ಶ್ರೀದೇವಿ ಕಳಸದ
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ ಅವರು ಮುದ್ರಣ, ಎಲೆಕ್ಟ್ರಾನಿಕ್ ಮಾಧ್ಯಮ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಪತ್ರಕರ್ತೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಮೂಲಕ ಕಲೆ, ಸಾಹಿತ್ಯ, ಸಂಗೀತ, ಮಹಿಳೆ ಮತ್ತು ಮಾನವಾಸಕ್ತಿ ವಿಷಯಗಳಲ್ಲಿ ಗಮನಾರ್ಹ ಕಾರ್ಯಗಳನ್ನು ಮಾಡಿದ್ದಾರೆ. ಅವರೊಬ್ಬ ದಿಟ್ಟ ಪತ್ರಕರ್ತೆ, ಸಂಪಾದಕಿ, ಸಂಗೀತಗಾರ್ತಿ, ಕವಯಿತ್ರಿ, ನಿರೂಪಕಿ, ಹೊಸ ರೀತಿಯ ಆಕರ್ಷಕ ಅಂಕಣಗಳನ್ನು ಮೂಡಿಸಿದ ಸೃಜನಶೀಲೆ, ನೂರಾರು ಜನರು ಸೃಜನಶೀಲ ಬರೆವಣಿಗೆಗೆ ತೊಡಗಿಕೊಳ್ಳಲು ಪ್ರೇರೇಪಿಸಿದ ಬಹುಮುಖಿ.
ಆಗಸ್ಟ್ 25, ಶ್ರೀದೇವಿ ಕಳಸದ ಅವರ ಜನ್ಮದಿನ. ಅವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ. ಇವರ ಬಾಲ್ಯ ಕಳೆದದ್ದು ಬೈಲಹೊಂಗಲ ತಾಲೂಕಿನ ದೊಡ್ಡವಾಡ ಗ್ರಾಮ. ಅಮ್ಮ ಕೌಸಲ್ಯ ಕಳಸದ. ತಂದೆ ಡಾ. ದೇವದಾಸ ಕಳಸದ. ಇಬ್ಬರೂ ಶಿಕ್ಷಕರು. ಶ್ರೀದೇವಿ ಮಾಧ್ಯಮಿಕ ಶಾಲೆಯಿಂದ ಪದವಿತನಕದ ವಿದ್ಯಾಭ್ಯಾಸವನ್ನು ಧಾರವಾಡದಲ್ಲಿ ಪೂರೈಸಿದರು. ಕರ್ನಾಟಕ ಕಾಲೇಜಿನಲ್ಲಿ ಪದವಿ ಪಡೆದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎಸ್‍ಸಿ ಇನ್ ಮಾಸ್ ಕಮ್ಯೂನಿಕೇಷನ್ ಅಂಡ್ ಜರ್ನಲಿಸಂ ವ್ಯಾಸಂಗ ಮಾಡಿದರು.
ಅವರಿಗೆ ಚಿಕ್ಕಂದಿನಿಂದಲೂ ಸಂಗೀತ ಮತ್ತು ಕಲೆಗಳಲ್ಲಿ ಆಸಕ್ತಿ. 6ನೇ ವಯಸ್ಸಿನಿಂದಲೇ ಸಂಗೀತ ಕಲಿಕೆಯಲ್ಲಿ ತೊಡಗಿದರು. ಚನ್ನವೀರಯ್ಯಸ್ವಾಮಿ ಮೊದಲ ಗುರುಗಳು. ಮುಂದೆ ಸೋಮನಾಥ ಮರಡೂರ, ಚಂದ್ರಶೇಖರ ಪುರಾಣಿಕಮಠ, ಶ್ರೀಪಾದ ಹೆಗಡೆ, ಪರಮೇಶ್ವರ ಹೆಗಡೆ ಮುಂತಾದವರ ಬಳಿ ಇವರ ಸಂಗೀತ ಸಾಧನೆ ಸಾಗಿತು. 1990-2000 ಅವಧಿಯಲ್ಲಿ ಇವರಿಗೆ ನವದೆಹಲಿಯ ಸೆಂಟರ್ ಫಾರ್ ಕಲ್ಚರಲ್ ರಿಸೋರ್ಸ್ ಟ್ರೈನಿಂಗ್ (CCRT) ಇಂದ ಪ್ರತಿಭಾನ್ವಿತ ಶಿಷ್ಯವೇತನ ಸಂದಿತ್ತು. 25 ವರ್ಷಗಳ ಕಾಲ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ ಇವರು ವಿದ್ವತ್ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದವರು. 400ಕ್ಕೂ ಹೆಚ್ಚು ಸಾರ್ವಜನಿಕ ಕಛೇರಿ ಪ್ರಸ್ತುತಿ ಮಾಡಿದ್ದಾರೆ. ಹಲವಾರು ರಂಗಪ್ರಯೋಗಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇವರು ಆಕಾಶವಾಣಿ ಧಾರವಾಡ ಕೇಂದ್ರದಿಂದ ಮಾನ್ಯತೆ ಪಡೆದ ಸಂಗೀತ ಕಲಾವಿದೆ. ಅನೇಕ ಕಲಾವಿದರಿಗೆ ಹಾರ್ಮೋನಿಯಂ ಸಹವಾದನ ನೀಡಿದ್ದಾರೆ. 2018ರಲ್ಲಿ ಆಫ್ರಿಕಾದ ಟ್ಯುನೀಶಿಯಾದಲ್ಲಿ ನಡೆದ ಇಂಡಿಯನ್ ಮ್ಯೂಸಿಕ್ ಫೆಸ್ಟಿವಲ್ನಲ್ಲಿ ಭಾಗವಹಿಸಿದ್ದಾರೆ. ಗಂಗೂಬಾಯಿ ಹಾನಗಲ್ ಅವರು ನಿಧನರಾದ ಸಂದರ್ಭದಲ್ಲಿ ಅವರ ಶಿಷ್ಯಂದಿರಿಂದ ನಮನ ಸೂಚಕವಾದ 'ದೇವರ ದೇಣಗಿ' ಬರಹಗಳನ್ನು 'ಮಯೂರ' ಮಾಸಪತ್ರಿಕೆಯಲ್ಲಿ ಓದಬಹುದು.
ಪ್ರಸ್ತುತ ಶ್ರೀದೇವಿ ಕಳಸದ ಅವರು 'ಆಲಾಪಿನಿ' ಎಂಬ ಸಂಗೀತ ಶಾಲೆಯ ಮೂಲಕ ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತ ಶಿಕ್ಷಣವನ್ನೂ ನೀಡುತ್ತಿದ್ದಾರೆ. ಕಲಾವಿದೆಯೂ ಆದ ಶ್ರೀದೇವಿ ಅವರು ರಚಿಸಿದ ಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 'ಹಾಡಾಗದ ಸಾಲುಗಳು' ಕವನ ಸಂಕಲನವು ಅಂಕಿತ ಪುಸ್ತಕದಿಂದ ಪ್ರಕಟವಾಗಿದೆ. ಇದಕ್ಕೆ ಪ್ರೊ. ಯು. ಆರ್. ಅನಂತಮೂರ್ತಿ ಅವರ ಬೆನ್ನುಡಿ ಇದೆ. 'ಯಂಕ್ ಪೋಸ್ಟ್' ಕಥಾಸಂಕಲನ ಧಾರವಾಡದ ಮನೋಹರ ಗ್ರಂಥಮಾಲೆಯಿಂದ ಹೊರಹೊಮ್ಮಿದೆ. ಇದಕ್ಕೆ ವಿವೇಕ ಶಾನಭಾಗ ಅವರ ಬೆನ್ನುಡಿ ಇದೆ. 'ನೀರು ಹೇಳುವ ನೀರೆಯರ ಕಥೆಗಳು' ಎಂಬ ಸಂಶೋಧನಾ ಪ್ರಬಂಧಕ್ಕಾಗಿ ಇವರಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಫೆಲೋಶಿಪ್ ಸಂದಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ವಿವಿಧ ರಾಜ್ಯಗಳಲ್ಲಿನ ಕವಿ ಸಮ್ಮೇಳನಗಳಲ್ಲಿ ಹಾಗೂ ಪ್ರತಿಷ್ಠಿತ ವೇದಿಕೆಗಳಲ್ಲಿ ಇವರು ತಮ್ಮ ಕವಿತಾ ವಾಚನ ಮಾಡಿದ್ದಾರೆ.
ಶ್ರವ್ಯಮಾಧ್ಯಮದಲ್ಲಿಯೂ ಇವರು ಕಥೆಗಳನ್ನು ವಾಚಿಸಿದ್ದಾರೆ. ಇವರು 2006ರಲ್ಲಿ ಚಂದನ ಮತ್ತು ಝೀ ಕನ್ನಡ ವಾಹಿನಿಗಳ ಮೂಲಕ ನಿರೂಪಣೆ ಆರಂಭಿಸಿದರು. ಮುಂದೆ ಅನೇಕ ಸಾರ್ವಜನಿಕ ಕಾರ್ಯಕ್ರಮಗಳ ನಿರೂಪಣೆಯಲ್ಲಿಯೂ ತೊಡಗಿಕೊಂಡರು.
ಶ್ರೀದೇವಿ ಕಳಸದ ಕಳೆದ 19 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದಾರೆ. ವಿಜಯ ಕರ್ನಾಟಕ, ಪ್ರಜಾವಾಣಿ, ಸುವರ್ಣ ನ್ಯೂಸ್, ಟಿವಿ9 ಡಿಜಿಟಲ್ ನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಪ್ರಸಕ್ತದಲ್ಲಿ 'ಕೊನರು' ಎಂಬ ಸಾಹಿತ್ಯ, ಕಲೆ, ಸಂಸ್ಕೃತಿಗೆ ಮೀಸಲಾದ ಪೋರ್ಟಲ್ ಅನ್ನು ಸಮಾನ ಮನಸ್ಕರೊಂದಿಗೆ ನಡೆಸುತ್ತಿದ್ದಾರೆ.
ಪತ್ರಕರ್ತೆಯಾಗಿ ಶ್ರೀದೇವಿ ಅವರು ಮಾಡಿದ ಹಲವು ಅನ್ವೇಷಕ ಬರಹಗಳಂತೂ ಬೆರಗು ಹುಟ್ಟಿಸುವಂತಹ ಸಾಹಸ ಪ್ರವೃತ್ತಿಯವು. ಈ ನಿಟ್ಟಿನಲ್ಲಿ 'ಮಂಗಳಮುಖಿಯರ' ಬದುಕಿನ ವಾಸ್ತವ ಕ್ಷೇತ್ರದ ಬಗ್ಗೆ ತೆರೆದಿಟ್ಟ ಅಸಾಮಾನ್ಯ ಬರಹ ನೆನಪಾಗುತ್ತದೆ. ಇವರ ವಿವಿಧ ಸಾಂಸ್ಕೃತಿಕ ನೆಲೆಗಳ ಪ್ರಸ್ತುತಿಯ ಬಗ್ಗೆ ನೋಡುವಾಗ ಇತ್ತೀಚೆಗೆ 'ಅಕ್ಷರ ಸಂಗಾತ' ಮಾಸಪತ್ರಿಕೆಯಲ್ಲಿ ಮೂಡಿಸಿದ ಪಂಡಿತ್ ರಾಜೀವ್ ತಾರಾನಾಥರ ಜೊತೆಗಿನ ಭವ್ಯ ಮಾತುಕತೆ ನೆನಪಾಗುತ್ತದೆ.
ವಿವಿಧ ಪತ್ರಿಕೆಗಳಲ್ಲಿನ ವಿಶೇಷಾಂಕಗಳನ್ನು ನಿರ್ವಹಿಸಿದಾಗಲೆಲ್ಲ, ಶ್ರೀದೇವಿ ಅವರು ಪ್ರಚಾರದಲ್ಲಿಲ್ಲದ ಅನೇಕ ಪ್ರತಿಭಾವಂತರ ಬದುಕು, ಸಾಧನೆ ಮತ್ತು ಬರಹ ಸಾಮರ್ಥ್ಯಗಳನ್ನು ಹೊರಹೊಮ್ಮಿಸುವ ಸುಂದರ ಕೆಲಸ ಮಾಡಿದ್ದಾರೆ. ಆ ಮೂಲಕ ಅನೇಕ ಪ್ರತಿಭೆಗಳು ಕನ್ನಡ ಸಾಂಸ್ಕೃತಿಕ ಲೋಕಕ್ಕೆ ತಿಳಿಯುವಂತಾಗಿದೆ. ಅನೇಕ ಪ್ರತಿಭೆಗಳಿಗೆ ಇವು ಪ್ರೇರಣೆ ಮತ್ತು ಪೋಷಣೆಯನ್ನೂ ಒದಗಿಸಿವೆ. ಟಿವಿ9ನಲ್ಲಿಯೇ ಅವರು 23 ವಿನೂತನ ಅಂಕಣಗಳನ್ನು ಮೂಡಿಸಿದ್ದರು. ಅವರು ಈ ಅಂಕಣಗಳಿಗೆ ನೀಡಿರುವ ಅವಿತಕವಿತೆ, ಹಾದಿಯೇ ತೋರಿದ ಹಾದಿ, ನೆರೆನಾಡ ನುಡಿಯೊಳಗಾಡಿ, ಅಚ್ಚಿಗೂ ಮೊದಲು, ಶೆಲ್ಫಿಗೇರುವ ಮುನ್ನ, ಜೀವವೆಂಬ ಜಾಲದೊಳಗೆ, ಅಂಕಪರದೆ, ಮಾನವ ಜಾತಿ ತಾನೊಂದೆ ವಲಂ, ಕವಿತೆ ಅವಿತಿಲ್ಲ, ಸ್ವಭಾವ ಪ್ರಭಾವ, ಅಭಿಜ್ಞಾನ, ಕಾಡೇ ಕಾಡತಾವ ಕಾಡ, ನಾನೆಂಬ ಪರಿಮಳದ ಹಾದಿಯಲಿ ಮುಂತಾದ ಹೆಸರುಗಳೂ ಒಂದಕ್ಕಿಂತ ಒಂದು ಮಧುರವಾದದ್ದು. 'ನಾನೆಂಬ ಪರಿಮಳದ ಹಾದಿಯಲ್ಲಿ' ಸರಣಿಯಲ್ಲಿ ಮೂಡಿದ ನಮ್ಮ ಸುತ್ತಮುತ್ತಲೇ ಇರುವ ಸ್ತೀಯರು, ತಮಗಿದ್ದ ಹಲವು ಮಿತಿ, ಬಂಧನಗಳನ್ನೆಲ್ಲ ಮೀರಿ, ಪ್ರತಿ ಸವಾಲುಗಳನ್ನೂ ಸಾಧನೆಯ ಮೆಟ್ಟಿಲುಗಳನ್ನಾಗಿಸಿಕೊಂಡು ಮೇಲೇರಿದ ಚಿತ್ರಣ, ಅವರವರ ಸಹಜ ಮಾತುಗಳಲ್ಲೇ ಕಥಾನಕವಾದದ್ದು ಕನ್ನಡ ಸಾಹಿತ್ಯ ಲೋಕದ ವಿಶಿಷ್ಟ ಪ್ರಯತ್ನಗಳಲ್ಲೊಂದು.
ಹೀಗೆ ಶ್ರೀದೇವಿ ಕಳಸದ ಅವರು ತಾವಿಟ್ಟ ಹೆಜ್ಜೆಯಲ್ಲೆಲ್ಲ ಹೊಸತನದ ಹೂವರಳಿಸಿದವರು. ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Shreedevi Kalasad
ಕಾಮೆಂಟ್‌ಗಳು