ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಾಮನ ಕಾಣೆ


 ಪಾಂಡುರಂಗ ವಾಮನ ಕಾಣೆ


ಭಾರತ ರತ್ನ ಪುರಸೃತ ಪಾಂಡುರಂಗ ವಾಮನ ಕಾಣೆ ಉದ್ದಾಮ ಸಂಸ್ಕೃತ  ವಿದ್ವಾಂಸರು, ಪ್ರಕಾಂಡ ಕಾಯಿದೆ ಪಂಡಿತರು, ಅಲಂಕಾರಶಾಸ್ತ್ರ ಹಾಗೂ ಧರ್ಮಶಾಸ್ತ್ರಗಳ ಮೊದಲ ಇತಿಹಾಸವನ್ನು ಆಧುನಿಕ ಸಂಶೋಧಕ ದೃಷ್ಟಿಯಿಂದ ಇಂಗ್ಲಿಷ್ ಮತ್ತು ಮರಾಠೀ ಭಾಷೆಗಳಲ್ಲಿ ರಚಿಸಿದ ಮಹಾ ಗ್ರಂಥಕಾರರು. 

ಪಾಂಡುರಂಗ ವಾಮನ ಕಾಣೆ 1880ರ ಮೇ 7 ರಂದು ಲೋಕಮಾನ್ಯ ಬಾಲಗಂಗಾಧರ ತಿಲಕ್, ಗೋಪಾಲ ಕೃಷ್ಣ ಗೋಖಲೆಯಂಥ ದೇಶಪ್ರೇಮಿಗಳನ್ನೂ ಸಮಾಜ ಸುಧಾರಕರನ್ನೂ ಕೊಟ್ಟಂಥ ಜಿಲ್ಲೆಯಾದ ರತ್ನಾಗಿರಿಯ ಪರಶುರಾಮ್ ಎಂಬ ಹಳ್ಳಿಯಲ್ಲಿವರು ಜನಿಸಿದರು. ತಂದೆ ವಾಮನರಾವ್ ನ್ಯಾಯವಾದಿ. ಸುಸಂಸ್ಕೃತ  ಮನೆತನದಲ್ಲಿ ಹುಟ್ಟಿದ ಕಾಣೆಯವರು ಬೊಂಬಾಯಿಯ ವಿಲ್ಸನ್ ಕಾಲೇಜಿನಲ್ಲಿ ಪದವೀಧರರಾದರು (1901). ಮುಂದೆ ಎಲ್.ಎಲ್.ಬಿ. ಪದವಿ ಪಡೆದು 1903ರಲ್ಲಿ ಎಂ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಇಂಗ್ಲಿಷ್ ಮತ್ತು ಸಂಸ್ಕೃತಗಳೆರಡರಲ್ಲೂ ಮೇಧಾವಿ ಎನಿಸಿದ ಇವರಿಗೆ ಭೌದಾಜಿ ಮತ್ತು ಜಾಲಾ ವೇದಾಂತ ಬಹುಮಾನಗಳು ದೊರಕಿದುವು. 1906-07ರಲ್ಲಿ ಇವರ ವಿದ್ವತ್‍ಪೂರ್ಣ ಲೇಖನಗಳಿಗೆ ವಿ.ಎನ್. ಮಾಂಡ್‍ಲಿಕ್ ಸುವರ್ಣಪದಕ ಮತ್ತು ಬಹುಮಾನ ದೊರೆತವು.

ಕಾಣೆಯವರು 1904ರಲ್ಲಿ ಹೈಸ್ಕೂಲೊಂದರಲ್ಲಿ ಉಪಾಧ್ಯಾಯ ವೃತ್ತಿಗೆ ಸೇರಿದರು. 1909ರಲ್ಲಿ ಬೊಂಬಾಯಿಯ ಎಲ್ಫಿನ್‍ಸ್ಟನ್ ಕಾಲೇಜಿನಲ್ಲಿ. ಸಂಸ್ಕೃತ ಪ್ರಾಧ್ಯಾಪಕರಾದರು. 1912ರಲ್ಲಿ ಎಲ್.ಎಲ್.ಎಂ. ಪದವಿ ಪಡೆದು ಬೊಂಬಾಯಿಯ ಶ್ರೇಷ್ಠ ನ್ಯಾಯಾಲಯದ ವಕೀಲರಾದರು. ವಕೀಲರಾಗಿ ಸಾಕಷ್ಟು ಹೆಸರು ಪಡೆದರೂ ಸಂಸ್ಕೃತ ಮತ್ತು ಭಾರತೀಯ ಸಂಸ್ಕೃತಿಯ ಅಭ್ಯಾಸ ಕಾಣೆಯವರೆಗೆ ಅಚ್ಚುಮೆಚ್ಚಾಯಿತು. 1910ರಲ್ಲೇ ವಿಶ್ವನಾಥನ ಸಾಹಿತ್ಯ ದರ್ಪಣವನ್ನು ಅಚ್ಚುಕಟ್ಟಾದ ಪೀಠಿಕೆ, ಟಿಪ್ಪಣಿ ಮತ್ತು ಅನುಬಂಧಗಳೊಡನೆ ಪ್ರಕಾಶಪಡಿಸಿದರು. ಇದೇ ಗ್ರಂಥ ಮುಂದೆ ಇವರ ಪ್ರಸಿದ್ಧವಾದ ಸಂಸ್ಕೃತ ಅಲಂಕಾರ ಶಾಸ್ತ್ರ ಚರಿತ್ರೆ ಎಂಬ ಗ್ರಂಥಕ್ಕೆ ನಾಂದಿಯಾಯಿತು. 1913ರಲ್ಲಿ ವಿಲ್ಸನ್ ಭಾಷಾಶಾಸ್ತ್ರಾ ಭಾಷಣಗಳು ಎಂಬ ಮಾಲೆಯಲ್ಲಿ ಸಂಸ್ಕೃತ ಮತ್ತು ತತ್‍ಸಂಬಂಧ ಭಾಷೆಗಳ ವಿಚಾರವಾಗಿ ಆರು ಭಾಷಣಗಳನ್ನಿತ್ತರು. ಎರಡು ವರ್ಷಗಳ ಕಾಲ ಮಹಾರಾಷ್ಟ್ರದ ಪುರಾತನ ಭೂಗೋಳಶಾಸ್ತ್ರ ಎಂಬ ವಿಷಯದಲ್ಲಿ ಸಂಶೋಧನೆ ನಡೆಸಲು ಇವರಿಗೆ ಸ್ಪಿಂಗರ್ ಸಂಶೋಧನಾ ವಿದಾರ್ಥಿವೇತನ ಲಭಿಸಿತು. ಅನಂತರ ತಾವು ಓದಿದ ವಿಲ್ಸನ್ ಕಾಲೇಜಿನಲ್ಲಿ ಗೌರವ ಸಂಸ್ಕೃತ ಪ್ರಾಧ್ಯಾಪಕರಾಗಿ (1916) ಒಂದು ವರ್ಷ ಸೇವೆ ಸಲ್ಲಿಸಿದರು. 1917ರಿಂದ 1923ರ ವರೆಗೆ ಬೊಂಬಾಯಿಯ ಲಾ ಕಾಲೇಜಿನಲ್ಲಿ ಕಾಯಿದೆ ವಿಭಾಗದ ಪ್ರಾಚಾರ್ಯರಾಗಿದ್ದರು. ಕೆಲಕಾಲ ದೆಹಲಿಯ ಫೆಡರಲ್ ನ್ಯಾಯಾಲಯದ ವಕೀಲರಾಗಿಯೂ ಕೆಲಸ ಮಾಡಿದರು. ಅಲ್ಲದೆ ಬಿ.ಎ., ಎಂ.ಎ., ಎಲ್.ಎಲ್.ಬಿ., ಎಲ್.ಎಲ್.ಎಂ., ಪಿಎಚ್.ಡಿ ಮತ್ತು ಡಿ.ಲಿಟ್ ಪರೀಕ್ಷೆಗಳಿಗೆ ನಾನಾ ಹಂತಗಳಲ್ಲಿ ಬೊಂಬಾಯಿ, ಮದರಾಸು, ನಾಗಪುರ ಮತ್ತು ಢಾಕಾ ಮುಂತಾದ ವಿಶ್ವವಿದ್ಯಾನಿಲಯಗಳಲ್ಲಿ ಪರೀಕ್ಷಕರಾಗಿಯೂ ಸೇವೆ ಸಲ್ಲಿಸಿದರು. 1919ರಿಂದ 1928ರ ವರೆಗೆ ಒಂಬತ್ತು ವರ್ಷಗಳ ಕಾಲ ಬೊಂಬಾಯಿ ವಿಶ್ವವಿದ್ಯಾನಿಲಯದ ಫೆಲೊ ಆಗಿಯೂ ಕಲೆ ಮತ್ತು ಕಾಯಿದೆ ವಿಭಾಗಗಳಲ್ಲಿ ಹದಿನೈದು ವರ್ಷಗಳ ಕಾಲ ಸದಸ್ಯರಾಗಿಯೂ ಇದ್ದರು.

ಕಾಣೆಯವರು ರಾಯಲ್ ಏಷ್ಯಾಟಿಕ್ ಸೊಸೈಟಿಯ ಬೊಂಬಾಯಿ ಶಾಖೆ, ಮರಾಠೀ ಗ್ರಂಥ ಸಂಗ್ರಹಾಲಯ, ಭಂಡಾರ್‍ಕರ್ ಪ್ರಾಚ್ಯ ಸಂಶೋಧನಾಲಯ (ಭಂಡಾರಕರ್ ಓರಿಯಂಟಲ್ ರೀಸರ್ಚ್ ಇನ್‍ಸ್ಟಿಟ್ಯೂಟ್), ಮಹಾರಾಷ್ಟ್ರ ಸಾಹಿತ್ಯ ಪರಿಷತ್-ಮುಂತಾದ ಸಂಘಸಂಸ್ಥೆಗಳಲ್ಲಿ ನಾನಾಮುಖ ಸೇವೆ ಸಲ್ಲಿಸಿದ್ದರು. ಅಖಿಲ ಭಾರತೀಯ ಪೌರಸ್ತ್ಯ ಸಮ್ಮೇಳನಗಳಲ್ಲಿ ಇವರದ್ದು ಸಕ್ರಿಯವಾದ ಪಾತ್ರ. 1947ರಿಂದ 1949ರ ವರೆಗೆ ಮುಂಬಯಿ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದರು. ಪ್ಯಾರಿಸ್ (1948), ಇಸ್ತಾನ್‍ಬುಲ್ (1951), ಕೇಂಬ್ರಿಜ್ (1954) ನಗರಗಳಲ್ಲಿ ನಡೆದ ಇಂಟರ್‍ನ್ಯಾಷನಲ್ ಕಾಂಗ್ರೆಸ್ ಆಫ್ ಓರಿಯಂಟಲಿಸ್ಟ್ಸ್ ಮಹಾ ಸಮ್ಮೇಳನಗಳಲ್ಲಿ ಭಾರತ ಸರ್ಕಾರದ ಪ್ರತಿನಿಧಿಯಾಗಿ ಭಾಗವಹಿಸಿದ್ದರು. 1953 ರಿಂದ 1959ರ ವರೆಗೆ ಸರಕಾರದಿಂದ ಆಯ್ಕೆಗೊಂಡ ಲೋಕಸಭಾ ಸದಸ್ಯರಾಗಿದ್ದರು. 

1956ರಲ್ಲಿ ಕಾಣೆ ಅವರ ಧರ್ಮಶಾಸ್ತ್ರದ ಇತಿಹಾಸದ ನಾಲ್ಕನೆಯ ಸಂಪುಟಕ್ಕೆ ಸಾಹಿತ್ಯ ಅಕಡೆಮಿ ಬಹುಮಾನ ಬಂದಿತು. 1958ರಲ್ಲಿ ಭಾರತ ಸರಕಾರ ಇವರನ್ನು ಗೌರವಿಸಿ 1,500 ರೂಗಳ ವಾರ್ಷಿಕ ಜೀವನಾಂಶ ನೀಡಿತು. ಅಲಹಬಾದ್ ಮತ್ತು ಪುಣೆ ವಿಶ್ವವಿದ್ಯಾನಿಲಯಗಳು ಇವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿದುವು. 1963ರಲ್ಲಿ ಇವರಿಗೆ ಭಾರತರತ್ನ ಪ್ರಶಸ್ತಿ ದೊರಕಿತು; ಅದೇ ವರ್ಷ ಮುಂಬಯಿ ವಿಶ್ವವಿದ್ಯಾನಿಲಯ ಡಾಕ್ಟರ್ ಆಫ್ ಲಾಸ್ ಪದವಿ ನೀಡಿತು.

ಕಾಣೆ ಅವರು ಸಂಸ್ಕೃತದ ವಿಶಾಲವಾದ ಕಾವ್ಯಶಾಸ್ತ್ರಗಳನ್ನು ಆಧುನಿಕ ಸಂಶೋಧನ ಪದ್ಧತಿಯಿಂದ ಆಳವಾಗಿ ಅಧ್ಯಯನ ಮಾಡಿ ಯಾವ ಪೂರ್ವಗ್ರಹವೂ ಇಲ್ಲದೆ ಕೇವಲ ವಿದ್ವಜ್ಜನೋಚಿತ ಪ್ರಾಮಾಣಿಕತೆಯಿಂದ ಗ್ರಂಥ ರಚನೆ ಮಾಡಿ ಭಾರತದಲ್ಲಿ ಮಾತ್ರವಲ್ಲದೆ ಅಂತರ್‍ರಾಷ್ಟ್ರೀಯ ಕೀರ್ತಿಯನ್ನು ಗಳಿಸಿದ  ಕೆಲವೇ ಜನ ಭಾರತೀಯ ವಿದ್ವಾಂಸರಲ್ಲಿ ಕಾಣೆಯವರೂ ಒಬ್ಬರು. ಕಾಣೆಯವರ ವಿದ್ವತ್ಪೂರ್ಣ ಸಂಪಾದನೆಯಲ್ಲಿ ಅನೇಕ ಗ್ರಂಥಗಳು ಪ್ರಕಟವಾಗಿವೆ. ಬಾಣಭಟ್ಟನ ಕಾದಂಬರಿಯ ಎರಡು ಭಾಗಗಳನ್ನು 1911 ಮತ್ತು 1918ರಲ್ಲೂ ಹರ್ಷಚರಿತೆಯ ಎರಡು ಭಾಗಗಳನ್ನು 1918 ಮತ್ತು 1921ರಲ್ಲೂ ಭವಭೂತಿಯ ಉತ್ತರರಾಮಚರಿತ ನಾಟಕವನ್ನು 1913ರಲ್ಲೂ ನೀಲಕಂಠನ ವ್ಯವಹಾರ ಮಯೂಖವನ್ನು 1927ರಲ್ಲೂ ಪ್ರಕಟಿಸಿದರು. ಇವಲ್ಲದೆ ಪೂರ್ವ ಮೀಮಾಂಸಾದರ್ಶನ, ವಿಶ್ವನಾಥನ ಸಾಹಿತ್ಯದರ್ಪಣ, ಶಂಖಲಿಖಿತರ ಧರ್ಮಸೂತ್ರ, ಕಾತ್ಯಾಯನನ ಸ್ಮೃತಿ  ಸಾರೋದ್ದಾರ ಮುಂತಾದ ಗ್ರಂಥಗಳು ಸಮುಚಿತವಾದ ಪೀಠಿಕೆ, ಟಿಪ್ಪಣಿ, ಭಾಷಾಂತರ ಇತ್ಯಾದಿಗಳಿಂದ ಪ್ರಕಟಗೊಂಡಿವೆ. ಸಂಸ್ಕೃತದಷ್ಟೇ ಮರಾಠಿ ಭಾಷೆಯಲ್ಲಿಯೂ ಇವರು ಪ್ರಕಾಂಡ ಪಂಡಿತರು. ಭಾರತ ರಾಮಾಯಣ ಕಾಲಗಳ ಸಾಮಾಜಿಕ ಸ್ಥಿತಿ. ಸಂಸ್ಕೃತ ಸಾಹಿತ್ಯದ ಇತಿಹಾಸ, ಧರ್ಮಶಾಸ್ತ್ರ ವಿಚಾರ, ಋಕ್‍ಸಾರ ಸಂಗ್ರಹ ಮತ್ತು ಯೂರೋಪಿನಲ್ಲಿ ಪ್ರವಾಸ ಎಂಬ ಗ್ರಂಥಗಳನ್ನಿವರು ಮರಾಠಿಯಲ್ಲಿ ರಚಿಸಿದ್ದಾರೆ.

ಕಾಣೆ ಅವರ ಹಿಂದೂ ಕಸ್ಟಮ್ಸ್ ಅಂಡ್ ಮಾಡರ್ನ್ ಲಾ ಎಂಬ ಕೃತಿಯ ಮೂರು ಭಾಗಗಳು 1944ರೊಳಗೆ ಪ್ರಕಟವಾದುವು. 1951ರಲ್ಲಿ ಹಿಸ್ಟ್ರಿ ಆಫ್ ಸಂಸ್ಕೃತ ಪೊಯಟಿಕ್ಸ್ ಪ್ರಕಟವಾಯಿತು. ಇವರ ಮಹಾ ಗ್ರಂಥವಾದ ಹಿಸ್ಟ್ರಿ ಆಫ್  ಧರ್ಮಶಾಸ್ತ್ರದ  ಐದು ಭಾಗಗಳು 1930 ರಿಂದ  1962ರೊಳಗೆ  ಪ್ರಕಟವಾದುವು. ಧರ್ಮಶಾಸ್ತ್ರದ ಇತಿಹಾಸ ಕಾಣೆಯವರ ಬೃಹದ್ ಗ್ರಂಥ; ಭಾರತೀಯ ನ್ಯಾಯಶಾಸ್ತ್ರಕ್ಕೆ ನೀಡಿದ ಉತ್ತಮ ಕೊಡುಗೆ. ಹಿಂದೂ ಧರ್ಮಶಾಸ್ತ್ರದ ಪ್ರಚುರತೆಯ ಪರಿಜ್ಞಾನ, ಆ ಬಗ್ಗೆ ಸಾಮಾಜಿಕ ಮಾನ್ಯತೆಯ ಅಧ್ಯಯನ, ವಿಧಿ-ಶಾಸ್ತ್ರಗಳ ತುಲನಾತ್ಮಕ ವಿವೇಚನೆ ಮತ್ತು ಇತರ ಶಾಸ್ತ್ರಗಳು ಧರ್ಮಶಾಸ್ತ್ರದ ಮೇಲೆ ಬೀರಿದ ಪ್ರಭಾವ-ಇವುಗಳ ಪ್ರತಿಪಾದನೆಯ ದೃಷ್ಟಿಯಿಂದ ಅವಲೋಕಿಸಬಹುದಾದ ಆದ್ಯ ಗ್ರಂಥವಿದು. ವೇದಗಳ ಕಾಲದಿಂದ  ಇತ್ತೀಚಿನವರೆಗೆ ಹಿಂದೂ ಧರ್ಮಶಾಸ್ತ್ರ ಬೆಳೆದು ಬಂದ ರೀತಿ ಮತ್ತು ವಿಧಿ-ವಿಧಾನಗಳ ವಿಕಸನವನ್ನು ಇದರಲ್ಲಿ ಪ್ರತಿಪಾದಿಸಲಾಗಿದೆ.
ಇಂಥ ಒಂದು ಬೃಹದ್ ಗ್ರಂಥದ ಯೋಜನೆ ಸುಮಾರು 1915ರಲ್ಲಿ ಕಾಣೆಯವರ ಮನಸ್ಸಿನಲ್ಲಿ ಸುಳಿಯಿತು. ಅದಕ್ಕಾಗಿ ಅವಿಶ್ರಾಂತ ದುಡಿಮೆಯನ್ನು ಆರಂಭಿಸಿದರು. ಪುಣೆಯ ಭಂಡಾರ್‍ಕರ್ ಸಂಶೋಧನ ಸಂಸ್ಥೆಯ ಆಶ್ರಯದಿಂದ 1930ರ ವೇಳೆಗೆ ಇದರ ಒಂದು ಸಂಪುಟ ಮಾತ್ರ ಪ್ರಕಟವಾಗುವಂತಾಯಿತು. ಇಷ್ಟು ದೀರ್ಘಕಾಲ, ಅವಿಶ್ರಾಂತ ಅಧ್ಯಯನದಿಂದ ಇವರು ಸಂಗ್ರಹಿಸಿದ ಅಂಶಗಳಲ್ಲಿ ಹತ್ತನೆಯ ಒಂದು ಪಾಲು ಕೂಡ ಅದರಲ್ಲಿ ಅಡಕವಾಗಲಿಲ್ಲ. ಕೇವಲ ಧರ್ಮಸೂತ್ರ, ಸ್ಮೃತಿಗಳು, ನಿಬಂಧಗಳು, ಧರ್ಮಶಾಸ್ತ್ರ ಗ್ರಂಥಗಳು, ಟೀಕೆ ಟಿಪ್ಪಣಿಗಳು ಇವುಗಳ ಐತಿಹಾಸಿಕ ಅವಲೋಕನ ಮಾತ್ರ ಪ್ರಥಮ ಸಂಪುಟದಲ್ಲಿ ಶಕ್ಯವಾಯಿತು. ಕೇವಲ ಪುಸ್ತಕ ಸೂಚಿಯೇ 257 ಪುಟಗಳಷ್ಟಾಗಿವೆ. ನೂರಾರು ಮುದ್ರಿತ ಗ್ರಂಥಗಳಲ್ಲದೆ ಸಾವಿರಾರು ಹಸ್ತಪ್ರತಿಗಳನ್ನು ಕೂಡ ಪರಿಶೀಲಿಸಿಯೇ ಕಾಣೆಯವರು ಈ ಇತಿಹಾಸವನ್ನು ಬರೆದಿದ್ದಾರೆ. ಕಾಣೆಯವರು ಮೊದಲು ನಿರೀಕ್ಷಿಸಿದಂತೆ ಸಂಗ್ರಹಿಸಿದ್ದ ವಿಷಯ ವಿಸ್ತಾರ ಎರಡನೆಯ ಸಂಪುಟದಲ್ಲಿ ಕೂಡ ಕರಗಲಿಲ್ಲ. ಎರಡು ಭಾಗಗಳಲ್ಲಿ 1368 ಪುಟಗಳಷ್ಟು ಗಾತ್ರದ ಎರಡನೆಯ ಸಂಪುಟ 1941ರಲ್ಲಿ ಪ್ರಕಟವಾದರೂ ಕೇವಲ ವರ್ಣಾಶ್ರಮ ವಿಚಾರ, ಸಂಸ್ಕಾರಗಳು, ಆಹ್ನಿಕ, ಆಚಾರ, ದಾನ, ಪ್ರತಿಷ್ಠಾಪನೆ ಮತ್ತು ಉತ್ಸರ್ಗ, ಶ್ರೌತ ಯಜ್ಞಗಳು-ಇಷ್ಟು ವಿಷಯಗಳ ಚರ್ಚೆಗೆ ಮಾತ್ರ ಅಲ್ಲಿ ಅವಕಾಶವಾಯಿತು. ಮುಂದೆ 1946ರಲ್ಲಿ ಪ್ರಕಟವಾದ ಮೂರನೆಯ ಸಂಪುಟದಲ್ಲಿ ಕೂಡ ರಾಜಧರ್ಮ, ವ್ಯವಹಾರ ಮತ್ತು ಸದಾಚಾರಗಳೆಂಬ ಮೂರೇ ವಿಷಯಗಳ ವಿವೇಚನೆ ಸಾಧ್ಯವಾಯಿತು. ಈ ಸಂಪುಟವೂ 1,088 ಪುಟಗಳಷ್ಟು ದೊಡ್ಡದು. ಪಾತಕ, ಕರ್ಮವಿಪಾಕ, ಪ್ರಾಯಶ್ಚಿತ, ಅಂತ್ಯೇಷ್ಟಿ, ಆಶೌಚ, ಶ್ರಾದ್ಧ ಎಂಬ ವಿಷಯಗಳ ವಿವರಣೆಗೆ ನಾಲ್ಕನೆಯ ಸಂಪುಟವೂ ವ್ರತ, ಉತ್ಸವ, ಕಾಲ, ಶಾಂತಿಗಳು, ಪೌರಾಣಿಕ ಧರ್ಮಗಳು, ಪೂರ್ವ ಮೀಮಾಂಸಾ ಮುಂತಾದ ಶಾಸ್ತ್ರಗಳಿಂದ ಧರ್ಮಶಾಸ್ತ್ರದ ಮೇಲಾದ ಪ್ರಭಾವ, ಭಾರತೀಯ ಸಂಸ್ಕೃತಿಯ ಸಾರಗ್ರಹಣ-ಮುಂತಾದವನ್ನೆಲ್ಲ ಚರ್ಚಿಸಲು ಎರಡು ಭಾಗಗಳಲ್ಲಿ ಪ್ರಕಟವಾದ (1958 ಮತ್ತು 1962) ಐದನೆಯ ಸಂಪುಟವೂ ಬೇಕಾಯಿತು. ಹೀಗೆ ಸತತ ಪರಿಶ್ರಮದಿಂದ ಐದು ದಶಕಗಳಿಗೂ ಹೆಚ್ಚಿನ ಕಾಲಾವಧಿಯನ್ನು ಕೇವಲ ಒಂದು ಧರ್ಮಶಾಸ್ತ್ರದ ಕೂಲಂಕಷ ನಿರೂಪಣೆಗೆ ಧಾರೆಯೆರೆದ ಕಾಣೆಯವರನ್ನು ಭಾರತ ಹೆಮ್ಮೆಯಿಂದ ಅಭಿನಂದಿಸಿದ್ದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಕಾಣೆಯವರ ನಿರೂಪಣೆಯಲ್ಲಿ ಭಾರತೀಯ ಗ್ರಂಥಕಾರರ ಅಭಿಪ್ರಾಯಗಳು ವಿಸ್ತೃ ತವಾಗಿ ಉಲ್ಲೇಖಿಸಲ್ಪಟ್ಟಿವೆ; ಆಧುನಿಕ ವಿಚಾರಗಳೊಂದಿಗೆ ಅವುಗಳ ವಿಮರ್ಶೆಯೂ ಬಂದಿದೆ. ಭಾರತೀಯ ಸಮಾಜಶಾಸ್ತ್ರದ ಪುನರ್‍ರಚನೆಗೆ ಈ ವಿಸ್ತೃ ತ ಗ್ರಂಥದ ಅಧ್ಯಯನ ಅಗತ್ಯವಾಗಿದೆ. ಐದು ಸಂಪುಟಗಳಲ್ಲಿರುವ ಈ ಮಹಾಗ್ರಂಥ 6,500 ಪುಟಗಳಷ್ಟಿದೆ. ಈ ಗ್ರಂಥ ಕಾಣೆಯವರಿಗೆ ಮಹಾಮಹೋಪಾಧ್ಯಾಯ ಪದವಿ ಮತ್ತು ಡಿ.ಲಿಟ್. ಪ್ರಶಸ್ತಿ, ಲಂಡನ್ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಓರಿಯಂಟಲ್ ಮತ್ತು ಆಫ್ರಿಕನ್ ಸ್ಟಡೀಸ್ ಗೌರವ ಸದಸ್ಯತ್ವಗಳನ್ನು ತಂದುಕೊಟ್ಟ ಮೇರುಕೃತಿಯಾಗಿದೆ. ಕಾಣೆ ಅವರು ಸರಳ ಹಾಗೂ ಸಾರ್ಥಕವಾದ ತುಂಬು ಜೀವನ ನಡೆಸಿದ್ದಾರೆ. ಅವರದು ಆಡಂಬರವಿಲ್ಲದ ನಡೆನುಡಿ. ಸುಸಂಸ್ಕøತ ವ್ಯಕ್ತಿತ್ವ. ತೊಂಬತ್ತೊಂದು ವಯಸ್ಸಿನ ಈ ವ್ಯಕ್ತಿ ತನ್ನ ಜೀವಿತ ಕಾಲದಲ್ಲಿ ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆ ಅನುಪಮವಾದುದು.      

ಪಾಂಡುರಂಗ ವಾಮನ ಕಾಣೆ ಅವರು 1972ರ ಏಪ್ರಿಲ್ 18ರಂದು ಈ ಲೋಕವನ್ನಗಲಿದರು.

Great Indologist and Sanskrit scholar Bharat Ratna Pandurang Vaman Kane 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ