ಗೋಕುಲ ನಿರ್ಗಮನ 26
ಗೋಕುಲ ನಿರ್ಗಮನ 26
(ಮಹಾನ್ ಕವಿ ಪು. ತಿ. ನರಸಿಂಹಾಚಾರ್ಯರ ಕೃತಿ)
ಕೃಷ್ಣ
ಎಲೆ ಕೊಳಲೆ, ಮರಳಿ ಹಸೆನಿಂದಂತೆ ಕೈಗೆ ಬಂದೆ
ನಿನ್ನ ಮೋಹಕೆ ನಾನು ಮತ್ತೆ ಸಂದೆ
(ತುಟಿಗೆತ್ತಿ ನುಡಿಸುವನು. ಗೀತ ಎಲ್ಲರಿಗೂ ಹಿತವಾಗುತ್ತದೆ. ಅವರವರ ಭಾವಕ್ಕೆ ತಕ್ಕಂತೆ ಅರ್ಥ ಹೀಗಿರಬಹುದು. ಈ ಹಾಡನ್ನೆಲ್ಲವನ್ನೂ ಮೇಳದವರು ಹಾಡುತ್ತಾರೆ. ಸಂದರ್ಭಾನುಸಾರವಾಗಿ, ಮುಂದೆ ಸೂಚಿಸಿರುವಂತೆ ಆಯಾ ಪಾತ್ರಗಳು ಇವರೊಂದಿಗೆ ಕೂಡಿ ಹೇಳುತ್ತಾರೆ.)
ಮೇಳದವರು
ಹಾಡು : ರಾಗ - ಶಂಕರಾಭರಣ
ಅಲ್ಲಿರಲಿ ಇಲ್ಲಿರಲಿ ಎಲ್ಲಿರಲಿ ನಾವೆಂತಿರಲಿ
ಎಂಥದೊ ಭಯ.. ನಮ -
ಗಾವುದೋ ಭಯ
ಬಂಡೆಯಂತಿರೆ ಎದೆ
ಹುರುಪುಗೊಂಡಿರೆ ತನು
ತಿಣ್ಣವಾಗಿರೆ ಮನ
ಬೆನ್ನ ಹಿಂದಿರೆ ದೈವ.... ಎಂಥದೋ ಭಯ
ಬಲರಾಮ
ತುರುಗೊರಸಲ್ಲ ಹುಲಿಯುಗುರು
ಅಣುವಾದರು ಸಿಂಗದ ನವಿರು
ದೈವದ ಮೈಗಂಟಿಹೆವಿಂತು
ಮುಟ್ಟಬಲ್ಲವರಾರೆಂತು ಎಂಥದೋ ಭಯ
ಗೋಪಾಲಕರು
ನಾವು ನೊಂದರೆ ನೋವವಗೆ
ಅವನ ಸಿಟ್ಟಿಗಿದಿರಾವ ಹಗೆ
ಆತನೆ ಬೀಸುವ ಕೈದುಗಳು
ನಾವವನರ್ತಿಯ ಹೈದಗಳು... ಎಂಥದೋ ಭಯ
ಅಕ್ರೂರ
ನಡೆವೆಡೆಯೆಲ್ಲಾ ತಿರೆಯೊಬ್ಬಳೆ ಇಹಳೈ ಪೋಪೆಡೆಯೆಲ್ಲಾ ರವಿಯೊಬ್ಬನೆ ಬಹನೈ ಇರುವೆಡೆಯೆಲ್ಲಾ ಎಲರೊಬ್ಬನೆ ಉಸಿರು ಅರಿವೆಡೆಯೆಲ್ಲಾ ಶಿವವೊಂದೇ ಬಸಿರು
ಆತನಿಂತಾತಿಗೆ ಕಾತರಂಗಳೇತಕೆ
ಭೀತಿವೀತರಾವು ನಮಗೇತರಿಂ ಭಯ
( ಆದರೆ ಗೋಪಿಯರಿಗೆ ಮಾತ್ರ ಶೋಕ ದಾರುಣವಾಗಿ ಈ ತೆರ ಅರ್ಥವಾಗುತ್ತದೆ.)
ಗೋಪಿಯರು
ಹೂಗಳಂತೆ ಬಣ್ಣಬಣ್ಣ ಕಂಪುಕಂಪೆದೆ ಎದೆ
ಒಲುಮೆ ಸುಗ್ಗಿ ತರುವ ಹಿಗ್ಗಿನಿಂದ ಹೊಮ್ಮಿ ಕಮ್ಮಿದೆ
ಹಾ ಒಲವೇ ತಂದಿತೊಲವೇ ಕೊಂಡಿತೊಲವೇ ಸೂಡಿ ಬಿಸುಟಿತು
ಮರಳ್ವೆನೆಂದು ಮರಳ್ವೆನೆಂದು ಬರಿಯ ನೆಚ್ಚುಗೊಟ್ಟಿತು
ಏನ ಗೈವೆವೇ ನಾವೇನ ಗೈವವೇ
ಭೀತಿಯೆಂದರೇನೋ ಎಂತೋ ನಾವು ಬಲ್ಲೆವೇ ಶೋಕದಿಂದ ಭೀತಿವೀತರಾದೆವಲ್ಲವೇ
ಆರ್ತರಲ್ಲವೇ ನಾವಾರ್ತರಲ್ಲವೇ – ನಮಗಾವುದೇ ಭಯ
ಅಲ್ಲಿರಲಿ ಇಲ್ಲಿರಲಿ ಎಲ್ಲಿರಲಿ ನಾವೆಂತಿರಲಿ ನಮಗೇತರಿಂ ಭಯ
ಶೂನ್ಯವಾಗಿರೆ ಎದೆ
ಶೋಕವಾಂತಿರೆ ಮನ
ತಾಪಗೊಂಡಿರೆ ತನು
ನೆನವೆ ಹಿಂದಿರೆ ನೀನು - ಆವುದೋ ಭಯ
( ಹೀಗೆ ವಿಧವಿಧವಾದ ಗತಿಯಲ್ಲಿ ಧೀರ ಶಂಕರಾಭರಣದಲ್ಲಿ ವಾದ್ಯ ಮೇಳ ಸಾಗಿ ನಿಲ್ಲುತ್ತದೆ, ಕೃಷ್ಣ ಮಂದಸ್ಮಿತದಿಂದ ಕೊಳಲನ್ನು ಗೋಪಿಯರ ಕೈಗೆ ಕೊಡುತ್ತಾನೆ.)
ಕೃಷ್ಣ
ಇನ್ನು ಹಂಬಲವನು ಬಿಡಿ
ಹರಕೆಯಿಂದ ಬೀಳುಕೊಡಿ
(ಗೋಪಿಯರು ವಿಷಣ್ಣರಾಗಿಯೇ ಹರಸಿ ಬೀಳುಕೊಡುತ್ತಾರೆ.)
ಗೋಪಿಯರು
ಹಾಡು : ರಾಗ - - ಸೌರಾಷ್ಟ್ರ
ಬಾಳು ಬಾಳು ನೀ ಮುರಳೀಧರ
ಮನಮೋಹನ ಗಿರಿಧರನೇ
ಗೆಲ್ಲು ಗೆಲ್ಲು ಜಸಬೆಳಕು ಚೆಲ್ಲು ನೀ
ಗೋಪೀಜನವರನೇ
ಲೋಕಕೆ ಬೆಳೆವನ ಗೋಪೀಜನಮನ
ಒಳಕೊಳ್ಳಲುಬಹುದೇ
ಕೊಡದೊಳಡಗು ಬಾ ಎಂದೀ ಯಮುನೆಯ
ಎರೆವೊಡೆ ಸಲ್ಲುವುದೇ
ಹರಿಯೋ- ಗಂಗೆಯಂತೆ ಹರಿಯೋ
ಎಲ್ಲ ಬಾಳು ನಿನ್ನಾತ್ಮರಸದಿ ಹಸನಾಗೆ ನೀನು ಹರಿಯೋ
ಬಾಳು ಬಾಳು ನೀ ಮುರಳೀಧರ – ಮನ-
ಮೋಹನ ಗಿರಿಧರನೇ -
ತೆರೆತೆರೆಯೊಳಗೂ ಪರಿಪೂರ್ಣತೆಯೊಳು ಬಾನ ಹಿರಿಯ ರವಿ ಹೊಳೆವಂತೆ
ಎಲ್ಲಿದ್ದರು ಹರಿ ನಮ್ಮೊಲವಿಗು ಬಾ
ಸಕಲ ಕಳೆಯಿಂದಲೆಸೆವಂತೆ
ಬೆಳಗೋ - ಸೂರ್ಯನಂತೆ ಬೆಳಗೋ
ನಿನ್ನ ಬೆಳಕು ಬೆಳುದಿಂಗಳಾಗಿ ಬರಲೆಮ್ಮ ನೀನು ಬೆಳಗೋ –
ಬಾಳು ಬಾಳು ನೀ ಮುರಳೀಧರ_ ಮನ -
ಮೋಹನ ಗಿರಿಧರನೇ
ಗೆಲ್ಲು ಗೆಲ್ಲು ಜಸ ಬೆಳಕು ಚೆಲ್ಲು ನೀ
ಬೃಂದಾವನಚರನೇ
ಲೋಕಮನೋಹರನೇ
(ಈ ಗೀತ ಮುಗಿಯುವ ವೇಳೆಗೆ ವಾದ್ಯಮೇಳ ಗೆಲವಿನ ರಾಗಕ್ಕೆ ತಿರುಗಿ 'ಬನ್ನಿರೋ ನಾವೆಲ್ಲ' ಎಂಬ ಹಾಡು ಎಲ್ಲ ಗಂಡಸರ ಬಾಯಲ್ಲೂ ಮೊಳಗಿಡಲು ಗುಂಪು ಮೆಲ್ಲನೆ ಮರೆಯಾಗುತ್ತದೆ. ಕೃಷ್ಣ ಮಾತ್ರ ಕೊನೆಯ ನಿರ್ವೇದದ ನೋಟವನ್ನು ಗೋಪಿಯರ ಮೇಲೂ ಕೊಳಲ ಮೇಲೂ ಚೆಲ್ಲಿ ಮರೆಯಾಗುತ್ತಾನೆ. ವನ ಕ್ರಮೇಣ ಸಂಗೀತಶೂನ್ಯವಾಗುತ್ತದೆ. ಗೋಪಿಯರೂ ಶೋಕದಿಂದ ಮೂಕರಾಗಿದ್ದಾರೆ. ಆ ವೇಳೆಗೆ ರಾಧೆ ಮತ್ತು ನಾಗವೇಣಿ ಆತುರದಿಂದ ಬರುತ್ತಾರೆ.)
***********
ಕೃಷ್ಣ ಕೊಳಲನ್ನು ಕೈಗೆತ್ತಿಕೊಂಡು ಮತ್ತೆ ನನ್ನ ಕೈಗೆ ಬಂದೆಯಾ ಎಂದು ನುಡಿಸಲು ತೊಡಗುವನು. ಅವನ ಗಾನ ಎಲ್ಲರಿಗೂ ಹಿತವಾಗುತ್ತದೆ. ಅವರವರ ಭಾವಕ್ಕೆ ತಕ್ಕಂತೆ ಅರ್ಥಮಾಡಿಕೊಳ್ಳುವರು.
ಮೇಳದವರು ಹೇಳುವರು. ಅಲ್ಲಿರಲಿ, ಇಲ್ಲಿರಲಿ, ಎಲ್ಲಿಯೇ ಇರಲಿ, ನಾವು ಹೇಗೇ ಇರಲಿ. ಏನೋ ಭಯ ಕಾಡುವುದು. ಎದೆ ಭಾರವಾಗಿದೆ. ಬಲರಾಮನು ಗೋವುಗಳ ಗೊರಸಲ್ಲ ಹುಲಿಯ ಉಗುರಿನಂತೆ ನಮ್ಮ ಶೌರ್ಯ. ಎಂಥ ಭಯ? ಗೋಪಾಲಕರು ನಾವು ನೊಂದರೆ ಕೃಷ್ಣನಿಗೆ ನೋವಾಗುವುದೆಂದು ನೋವ ನುಂಗುವರು. ಅವನು ಗೆಲ್ಲಲೆಂದು ಆಶಿಸುವರು. ಅಕ್ರೂರನು ಎಲ್ಲಿ ಹೋದರೂ ಭೂಮಿಯೊಂದೇ, ಸೂರ್ಯ ಒಬ್ಬನೇ, ಎಲ್ಲ ಕಡೆಯೂ ಉಸಿರಾಡುವ ಗಾಳಿಯೊಂದೇ. ಅರಿತೆಡೆ ಎಲ್ಲೆಲ್ಲಿಯೂ ಶಿವನಿಹನು. ಕಾತರವೇಕೆ? ಭಯವೇಕೆ? ಎಂದು ಸಂತೈಸುವನು. ಆದರೆ ಗೋಪಿಯರಿಗೆ ಏನೋ ಅವ್ಯಕ್ತ ಶೋಕ.
ಗೋಪಿಯರು ಕೃಷ್ಣನ ಒಲವನ್ನು ನೆನೆಯುವರು. ಒಲುಮೆಯ ಕಂಪು ಎಲ್ಲೆಡೆ ತುಂಬಿದೆ. ಮರಳಿ ಬರುವೆನೆಂದು ಅವನು ಹೇಳುತ್ತಿರುವುದು ಸುಳ್ಳು ಎಂದು ಅವರ ಹೃದಯಕ್ಕೆ ಅರ್ಥವಾಗಿದೆ. ಇದುವರೆಗೆ ಭೀತಿಯೆಂದರೆ ಏನೆಂದೇ ಅರಿಯದ ಅವರಿಗೆ ಶೋಕ, ಭಯಗಳು ಕಾಡಿವೆ. ಆದರೂ ಮೇಲುನೋಟಕ್ಕೆ ನಮಗೇತರ ಭಯವೆನ್ನುವರು. ಹೃದಯ ಶೂನ್ಯವಾಗಿದೆ. ಮನ ಶೋಕದಿಂದ ಕೂಡಿದೆ. ದೇಹ ತಾಪಗೊಂಡಿದೆ. ಆದರೂ ನಿನ್ನ ನೆನಪು ನಮ್ಮ ಬೆನ್ನ ಹಿಂದೆ ಇರುವಾಗ ಎಂತಹ ಭಯ?
ಕೃಷ್ಣ ಕೊಳಲನ್ನು ಗೋಪಿಯರಿಗೆ ಕೊಡುವನು. ಹಂಬಲ ಬಿಟ್ಟು ಹರಸಿ ಕಳಿಸಿಕೊಡಿ ಎನ್ನುವನು. ಖಿನ್ನರಾಗಿಯೇ ಗೋಪಿಯರು ಹರಸುವರು.
ಮನಮೋಹನನಾದ ಗಿರಿಧರನೇ ಬಾಳು. ಗೆಲುವಾಗಲಿ. ಯಶಸ್ಸಿನ ಬೆಳಕನ್ನು ಚೆಲ್ಲು. ಹರಿಯುವ ಯಮುನೆಯನ್ನು ಕೊಡದಲ್ಲಿ ಹಿಡಿದಿಡಲು ಅಸಾಧ್ಯವಾಗುವಂತೆ ನಿನ್ನನ್ನು ತಡೆಯಲು ಅಸಾಧ್ಯವು. ಗಂಗೆಯಂತೆ ಮುಂದೆ ಸಾಗು. ಎಲ್ಲರ ಜೀವನವೂ ನಿನ್ನ ಆತ್ಮರಸದಲ್ಲಿ ಹಸನಾಗಲಿ. ತೆರೆತೆರೆಯಲ್ಲಿಯೂ ಪರಿಪೂರ್ಣವಾಗಿ ಮುಂದೆ ಸಾಗು. ನೀನು ಎಲ್ಲಿದ್ದರೂ ನಿನ್ನ ಒಲವು ನಮಗಿರಲಿ. ಸೂರ್ಯನಂತೆ ಸಕಲ ಕಳೆಯಿಂದ ಬೆಳಗು. ನಿನ್ನ ಬೆಳಕು ಬೆಳದಿಂಗಳಾಗಿ ನಮಗೆ ಬರಲಿ. ಗೆಲುವಾಗಲಿ ಮುರಳೀಧರ. ಬೃದಾವನಚರಣನೇ, ಲೋಕಮನೋಹರನೇ, ಗೆಲ್ಲು. ಬಾಳು ಎಂದು ಹರಸುವರು.
ನಂತರ ಗುಂಪು ಮುಂದೆ ಸರಿಯುತ್ತದೆ. ಕೃಷ್ಣನು ಗೋಪಿಯರ ಕಡೆ ಮತ್ತು ಕೊಳಲ ಕಡೆ ನಿರ್ವೇದದ ನೋಟವನ್ನು ಚೆಲ್ಲಿ ಮರೆಯಾಗುವನು. ವನ ಕ್ರಮೇಣ ಸಂಗೀತ ಶೂನ್ಯವಾಗುತ್ತದೆ. ಶೋಕದಿಂದ ಗೋಪಿಯರು ಮೂಕರಾಗಿದ್ದಾರೆ. ಆಗ ಅಲ್ಲಿಗೆ ನಾಗವೇಣಿ ಮತ್ತು ರಾಧೆಯರು ಬರುತ್ತಾರೆ.
ಭಾವಾರ್ಥ: ಸುಬ್ಬುಲಕ್ಷ್ಮಿ Lrphks Kolar
ಕಾಮೆಂಟ್‌ಗಳು