ಸ್ಮಿತಾ ರಾಘವೇಂದ್ರ
ಸ್ಮಿತಾ ಭಟ್ಟ
ಸ್ಮಿತಾ ರಾಘವೇಂದ್ರ ಅವರು ತಮ್ಮ ಬಹುಮುಖಿ ಬರಹಗಳಿಂದ ಪ್ರತಿಭಾನ್ವಿತೆ ಎನಿಸಿದ್ದಾರೆ.
ಮೇ 23 ಸ್ಮಿತಾ ಅವರ ಜನ್ಮದಿನ. ಯಲ್ಲಾಪುರದ ಹತ್ತಿರದ ಮಳವಳ್ಳಿ ಇವರ ತವರೂರು. ಅಪ್ಪ ಗಣೇಶ ಹೆಬ್ಬಾರ. ಅಮ್ಮ ಸುಲೋಚನಾ ಹೆಬ್ಬಾರ. ತಂದೆಯವರು ಕೃಷಿ ಕೆಲಸ ಮಾಡುವಾಗ ತಾಯಿಯವರೂ ಜೊತೆಗೂಡುತ್ತಿದ್ದರು. ಕೃಷಿ ಕೆಲಸಕ್ಕೆ ಹೋಗುವಾಗಲೆಲ್ಲ ಮಕ್ಕಳನ್ನು ಕೂಡ ಹೆಗಲಿಗೆ ಹಾಕಿಕೊಂಡು ಹೋಗುತ್ತಿದ್ದರು. ಹೀಗೆ ಅಪ್ಪ ಅಮ್ಮ ಕೃಷಿ ಕೆಲಸ ಮಾಡುವುದನ್ನು ನೋಡುತ್ತಾ ಅವರಿಗೆ ಸಹಾಯ ಮಾಡುವ ನೆಪದಲ್ಲಿ, ತಮ್ಮ ಅಕ್ಕ ತಂಗಿ ತಮ್ಮ ಇವರುಗಳ ಒಡನಾಡಿಯಾಗಿ, ಕೃಷಿ ಎಂಬುದು ಸ್ಮಿತಾ ಅವರಿಗೆ ಒಂದು ಆಪ್ತ ಕೆಲಸವಾಯ್ತು.
ಸ್ಮಿತಾ ಅವರು ಮದುವೆ ಆಗಿ ಬಂದದ್ದು ಅಂಕೋಲಾ ತಾಲ್ಲೂಕಿನ ಕಲ್ಲೇಶ್ವರ ಗ್ರಾಮಕ್ಕೆ. ಪತಿ ರಾಘವೇಂದ್ರ ಅವರದೂ ಕೃಷಿ ಕಾಯಕ. ಅಡುಗೆ ಮನೆಗಿಂತ ಸ್ಮಿತಾ ಅವರಿಗೆ ಹೆಚ್ಚು ಕೃಷಿಯಲ್ಲಿ ಆಸಕ್ತಿ. ಹಾಗಾಗಿ ಬೇಗ ಬೇಗ ಅಡಿಗೆ ಮಾಡಿ ತೋಟಕ್ಕೆ ಹೋಗುತ್ತಿದ್ದರು. ಒಂದೇ ಒಂದು ದಿನ ಬೆಳೆದ ಗಿಡ ಮರಗಳನ್ನು ಮುಟ್ಟಿ ಮಾತನಾಡಿಸಲಿಲ್ಲ ಅಂದರೆ ಆವತ್ತು ಏನೋ ಕಳೆದುಕೊಂಡ ಭಾವ ಇವರಿಗೆ. "ಬದುಕನ್ನು ಕೊಟ್ಟಿದ್ದು ಮತ್ತು ಅರ್ಥ ಮಾಡಿಸಿದ್ದು ನನಗೆ ಕೃಷಿ" ಎಂಬುದು ಸ್ಮಿತಾ ಅವರ ಆಪ್ತ ಮಾತು. ಇರುವ ಕಡಿಮೆ ಭೂಮಿಯಲ್ಲೇ ಹೊಸದೇನನ್ನಾದರೂ ಮಾಡುವ ಹಂಬಲ ಸ್ಮಿತಾ ಮತ್ತು ರಾಘವೇಂದ್ರ ದಂಪತಿಗಳದು. ಸ್ಮಿತಾ ಜೇನು ಕೃಷಿಯನ್ನೂ ಮಾಡುತ್ತಾರೆ. "ಹಣಕ್ಕಾಗಿಯೆ ಎಲ್ಲವನ್ನೂ ಮಾಡಬೇಕಿಲ್ಲ. ಪ್ರೀತಿ ಪಾತ್ರರಿಗೆ ಹಂಚುವುದರಲ್ಲಿ ಹೆಚ್ಚು ಖುಷಿ ಇದೆ" ಎನ್ನುತ್ತಾರೆ ಸ್ಮಿತಾ.
ಸ್ಮಿತಾ ಅವರಿಗೆ ಕಥೆ, ಕವನ, ಲೇಖನ, ಓದು ಎಲ್ಲ ಹವ್ಯಾಸದ ವಿಷಯಗಳು. ಇವರ ನೂರಾರು ಲೇಖನಗಳು ಎಲ್ಲ ಪ್ರಸಿದ್ಧ ನಿಯತಕಾಲಿಕೆಗಳಲ್ಲಿ ಮತ್ತು ಅಂತರಜಾಲ ಪತ್ರಿಕೆಗಳಲ್ಲಿ ಮೂಡಿಬರುತ್ತಿವೆ. ಕನ್ನಡ ಪುಸ್ತಕ ಪ್ರಾಧಿಕಾರದ ಚೊಚ್ಚಲ ಕೃತಿಗೆ ಕೊಡಮಾಡುವ ಸಹಾಯ ಧನ ಯೋಜನೆಯಡಿ 'ಕನಸು ಕನ್ನಡಿ' ಎಂಬ ಇವರ ಗಜಲ್ ಸಂಕಲನ ಪ್ರಕಟಗೊಂಡಿದೆ. ಅದಕ್ಕೆ 'ಸಾಹಿತ್ಯ ಶರಭ' ಪ್ರಶಸ್ತಿ ಸಂದಿದೆ.
ಸ್ಮಿತಾ ಅವರಿಗೆ ಬಿಡುವಿನ ವೇಳೆಯಲ್ಲಿ ಓದು,
ಬರಹ ಆದರೂ, ಅವರ ಬರಹಗಳು ಬಿಡುವಿನ ವೇಳೆಯ ಕುರಿತಾದದ್ದಲ್ಲ. ಅವರ ಬರಹಗಳು ದಿನನಿತ್ಯದ ಪ್ರತಿ ಚಟುವಟಿಕೆಗೆಳೆಡೆಗಿನ
ಜೀವನ್ಮುಖಿ. ಸ್ಮಿತಾ ಅವರ ಬರಹಗಳಲ್ಲಿ ಅವರ ಸುತ್ತಮುತ್ತಲ ಲೋಕ, ಕೃಷಿ ಕಾಯಕ, ಮನೆಕೆಲಸ, ಪ್ರಕೃತಿ, ಸಾಮಾನ್ಯ ಜನಜೀವನ, ಕುಟುಂಬ, ಮನೆ, ಮಕ್ಕಳು, ಯಾವುದೋ ಆರ್ತನಾದದ ಕೂಗಿಗೆ ಓಗೊಡುವ ಅಂತರಂಗ ಹೀಗೆ ಎಲ್ಲವೂ ಹಾಸು ಹೊಕ್ಕಾಗಿ ತೆರೆದುಕೊಳ್ಳುತ್ತದೆ. ಅದಕ್ಕೊಂದು ಉದಾಹರಣೆಯಾಗಿ ಈ ಕವಿತೆ ಗಮನಿಸಬಹುದು:
ನನ್ನೂರಲ್ಲಿ ಕೋಳಿ ಕೂಗುವುದಿಲ್ಲ
ನನ್ನೂರಲ್ಲಿ ಕೋಳಿ ಕೂಗುವುದಿಲ್ಲ
ಮನುಷ್ಯರೇ ಕೂಗು ಹಾಕುತ್ತಾರೆ
ಆತುರದಲ್ಲಿ ಏದುಸಿರು ಬಿಡುತ್ತ
ಓಡೋಡಿ ಬರುವ ಜನರ
ತರಹೇವಾರಿ ಕೂಗುಗಳು
ನಸುಕು ಹರಿಯುವ ಮುನ್ನವೇ
ಪ್ರತಿಧ್ವನಿಸುತ್ತವೆ.
ಎತ್ತಲಿಂದ ಬಂತು ಕೂಗು
ಒಮ್ಮೊಮ್ಮೆ ಅಂಬಿಗ ತಬ್ಬಿಬ್ಬಾಗಿ
ಕಣ್ಣುಜ್ಜಿ ಹೊರಗೆ ಬರುವಾಗ
ಭಾರೀ ಜನಸ್ತೋಮ
ಶಾಲೆ ಸೇರಬೇಕಾದ ಮಕ್ಕಳು
ಆಸ್ಪತ್ರೆಗೆ ಮುಖ ಮಾಡಿದ ವೃದ್ಧರು
ಕೆಲಸದ ಧಾವಂತ ಹೊತ್ತ ಗಂಡಸರು
ಕಾಲೇಜು ಸೇರುವ
ಯುವಕ ಯುವತಿಯರು
ಗದ್ದೆ ಕೆಲಸದ ಹೆಣ್ಣಾಳುಗಳು
ಗಾರೆ ಕೆಲಸದ ಗಂಡಾಳುಗಳು...
ಎಲ್ಲರದ್ದೂ ಕೂ.. ಕೂ...
ಕೂಗು.
ಎಲ್ಲರ ಕನಸಿಗೆ ಹುಟ್ಟು ಹಾಕುವ ನಾವಿಕ
ಆ ದಡ ಈ ದಡ
ಸೇರಿಸುತ್ತಲೇ ಇರುತ್ತಾನೆ
ಎರಡೂ ತೀರದ ಕೂಗುಗಳಿಗೆ
ಓ ಗೊಡುತ್ತಲೇ ಚಲಿಸುತ್ತಾನೆ.
ನಂಬಿ ಕುಳಿತವರ ಅರೆ ಬಿರಿದ ನಗು
ಒಮ್ಮೊಮ್ಮೆ ಅಪನಂಬಿಕೆಯ ಮಾತು
ಇಲ್ಲ ವ್ಯತ್ಯಾಸ ಯಾವ ಬೆಳಗಿಗೂ
ಅದೇ ನಗು ಮೊಗದಲಿ
ಜೋಬಿಗಿಳಿಸುವ ಪುಡಿಗಾಸು
ಮೀನು ಬುಟ್ಟಿ ಹೊತ್ತ ಮುದುಕಿ
ಅವಳಿಗಾಗಿ ಕಾಯುವ ಬೆಕ್ಕು
ತಿಂಡಿ ತರುವ ಯಜಮಾನನ
ದೃಢ ನಿರೀಕ್ಷೆಯ ನಾಯಿ
ತೀರದ ಬುಡಕ್ಕೆ
ಬಂದೂ ಬಂದೂ ಹೋಗುತ್ತವೆ.
ದಡೂತಿ ದೇಹಗಳನ್ನೂ
ಮಣಭಾರ ಮೂಟೆಗಳನ್ನೂ
ನಡುಗುವ ಎದೆಯಲ್ಲಿ
ಪಯಣ ಮುಗಿದಂತೆ ಕೂತವರನ್ನೂ
ಮುಕ್ಕಾಗದಂತೆ ದಡ ಮುಟ್ಟಿಸಿದಾಗ
ಪಯಣಿಗನಲ್ಲೂ ನಾವಿಕನಲ್ಲೂ
ಉಳಿದೇ ಹೋಗುತ್ತದೆ
ಹೇಳಿಕೊಳ್ಳಲಾಗದ ಕೃತಜ್ಞತೆಯೊಂದು
ಸಂಜೆಸೂರ್ಯ ಜಾರಿ ಕತ್ತಲು ಅಮರಿಕೊಳ್ಳುವಾಗ
ಅಲ್ಯಾರೋ ಕೇಳುತ್ತಾರೆ
ಬೆಳಿಗ್ಗೆ ಎಷ್ಟೊತ್ತಿಗೆ ದೋಣಿ ಹಾಕೋದು;
"ಜನರು ಕೂಗ್ತಿದ್ದಂಗೆ"
ಯಾರು ಯಾರನ್ನು ಕರೆಯುವುದು
ಎಲ್ಲಾ ಕಾಲನ ಕರೆಗೆ ಓ ಗೊಡುವುದೇ
ಒಂದಿನ.
ತಳ್ಳಿ, ದಡ ಬಿಡಿಸಿ ದೋಣಿ ಏರಿದ ಆತ
ನಡಿ ನಡಿ ಮತ್ಯಾರೋ ಕರೀತಿದ್ದಾರೆ.
ನನ್ನೂರಿನಲಿ
ಕೋಳಿ ಕೂಗಬೇಕೆಂದೇನೂ ಇಲ್ಲ
ಬೆಳಕು ಹರಿಯಲು
ಅಂಬಿಗ ಹುಟ್ಟು ಹಾಕಬೇಕು
ಕನಸು ತೆರೆದು ಕೊಳ್ಳಲು.
ಸ್ಮಿತಾ ಅವರ ಬರಹಗಳಲ್ಲಿ ಕಥೆ, ಕವನ, ಗಜಲ್, ಭಾವಗೀತೆ, ಚುಟುಕು, ಲೇಖನ ಹಾಯ್ಕು ಹೀಗೆ ಬಹುಮುಖಿ ಸಾಹಿತ್ಯ ಪ್ರಕಾರಗಳಿವೆ. ಕಾರವಾರ ಆಕಾಶವಾಣಿ, ಧಾರವಾಡ ಆಕಾಶವಾಣಿಗಳಲ್ಲಿ ಕಥೆ ಕವನಗಳ ವಾಚನ ನಿರ್ವಹಿಸಿದ್ದಾರೆ. ಮೈಸೂರು ದಸರಾ ಕವಿಗೋಷ್ಠಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಹಲವು ವೇದಿಕೆಗಳಲ್ಲಿ ಕವನಗಳನ್ನು ಪ್ರಸ್ತುತಪಡಿಸಿದ್ದಾರೆ. ಅವರ ವಿಶಾಲ ಆಸಕ್ತಿಗಳಲ್ಲಿ ಸಂಗೀತ, ಯಕ್ಷಗಾನ, ಜಾನಪದ ಸೇರಿ ಎಲ್ಲ ಬಗೆಯ ಕಲೆ ಸಾಂಸ್ಕೃತಿಕ ಆವರಣಗಳಿವೆ. ಅವರು ತಾಳ ಮದ್ದಲೆ ಕಾರ್ಯಕ್ರಮಗಳಲ್ಲಿನ ಅರ್ಥದಾರಿಯಾಗಿಯೂ ಪಾತ್ರ ನಿರ್ವಹಿಸುವುದಿದೆ.
ಪ್ರತಿಭಾನ್ವಿತೆ ಸ್ಮಿತಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Smitha Raghavendra
ಕಾಮೆಂಟ್‌ಗಳು