ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಮೃತಾ ಮೆಹೆಂದಳೆ


 ಅಮೃತಾ ಮೆಹೆಂದಳೆ


ಅಮೃತಾ ಮೆಹೆಂದಳೆ ನಮ್ಮ ನಡುವೆ ಇರುವ ಹೆಸರಾಂತ ಬರಹಗಾರ್ತಿ. 

ಅಕ್ಟೋಬರ್ 1 ಅಮೃತಾ ಅವರ ಜನ್ಮದಿನ. ಅವರು ಓದಿ ಬೆಳೆದದ್ದು ಬೆಂಗಳೂರಿನಲ್ಲಿ.
ವಾಣಿಜ್ಯ ಪದವೀಧರೆಯಾದ ಇವರು, ಕನ್ನಡದಲ್ಲಿ  ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ

ಕನ್ನಡದ ಕುರಿತು ಅಪಾರ ಒಲವುಳ್ಳ ಅಮೃತಾ ಅವರಿಗೆ ಭಾಷಾಂತರ, ಸಾಹಿತ್ಯ, ಪ್ರವಾಸದಲ್ಲಿ ಒಲವು. ಸ್ವಉದ್ಯೋಗದಲ್ಲಿ ಆಸಕ್ತಿ.  ಮಕ್ಕಳಿಗೆ ಬೋಧಿಸುವುದು ಇವರಿಗೆ ಖುಷಿ.

ವಿದ್ಯಾರ್ಥಿ ಜೀವನದಿಂದಲೇ ಅಮೃತಾ ಅವರಲ್ಲಿ ಸಾಹಿತ್ಯಾಸಕ್ತಿ ಚಿಗುರೊಡೆದಿತ್ತು. ಅಂದಿನ ದಿನಗಳಲ್ಲೇ ಸಹಪಾಠಿಗಳೊಂದಿಗೆ "ಪರೀಕ್ಷಾ ಪದ್ಧತಿ" ಎಂಬ ಪುಸ್ತಕ ಪ್ರಕಟವಾಗಿತ್ತು.

ಅಮೃತಾ ಅವರ ನೂರಾರು ಹನಿಗವನಗಳು, ಲೇಖನ, ಕವನ, ಕಥೆಗಳು ನಾಡಿನ ಪ್ರಮುಖ ಪತ್ರಿಕೆಗಳಾದ ಸುಧಾ, ತರಂಗ, ಮಯೂರ, ತುಷಾರ, ಹಾಯ್ ಬೆಂಗಳೂರು, ಓ ಮನಸೇ, ವಿಜಯ ಕರ್ನಾಟಕ, ವಿಜಯವಾಣಿ, ವಿಶ್ವವಾಣಿ, ಹೊಸ ದಿಗಂತ, ಕರ್ಮವೀರ, ಕನ್ನಡಪ್ರಭ , ಸಖಿ, ಉತ್ಥಾನ, ಕರಾವಳಿ ಮುಂಜಾವು ಮುಂತಾದ  ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಅಮೃತಾ ಅವರಿಗೆ ಭಾರತೀಯ ಕರ್ನಾಟಕ ಸಂಘ, ಬೆಂಗಳೂರು, ಸಂಕ್ರಮಣ ಸಾಹಿತ್ಯ, ವಿಶ್ವ ಕನ್ನಡಿಗ ಪತ್ರಿಕೆ, ಕಾಸರಗೋಡು ಕನ್ನಡ ಸಂಘ ಮೊದಲಾದ ಸಾಹಿತ್ಯ ಸ್ಪರ್ಧೆಗಳಲ್ಲಿ ಬಹುಮಾನ ಸಂದಿದೆ.

ಅಮೃತಾ ಮೆಹೆಂದಳೆ ಅವರ "ಮೌನದ ಮಾತುಗಳು" ಕವನ ಸಂಕಲನ 2003ರಲ್ಲಿ ಪ್ರಕಟವಾಗಿದೆ. 2017ರಲ್ಲಿ "ಹನಿಯೆಂಬ ಹೊಸ ಭಾಷ್ಯ" ಹನಿಗವನ ಸಂಕಲನ  ಪ್ರಕಟವಾಗಿದ್ದು, "ಚೇತನಾ" ಸಾಹಿತ್ಯ ಪ್ರಶಸ್ತಿ, "ಅಡ್ವೈಸರ್" ಸಾಹಿತ್ಯ ಪ್ರಶಸ್ತಿಗಳಿಗೆ ಭಾಜನವಾಗಿದೆ. ಸಾಹಿತ್ಯ ಅಕಾಡೆಮಿಗಾಗಿ ಇವರು ಸಂಪಾದಿಸಿರುವ  "ಕವಿತೆ ೨೦೧೯"  ಕೃತಿ ೨೦೨೧ ರಲ್ಲಿ ಬಿಡುಗಡೆಯಾಗಿದೆ.  "ಒಂದು ಹನಿ ಮೌನ” ಎಂಬ ಹನಿಗವನ ಸಂಕಲನ 2022ರಲ್ಲಿ ಪ್ರಕಟವಾಗಿದೆ.

ಅಮೃತ ಅವರ ಕೆಲವು ಅಮೃತ ಮೌನದ ಹನಿಗಳ ನೆನಪು ಇಲ್ಲಿದೆ:

ನನ್ನೊಳಗಿನ
ನಾನೇ
ನನ್ನಾಪ್ತೆ.
ಹೊರಗಿನದು
ವ್ಯರ್ಥ
ಹುಡುಕಾಟವಷ್ಟೇ...

ಕಿವಿಗಡಚಿಕ್ಕುವುದು
ಶಬ್ದ ಮಾತ್ರವಲ್ಲ
ಮೌನವೂ

ಅಮೂಲ್ಯ
ಕ್ಷಣಗಳ
ನಾಳೆಗಾಗಿ
ಕಾಯ್ದಿರಿಸದಿರು
ಕನಸು
ಹಳಸೀತು..

ಸರಳತೆಯೆಂಬ
ತೋರಿಕೆಗೆ
ಇಲ್ಲಿಂದು
ಭಾರೀ ಬೇಡಿಕೆ.

'ಕೊರತೆ'ಯೊಂದು
ಬಂದ ನಂತರವಷ್ಟೇ
ಬದುಕು ಪೂರ್ಣ...

ಅಂದವಿರುವುದು
ಚಂದವಿರುವುದು
ಅದ್ಭುತವಾಗಿರುವುದು
ರೋಚಕವೆನಿಸುವುದು
ಎಲ್ಲಕ್ಕೂ ಮೆಚ್ಚುಗೆಯೇ..
ಹೃದಯ ಮುಟ್ಟುವುದು
ಬೇರೆಯೇ..

ಒಂದಿಷ್ಟು
ಗುಟ್ಟುಗಳ
ಮುಚ್ಚಿಟ್ಟುಕೋ
ಮತ್ತಷ್ಟು
ಸಿಟ್ಟುಗಳ
ಸಂಭಾಳಿಸಿಕೋ
ಚಿತ್ತು ಕಾಟುಗಳಿಲ್ಲದ
ಕವಿತೆಯ
ಬಿಗಿದಪ್ಪಿಕೋ..
ಕಂಬಳಿಹುಳುವಂಥ
ಅಸಹನೀಯ
ಕ್ಷಣವೂ
ಹಾರಿಹೋದೀತು
ಚಿಟ್ಟೆಯಾಗಿ
ಬದುಕಿಗಂಟಿಸಿ
ಬಣ್ಣ ಬಣ್ಣ

ಬೆಳಕೆಂಬ ಬೆಡಗಿಗೂ
ಬೆರಗುಗೊಳ್ಳದಿರೆ
ಬೆಂಗಾಡಲ್ಲವೇ ಬದುಕು?

ನಿನ್ನ ಸಾಧನೆಗೆ
ಪುರಾವೆ ಕೇಳಿದೀ ಜಗವೇ
ಮಹಾತ್ಮರ ಮರೆತು
ಮೆರೆದಿದ್ದ ಕಂಡಿಲ್ಲವೇ?
ನಿನ್ನ ನೇರದಾರಿಯಲ್ಲಿ
ಮೈಲುಗಲ್ಲಿನ ನೆನಪೆಲ್ಲಿತ್ತು?
ಗಮ್ಯವೆಲ್ಲಿ ಯಾರಿಗೆ ಗೊತ್ತು?
ಬಿದ್ದರೂ ಎದ್ದು
ನಡೆಯುತ್ತಿದ್ದರಾಯ್ತು
ಗೆಲುವು ಅದೇ ಅಲ್ಲವೇ?

ಎಲ್ಲರ ಬದುಕೂ
ವರ್ಣಮಯವೇ..
ಒಂದ್ಯಾವುದೋ
ಬಣ್ಣದ
ಕೊರತೆಯ
ಹೊರತು...

ಸಿಗುವ ಮುಂಚೆ
ಮತ್ತು
ಕಳೆದ ನಂತರವಷ್ಟೇ
ಇಮ್ಮಡಿಯಾಗುವುದು
ಪ್ರೇಮದ
ಕನವರಿಕೆ..

ಪ್ರೀತಿಯಲ್ಲಿ
ಏನೋ ಬೇಕೆಂಬ
ನಿರೀಕ್ಷೆ
ಸ್ವಾರ್ಥವೆನ್ನುವುದಾದರೆ
ಆ ಸಿಹಿ ಸ್ವಾರ್ಥ
ನನ್ನೊಂದಿಗಿರಲಿ...
ಮಹಾತ್ಮಳಾಗುವ
ಬಯಕೆಗೆ
ನನ್ನ ಧಿಕ್ಕಾರವಿರಲಿ...

ಬಿಚ್ಚಿ ಬರೆದಿಟ್ಟ
ಮತ್ತೆ ತೆರೆಯದೆ
ಮುಚ್ಚಿಟ್ಟ
ದಿನಚರಿ ಪುಸ್ತಕ
ನೀ ಓದದ
“ನಾನು"

ನಿನ್ನೆಯ ಪ್ರೀತಿ
ಇಂದಿನ ಅಗತ್ಯ
ನಾಳಿನ ಅನಿವಾರ್ಯತೆ
ನಂತರದ ನಿರ್ಲಿಪ್ತತೆ
ಸೋಜಿಗವೇನಲ್ಲ
ಬದಲಾಗುತ್ತದೆ
ಆದ್ಯತೆ...

ನೂರು ಮಾತಾಡಿದ ಮೇಲೂ
ಅಪರಿಚಿತರಾಗುಳಿದೇವು
ನಾಲ್ಕು ದಿನ ಮಾತಿಲ್ಲದೆ ಕಳೆದರೆ
ವೈರಿಗಳೂ ಆದೇವು
ಮನಸೇ ಎಚ್ಚರ..
ಝಾಲಿಮ್‌ ಈ ಕಾಲ...

ಆತ್ಮೀಯ, ನಿರಂತರ ಹಸನ್ಮುಖಿ, ಸೃಜನಶೀಲ ಮನದ ಅಮೃತಾ ಮೆಹೆಂದಳೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು‍ ನಮಸ್ಕಾರ.

Happy birthday Amrutha Mehandale 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ