ಸ್ವಾತಂತ್ರ್ಯ ನೋಟ - 15
ಗಾಂಧೀಜಿ ಯುಗ
ಸ್ವಾತಂತ್ರ್ಯ ನೋಟ - 15
ದಕ್ಷಿಣ ಆಫ್ರಿಕದಲ್ಲಿ ಭಾರತೀಯ ನಾಗರಿಕರ ಹಕ್ಕುಗಳ ರಕ್ಷಣೆಗಾಗಿ ಹೋರಾಟ ನಡೆಸಬೇಕೆಂದು ನಿರ್ಧರಿಸಿದ ಗಾಂಧಿಯವರು ಈ ಉದ್ದೇಶಕ್ಕಾಗಿ 1894ರಲ್ಲಿ ನಟಾಲ್ ಇಂಡಿಯನ್ ಕಾಂಗ್ರೆಸ್ ಎಂಬ ಪಕ್ಷ ಸ್ಥಾಪಿಸಿದರು. ಬ್ರಿಟಿಷ್ ಚಕ್ರಾಧಿಪತ್ಯದ ಒಳ್ಳೆಯತನದಲ್ಲಿ ಅವರಿಗೆ ಆಗ ನಂಬಿಕೆಯಿತ್ತು. ದಕ್ಷಿಣ ಆಫ್ರಿಕ ಯುದ್ಧದಲ್ಲೂ (1899-1902) ಜುಲು ದಂಗೆಯಲ್ಲೂ ಅವರು ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಸ್ವಯಂಸೇವಕ ದಳವೊಂದನ್ನು ನಿರ್ಮಿಸಿ ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ಮನಃಪೂರ್ವಕವಾಗಿ ನೆರವು ನೀಡಿದರು. ಇದಕ್ಕೆ ಬ್ರಿಟಿಷ್ ಸರ್ಕಾರದ ಮೆಚ್ಚುಗೆ ಲಭಿಸಿತಾದರೂ ಭಾರತೀಯರ ಬಗ್ಗೆ ಅದರ ಧೋರಣೆ ಬದಲಾಗಲಿಲ್ಲ. ಪ್ರತಿಯಾಗಿ ಇನ್ನೂ ಕ್ರೂರವಾಯಿತು. ಈ ವೇಳೆಗೆ ಗಾಂಧಿಯವರು ವಕೀಲಿಯಲ್ಲಿ ವಿಶೇಷವಾದ ಕೀರ್ತಿಯನ್ನೂ ಯಶಸ್ಸನ್ನೂ ಗಳಿಸಿದ್ದರು. ಜೀವನದ ಬಗ್ಗೆ, ತಾವು ನಿರ್ವಹಿಸಬೇಕಾದ ಕರ್ತವ್ಯದ ಬಗ್ಗೆ ಅವರ ಮನಸ್ಸು ಹೆಚ್ಚು ಹೆಚ್ಚು ಖಚಿತಗೊಂಡಿತು. ಈ ನಡುವೆ ಅವರು ಭಾರತಕ್ಕೂ ಹೋಗಿ ಬರುತ್ತಿದ್ದರು.
ಗೋಪಾಲಕೃಷ್ಣ ಗೋಖಲೆಯವರ ಪರಿಚಯವಾಗಿ ಅದು ಗಾಢ ಸ್ನೇಹವಾಗಿ ಪರಿಣಮಿಸಿತು. ಗೋಖಲೆಯವರನ್ನು ಗಾಂಧಿಯವರು ತಮ್ಮ ರಾಜಕೀಯ ಗುರುವೆಂದೇ ಭಾವಿಸಿದರು. ಭಾರತೀಯ ನೆಲಸುಗಾರರ ಹಕ್ಕುಗಳಿಗಾಗಿ ಹೋರಾಟ ನಡೆಸಲು ಇಂಡಿಯನ್ ಒಪಿನಿಯನ್ ಎಂಬ ಪತ್ರಿಕೆಯೊಂದು 1904ರಲ್ಲಿ ಪ್ರಾರಂಭವಾಯಿತು.
ಪ್ರತಿಯೊಬ್ಬ ಭಾರತೀಯನೂ ತನ್ನ ಬೆರಳ ಗುರುತುಗಳನ್ನು ನೋಂದಾಯಿಸಬೇಕೆಂದು ವಿಧಿಸುವ ಮಸೂದೆಯೊಂದಕ್ಕೆ ಟ್ರಾನ್ಸ್‍ವಾಲ್ ಸರ್ಕಾರ 1906ರಲ್ಲಿ ಅನುಮೋದನೆ ನೀಡಿದಾಗ ಹೋರಾಟ ಬಿರುಸಾಯಿತು. ಸ್ತ್ರೀಪುರಷರೆಂಬ ಭೇದವಿಲ್ಲದೆ ಪ್ರತಿಯೊಬ್ಬರಿಗೂ ಅನ್ವಯಿಸುತ್ತಿದ್ದ ಈ ಕಾನೂನಿನಂತೆ ನಡೆಯದವರು ದಂಡ ಕಾರಾಗೃಹವಾಸಗಳ ಶಿಕ್ಷೆಗೆ ಒಳಗಾಗಬೇಕಾಗುತ್ತಿತ್ತು. ಅಪಮಾನಕವಾದ ಈ ಕಾನೂನಿಗೆ ವಿಧೇಯತೆ ತೋರಿಸಬಾರದೆಂದು ಗಾಂಧಿಯವರು ಭಾರತೀಯರಿಗೆ ಹೇಳಿದರು. ಅವರ ನಾಯಕತ್ವದಲ್ಲಿ 2,000 ಸ್ತ್ರೀಯರು ಪ್ರತಿಭಟನೆಯ ಮೆರವಣಿಗೆ ನಡೆಸಿದರು. ಜೈಲಿಗೂ ನಡೆದರು.
ಗಾಂಧಿಯವರು ಆರಂಭಿಸಿದ ಸತ್ಯಾಗ್ರಹದಲ್ಲಿ ಅನೇಕ ಭಾರತೀಯ ವರ್ತಕರೂ ವಕೀಲರೂ ಸಾಮಾನ್ಯರೂ ಭಾಗವಹಿಸಿ ಕಾರಾಗೃಹವಾಸ ಅನುಭವಿಸಿದರು. ಗಡೀಪಾರು, ಆರ್ಥಿಕ ಒತ್ತಾಯ ಮುಂತಾದ ಯಾವುದಕ್ಕೂ ಸತ್ಯಾಗ್ರಹಿಗಳು ಜಗ್ಗಲಿಲ್ಲ. ಗಾಂಧಿಯವರ ನಾಯಕತ್ವದಲ್ಲಿ ಅವರ ನಂಬಿಕೆ ಅಷ್ಟು ಅಗಾಧವಾಗಿತ್ತು. 1912ರಲ್ಲಿ ಗೋಪಾಲಕೃಷ್ಣ ಗೋಖಲೆಯವರ ದಕ್ಷಿಣ ಆಫ್ರಿಕಕ್ಕೆ ಭೇಟಿಯಿತ್ತುದರ ಪರಿಣಾಮವಾಗಿ ವರ್ಣಭೇದನೀತಿ ನಿಲ್ಲುವುದೆಂದೂ ಭಾರತೀಯರು ತೆರಬೇಕಾಗಿದ್ದ ತೆರಿಗೆ ರದ್ದಾಗುವುದೆಂದೂ ಆಶೆ ಜನಿಸಿತು. ಆದರೆ ಅದು ಭಗ್ನವಾಯಿತು. ಕ್ರೈಸ್ತ ವಿವಾಹಪದ್ಧತಿಗನುಗುಣವಾಗಿ ವಿವಾಹ ದಾಖಲಾತಿ ಹೊಂದದ ಎಲ್ಲ ಹಿಂದೂ, ಮುಸ್ಲಿಂ ಮತ್ತು ಪಾರ್ಸೀ ವಿವಾಹಗಳೂ ನ್ಯಾಯಬದ್ಧವಲ್ಲವೆಂಬುದು ಶ್ರೇಷ್ಠ ನ್ಯಾಯಾಲಯವಿತ್ತ ಒಂದು ತೀರ್ಪಿನ ಫಲ. ಇದು ಭಾರತೀಯರ ಆತ್ಮಗೌರವವನ್ನು ಪೂರ್ಣವಾಗಿ ನಾಶಮಾಡಿತು. ಸತ್ಯಾಗ್ರಹ ಚಳವಳಿಗೆ ಇದರಿಂದ ಪುಟವಿಟ್ಟಂತಾಯಿತು.
ಈ ಸತ್ಯಾಗ್ರಹ ಹೋರಾಟದಲ್ಲಿ ಪುರುಷರ ಜೊತೆಗೆ ಸ್ತ್ರೀಯರೂ ಭಾಗವಹಿಸಿದರು. ಶಾಸನವನ್ನು ಉಲ್ಲಂಘಿಸಿ ನಟಾಲಿನಿಂದ ಟ್ರಾನ್ಸ್‍ವಾಲಿಗೆ ಪ್ರವೇಶಿಸುವುದೇ ಆಗಿನ ಸತ್ಯಾಗ್ರಹದ ಕ್ರಮ. 1913ರ ನವೆಂಬರ್ 6ರಂದು ನಡೆದ ಶಾಸನೋಲ್ಲಂಘನ ಯಾತ್ರೆಯಲ್ಲಿ ಅಸಂಖ್ಯ ಹೆಂಗಸರೂ ಗಂಡಸರೂ ಮಕ್ಕಳೂ ಭಾಗವಹಿಸಿದರು. ದಕ್ಷಿಣ ಆಫ್ರಿಕ ಸರ್ಕಾರ ಸತ್ಯಾಗ್ರಹಿಗಳ ಮೇಲೆ ನಡೆಸಿದ ಅತ್ಯಾಚಾರ ಬಹಳ ಹೇಯವಾದ್ದು. ಕೊನೆಗೆ ಗಾಂಧೀ ಮತ್ತು ಜನರಲ್ ಸ್ಮಟ್ಸರ ನಡುವೆ ಮಾತುಕತೆ ನಡೆದು ಒಂದು ಒಪ್ಪಂದವಾಯಿತು. 8 ವರ್ಷಗಳ ಸತ್ಯಾಗ್ರಹ ಕೊನೆಗೊಂಡಿತು. ಭಾರತೀಯರ ಬೇಡಿಕೆಗಳು ಸ್ವೀಕೃತವಾದುವು. ತೆರಿಗೆ ರದ್ದಾಯಿತು. ಭಾರತೀಯ ಸಂಪ್ರದಾಯದ ಪ್ರಕಾರ ನಡೆದ ವಿವಾಹಗಳು ಶಾಸನಬದ್ಧವೆಂದು ಘೋಷಿತವಾದುವು. ಇದರಿಂದ ದಕ್ಷಿಣ ಆಫ್ರಿಕದ ಭಾರತೀಯರ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರಕಿದಿದ್ದರೂ ಭಾರತೀಯರು ಆತ್ಮಗೌರವಕ್ಕಾಗಿ ಹೋರಾಡುವ ಶಕ್ತಿಯನ್ನು ಕಂಡುಕೊಂಡರು. ಅಲ್ಲದೆ ಈ ಹೋರಾಟದ ನಾಯಕತ್ವ ವಹಿಸಿದ್ದ ಗಾಂಧಿಯವರು ಅಪಾರ ಅನುಭವ ಪಡೆದಿದ್ದರು. ಸಾಮಾಜಿಕ, ರಾಜಕೀಯ ಚಳವಳಿಗಳನ್ನು ನಡೆಸಲು ಹೊಸದೊಂದು ತಂತ್ರವೇ ಅವರಿಂದ ಸೃಷ್ಟಿಯಾಗಿತ್ತು.
ಗಾಂಧಿಯವರು ಹೂಡಿದ ಈ ಹೋರಾಟವನ್ನು ಮೊದಲು ನಿಶ್ಯಸ್ತ್ರ ಪ್ರತಿಭಟನೆ ಎಂದೇ ಕರೆಯಲಾಗುತ್ತಿತ್ತು. ಅನಂತರ ಅವರು ಇದನ್ನು ಸದಾಗ್ರಹವೆಂದೂ ಕೊನೆಗೆ ಸತ್ಯಾಗ್ರಹ ಎಂದೂ ಕರೆದರು. 1906ರಿಂದ 1914ರ ವರೆಗೆ ದಕ್ಷಿಣ ಆಫ್ರಿಕದಲ್ಲಿ ಸತ್ಯಾಗ್ರಹ ಚಳವಳಿ ನಡೆಯಿತು.
ತಮ್ಮ ವಕೀಲಿಯಿಂದ ಚೆನ್ನಾಗಿ ಸಂಪಾದನೆ ಮಾಡುತ್ತಿದ್ದ ಗಾಂಧಿಯವರು ಕ್ರಮೇಣ ಅದನ್ನೂ ಬಿಟ್ಟುಕೊಟ್ಟರು. ತಮ್ಮ ವೇಳೆಯನ್ನೆಲ್ಲ ಅವರು ಮುಂದಿರಿಸಿಕೊಂಡ ಉದ್ದೇಶಕ್ಕಾಗಿಯೇ ಮೀಸಲಾಗಿರಿಸಿದರು. ಜೀವನದ ಬಗ್ಗೆ ಅವರ ಧೋರಣೆ ಶೀಘ್ರವಾಗಿ ಬದಲಾಗುತ್ತಿತ್ತು. ಗೀತೆ ಉಪನಿಷತ್ತು ಕೊರಾನ್ ಬೈಬಲ್‍ಗಳನ್ನು ಅವರು ಆಳವಾಗಿ ಅಭ್ಯಾಸ ಮಾಡಿದರು. ಗೀತೆಯಂತೂ ಅವರಿಗೆ ಬಾಯಿಪಾಠವಾಗಿತ್ತು. ಅದು ಅವರ ಜೀವನಧರ್ಮಸೂತ್ರ. ಅವರ ಮೇಲೆ ತುಂಬ ಪರಿಣಾಮ ಮಾಡಿದ ಇನ್ನೊಂದು ಪುಸ್ತಕವೆಂದರೆ ರಸ್ಕಿನನ ಅನ್ ಟು ದಿಸ್ ಲ್ಯಾಸ್ಟ್. "ಎಲ್ಲರ ಒಳಿತಾದಾಗಲೇ ವ್ಯಕ್ತಿಯ ಒಳಿತು; ದುಡಿಮೆಯ ಬಾಳೇ ಸಾರ್ಥಕವಾದ್ದು" ಎಂಬುದು ಅವರು ಗ್ರಹಿಸಿದ ತತ್ತ್ವ. ಬ್ರಹ್ಮಚರ್ಯವನ್ನು ಅವರು ಅನುಷ್ಠಾನಕ್ಕೆ ತಂದರು. ತಮ್ಮ ಸಂಸಾರದೊಂದಿಗೂ ಸ್ನೇಹಿತರೊಂದಿಗೂ ಅವರು ಫೀನಿಕ್ಸ್ ಆಶ್ರಮವನ್ನೂ 1910ರಲ್ಲಿ ಟಾಲ್ಸ್ ಟಾಯ್ ಆಶ್ರಮವನ್ನೂ ಸ್ಥಾಪಿಸಿದರು. ದೇಹ ಮನಸ್ಸುಗಳೆರಡರ ಸಾಮರಸ್ಯ ಸಾಧಿಸಿದರು. ಗುಡಿಸುವುದು, ಮಚ್ಚೆ ಹೊಲಿಯುವುದು, ಕೃಷಿ, ಮುದ್ರಣ-ಹೀಗೆ ಎಲ್ಲ ಬಗೆಯ ಕೆಲಸಗಳನ್ನೂ ಮಾಡಿದರು. "ಯಾವ ಕೆಲಸವೂ ತುಚ್ಚವಲ್ಲ, ಯಾವುದೂ ದೊಡ್ಡದಲ್ಲ” ಎಂಬುದು ಅವರು ಸ್ವತಃ ಕಲಿತ, ಕಲಿಸಿದ ಪಾಠ. ಅವರೊಬ್ಬ ವಸ್ತುನಿಷ್ಠ ಆದರ್ಶವಾದಿ.
ಗಾಂಧಿಯವರು ದಕ್ಷಿಣ ಆಫ್ರಿಕದಲ್ಲಿದ್ದ 21 ವರ್ಷಗಳ ಕಾಲ ಅದು ಅವರಿಗೊಂದು ಪ್ರಯೋಗ ಶಾಲೆ ಆಯಿತು. ಅವರ ವ್ಯಕ್ತಿತ್ವ ವಿಕಾಸ ಹೊಂದಿದ್ದಲ್ಲದೆ, ಅವರ ಜೀವನತತ್ತ್ವದ ವಿಕಾಸವೂ ಆಯಿತು. ನೈತಿಕ ಪ್ರಶ್ನೆಗಳ ಬಗ್ಗೆ ಜಿಜ್ಞಾಸೆ ಅವರ ಬಾಲ್ಯದಿಂದಲೇ ಮುಂದುವರಿದಿದ್ದರೂ ಅದನ್ನು ಆಗ ವ್ಯವಸ್ಥಿತ ರೂಪದಲ್ಲಿ ನಡೆಸಿದರು. ಗೀತಾಧ್ಯಯನದಿಂದ ಅವರು ಅಸಂಗ್ರಹದ-ಐಚ್ಛಿಕ ದಾರಿದ್ರ್ಯದ-ಆದರ್ಶವನ್ನು ರೂಢಿಸಿಕೊಂಡರು. ನಿಷ್ಕಾಮಸೇವೆ, ಬ್ರಹ್ಮಚರ್ಯ ಇವು ಅವರ ಸಾರ್ವಜನಿಕ ಜೀವನಕ್ಕೆ ಶಕ್ತಿಯನ್ನು ನೀಡಿದವು. ಟಾಲ್‍ಸ್ಟಾಯಿಯ ಗ್ರಂಥಗಳ ಅಧ್ಯಯನ ಅವರ ಅಭಿಪ್ರಾಯಗಳನ್ನು ಮತ್ತಷ್ಟು ದೃಢಪಡಿಸಿತು. ಅವರು ಕಾಯಕದ ಪ್ರಭಾವವನ್ನು ಅರಿತರು. ಜಾನ್ ರಸ್ಕಿನ್ನನ ಅಂಟು ದಿಸ್ ಲ್ಯಾಸ್ಟ್ ಗ್ರಂಥವಂತೂ ಅವರ ಜೀವನಪರಿವರ್ತನೆಗೆ ಪ್ರಧಾನ ಕಾರಣವಾಯಿತು. ಟಾಲ್‍ಸ್ಟಾಯಿಯೊಂದಿಗೆ ಅವರು ಪತ್ರವ್ಯವಹಾರ ಬೆಳೆಸಿದರು. ಸತ್ಯಾಗ್ರಹ ವಿಶ್ವವ್ಯಾಪಕವಾಗುವಷ್ಟು ಪ್ರಾಮುಖ್ಯವುಳ್ಳ ಒಂದು ಪರಿಕಲ್ಪನೆ ಎಂದು ಟಾಲ್ಸ್ ಟಾಯ್ ಹೊಗಳಿದರು.
ಗಾಂಧಿಯವರು ಒಂದು ನೂತನ ಜೀವನದರ್ಶನವನ್ನೇ ಕಂಡುಕೊಂಡು ಅದಕ್ಕೆ ತಮ್ಮ ಬಾಳನ್ನು ಮುಡುಪಾಗಿ ಇಟ್ಟರು. ಅದನ್ನು ಸರ್ವೋದಯ-ಸರ್ವರ ಕ್ಷೇಮ-ಎಂದು ಕರೆದರು. ಗಾಂಧಿಯವರು ದಕ್ಷಿಣ ಆಫ್ರಿಕದಲ್ಲಿದ್ದಾಗ ತಮ್ಮ ಮನಸ್ಸಿನಲ್ಲಿ ರೂಪುಗೊಂಡ ಭಾವನೆಗಳನ್ನೆಲ್ಲ ಅಭಿವ್ಯಕ್ತಿಸಿ ಬರೆದ ಪುಸ್ತಕ ಹಿಂದ್ ಸ್ವರಾಜ್ ಅಥವಾ ಇಂಡಿಯನ್ ಹೋಂ ರೂಲ್ (1909). ಇದು ಗಾಂಧೀ ಚಿಂತನದ ಸಾರದಂತಿದೆ. ಸಾಮಾನ್ಯ ವ್ಯಕ್ತಿಯ ಹಕ್ಕುಗಳಿಗೆ ಮಾನ್ಯತೆ ಇರುವ, ಅವನ್ನು ಅವನು ರಕ್ಷಿಸಿಕೊಳ್ಳಲು ಅವಕಾಶವಿರುವ, ಶೋಷಣರಹಿತವಾದ ಸಮಾಜವೇ ತಮ್ಮ ಗುರಿಯೆಂದು ಅವರು ಇದರಲ್ಲಿ ಪ್ರತಿಪಾದಿಸಿದ್ದಾರೆ. ಯಂತ್ರ ನಾಗರಿಕತೆಯನ್ನು ಅವರು ಇಲ್ಲಿ ಖಂಡಿಸಿರುವ ರೀತಿ ಅನುಪಮವಾದ್ದು. ಟಾಲ್ಸ್ ಟಾಯಿಗೆ ಈ ಪುಸ್ತಕ ತುಂಬ ಪ್ರಿಯವಾಯಿತು.
ಗಾಂಧಿಯವರು 1915ರ ಜನವರಿಯಲ್ಲಿ ಭಾರತಕ್ಕೆ ಬಂದರು. ರವೀಂದ್ರನಾಥ ಠಾಕೂರರು ಅವರನ್ನು ಮಹಾತ್ಮ ಎಂದು ಕರೆದರು. ಗೋಪಾಲಕೃಷ್ಣ ಗೋಖಲೆಯವರ ಸಲಹೆಯಂತೆ ಗಾಂಧಿಯವರು ಒಂದು ವರ್ಷ ಕಾಲ ಯಾವ ಸಾರ್ವಜನಿಕ ಕಾರ್ಯದಲ್ಲೂ ತೊಡಗಲಿಲ್ಲ. ಭಾರತದ ಪರಿಸ್ಥಿತಿಯ ಅಧ್ಯಯನವನ್ನು ಆರಂಭಿಸಿದರು. 1915ರ ಮೇ ತಿಂಗಳಲ್ಲಿ ಅಹಮದಾಬಾದಿನ ಬಳಿ ಸತ್ಯಾಗ್ರಹ ಆಶ್ರಮ ಆರಂಭವಾಯಿತು. ಆಶ್ರಮವಾಸಿಗಳು ಖಾದಿ ಧರಿಸಬೇಕಾಗಿತ್ತು; ಸತ್ಯ ಅಹಿಂಸೆ ಬ್ರಹ್ಮಚರ್ಯಗಳನ್ನು ಪಾಲಿಸುತ್ತ, ಅಸ್ಪೃಶ್ಯತಾ ನಿವಾರಣೆ, ಮಾತೃಭಾಷೆಯ ಮೂಲಕ ಶಿಕ್ಷಣ ಮುಂತಾದ ಕಾರ್ಯಗಳಲ್ಲಿ ಪ್ರವೃತ್ತರಾಗುವುದಾಗಿ ಅವರು ವ್ರತ ತೊಟ್ಟಿದ್ದರು.
ಗಾಂಧಿಯವರು ಎರಡು ವರ್ಷಗಳ ಕಾಲ ಭಾರತದಲ್ಲಿ ಸಂಚಾರ ಮಾಡಿದರು.
ಒಂದನೆಯ ಮಹಾಯುದ್ಧ ಅಂತಿಮಘಟ್ಟ ಮುಟ್ಟಿದ್ದ ಆ ಕಾಲದಲ್ಲಿ ಬಿಹಾರದ ಚಂಪಾರಣ್‍ನ ರೈತರ ಕರುಣಾಜನಕ ಸ್ಥಿತಿ ಗಾಂಧಿಯವರ ಗಮನ ಸೆಳೆಯಿತು. ಅಲ್ಲಿಯ ರೈತರು ದೀರ್ಘಕಾಲದಿಂದ ಐರೋಪ್ಯ ಮತ್ತು ಭಾರತೀಯ ಭೂಮಾಲೀಕರ ಶೋಷಣೆಗೆ ಒಳಗಾಗಿದ್ದರು. ಗಾಂಧಿಯವರು ರಾಜೇಂದ್ರ ಪ್ರಸಾದರೊಂದಿಗೆ ಅಲ್ಲಿಯ ರೈತರ ಸ್ಥಿತಿಯನ್ನು ಕುರಿತ ವಿಚಾರಣೆಯಲ್ಲಿ ತೊಡಗಿದರು. ಬ್ರಿಟಿಷ್ ಸರ್ಕಾರ ಇದನ್ನು ಸಹಿಸಲಿಲ್ಲ. ಗಾಂಧಿಯವರು ಆ ಜಿಲ್ಲೆಯಿಂದ ಹೊರಗೆ ಹೋಗಬೇಕೆಂಬ ಆಜ್ಞೆ ಜಾರಿಯಾಯಿತು. ಗಾಂಧಿಯವರು ಅದನ್ನುಲ್ಲಂಘಿಸಿದರು. ಭಾರತದಲ್ಲಿ ಮೊಟ್ಟಮೊದಲನೆಯ ಸತ್ಯಾಗ್ರಹವಿದು. ನ್ಯಾಯಾಲಯದಲ್ಲಿ ಅವರ ವಿಚಾರಣೆಯಾಯಿತು. ತಾವು ಆಜ್ಞೋಲ್ಲಂಘನ ಮಾಡಿದ್ದುಂಟೆಂದು ಗಾಂಧಿಯವರು ಒಪ್ಪಿಕೊಂಡರು. ಗವರ್ನರ್ ನಡುವೆ ಪ್ರವೇಶಿಸಿ, ವಿಚಾರಣಾ ಸಮಿತಿಯೊಂದನ್ನು ನೇಮಕ ಮಾಡಿದರು. ಗಾಂಧಿಯವರೂ ಸದಸ್ಯರಾಗಿದ್ದ ಆ ಸಮಿತಿಯ ಶಿಫಾರಸುಗಳ ಮೇರೆಗೆ ಚಂಪಾರಣ್ ರೈತರ ಸುಧಾರಣೆಗಾಗಿ ಕಾಯಿದೆ ಜಾರಿಗೆ ಬಂತು.
ಅನಂತರ ಗಾಂಧಿಯವರ ಗಮನ ಅಹಮದಾಬಾದಿನ ಗಿರಿಣಿ ಕಾರ್ಮಿಕರತ್ತ ಹರಿಯಿತು. ಅವರಿಗೆ ನ್ಯಾಯವಾದ ವೇತನ ದೊರಕಬೇಕೆಂದು ಅವರು ಇಪ್ಪತ್ತೊಂದು ದಿನಗಳ ಮುಷ್ಕರವನ್ನು ಸಂಘಟಿಸಿದರು. ಅದೂ ಫಲಪ್ರದವಾಯಿತು.
ಬ್ರಿಟಿಷ್ ನ್ಯಾಯದಲ್ಲಿ ವಿಶೇಷ ನಂಬಿಕೆ ಇಟ್ಟಿದ್ದ ಮಹಾತ್ಮ ಗಾಂಧಿಯವರು ವೈಸ್‍ರಾಯ್ ಲಾರ್ಡ್ ಚೆಮ್ಸ್ ಫರ್ಡನ ಅಪೇಕ್ಷೆಯಂತೆ ಒಂದನೆಯ ಮಹಾಯುದ್ಧದಲ್ಲಿ ಬ್ರಿಟನಿಗೆ ತಮ್ಮ ಬೆಂಬಲ ನೀಡಿದರು. ಆದರೆ ಅವರ ಈ ನಂಬಿಕೆ ಅಲುಗುವಂಥ ಘಟನೆಯೊಂದು ಅಷ್ಟರಲ್ಲಿ ಸಂಭವಿಸಿತು. ಜನರ ರಾಜಕೀಯ ಆಶೋತ್ತರಗಳನ್ನು ಸರ್ಕಾರ ಈಡೇರಿಸುವ ಬದಲು ಅವನ್ನು ಹತ್ತಿಕ್ಕುವ ಕ್ರಮ ಕೈಗೊಂಡಿತು. ಬ್ರಿಟಿಷ್ ಸರ್ಕಾರಕ್ಕೆ ವಿರುದ್ಧವಾದ ಕಲಾಪಗಳಲ್ಲಿ ತೊಡಗಿರುವರೆಂಬ ಸಂಶಯಕ್ಕೆ ಒಳಗಾದವರನ್ನು ವಿಚಾರಣೆಯಿಲ್ಲದೆ ಬಂಧನದಲ್ಲಿಡಲು ಸರ್ಕಾರಕ್ಕೆ ಅಧಿಕಾರ ನೀಡುವ ರೌಲತ್ ಕಾಯಿದೆ ಜಾರಿಗೆ ಬಂದಿತು. ಗಾಂಧಿಯವರು ಇದನ್ನು ಪ್ರತಿಭಟಿಸಿದರು. ಏಪ್ರಿಲ್ 6ರಂದು ಹರತಾಳವನ್ನಾಚರಿಸಬೇಕೆಂದು ಕರೆ ಇತ್ತರು. ಅವರು ದೆಹಲಿಗೆ ಹೋಗುತ್ತಿದ್ದಾಗ ಹಾದಿಯಲ್ಲಿ ದಸ್ತಗಿರಿಯಾದರು. ಇದರಿಂದ ಉಳಿದ ಜನ ಹಿಂಸಾಚರಣೆ ಮಾಡಿದರು. ಗಾಂಧಿಯವರು ಸತ್ಯಾಗ್ರಹವನ್ನು ನಿಲ್ಲಿಸಬೇಕಾಯಿತು. ಅದೇ ಸಮಯದಲ್ಲಿ ಇನ್ನೊಂದು ಮಹಾ ದುರ್ಘಟನೆ ನಡೆಯಿತು. ಅಮೃತಸರದ ಜಲಿಯನ್‍ವಾಲಾಬಾಗಿನಲ್ಲಿ ಸೇರಿದ್ದ ನಿಶ್ಯಸ್ತ್ರಜನರ ಮೇಲೆ ಸರ್ಕಾರ ಮಷೀನ್-ಗನ್ ಪ್ರಯೋಗಿಸಿತು. ಪಂಜಾಬಿನಲ್ಲಿ ಲಷ್ಕರಿ ಕಾನೂನು ಜಾರಿಗೆ ಬಂತು. ಇದರಿಂದ ಇಡೀ ಭಾರತದಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧ ಕ್ರೋಧ ಹಬ್ಬಿತು.
ಈ ಸಮಯದಲ್ಲಿ ಮಹಾತ್ಮ ಗಾಂಧಿಯವರು ಜನಕ್ಕೆ ಅಹಿಂಸೆಯನ್ನೂ ನಿರ್ಭಯವನ್ನೂ ಬೋಧಿಸಿದರು. ಇದಕ್ಕಾಗಿಯೇ ಯಂಗ್ ಇಂಡಿಯ ಎಂಬ ಪತ್ರಿಕೆಯೂ ಗುಜರಾತಿಯಲ್ಲಿ ನವಜೀವನ ಎಂಬ ಪತ್ರಿಕೆಯೂ ಆರಂಭವಾದುವು. (1919).
1920ರಲ್ಲಿ ಆರಂಭವಾದ ಒಂದು ಮುಖ್ಯ ಚಳವಳಿ ಖಿಲಾಫತ್. ತುರ್ಕಿಯ ಖಲೀಪನ ಅಧಿಕಾರಕ್ಕೆ ಚ್ಯುತಿ ಬಾರದಂತೆ ಬ್ರಿಟನ್ನಿಗೆ ಒತ್ತಾಯ ಹಾಕಲು ಭಾರತೀಯ ಮುಸ್ಲಿಮರು ಆರಂಭಿಸಿದ್ದ ಚಳವಳಿಯಿದು. ಮುಸ್ಲಿಮರ ಮನಸ್ಸನ್ನು ಕಲಕಿದ್ದ ಈ ಚಳವಳಿಯಲ್ಲಿ ಹಿಂದುಗಳು ಸಹಾನುಭೂತಿಯಿಂದ ಪಾಲ್ಗೊಳ್ಳಬೇಕೆಂಬುದು ಗಾಂಧಿಯವರ ಅಭಿಮತವಾಗಿತ್ತು. ಹಿಂದೂ ಮುಸ್ಲಿಂ ಐಕ್ಯ ಸಾಧನೆ ಇದರ ಉದ್ದೇಶ. ಬ್ರಿಟಿಷ್ ಸಾಮ್ರಾಜ್ಯಾಧಿಕಾರದ ಸಂಕೇತವಾದ ಎಲ್ಲ ಬಿರುದುಗಳನ್ನೂ ಗೌರವಗಳನ್ನೂ ಭಾರತೀಯರು ಹಿಂದಕ್ಕೊಪ್ಪಿಸಬೇಕು. ಶಾಲೆ ಕಾಲೇಜು ನ್ಯಾಯಾಲಯ ವಿಧಾನಸಭೆಗಳನ್ನು ಬಹಿಷ್ಕರಿಸಬೇಕು-ಎಂದು ಗಾಂಧಿಯವರು ಕರೆ ಕೊಟ್ಟರು. ತಮಗೆ ಬ್ರಿಟಿಷ್ ಸತ್ತೆಯಿಂದ ದತ್ತವಾಗಿದ್ದ ಪದಕವೇ ಮುಂತಾದವನ್ನು ಜನರು ಹಿಂದುರುಗಿಸಿದರು. ಸತ್ಯಾಗ್ರಹ ಆರಂಭವಾಯಿತು. ಭಾರತದ ಜನರನ್ನು ಅವರು ಅಹಿಂಸಾತ್ಮಕ ಹೋರಾಟದ ಪಥದಲ್ಲಿ ಕೊಂಡೊಯ್ಯಲು ಸತತವಾಗಿ ಯತ್ನಿಸಿದರು.
ಚರಖಾ ಗಾಂಧೀಜಿಯವರ ಸ್ವರಾಜ್ಯದ ಪ್ರತೀಕವಾಯಿತು. ಚರಖಾ ಅನಾರ್ಥಿಕವೆನ್ನಬಹುದು. ಆದರೆ ಇದು ಅತ್ಯಂತ ಅಗ್ಗ. ನಿರುದ್ಯೋಗಿಗಳಿಗೆ ಇದರಿಂದ ಇಷ್ಟಷ್ಟಾದರೂ ಉದ್ಯೋಗ ದೊರಕುತ್ತದೆ. ಭಾರತವನ್ನು ಲ್ಯಾಂಕಷೈರಿನ ಯಂತ್ರದ ಹಿಡಿತದಿಂದ ಬಿಡಿಸಲು ಇದೊಂದೇ ಮಾರ್ಗ. ಬೇರೆಲ್ಲ ವಿದೇಶೀ ವಸ್ತುಗಳನ್ನು ಬಹಿಷ್ಕರಿಸಿದರೂ ವಸ್ತ್ರಕ್ಕಾಗಿ ಅನ್ಯರನ್ನು ಅವಲಂಬಿಸಬೇಕಾದ ಪರಿಸ್ಥಿತಿಯನ್ನು ತಪ್ಪಿಸಲಿಕ್ಕಾಗಿ ಇದು ಅಗತ್ಯ-ಎಂಬುದು ಗಾಂಧಿಯವರ ವಾದ. ಅಸಂಖ್ಯಾತ ಜನರಿಗೆ ತಮ್ಮ ಹರಿದ ಬಟ್ಟೆಯ ಬದಲು ಖಾದಿ ಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿ ಇದ್ದದ್ದನ್ನು ಕಂಡು ಅವರ ಮನಸ್ಸು ಬಲು ನೊಂದಿತು. ಅಂಥವರಿಗೆ ಒಂದು ತುಂಡು ದಟ್ಟಿಯಿದ್ದರೂ ಸಾಕಿತ್ತು. ಹಾಗಿರುವಾಗ ತಾವಾದರೂ ಹೇಗೆ ಮೈ ತುಂಬ ಬಟ್ಟೆ ತೊಟ್ಟುಕೊಂಡಾರು? 1921ರಲ್ಲಿ ಗಾಂಧಿಯವರೂ ತುಂಡುಲುಂಗೀ ಧಾರಿಯಾದರು. ಅಸಹಕಾರ ಚಳವಳಿಯನ್ನು ಬಲಪಡಿಸಿದರು. ಅಸಹಕಾರ ಧಾರ್ಮಿಕ ಹಾಗೂ ನೈತಿಕ ಚಳವಳಿಯಾದರೂ ಸರ್ಕಾರವನ್ನು ಉರುಳಿಸುವುದೇ ಅದರ ಧ್ಯೇಯ-ಎಂದು ಸಾರಿದರು. ಬ್ರಿಟಿಷ್ ಚಕ್ರಾಧಿಪತ್ಯವನ್ನು ಸೈತಾನನ ಪ್ರಭುತ್ವವೆಂದು ಕರೆದರು.
1922ರಲ್ಲಿ ಗಾಂಧಿಯವರು ಗುಜರಾತಿನ ಬಾರ್ಡೋಲಿ ಜಿಲ್ಲೆಯಲ್ಲಿ ಸಾಮೂಹಿಕ ಕರನಿರಾಕರಣೆಯ ಚಳವಳಿಯ ನಾಯಕತ್ವ ವಹಿಸಲು ನಿರ್ಧರಿಸಿದರು. ಆದರೆ ಆ ಸಮಯಕ್ಕೆ ಸರಿಯಾಗಿ ಉತ್ತರ ಪ್ರದೇಶದ ಚೌರಿಚೌರಾದಲ್ಲಿ ಜನರು ಹಿಂಸಾಕಾರ್ಯದಲ್ಲಿ ತೊಡಗಿದರು. ಪೋಲೀಸರ ಮೇಲೆ ಹಲ್ಲೆ ಮಾಡಿದರು. ಜನರಿನ್ನೂ ಅಹಿಂಸಾತ್ಮಕ ಚಳವಳಿಗೆ ಸಿದ್ಧರಾಗಿಲ್ಲವೆಂದು ಗಾಂಧಿಯವರಿಗೆ ಮನವರಿಕೆಯಾಗಿ ಸಾಮೂಹಿಕ ಚಳವಳಿಯನ್ನು ನಿಲ್ಲಿಸಿದರು. ಗಾಂಧಿಯವರ ಈ ನಿರ್ಣಯವನ್ನು ಅನೇಕರು ಒಪ್ಪಲಿಲ್ಲ. ಗಾಂಧಿಯವರು ಪ್ರಾಯಶ್ಚಿತ್ತರೂಪವಾಗಿ ಐದು ದಿನಗಳ ಉಪವಾಸ ಕೈಗೊಂಡರು. 1922ರ ಮಾರ್ಚ್ 13ರಂದು ಸರ್ಕಾರ ಅವರನ್ನು ಬಂಧಿಸಿತು. ಗಾಂಧಿಯವರು ಯಂಗ್ ಇಂಡಿಯ ಪತ್ರಿಕೆಯಲ್ಲಿ ಬರೆದಿದ್ದ ಲೇಖನಗಳು ರಾಜದ್ರೋಹಾತ್ಮಕವೆಂದು ಅದು ಅಪಾದಿಸಿತು. ನ್ಯಾಯಾಲಯ ಅವರಿಗೆ ಆರು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತು. ಪುಣೆಯ ಕಾರಾಗೃಹದಲ್ಲಿ ಎರಡು ವರ್ಷ ಕಳೆದ ಮೇಲೆ ಗಾಂಧಿಯವರಿಗೆ ಅಂತ್ರಪುಚ್ಛ ವ್ಯಾಧಿಗಾಗಿ ಶಸ್ತ್ರಚಿಕಿತ್ಸೆ ನಡೆಯಬೇಕಾಗಿದ್ದುದರಿಂದ ಅವರು ಬಿಡುಗಡೆ ಹೊಂದಿದರು.
ಆ ವೇಳೆಗೆ ಖಿಲಾಫತ್ ಚಳವಳಿ ವಿಫಲವಾಗಿತ್ತು. ವಿಧಾನ ಮಂಡಲಗಳನ್ನು ಪ್ರವೇಶಿಸಿ ಅಲ್ಲಿಂದ ಸರ್ಕಾರವನ್ನು ವಿರೋಧಿಸಬೇಕೆಂಬವರು ಸ್ವರಾಜ್ಯ ಪಕ್ಷವನ್ನು ಸ್ಥಾಪಿಸಿದ್ದರು. ವಿಧಾನಮಂಡಲ ಪ್ರವೇಶ ಮಾಡಬೇಕೆಂಬುದು ಕಾಂಗ್ರೆಸಿನ ಬಹುಮತಾಭಿಪ್ರಾಯವಾಗಿತ್ತು. ಗಾಂಧಿಯವರು ರಾಜಕೀಯದಿಂದ ದೂರವಾದರು. ಖಾದಿ ಪ್ರಚಾರಕ್ಕೆ ಅವರು ಹೆಚ್ಚು ಗಮನ ನೀಡಿದರು. 1924ರಲ್ಲಿ ಬೆಳಗಾಂವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಗಾಂಧಿಯವರು ಅಧ್ಯಕ್ಷರಾಗಿದ್ದರು.
1927ರಲ್ಲಿ ಇರ್ವಿನ್ ವೈಸ್‍ರಾಯ್ ಆಗಿದ್ದಾಗ-ಭಾರತದ ರಾಜ್ಯಾಂಗ ಸುಧಾರಣೆಗಳಿಗಾಗಿ ಸರ್ ಜಾನ್ ಸೈಮನ್ ಅಧ್ಯಕ್ಷತೆಯಲ್ಲಿ ಸರ್ಕಾರ ಒಂದು ಆಯೋಗವನ್ನು ನೇಮಿಸಿತು. ಒಬ್ಬನಾದರೂ ಭಾರತೀಯ ಸದಸ್ಯನಿಲ್ಲದ ಆ ಆಯೋಗವನ್ನು ಭಾರತೀಯರು ವಿರೋಧಿಸಿದರು. ಕಾಂಗ್ರೆಸ್ ಬಹಿಷ್ಕಾರ ಹಾಕಿತು. ಭಾರತದ ರಾಜಕೀಯ ಭವಿಷ್ಯವನ್ನು ನಿರ್ಧರಿಸಲು ಬ್ರಿಟಿಷ್ ಮತ್ತು ಭಾರತೀಯ ಪ್ರತಿನಿಧಿಗಳನ್ನೊಳಗೊಂಡ ದುಂಡುಮೇಜಿನ ಪರಿಷತ್ತೊಂದು ನಡೆಯುವುದಾಗಿ ಪ್ರಕಟನೆ ಹೊರಬಿತ್ತು. ಭಾರತಕ್ಕೆ ಅಧಿರಾಜ್ಯ ಸ್ಥಾನವನ್ನು (ಡೊಮಿನಿಯನ್ ಸ್ಟೇಟಸ್) ನೀಡುವುದಾಗಿ ಪರಿಷತ್ತು ತೀರ್ಮಾನಿಸುವ ಬಗ್ಗೆ ವೈಸ್‍ರಾಯಿಯಿಂದ ಭರವಸೆ ಬರಲಿಲ್ಲ. ಸಂಪೂರ್ಣ ಸ್ವರಾಜ್ಯವೇ ತನ್ನ ಗುರಿಯೆಂದು ಕಾಂಗ್ರೆಸ್ ಘೋಷಿಸಿತು. ಮತ್ತೊಂದು ಮಹಾ ಚಳವಳಿಗಾಗಿ ಸಿದ್ಧತೆಗಳು ನಡೆದುವು.
1930ರ ಮಾರ್ಚ್ 12ರಂದು ಗಾಂಧಿಯವರು ತಮ್ಮ ಸುಪ್ರಸಿದ್ಧ ಉಪ್ಪಿನ ಸತ್ಯಾಗ್ರಹವನ್ನಾರಂಭಿಸಿದರು. 78 ಮಂದಿ ಅನುಯಾಯಿಗಳೊಂದಿಗೆ ಗಾಂಧಿಯವರು ಅಹಮದಾಬಾದಿನಿಂದ 240 ಮೈಲು ದೂರದಲ್ಲಿ ಸಮುದ್ರ ದಂಡೆಯಲ್ಲಿರುವ ದಂಡಿಗೆ ಹೊರಟರು. ಉಪ್ಪಿನ ತಯಾರಿಕೆಯಲ್ಲಿ ಸರ್ಕಾರ ಹೊಂದಿದ್ದ ಏಕಸ್ವಾಮ್ಯವನ್ನು ವಿರೋಧಿಸಿ ಕಾನೂನು ಭಂಗ ಮಾಡುವುದು ಅವರ ಉದ್ದೇಶ. ಏಪ್ರಿಲ್ 6ರಂದು ಅವರು ದಂಡಿಯನ್ನು ತಲುಪಿ, ಸಮುದ್ರಸ್ನಾನ ಮಾಡಿ ನೈಸರ್ಗಿಕ ಉಪ್ಪನ್ನು ಕೈಯಲ್ಲಿ ಹಿಡಿದರು. ನಾಡಿನಾದ್ಯಂತ ಜನರು ಗಾಂಧಿಯವರ ಕರೆಯಂತೆ ಸತ್ಯಾಗ್ರಹವನ್ನಾಚರಿಸಿದರು. ಸುಮಾರು ಒಂದು ಲಕ್ಷ ಜನ ದಸ್ತಗಿರಿಯಾದರು. ಮೇ 4ರಂದು ಗಾಂಧಿಯವರ ದಸ್ತಗಿರಿಯಾಯಿತು. 1931ರ ಜನವರಿ 26ರ ವರೆಗೂ ಸರ್ಕಾರ ಅವರನ್ನು ಸೆರೆಯಲ್ಲಿಟ್ಟಿತ್ತು. ಸತ್ಯಾಗ್ರಹವನ್ನು ಅಂತ್ಯಗೊಳಿಸುವ ಬಗ್ಗೆ ಮಾರ್ಚ್ 5ರಂದು ಗಾಂಧಿ-ಇರ್ವಿನ್ ಒಪ್ಪಂದಕ್ಕೆ ಸಹಿಯಾಯಿತು. ಸತ್ಯಾಗ್ರಹಿಗಳು ಬಿಡುಗಡೆಯಾದರು. ಕೆಲವೊಂದು ಮಿತಿಗಳೊಳಗೆ, ಸ್ವಂತ ಉಪಯೋಗಕ್ಕಾಗಿ ಉಪ್ಪನ್ನು ತಯಾರಿಸಲು ಅವಕಾಶ ಲಭ್ಯವಾಯಿತು.
1931ರಲ್ಲಿ ಲಂಡನಿನಲ್ಲಿ ನಡೆದ ಎರಡನೆಯ ದುಂಡುಮೇಜಿನ ಪರಿಷತ್ತಿನಲ್ಲಿ ಭಾಗವಹಿಸಲು ಗಾಂಧಿಯವರು ಪ್ರಯಾಣ ಬೆಳೆಸಿದರು. ಅವರ ಭೇಟಿಯಿಂದಾಗಿ ಇಂಗ್ಲೆಂಡ್-ಭಾರತಗಳ ಸಾಮಾನ್ಯ ಜನಗಳ ನಡುವೆ ಹೆಚ್ಚು ನಿಕಟ ಬಾಂಧವ್ಯ ಬೆಳೆಯಿತು. ಆದರೆ ಸಮ್ಮೇಳನದಲ್ಲಿ ಅಲ್ಪಸಂಖ್ಯಾತರಿಗೆ ಸರ್ಕಾರ ವಿಶೇಷ ಪ್ರಾಮುಖ್ಯ ನೀಡಿತು. ಭಾರತೀಯರಿಗೆ ಸ್ವಯಮಾಡಳಿತ ನೀಡುವುದಕ್ಕಿಂತ ಇದಕ್ಕೇ ಆದ್ಯ ಗಮನ ನೀಡುವುದಕ್ಕೆ ಗಾಂಧಿಯವರು ಒಪ್ಪಲಿಲ್ಲ. ಸರ್ಕಾರ ಅನಾವಶ್ಯಕವಾಗಿ ಭಾರತದ ಜನಗಳ ನಡುವೆ ಕೋಮುವಾರು ಭೇದಭಾವವನ್ನು ಬೆಳೆಸುತ್ತಿದೆಯೆಂಬ ವಿಷಯ ಅವರಿಗೆ ಮನವರಿಕೆಯಾಯಿತು. ಬ್ರಿಟನ್ ತನ್ನ ಅಧಿಕಾರವನ್ನು ಹಿಂದೆಗೆದುಕೊಂಡರೆ ಕೋಮುವಾರು ಸಮಸ್ಯೆಗಳೆಲ್ಲ ತಾವಾಗಿಯೇ ಬಗೆಹರಿದಾವೆಂಬುದು ಅವರ ಭಾವನೆ. ಆದರೆ ಅವರ ವಾದ ಫಲಿಸಲಿಲ್ಲ. ಸಮ್ಮೇಳನದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ಎತ್ತಿ ಹಿಡಿಯುವವರ ಸಂಖ್ಯೆಯೇ ಹೆಚ್ಚಾಗಿರುವಂತೆ ಸರ್ಕಾರ ತಂತ್ರ ಹೂಡಿತ್ತು.
1931ರ ಕೊನೆಯಲ್ಲಿ ಗಾಂಧಿಯವರು ಹಿಂದಿರುಗಿದಾಗ ಭಾರತದ ರಾಜಕೀಯ ಪರಿಸ್ಥಿತಿ ತೀವ್ರವಾಗಿತ್ತು. ಹಲವು ನಾಯಕರು ಬಂಧಿತರಾಗಿದ್ದರು. ನಿಷೇಧಾಜ್ಞೆಗಳು ಜಾರಿಯಲ್ಲಿದ್ದುವು. ಆಗ ವೈಸ್‍ರಾಯ್ ಆಗಿದ್ದ ವಿಲಿಂಗ್ಡನನಿಗೆ ಗಾಂಧಿಯವರು ಪತ್ರ ಬರೆದರು. ಪರಿಸ್ಥಿತಿ ಕೈಮೀರದಂತೆ ಯತ್ನಿಸಬೇಕೆಂದೂ ಅನಿವಾರ್ಯವಾದರೆ ಕಾಂಗ್ರೆಸ್ಸು ಸತ್ಯಾಗ್ರಹ ಹೋರಾಟವನ್ನು ಮತ್ತೆ ಆರಂಭಿಸಲಾಗುವುದೆಂದೂ ಎಚ್ಚರಿಸಿದರು.
ಆದರೆ ಸರ್ಕಾರ ಲಕ್ಷಿಸಲಿಲ್ಲ. 1932ರ ಜನವರಿ 4ರಂದು ಗಾಂಧಿಯವರು ದಸ್ತಗಿರಿಯಾದರು. ಪಟೇಲರನ್ನೂ ಅವರನ್ನೂ ಸರ್ಕಾರ ಎರವಾಡ ಸೆರೆಮನೆಯಲ್ಲಿಟ್ಟಿತು. ಹರಿಜನರನ್ನು ಪ್ರತ್ಯೇಕಗೊಳಿಸಲು ಸರ್ಕಾರ ಕೈಗೊಳ್ಳಲಿದ್ದ ಕ್ರಮವೊಂದನ್ನು ವಿರೋಧಿಸಿ ಭಾರತ ಕಾರ್ಯದರ್ಶಿಗೆ ಗಾಂಧಿಯವರು ಪತ್ರ ಬರೆದರು. ಗಾಂಧಿಯವರ ಅಭಿಪ್ರಾಯಗಳನ್ನು ಸರ್ಕಾರ ಕಡೆಗಣಿಸಿತು. ಸೆಪ್ಟೆಂಬರ್ 20ರಂದು ಗಾಂಧಿಯವರು ಉಪವಾಸ ಆರಂಭಿಸಿದರು. ಅನೇಕ ದೇವಸ್ಥಾನಗಳು ಹರಿಜನರಿಗೆ ತೆರೆದುವು. ಐದು ದಿನಗಳ ಅನಂತರ ಹಲವು ಒತ್ತಾಯದಂತೆ ಗಾಂಧಿಯವರು ತಮ್ಮ ಉಪವಾಸವನ್ನು ಕೊನೆಗೊಳಿಸಿದರು.
ಅಸ್ಪೃಶ್ಯರೆನಿಸಿಕೊಂಡ ಹರಿಜನರ ಹಿತಸಾಧನೆಗೆ ಗಾಂಧಿಯವರು ಪಣತೊಟ್ಟರು. ಅವರಿಗೆ ಹರಿಜನರೆಂಬ ಹೆಸರು ಕೊಟ್ಟವರು ಗಾಂಧಿಯವರೇ. 1933ರಲ್ಲಿ ಅವರು ಹರಿಜನ ಎಂಬ ಹೆಸರಿನ ವಾರಪತ್ರಿಕೆಯೊಂದನ್ನು ಸ್ಥಾಪಿಸಿದರು. ಮುಂದೆ ಇದು ಹತ್ತು ಭಾರತೀಯ ಭಾಷೆಗಳಲ್ಲಿ ಪ್ರಕಟವಾಗುತ್ತಿತ್ತು.
ಗಾಂಧಿಯವರು ವರ್ಧಾದಲ್ಲಿ ಸ್ಥಾಪಿಸಿದ ಆಶ್ರಮದಲ್ಲಿ ಸ್ವಲ್ಪಕಾಲ ವಿಶ್ರಾಂತಿ ಪಡೆದರು. ಆದರೆ ಆ ಜೀವ ದೀರ್ಘಕಾಲ ವಿಶ್ರಾಂತಿ ಬಯಸಲಿಲ್ಲ. ಹರಿಜನೋದ್ಧಾರಕ್ಕಾಗಿ ದೇಶಾದ್ಯಂತ ಅವರು ಸಂಚಾರ ಕೈಗೊಂಡು ಹಣ, ಒಡವೆ, ಸಂಗ್ರಹಿಸಿದರು.
ಕಾಂಗ್ರೆಸಿನ ಹಾದಿಯ ಬಗ್ಗೆ ಅವರಿಗೆ ಆ ವೇಳೆಗಾಗಲೇ ಅತೃಪ್ತಿ ಮೂಡಿತ್ತು. ಗಾಂಧಿಯವರ ದೃಷ್ಟಿಯಲ್ಲಿ ಅಹಿಂಸೆ ಒಂದು ವ್ರತ. ಆದರೆ ಕಾಂಗ್ರೆಸ್ಸು ಅದನ್ನು ಹಾಗೆಂದು ಪರಿಗಣಿಸಿರಲಿಲ್ಲ. ಅದರ ದೃಷ್ಟಿಯಲ್ಲಿ ಅದೊಂದು ಉಪಾಯ; ಸ್ವಾತಂತ್ರ್ಯ ಗಳಿಸಲು ಅದೊಂದು ಸಾಧನ ಮಾತ್ರ. ಗಾಂಧಿಯವರು ಕಾಂಗ್ರೆಸಿನ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಗ್ರಾಮೋದ್ಧಾರ ಕಾರ್ಯಕ್ಕೇ ತಮ್ಮ ಸಮಯವನ್ನು ಮುಡಿಪಾಗಿಟ್ಟರು. ಅಖಿಲ ಭಾರತ ಗ್ರಾಮ ಕೈಗಾರಿಕಾ ಸಂಘ ಸ್ಥಾಪಿತವಾಯಿತು. ಅವರು ವರ್ಧಾ ಬಳಿಯ ಸೇವಾಗ್ರಾಮದಲ್ಲಿ ನೆಲೆಸಿದರು.
1935ರ ಕಾಯಿದೆಯ ಪ್ರಕಾರ 1937ರಲ್ಲಿ ಭಾರತದ ವಿವಿಧ ಪ್ರಾಂತ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಬಹುಮತ ಗಳಿಸಿತು. 11 ಪ್ರಾಂತ್ಯಗಳ ಪೈಕಿ ಒಂಬತ್ತರಲ್ಲಿ ಕಾಂಗ್ರೆಸ್ ಸರ್ಕಾರಗಳು ಸ್ಥಾಪಿತವಾದುವು. ಪಾನನಿರೋಧ, ಮೂಲ ಶಿಕ್ಷಣ, ರೈತರ ಋಣ ಪರಿಹಾರ, ಗ್ರಾಮಹಿತರಕ್ಷಣೆ-ಇವು ಕಾಂಗ್ರೆಸ್ ಸರ್ಕಾರಗಳ ಮುಂದೆ ಗಾಂಧಿಯವರು ಇಟ್ಟ ಗುರಿಗಳು.
1939ರ ಸೆಪ್ಟೆಂಬರಿನಲ್ಲಿ ಎರಡನೆಯ ಮಹಾಯುದ್ಧ ಆರಂಭವಾದಾಗ ಬ್ರಿಟಿಷ್ ಸರ್ಕಾರಕ್ಕೆ ತಮ್ಮ ನೈತಿಕ ಬೆಂಬಲ ನೀಡಲು ಗಾಂಧಿಯವರು ಸಿದ್ಧವಾಗಿದ್ದರು. ಈ ಬಿಕ್ಕಟ್ಟಿನ ಕಾಲದಲ್ಲಿ ಬ್ರಿಟನನ್ನು ತೊಡಕಿಗೆ ಸಿಲುಕಿಸುವ ಯಾವ ಕ್ರಮಕ್ಕೂ ಗಾಂಧಿಯವರು ಸಿದ್ಧವಿರಲಿಲ್ಲ. ಜರ್ಮನಿ ಜಪಾನ್‍ಗಳ ಸೈನಿಕ ನೆರವು ಪಡೆದು ಭಾರತದ ಸ್ವಾತಂತ್ರ್ಯವನ್ನು ಗಳಿಸಿಕೊಳ್ಳಬೇಕೆಂದು ಸುಭಾಷ್ ಚಂದ್ರ ಭೋಸರ ವಾದ ಅವರಿಗೆ ಒಪ್ಪಿಗೆಯಾಗಲಿಲ್ಲ. ಆದರೆ ಯುದ್ಧ ಮುಗಿದ ಮೇಲೆ ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡುವುದಾಗಿ ಭರವಸೆ ನೀಡಿದರೆ ಮಾತ್ರ ಬ್ರಿಟನಿನ ಯುದ್ಧಕಾರ್ಯಕ್ಕೆ ಸಹಕಾರ ನೀಡುವುದೆಂಬುದು ಕಾಂಗ್ರೆಸ್ ಅಭಿಪ್ರಾಯವಾಗಿತ್ತು. ಬ್ರಿಟಿಷ್ ಸರ್ಕಾರದಿಂದ ಅಂಥ ಭರವಸೆಯೇನೂ ಬರಲಿಲ್ಲ.
1940ರಲ್ಲಿ ಗಾಂಧಿಯವರು ವೈಯಕ್ತಿಕ ಸತ್ಯಾಗ್ರಹವನ್ನಾರಂಭಿಸಿದರು. ಗಾಂಧಿಯವರ ಕರೆಯಂತೆ ಸತ್ಯಾಗ್ರಹ ಮಾಡಿ ಕಾರಾಗೃಹ ಹೊಕ್ಕವರ ಪೈಕಿ ವಿನೋಬಾ ಭಾವೆ ಮೊದಲಿಗರು. ಕಾಂಗ್ರೆಸ್ ಸರ್ಕಾರಗಳು ಎರಡನೆಯ ಮಹಾಯುದ್ಧ ಘೋಷಿತವಾದಾಗ ಬ್ರಿಟಿಷ್ ಸರ್ಕಾರದ ಜೊತೆಯುದ್ಧ ಕಾರ್ಯದಲ್ಲಿ ಸಹಕರಿಸಲು ಒಪ್ಪದೆ ರಾಜೀನಾಮೆ ನೀಡಿದುವು.
1940-41ರಲ್ಲಿ ಯುದ್ಧವಿರೋಧಿಸಿ ಗಾಂಧೀಜಿಯವರೇ ಆಯ್ಕೆ ಮಾಡಿದ ವೈಯಕ್ತಿಕ ಸತ್ಯಾಗ್ರಹವಾಗಿ 23000 ಜನ ಜೈಲು ತುಂಬಿದರು. 1941ರ ಅಂತ್ಯದ ವೇಳೆಗೆ ಯುದ್ಧದಲ್ಲಿ ಬ್ರಿಟನಿನ ಸ್ಥಿತಿ ಆತಂಕಕಾರಿಯಾಗಿ ಪರಿಣಮಿಸಿತ್ತು. ಜಪಾನೀಯರ ಆಕ್ರಮಣಕಾರ್ಯ ತೀವ್ರವಾಗಿತ್ತು. ಸರ್ಕಾರ ಸತ್ಯಾಗ್ರಹಿಗಳನ್ನು ಸೆರೆಯಿಂದ ಬಿಟ್ಟಿತು. ಭಾರತದ ರಾಜಕೀಯ ಸಮಸ್ಯೆಯ ಇತ್ಯರ್ಥ ಮಾಡುವುದು ಬ್ರಿಟನಿನ ಹಿತದಿಂದಲೇ ಅವಶ್ಯವಾಗಿತ್ತು. ಬ್ರಿಟಿಷ್ ಸಚಿವ ಸ್ಟ್ಯಾಫರ್ಡ್ ಕ್ರಿಪ್ಸ್ 1942ರ ಮಾರ್ಚ್ ತಿಂಗಳಲ್ಲಿ ಭಾರತಕ್ಕೆ ಸಲಹೆಯೊಂದನ್ನು ತಂದ. ಗಾಂಧಿಯವರಿಗೆ ಅದು ಪರಿಶೀಲನಯೋಗ್ಯವೆನಿಸಲಿಲ್ಲ.
ಭಾರತ ಬಿಟ್ಟು ತೊಲಗಿ ಎಂಬ ಚಳವಳಿಯ ಪರಿಕಲ್ಪನೆ ಗಾಂಧಿಯವರಲ್ಲಿ ಮೂಡಿಬಂತು. ಹರಿಜನದಲ್ಲಿ ಈ ಬಗ್ಗೆ ಲೇಖನಗಳು ಪ್ರಕಟವಾದುವು. ಆ ವರ್ಷ ಆಗಸ್ಟ್ 8ರಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಈ ಚಳವಳಿಯನ್ನು ಹೂಡಲು ನಿರ್ಣಯ ಮಾಡಿತು. ಮರುದಿನ ಸರ್ಕಾರ ಗಾಂಧಿಯವರನ್ನೂ ಅವರ ಅನುಯಾಯಿಗಳನ್ನೂ ಕಾಂಗ್ರೆಸ್ಸಿನ ಎಲ್ಲ ಮುಖಂಡರನ್ನೂ ದಸ್ತಗಿರಿ ಮಾಡಿತು. ದೇಶಾದ್ಯಂತ ರೈಲು, ತಂತಿ ಸಂಪರ್ಕ ವಿಫಲ ಗೊಳಿಸುವ, ಸೈನ್ಯಕ್ಕೆ ಪೂರೈಕೆಯಾಗುವ ವಸ್ತುಗಳು ಸಿಗದಂತೆ ಮಾಡುವ ಹಾಗೂ ಸರ್ಕಾರೀ ಯಂತ್ರವನ್ನು ಭಗ್ನಗೊಳಿಸುವ ಉಗ್ರ ಚಳವಳಿ ಸಾಗಿತು. ಬ್ರಿಟಿಷ್ ಪ್ರಾಂತ, ದೇಶೀಯ ಸಂಸ್ಥಾನಗಳೆಂಬ ತಾರತಮ್ಯವಿಲ್ಲದೆ ಈ ಚಳವಳಿ ಇಡೀ ದೇಶದಲ್ಲಿ ಎರಡು ವರ್ಷ ಪರ್ಯಂತ ಉಗ್ರವಾಗಿ ಸಾಗಿ ಜನತಾಕ್ರಾಂತಿಯ ಸ್ವರೂಪ ತಳೆಯಿತು. ಗಾಂಧಿಯವರ ಕಾರ್ಯದರ್ಶಿ ಮಹಾದೇವ ದೇಸಾಯಿ, ಪತ್ನಿ ಕಸ್ತೂರ ಬಾ ಇವರು ಗಾಂಧಿಯವರೊಂದಿಗೆ ಪುಣೆಯಲ್ಲಿ ಬಂಧನಕ್ಕೊಳಪಟ್ಟರು. ಇವರಿಬ್ಬರೂ ಸೆರೆಮನೆಯಲ್ಲೇ ತೀರಿಕೊಂಡರು.
1943ರ ಜನವರಿಯಲ್ಲಿ ಗಾಂಧಿಯವರು ವೈಸ್‍ರಾಯ್ ಲಿನ್‍ಲಿತ್‍ಗೋಗೆ ಒಂದು ಪತ್ರ ಬರೆದು, ಸರ್ಕಾರದ ಹಿಂಸಾಚಾರವನ್ನು ಖಂಡಿಸಿದರು. ಫೆಬ್ರುವರಿ 10 ರಿಂದ 21 ದಿನಗಳ ಕಾಲ ಉಪವಾಸ ಕೈಗೊಂಡರು. 1944ರ ಮೇ 6ರಂದು ಸರ್ಕಾರ ಅವರನ್ನು ಆರೋಗ್ಯನಿಮಿತ್ತ ಬಿಡುಗಡೆ ಮಾಡಿತು.
ಇದೇ ಕಾಲಕ್ಕೆ ದೇಶ ತ್ಯಾಗ ಮಾಡಿ ಜರ್ಮನಿಗೆ ಹೋಗಿ ಸುಭಾಷ್‍ಚಂದ್ರ ಬೋಸರು ಅಲ್ಲಿ ಭಾರತೀಯರ ಸೇನೆ ಸಂಘಟಿಸಿದರು. ಮುಂದೆ ಜಪಾನಿಗೂ ಹೋಗಿ (1943) ಜಪಾನಿಯರಿಗೆ ಸೆರೆಸಿಕ್ಕ ಭಾರತೀಯ ಸೈನಿಕರನ್ನು ಸಂಘಟಿಸಿ ಕ್ಯಾಪ್ಟನ್ ಮೋಹನ್‍ಸಿಂಗ್ ಎಂಬವರು ಕಟ್ಟಿದ್ದ ಐ.ಎನ್.ಎ ಎಂದು ಹೆಸರಾದ ಇಂಡಿಯನ್ ನ್ಯಾಷನಲ್ ಆರ್ಮಿಯ ನಾಯಕತ್ವ ವಹಿಸಿದರು. ಜಪಾನಿಯರ ನೆರವಿನಿಂದ ಸ್ವತಂತ್ರ ಭಾರತ ಸರ್ಕಾರ ಸ್ಥಾಪಿಸಿದರು. ಚಲೋ ದಿಲ್ಲಿ ಘೋಷಣೆಯೊಡನೆ ಈಶಾನ್ಯ ಭಾರತದಲ್ಲಿ 1944 ಮಾರ್ಚಿನಲ್ಲಿ
ಕೊಹಿಮಾವರೆಗೆ ಈ ಸೇನೆ ತಲಪಿ ಭಾರತದಲ್ಲಿ 241 ಕಿಮಿ. ಒಳಕ್ಕೆ ನುಗ್ಗಿತು. ಆದರೆ ಜಪಾನಿಯರು ಹಿಂದೆಗೆದಾಗ ಶೀಘ್ರವೇ ಇವರೂ ಹಿಂದೆಗೆಯಬೇಕಾಯಿತು. ಭಾರತದ ಜನತೆಯ ಹೃದಯದಲ್ಲಿ ತೀವ್ರ
ಸ್ಪಂದನ ಮೂಡಿಸಿದ್ದ ಈ ಸೇನೆಯ ನಾಯಕರನ್ನು ಯುದ್ಧ ನಂತರ ಬಂಧಿಸಿ 6-11-1945ರಂದು ದೆಹಲಿ ಕೆಂಪುಕೋಟೆಯಲ್ಲಿ ವಿಚಾರಣೆ ಆರಂಭಿಸಿದಾಗ ಆದ ಪ್ರಚಂಡ ಜನತಾ ಪ್ರತಿಭಟನೆ ಸರ್ಕಾರವನ್ನು ಎದೆಗುಂದಿಸಿತು. 1946 ಫೆಬ್ರುವರಿಯಲ್ಲಿ ಭಾರತದಲ್ಲಿ ವಿಮಾನ ಸೈನಿಕರು ಐ.ಎನ್.ಎ. ಬಗ್ಗೆ ತೋರಿದ ಸಹಾನುಭೂತಿ, ಮುಂಬೈಯ ನೌಕಾಸೈನಿಕರ ಬಂಡಾಯ (ಫೆ. 18) ಅದರ ಹಿಂದೆ ನಗರದಲ್ಲಾದ ಗಲಭೆ ಕಲ್ಕತ್ತಾ, ಮದ್ರಾಸ್, ಹಾಗೂ ಕರಾಚಿಯ ನೌಕಾ ಸೈನಿಕರ ಬಂಡಾಯ, ಇವರೆಲ್ಲರೂ ಮಾಡಿದ ಬ್ರಿಟಿಷ್ ಅಧಿಕಾರಗಳ ಕೊಲೆ, ಇವುಗಳಿಂದ ಭಾರತೀಯ ಕೂಲಿ ಸಿಪಾಯಿಗಳ ನೆರವಿನಿಂದ ಈ ದೇಶವನ್ನು ಆಳುವುದು ಅಸಾಧ್ಯವೆಂದು ಬ್ರಿಟಿಷರಿಗೆ ಮನವರಿಕೆಯಾಯಿತು.
ಯುದ್ಧದಿಂದ ಬ್ರಿಟನ್‍ಗೆ ಆದ ಆರ್ಥಿಕ ದೌರ್ಬಲ್ಯ, ಅಂತಾರಾಷ್ಟ್ರೀಯ ಒತ್ತಡ, ಇವೆಲ್ಲ ಕಾರಣಗಳಿಂದ ಭಾರತಕ್ಕೆ ಸ್ವಾತಂತ್ರ್ಯ ನೀಡಲು ಇಂಗ್ಲೆಂಡಿನ ಚುನಾವಣೆಯಲ್ಲಿ ಗೆದ್ದು ಬಂದ ಲೇಬರ್ ಪಕ್ಷ ನಿರ್ಧರಿಸಿತು.
ಪಾಕಿಸ್ತಾನದ ನಿರ್ಮಾಣವಾಗಬೇಕೆಂಬುದು ಮಹಮ್ಮದ್ ಆಲಿಜಿನ್ನಾ ಬೇಡಿಕೆಯಾಗಿತ್ತು. ದ್ವಿರಾಷ್ಟ್ರ ಸಿದ್ಧಾಂತವನ್ನು ಗಾಂಧಿಯವರು ಪ್ರಬಲವಾಗಿ ವಿರೋಧಿಸಿದರು.
ಬ್ರಿಟಿಷರು ಭಾರತದಲ್ಲಿ ತಮ್ಮ ಅಧಿಕಾರವನ್ನು ಕೊನೆಗೊಳಿಸುವರೆಂದು ಆ ನಿಯೋಗ ಸಾರಿತು. ಅಖಂಡ ಭಾರತ ಸರ್ಕಾರ ಸ್ಥಾಪನೆಯಾಗಲೆಂಬುದು ಅವರ ಸಲಹೆ. ಮುಸ್ಲಿಂ ಲೀಗ್ ಈ ಸಲಹೆಗೆ ತನ್ನ ಬೆಂಬಲ ನೀಡಲು ನಿರಾಕರಿಸಿತು. ನೇರ ಕಾರ್ಯಾಚರಣೆ ಕೈಗೊಳ್ಳಲು ತೀರ್ಮಾನಿಸಿತು. ಅಂತೂ ಕೊನೆಗೆ 1946ರ ಸೆಪ್ಟೆಂಬರ್ 2ರಂದು ನೆಹರೂ ಅವರ ನಾಯಕತ್ವದಲ್ಲಿ ತಾತ್ಕಾಲಿಕ ಸರ್ಕಾರವೊಂದು ಸ್ಥಾಪಿತವಾಯಿತು. ಮುಸ್ಲಿಂ ಲೀಗ್ ಆಗಸ್ಟ್ 16ರಂದು ನೇರ ಕಾರ್ಯಾಚರಣೆ ಆರಂಭಿಸಿದ್ದರ ಪರಿಣಾಮವೆಂದರೆ ಕೋಮು ಗಲಭೆ. ಹಲವು ಎಡೆಗಳಿಗೆ ಗಲಭೆಗಳು ಹಬ್ಬಿದುವು. 1946ರ ಕೊನೆಯಲ್ಲಿ ಗಾಂಧಿಯವರು ಪೂರ್ವ ಬಂಗಾಳದ ಹಳ್ಳಿಗಳಲ್ಲಿ ಸಂಚರಿಸುತ್ತ ಜನಕ್ಕೆ ಪ್ರೀತಿ ಅಹಿಂಸೆಗಳ ಸಂದೇಶವನ್ನು ಸಾರಿದರು. ಬಿಹಾರದಲ್ಲೂ ಅವರು ಸಂಚಾರ ಕೈಗೊಂಡರು.
1947ರ ಜೂನ್ 3ರಂದು ಬ್ರಿಟನ್ ಭಾರತವಿಭಜನೆಯ ಯೋಜನೆಯನ್ನು ಘೋಷಿಸಿತು. ಕಾಂಗ್ರೆಸ್-ಮುಸ್ಲಿಂ ಲೀಗ್‍ಗಳು ಅದನ್ನೊಪ್ಪಿದುವು. ಆದರೆ ಗಾಂಧಿಯವರು ಅದನ್ನೊಂದು ದುರಂತವೆಂದು ಕರೆದರು. ಮೂವತ್ತೆರಡು ವರ್ಷಗಳ ಕಾರ್ಯವೆಲ್ಲ ವ್ಯರ್ಥವಾಯಿತೆಂಬುದು ಗಾಂಧಿಯವರ ಭಾವನೆ.
1947 ಆಗಸ್ಟ್ 15ರಂದು ಸ್ವತಂತ್ರಭಾರತದ ಉದಯವಾಯಿತು. ಜೊತೆಗೇ ಮುಸ್ಲಿಮ್ ನಾಯಕರ ಬೇಡಿಕೆಯಂತೆ ಪಾಕಿಸ್ತಾನ ಹುಟ್ಟಿಕೊಂಡಿತು.
ಭಾರತಕ್ಕೆ ಸ್ವಾತಂತ್ರ್ಯ ಪ್ರಾಪ್ತವಾದಾಗ ಗಾಂಧೀಜಿ ಕಲ್ಕತ್ತದಲ್ಲಿ ಹಿಂಸೆಯಿಂದ ನೊಂದ ಜನರ ನಡುವೆ ಇದ್ದರು. ಅಶಾಂತಿಯನ್ನು ಕಂಡು ಅವರು ಪರಿತಪಿಸುತ್ತಿದ್ದರು. ಆ ದಿನವಿಡೀ ಅವರು ಉಪವಾಸ ಪ್ರಾರ್ಥನೆಗಳಲ್ಲಿ ನಿರತವಾಗಿದ್ದರು. ಅವರು ಅಂದು ದೇಶಕ್ಕೆ ಯಾವ ಸಂದೇಶವನ್ನೂ ನೀಡಲಿಲ್ಲ. ಕೆಲವು ದಿನಗಳಲ್ಲಿ ಕಲ್ಕತ್ತದಲ್ಲಿ ಮತ್ತೆ ಭೀಕರ ಗಲಭೆಗಳು ಸಂಭವಿಸಿದುವು. ಗಾಂಧಿಯವರು ಅನಿರ್ದಿಷ್ಟ ಕಾಲ ಉಪವಾಸ ಕೈಕೊಂಡರು. ಗಲಭೆಗಳು ನಿಂತುವು. ಆದರೂ ಪರಿಸ್ಥಿತಿ ಶಾಂತವಾಗಿರಲಿಲ್ಲ. ಭಾರತ-ಪಾಕಿಸ್ತಾನಗಳಲ್ಲಿಯ ಅಲ್ಪಸಂಖ್ಯಾತರಿಗೆ ನೆಮ್ಮದಿಯಿರಲಿಲ್ಲ. ಭೀತರಾದ ಹಿಂದೂ ಮುಸ್ಲಿಂ ನಿರಾಶ್ರಿತರು ಅಗಾಧ ಸಂಖ್ಯೆಯಲ್ಲಿ ಗಡಿ ದಾಟುತ್ತಿದ್ದರು. ಅಲ್ಪ ಸಂಖ್ಯಾತರ ಹಿತ ರಕ್ಷಿಸುವುದು ಉಭಯ ರಾಷ್ಟ್ರಗಳ ಹೊಣೆಯೆಂದು ಗಾಂಧಿಯವರು ಹೇಳಿದರು.
1948ರ ಜನವರಿ 13ರಂದು ಗಾಂಧಿಯವರು ಇನ್ನೊಮ್ಮೆ ಉಪವಾಸ ಆರಂಭಿಸಿದರು. ಮತೀಯ ಸೌಹಾರ್ದ ಬೆಳೆಸುವುದಾಗಿ ಮುಖಂಡರು ಒಪ್ಪಂದ ಮಾಡಿಕೊಂಡಾಗಲೇ ಅವರು ಉಪವಾಸವನ್ನು ಕೊನೆಗೊಳಿಸಿದ್ದು.
ಗಾಂಧಿಯವರ ದೃಷ್ಟಿಯಿಂದ ಅತೃಪ್ತರಾದ ಕೆಲವರು ಅವರ ಕೊಲೆಗೆ ಪ್ರಯತ್ನಿಸುತ್ತಿದ್ದರು. ಜನವರಿ 20ರಂದು ಅವರ ಪ್ರಾರ್ಥನಾಸಭೆಯಲ್ಲಿ ಒಬ್ಬ ಯುವಕ ಬಾಂಬೊಂದನ್ನು ಎಸೆದ. ಅದರಿಂದ ಪ್ರಾಣಾಪಾಯವಾಗಲಿಲ್ಲ. ಆ ಯುವಕನ ವಿಚಾರದಲ್ಲಿ ಗಾಂಧಿಯವರು ದ್ವೇಷ ವ್ಯಕ್ತಪಡಿಸಲಿಲ್ಲ.
ಗಾಂಧಿಯವರ ಕೊನೆಯ ದಿನ ಬಳಿಸಾರಿತು. 1948ರ ಜನವರಿ 30ರಂದು ಸಂಜೆ 5 ಗಂಟೆ ದಾಟಿತ್ತು. ಗಾಂಧಿಯವರು ಎಂದಿನಂತೆ ಪ್ರಾರ್ಥನಾಸಭೆಯ ಮೆಟ್ಟಲು ಹತ್ತುತ್ತಿದ್ದರು. ನಾಥುರಾಂ ವಿನಾಯಕ ಗೋಡ್ಸೆಯೆಂಬ ಎಂಬಾತ ಗುಂಪಿನಿಂದ ಮುನ್ನುಗ್ಗಿ ಗಾಂಧಿಯವರತ್ತ ಮೂರು ಬಾರಿ ಗುಂಡು ಹಾರಿಸಿದ. ಹೇ ರಾಂ ಎನ್ನುತ್ತ ಗಾಂಧಿಯವರು ಕೆಳಗೆ ಬಿದ್ದರು. ಅವರ ಇಹಲೋಕ ಯಾತ್ರೆ ಪೂರೈಸಿತ್ತು.
ಸಮಕಾಲೀನ ಜಗತ್ತಿನ ಮೇಲೆ ಮಾತ್ರವಲ್ಲದೆ ಭವಿಷ್ಯತ್ತಿನ ಮೇಲೆ ಕೂಡ ತಮ್ಮ ಪ್ರಭಾವದ ಮುದ್ರೆಯೊತ್ತಿದ ವ್ಯಕ್ತಿ ಗಾಂಧೀಜಿ. ಅವರು ಸತ್ಯ ಅಹಿಂಸೆಗಳ ಪ್ರವಾದಿ. ಗುರಿ ಶುದ್ಧವಾಗಿದ್ದರೆ ಸಾಲದು; ಅದನ್ನು ನಿಲುಕುವ ಮಾರ್ಗವೂ ಶುದ್ಧವಾಗಿರಬೇಕು-ಎಂದು ಅವರು ಹೇಳಿದರು. ಮಾರ್ಗವೆಂತೋ ಗುರಿಯಂತು-ಎಂದರು. ಜನರು ತಮ್ಮ ಹಕ್ಕುಗಳಿಗಾಗಿ ಹೊಡೆದಾಡುವಾಗ ಜೀವನದ ಬಗ್ಗೆ ಅಗೌರವದಿಂದ ವರ್ತಿಸಬಾರದು-ಎಂಬುದು ಅವರ ಬೋಧನೆ.
ಗಾಂಧಿಯವರು ಜನತೆಯ ನಾಯಕ. ರಾಜಕೀಯ ಸಾಮಾಜಿಕ ಬಂಡಾಯಗಾರ. ತಮ್ಮ ದೇಶವನ್ನು ಸ್ವಾತಂತ್ರ್ಯದ ಗುರಿ ಮುಟ್ಟಿಸುವ ಪ್ರಯತ್ನವೇ ಅವರ ಅಭಿವ್ಯಕ್ತಿಗೆ ಮಾಧ್ಯಮವಾಯಿತು. ತನ್ಮೂಲಕವಾಗಿ ಅವರು ಇಡೀ ಮಾನವತೆಯನ್ನೇ ಪ್ರೀತಿಸಿದರು.
ಜೈನ ವೈಷ್ಣವ ಧರ್ಮಗಳಿಂದ ಗಾಂಧಿಯವರು ತುಂಬ ಪ್ರಭಾವಿತರಾಗಿದ್ದರು. ಮಾರ್ಕ್ಸ್ ಡಾರ್ವಿನ್ ಸಿದ್ಧಾಂತಗಳು ಅತ್ಯಂತ ಪ್ರಚಾರದಲ್ಲಿದ್ದ ಕಾಲದಲ್ಲಿ ಅವರು ಲಂಡನಿನಲ್ಲಿ ವಿದ್ಯಾರ್ಥಿಯಾಗಿದ್ದರು. ಎಪ್ಪತ್ತೈದರ ಪ್ರಾಯದಲ್ಲಿ ಅವರು ಮಾರ್ಕ್ಸನ ಕ್ಯಾಪಿಟಲ್ ಉದ್ಗ್ರಂಥ ಬೋಧಿಸಿದರೂ ಅವರು ಮೂಲತಃ ಹಿಂದುವಾಗಿ ಉಳಿದರು. ಸನಾತನಧರ್ಮದ ಉತ್ಕೃಷ್ಟ ಉತ್ಪನ್ನ ಗಾಂಧಿಯವರು.
ತಮ್ಮ ಇಡೀ ಬಾಳನ್ನೇ ತಮ್ಮ ವಿಚಾರದ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡ ಗಾಂಧಿಯವರು ಸ್ವಂತ ಅನುಭವದಿಂದ ಕಂಡುಕೊಳ್ಳದ ಯಾವುದನ್ನೂ ಬೋಧಿಸಲಿಲ್ಲ. ದೇವರು ಸತ್ಯ ಮಾತ್ರವಲ್ಲ, ಸತ್ಯವೇ ದೇವರು-ಎಂದು ಅವರು ಪ್ರತಿಪಾದಿಸಿದರು. ಇಷ್ಟಾದರೂ ಅವರು ಅತ್ಯಂತ ವಿನಯಶೀಲರು. ತಮಗೆ ಯಾವ ದೈವಿಕ ಶಕ್ತಿಯೂ ಇಲ್ಲವೆಂದೇ ಅವರು ಸಾರಿದರು. ಗಾಂಧಿಯವರು ಕಣ್ಮರೆಯಾದರೂ ಅವರ ವಿಚಾರಗಳ ಪ್ರಭಾವ ಮಾತ್ರ ನಿಧಾನವಾದರೂ ಖಂಡಿತವಾಗಿಯೂ ಅಗೋಚರವಾಗಿಯೂ ಜಗತ್ತನ್ನೆಲ್ಲ ವ್ಯಾಪಿಸುತ್ತಿದೆ. ದೇಶವಿದೇಶಗಳಲ್ಲಿ ಅವರ ಬೋಧನೆಯನ್ನು ನಂಬಿ ನಡೆವ ಹಲವಾರು ಮಂದಿ ಇದ್ದಾರೆ.
ಕಾಮೆಂಟ್‌ಗಳು