ಮ್ಯಾಂಡೋಲಿನ್ ರಾಜೇಶ್
ಮ್ಯಾಂಡೋಲಿನ್ ರಾಜೇಶ್
ಮ್ಯಾಂಡೋಲಿನ್ ರಾಜೇಶ್ ಎಂದು ಜನಪ್ರಿಯರಾಗಿರುವ ಉಪ್ಪಲಾಪು ರಾಜೇಶ್ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತದ ಮ್ಯಾಂಡೋಲಿನ್ ವಾದಕರು, ಸಂಗೀತ ನಿರ್ಮಾಪಕರು ಮತ್ತು ಸಂಯೋಜಕರು.
ಯು. ರಾಜೇಶ್ ಅವರು 1977ರ ಮೇ 17 ರಂದು ಆಂಧ್ರಪ್ರದೇಶದ ಪಾಲಕೋಲ್‌ನಲ್ಲಿ ಜನಿಸಿದರು. ತಂದೆ ಯು. ಸತ್ಯನಾರಾಯಣ. ತಾಯಿ ಕಾಂತಮ್. ದಿವಂಗತ ಮ್ಯಾಂಡೋಲಿನ್ ಯು. ಶ್ರೀನಿವಾಸ್ ಇವರ ಅಣ್ಣ.
ಬಾಲ್ಯದಲ್ಲಿ ರಾಜೇಶ್ ಅವರಿಗೆ ಅವರ ತಂದೆ ಮತ್ತು ಸಹೋದರ ಸಂಗೀತದಲ್ಲಿ ಬೋಧಕರಾಗಿದ್ದರು. ರಾಜೇಶ್ ತಮ್ಮ 6 ನೇ ವಯಸ್ಸಿನಲ್ಲಿ ಮ್ಯಾಂಡೋಲಿನ್‌ನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ನುಡಿಸಲು ಪ್ರಾರಂಭಿಸಿದರು. ಕಂಚಿ ಕಾಮಕೋಟಿ ಪೀಠದಲ್ಲಿ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಅವರ ಸಮ್ಮುಖದಲ್ಲಿ ತಮ್ಮ ಮೊದಲ ಕಛೇರಿಯನ್ನು ಮಾಡಿದರು. ಯು.ರಾಜೇಶ್ ಕಂಚಿಯ ಪರಮಾಚಾರ್ಯರ ಕಟ್ಟಾ ಭಕ್ತರು. ಅವರು ಶ್ರೀ ಸತ್ಯಸಾಯಿ ಬಾಬಾ ಅವರ ಅನುಯಾಯಿ ಮತ್ತು ಭಕ್ತರಾಗಿದ್ದು ಮತ್ತು ಅವರ ಮುಂದೆ ಹಲವಾರು ಸಂದರ್ಭಗಳಲ್ಲಿ ಪ್ರದರ್ಶನ ನೀಡಿದ್ದರು.
ರಾಜೇಶ್ ತಮ್ಮ ಸಹೋದರ ಶ್ರೀನಿವಾಸ್ ಜೊತೆಗೆ ಸಂಗೀತ ಕಚೇರಿಗಳಲ್ಲಿ ಪ್ರದರ್ಶನ ನೀಡಿದ್ದರಲ್ಲದೆ ಒಟ್ಟಿಗೆ ಸಂಗೀತ ಆಲ್ಬಂಗಳನ್ನು ಹೊರತಂದಿದ್ದರು.
ಜಾನ್ ಮ್ಯಾಕ್‌ಲಾಫ್ಲಿನ್ ಅವರ ಆಲ್ಬಮ್ ಫ್ಲೋಟಿಂಗ್ ಪಾಯಿಂಟ್‌ನೊಂದಿಗೆ ರಾಜೇಶ್ ಅವರ ಕೆಲಸವು 2009 ರಲ್ಲಿ ಗ್ರ್ಯಾಮಿ ನಾಮನಿರ್ದೇಶನವನ್ನು ಪಡೆಯಿತು. ಅವರು ಜರ್ಮನಿಯಲ್ಲಿ ನಡೆಡ್ ಮ್ಯಾಜಿಕ್ ಮ್ಯಾಂಡೋಲಿನ್ ಫೆಸ್ಟಿವಲ್‌ನಲ್ಲಿ ಅತ್ಯಂತ ಕಿರಿಯರಾಗಿ ಪಾಲ್ಗೊಂಡಿದ್ದರು. ಅವರು ನ್ಯೂಯಾರ್ಕ್ ನಗರದ ಲಿಂಕನ್ ಸೆಂಟರ್‌ನಲ್ಲಿ ಪ್ರದರ್ಶನ ನೀಡಿದ್ದಾರೆ ಮತ್ತು ಬಿಬಿಸಿ ಲೈವ್ನಲ್ಲಿ ಸಂಗೀತ ಕಚೇರಿಗಳನ್ನು ನೀಡಿದ್ದಾರೆ. ಲಂಡನ್, ಮೆಲ್ಬೋರ್ನ್ ಕನ್ಸರ್ಟ್ ಹಾಲ್, ಸಿಟೆ ಡೆ ಲಾ ಮ್ಯೂಸಿಕ್, ಪ್ಯಾರಿಸ್, ಗ್ರೀಸ್, ಕೆನಡಾ, ಮಿಡಲ್-ಈಸ್ಟ್, ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್ಗಳಲ್ಲಿ ಪ್ರದರ್ಶನ ನೀಡಿದ್ದಾರೆ.
ರಾಜೇಶ್ ಅವರು ಜೋಹಾನ್ಸ್‌ಬರ್ಗ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾ (ಡೊಮಿನಿಕ್ ಡಿ ಪಿಯಾಝಾ ಜೊತೆ), KZN ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾ ಮತ್ತು ಕ್ಲೋಸರ್ ಹೋಮ್ (ಸ್ಟೀಫನ್ ದೇವಸ್ಸಿ ಅವರೊಂದಿಗೆ) ನೇರ ಪ್ರದರ್ಶನ ನೀಡಿದ್ದಾರೆ. 2006 ರಲ್ಲಿ ನ್ಯೂಯಾರ್ಕ್‌ನಲ್ಲಿ ಅವರ ಸಂಗೀತ ಪ್ರದರ್ಶನವನ್ನು 'ದಿ ನ್ಯೂಯಾರ್ಕರ್' ವರ್ಷದ ಅತ್ಯುತ್ತಮ ಸಂಗೀತ ಕಚೇರಿ ಎಂದು ವರದಿ ಮಾಡಿತು. ಏಪ್ರಿಲ್ 2007 ರಲ್ಲಿ ಭಾರತದ ರಾಷ್ಟ್ರಪತಿಗಳ ವಿಶೇಷ ಗೌರವ ಸ್ವೀಕರಿಸಿದರು.
ರಾಜೇಶ್ ಅನೇಕ ಏಕವ್ಯಕ್ತಿ ಆಲ್ಬಂಗಳನ್ನು ಬಿಡುಗಡೆ ಮಾಡಿದ್ದಾರೆ. ಕೋರಮಂಡಲ್ ಡ್ಯುಯೆಟ್ (ಎ.ಕೆ.ಪಳನಿವೇಲ್ ಜೊತೆ), ಅಮಾಲ್ಗಮೇಶನ್, ವಿಕ್ಕು ವಿನಾಯಕರಾಮ್, ಸ್ಪಿರಿಟ್ಸ್, ಫಾಲೋ ಮೈ ಹಾರ್ಟ್, ಇನ್ಟು ದಿ ಲೈಟ್ ಮುಂತಾದವು ಇವುಗಳಲ್ಲಿ ಸೇರಿವೆ. "ಸಮ್ಜನಿತಾ ಸ್ವತಃ" ಆಲ್ಬಮ್ ಯು. ಶ್ರೀನಿವಾಸ್, ಜಾಕಿರ್ ಹುಸೇನ್, ಶಿವಮಣಿ ಮತ್ತು ಜಾರ್ಜ್ ಬ್ರೂಕ್ ಅವರುಗಳ ಸಂಗೀತ ಸಹಯೋಗ ಒಳಗೊಂಡಿತ್ತು. ಯು. ರಾಜೇಶ್ ಅವರು ಉಸ್ತಾದ್ ಜಾಕಿರ್ ಹುಸೇನ್, ಉಸ್ತಾದ್ ಸುಲ್ತಾನ್ ಖಾನ್, ಪಂಡಿತ್ ಹರಿಪ್ರಸಾದ್ ಚೌರಾಸಿಯಾ, ಶಂಕರ್ ಮಹಾದೇವನ್, ಹರಿಹರನ್, ಲೂಯಿಸ್ ಬ್ಯಾಂಕ್ಸ್, ರಂಜಿತ್ ಬರೋಟ್, ಮೈಕ್ ಮಾರ್ಷಲ್, ಶಿವಮಣಿ ಮುಂತಾದ ಉತ್ತರ ಮತ್ತು ದಕ್ಷಿಣ ಭಾರತದ ಅನೇಕ ಸಂಗೀತ ಕಲಾವಿದರೊಂದಿಗೆ ಪ್ರವಾಸ ಮತ್ತು ಧ್ವನಿಮುದ್ರಣಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪೀಟ್ ಲಾಕೆಟ್, ಕಾರ್ಶ್ ಕೇಲ್ ಮತ್ತು ಗ್ರೆಗ್ ಎಲ್ಲಿಸ್, ಬಿಕ್ರಮ್ ಘೋಷ್, ಕಮಲ್ ಸಾಬ್ರಿ, ನೀಲಾದ್ರಿ ಕುಮಾರ್ ಇತ್ಯಾದಿ ಕಲಾವಿದರೊಂದಿಗೂ ಅವರ ಸಹಯೋಗವಿದೆ. ಯು. ರಾಜೇಶ್ 2014 ರಲ್ಲಿ, ಗಾಯಕ ಕಾರ್ತಿಕ್ ಜೊತೆಗೂಡಿ ಸೃಷ್ಟಿ ಬ್ಯಾಂಡ್ ಅನ್ನು ರಚಿಸಿದರು.
ರಾಜೇಶ್ ಅವರು ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಮ್ಯೂಸಿಕ್ ಸಂಗೀತ ಶಾಲೆಯ ನಿರ್ದೇಶಕರಲ್ಲಿ ಒಬ್ಬರು. ಚೆನ್ನೈನಲ್ಲಿರುವ ಈ ಸಂಸ್ಥೆ ವಿದ್ಯಾರ್ಥಿಗಳಿಗೆ ಉಚಿತ ಸಂಗೀತ ಶಿಕ್ಷಣವನ್ನು ನೀಡುತ್ತಿದೆ.
On the birthday of great musician Mandolin Rajesh
ಕಾಮೆಂಟ್‌ಗಳು