ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಸ್.ಐ. ಪದ್ಮಾವತಿ


 ಎಸ್.ಐ. ಪದ್ಮಾವತಿ


ಪದ್ಮವಿಭೂಷಣ ಡಾ.ಶಿವರಾಮಕೃಷ್ಣ ಅಯ್ಯಂಗಾರ್‌ ಪದ್ಮಾವತಿ ನಮ್ಮ ದೇಶದ ಪ್ರಪ್ರಥಮ ಮಹಿಳಾ ಹೃದಯತಜ್ಞೆ.  ಸಾಮಾನ್ಯ ಜನರ ಉದ್ಧಾರಕ್ಕಾಗಿ ಜೀವವನ್ನು ಮುಡಿಪಾಗಿಟ್ಟ ಈ ಮಹಾನ್ ವೈದ್ಯೆಯ ಸಂಸ್ಮರಣಾ ದಿನವಿದು.  

ಪದ್ಮಾವತಿಯವರು 1917ರ ಜೂನ್ 20ರಂದು ಬರ್ಮಾದ (ಈಗಿನ ಮ್ಯಾನ್ಮಾರ್)‌ ರಂಗೂನ್‌ನಲ್ಲಿ ಜನಿಸಿದರು. ಕೊಯಮತ್ತೂರು ಮೂಲದ ಮಧ್ಯಮವರ್ಗದ ಇವರ ತಂದೆತಾಯಂದಿರು ಜೀವನ ನಿರ್ವಹಣೆಗೆಂದು ಬ್ರಿಟಿಷ್‌ ಆಡಳಿತದಲ್ಲಿದ್ದ ಬರ್ಮಾಕ್ಕೆ ವಲಸೆ ಹೋಗಿದ್ದರು. ಹೆಣ್ಣುಮಕ್ಕಳನ್ನು ಓದಿಗೆ ಕಳುಹಿಸುವುದು ಅಪರೂಪವಾಗಿದ್ದ ಆ ಕಾಲದಲ್ಲೇ,  ಪದ್ಮಾವತಿಯನ್ನು ತಂದೆ-ತಾಯಂದಿರು ಶಾಲೆಗೆ ಕಳುಹಿಸಿದರು. ಅಸಾಧಾರಣ ಬುದ್ದಿವಂತೆಯಾಗಿದ್ದ ಪದ್ಮಾವತಿಯವರು ಚೆನ್ನಾಗಿ ಓದಿ, ರಂಗೂನಿನ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿಯನ್ನು  ಗಳಿಸಿದರು. ಬರ್ಮಾದಲ್ಲಿ ನಡೆಯುತ್ತಿದ್ದ ಯುದ್ಧ ಹಾಗೂ ಅಲ್ಲಿದ್ದ ಭಾರತೀಯರ ಬಗೆಗಿನ ಅಸಹನಾತ್ಮಕ ವಾತಾವರಣದ ಕಾರಣ‍, ಡಾ.ಪದ್ಮಾವತಿಯವರ ಕುಟುಂಬ ಭಾರತಕ್ಕೆ ಹಿಂತಿರುಗಿತು. 

ಡಾ. ಪದ್ಮಾವತಿ ಅವರು ಭಾರತದಲ್ಲಿ ಸ್ವಲ್ಪಕಾಲ ವೈದ್ಯವೃತ್ತಿ ನಡೆಸಿದ ನಂತರ,  ಎಫ್.ಆರ್.ಸಿ.ಪಿ ( ಫೆಲೋ ಆಫ್‌ ರಾಯಲ್‌ ಕಾಲೇಜ್‌ ಆಫ್‌ ಫಿಸಿಷಿಯೆನ್ಸ್) ವ್ಯಾಸಂಗಕ್ಕಾಗಿ 1949ರಲ್ಲಿ ಲಂಡನ್‌ಗೆ ತೆರಳಿದರು. ಆ ಕಾಲದಲ್ಲಿ ಒಬ್ಬ ಬಡ ಕುಟುಂಬದ ಮಹಿಳೆ, ಮೆಡಿಕಲ್ ಓದುವುದು, ಎಫ್.ಆರ್.ಸಿ.ಪಿ ಗಳಿಸುವುದು, ಊಹೆಗೆ ನಿಲುಕದ ಸಂಗತಿಯಾಗಿತ್ತು. ಮುಂದೆ ಇವರಿಗೆ ಅಮೆರಿಕದ ಪ್ರತಿಷ್ಠಿತ ಸೇಂಟ್‌ ಜಾನ್ಸ್‌ ಹಾಪ್ಕಿನ್ಸ್‌ ವಿಶ್ವವಿದ್ಯಾನಿಲಯದಿಂದ ಫೆಲೋಷಿಪ್‌ ಗೌರವ ಸಂದಿತು. ಅಲ್ಲಿ ಅವರು ಪ್ರಸಿದ್ಧ ಹೃದಯತಜ್ಞೆ, ಡಾ. ಹೆಲೆನ್‌ ಟೌಸಿಂಗ್‌ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದರು.  ಮುಂದೆ ಬೋಸ್ಟನ್‌ನ ಹಾರ್ವರ್ಡ್‌ ವಿಶ್ವವಿದ್ಯಾನಿಲಯದಲ್ಲಿ ಇವರಿಗೆ, ವೈದ್ಯಕೀಯ ಹೃದಯಶಾಸ್ತ್ರ ಪಿತಾಮಹರೆಂದೆನಿಸಿದ್ದ ಡಾ.ಪೌಲ್‌ ಡೂಡ್ಲೆ ವೈಟ್‌ ಅವರ ಮಾರ್ಗದರ್ಶನ ಪ್ರಾಪ್ತವಾಯಿತು. 

ಅಮೆರಿಕಾ, ಇಂಗ್ಲೆಂಡ್‌ನಲ್ಲಿ ತಮ್ಮ ಅನುಭವಕ್ಕೆ ವಿಫುಲ ಅವಕಾಶಗಳು ಕೈಬೀಸಿ ಕರೆಯುತ್ತಿದ್ದರೂ, ಪದ್ಮಾವತಿ ಅವರು 1953ರಲ್ಲಿ ಭಾರತಕ್ಕೆ ಹಿಂತಿರುಗಿದರು. ಬಂದವರೇ ದೆಹಲಿಯ ಲೇಡಿ ಹಾರ್ಡಿಂಗ್‌ ಮೆಡಿಕಲ್‌ ಕಾಲೇಜಿನಲ್ಲಿ ಭಾರತದ ಪ್ರಥಮ ಮಹಿಳಾ ಹೃದಯತಜ್ಞೆಯಾಗಿ ಕಾರ್ಯನಿರ್ವಹಣೆ ಆರಂಭಿಸಿದರು.
ಅಲ್ಪ ಕಾಲದಲ್ಲೇ ತಮ್ಮ ಛಾಪು ಮೂಡಿಸಿ, ವಿದ್ಯಾರ್ಥಿಗಳು ಮತ್ತು ರೋಗಿಗಳ ಅಚ್ಚುಮೆಚ್ಚಿನ ವೈದ್ಯರಾಗಿ ಹೆಸರಾದರು.  ಸದಾ ಮಂದಸ್ಮಿತರಾಗಿದ್ದ ಇವರನ್ನು ಇವರ  ಸಹೋದ್ಯೋಗಿಗಳು ಸಂಬೋಧಿಸುತ್ತಿದ್ದುದೇ  ಡಾ.ಎಂಡಿಎಸ್‌(Million Dollar Smile‌) ಎಂದು!

ಡಾ. ಪದ್ಮಾವತಿಯವರು ತಮ್ಮ ದೂರದೃಷ್ಟಿ ಮತ್ತು ನಿಷ್ಠೆಗಳಿಂದ ಅನೇಕ ಉತ್ತಮ ಕಾರ್ಯಗಳಿಗೆ ಬುನಾದಿ ಹಾಕಿದರು. ಹೃದಯದ ಕಾಯಿಲೆಗಳನ್ನು ಗುರುತಿಸಿ ಚಿಕಿತ್ಸೆ ನೀಡಲು ಸಹಾಯಕವಾಗಬಲ್ಲ ಕ್ಯಾಥ್‌ ಲ್ಯಾಬ್‌ (cardiac catheterization lab)
ಗಳನ್ನು, ಹೃದಯ ಚಿಕಿತ್ಸಾಲಯಗಳನ್ನು ಅನೇಕ ಕಡೆ ಸ್ಥಾಪಿಸುವಲ್ಲಿ ಕಾರಣಕರ್ತರಾದರು. ಅಲ್ಲದೆ ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣ ವ್ಯವಸ್ಥೆಯಲ್ಲಿ ಹೃದಯಕ್ಕೆ ಸಂಬಂಧಪಟ್ಟ ವಿಶೇಷ ಶಾಖೆಗಳನ್ನು ಮೂಡಿಸಲು ಶ್ರಮಿಸಿದರು. ಆಲ್‌ ಇಂಡಿಯಾ ಹಾರ್ಟ್‌ ಫೌಂಡೇಶನ್‌ ಸಂಸ್ಥೆಯನ್ನು ಸ್ಥಾಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದರು. ಇದರಿಂದ ಹೃದಯ ಬೇನೆಯುಳ್ಳ ರೋಗಿಗಳಿಗೆ, ಅದರಲ್ಲೂ ಬಡ ಜನತೆಗೆ ಸಮರ್ಥ ವೈದ್ಯಕೀಯ ಸೇವೆಯ ಲಾಭ ದೊರಕುವಂತಾಯಿತು.  ಎಲ್ಲೆಡೆ ಇವರ ಕೀರ್ತಿ ವ್ಯಾಪಿಸಿತು. ಏಕಕಾಲದಲ್ಲಿ ಲೋಕನಾಯಕ ಆಸ್ಪತ್ರೆ, ಜೆ.ಬಿ.ಪಂತ್‌ ಆಸ್ಪತ್ರೆ ಮತ್ತು  ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಸಂಸ್ಥೆಗಳ ಮುಖ್ಯ ಹೃದಯತಜ್ಞೆ ಹಾಗೂ ಮುಖ್ಯ ಆಡಳಿತಾಧಿಕಾರಿಗಳ ಜವಾಬ್ದಾರಿಯನ್ನು ನಿಭಾಯಿಸಿದ ಹೆಗ್ಗಳಿಕೆ ಇವರದಾಗಿತ್ತು. ಮುಂದೆ ಇವರು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಿರ್ದೇಶಕರಾದರು.‍ ಇವರ ಮುತುವರ್ಜಿಯಲ್ಲಿ ದೆಹಲಿಯಲ್ಲಿ 1981ರಲ್ಲಿ ನ್ಯಾಷನಲ್‌ ಹಾರ್ಟ್‌ ಇನ್ಸಸ್ಟಿಟ್ಯೂಟ್‌ ಆರಂಭಗೊಂಡಿತು.  

ಡಾ. ಪದ್ಮಾವತಿ ಅವರು ತಮ್ಮ ವೈಯಕ್ತಿಕ ಬದುಕಿನ ಕುರಿತು ಚಿಂತಿಸದೆ, ಅವಿವಾಹಿತರಾಗಿದ್ದುಕೊಂಡು,  ಜನಸೇವೆಗೆ ತಮ್ಮನ್ನು ಮುಡಿಪಾಗಿಟ್ಟರು. ತಮ್ಮ 95ರ ವಯಸ್ಸಿನ ತನಕ ಅವಿರತವಾಗಿ ದುಡಿದರು. ತಮ್ಮಂತೆಯೇ ಅವಿವಾಹಿತರಾಗಿಯೇ ಉಳಿದ ಸಹೋದರಿ ಡಾ.ಜಾನಕಿ (ನರರೋಗತಜ್ಞೆ) ಅವರೊಂದಿಗೆ, ಬಡರೋಗಿಗಳ ಹೃದಯ ಶಸ್ತ್ರಚಿಕಿತ್ಸೆಯ ವೆಚ್ಚ ಭರಿಸಲು ಸ್ಥಾಪಿಸಿದ್ದ ಜಾನಕಿ-ಪದ್ಮಾವತಿ ಟ್ರಸ್ಟ್‌ ಗೆ ತಾವು ಗಳಿಸಿದ್ದನ್ನೆಲ್ಲಾ ದೇಣಿಗೆಯಾಗಿ ನೀಡಿದರು. 

ಭಾರತ ಸರ್ಕಾರವು ಡಾ. ಪದ್ಮಾವತಿ  ಅವರಿಗೆ 1967ರಲ್ಲಿ ಪದ್ಮಭೂಷಣ ಮತ್ತು 1992ರಲ್ಲಿ ಇವರಿಗೆ ಪದ್ಮವಿಭೂಷಣ ಪ್ರಶಸ್ತಿ ಗೌರವಗಳನ್ನು ನೀಡಿತು. 2007ರಲ್ಲಿ ಇವರಿಗೆ ಯೋರೋಪಿಯನ್‌ ಹಾರ್ಟ್‌ ಸೊಸೈಟಿಯ ಫೆಲೋಷಿಪ್‌ ಗೌರವ ಸಂದಿತು.

ಶತಾಯುಷಿಗಳಾಗಿ ಸಾರ್ಥಕ ಬದುಕನ್ನು ನಡೆಸಿದ ಡಾ.ಪದ್ಮಾವತಿಯವರು ತಮ್ಮ 103ನೇ ವಯಸ್ಸಿನಲ್ಲಿ,  2020ರ ಆಗಸ್ಟ್ 29ರಂದು ಕೊರೋನಾ ಸೋಂಕಿನ ಕಾರಣದಿಂದ  ನಿಧನರಾದರು. 

ಮಾಹಿತಿ ಕೃತಜ್ಞತೆ: ಡಾ.ಮಹೇಂದ್ರನಾಥ್‌,ನಾಟಿಂಗ್‌ ಹ್ಯಾಮ್‌, ಇಂಗ್ಲೆಂಡ್ ; ಟಿ. ಎಸ್. ಸದಾನಂದ್ ಮತ್ತು ರಮೇಶ್ ಚಂದ್ರ Sadananda T S Ramesh Chandra
                               
On Remembrance Day of first woman cardiologist of India Dr. S.I. Padmavathi 
 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ