ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೋಕುಲ ನಿರ್ಗಮನ 28


 

ಗೋಕುಲ ನಿರ್ಗಮನ 28

(ಮಹಾನ್ ಕವಿ ಪು. ತಿ. ನರಸಿಂಹಾಚಾರ್ಯರ ಕೃತಿ)


(ರಾಧೆ ಕೈಗೊಂಡು ಮೋಹವಾಂತು ಹಾಡುತ್ತಾಳೆ.)

ರಾಧೆ


ಹಾಡು : ರಾಗ - ನೀಲಾಂಬರಿ 

ಯಮುನೆಯ ಬನದೊಳು ಮೊದಲೊಲುಮೆಗುಟ್ಟಿನ 

ಮಾತನ್ನು ಕಿವಿಯೊಳಗುಸುರಿದ ಕೊಳಲೇ ದಿನದಿನದ ರೂಢಿಯ ಮೊಟ್ಟೆಯನೊಡೆದೆದೆ -

ಹಕ್ಕಿ ರೆಕ್ಕೆಯಿಡಕಲಿಸಿದ ಕೊಳಲೇ ಮನದೊಳಗಾಸೆಯ ಪಂಜನು ಹೊತ್ತಿಸಿ

ಮನದನ್ನನಿವನೆಂದು ತೋರಿದ ಕೊಳಲೇ ಜತೆಗೂಡುವೊಂದರೆಚಣಕಪ್ಪ ಮೋದದ ತೇಜದಿ ಭವಕೆಲ್ಲ ಮೆರುಗಿಟ್ಟ ಕೊಳಲೇ

ತಾಳೆ ನಿಂತು ಮಲೆ ತೂಗಿ ಬಾನ್ ಬಾಗಿ ತುರು ತರು 

ಜನ ಸ್ತಬ್ಧರಾಗುತ್ತ ಕೇಳಿದ ಕೊಳಲೇ

ನಲವು ಮತ್ತೇರಿಸಿ ಗುರುಲಘುವೆನ್ನದೆ ಜಗವೆಲ್ಲ ಕುಣಿಸಿದ ಬಲುಮೆಯ ಕೊಳಲೇ

ಕೃಷ್ಣ ಉಸಿರಿಲ್ಲದಿಂತು ನೀ ಬಿದಿರಾಗಿ 

ಹಂಗಳ ಸುಯ್ಯಲೊಳೊಣಗುವ ಕೊಳಲೇ ಅಮೃತವ ಚೆಲ್ಲಿದ ಬರಿಕಳಶದಂದದಿ

ಅವನುಳಿಯೆ ಬರಿದಾದ ಬೃಂದಾವನದಂತೆ ನನ್ನಂತೆ – ನಿಮ್ಮಂತೆ – ನೀನಾದೆ ಕೊಳಲೇ ಸಮದುಃಖದೊಳು ನಾವು ಗೆಳತಿಯರಾದೆವು. ವಿರಹವ ಮೌನದಿ ಮೊಳಗಿಡು ಕೊಳಲೇ

ಇದ್ದುದು ದಿಟ ಅವನೊಲಿದುದು ದಿಟ ನಾವು ನಲಿದುದು ದಿಟ ಬಹ ನೆಚ್ಚು ದಿಟ 

ಎಂದು ನೀನಾಗಾಗ ಗಾಳಿಯೊಳುಸಿರಾಡಿ ನಮ್ಮೆದೆಗೆಚ್ಚರ ತರುತಿರು, ಕೊಳಲೇ


(ದೂರದಲ್ಲಿ 'ರಾಧೇ ನಾಗವೇಣಿ' ಎಂದೂ, 'ಶುಕ್ರವಾಣೀ ಹರಿಣಾಕ್ಷಿ' ಎಂದೂ ಭಯವನ್ನು ಬೀರಿ ಭವವು ಬಂದು ಕವಿದುಕೊಳ್ಳುವ ಪರಿಯನ್ನು ತೋರುವ ನೀತಿಭೀತರಾದ ಬಂಧುಗಳ ಶಬ್ಬವು ಕೇಳಿಬರುತ್ತದೆ. ರಾಧೆ ಬೆಚ್ಚಿ ಏಳುತ್ತಾಳೆ, ಕೊಳಲನ್ನು ಏನು ಮಾಡಬೇಕೆಂದು ಯಾರಿಗೂ ತೋಚದು, ಅವಳಿಂದ ನಾಗವೇಣಿಯ ಕೈಗೆ ನಾಗವೇಣಿಯಿಂದ ಶುಕವಾಣಿಯ ಕೈಗೆ - ಹೀಗೆ ಅದು ಕೈಯಿಂದ ಕೈಗೆ ಸಾಗುತ್ತದೆ. ಕೊನೆಗೆ ಇದು ಎಲ್ಲರ ನ್ಯಾಸವಾಗಿ ಇಲ್ಲೇ ಇರಲೆಂದು ಮರದ ಬುಡದಲ್ಲಿ ಗರಿಕೆ ಬೆಳೆಯುತ್ತಿರುವ ತಾಣದಲ್ಲಿ ಸಖಿಯೊಬ್ಬಳು ಮರೆಸಿಡುತ್ತಾಳೆ. ಇವರು ಹೀಗೆ ಮಾಡುತ್ತಿರುವಾಗ ಸಂಬೋಧನೆಗಳು ಆಗಾಗ ಹತ್ತಿರಬರುವಂತೆ ಕೇಳಬರುತ್ತಿರುತ್ತದೆ.)


ನಾಗವೇಣಿ

ಎಂತೊರೆದರೇನಮ್ಮ ಹೆಣ್ಣಳಲಿಗೆಣೆಯುಂಟೆ ಪೋಪವು ಮುರಳಿ ನೀನಿಲ್ಲೆ ಇ‌ರೌ ಬೃಂದಾವನದೇವಿ ಸೆರಗಿನ ಹುಲ್ಲೊಳು ನಮ್ಮೊಲುಮೆ ನಚ್ಚಾಗಿ ಇಲ್ಲೆ ಇ‌ರೌಲ


(ಸುಯ್ಯುತ್ತಾ ಎಲ್ಲರೂ ಚೆದರುತ್ತಾರೆ. ಸ್ವಲ್ಪ ಹೊತ್ತಾದಮೇಲೆ ಸುದಾಸ ಸುಬಲರೂ ಮತ್ತೆ ಕೆಲವು ಪೌರವೃದ್ಧರೂ ಬಂದು ಸ್ವಲ್ಪ ಹೊತ್ತು ಅತ್ತ ಇತ್ತ ನೋಡಿ ಮೌನವಾಗಿ ಹೊರಟುಹೋಗುತ್ತಾರೆ. ರಂಗ ಎರಡು ನಿಮಿಷ ಶೂನ್ಯವಾಗಿ ಸಾವಿರ ವರುಷಗಳು ಕಳೆದ ಕಾಲವನ್ನು ಸೂಚಿಸುತ್ತದೆ. ಆಮೇಲೆ ಹರಕು ಬಟ್ಟೆಯನ್ನುಟ್ಟ ಗೊಲ್ಲ ಹುಡುಗನೊಬ್ಬನು ರಂಗಕ್ಕೆ ಬಂದು ಮರದ ಬುಡದಿಂದ ಕೊಳಲನ್ನು ತೆಗೆದು ಸ್ವರವನ್ನು ಮೊದಲು ಕೇಳಿಬಂದಂತೆ ನುಡಿಸುತ್ತಿರುತ್ತಾನೆ. ತೆರೆ ಬೀಳುತ್ತದೆ. ಬಳಿಕ ಕವಿ ಪ್ರವೇಶಿಸುತ್ತಾನೆ. ಕವಿಗೆ ಕನಸು ಹರಿದಿರುತ್ತದೆ, ಹೃದಯದ ಭಾವದಾವೇಗಗಳು ಶಾಂತವಾಗುತ್ತಿವೆ, ಈಗ ಗೊಲ್ಲ ಹುಡುಗನ ಕೊಳಲಿನಲ್ಲಿ ಅಷ್ಟು ಮಧುರ ಭಾವಗಳನ್ನು ಆತ ಕಾಣಲಾರ, ವಿಮರ್ಶೆಗೆ ಅದು ಪಾತ್ರವಾಗುತ್ತದೆ.)


ಕವಿ


ಆವನೀ ಮಾಯಾವಿ ಇಂತು ಸಮರಾತ್ರಿಯೊಳು

ಕೊಳಲ ಬಾರಿಸುತಿರುಳ ಮೌನವನು ವ್ಯಧಿಪನಿಂತೆ 

ಬೆಳಕಿರುಳ ಮುದ್ದಿಸಿದೆ ಜನ ಸೊಗದಿ ನಿದ್ದಿಸಿದೆ. ಗಾಳಿ ಬಾಂದೊಟ್ಟಿಲೊಳು ಪವಡಿಸಿದೆ ಹಸುಳೆಯಂತೆ

(ಒಳಮನೆಗೆ ಹೋಗುತ್ತಾ)

ಅಹಹ ಈ ಕೊಳಲುಲಿವೊಳಾವ ನನಸಿದ್ದಿತೋ ನನ್ನ ಬಗೆಯೊಳು ಬಿದ್ದು ಎಂಥ ಕನಸಾಯಿತಿದುವು 

ಈ ಕನಸು ಬಿತ್ತಾಗಿ ಆವೆಡೆಗೆ ತೂರುತ್ತ – ಲೇನಹುದೋ – ಅಂತು ಬಲು ಹಿರಿದಾಯ್ತು ಸಮ್ಮೋದವು

( ತೆರೆ )

ಎರಕೆ


ನೀನಂದು ಗೋಕುಲದಿ ಕೊಳಲ ಬಿಸುಟಂದದೊಳು 

ಭಾರತದ ಬಾಳ್ವೆ ಇರಲಿಂದು ರಸಬತ್ತಿ 

ಮರಳಿ ಬಹೆಯಾ ಕೊಳಲ ತುಟಿಗೆ ತಹೆಯಾ ಎಂಬ 

ಹಂಬಲದೊಳಾವಗಂ ನಿಲೆ ಚಿತ್ತವೃತ್ತಿ ಪುರುಷೋತ್ತಮಾ ನಿನ್ನನಿಂತು ಹಾಡಿದೆನಯ್ಯ ಗೊಲ್ಲತಿಯ ಭಾವದಿಂ ನೆನೆದು ಮೋಹದೊಳು ಮನದ ಸೋಂಕಿಂದಾವ ಕುಂದಾಯ್ತೊ ಭವ್ಯತೆಗೆ 

ಬುಧರೆನ್ನ ಮನ್ನಿಸಲಿ ನುಡಿಯ ನೇಹದೊಳು.


********


ರಾಧೆ ಕೊಳಲನ್ನು ನೋಡುವಳು. ಅವಳಿಗದು ಸಾಮಾನ್ಯ ಕೊಳಲಲ್ಲ.ಯಮುನೆಯ ತೀರದಲ್ಲಿ ಮೊದಲ ಒಲುಮೆಯ ಮಾತನ್ನು ಕಿವಿಯಲ್ಲಿ ಉಲಿದ ಕೊಳಲದು. ಮನದನ್ನನನ್ನು ತೋರಿಸಿಕೊಟ್ಟ ಕೊಳಲು. ಭವಕ್ಕೆಲ್ಲ ಮೆರುಗನ್ನು ತಂದಿತ್ತ ಕೊಳಲು. ಹೊಳೆಯು ಹರಿಯುವುದನ್ನು ನಿಲ್ಲಿಸಿ ಇಡೀ ಕಾಡು ತಲೆದೂಗಿ ಜನರು, ದನಗಳು ಎಲ್ಲ ಸ್ತಬ್ಧರಾಗಿ ಆಲಿಸಿದ ಕೊಳಲು. ನಲವು ಮತ್ತೇರಿ ಚಿಕ್ಕವರು ದೊಡ್ಡವರೆನ್ನದೆ ಎಲ್ಲರನ್ನೂ, ಇಡೀ ಜಗವನ್ನು ಕುಣಿಸಿದ ಕೊಳಲು.


ಇಂತಹಾ ಕೊಳಲು ಇಂದು ಕೃಷ್ಣನ ಉಸಿರಿಲ್ಲದೆ ಕೇವಲ ಬಿದಿರಾಗಿದೆಯೆಂದು ಗೋಳಾಡುವಳು. ಅಮೃತವನ್ನು ಬರಿದಾಗಿಸಿದ ಕಲಶವಾಗಿಹುದು. ಮಹಿಮೆ ಅಳಿದು ಹಗುರಾಗಿಹುದು. ಅವನಿಲ್ಲದೆ ನನ್ನಂತೆ, ಈ ಸಖಿಯರಂತೆ ಬರಿದಾದ ಬೃಂದಾವನದಂತೆ ನೀನೂ ಆಗಿರುವೆಯೆಂದು ಕೊಳಲಿಗೆ ಹೇಳುವಳು. ನಾವು ಸಮದುಃಖಿಗಳಾಗಿಹೆವು. ವಿರಹವನ್ನು ಮೌನದಲ್ಲಿಡು. ಅವನಿದ್ದುದು ಸತ್ಯ. ನಾವೆಲ್ಲ ನಲಿದಾಡಿದ್ದು ಸತ್ಯ. ಇದನ್ನೆಲ್ಲ ನೀನು ಆಗಾಗ ಗಾಳಿಯಲ್ಲಿ ಉಸಿರಾಡಿ ನಮಗೆ ಎಚ್ಚರವನ್ನು ತರುತ್ತಿರು ಎಂದು ಹಾಡುವಳು.


ಅಷ್ಟರಲ್ಲಿ ಹಿರಿಯರು ತಮ್ಮ ತಮ್ಮ ಮಕ್ಕಳ ಹೆಸರು ಕೂಗುತ್ತ ಬರುತ್ತಿರುವ ಸದ್ದು ಕೇಳಿಸುತ್ತದೆ.  ಕೊಳಲು ಒಬ್ಬರ ಕೈಯಿಂದ ಒಬ್ಬರಿಗೆ ದಾಟುತ್ತದೆ. ಕೊನೆಯಲ್ಲಿ ಅದನ್ನು ಅಲ್ಲಿಯೇ ಮರದಡಿ ಹಸಿರಿನಲ್ಲಿ ಬಚ್ಚಿಡುವರು.


ನಾಗವೇಣಿಯು ಕೊಳಲಿಗೆ ಇಲ್ಲಿಯೇ ನಮ್ಮ ಒಲುಮೆಯ ಕುರುಹಾಗಿರು. ಹೆಣ್ಣಿನ ಅಳಲಿಗೆ ಕೊನೆಯುಂಟೆ ಎನ್ನುವಳು. ಎಲ್ಲರೂ ಚೆದರುವರು. ನಂತರ ಹಿರಿಯರೆಲ್ಲ ಬಂದು ಅತ್ತ ಇತ್ತ ನೋಡಿ ಹೊರಡುವರು. ಸ್ವಲ್ಪ ಕಾಲ ಎಲ್ಲೆಡೆ ಮೌನ...ಕ್ಷಣವೊಂದು ಯುಗವಾದಂತೆ..


ಇಷ್ಟು ಹೊತ್ತಿಗೆ ಕವಿಗೆ ಕನಸು ಹರಿದಿರುತ್ತದೆ. ಯಾರೋ ಗೊಲ್ಲ ಹುಡುಗ ನುಡಿಸುತ್ತಿರುವ ಕೊಳಲಗಾನ ಈಗ ಅವನಿಗೆ ಏನೂ ಅನ್ನಿಸುತ್ತಿಲ್ಲ. ಯಾರೋ ಈ ಸರಿರಾತ್ರಿಯಲ್ಲಿ ಕೊಳಲು ನುಡಿಸುತ್ತಿರುವನೆಂಬ ಭಾವ. ಅಷ್ಟೇ. ಆ ಗಾನದಲ್ಲಿ ಜಗತ್ತು  ಮಗುವಿನಂತೆ ನಿದ್ರಿಸಿದೆ.


ಈ ಕೊಳಲಿನಲ್ಲಿ ಅದು ಯಾವ ಸೊಗವಿತ್ತೋ ನನಗೆ ಇಂತಹದೊಂದು ಭವ್ಯ ಕನಸನ್ನು ತೋರಿಸಿತು. ಬಹಳ ಹಿರಿದಾದ ಸಂತಸ ಆಯಿತು ಎಂದುಕೊಳ್ಳುತ್ತ ಕವಿಯು ಒಳಮನೆಗೆ ನಡೆಯುವನು.

( ತೆರೆ ಬೀಳುವುದು )


ಈಗ ಕವಿ ಪುತಿನರವರ ಮಾತುಗಳು.

ಕೃಷ್ಣಾ, ನೀನಂದು ಗೋಕುಲದಲ್ಲಿ ಕೊಳಲನ್ನು ಬಿಸುಟಂತೆ ಇಂದು ಭಾರತದ ಬಾಳ್ವೆಯು ರಸಹೀನವಾಗಿಹುದು. ಮತ್ತೆ ಮರಳುವೆಯಾ, ಕೊಳಲ ನುಡಿಸಿ ಜೀವ ತರುವೆಯಾ ಎಂಬ ಹಂಬಲ ಎದೆಯಲ್ಲಿ ಮೂಡಿಹುದು. 

ಪುರುಷೋತ್ತಮನೆ, ನಿನ್ನನ್ನು ಈ ರೀತಿಯಾಗಿ ಹಾಡಿದೆ. ಸ್ತುತಿಸಿದೆ. ಗೊಲ್ಲತಿಯ ಭಾವದಲ್ಲಿ ಮೋಹದಲ್ಲಿ ನುಡಿದೆ. ನಿನ್ನ ಭವ್ಯತೆಗೆ ಕುಂದು ಆಯಿತೋ ಏನೋ ತಿಳಿಯದು. ಹಾಗಿದ್ದಲ್ಲಿ ಪಂಡಿತರು ನನ್ನನ್ನು ಮನ್ನಿಸಲಿ.


*ಶ್ರೀ ಕೃಷ್ಣಾರ್ಪಣಮಸ್ತು*

ಭಾವಾರ್ಥ: ಸುಬ್ಬುಲಕ್ಷ್ಮಿ  Lrphks Kolar


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ