ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ. ಸಚ್ಚಿದಾನಂದನ್


 ಕೆ. ಸಚ್ಚಿದಾನಂದನ್


ಕೆ. ಸಚ್ಚಿದಾನಂದನ್ ಭಾರತೀಯ ಸಾಹಿತ್ಯಲೋಕದ ಕವಿ ಮತ್ತು ವಿಮರ್ಶಕರಾಗಿ ಪ್ರಸಿದ್ಧರು. ಅವರು ಮಲಯಾಳಂ ಮತ್ತು ಇಂಗ್ಲಿಷ್‌ನಲ್ಲಿ ಬರೆಯುತ್ತಾರೆ.

ಕೊಯಂಪರಂಬತ್ ಸಚ್ಚಿದಾನಂದನ್ ಅವರು 1946ರ ಮೇ 28 ರಂದು ಕೇರಳದ ತ್ರಿಶೂರ್ ಜಿಲ್ಲೆಯ ಕೊಡುಂಗಲ್ಲೂರ್ ಎಂಬ ಹಳ್ಳಿಯ ಪುಲ್ಲೂಟ್‌ನಲ್ಲಿ ಜನಿಸಿದರು. ಹಳ್ಳಿಯ ಶಾಲೆಯಲ್ಲಿ ಆರಂಭಿಕ ಶಿಕ್ಷಣದ ನಂತರ, ಅವರು ಇರಿಂಜಾಲಕುಡದ ಕ್ರೈಸ್ಟ್ ಕಾಲೇಜಿನಲ್ಲಿ ಜೀವಶಾಸ್ತ್ರದಲ್ಲಿ ಪದವಿ ಪಡೆದು, ಎರ್ನಾಕುಲಂನ ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರು ಕ್ಯಾಲಿಕಟ್ ವಿಶ್ವವಿದ್ಯಾನಿಲಯದಿಂದ ಪೋಸ್ಟ್-ಸ್ಟ್ರಕ್ಚರಲಿಸ್ಟ್ ಕಾವ್ಯಶಾಸ್ತ್ರದಲ್ಲಿ ತಮ್ಮ ಪಿಎಚ್‌.ಡಿ ಪಡೆದರು.

ಸಚ್ಚಿದಾನಂದನ್ ಕೆ.ಕೆ.ಟಿ.ಎಂ.ನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದರು. 1968 ರಲ್ಲಿ, ಸರ್ಕಾರಿ ಕಾಲೇಜ್, ಪುಲ್ಲೂಟ್ ಮತ್ತು 1970 ರಲ್ಲಿ ಇರಿಂಜಾಲಕುಡದ ಕ್ರೈಸ್ಟ್ ಕಾಲೇಜಿಗೆ ಸ್ಥಳಾಂತರಗೊಂಡು ಅಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾದರು. ದೆಹಲಿಯ ಇಂಡಿಯನ್ ನ್ಯಾಷನಲ್ ಅಕಾಡೆಮಿಯ ಇಂಗ್ಲಿಷ್ ಜರ್ನಲ್ ಇಂಡಿಯನ್ ಲಿಟರೇಚರ್‌ನ ಸಂಪಾದಕತ್ವವನ್ನು ವಹಿಸಿಕೊಳ್ಳಲು ಅವರು 1992 ರಲ್ಲಿ ಈ ಹುದ್ದೆಯಿಂದ ಸ್ವಯಂಪ್ರೇರಿತರಾಗಿ ನಿವೃತ್ತರಾದರು. 1996 ರಲ್ಲಿ ಅವರು ಅಕಾಡೆಮಿಯ ಕಾರ್ಯದರ್ಶಿ, ಮುಖ್ಯ ಕಾರ್ಯನಿರ್ವಾಹಕರಾಗಿ ನಾಮನಿರ್ದೇಶನಗೊಂಡರು. ಈ ಹುದ್ದೆಯಿಂದ ಅವರು 2006 ರಲ್ಲಿ ನಿವೃತ್ತರಾದರು. ನಂತರ ಅವರು ಭಾರತೀಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಮತ್ತು ರಾಷ್ಟ್ರೀಯ ಅನುವಾದ ಮಿಷನ್‌ಗೆ ಸಲಹೆಗಾರರಾಗಿ ಸೇವೆ ಸಲ್ಲಿಸಿದರು. ದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಭಾಷಾಂತರ ಅಧ್ಯಯನ ಮತ್ತು ತರಬೇತಿ ಶಾಲೆಯ ನಿರ್ದೇಶಕರಾಗಿಯೂ ಅವರು ಕೆಲಸ ಮಾಡಿದರು. ಅವರು ಸಿಮ್ಲಾದ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ನಲ್ಲಿ ರಾಷ್ಟ್ರೀಯ ಫೆಲೋ ಆಗಿದ್ದಾರೆ.

ಸಚ್ಚಿದಾನಂದನ್ ಅವರ ಸಾಹಿತ್ಯಿಕ ವೃತ್ತಿಜೀವನವು 'ಕುರುಕ್ಷೇತ್ರಂ' ಎಂಬ ಕವನದ ಮೇಲಿನ ಪ್ರಬಂಧಗಳ ಸಂಗ್ರಹ (1970) ಮತ್ತು 'ಅಂಚುಸೂರ್ಯನ್', ಕವನಗಳ ಸಂಕಲನ (1971) ಪ್ರಕಟಣೆಯೊಂದಿಗೆ ಪ್ರಾರಂಭವಾಯಿತು. ಅಂದಿನಿಂದ ಅವರು ಹಲವಾರು ಕವನ, ವಿಮರ್ಶೆ, ನಾಟಕಗಳು, ಪ್ರವಾಸ ಕಥನಗಳು ಮತ್ತು ಕವನ ಮತ್ತು ನಾಟಕಗಳ ಅನುವಾದಗಳನ್ನು ಪ್ರಕಟಿಸಿದ್ದಾರೆ. ಮಲಯಾಳಂ, ಇಂಗ್ಲಿಷ್, ಹಿಂದಿ ಮತ್ತು ಸ್ಲೊವೇನಿಯನ್ ಭಾಷೆಗಳಲ್ಲಿ ಅನೇಕ ಕವನ ಸಂಕಲನಗಳು ಮತ್ತು ಪ್ರಬಂಧಗಳ ಜೊತೆಗೆ 'ಜ್ವಾಲಾ', 'ಉತ್ತರ' ಮತ್ತು 'ಪಚ್ಚಕ್ಕುಟೀರ' ನಂತಹ ಹಲವಾರು ನಿಯತಕಾಲಿಕೆಗಳನ್ನು ಸಂಪಾದಿಸಿದ್ದಾರೆ.

ಸಚ್ಚಿದಾನಂದನ್ ಅವರು 'ದಿ ಕಥಾ ಲೈಬ್ರರಿ ಆಫ್ ಇಂಡಿಯನ್ ಲಿಟರೇಚರ್', 'ದ ಲೈಬ್ರರಿ ಆಫ್ ಸೌತ್ ಏಷ್ಯನ್ ಲಿಟರೇಚರ್' ಮತ್ತು ಬಿಯಾಂಡ್ ಬಾರ್ಡರ್ಸ್, ಸೌತ್ ಏಷ್ಯನ್ ಸಾಹಿತ್ಯ ಮತ್ತು ಕಲ್ಪನೆಗಳ ಜರ್ನಲ್ ಅನ್ನು ಸಂಪಾದಿಸಿದ್ದಾರೆ. ಅವರು 'ಗುಫ್ತುಗು' ಮತ್ತು '1 ಓವರ್ ದಿ 8' ಎಂಬ ಎರಡು ಆನ್‌ಲೈನ್ ಜರ್ನಲ್‌ಗಳನ್ನು ಸಹ-ಸಂಪಾದಿಸುತ್ತಾರೆ. ಅವರ ಕವನಗಳು ಸಮಕಾಲೀನ ಭಾರತೀಯ ಕವನ ಸಂಕಲನವಾದ 'The Dance of the Peacock' ಮುಂತಾದ ಅನೇಕ ಪ್ರತಿಷ್ಠಿತ ಕವನ ಸಂಕಲನಗಳಲ್ಲಿ ಮೂಡಿವೆ.

ಸಚ್ಚಿದಾನಂದನ್ ವ್ಯಾಪಕವಾಗಿ ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಇವರು ಭಾರತದಲ್ಲಿನ ಆಧುನಿಕ ಕವಿಗಳಲ್ಲಿ ಅತ್ಯಂತ ವ್ಯಾಪಕವಾಗಿ ಸಂಕಲನಗೊಂಡ ಮತ್ತು ಅನುವಾದಿಸಲ್ಪಟ್ಟವರಲ್ಲಿ ಪ್ರಮುಖರಾಗಿದ್ದು, ಅವರು 18 ಭಾಷೆಗಳಲ್ಲಿ 32 ಕವನ ಸಂಕಲನಗಳನ್ನು ಹೊಂದಿದ್ದಾರೆ.

ಸಚ್ಚಿದಾನಂದನ್ ಅವರು 2005 ರಲ್ಲಿ ಪೋಲೆಂಡ್ ಸರ್ಕಾರದಿಂದ ಇಂಡೋ-ಪೋಲಿಷ್ ಸ್ನೇಹ ಪದಕವನ್ನು ಮತ್ತು 2006 ರಲ್ಲಿ ಇಟಾಲಿಯನ್ ಗಣರಾಜ್ಯದ ಆರ್ಡರ್ ಆಫ್ ಮೆರಿಟ್ ಅನ್ನು ಸ್ವೀಕರಿಸಿದರು. ಅವರು 2011 ರಲ್ಲಿ ನೊಬೆಲ್ ಸಂಭಾವ್ಯರ ಲಾಡ್‌ಬ್ರೋಕ್ ಪಟ್ಟಿಯಲ್ಲಿದ್ದರು.
ಸಚ್ಚಿದಾನಂದನ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಹಲವು ಬಾರಿ ಕೇರಳ ಸಾಹಿತ್ಯ ಅಕಾಡೆಮಿ ಬಹುಮಾನ ಮತ್ತು ಪ್ರಶಸ್ತಿ, ಕರ್ನಾಟಕ ಸರ್ಕಾರದ ಕುವೆಂಪು ರಾಷ್ಟ್ರೀಯ ಪ್ರಶಸ್ತಿ, ಯು ಆರ್ ಅನಂತಮೂರ್ತಿ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಭಾರತದ ವಿವಿಧ ರಾಜ್ಯಗಳ ಅನೇಕ ಪ್ರತಿಷ್ಠಿತ ಪ್ರಶಸ್ತಿ ಗೌರವಗಳು ಸಂದಿವೆ. ಅವರ ಕುರಿತಾದ ಚಲನಚಿತ್ರ, 'ಬೇಸಿಗೆ ಮಳೆ' 2007 ರಲ್ಲಿ ಬಿಡುಗಡೆಯಾಯಿತು.

On the birthday of great poet and critic K. Sacchidanandan

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ