ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕನ್ನಡ ಸಂಪದ


 14ನೇ ವರ್ಷಕ್ಕೆ ಕಾಲಿಟ್ಟ 'ಕನ್ನಡ ಸಂಪದ'


ನನ್ನ 'ಕನ್ನಡ ಸಂಪದ' ಪುಟ ಇಂದು 14ನೇ ವರ್ಷಕ್ಕೆ ಅಡಿಯಿರಿಸಿದೆ. ಇದು ನನ್ನ ಬದುಕನ್ನು ಬದಲಿಸಿದ ಹದಿಮೂರು ವರ್ಷಗಳು.  

ಈ ವಿಶ್ವ ಎಂಬುದು ನನಗೆ ಅರ್ಥವಾಗಿರುವ ಸೀಮಿತ ಭಾವದಲ್ಲಿ ಒಂದು ಉದ್ಯಾನವನ.‍‍ ಉದ್ಯಾನವನದಲ್ಲಿನ ಸೌಂದರ್ಯಗಳು ಆಗಾಗ ಅರಳಿ, ಅಳಿದುಹೋದರೂ, ಅದು ಉಳಿಸಿಹೋದ ಹೂಗಳ ಪರಿಮಳ, ಹಾಗೂ ಅದರಿಂದ ಹೇಗೋ ಮೈದಳೆದ ರೆಂಬೆ ಕೊಂಬೆಗಳು ಮುಂದೆ ಅರಳುವ ಹೂಗಿಡಗಳಿಗೆ ಮತ್ತು ಅಲ್ಲಿ ಬಂದು ಕೂರುವ ಪಕ್ಷಿಗಳಿಗೆ ಚೈತನ್ಯಧಾಮ.  ಅಂತೆಯೇ ಆಗಾಗ ಈ ಭುವಿಯಲ್ಲಿ ಉದಿಸಿದ ಕೆಲವು ಜೀವಿಗಳೆಂಬುವರು ತಮ್ಮ ಆಯುಷ್ಯ ಮುಗಿಸಿಹೋದರೂ, ತಾವು ಉಂಡ ಬದುಕಿನ ಸವಿಯನ್ನು, ಮುಂದೆ ಬಂದ  ಜೀವಿಗಳಿಗೆ ಉಳಿಸಿಟ್ಟು ಹೋದ ಚೈತನ್ಯಗಳು.  

ನಮ್ಮ ಮನಸ್ಸುಗಳು ನಾವು ಕಾಣದ್ದನ್ನು ಒಪ್ಪುವುದಿಲ್ಲ.  ಆದರೆ ನಾವು ನಡೆಯುವ ಹಾದಿ, ಉಸುರಿಸುವ ಹಸುರಿನ ತಂಗಾಳಿ, ಮರದ ನೆರಳು, ಹಚ್ಚಿದ ದೀಪದ ಬೆಳಕು, ಉಪಯೋಗಿಸುವ ವಸ್ತುಗಳು ಇತ್ಯಾದಿ ಯಾವೊಂದೂ, ನಾವು ಸೃಜಿಸಿದ್ದಂತೂ ಅಲ್ಲ.‍ ಮಹಾನ್ ಶ್ರೀಮಂತರಾದ ವಾರೆನ್ ಬಫೆಟ್ ಹೇಳುವಂತೆ "ನಾವು ಮರದ ಕೆಳಗೆ ನೆರಳಲ್ಲಿ ಇಂದು ಇದ್ದೇವೆಂದರೆ  ಆ ಮರವನ್ನು ಹಿಂದೆ ಯಾರೋ ಸಸಿಯಾಗಿ ನೆಟ್ಟಿದ್ದರು ಎಂದು ಅರ್ಥ".

ಯಾವುದೇ ವ್ಯಕ್ತಿಯಲ್ಲಿರಬಹುದಾದ,  ತಾನು ಏನನ್ನಾದರು ಮಾಡುತ್ತೇನೆ ಎಂಬ ಕ್ರಿಯಾತ್ಮಕ ಭಾವ, ನನ್ನನ್ನು ತುಂಬಾ ಸೆಳೆಯುವಂತದ್ದು. ಕ್ರಿಯಾತ್ಮಕ ಭಾವ ಇದ್ದಾಗ ಅಲ್ಲಿ ಒಂದು ಸೃಜನಶೀಲತೆ ಇದ್ದೇ ಇರುತ್ತದೆ. ಆ ಕ್ರಿಯಾತ್ಮಕ ಭಾವವನ್ನು ನಮ್ಮ ಸುತ್ತಮುತ್ತಲಿನವರಲ್ಲಿ ಹಾಗೂ ಕಡೇಪಕ್ಷ ನಾವು ಯಾರ ಹೆಸರನ್ನು ಕೇಳಿ ಬೆಳೆದಿದ್ದೇವೋ  ಅವರಲ್ಲಾದರೂ ಗುರುತಿಸುವುದು, ನಮ್ಮ ಬದುಕಿಗೆ ಅವಶ್ಯಕವಾಗಿ  ಬೇಕಾದ ಮೂಲಭೂತ ಪೋಷಣೆ. ಅದನ್ನು ಮಾಡದಿದ್ದರೆ ನಮಗೂ ಈ ಪ್ರಪಂಚಕ್ಕೂ ಯಾವುದೇ ಸಂಬಂಧವಿಲ್ಲದೆ, ಸೂತ್ರಕಿತ್ತ ಗಾಳೀಪಟದಂತೆ ನಮ್ಮ ಬದುಕಾಗಿದೆ ಎಂಬ ಭಾವದಲ್ಲಿ ನಾವು ಬಾಳುತ್ತಿದ್ದರೆ ಅಚ್ಚರಿ ಪಡಬೇಕಿಲ್ಲ. ಈ ನಿಟ್ಟಿನಲ್ಲಿ ನಾನು ಕನ್ನಡ ಸಂಪದ ಪುಟದಲ್ಲಿ (ಮತ್ತು ಆ ನೆಪದಲ್ಲಿ ನನ್ನ ಗೋಡೆಯಲ್ಲಿ) ಸ್ಮರಿಸುವ ವ್ಯಕ್ತಿಗಳ ಚಿಂತನೆ ನನಗೆ ದಿನಾ ಎಂತದ್ದೋ ಉತ್ಸಾಹ ತುಂಬುತ್ತಾ ಬಂದಿದೆ.  

ಫೇಸ್ಬುಕ್ನಲ್ಲಿ ಲೇಖನಗಳನ್ನು ಪೋಸ್ಟ್ ಮಾಡುವ ನಾನು ಜನಸ್ಪಂದನೆ ಬಯಸದೆ ಈ ಕೆಲಸವನ್ನು ಮಾಡುತ್ತೇನೆ ಎನ್ನಲಾರೆ.  ಆದರೆ, ನನ್ನ ಪೋಸ್ಟ್ ಜನರನ್ನು ತಲುಪಿದೆಯೊ ಇಲ್ಲವೋ ಎಂದು ತಲೆಕೆಡಿಸಿಕೊಳ್ಳುವುದನ್ನು ಬಿಟ್ಟಿದ್ದೇನೆ ಎಂದು ನನಗನ್ನಿಸಿದೆ.  ನಾನು ನನ್ನ ಈ ಕೆಲಸವನ್ನು ಪ್ರೀತಿಯಿಂದ ಮಾಡುತ್ತಿದ್ದೇನೆ. ಅದು ನನಗೆ ಮುಖ್ಯ.  

ನಾನು ಸ್ಮರಿಸಿದ ವ್ಯಕ್ತಿಗಳೊ, ಆ ವ್ಯಕ್ತಿಗಳ ಮಕ್ಕಳೋ, ಮೊಮ್ಮಕ್ಕಳೋ ವಿಶ್ವದ ಯಾವುದೋ ಅಂಚಿನಿಂದ ಬಂದು ನನ್ನೊಡನೆ ಆಪ್ತತೆಯಿಂದ ಮಾತಾಡಿದಾಗ ಆದ ಅನುಭವವಿದೆಯೆಲ್ಲ ಅದರ ಅನುಭವವನ್ನು ಮಾತಿನಲ್ಲಿ ಹೇಳುವುದು ಸಾಧ್ಯವಿಲ್ಲ.  'ಕನ್ನಡ ಸಂಪದ' ಪುಟವನ್ನು ನಿನ್ನೆಯವರೆಗೆ 50,000 ಕ್ಕೂ ಹೆಚ್ಚು ಜನ ಲೈಕಿಸಿ,  54,000 ಕ್ಕೂ ಹೆಚ್ಚು ಮಂದಿ ಫಾಲೋ ಮಾಡ್ತಾ ಇದಾರೆ, ಸಂಸ್ಕೃತಿ ಸಲ್ಲಾಪ ತಾಣವಾದ www.sallapa.com ಅನ್ನು 21,27,000 ಕ್ಕೂ ಹೆಚ್ಚು ಸಲ ಜನ ಬಂದು ನೋಡಿದ್ದಾರೆ.  ಅವರೆಲ್ಲ ನಾ ಬರೆದದ್ದು ಎಲ್ಲವನ್ನೂ ನೋಡುತ್ತಾರೆ, ಮೆಚ್ಚುತ್ತಾರೆ, ನಾ ಏನನ್ನೊ ಸಾಧಿಸಿಬಿಡುತ್ತಿದ್ದೇನೆ  ಎಂಬ ಯಾವುದೇ ಭ್ರಮೆಯೂ ನನ್ನಲ್ಲಿಲ್ಲ.  ಹಲವು ಪಂಥೀಯ ಮನೋಭಾವಗಳುಳ್ಳ ಹಲವರಿಗೆ ನಾನು ಕೆಲವು ವ್ಯಕ್ತಿಗಳ ಬಗ್ಗೆ ಹೇಳುವುದು ರುಚಿಸುವುದಿಲ್ಲ ಎಂಬುದೂ ನನ್ನ ಅನುಭವಕ್ಕೆ ಬರುತ್ತದೆ. ಸಿದ್ಧಾಂತಗಳೇ ಬದುಕಲ್ಲ.  ಬದುಕಿನ ಹೊಳಹುಗಳು ನಮಗೆ ಒಪ್ಪದ ವಿಚಾರಗಳಿಂದಲೂ ಮೂಡಬಹುದು.  ನಾವು ಯಾವುದೇ ಸಾಧಕ ವ್ಯಕ್ತಿಯನ್ನು ಸ್ಮರಿಸಿದ ಮಾತ್ರಕ್ಕೆ ಅವರಂತೆ ನಡೆಯುತ್ತಿದ್ದೇವೆ, ಅವರು ಹೇಳಿದ ಸಿದ್ಧಾಂತ ಬಿಟ್ಟು, ಇತರರ ಸಿದ್ಧಾಂತವನ್ನು ನಾವು ತಿರಸ್ಕರಿಸುತ್ತ ಅನ್ಯಪಂಥೀಯರಾಗಿದ್ದೇವೆ ಎಂದೇನೂ ಅಲ್ಲ.  "ನಾವು ಸ್ಮರಿಸಿದ ವ್ಯಕ್ತಿ ಪರಿಪೂರ್ಣರಾದವರೆ?" ಎಂಬ ಪ್ರಶ್ನೆಯೂ ನನಗೆ ಮುಖ್ಯವಲ್ಲ.  ಸಾಧಕರೆಂಬುವರು ಯಾವುದೋ  ಪಂದ್ಯದಲ್ಲೋ ಅಥವಾ ಪರಿಸ್ಥಿತಿಯಲ್ಲೋ  ಗೆಲುವು ಸಾಧಿಸಿದ್ದಿರಲೇಬೇಕು ಎಂದೇನಿಲ್ಲ.  ನಾವು ಬಹುತೇಕವಾಗಿ "ನಾನು-ನನಗೆ-ನನ್ನದು" ಎಂದು ಯೋಚಿಸುವ ಈ ವಿಶ್ವದಲ್ಲಿ,  ನಾನು ಲೋಕದ ಕಡೆ ಕೂಡಾ ನೋಡಬೇಕು ಎಂಬ ಚಿಂತನೆಯಲ್ಲಿ ನಡೆದ ಯಾವುದೇ ಗೆದ್ದ - ಸೋತ - ಅಳಿದು ಹೋದ ಪರಿಶ್ರಮವೆಲ್ಲ ನೆನೆಯಬೇಕಾದದ್ದೇ.  ಅದು ಅವರನ್ನು  ದೊಡ್ಡವರಾಗಿಸುವುದಕ್ಕಲ್ಲ.  ನಮ್ಮ ಆಂತರ್ಯದಲ್ಲಿ ಸಂವೇದನೆಯ ಕಿಡಿ ಮೂಡಿಸಿಕೊಳ್ಳಲೋಸುಗವಾಗಿ.  ಸ್ಮರಿಸುವುದು ಎಂದರೆ ಯಾರಿಗೋ ಬಾಲವಾಗುವುದಲ್ಲ, ಯಾರನ್ನೋ ಮೆಚ್ಚಿಸುವುದಲ್ಲ, ನಾನು ಮೆಚ್ಚಿದ ಸಿದ್ಧಾಂತಕ್ಕೆ ಇದು ಸಲ್ಲ ಎಂದು ಶತಾಯ ಗತಾಯ ಟೀಕಿಸುವುದಲ್ಲ. ಸಾಧಕನಲ್ಲಿ ಮಿಂಚಿ ಹೋಗಿರಬಹುದಾದ ಸಂವೇದನೆಯಲ್ಲಿ ನಾವು ಏನಾದರೂ ಬೆಳಕು ಕಾಣಲು ಸಾಧ್ಯವಿದೆಯೆ ಎಂಬ ಅರಸುವಿಕೆ ಮುಖ್ಯ.  ಅದು ನನ್ನ ಉದ್ದೇಶ.  ಇದು ನಾನು ಪ್ರತಿನಿತ್ಯ ಹಚ್ಚಲು ಆಶಿಸುವ ದೀಪ.  ನಾನು ಕಾಣಲಿಚ್ಚಿಸುವ ಬೆಳಕು ಕೂಡಾ ಇದೇ!

ನಾನು ಪಂಡಿತನಲ್ಲ. ಸಾಹಿತಿ, ಕಲಾವಿದ, ಬರಹಗಾರ ... ಏನೂ ಅಲ್ಲ.  ನಾನು ಪೂರ್ಣತ್ವವನ್ನು ಅರಸಿ ಹುಡುಕಿಹೊರಟವನಲ್ಲ.  ಬದುಕಿನ ಸುಖಗಳನ್ನು ಪುಟ್ಟ ಪುಟ್ಟದರಲ್ಲಿ, ಚಿಂದಿ ಚಿಂದಿಗಳಲ್ಲಿ, ದೊಡ್ಡವರ ಮುಗ್ದತೆಯಲ್ಲಿ, ಕಿರಿಯರ ದೊಡ್ಡತನದಲ್ಲಿ, ಹಲವರ ಸಣ್ಣತನಗಳಲ್ಲಿ,  ಹೀಗೆ ಎಲ್ಲೆಡೆ ಕಾಣಲಿಚ್ಚಿಸಿದವನು.  ವ್ಯಾಜ್ಯ, ದ್ವೇಷ, ಅನಗತ್ಯ ಟ್ರೋಲಿಂಗ್, ಏನೋ ತೋಚಿದ್ದು ಕಿಂಚಿತ್ತು ಮಾಡುವನಿಗೆ ಹೀಗೆ ಮಾಡಬೇಕಿತ್ತು  - ಹಾಗೆ ಮಾಡಬೇಕಿತ್ತು ಎಂದು ಕೆಲವರು ಕೊಡುವ ಕ್ಷುಲ್ಲಕ ಉಪದೇಶ, ನೀ ಇವನ ಬಗ್ಗೆ ಬರೆಯಬಾರದಿತ್ತು, ನಾ ಒಪ್ಪುವವನ ಬಗ್ಗೆ ಮಾತ್ರಾ ಬರೆಯಬೇಕು ಎಂದೆನ್ನುವ ಮೊಂಡುವಾದಿಗಳ ದೂರ್ವಾಸ ಕೋಪ  ಬಿಟ್ಟು ಎಲ್ಲವೂ ನನಗೆ ಓಕೆ.  

ಸುಮಾರು ಮೂರು-ನಾಲ್ಕು ಸಾವಿರ ಮಂದಿಯನ್ನು ಸ್ಮರಿಸಿದ್ದೇನೆ ಎಂದುಕೊಂಡಿದ್ದೇನೆ. 'ಕುಮಾರವ್ಯಾಸ ಭಾರತ', ತಮಿಳಿನ 'ತಿರುಪ್ಪಾವೈ', ಸಂಸ್ಕೃತದ ಜಯದೇವ ಕವಿಯ  'ಗೀತಗೋವಿಂದ' - ಎಸ್. ವಿ. ಪರಮೇಶ್ವರ ಭಟ್ಟರ 'ಗೀತಗೋವಿಂದ ಕನ್ನಡ ಕಾವ್ಯರೂಪ', ಪು. ತಿ. ನ ಅವರ 'ಗೋಕುಲ ನಿರ್ಗಮನ' ಇವುಗಳನ್ನು ಆತ್ಮೀಯರ ಬೆಂಬಲದೊಂದಿಗೆ ಒಂದಷ್ಟು ಸುಲಭವಾದ ಅರ್ಥದೊಂದಿಗೆ ಕನ್ನಡದಲ್ಲಿ ಸಿಗುವ ಹಾಗೆ ಮಾಡಿ ಡಿಜಿಟಲ್ ರೂಪದಲ್ಲಿ ಇಲ್ಲಿ ಪ್ರಕಟಿಸಿದ್ದೇನೆ.  ದೇಶದ ಸ್ವಾತಂತ್ರ್ಯ ಚರಿತ್ರೆಯ ನೋಟ, ಕನ್ನಡ ಸಾಹಿತ್ಯದ ಪ್ರಮುಖ ಘಟ್ಟಗಳು, ಪತ್ರಿಕಾ ಲೋಕಗಳ ಚರಿತ್ರೆ ಮುಂತಾದ ಅನೇಕ ವಿಷಯಗಳನ್ನು ಕೂಡ ಪ್ರಕಟಿಸಿದ್ದೇನೆ. ಪ್ರಕಟಿಸಿದ್ದೇನೆ ಎಂಬುದಕ್ಕಿಂತ ನಾನು ಸವಿದು ಅದನ್ನು ಇಲ್ಲೂ ತೆರೆದಿಟ್ಟಿದ್ದೇನೆ.  ಡಿವಿಜಿ ಅವರು ಜಿ.ಪಿ. ರಾಜರತ್ನಂ ಅವರಿಗೆ ನೀಡಿದ ಸಂದರ್ಶನದಲ್ಲಿ ಹೇಳುತ್ತಾರೆ: "ನನಗೆ ಯಾವುದು ಸಂತೋಷ ನೀಡಿತೊ, ಅದನ್ನು ಇತರರೊಂದಿಗೆ ಹಂಚಿಕೊಂಡಾಗ, ಆ ಸಂತೋಷ ಇಮ್ಮಡಿಸುತ್ತೆ!" ಅಂತ.  ಈ ಮಾತು ನನಗೆ ಇಲ್ಲಿ ಯಾವುದೇ ತೆರನಾದ ಸಂತೋಷ ದಕ್ಕಿದಾಗಲೂ ಕಣ್ಮುಂದೆ ಮೂಡಿದಂತೆನಿಸುತ್ತದೆ.  

ಈ ಲೋಕದಲ್ಲಿ ಜ್ಞಾನ ಅನ್ನೋದು ಪುಸ್ತಕಗಳಲ್ಲಿ ಮಲಗಿದೆ. ಗ್ರಂಥಾಲಯಗಳಲ್ಲಿ ಧೂಳುಕಣಗಳು, ಜಿರಲೆಗಳು, ಇಲಿಗಳು ಅವುಗಳನ್ನು ತಿಂದು ಸಂತೋಷಪಟ್ಟಿರುವಷ್ಟು, ಜನ ಬಳಸಿದ್ದಾರೆಯೆ? ಎನ್ನುವುದು ನನಗೆ ಸಂದೇಹ.  ಇವನ್ನೆಲ್ಲ ತುಂಬಿಕೊಂಡ ಟೇಪು, ಫ್ಲಾಪಿ, ಸಿಡಿ, ಡಿಸ್ಕುಗಳು ಹಿಂದೆ ಯಾರೂ ಓದದೆ, ಇಂದು ಯಾರೂ ಓದಲಾಗದಂತೆ ಕೆಟ್ಟುಹೋಗಿವೆ.  ಇವೆಲ್ಲ ಡಿಜಿಟಲೈಸ್ ಆಗಿ ಗೂಗಲ್ ಅಲ್ಲಿ, ವಿಕಿಪೀಡಿಯಾದಲ್ಲಿ, ಅಂತರಜಾಲದಲ್ಲಿ ಹರಿದಾಡುತ್ತಿದೆ ಎಂಬುದು ಒಂದಿಷ್ಟು ಸಮಾಧಾನ.  ಆದರೆ ನನಗೆ ಅದೂ ಅಲ್ಪ ತೃಪ್ತಿಯದು ಅನಿಸುತ್ತದೆ.  ಈ ಜ್ಞಾನ ಆಗಾಗ ಜನರ ಕಣ್ಣಿಗೆ, ಓದಿಗೆ, ಪುನರಾವರ್ತನೆಗೆ ಲಭ್ಯವಾಗುತ್ತಿರಬೇಕು.  ನಮಗೆ ಹಲವು ಸಹಸ್ರ ವರ್ಷಗಳ ಸಾಹಿತ್ಯ ಸಂಸ್ಕೃತಿಗಳು ಜಾನಪದ ಕಲೆಗಳಲ್ಲಿ ಹರಿಯುತ್ತ ಬಂದಿರುವಂತೆ. ಇದಕ್ಕೆ ಫೇಸ್ಬುಕ್, ಯೂಟ್ಯೂಬ್ ಅಂತಹ ಸಾರ್ವಜನಿಕ ಸಂಪರ್ಕ ತಾಣಗಳು (social media) ಒಳ್ಳೆಯ ವ್ಯಾಪ್ತಿ ಮತ್ತು ಅವಕಾಶ ಮೂಡಿಸಿವೆ ಎಂಬುದು ನನ್ನ ಅಭಿಪ್ರಾಯ.  ಅಂತೆಯೇ ಅವು ಕೂಡಾ ಸ್ವಯಂ ಆಸಕ್ತಿ ಅನುಭೂತಿಗಳಿಲ್ಲದ,  ಅರ್ಥಹೀನ forwarded ಮೆಸೇಜಸ್ ಆಗದೆ ನೈಜ ಕಾಳಜಿಯ ದ್ಯೋತಕವಾಗಿರಬೇಕು. 

ಇಲ್ಲಿ ಬಹಳ ಜನ ನಾನು ಮಾಡಿದ ತಪ್ಪುಗಳನ್ನು ದಿನಾ ಆಪ್ತವಾಗಿ ತಿದ್ದುತ್ತಾರೆ.  ಪ್ರತಿದಿನ ಕೆಲವೊಂದು ಜನರದ್ದಾದರೂ ಹೊಸರೀತಿಯ ಹೃದಯವಂತಿಕೆ, ಆಪ್ತತೆ, ಪ್ರೀತಿ, ಬೆಂಬಲ, ವಿಶ್ವಾಸ ಇದೆಲ್ಲ ನನಗೆ ನಿರಂತರ ಸಿಗುತ್ತಲೇ ಇದೆ.  ಇದಕ್ಕೆಲ್ಲ ನಾ ಹೇಗೆ ಕೃತಜ್ಞತೆ ಹೇಳುವುದು?

ಎನಿತು ಜನ್ಮದಲಿ ಎನಿತು ಜೀವರಿಗೆ
ಎನಿತು ನಾವು ಋಣಿಯೋ
ತಿಳಿದು ನೋಡಿದರೆ ಬಾಳು ಎಂಬುದಿದು
ಋಣದ ರತ್ನಗಣಿಯೋ?

ಎಂಬ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರ ಮಾತನ್ನು ನಾನು ಪ್ರತಿದಿನ ನೆನೆಯುತ್ತೇನೆ.  ನಾನು ನಿಮಗೆಲ್ಲ ಋಣಿ.‍  ನಮಸ್ಕಾರ.

ನಿಮ್ಮ ತಿರು ಶ್ರೀಧರ Tiru Sridhara 🌷🙏🌷

My page ಕನ್ನಡ ಸಂಪದ  Kannada Sampada entered 14th year

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ