ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಉಷಾ ಪಿ ರೈ


 ಉಷಾ ಪಿ ರೈ


ಉಷಾ ಪಿ ರೈ ಅವರು ಕನ್ನಡ ಸಾಹಿತ್ಯ ಲೋಕದ ಹಿರಿಯ ಹೆಸರಾಂತ ಲೇಖಕಿ.  ಕನ್ನಡ, ತುಳು, ಇಂಗ್ಲಿಷ್ ಭಾಷೆಗಳಲ್ಲಿ ಬರಹಗಳಲ್ಲದೆ ಉಷಾ ಅವರು  ಚಿತ್ರಕಲೆಗಳಂತಹ ವಿಭಿನ್ನ ಕಲಾಮಾಧ್ಯಮಗಳಲ್ಲಿ ಕೂಡಾ ಪರಿಣತಿ ಸಾಧಿಸಿದವರು.  ಬ್ಯಾಂಕಿನ ಜವಾಬ್ಧಾರಿಯುತ ಕಾರ್ಯ ನಿರ್ವಹಣೆಗಳ ಜೊತೆ ಜೊತೆಗೆ ಅವರ ಸಾಹಿತ್ಯ, ಕಲಾಭಿರುಚಿ, ಸಮಾಜ ಸೇವೆ ಮತ್ತು ಸಂಘಟನಾ ಚತುರತೆಗಳು ಹೆಸರುವಾಸಿಯಾಗಿವೆ.

ದಕ್ಷಿಣಕನ್ನಡ ಜಿಲ್ಲೆಯ ಉಡುಪಿಯಲ್ಲಿ 1945ರ
ಮೇ 23ರಂದು ಜನಿಸಿದ ಉಷಾ  ಎಂ.ಎ. ಪದವೀಧರೆ. ತಂದೆ ಸ್ವಾತಂತ್ರ್ಯ ಹೋರಾಟಗಾರ ಹಾಗು ನವಯುಗ ಪತ್ರಿಕೆಯ ಸಂಪಾದಕ ಹಿರಿಯ ಪತ್ರಕರ್ತರಾದ ದಿ. ಕೆ ಹೊನ್ನಯ್ಯಶೆಟ್ಟಿ.  ತಾಯಿ ಕೆ.ಪದ್ಮಾವತಿ ಶೆಟ್ಟಿ. ಪತಿ ಪ್ರಭಾಕರ ರೈಯವರು ಕೂಡಾ ತುಳು ಮತ್ತು ಕನ್ನಡ ಲೇಖಕರು.

ಉಷಾ ಪಿ ರೈ ಅವರಿಗೆ ಅವರ ಅಭಿಮಾನಿಗಳು ಅರ್ಪಿಸಿದ ‘ಸಮೃದ್ಧಿ’ ಅಭಿನಂದನಾ ಗ್ರಂಥ ಬಿಡುಗಡೆ ಸಂದರ್ಭದಲ್ಲಿ ಹಿರಿಯ ಬರಹಗಾರ್ತಿ ಕಮಲ ಹಂಪನಾ  “ಬರಹಗಾರರ ಬದುಕು ಹಾಗೂ ಬರಹಗಳು ಪ್ರಾಮಾಣಿಕ, ಪಾರದರ್ಶಕ ಹಾಗೂ ವಸ್ತುನಿಷ್ಠವಾಗಿರಬೇಕು. ಇದನ್ನು ಸಾಹಿತಿ ಕೆ.ಉಷಾ ಪಿ.ರೈ ಅವರ ಬರಹಗಳಲ್ಲಿ ಕಾಣಬಹುದಾಗಿದೆ. ಉಷಾ ಅವರು ತಮ್ಮ  ಬದುಕಿನಲ್ಲಿ ಏನನ್ನು ಕಂಡಿದ್ದಾರೆ. ಅದನ್ನು ತಮ್ಮ ಬರಹ ಹಾಗೂ ಚಿತ್ರಕಲೆಯಲ್ಲಿ ಹೇಳಿದ್ದಾರೆ. ಇಂತಹ ಗುಣ ಪ್ರತಿಯೊಬ್ಬ ಲೇಖಕರು ಬೆಳೆಸಿ ಕೊಳ್ಳಬೇಕಾದ ಅವಶ್ಯಕತೆ ಇದೆ”  ಎಂದು ನುಡಿದ ಮಾತುಗಳು ಉಷಾ ಅವರ ಸಾಧನೆಗೆ ಹಿಡಿದ ಕನ್ನಡಿಯಂತಿದೆ.

ಉಷಾ ಪಿ ರೈ ಅವರ  ಇಪ್ಪತ್ತಕ್ಕೂ  ಹೆಚ್ಚು  ಕೃತಿಗಳು ಪ್ರಕಟಗೊಂಡಿವೆ.  ಉಷಾ ಅವರ  ಮೊದಲ ಕಾದಂಬರಿ "ಅನುಬಂಧ",  1974ರಲ್ಲಿ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾಯ್ತು. ನಂತರ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಉಷಾ ಅವರ ಹನಿಗವನಗಳು, ಕಾದಂಬರಿಗಳು, ಸಣ್ಣಕಥೆಗಳು, ಪ್ರವಾಸ ಕಥನ , ಲೇಖನಗಳು, ಚಿಂತನಗಳು ಪ್ರಕಟಗೊಂಡಿವೆ.

ಪರಿಭ್ರಮಣ, ಅನುಬಂಧ, ಉತ್ತರಣ, ಸುಪ್ತಸ್ವರ, ನಿಶಾನೆ, ಜಾಗೃತಿ, ನಿಯತಿ ಉಷಾ ಅವರ ಕಾದಂಬರಿಗಳಾದರೆ, ಕನಸುಗಳು ನನಸುಗಳು, ಹಕ್ಕಿ ಮತ್ತು ಗಿಡುಗ, ಊರುಕೋಲು (ತುಳುವಿನಲ್ಲಿ) ಕವನ ಸಂಕಲನಗಳು. ಬದುಕೆಂಬ ಚದುರಂಗದಾಟದ ದಾಳಗಳು, ಒಂದೇ ದೋಣಿಯ ಪ್ರಯಾಣಿಕರು, ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ?, ಆಂತರ್ಯ ಉಷಾ ಅವರ ಪ್ರಸಿದ್ಧ ಕಥಾ ಸಂಕಲನಗಳು. ಲಕ್ಷದ್ವೀಪಕ್ಕೆ ಲಗ್ಗೆ ಇಟ್ಟಾಗ ಅವರ ಪ್ರವಾಸ ಕಥನ.  ಉಷಾ ಅವರ ಸಂಪಾದಿತ ಕೃತಿಗಳಲ್ಲಿ  ‘ನವಯುಗದ ಪ್ರವರ್ತಕ’, ‘ಲೇಖಕಿ’, ‘ಲೇಖಲೋಕ’, ‘ಲೇಖಕಿಯರ ಸಣ್ಣ ಕಥೆಗಳು’, ‘ಎಪ್ಪತ್ತರ ವಯಸು ಇಪ್ಪತ್ತರ ಮನಸು’, ‘ತುಳು ಕಬಿತೆಲು’, ’ಬೊಕ್ಕ ಗಾದೆಲು’ ಪ್ರಮುಖವಾಗಿವೆ.  'ಯಾವ ನಾಳೆಯೂ ನಮ್ಮದಲ್ಲ' ಅವರ ಆತ್ಮಚರಿತ್ರೆ.  ಆಡಿಸಿ ನೋಡು ಬೀಳಿಸಿ ನೋಡು’ ಎಂಬುದು ಜೀವನ್ಮುಖಿ ಬರಹಗಳ ಸಂಕಲನ.

ಸಾಹಿತ್ಯಲೋಕದಲ್ಲಷ್ಟೇ  ಅಲ್ಲದೆ ವಿಶಿಷ್ಟ  ಚಿತ್ರಕಲಾವಿದರಾಗಿ ಸಹಾ  ಉಷಾ ಪಿ ರೈ ಅವರ ಪ್ರತಿಭೆ  ಹೊರಹೊಮ್ಮಿದ್ದು  ಅವರ  ಚಿತ್ರಗಳು  ಅನೇಕ  ಪ್ರತಿಷ್ಟಿತ ತಾಣಗಳಲ್ಲಿ  ಪ್ರದರ್ಶನಗೊಂಡು ಮೆಚ್ಚುಗೆಗಳಿಸಿವೆ.  

ಉಷಾ ಅವರಿಗೆ ಹಲವಾರು ಗೌರವಗಳು ಪ್ರಾಪ್ತವಾಗಿದ್ದು,  ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ, ರಾಣಿ ಅಬ್ಬಕ್ಕ ದೇವಿ ಪ್ರಶಸ್ತಿ, ಅತ್ತಿಮಬ್ಬೆ ಗೊರೂರು ಪ್ರತಿಷ್ಠಾನ ಸುವರ್ಣ ಸ್ವಾತಂತ್ರ್ಯೋತ್ಸವ ಸನ್ಮಾನ, ಕುರುಂಜಿ ವೆಂಕಟರಮಣ ಪ್ರತಿಭಾ ಪುರಸ್ಕಾರ, ವಿಜಯಾ ಬ್ಯಾಂಕ್ ಕನ್ನಡ ಸಂಘದ ಗೌರವ, ಸಾಹಿತ್ಯ ಪರಿಷತ್ತಿನಿಂದ ಕೊಡಲಾಗುವ ಬಿ ಸರೋಜಾದೇವಿ ಸಾಹಿತ್ಯ ಪ್ರಶಸ್ತಿ, ಸಾಹಿತ್ಯ ಪರಿಷತ್ತಿನ ನೀಲಗಂಗಾ ದತ್ತಿನಿಧಿ ಬಹುಮಾನ, ಅಮ್ಮ ಪ್ರಶಸ್ತಿ , ಬಲಿಯೇಂದ್ರ ಪುರಸ್ಕಾರ, ಕರ್ನಾಟಕ ಲೇಖಕಿಯರ ಸಂಘದ ಅನುಪಮಾ ಪ್ರಶಸ್ತಿ ಪ್ರಮುಖವಾಗಿವೆ.  ಚಿತ್ರಕಲೆಯೂ ಅವರಿಗೆ ಅನೇಕ ಗೌರವ ಪ್ರಶಸ್ತಿಗಳನ್ನು ತಂದುಕೊಟ್ಟಿದೆ. ಫೈನ್ ಆರ್ಟ್ ಅಮೆರಿಕ.ಕಾಮ್ ನವರು ನಡೆಸಿದ ಸ್ಪರ್ಧೆಗಳಲ್ಲಿಯೂ ಬಹುಮಾನ ಪಡೆದಿದ್ದಾರೆ.

ಹಲವಾರು ಕವಿಗೋಷ್ಠಿಗಳಲ್ಲಿ , ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿರುವ ಉಷಾ ಪಿ ರೈ ಅವರು  ಸ್ತ್ರೀಲೋಕ ಕಾರ್ಯಕ್ರಮಗಳ ಮೂಲಕ ಸ್ತ್ರೀಯರಿಗೆ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ವ್ಯಾಪಕವಾಗಿ ಚರ್ಚಿಸಿದ್ದಾರೆ. ಐದು ವರ್ಷ 'ಕರ್ನಾಟಕ ಲೇಖಕಿಯರ ಸಂಘದ' ಸಮಥ೯ ಅಧ್ಯಕ್ಷಿಣಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ಅವಧಿಯಲ್ಲಿ ಲೇಖಕಿಯರಿಗೆ ಉಪಯುಕ್ತವೆನಿಸುವ ಅನೇಕ ಕೃತಿಗಳನ್ನು ಸಂಘದ ಮೂಲಕ ಪ್ರಕಟಿಸಿದರು. ಜೊತೆಗೆ, 'ನಮ್ಮ ನಮ್ಮಲ್ಲಿ' ಎನ್ನುವ ಶೀರ್ಷಿಕೆಯಡಿಯಲ್ಲಿ, ಲೇಖಕಿಯರ ಕೃತಿಗಳ ಬಗ್ಗೆ ವಿಮರ್ಶಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಅಲ್ಲದೇ, 'ಎಪ್ಪತ್ತರ ವಯಸ್ಸು ಇಪ್ಪತ್ತರ ಮನಸ್ಸು' ಎನ್ನುವ ಕಾರ್ಯಕ್ರಮವನ್ನು ಆಯೋಜಿಸಿ, ಹಿರಿಯ ಲೇಖಕಿಯರ ಜೊತೆ ಮಾತುಕತೆ ಕಾರ್ಯಕ್ರಮವನ್ನು ನಡೆಸಿದರು. ಇದೇ ಕಾರ್ಯಕ್ರಮ 18-20ಲೇಖಕಿಯರ ಜೊತೆ, ಚಂದನ ವಾಹಿನಿಯಲ್ಲಿ ಪ್ರಸಾರವಾಗಿ ಜನಪ್ರಿಯತೆ ಗಳಿಸಿತು. ನಾಡಿನ ಅನೇಕ ಪ್ರತಿಷ್ಠಿತ ಸಂಘ ಸಂಸ್ಥೆಗಳಲ್ಲಿ ಗೌರವ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಬೆಂಗಳೂರು ಬಂಟರ ಸಂಘ, ತುಳುವೆರೆಂಕುಲು, ತುಳು ಕೂಟ, ದಕ್ಷಿಣಕನ್ನಡಿಗರ ಸಂಘ, ವನಿತಾ ಸಹಾಯವಾಣಿ ಮೊದಲಾದ ಸಮಾಜಮುಖಿ ಸಂಸ್ಥೆಗಳಲ್ಲಿ ಗೌರವ ಸಲಹೆಗಾರರಾಗಿದ್ದರೆ. ಸಾಹಿತ್ಯ ಕೃಷಿಯ ಜೊತೆಗೆ 'ಮಹಿಳಾ ದಕ್ಷತಾ ಸಮಿತಿ' ಮತ್ತು 'ವನಿತಾ ಸಹಾಯವಾಣಿ' ಕೇಂದ್ರ ಮುಂತಾದ  ಅನೇಕ  ಸಮಾಜಸೇವಾ  ಸಂಸ್ಥೆಗಳಲ್ಲಿ  ಅವರ  ಸೇವೆ  ಸಂದಿದೆ.

ಹೀಗೆ ವಿಭಿನ್ನ ನೆಲೆಗಳಲ್ಲಿ ಮಹತ್ವದ ಸೇವೆ ಸಲ್ಲಿಸಿ ಸಕಲರಿಗೂ ಆದರ್ಶಪ್ರಾಯರಾಗಿ ಸ್ನೇಹ ಜೀವಿಯಾಗಿರುವ ಉಷಾ ಪಿ. ರೈ ಅವರಿಗೆ ಜನ್ಮದಿನದ ಹಾರ್ದಿಕ ಶುಭ ಹಾರೈಕೆಗಳು.

Happy birthday Usha Rai Madam 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ