ಪನ್ನಾಲಾಲ್ ಪಟೇಲ್
ಪನ್ನಾಲಾಲ್ ಪಟೇಲ್
ನಾನಾಲಾಲ್ ಪಟೇಲ್ ಗುಜರಾತಿ ಸಾಹಿತ್ಯದಲ್ಲಿ ನೀಡಿದ ಕೊಡುಗೆಗಳಿಂದ ಹೆಸರಾದ ಜ್ಞಾನಪೀಠ ಪುರಸ್ಕೃತ ಲೇಖಕರು.
ಪನ್ನಾಲಾಲ್ ಪಟೇಲ್ 1912ರ ಮೇ 7ರಂದು ಈಗಿನ ರಾಜಾಸ್ಥಾನದ ದುಂಗಾರ್ಪುರದ ಮಂಡ್ಲಿ ಗ್ರಾಮದಲ್ಲಿ ಜನಿಸಿದರು. ತಂದೆ ನಾನಾಲಾಲ್. ತಾಯಿ ಹೀರಾಬಾ. ತಂದೆ ಕೃಷಿಕರಾಗಿದ್ದು ಅವರ ಹಳ್ಳಿಗರಿಗೆ ರಾಮಾಯಣ, ಓಖಹಾರ ಮತ್ತು ಇತರ ಪೌರಾಣಿಕ ಕಥೆಗಳನ್ನು ಹೇಳುತ್ತಿದ್ದರು. ಇದು ಅವರ ಮನೆಗೆ "ಕಲಿಕೆಯ ವಾಸಸ್ಥಾನ" ಎಂಬ ಹೆಸರನ್ನು ತಂದಿತ್ತು. ಇವರ ಬಾಲ್ಯದಲ್ಲೇ ತಂದೆ ನಿಧನರಾದರು. ತಾಯಿ ಹೀರಾಬಾ ಮಕ್ಕಳನ್ನು ಬೆಳೆಸಿದರು.
ಬಡತನದ ಕಾರಣದಿಂದ ಪನ್ನಾಲಾಲ್ ಪಟೇಲರ ವಿದ್ಯಾಭ್ಯಾಸವು ಅನೇಕ ತೊಂದರೆಗಳೊಂದಿಗೆ ಮುಂದುವರೆಯಿತು. ಇದಾರ್‌ನ ಸರ್ ಪ್ರತಾಪ್ ಹೈಸ್ಕೂಲ್‌ನಲ್ಲಿ ಅವರು ನಾಲ್ಕನೇ ತರಗತಿಯವರೆಗೆ ಮಾತ್ರ ಓದಿದರು. ಶಾಲಾ ದಿನಗಳಲ್ಲಿ ತಮ್ಮ ಸಹಪಾಠಿ ಉಮಾಶಂಕರ್ ಜೋಶಿಯವರೊಂದಿಗೆ ಸ್ನೇಹ ಬೆಳೆಸಿದರು. ಅಲ್ಪಾವಧಿಗೆ, ಅವರು ದುಂಗಾರ್ಪುರದ ಮದ್ಯ ತಯಾರಿಕಾ ಕಂಪನಿಯಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡಿದರು. ಗುಜರಾತಿನ ಅಹಮದಾಬಾದ್‌ನಲ್ಲಿ ಮನೆ ಸಹಾಯಕನಾಗಿ ಕೆಲಸ ಮಾಡುತ್ತಿರುವಾಗ ಅವರು ತಮ್ಮ ಮೊದಲ ಕಾದಂಬರಿಯನ್ನು ಬರೆದರು.
1936ರಲ್ಲಿ, ಪನ್ನಾಲಾಲ್ ಪಟೇಲರು ಆಕಸ್ಮಿಕವಾಗಿ ತಮ್ಮ ಹಳೆಯ ಸ್ನೇಹಿತ ಉಮಾಶಂಕರ್ ಜೋಶಿ ಅವರನ್ನು ಭೇಟಿಯಾದಾಗ ಅವರು ಇವರನ್ನು ಬರೆಯಲು ಮನವೊಲಿಸಿದರು. ಹೀಗೆ ತಮ್ಮ ಮೊದಲ ಸಣ್ಣ ಕಥೆಯನ್ನು ಶೇತ್ ನಿ ಶಾರದಾ (1936) ಬರೆದರು. ನಂತರ ಅವರ ಕಥೆಗಳು ಹಲವು ಗುಜರಾತಿ ಪತ್ರಿಕೆಗಳಲ್ಲಿ ಪ್ರಕಟಗೊಂಡವು. 1940ರಲ್ಲಿ, ಅವರು ತಮ್ಮ ಮೊದಲ ಕಾದಂಬರಿ ವಲಮನ (ದಿ ಸೆಂಡ್-ಆಫ್), ನಂತರ ಮಲೇಲಾ ಜೀವ್ (1941), ಮಾನ್ವಿನಿ ಭಾವೈ (1947) ಮತ್ತು ಇತರ ಅನೇಕ ಕಾದಂಬರಿಗಳಿಗೆ ಮನ್ನಣೆ ಪಡೆದರು. 1971ರಲ್ಲಿ, ಅವರು ತಮ್ಮ ಇಬ್ಬರು ಪುತ್ರರೊಂದಿಗೆ ಅಹಮದಾಬಾದ್‌ನಲ್ಲಿ ಸಾಧನಾ ಎಂಬ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿದರು. ನಂತರದ ವರ್ಷಗಳಲ್ಲಿ, ಅವರು ಹೆಚ್ಚಾಗಿ ಹಿಂದೂ ಪುರಾಣ ಮತ್ತು ಮಹಾಕಾವ್ಯಗಳ ಆಧಾರದ ಮೇಲೆ ತಮ್ಮ ಕಾದಂಬರಿಗಳನ್ನು ಬರೆದರು.
ಪನ್ನಾಲಾಲ್ ಪಟೇಲ್ 61 ಕಾದಂಬರಿಗಳು, 26 ಸಣ್ಣ ಕಥಾ ಸಂಕಲನಗಳು ಮತ್ತು ಅನೇಕ ಇತರ ಕೃತಿಗಳನ್ನು ಬರೆದಿದ್ದಾರೆ. ಅವರು ತಮ್ಮ ಕೃತಿಗಳನ್ನು ಹೆಚ್ಚಾಗಿ ಉತ್ತರ ಗುಜರಾತ್‌ನ ಸಬರಕಾಂತ ಜಿಲ್ಲೆಯ ಸ್ಥಳೀಯ ಭಾಷಾವೈಶಿಷ್ಟ್ಯಗಳಲ್ಲಿ ಬರೆದಿದ್ದಾರೆ. ಅವರ ಸಣ್ಣ ಕಥಾ ಸಂಕಲನಗಳಲ್ಲಿ ಸುಖದುಖ್ನಾ ಸತಿ (1940) ಮತ್ತು ವತ್ರಕ್ನೆ ಕಾಂತೆ (1952) ಸೇರಿವೆ. ಅವರ ಕಾದಂಬರಿಗಳಲ್ಲಿ ಸಾಮಾಜಿಕ ಕಾದಂಬರಿಗಳಾದ ಮಲೇಲಾ ಜೀವ್ (1941), ಮಾನ್ವಿನಿ ಭಾವೈ (1947) ಮತ್ತು ಭಂಗ್ಯಾನ ಭೇರು (1957), ಮತ್ತು ಹಲವಾರು ಪೌರಾಣಿಕ ಕಾದಂಬರಿಗಳು ಸೇರಿವೆ.
ಪನ್ನಾಲಾಲ್ ಪಟೇಲ್ ಅವರು 1985ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದರು. ಅವರಿಗೆ ಸಾಹಿತ್ಯ ಗೌರವ ಪುರಸ್ಕಾರವೂ ಸಂದಿತ್ತು. ಅವರ ಅನೇಕ ಕೃತಿಗಳು ಅನೇಕ ಭಾಷೆಗಳಲ್ಲಿ ಅನುವಾದಗೊಂಡಿವೆ. ನಾಟಕಗಳು ಮತ್ತು ಚಲನಚಿತ್ರಗಳಿಗೆ ಅಳವಡಿತಗೊಂಡಿವೆ. ಕನ್ನಡದ ಜನಪ್ರಿಯ ಚಲನಚಿತ್ರಗಳಲ್ಲಿ ಒಂದಾದ ಟಿ. ಎಸ್. ನಾಗಾಭರಣರ ನಿರ್ದೇಶನದ 'ಜನುಮದ ಜೋಡಿ' ಪನ್ನಾಲಾಲ್ ಪಟೇಲ್ ಅವರ 'ಮಲೇಲಾ ಜೀವ್' ಕಥೆಯನ್ನು ಆಧರಿಸಿದೆ
“ತನ್ನ ಲಾಲಾರಸವನ್ನು ಬಳಸಿ ತನ್ನದೇ ಬಲೆಯನ್ನು ಮಾಡಿಕೊಳ್ಳುವ ಜೇಡದಂತೆ ನನಗೆ ಜೀವನವು ಕಾಣುತ್ತದೆ. ಜೇಡ ತನ್ನ ಸ್ವಂತ ಎಳೆಗಳ ಮೂಲಕ ಜೀವನದಲ್ಲಿ ಪ್ರಗತಿ ಹೊಂದುತ್ತದೆ. ನಾನು ಕೂಡ ಈ ಜಗತ್ತಿನಲ್ಲಿ ನನ್ನದೇ ಆದ ದಾರಿಗಳನ್ನು ಕಂಡುಕೊಳ್ಳುತ್ತಾ, ಕಲಿಯುತ್ತಾ ಮತ್ತು ಬದಲಾಯಿಸುತ್ತಾ ಹೋಗಿದ್ದೇನೆ. ಜೀವನದ ಬಗ್ಗೆ ನನಗೆ ತಿಳಿದಿರುವುದು ಅನುಭವದಿಂದ ಬಂದಿದೆ” ಎಂಬುದು ಪನ್ನಾಲಾಲ್ ಪಟೇಲರ ಅನುಭವದ ಮಾತಾಗಿತ್ತು.
ಪನ್ನಾಲಾಲ್ ಪಟೇಲರು 1989ರ ಏಪ್ರಿಲ್ 6ರಂದು ಅಹಮದಾಬಾದ್‌ನಲ್ಲಿ ನಿಧನರಾದರು.
On the birth anniversary of great writer Pannalal Patel
ಕಾಮೆಂಟ್‌ಗಳು