'ಮರ್ಚೆಂಟ್ ಆಫ್ ವೆನಿಸ್' ನಾಟಕದ ಶೈಲಾಕನ ಪಾತ್ರದಲ್ಲಿ ಅಭಿನಯಿಸಿದರು. ನಂತರ ಕೆಲಸ ಮಾಡುವ ದಿನಗಳಲ್ಲಿ ನವರತ್ನರಾಂ ಅವರ 'ಕನಸು ನನಸು' ನಾಟಕದಲ್ಲಿ ಅಭಿನಯಿಸಿದರು. ಅಂತರ ಕಾರ್ಖಾನೆಗಳ ನಾಟಕ ಸ್ಪರ್ಧೆಯಲ್ಲಿ ಶ್ರೀರಂಗರ "ಏನ ಬೇಡಲಿ ನಿನ್ನ ಬಳಿಗೆ ಬಂದು" ನಾಟಕದಲ್ಲಿನ ಪಾತ್ರಾಭಿನಯಕ್ಕಾಗಿ ಉತ್ತಮ ನಟ ಬಹುಮಾನ ಗಳಿಸಿದರು.
ಕಿಟ್ಟಿ ಅವರು 1981ರಲ್ಲಿ ಕಲಾಗಂಗೋತ್ರಿ ತಂಡದ ಡಾ. ಬಿ. ವಿ. ರಾಜಾರಾಂ ನಿರ್ದೇಶನದ "ಮುಖ್ಯಮಂತ್ರಿ" ನಾಟಕದ ಒಟ್ಟಾರೆ 800 ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಬಹುತೇಕ್ ಎಲ್ಲ ಪ್ರದರ್ಶನಗಳಲ್ಲೂ ಭಾಗಿಯಾಗಿದ್ದಾರೆ. ಇದರಲ್ಲಿನ ಚಂದ್ರಪ್ರಕಾಶ್ ಪಾತ್ರದ ಪ್ರದರ್ಶನಗಳಲ್ಲಿ ಹೆಚ್ಚು ಪಾಲ್ಗೊಂಡಿದ್ದಾರಾದರೂ, ಅದೇ ನಾಟಕದ ಭವಾನಿಪ್ರಸಾದ್, ದುರ್ಗಾಭಾಯಿ ದೇಸಾಯಿ ಮೊದಲಾದ ಪಾತ್ರಗಳಲ್ಲಿಯೂ ಅಭಿನಯಿಸಿದ್ದಾರೆ.
ಕಿಟ್ಟಿ ಅವರು 'ಕಲಾಗಂಗೋತ್ರಿ' ತಂಡದಲ್ಲಿ ರಾಜಾರಾಂ ನಿರ್ದೇಶನದ 'ಮುಖ್ಯಮಂತ್ರಿ' (800 ಕ್ಕೂ ಹೆಚ್ಚು ಪ್ರದರ್ಶನಗಳು, 'ಮೈಸೂರು ಮಲ್ಲಿಗೆ'ಯ ಸುಮಾರು 400 ಪ್ರದರ್ಶನಗಳು), ಮಂದ್ರ, ಅಚಲಾಯತನ, ಈ ಮುಖದವರು; ಪ್ರೊ. ಬಿ.ಸಿ. ನಿರ್ದೇಶನದ ‘ಪರಹಿತಪಾಷಾಣ’, ಡಾ. ಸುಧೀಂದ್ರ ಶರ್ಮ ನಿರ್ದೇಶನದ ‘ಆರ್ಟಿಸ್ಟ್ಸ್ ಕಾಲೋನಿ', ತುಳಸಿಧರ ಕುರುಪ್ ನಿರ್ದೇಶನದ 'ಸಾಯೊನಾರ' ನಾಟಕಗಳಲ್ಲಿ ಅಭಿನಯಿಸಿದರು. 'ಸ್ಪಂದನ' ತಂಡದಲ್ಲಿ ಬಿ ಜಯಶ್ರೀ ಅವರ ನಿರ್ದೇಶನದಲ್ಲಿ ಲಕ್ಷಾಪತಿರಾಜನ ಕಥೆ, ಕರಿಮಾಯಿ, ಘಾಶೀರಾಮ ಕೊತ್ವಾಲ್, Black-Out ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. 'ನಟರಂಗ'ದಲ್ಲಿ ಎಂ. ಎಸ್ ಸತ್ಯು ನಿರ್ದೇಶನದ 'ಮೋಟೆರಾಮನ ಸತ್ಯಾಗ್ರಹ', ಜಯತೀರ್ಥ ಜೋಷಿ ನಿರ್ದೇಶನದಲ್ಲಿ 'ಸಿರಿಸಂಪಿಗೆ' ನಾಟಕಗಳಲ್ಲಿ ಅಭಿನಯಿಸಿದ್ದಾರೆ. 'ಪ್ರಯೋಗರಂಗ'ದಲ್ಲಿ ನಾಗೇಂದ್ರ ಷಾ ನಿರ್ದೇಶನದಲ್ಲಿ 'ನಮ್ಮನಿಮ್ಮೊಳಗೊಬ್ಬ (150ಕ್ಕೂ ಹೆಚ್ಚು ಪ್ರದರ್ಶನ), ರಸಾಯನ, ಬಣ್ಣದ ರಾಣಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ನ್ಯೂ ಆಕ್ಟಿವ್ ಥಿಯೇಟರ್ಸ್ ತಂಡದಿಂದ ಉದಯ ಕುಮಾರ ಕುಲಕರ್ಣಿ ಅವರ ನಿರ್ದೇಶನದಲ್ಲಿ 'ಏನ ಬೇಡಲಿ ನಿನ್ನ ಬಳಿಗೆ ಬಂದು', ಹುಬ್ಬಳ್ಳಿಯ ಗುರುದೇಶ ಪಾಂಡೆ ತಂಡದಲ್ಲಿ ಯಶವಂತ ಸರ್ ದೇಶಪಾಂಡೆ ನಿರ್ದೇಶನದಲ್ಲಿ 'ಹೀಗೇಕೆ ನೀ ದೂರ ಓಡುವೆ' ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಬಿ. ವಿ. ರಾಮಮೂರ್ತಿ ಅವರ ಮೂಕಾಭಿನಯಕ್ಕೆ ಸಂಗೀತ ನಿರ್ವಹಣೆ ಮಾಡಿದ್ದಾರೆ.
ಕಿಟ್ಟಿ ಅವರು 1985ರಿಂದಲೇ ಬೆಂಗಳೂರು ದೂರದರ್ಶನದಲ್ಲಿ ನಾಟಕ, ಟೆಲಿಫಿಲಂ ಹಾಗೂ ಧಾರಾವಾಹಿಗಳಲ್ಲಿ ನಟನೆ ಆರಂಭಿಸಿದರು. ಶ್ರೀನಿವಾಸ ಪ್ರಭು ನಿರ್ದೇಶನದಲ್ಲಿ "ದಾಖಲೆ ಪತ್ರ" ಟೆಲಿಫಿಲ್ಮ್ ನಲ್ಲಿ ಮೊದಲ ಬಾರಿಗೆ ಹೊರಾಂಗಣ ಚಿತ್ರೀಕರಣದಲ್ಲಿ ಅಭಿನಯಿಸಿದರು. ಅದೊಂದು ದಾಖಲೆ. ರಾಜಾರಾಮ್ ನಿರ್ದೇಶನದಲ್ಲಿ 'ಅಜಿತನ ಸಾಹಸಗಳು'ದಲ್ಲಿ ಪಾತ್ರ ನಿರ್ವಹಣೆ ಮಾಡಿದರು. ರಾಜೇಂದ್ರ ಕಟ್ಟಿ ನಿರ್ದೇಶನದಲ್ಲಿ "ಅಡಚಣೆಗಾಗಿ ಕ್ಷಮಿಸಿ" ಅಲ್ಲದೆ ಅನೇಕ ಟೆಲೆಫಿಲ್ಮ್ ಗಳಲ್ಲಿ ಭಾಗಿಯಾದರು.
ಕಿಟ್ಟಿ ಅವರು ದೂರದರ್ಶನದ ಮೊದಲ ಮೆಗಾ ಧಾರಾವಾಹಿ, ಆರ್. ಎನ್. ಜಯಗೋಪಾಲ್ ಅವರ ನಿರ್ದೇಶನದ "ಜನನಿ" ಯಲ್ಲಿ ಮುಖ್ಯಪಾತ್ರ ನಿರ್ವಹಣೆ ಮಾಡಿದರು. ಟಿ.ಎನ್.ಸೀತಾರಾಮ್, ಪಿ. ಶೇಷಾದ್ರಿ, ನಾಗೇಂದ್ರ ಷಾ ನಿರ್ದೇಶನದಲ್ಲಿ ಮಾಯಾಮೃಗ, ಕಥೆಗಾರ ಅಲ್ಲದೆ ಹಲವಾರು ಟೆಲಿಪ್ರಯೋಗಗಳಲ್ಲಿ ಅಭಿನಯಿಸಿದರು. ಟಿ. ಎನ್. ನಾಗೇಶ್ ನಿರ್ದೇಶನದ ತ್ರಿವೇಣಿಯವರ "ಮುಚ್ಚಿದ ಬಾಗಿಲು" ಧಾರಾವಾಹಿಯಲ್ಲಿ ಮನೋವೈದ್ಯನ ಪಾತ್ರ ನಿರ್ವಹಿಸಿದರು.
ಈ ಟಿ.ವಿ ವಾಹಿನಿಯ ಪ್ರಾರಂಭದ ದಿನಗಳಲ್ಲಿ ನಾಗೇಂದ್ರ ಷಾ ನಿರ್ದೇಶನದಲ್ಲಿ ವ್ಯೂಹ, ಮೊದಲಾದ ಟೆಲಿಫಿಲಂಗಳು ಅಲ್ಲದೆ ಸರೋಜಿನಿ ಎಂಬ ಮೆಗಾ ಧಾರವಾಹಿಯಲ್ಲಿ ಅಭಿನಯಿಸಿದರು. ಎನ್.ಎಸ್.ಶಂಕರ್ ಅವರ "ಪರಿಸರ" ಧಾರವಾಹಿಯಲ್ಲೂ ನಟಿಸಿದರು. ಚಿತ್ರನಟಿ ಆರತಿ ನಿರ್ದೇಶನದಲ್ಲಿ "ನಮ್ಮನಮ್ಮಲ್ಲಿ" ಧಾರವಾಹಿಯಲ್ಲಿ ಅಭಿನಯಿಸಿದರು. ಟಿ.ಎನ್.ನರಸಿಂಹನ್, ಅಶೋಕ್‍ನಾಯ್ಡು, ಭಾರ್ಗವ, ಎಸ್.ಎನ್. ಸೇತುರಾಮ್, ಬಿ.ಸುರೇಶ್, ಕಲಾಂಗೋತ್ರಿ ಮಂಜು ಅವರ ಮೆಗಾ ಧಾರವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದರು. ಬಾಲಾಜಿ ಟೆಲಿಫಿಲಂಸ್ ಅವರ ಧಾರವಾಹಿಯಲ್ಲಿ ಸುಮಾರು 5000 ಕಂತುಗಳು, (ಉದಯ ಟಿವಿ) ರವಿಕಿರಣ್ ನಿರ್ದೇಶನದಲ್ಲಿ ಬದುಕು 3000 ಕಂತುಗಳು, 8 ವರ್ಷ ಪ್ರಸಾರ (ಈ ಟಿವಿ) ಶಕ್ತಿ, ಪವಿತ್ರ, ಮಲೆಗಳಲ್ಲಿ ಮದುಮಗಳು ಹೀಗೆ ಸತತವಾಗಿ ಮೆಗಾ ಧಾರವಾಹಿಗಳಲ್ಲಿ ಅಭಿನಯಿಸಿದರು. ಎಂ.ಎಸ್.ಸತ್ಯು ರವರ "ಕಯರ್", ಕವಿತಾ ಲಂಕೇಶ್ ಅವರ "ಮಾಲ್ಗುಡಿ ಡೇಸ್" ಹಿಂದಿ ಧಾರವಾಹಿಗಳಲ್ಲಿ ಅಭಿನಯಿಸಿದರು. ಕಿಟ್ಟಿ ಅವರು ಎಸ್. ಎನ್. ಸೇತುರಾಮ್ ನಿರ್ದೇಶನದ 'ಯುಗಾಂತರ'ದಲ್ಲಿ ಅಭಿನಯಿಸುತ್ತಿದ್ದಾರೆ.
ಕಿಟ್ಟಿ ಅವರು ಸಿನಿಮಾ ರಂಗದಲ್ಲಿಯೂ ಅಭಿನಯಿಸಿದ್ದಾರೆ. ಟಿ.ಎಸ್.ನಾಗಾಭರಣರ ನಿರ್ದೇಶನದಲ್ಲಿ 'ರಾವಣರಾಜ್ಯ' ಚಿತ್ರದಲ್ಲಿ ಖಳನಾಯಕನಾಗಿ, ಅಲ್ಲದೆ ಎಂ. ಎಸ್. ಸತ್ಯು, ಶೇಷಾದ್ರಿ, ದಿನೇಶ್ ಬಾಬು ಮೊದಲಾದವರ ನಿರ್ದೇಶನದಲ್ಲಿ ನಟಿಸಿದರು. ಓಂಪುರಿ ಅವರೊಂದಿಗೆ ಅಭಿನಯಿಸಿದ್ದು ಅವರಿಗೆ ಮರೆಯಲಾಗದ ಅನುಭವ. ಬಿಡುಗಡೆ ಆಗಲಿರುವ ವಿನಯ್ ರಾಜ್ಕುಮಾರ್ ಅಭಿನಯದ 'ಪೆಪೆ' ಚಿತ್ರದಲ್ಲಿ ಕಿಟ್ಟಿ ಅವರ ಪ್ರಮುಖ ಪೋಷಕ ಪಾತ್ರ ನಿರ್ವಹಣೆ ಇದೆ.
ಖಾಸಗಿ ವಾಹಿನಿಗಾಗಿ ನಾಡಿನ ದಿಗ್ಗಜರನ್ನು ಸಂದರ್ಶನ ಮಾಡಿದ ಹೆಗ್ಗಳಿಕೆ ಇವರದು.
ಕಿಟ್ಟಿ ಅವರು ಆಕಾಶವಾಣಿಯಲ್ಲಿ ಶ್ರೇಣೀಕೃತ ಕಲಾವಿದರಾಗಿ ನಾಟಕಗಳಲ್ಲಿ ಅಭಿನಯಿಸಿದರು. ಬೆಳಕಿನಂಗಳ ಅಂತಹ ಧಾರಾವಾಹಿಗಳಲ್ಲಿ ನಟಿಸಿದರು.
ಕಿಟ್ಟಿ ಅವರು ಡಾ. ಬಿ. ವಿ. ರಾಜಾರಾಂ, ನಾಗರಾಜಮೂರ್ತಿ, ಡಾ. ಸುಧೀಂದ್ರ ಶರ್ಮಾ ಮೊದಲಾದವರ ಅಭಿನಂದನ ಗ್ರಂಥಗಳಲ್ಲಿ ಲೇಖನಗಳನ್ನು ಬರೆದಿದ್ದಾರೆ.
ಕಿಟ್ಟಿ ಅವರು ನಮ್ಮ ದೇಶವಲ್ಲದೆ ವಿದೇಶಗಳಲ್ಲಿಯೂ ತಮ್ಮ ನಾಟಕಗಳ ಅಭಿನಯದಿಂದ ಹೆಸರು ಗಳಿಸಿದ್ದಾರೆ.1989 ರಲ್ಲಿ ಈಜಿಪ್ಟ್ ಮತ್ತು ರಷ್ಯಾಗಳಲ್ಲಿ ಬಿ.ಜಯಶ್ರೀ ಅವರ ನಿರ್ದೇಶನದಲ್ಲಿ 'ಲಕ್ಷಾಪತಿರಾಜನ ಕಥೆ' ನಾಟಕದಲ್ಲಿ ಅಭಿನಯಿಸಿದರು. 2010 ರಲ್ಲಿ ಸಿಂಗಪೂರ್‌ನಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ಪ್ರಯೋಗರಂಗದಿಂದ ಸನ್ಮಾನಸುಖ ನಾಟಕದಲ್ಲಿ ಅಭಿನಯಿಸಿದರು. 2017 ರಲ್ಲಿ ಮುಖ್ಯಮಂತ್ರಿ ನಾಟಕಕ್ಕಾಗಿ ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಸಿಂಗಪುರ್, ಮಲೇಷಿಯಾಗಳಲ್ಲಿ ಪ್ರಯಾಣ ಮಾಡಿದ್ದರು .
ಕಿಟ್ಟಿ ಅವರು ಮ್ಯಾಜಿಕ್ ರಮೇಶ್ ಅವರ ಸಂಗಡದಲ್ಲಿ ಹಲವಾರು ಯಕ್ಷಿಣಿ ಪ್ರದರ್ಶನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಹಲವಾರು ಜಾಹೀರಾತುಗಳಲ್ಲಿಯೂ ನಟಿಸಿದ್ದಾರೆ.
ಕಿಟ್ಟಿ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ (2011), ಈಟಿವಿ ಅನುಬಂಧ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಕಿಟ್ಟಿ ಅವರು ತೀರ್ಪುಗಾರರಾಗಿ, ಮುಖ್ಯ ಅತಿಥಿಗಳಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾಗಿಯಾಗಿದ್ದಾರೆ. ವಿವಿಧ ರಂಗೋತ್ಸವಗಳಲ್ಲಿ, ಕ್ರಿಯಾತ್ಮಕ ಯೋಜನೆಗಳಲ್ಲಿ, ನವೀನ ಪ್ರಯೋಗಗಳಳ್ಳಿ, ರಂಗಭೂಮಿಯಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಕಿಟ್ಟಿ ಅವರ ಪತ್ನಿ ವಿದ್ಯಾ ಮಳವಳ್ಳಿ ಅವರೂ ಸಹಾ ರಂಗ ಕಲಾವಿದರಾಗಿ ಹೆಸರಾಗಿದ್ದಾರೆ. ಇಂದು ಹುಟ್ಟು ಹಬ್ಬ ಆಚರಿಸುತ್ತಿರುವ ಕಿಟ್ಟಿ ಅವರಿಗೆ ಶುಭಾಶಯ ಹೇಳುತ್ತಾ ಅವರ ಸಮಸ್ತ ಕುಟುಂಬಕ್ಕೆ ಆತ್ಮೀಯ ಶುಭಹಾರೈಕೆಗಳನ್ನು ಸಲ್ಲಿಸೋಣ.
On the birthday of our great actor Kalagangotri Kitty Sridhar Sir 🌷🙏🌷
ಕಾಮೆಂಟ್‌ಗಳು