ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎನ್.ಟಿ. ರಾಮಾರಾವ್


 ಎನ್ಟಿರಾಮಾರಾವ್


ಎನ್. ಟಿ. ರಾಮಾರಾವ್ ಚಿತ್ರರಂಗದಲ್ಲಿ ಮತ್ತು ರಾಜಕೀಯದಲ್ಲಿ ಹೆಸರಾಗಿದ್ದವರು. ತೆಲುಗಿನ ವೈಭವಯುತ ಪೌರಾಣಿಕ ಕಥಾ ಚಿತ್ರಗಳಲ್ಲಿ ಅವರು ರಾಮ ಮತ್ತು ಕೃಷ್ಣನ ಪಾತ್ರಗಳಲ್ಲಿ ವಿಜೃಂಭಿಸಿದ ರೀತಿ ವಿಶೇಷವಾದದ್ದು.

ರಾಮಾರಾವ್ ಆಂಧ್ರಪ್ರದೇಶದ ಕಷ್ಣಾ ಜಿಲ್ಲೆಯ ಗುಡಿವಾಡ ತಾಲೂಕಿನ ನಿಮ್ಮಕೂರು ಎಂಬ ಪುಟ್ಟ ಹಳ್ಳಿಯಲ್ಲಿ 1923ರ ಮೇ 28ರಂದು ಜನಿಸಿದರು. ತಂದೆ ನಂದಮೂರಿ ಲಕ್ಷ್ಮಯ್ಯ. ತಾಯಿ ವೆಂಕಟರಾಮಮ್ಮ. ಇವರಿಗೆ ತಂದೆ ತಾಯಿ ಇಟ್ಟ ಹೆಸರು ಕೃಷ್ಣ. ಬಳಿಕ ಮಗುವಿನ ಹೆಸರನ್ನು ತಾರಕ ರಾಮುಡು, ತಾರಕ ರಾಮಾರಾವ್ ಎಂದು ಬದಲಾಯಿಸಿದರು. ರಾಮಾರಾವ್ ವಿಜಯವಾಡದಲ್ಲಿ ಶಾಲೆ, ಮೆಟ್ರಿಕ್ಯೂಲೇಷನ್ ಹಾಗೂ ಕಾಲೇಜು ವಿದ್ಯಾಭ್ಯಾಸ ಮಾಡಿದರು.

ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಅಭಿನಯಿಸುವ ಮೂಲಕ ರಾಮಾರಾವ್ ಹೆಸರು ಗಳಿಸಿದ್ದರು. ಕಾಲೇಜು ವೇಳೆಯೇ 1942ರಲ್ಲಿ ಸೋದರ ಮಾವನ ಮಗಳಾದ ಬಸವರಾಮತಾರಕಂ ಅವರನ್ನು ವಿವಾಹವಾದರು.

1947ರಲ್ಲಿ ರಾಮಾರಾವ್ ಪದವಿ ಶಿಕ್ಷಣ ಮುಗಿದ ಮೇಲೆ ಸಿನಿಮಾದಲ್ಲಿ ನಟಿಸಬೇಕೆಂಬ ಹಂಬಲದಿಂದ ಮದರಾಸಿನ ಶೋಭಾಂಚಲ ಸ್ಟುಡಿಯೋದಲ್ಲಿ ತಮ್ಮ ಮೊತ್ತ ಮೊದಲ ಪರೀಕ್ಷೆಗೆ ಹಾಜರಾಗಿದ್ದರು. ಸುಮಾರು ಒಂದೂವರೆ ಗಂಟೆಗಳ ಪರೀಕ್ಷೆ, ರಿಹರ್ಸಲ್ ನಂತರ, ಫಲಿತಾಂಶ ನಂತರ ತಿಳಿಸುತ್ತೇವೆ ಎಂದರು.

ಹಾಲಿನ ಮಾರಾಟ, ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಾಮಾರಾವ್ ಎಲ್ಲಾ ಬಗೆಯ ಕೆಲಸಕ್ಕೆ ಅರ್ಜಿ ಹಾಕುತ್ತಿದ್ದರು. ಇದ್ದರೂ ಏನೂ ಪ್ರಯೋಜನವಾಗಿರಲಿಲ್ಲ. ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಅರ್ಜಿ ಹಾಕಿ ಅನುತ್ತೀರ್ಣರಾಗಿದರು. ಕಿಂಗ್ಸ್ ಕಮಿಷನ್ಡ್ ಆಫೀಸರ್ ಹುದ್ದೆಯ(ಮಿಲಿಟರಿ) ಪರೀಕ್ಷೆ ಪಾಸಾಗಿತ್ತು. ಮುಂದಿನ ಸಂದರ್ಶನಕ್ಕಾಗಿ ಡೆಹ್ರಾಡೂನ್ಗೆ ಹೋಗಬೇಕು ಎಂಬ ಆದೇಶ ಬಂದಾಗ ಮಗ ಮಿಲಿಟರಿಗೆ ಸೇರುವುದು ಬೇಡ ಎಂದು ತಂದೆ ಒತ್ತಾಯಿಸಿದರು. ಮದ್ರಾಸ್ ಸರ್ವೀಸ್ ಕಮಿಷನ್ ಪರೀಕ್ಷೆಯನ್ನು ಪಾಸು ಮಾಡಿದರು. ಒಟ್ಟು 1,100 ಮಂದಿ ಪರೀಕ್ಷೆ ಬರೆದಿದ್ದರು. ಅದರಲ್ಲಿ ರಾಮಾರಾವ್ ಸೇರಿದಂತೆ ಏಳು ಮಂದಿ ಮಾತ್ರ ಉತ್ತೀರ್ಣರಾಗಿದ್ದರು.

1947ರಲ್ಲಿ ಮಂಗಳಗಿರಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರಾಮಾರಾವ್ ಕೆಲಸ ನಿರ್ವಹಿಸಲು ಆರಂಭಿಸಿದ್ದರು. ಮೊದಲ ದಿನ ಬೆಳ್ಳಂಬೆಳಗ್ಗೆ ಕಚೇರಿಗೆ ಆಗಮಿಸಿದ್ದ ರಾಮಾರಾವ್ ತಮ್ಮ ಕೋಟನ್ನು ತೆಗೆದು ಕುರ್ಚಿಗೆ ತೂಗುಹಾಕಿ ಕಾರ್ಯಾರಂಭ ಮಾಡಿದ್ದರು. ವಯಸ್ಸಾದ ಗುಮಾಸ್ತ ಕಾಪಿ ಮತ್ತು ತಿಂಡಿ ತಂದುಕೊಟ್ಟಿದ್ದ. ನೀನ್ಯಾಕೆ ಹೀಗೆ ಇದೆನ್ನೆಲ್ಲಾ ತಂದು ಕೊಡುತ್ತಿದ್ದೀಯಾ? ಎಂದು ರಾಮಾರಾವ್ ಪ್ರಶ್ನಿಸಿದ್ದರಂತೆ. ಆದರೆ ಆತ ನಕ್ಕು ಸುಮ್ಮನಾಗಿಬಿಟ್ಟಿದ್ದ. ಸಂಜೆ ರಾಮಾರಾವ್ ಕಚೇರಿ ಕೆಲಸ ಮುಗಿದು ಹೊರಹೋಗುವಾಗ ಕೋಟ್ ಅನ್ನು ಹಾಕಿಕೊಂಡು ಕಿಸೆಗೆ ಕೈ ಹಾಕಿದಾಗ ನೂರು, ನೂರಿಪ್ಪತ್ತು ರೂಪಾಯಿ ಇದ್ದಿರುವುದನ್ನು ಕಂಡು ದಂಗಾಗಿದ್ದರು. ಈ ಹಣ ನನಗೆ ಬೇಕಾಗಿಲ್ಲ ಎಂದು ಖಡಕ್ ಆಗಿ ಹೇಳಿ ವಾಪಸ್ ಕೊಟ್ಟಿದ್ದರು. ಮೊದಲ ದಿನ ಲಂಚಾವತಾರದ ಘಟನೆ ಕಂಡು ರೋಸಿಹೋದ ರಾಮಾರಾವ್ ಮತ್ತೊಂದೆಡೆ
ಪ್ರಾಮಾಣಿಕ ಮನುಷ್ಯ ಇಲ್ಲಿ ಬದುಕೋದು ಹೇಗೆ? ಈ ಕಡಿಮೆ ಸಂಬಳದಲ್ಲಿ ತನ್ನ ಮಕ್ಕಳನ್ನು ಒಳ್ಳೇ ಶಾಲೆಗೆ ಕಳುಹಿಸಲು ಹೇಗೆ ಸಾಧ್ಯ? ಹೆಂಡತಿಗೆ ಒಂದು ಸೀರೆಯನ್ನಾದರೂ ಖರೀದಿಸಲು ಆಗುತ್ತಾ? ಎಂಬ ಚಿಂತೆಯಲ್ಲಿದ್ದರು. ಹೀಗಿರುವಾಗ ಸಿನಿಮಾದಲ್ಲಿ ನಟಿಸುವಂತೆ ಮದ್ರಾಸಿನಿಂದ ಇವರಿಗೆ ಆಹ್ವಾನ ಬಂತು! ಸರ್ಕಾರಿ ಕೆಲಸ ಬಿಟ್ಟು, ಸಿನಿಮಾ ರಂಗಕ್ಕೆ ಹೋಗುವುದು ಹೇಗೆ ಎಂಬ ಸಂದಿಗ್ಧ ಸ್ಥಿತಿಯಲ್ಲಿರುವಾವ ಜಂಟಿ ರಿಜಿಸ್ಟ್ರಾರ್ ಪಿ.ಚಲಪತಿ ರಾವ್ ನಿನಗೆ ಒಳ್ಳೆ ಭವಿಷ್ಯವಿದೆ, ಹೋಗು ಒಳ್ಳೆಯದಾಗುತ್ತೆ ಎಂದರು. ಸಹೋದರ ತ್ರಿವಿಕ್ರಮ ರಾವ್ ಕೂಡಾ ಒಪ್ಪಿಗೆ ಇತ್ತರು.

ಬಿ. ಎ. ಸುಬ್ಬಾರಾವ್ ಅವರು 'ಪಲ್ಲೆತೂರಿ ಪಿಲ್ಲಾ'(ಹಳ್ಳಿ ಹುಡುಗಿ) ಎಂಬ ಮೊದಲ ಸಿನಿಮಾದಲ್ಲಿ ಹೀರೋ ಪಾತ್ರ ಕೊಟ್ಟರು. ಜೀವಮಾನದ ಮೊತ್ತ ಮೊದಲ ಸಿನಿಮಾದ ಸಂಭಾವನೆ 1,116 ರೂಪಾಯಿ ರಾಮಾರಾವ್ ಕೈಸೇರಿತ್ತು! ರಾಮಾರಾವ್ ಥೌಸಂಡ್ ಲೈಟ್ಸ್ ಪ್ರದೇಶದಲ್ಲಿ ಚಿಕ್ಕದೊಂದು ಕೋಣೆಯಲ್ಲಿ ತಂಗಿದ್ದರು. ಮಹಾನ್ ಸ್ವಾಭಿಮಾನಿಯಾಗಿದ್ದ ರಾಮಾರಾವ್ ಬಸ್‍ಗೆ ಹಣವಿಲ್ಲದಿದ್ದರೂ ಯಾರ ಬಳಿಯೂ ಕೈಚಾಚುತ್ತಿರಲಿಲ್ಲ. ನಡೆದುಕೊಂಡೇ ಹೋಗಿ ಹಿರಿಯ, ಖ್ಯಾತ ನಿರ್ದೇಶಕರನ್ನು ಭೇಟಿಯಾಗಿ ಬರುತ್ತಿದ್ದರಂತೆ. ಏತನ್ಮಧ್ಯೆ 'ಮನ ದೇಶಂ'(1949) ಚಿತ್ರದಲ್ಲಿ ಎಲ್ ವಿ ಪ್ರಸಾದ್ ಚಿಕ್ಕ ಪಾತ್ರವನ್ನು ರಾಮಾರಾವ್‍ಗೆ ನೀಡಿದರು. ಹೀಗಾಗಿ 'ಮನ ದೇಶಂ' ಎನ್ ಟಿಆರ್ ಮೊದಲ ಚಿತ್ರವಾಯ್ತು. ಬಳಿಕ 'ಪಲ್ಲೆತೂರಿ ಪಿಲ್ಲಾ' ಚಿತ್ರ ತೆರೆಕಂಡಿತು. 1957ರಲ್ಲಿ 'ಮಾಯಾ ಬಜಾರ್' ಚಿತ್ರದಲ್ಲಿ ಕೃಷ್ಣನ ಪಾತ್ರ ಮಾಡಿದಾಗ ಇವರ ಅದೃಷ್ಟದ ಬಾಗಿಲು ತೆರೆಯಿತು. ಶ್ರೀಕೃಷ್ಣಾರ್ಜುನ ಯುದ್ಧಂ, ಕರ್ಣ ಸೇರಿದಂತೆ ಸುಮಾರು 17 ಸಿನಿಮಾಗಳಲ್ಲಿ ಕೃಷ್ಣನ ಪಾತ್ರ ಮಾಡಿದ್ದರು. ದೇವುಡು ಚೇಸಿನ ಮನುಷ್ಯಲು, ಬೊಬ್ಬಲಿ ಪುಲಿ, ಅಡವಿ ರಾಮುಡು, ಜಸ್ಟಿಸ್ ಚೌಧುರಿ, ಮೇಜರ್ ಚಂದ್ರಕಾಂತ್ ಅಂತಹ ಅನೇಕ ಚಿತ್ರಗಳಲ್ಲಿ ನಟಿಸಿದರು. ಒಂದರ ಹಿಂದೆ ಒಂದರಂತೆ ತೆರೆಕಂಡ ಚಿತ್ರಗಳಿಂದ ಎನ್ ಟಿಆರ್ ಆಂಧ್ರದಲ್ಲಿ ಮನೆಮಾತಾಗಿಬಿಟ್ಟಿದ್ದರು.

ರಾಮಾರಾವ್ ಸುಮಾರು 300 ಚಿತ್ರಗಳಲ್ಲಿ
ನಟಿಸಿದರು. ಹೊಸದನ್ನು ಕಲಿಯಲು ಅವರು ಸದಾ ಉತ್ಸಾಹಿ. 40ರ ವಯಸ್ಸಿನಲ್ಲಿದ್ದಾಗ 'ನರ್ತನಶಾಲ' ಚಿತ್ರದಲ್ಲಿ ನಟಿಸುವುದಕ್ಕೋಸರವಾಗಿ ಗುರು ವೆಂಪತಿ ಚಿನ್ನ ಸತ್ಯಂ ಅವರಿಂದ ಕುಚಿಪುಡಿ ನೃತ್ಯ ಕಲಿತರು. ಅನೇಕ ಚಿತ್ರಗಳಿಗೆ ಚಿತ್ರಕಥೆ ಬರೆದರು. ತಮ್ಮ ಚಿತ್ರ ನಿರ್ಮಾಣ ಸಂಸ್ಥೆಗಳಾದ ನ್ಯಾಷನಲ್ ಆರ್ಟ್ ಥಿಯೇಟರ್ ಲಿಮಿಟೆಡ್, ರಾಮಕೃಷ್ಣ ಸ್ಟುಡಿಯೋಸ್ ಮೂಲಕ ಅನೇಕ ಚಿತ್ರ ನಿರ್ಮಿಸಿದರು. ತಾವೇ ನಟಿಸದ ಚಿತ್ರಗಳನ್ನೂ ನಿರ್ಮಿಸಿದರು.‍

ವಿಶ್ವವಿಖ್ಯಾತ ನಟ ಸಾರ್ವಭೌಮ ಎಂಬ ಬಿರುದು ಗಳಿಸಿದ್ದರು. ಪದ್ಮಶ್ರೀ ಪ್ರಶಸ್ತಿ ಸಂದಿತ್ತು. ತೋಡು ದೊಂಗಲು ಮತ್ತು ಸೀತಾರಾಮ ಕಲ್ಯಾಣಂ ಚಿತ್ರಗಳ ಸಹನಿರ್ಮಾಣಕ್ಕೆ ಹಾಗೂ ವರಕಥನಂ ಚಿತ್ರದ ನಿರ್ದೇಶನಕ್ಕೆ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದರು. ರಾಜು ಪೇದ ಮತ್ತು ಲವ ಕುಶ ಚಿತ್ರಗಳಲ್ಲಿನ ಅಭಿನಯಕ್ಕೂ ರಾಷ್ಟ್ರೀಯ ಪ್ರಶಸ್ತಿ ಸಂದಿತ್ತು.

ಎನ್ ಟಿಆರ್ ಆಂಧ್ರಪ್ರದೇಶದಲ್ಲಿ 1982ರಲ್ಲಿ ತೆಲುಗು ದೇಶಂ ಪಕ್ಷವನ್ನು ಹುಟ್ಟುಹಾಕಿದರು.
1983ರಲ್ಲಿ ನಿರೀಕ್ಷೆಗೂ ಮೀರಿ ಎನ್‍ಟಿಆರ್ ತೆಲುಗು ದೇಶಂ ಪಕ್ಷ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಧೂಳೀಪಟ ಮಾಡಿ ಅಧಿಕಾರದ ಗದ್ದುಗೆ ಏರಿತ್ತು. 294 ವಿಧಾನಸಭಾ ಸ್ಥಾನಗಳಲ್ಲಿ 199 ಕ್ಷೇತ್ರಗಳಲ್ಲಿ ಟಿಡಿಪಿ ಜಯಭೇರಿ ಬಾರಿಸಿತ್ತು. 1983ರ ಜನವರಿ 9ರಂದು ಆಂಧ್ರಪ್ರದೇಶದ 10ನೇ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು.

1984ರ ಆಗಸ್ಟ್ 15ರಂದು ಹೃದಯ ಶಸ್ತ್ರಚಿಕಿತ್ಸೆಗಾಗಿ ಎನ್ ಟಿಆರ್ ಅಮೇರಿಕಾಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಇಂದಿರಾ ಗಾಂಧೀ ಕೃಪಾಪೋಷಿತ ರಾಜ್ಯಪಾಲ ರಾಮ್ ಲಾಲ್ ದಿಢೀರನೆ ಎನ್ ಟಿಆರ್ ಅವರನ್ನು ಪದಚ್ಯುತಗೊಳಿಸಿ ನಾದೆಂಡ್ಲ ಭಾಸ್ಕರ್ ರಾವ್ ಅವರನ್ನು ಮುಖ್ಯಮಂತ್ರಿ ಎಂದು ಘೋಷಿಸಿದ್ದರು. ಹಲವು ತಿರುವುಗಳ ನಂತರ 1984ರ ಸೆಪ್ಟೆಂಬರ್ನಲ್ಲಿ ಪುನಃ ಅಧಿಕಾರ ಹಿಂದಿರುಗಿ ಬಂತು.

1984ರ ಅಕ್ಟೋಬರ್ ತಿಂಗಳಲ್ಲಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ನಡೆದು ರಾಜೀವ್ ಗಾಂಧಿ ಪ್ರಧಾನಿ ಚುಕ್ಕಾಣಿ ಹಿಡಿದಿದ್ದರು. ಇಡೀ ದೇಶದಲ್ಲಿ ಕಾಂಗ್ರೆಸ್ ಅಲೆ ಎದ್ದರೂ ಆಂಧ್ರಪ್ರದೇಶದಲ್ಲಿ ಮಾತ್ರಾ ಎನ್ ಟಿಆರ್ ಬಹುಮತ ಪಡೆದು ಪುನಃ ಮುಖ್ಯಮಂತ್ರಿಗಳಾದರು.

2 ರೂಪಾಯಿಗೆ ಒಂದು ಕಿಲೋ ಅಕ್ಕಿ ಎನ್ ಟಿಆರ್ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿತ್ತು. ಬಡಮಕ್ಕಳಿಗಾಗಿ ಶಾಲೆಗಳಲ್ಲಿ ಮಧ್ಯಾಹ್ನದ ಊಟದ ಯೋಜನೆಯನ್ನು ಜಾರಿಗೊಳಿಸಿದರು. ತಮ್ಮ ಅಧಿಕಾರಾವಧಿಯಲ್ಲಿ ಆಶ್ವಾಸನೆಗಳ ಜಾರಿಗಾಗಿ 30 ಬಾರಿ ಸುಗ್ರೀವಾಜ್ಞೆ ಹೊರಡಿಸಿದ್ದರು.

1985ರಲ್ಲಿ ಎನ್ ಟಿಆರ್ ವಿಧಾನಸಭೆಯನ್ನು ವಿಸರ್ಜಿಸಲು ಶಿಫಾರಸು ಮಾಡಿ ಹೊಸದಾಗಿ ನಡೆದ ಚುನಾವಣೆಯಲ್ಲಿ ಭರ್ಜರಿ ಬಹುಮತ ಪಡೆದರು. 1989ರಲ್ಲಿ ಚುನಾವಣೆ ನಡೆದಾಗ ಟಿಡಿಪಿ ವಿರೋಧಿ ಅಲೆ ಎದ್ದ ಪರಿಣಾಮ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಏರಿತ್ತು. 1994ರಲ್ಲಿ ಎನ್ ಟಿಆರ್ ನೇತೃತ್ವದ ಮೈತ್ರಿ(ಎಡಪಕ್ಷ) ಕೂಟ ಅಧಿಕಾರಕ್ಕೆ ಏರಿತ್ತು. 294 ಸ್ಥಾನಗಳಲ್ಲಿ ಎನ್ ಟಿಆರ್ ಮೈತ್ರಿಕೂಟ 269 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಹೀಗೆ 1994ರವರೆಗೆ ಅಧಿಕಾರ ನಡೆಸಿದ್ದರು.

1985ರಲ್ಲಿ ಪತ್ನಿ ಬಸವತಾರಕಮ್ ವಿಧಿವಶರಾಗಿದ್ದರು. 1993ರಲ್ಲಿ ಎನ್ ಟಿಆರ್ ತೆಲುಗು ಲೇಖಕಿ ಲಕ್ಷ್ಮಿ ಪಾರ್ವತಿಯನ್ನು ವಿವಾಹವಾಗಿದ್ದರು. ಪಾನ ನಿರೋದ ಜಾರಿಗೆ ತಂದದ್ದು ಕೂಡಾ ಅವರ ವಿರುದ್ಧ ದೊಡ್ಡ ಲಾಬಿ ನಿರ್ಮಾಣ ಮಾಡುತ್ತಿತ್ತು. ದೇಶದಲ್ಲಿ ಯಾವುದೇ ಪಕ್ಷವೂ ಪ್ರಧಾನವಾಗಿಲ್ಲದ ಸ್ಥಿತಿಯಲ್ಲಿ ತಮ್ಮ ಪಾತ್ರಕ್ಕೂ ಪ್ರಾಧಾನ್ಯತೆ ಕಾಣ ತೊಡಗಿದರು. ಕಾವಿ ಧರಿಸಿ ತಾವೇ ಅವತಾರ ಪುರುಷರಂತೆ ಭಾಷಣ ಮಾಡುತ್ತಿದ್ದರು. ಬ್ರಹ್ಮರ್ಷಿವಿಶ್ವಾಮಿತ್ರ, ಶ್ರೀಮದ್ ವಿರಾಟ್ ವೀರಬ್ರಹ್ಮೇಂದ್ರ ಸ್ವಾಮಿ ಚರಿತ ಚಿತ್ರಗಳಲ್ಲಿ ಅಧ್ಯಾತ್ಮ ಪಾತ್ರಧಾರಿ ದೇಶದ ನಾಯಕತ್ವ ವಹಿಸುತ್ತಾನೆ ಎಂಬ ಚಿತ್ರಣ ತಂದು ತಮ್ಮ ಬಿಂಬದ ಕಲ್ಪನೆಗಳಲ್ಲಿದ್ದರು. 1994ರಲ್ಲಿ ಚಂದ್ರಬಾಬು ನಾಯ್ಡು ದೊಡ್ಡ ರೀತಿಯಲ್ಲಿ ಭಿನ್ನಮತ ಸೃಷ್ಟಿಸಿ ವಯಸ್ಸಿನ ಅಸಹಾಯಕತೆ ಹೊಂದಿದ್ದ ಎನ್. ಟಿ. ರಾಮಾರಾವ್ ರಾಜಕೀಯಕ್ಕೆ ಬಹುತೇಕವಾಗಿ ತೆರೆ ಎಳೆದರು.

1996ರ ಜನವರಿ 18ರಂದು ಎನ್. ಟಿ. ರಾಮಾರಾವ್ ನಿಧನರಾದರು.


On the birth anniversary of actor and politician N. T. Ramarao

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ