ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಿಚರ್ಡ್ ಅಟೆನ್‍ಬರೋ


ರಿಚರ್ಡ್ ಅಟೆನ್‌ಬರೋ

'ಮಹಾತ್ಮ ಗಾಂಧಿಯವರನ್ನು' ಹದಿನೆಂಟು ವರ್ಷಗಳ ತಪಸ್ಸಿನಂತಹ ಪರಿಶ್ರಮದಿಂದ ಅವಲೋಕಿಸಿ 'ಗಾಂಧಿ' ಚಲನಚಿತ್ರ ಮಾಡಿ, ಮಹಾತ್ಮನೆಂದರೆ ಏನೆಂದು ಭಾರತೀಯರಿಗೂ ಸೇರಿದಂತೆ ವಿಶ್ವಕ್ಕೇ ಅದ್ಭುತ ರೀತಿಯಲ್ಲಿ ತೆರೆದಿಟ್ಟವರು ರಿಚರ್ಡ್ ಅಟೆನ್‌ಬರೋ.  ಅವರೊಬ್ಬ ಮಹಾನ್ ರಂಗಕರ್ಮಿ.  ಏಳು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಅವಿರತವಾಗಿ ದುಡಿದ ಮಹಾನ್ ನಟ, ನಿರ್ಮಾಪಕ ಮತ್ತು ದಿಗ್ದರ್ಶಕ.  ಅವರು ರಾಯಲ್ ಅಕಾಡೆಮಿ ಆಫ್ ಡ್ರಾಮಾಟಿಕ್ ಆರ್ಟ್ (RADA) ಮತ್ತು ಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಅಂಡ್ ಟೆಲಿವಿಷನ್ ಆರ್ಟ್ಸ್ (BAFTA)ನ ಅಧ್ಯಕ್ಷರಾಗಿದ್ದರು.  ಜೊತೆಗೆ ಚೆಲ್ಸಿಯಾ ಎಫ್‍ಸಿಯ ಆಜೀವ ಅಧ್ಯಕ್ಷರಾಗಿದ್ದರು.

ಅಟೆನ್‌ಬರೋ 1923ರ ಆಗಸ್ಟ್ 29ರಂದು ಕೇಂಬ್ರಿಡ್ಜ್‌ನಲ್ಲಿ ಜನಿಸಿದರು. ಮ್ಯಾರೇಜ್ ಗೈಡೆನ್ಸ್ ಕೌನ್ಸಿಲ್‌ನ ಸ್ಥಾಪಕ ಸದಸ್ಯರಾದ ಮೇರಿ ಅಟೆನ್‌ಬರೋ (ನೀ ಕ್ಲೆಗ್) ಇವರ ತಾಯಿ.  ಇಮ್ಯಾನುಯೆಲ್ ಕಾಲೇಜಿನಲ್ಲಿ ಫೆಲೋ ಆಗಿದ್ದ ವಿದ್ವಾಂಸ ಮತ್ತು ಶೈಕ್ಷಣಿಕ ನಿರ್ವಾಹಕರಾದ ಫ್ರೆಡ್ರಿಕ್ ಲೆವಿ ಅಟೆನ್‌ಬರೋ ತಂದೆ.  ಈ ದಂಪತಿಗಳ ಮೂವರು ಪುತ್ರರಲ್ಲಿ ರಿಚರ್ಡ್ ಅಟೆನ್‌ಬರೋ ಹಿರಿಯರು. ಅಟೆನ್‌ಬರೋ ಅವರು ಲೀಸೆಸ್ಟರ್‌ನಲ್ಲಿರುವ ವೈಗ್‌ಸ್ಟನ್ ಗ್ರಾಮರ್ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದು, ರಾಯಲ್ ಅಕಾಡೆಮಿ ಆಫ್ ಡ್ರಾಮಾಟಿಕ್ ಆರ್ಟ್ಸ್’ನಲ್ಲಿ ಅಧ್ಯಯನ ಮಾಡಿದರು.

ರಿಚರ್ಡ್ ಅಟೆನ್‌ಬರೋ ಎರಡನೆಯ ಮಹಾಯುದ್ಧದ ಸಮಯದಲ್ಲಿ ರಾಯಲ್ ಏರ್ ಫೋರ್ಸ್‌ಗೆ ಸೇರಿ ಅಲ್ಲಿ ಚಲನಚಿತ್ರ ಘಟಕದಲ್ಲಿ ಸೇವೆ ಸಲ್ಲಿಸಿದರು, ಯುರೋಪಿನ ಮೇಲೆ ಹಲವಾರು ಬಾಂಬ್ ದಾಳಿಗಳನ್ನು ನಡೆಸಿ, ಹಿಂದಿನ ಗನ್ನರ್ ಸ್ಥಾನದಿಂದ ಯುದ್ಧ ಪ್ರಕ್ರಿಯೆಯನ್ನು ಚಿತ್ರೀಕರಿಸಿದರು.

ಅಟೆನ್‌ಬರೋ ಲೀಸೆಸ್ಟರ್‌ನ ಲಿಟಲ್ ಥಿಯೇಟರ್‌ನಲ್ಲಿ ನಟಿಸುತ್ತ ಬಂದರಲ್ಲದೆ ಸಾಯುವವರೆಗೂ ಅದರ ಪೋಷಕರಾಗಿದ್ದರು. 1942ರಲ್ಲಿ 'ಇನ್ ವಿಚ್ ವಿ ಸರ್ವ್'  ಚಲನಚಿತ್ರದಲ್ಲಿ ಅನಾಮದೇಯರಾಗಿ ನಟಿಸಿದ್ದರು.  ಬ್ರಿಯಾನ್ ಡೆಸ್ಮಂಡ್ ಹರ್ಸ್ಟ್ ಅವರ 'ದಿ ಹಂಡ್ರೆಡ್ ಪೌಂಡ್ ವಿಂಡೋ' (1944) ಚಿತ್ರದಲ್ಲಿ ಅಟೆನ್‌ಬರೋ ಮೊದಲ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಅವರು ಲಂಡನ್ ಬಿಲಾಂಗ್ಸ್ ಟು ಮಿ (1948), ಮಾರ್ನಿಂಗ್ ಡಿಪಾರ್ಚರ್ (1950) ಮತ್ತು ಗ್ರಹಾಂ ಗ್ರೀನ್ ಅವರ ಕಾದಂಬರಿ ಬ್ರೈಟನ್ ರಾಕ್ (1947)ನ ಜಾನ್ ಬೌಲ್ಟಿಂಗ್ ಅವರ ಚಲನಚಿತ್ರ ರೂಪಾಂತರದಲ್ಲಿ ಪಿಂಕಿ ಬ್ರೌನ್ ಆಗಿ ಅವರ ಅದ್ಭುತ ಪಾತ್ರವನ್ನು ಮಾಡಿದರು.  ಅವರು 22 ನೇ ವಯಸ್ಸಿನಲ್ಲಿ ಜರ್ನಿ ಟುಗೆದರ್ (1945) ನಲ್ಲಿ RAF ಕ್ಯಾಡೆಟ್ ಪೈಲಟ್ ಆಗಿ ಪ್ರಮುಖ ಪಾತ್ರವನ್ನು ವಹಿಸಿದರು.  1949ರಲ್ಲಿ, ಪ್ರದರ್ಶನಕಾರರು ಅವರನ್ನು ಗಲ್ಲಾಪೆಟ್ಟಿಗೆಯಲ್ಲಿ ಆರನೇ ಅತ್ಯಂತ ಜನಪ್ರಿಯ ಬ್ರಿಟಿಷ್ ನಟ ಎಂದು ಹೆಸರಿಸಿದ್ದರು.

ಅಟೆನ್‌ಬರೋ ತಮ್ಮ ವೃತ್ತಿಜೀವನದ ಆರಂಭದಲ್ಲಿ, ವೆಸ್ಟ್ ಎಂಡ್ ನಿರ್ಮಾಣದ ಅಗಾಥಾ ಕ್ರಿಸ್ಟಿಯ 'ದಿ ಮೌಸ್‌ಟ್ರಾಪ್‌'ನಲ್ಲಿ ನಟಿಸಿದರು.  ಇದು ವಿಶ್ವದ ಅತ್ಯಂತ ದೀರ್ಘಾವಧಿಯ ರಂಗ ನಿರ್ಮಾಣವಾಯಿತು. 1952ರಲ್ಲಿ ಅಂಬಾಸಿಡರ್ಸ್ ಥಿಯೇಟರ್‌ನಲ್ಲಿ ಪ್ರಾರಂಭವಾದ ಪಾತ್ರವರ್ಗದ ಸದಸ್ಯರಲ್ಲಿ ಇವರು  ಮತ್ತು ಇವರ ಹೆಂಡತಿ ಶೀಲಾ ಸಿಮ್ 
ಇಬ್ಬರೂ ಇದ್ದರು.  1974ರಲ್ಲಿ ಸೇಂಟ್ ಮಾರ್ಟಿನ್ ಥಿಯೇಟರ್‌ಗೆ ಸ್ಥಳಾಂತರಗೊಂಡರು; ಇಲ್ಲಿನ ಚಟುವಟಿಕೆಗಳು 2020 ರಲ್ಲಿ COVID-19 ಸಾಂಕ್ರಾಮಿಕ ರೋಗದಿಂದ ಸ್ಥಗಿತಗೊಳ್ಳುವವರೆಗೆ ಸುಮಾರು ಏಳು ದಶಕಗಳವರೆಗೆ ನಿರಂತರವಾಗಿ ನಡೆಯಿತು.

ಅಟೆನ್‌ಬರೋ 1950ರ ದಶಕದಿಂದ ಮುಂದಿನ 30 ವರ್ಷಗಳ ಕಾಲ ಬ್ರಿಟಿಷ್ ಚಲನಚಿತ್ರಗಳಲ್ಲಿ ಸಮೃದ್ಧವಾಗಿ ಕೆಲಸ ಮಾಡಿದರು, ಜಾನ್ ಮತ್ತು ರಾಯ್ ಬೌಲ್ಟಿಂಗ್‌ಗಾಗಿ ಪ್ರೈವೇಟ್ಸ್ ಪ್ರೋಗ್ರೆಸ್ (1956) ಮತ್ತು ಐ ಆಮ್ ಆಲ್ ರೈಟ್ ಜ್ಯಾಕ್ (1959) ನಂತಹ ಹಲವಾರು ಯಶಸ್ವಿ ಚಿತ್ರಗಳ ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡರು. 1963ರಲ್ಲಿ, ಅವರು ಪ್ರಸಿದ್ಧ  'ದಿ ಗ್ರೇಟ್ ಎಸ್ಕೇಪ್'ನಲ್ಲಿ ಸ್ಟೀವ್ ಮೆಕ್ಕ್ವೀನ್ ಮತ್ತು ಜೇಮ್ಸ್ ಗಾರ್ನರ್ ಅವರೊಂದಿಗೆ ನಟಿಸಿದರು. 1960ರ ದಶಕದಲ್ಲಿ, ಅವರು ಸಿಯಾನ್ಸ್ ಆನ್ ಎ ವೆಟ್ ಆಫ್ಟರ್‌ನೂನ್ (1964) ಮತ್ತು ಗನ್ಸ್ ಅಟ್ ಬಟಾಸಿ (1964) ಅಂತಹ ಚಲನಚಿತ್ರಗಳಲ್ಲಿ ತಮ್ಮ ಪಾತ್ರಗಳ ವ್ಯಾಪ್ತಿಯನ್ನು ವಿಸ್ತರಿಸಿದರು.  ಇದರಲ್ಲಿನ ರೆಜಿಮೆಂಟಲ್ ಸಾರ್ಜೆಂಟ್ ಮೇಜರ್ ಲಾಡರ್‌ಡೇಲ್ ಪಾತ್ರಕ್ಕಾಗಿ ಅತ್ಯುತ್ತಮ ನಟನಾಗಿ BAFTA ಪ್ರಶಸ್ತಿಯನ್ನು ಗೆದ್ದರು. 1965ರಲ್ಲಿ ಅವರು ದಿ ಫ್ಲೈಟ್ ಆಫ್ ದಿ ಫೀನಿಕ್ಸ್‌ನಲ್ಲಿ ಲೆವ್ ಮೊರಾನ್ ಪಾತ್ರವನ್ನು ನಿರ್ವಹಿಸಿದರು. 1967 ಮತ್ತು 1968ರಲ್ಲಿ, ಅವರು ಅತ್ಯುತ್ತಮ ಪೋಷಕ ನಟ ವಿಭಾಗದಲ್ಲಿ ಬ್ಯಾಕ್-ಟು-ಬ್ಯಾಕ್ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳನ್ನು ಗೆದ್ದರು. 

10 ರಿಲ್ಲಿಂಗ್ಟನ್ ಪ್ಲೇಸ್ (1971) ನಲ್ಲಿ ಅಟೆನ್‌ಬರೋ ನಿರ್ವಹಿಸಿದ ಸರಣಿ ಕೊಲೆಗಾರ ಜಾನ್ ಕ್ರಿಸ್ಟಿ ಪಾತ್ರವು ಅತ್ಯುತ್ತಮ ವಿಮರ್ಶೆಗಳನ್ನು ಗಳಿಸಿತು. 1977ರಲ್ಲಿ, ಭಾರತೀಯ ನಿರ್ದೇಶಕ ಸತ್ಯಜಿತ್ ರೇ ಅವರ ಶತರಂಜ್ ಖೆ ಖಿಲಾರಿಯಲ್ಲಿ ನಿರ್ದಯ ಜನರಲ್ ಔಟ್‌ರಾಮ್ ಪಾತ್ರವನ್ನು ನಿರ್ವಹಿಸಿದರು. ಒಟ್ಟೊ ಪ್ರೀಮಿಂಗರ್ ಅವರ ದಿ ಹ್ಯೂಮನ್ ಫ್ಯಾಕ್ಟರ್ (1979) ಆವೃತ್ತಿಯಲ್ಲಿ ಕಾಣಿಸಿಕೊಂಡ ನಂತರ ಸ್ಟೀವನ್ ಸ್ಪೀಲ್‌ಬರ್ಗ್‌ನ ಜುರಾಸಿಕ್ ಪಾರ್ಕ್ (1993) ಮತ್ತು ಆ ಚಲನಚಿತ್ರದ ಮುಂದುವರಿದ ಭಾಗವಾದ ದಿ ಲಾಸ್ಟ್ ವರ್ಲ್ಡ್: ಜುರಾಸಿಕ್ ಪಾರ್ಕ್ (1997) ನಲ್ಲಿ ಜಾನ್ ಹ್ಯಾಮಂಡ್ ಆಗಿ ಕಾಣಿಸಿಕೊಳ್ಳುವವರೆಗೆ  ಅವರು ಯಾವುದೇ ನಟನಾ ಪಾತ್ರಗಳನ್ನು ತೆಗೆದುಕೊಳ್ಳಲಿಲ್ಲ. ಅವರು ಮಿರಾಕಲ್ ಆನ್ 34 ಸ್ಟ್ರೀಟ್ (1994) ನ ರಿಮೇಕ್ ನಲ್ಲಿ ಕ್ರಿಸ್ ಕ್ರಿಂಗಲ್ ಆಗಿ ನಟಿಸಿದರು. ನಂತರ ಅವರು ಪೋಷಕ ಪಾತ್ರಗಳಲ್ಲಿ ಸಾಂದರ್ಭಿಕವಾಗಿ ಕಾಣಿಸಿಕೊಂಡರು. 

1950ರ ದಶಕದ ಅಂತ್ಯದಲ್ಲಿ, ಅಟೆನ್‌ಬರೋ ಅವರು ಬ್ರಿಯಾನ್ ಫೋರ್ಬ್ಸ್‌ನೊಂದಿಗೆ ಬೀವರ್ ಫಿಲ್ಮ್ಸ್ ಎಂಬ ನಿರ್ಮಾಣ ಕಂಪನಿಯನ್ನು ಸ್ಥಾಪಿಸಿದರು.  ದಿ ಲೀಗ್ ಆಫ್ ಜಂಟಲ್‌ಮೆನ್ (1959), ದಿ ಆಂಗ್ರಿ ಸೈಲೆನ್ಸ್ (1960) ಮತ್ತು ವಿಸ್ಲ್ ಡೌನ್ ದಿ ವಿಂಡ್ (1961) ಸೇರಿದಂತೆ ಹಲವು ಚಿತ್ರ ನಿರ್ಮಾಣಗಳಲ್ಲಿ ಪಾಲ್ಗೊಂಡರು. ಅವರ ಚಲನಚಿತ್ರ ನಿರ್ದೇಶನದ ಮೊದಲನೆಯ ಮ್ಯೂಸಿಕಲ್ ಹಿಟ್ 'ವಾಟ್ ಎ ಲವ್ಲಿ ವಾರ್' (1969).  ಅದರ ನಂತರ ಅವರು ನಿರ್ದೇಶನ ಮತ್ತು ನಿರ್ಮಾಣದ ಮೇಲೆ ಹೆಚ್ಚು ಗಮನಹರಿಸಿದರು. ನಂತರ ಅವರು ವಿನ್‌ಸ್ಟನ್ ಚರ್ಚಿಲ್ ಅವರ ಆರಂಭಿಕ ಜೀವನವನ್ನು ಆಧರಿಸಿದ 'ಯಂಗ್ ವಿನ್ಸ್‌ಟನ್' (1972) ಮತ್ತು 'ಎ ಬ್ರಿಡ್ಜ್ ಟೂ ಫಾರ್'  (1977) ಎಂಬ ಎರಡನೆಯ ಮಹಾಯುದ್ಧದ ಸಂದರ್ಭದ ಚಿತ್ರ ನಿರ್ದೇಶಿಸಿದರು. 

ಅಟೆನ್‌ಬರೋ ಅವರು ತಮ್ಮ ಐತಿಹಾಸಿಕ ಮಹಾಕಾವ್ಯ 'ಗಾಂಧಿ'ಗಾಗಿ 1982ರಲ್ಲಿ ಅತ್ಯುತ್ತಮ ನಿರ್ದೇಶಕರಿಗಾಗಿ ಸಲ್ಲುವ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದರು ಮತ್ತು ಚಲನಚಿತ್ರದ ನಿರ್ಮಾಪಕರಾಗಿ, ಅತ್ಯುತ್ತಮ ಚಿತ್ರಕ್ಕಾಗಿ ಅಕಾಡೆಮಿ ಪ್ರಶಸ್ತಿ ಪಡೆದರು. ಅದೇ ಚಿತ್ರವು 1983ರಲ್ಲಿ ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ವಿದೇಶಿ ಚಲನಚಿತ್ರಕ್ಕಾಗಿ ಎರಡು ಗೋಲ್ಡನ್ ಗ್ಲೋಬ್‌ಗಳನ್ನು ಗಳಿಸಿತು. ಅವರು 18 ವರ್ಷಗಳ ಕಾಲ ಈ  ಯೋಜನೆಯನ್ನು ಮಾಡಲು ಪರಿಶ್ರಮವಹಿಸಿ ಅದ್ಭುತ ರೀತಿಯಲ್ಲಿ ಯಶ ಸಾಧಿಸಿದರು. ಅವರು ಸಂಗೀತದ ಎ ಕೋರಸ್ ಲೈನ್ (1985) ಮತ್ತು ವರ್ಣಭೇದ ನೀತಿ-ವಿರೋಧಿ ನಾಟಕ 'ಕ್ರೈ ಫ್ರೀಡಮ್'  (1987) ನ ಚಲನಚಿತ್ರ ಆವೃತ್ತಿಯನ್ನು ನಿರ್ದೇಶಿಸಿದರು.
ನಿರ್ದೇಶಕ ಮತ್ತು ನಿರ್ಮಾಪಕರಾಗಿ ಅವರ ನಂತರದ ಚಲನಚಿತ್ರಗಳು ಚಾಪ್ಲಿನ್ (1992), ಶಾಡೋಲ್ಯಾಂಡ್ಸ್ (1993) ಮತ್ತು ಕೊನೆಯದಾಗಿಕ್ಲೋಸಿಂಗ್ ದಿ ರಿಂಗ್ (2007). 

ಅಟೆನ್‌ಬರೋ ಡೆನ್‌ವಿಲ್ಲೆ ಹಾಲ್‌ನಲ್ಲಿ 2014ರ ಆಗಸ್ಟ್ 24ರಂದು  90ನೇ ವಯಸ್ಸಿನಲ್ಲಿ ನಿಧನರಾದರು. ಅವರ ಸುದೀರ್ಘ ಕಾಲದ ಶ್ರದ್ಧೆ, ನಿಷ್ಠೆ, ಶಿಸ್ತು, ಸೃಜನಶೀಲತೆ ಅನನ್ಯ.  1945ರಲ್ಲಿ ತಾವು ಮದುವೆಯಾದ ಶೀಲಾ ಸಿಮ್ ಅವರೊಂದಿಗೆ ತಮ್ಮ ಕೊನೆಯ ಉಸಿರಿರುವ ವರೆಗೂ ಇದ್ದರು.  ಈ ದಂಪತಿಗಳಿಗೆ ಮೂವರು ಮಕ್ಕಳು. ಪತ್ನಿ ಶೀಲಾ ಸಿಮ್ 2016ರ ಜನವರಿ 19ರಂದು ನಿಧನರಾದರು.

Richard Samuel Attenborough

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ