ಗೋಕುಲ ನಿರ್ಗಮನ 27
ಗೋಕುಲ ನಿರ್ಗಮನ 27
(ಮಹಾನ್ ಕವಿ ಪು. ತಿ. ನರಸಿಂಹಾಚಾರ್ಯರ ಕೃತಿ)
ಗೋಪಿಯರು
(ರಾಧೆಯನ್ನು ನೋಡಿ ಚೇತರಿಸಿಕೊಂಡು)
ಓ ಗೆಳತಿ ರಾಧೇ
ಓ ಗೆಳತಿ ರಾಧೇ
ಎಲ್ಲಿದ್ದೆಯೇ
ನೀನದೆಲ್ಲಿದ್ದೆಯೇ
( ಎಂದು ಅವಳನ್ನು ಸುತ್ತಿಕೊಂಡು ಕೊರಳ ಮೇಲೆ ಕೈ ಹಾಕಿಕೊಂಡು ಶೋಕವನ್ನು ವ್ಯಕ್ತಗೊಳುತ್ತಾಹಾಡುತ್ತಾರೆ.)
ಹಾಡು : ರಾಗ - ಶಂಕರಿ
ಕೊಳಲ ತೊರೆದು ಹೋದ - ರಾಧೇ ಮುರಳೀಧರ ಗೋಪಾಲಕೃಷ್ಣ ||ಪ||
ಎಲ್ಲಿ ಇದ್ದೆಯೇ
ಎತ್ತ ಪೋದೆಯೇ
ಸಮಯದಿ ಕೃಷ್ಣನ ತಡೆಯದೆ ರಾಧೇ ||ಅ.ಪ| ಕ್ರೂರ ಅಕ್ರೂರ ಮಧುರೆಗೆ ಕರೆಯೆ
ಈ ನೆವ ಸಾಕಾಯ್ತೆಮ್ಮನು ತೊರೆಯ
ಮರಳುವನೋ ಹಿಂದುಳಿಯುವನೋ ಸಖೀ ಆತನ ಮರ್ಮವನಾರು ಬಲ್ಲರೇ – ಕೊಳಲತೊರೆದು
ಹೂಹೂಗಲೆಯುವ ದುಂಬಿಯ ಚೆಂದದ
ಕಂಗಳ ಮುಟ್ಟುತಲರೆಚಣ ತಳುಗದೆ
ಒಲಿದವರಿಗಿರುವ ನಾಚಿಕೆಯಿಂದಲಿ
ಸನ್ನೆಯೊಳಗೆ ನೀ ಎಲ್ಲೌ ಎನ್ನುತ – ಕೊಳಲ ತೊರೆದು
ಕಮಲವ ತೋರದ ಕೆಸರಿನ ಕೆರೆಯ ಬಯಸದಾನೆಯೊಲು ನಡೆದನು ಇನಿಯ
ನಿನ್ನದುಳಿದು ಮಿಕ್ಕೊಲುಮೆಗೆ ದಕ್ಕನು
ಪೋ ರಾಧೇ ಬೇಗ ಪೋ ರಾಧೇ
ಪೋ ರಾಧೇ ಬೇಗ ಪೋ ರಾಧೇ
ಕೃಷ್ಣನೆರೆಯ ಪೋ ಪಯಣವ ನಿಲ್ಲಿಸೆ – ಕೊಳಲ ತೊರೆದು
ರಾಧೆ
ಹಾಡು : ರಾಗ - ಸೋಹನಿ
ಹಾ ಹೊರಟನೇ - ಪಯಣ ಹೊರಟನೇ
ಹಾ ತೊರೆದನೇ ಕೊಳಲ ತೊರೆದನೇ
ನೆನೆದನೇ – ಎನ್ನ ನೆನೆದನೇ
ಮರಳನೇ ಇನ್ನು ಮರಳನೇ
ಏನುಗೈವೆ ನಾನೇನುಗೈಯಲೇ
ಪೇಳಿರಿ ಸಖಿಯರೆ ಪೇಳಿ ಸಖಿಯರೇ_
ಕೊಳಲ ತೊರೆದು ಪೋದ – ಗೆಳತೀ ಮನಮೋಹನ ಗೋಪಾಲಕೃಷ್ಣ
ಒಲಿವೊಡೆ ಒಲಿದೇ ಒಲಿವನವ
ಉಳಿವೊಡೆ ಉಳಿದೇ ಉಳಿವನವ ತೊರೆವೊಡೆ ತೊರೆದೇ ತೊರೆವನವ
ಮರೆವೊಡೆ ಮರೆತೇ ಮರೆವನವ
ಅಂಥರಿಲ್ಲ ಪುರುಷೋತ್ತಮನವನು - ಕೊಳಲ ತೊರೆದು
ಎರೆಯೆ ನಿಲುವನೇ ಹಾ
ಬರಿ ಸವಿಯ ನುಡಿಯನೇ ಹಾ
ಮರುಳೆ ಮರುಳೆ ಪೋ ಮರಳುವೆನೆನ್ನುತ ಮಳ ನುಡಿದು ಹೊರಹೊರಡುವನಲ್ಲದೆ - ಕೊಳಲತೊರೆದು
ಬಳಿಗೆ ಪೋಪೆನೆಂತು – ಹಿರಿಯರ
ನಡುವೆ ಸುಳಿವೆನೆಂತು
ಸುಡಸುಡೆನ್ನ ಭಯನಾಚಿಕೆಗಳ ಸಖಿ
ಕೊನೆಕಣ್ ಸೋಕಿಗು ಹೊರಗಾದೆನೆ ನಾ ಕೊಳಲ ತೊರೆದು
ಸಖಿಯರು
ಕೊಳಲ ಕೊಳ್ಳು ಸಖಿ
ಕೊಳಲ ಕೊಳ್ಳು ಸಖಿ
ಅಳಲ ತಾಳಿಕೊಳ್ಳೆ
ಬೆಚ್ಚಗಿಹುದಿನ್ನು ತುಟಿಯ ಸೋಂಕಿಂದ
ಪ್ರಾಣರಸದಿಂದ ಕೊಳ್ಳೆ
(ರಾಧೆ ಕೈಗೊಂಡು ಮೋಹವಾಂತು ಹಾಡುತ್ತಾಳೆ.)
***********
ಗೋಪಿಯರು ರಾಧೆಯನ್ನು ಇಷ್ಟು ಹೊತ್ತು ಎಲ್ಲಿದ್ದೆ ಎಂದು ಕೇಳುತ್ತಾರೆ. ಶೋಕರಸ ಮೂಡಿದೆ.
ಕೊಳಲನ್ನು ತೊರೆದು ಹೋದ ರಾಧೇ, ನಮ್ಮನ್ನೆಲ್ಲ ಬಿಟ್ಟು ಹೋದ. ನೀನು ಎಲ್ಲಿದ್ದೆ? ಸಮಯದಲ್ಲಿಕೃಷ್ಣನನ್ನು ತಡೆಯದೆ ಎಲ್ಲಿ ಹೋಗಿದ್ದೆ? ಅಕ್ರೂರನು ಬಂದು ಮಧುರೆಗೆ ಕರೆದ ನೆವವೇ ನಮ್ಮನ್ನೆಲ್ಲತೊರೆಯಲು ಸಾಕಾಯಿತು.
ಹೂವಿಂದ ಹೂವಿಗೆ ಅಲೆಯುವ ದುಂಬಿಯಂತೆ ಒಲಿದವರನ್ನು ಬಿಟ್ಟು ಕೊಳಲನ್ನೂ ಬಿಟ್ಟುಹೊರಟ. ಕಮಲಗಳಿಲ್ಲದ ಕೊಳವನ್ನು ಆನೆಯು ತೊರೆತುವಂತೆ ನೀನಿಲ್ಲದ ಈ ಜಾಗವನ್ನುತೊರೆದನು. ಬೇರೆ ಎಲ್ಲರ ಒಲುಮೆಗೆ ಅವನು ದಕ್ಕದಾದನು.
ಓ ರಾಧೇ...ಕೃಷ್ಣನೆಡೆಗೆ ತೆರಳಿ ಅವನ ಪಯಣವನ್ನು ನಿಲ್ಲಿಸು...ಬೇಗ ಹೋಗು ಎಂದು ಹಾಡುವರು.
ರಾಧೆಯು ಶೋಕದಿಂದ ಹೇಳುವಳು. ಅಯ್ಯೋ, ಹೊರಟನೇ? ಕೊಳಲ ತೊರೆದನೇ? ನನ್ನನ್ನುನೆನೆದನೇ? ಇನ್ನು ಮರಳಿ ಬಾರನೇ?
ಏನು ಮಾಡಲಿ ನಾನು ಹೇಳಿರಿ ಸಖಿಯರೇ..ಕೊಳಲ ತೊರೆದು ಹೋದನಲ್ಲ. ಒಲಿದರೆ ಒಲಿದೇಬಿಡುವ, ಇಲ್ಲದಿದ್ದರೆ ಸುಮ್ಮನೇ ಇದ್ದುಬಿಡುವ, ತೊರೆದರೆ ತೊರೆದೇ ಬಿಡುವ ಮರೆತರೆ ಮರೆತೇಬಿಡುವನವನು. ಅವನಂತಹ ಪುರುಷೋತ್ತಮ ಬೇರಿಲ್ಲ. ಹೇಳಿದರೆ ಉಳಿಯುವನೇ ಗೆಳತಿ, ಬರಿದೇಸವಿಮಾತುಗಳನ್ನು ಆಡುವನು. ಮರುಳೆ, ಹೋಗು, ನಾನು ಮತ್ತೆ ಮರಳುವೆನೆಂದು ಹೇಳುವನುಅಷ್ಟೇ. ಅವನ ಬಳಿಗೆ ಹೇಗೆ ಹೋಗಲಿ? ನನ್ನ ಭಯ, ನಾಚಿಕೆಗಳು ಸುಡಲಿ. ಕೊನೆಯ ಬಾರಿನೋಡಲೂ ಆಗದ ಹಾಗಾದೆನಲ್ಲ ಸಖೀ...ಗೋಳಿಡುವಳು.
ಗೋಪಿಯರು ಕೊಳಲನ್ನು ಅವಳ ಕೈಗೆ ಕೊಟ್ಟು ಸಮಾಧಾನ ಮಾಡುವರು. ತೆಗೆದುಕೋ ಈಕೊಳಲನ್ನು. ಮಾಧವನ ತುಟಿಯ ಸೋಂಕಿನಿಂದ ಇನ್ನೂ ಬೆಚ್ಚಗಿಹುದು. ತಗೋ ಎನ್ನಲುಪುರಾವೆಗಳಿವೆ ರಾಧೆ ಮೋಹದಿಂದ ಹಾಡತೊಡಗುವಳು.
ಭಾವಾರ್ಥ: ಸುಬ್ಬುಲಕ್ಷ್ಮಿ
ಕಾಮೆಂಟ್‌ಗಳು