ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪ್ರೇಮಾ ಟಿ.ಎಮ್.ಆರ್.

 

ಪ್ರೇಮಾ ಟಿ. ಎಮ್. ಆರ್. 

ಪ್ರೇಮಾ ಟಿ. ಎಮ್. ಆರ್.  ಅವರು ನಾನು ಫೇಸ್ಬುಕ್ ವಲಯದಲ್ಲಿ ಕಂಡಿರುವ ಉತ್ತಮ ಬರಹಗಾರರಲ್ಲಿ ಒಬ್ಬರು.

ಅಕ್ಟೋಬರ್ 15, ಪ್ರೇಮಾ ಅವರ ಜನ್ಮದಿನ. ಇವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೂಜಳ್ಳಿ ಎಂಬ ಹಳ್ಳಿಯಲ್ಲಿ.  ಅಪ್ಪಯ್ಯ ದೇವಪ್ಪ ನಾಯ್ಕ, ಅಮ್ಮ ಮಾದೇವಿ. "ರಾತ್ರಿಶಾಲೆಯಲ್ಲಿ ಓದಿದ ನನ್ನ ಅಪ್ಪ, ಹೆಬ್ಬೊಟ್ಟಿನ ನನ್ನ ಅಮ್ಮ ಇಬ್ಬರದೂ ಕನಸಿನ ಫಲವಾಗಿ

ನಾನು ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದೆ" ಎನ್ನುವ ಇವರ 'ಪ್ರೇಮ'ಮಯ ಮಾತು ನನ್ನ ಅಪಾರವಾಗಿ ಸಂವೇದಿಸುತ್ತಿದೆ. 

ಪ್ರೇಮಾ ಅವರು ಹಿಂದೊಮ್ಮೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಮದುವೆಯ ನಂತರ ಕೆಲಸ ಬಿಟ್ಟು ಪೂರ್ಣ ಗೃಹಿಣಿಯಾದರು.  ಪ್ರೇಮಾ ಅವರು ಹಲವಾರು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಗುರುತಿಸಿಕೊಂಡಿದ್ದಾರೆ.

ಪ್ರೇಮಾ ಅವರಲ್ಲಿ ಓದುವ ಹವ್ಯಾಸ ಮೊದಲಿನಿಂದಲೂ ಇತ್ತು. ಸಂಸಾರದಲ್ಲಿ ಮುಳುಗಿದ ಮೇಲೆ ಕಡಿಮೆಯಾಯ್ತು. ಒಬ್ಬನೇ ಮಗ ವಿದ್ಯಾಭ್ಯಾಸದ ನಿಮಿತ್ತ ಬೆಂಗಳೂರು ಸೇರಿದಮೇಲೆ ಏನಾದ್ರೂ ಬರೆಯೋಣ ಎಂಬ ಅನ್ನಿಸಿಕೆ ಚಿಗುರಿತ್ತು. ಏನಾದ್ರು ಬರೀಬಹುದಲ್ಲ ಎಂದು ಬಾಳ ಸಂಗಾತಿ ಕೂಡಾ ಆಪ್ತ ಒತ್ತಾಸೆ ನೀಡಿದರು.  ಹೀಗೆ, ಇವರ ಬರವಣಿಗೆ ಆರಂಭವಾಗಿದ್ದು ಸುಮಾರು ಹದಿನೈದು ವರ್ಷಗಳ ಹಿಂದೆ.

ಪ್ರೇಮಾ ಅವರು ಲೇಖನ,  ಕಥೆ, ಕವನಗಳನ್ನು ಹಾಗೂ ಅಂಕಣ ಬರಹಗಳನ್ನು ಬರೆದರು. ಇವು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಇವರು ಬರೆದದ್ದೆಲ್ಲವನ್ನು  ಪ್ರಕಟಿಸಿದರೆ ಹತ್ತಾರು ಪುಸ್ತಕಗಳನ್ನು ಪ್ರಕಟಿಸಬಹುದಿತ್ತು. ಆದರೆ ಹೀಗೆ ಬರೆದು ಹಾಗೆ ಸುಮ್ಮನೆ ಬಿಟ್ಟರು. ಹಿರಿಯ ಸಾಹಿತಿಗಳ ಒತ್ತಡದಿಂದ 'ವಿಲ್ಲು ಬರೆಯುತ್ತೇನೆ' ಎಂಬ ಒಂದು ಕವನ ಸಂಕಲನ ಪ್ರಕಟಿಸಿದ್ದಾರೆ.  ಇವರ ಕಥೆ ಕವನಗಳಿಗೆ ಬಹುಮಾನ ಬಂದಿವೆ.

ಒಂದು ಸೌಹಾರ್ದಪೂರ್ಣ ಸಮಾಜದ ಕಲ್ಪನೆ ಆಶಯ ಎರಡೂ ಇದೇ ಎಂಬುದು ಪ್ರೇಮಾ ಅವರ ನುಡಿ.  ಇದು ಕೇವಲ ಮಾತಾಗಿಲ್ಲದೆ ಅವರ ಆಂತರ್ಯದಿಂದ ಮೂಡುತ್ತಿರುವ ಬರಹಗಳ ತಿರುಳೂ ಆಗಿದೆ ಎಂಬುದು ಅವರನ್ನು ಓದಿದಾಗ ಮನದಟ್ಟಾಗುತ್ತದೆ ಎಂಬುದು ನನ್ನ ಅನುಭವವೂ ಆಗಿದೆ. 

ಅವರ ಬರಹಗಳಲ್ಲಿ ಇತ್ತೀಚೆಗೆ ಗಮನಕ್ಕೆ ಬಂದ ಈ ಕವಿತೆಯನ್ನು ಇಲ್ಲಿಡುತ್ತಿದ್ದೇನೆ


ಮುಂಗಾರು.... ನನ್ನ ಚಿಕ್ಕಮ್ಮ


ಕಪ್ಪು ಕಲ್ಲರೆಯಿಂದ ಬೆಳ್ನೊರೆಯ ತೊರೆ ಮೆರೆದು

ಅಂಗಳಕ್ಕಿಳಿವಾಗ ನೆನಪಾಗುತ್ತಾಳೆ

ಜಾರುವ ಕಾಲ್ದಾರಿಗೆ ಗೊಜ್ಜು ಹರಡುವ ಅಮ್ಮ

ಮಣ್ಣಿರದ ಮರದಲ್ಲಿ ಸೀತಾಳೆ ಅರಳಿದರೆ

ಅವಳ ಮುಡಿ ಮನದಲ್ಲಿ


ಸಣ್ಣ ಮಳೆ ಹನಿವಾಗ ಇಂಬು ಸಿಕ್ಕಲ್ಲೆಲ್ಲ

ಕೆದಕೆದಕಿ ಗಿಡವೂರುವವಳು

ಹೀರೆ ಚಪ್ಪರದಲ್ಲಿ ಹೂಕಚ್ಚಿ ನಗುವಾಗ

ನೋಳಿಮುದ್ದೆ ಬೆಂಡೆ ಓಳಿಯಲಿ ಮೈತಳೆದು

ಮುಳ್ಳು ಸೌತೆಯ ಹೀಚು ಇಂಚಿಂಚೆ ಬೆಳೆವಾಗ

ಕಲ್ಲು ಕಂಬಗಳಲ್ಲು ಸೋಣೆ ಹೂ ದರಬಾರು

ಬಾಯಿಕಚ್ಚುವ ಕೆಸುವು ಹಾದಿಬದಿ ಕಂಡಾಗ

ಅವಳ ನಂಜುತಿಂದ ಪಾದ ಕಿಲ್ಲುಕಂತುವ ಬೆರಳು

ಕಣ್ಮುಂದೆ ಮೂಡುತ್ತದೆ


ಸುರಿವ ಜಡಿಮಳೆಯಲ್ಲಿ ಮಾಸಕ್ಕೆ ಮೂರುದಿನ

ಹೊರಹೊಳ್ಳಿ ಮೂಲೆಯಲಿ ಮುಯ್ಟಿಕೊಳ್ಳುವ ಅಮ್ಮ

ಹರಿದಹಸೆ ಹಳೆಕೌದಿ ತೊಳೆದಿಟ್ಟು ಆರುದಿನ

ಮೂಗಿಗೆ ಮುಗ್ಗಲು ಬಡಿದು ಗೊಣಗುವವಳು


ಕಣ್ಣೊಡೆಯದ ಸೂರಿದ್ಯಾವ್ರು

ಬೈಗೋ ಬೈಸರೋ ಅರಿಯದ ಪರಿ

ಕಚ್ಹಿಡಿದು ಸುರಿವ ಮಳೆಗೆ ರೊಚ್ಚಿ

ನಿನ್ನ ಮೊಖ ಸುಡಲೆಂದು ಶಾಪ ಹಾಕುವವಳು

ಸಿಟ್ಟು ಸೆಡವು ಒಳಗಿಟ್ಟು ದುಮುಗುಟ್ಟು ಗವಿಯದೇ

ಬಕಬಕ ಕಾರಿಕೊಳ್ಳುವ ಅಮ್ಮನೊಳಗೆ

ಮಳೆಬಂದು ನಿಂತಂತೆ ಬಯಲ ಬೆಳಕು


ತಗಟೆಕೊಡಿ ಪಾಂಡಾಳಹರ್ಗಿ ನುಗ್ಗಿಸೊಪ್ಪು

ಕೊಚ್ಚಿ ಹೊಡಿಪುಡಿ ಮಾಡಿ ಗಂಜಿಗೆ

ನಂಜಿಕೊಳ್ಳಲು ಇಟ್ಟುಕೊಡುವ‌ ಅಮ್ಮ ಈಗಿಲ್ಲ

ನಾನಿರುವ ತನಕ ತಾನಿದ್ದು

ಅವಳ ನೆನಪಿಸುವ ಮುಂಗಾರು

ಇವಳೂ ನನ್ನಮ್ಮ... ನನ್ನ ಚಿಕ್ಕಮ್ಮ..


ಹೀಗೆ ಗಾಢವಾಗಿ ಕಟ್ಟಿಕೊಡುವ ಬಂಧುತ್ವ, ಪ್ರಕೃತಿ ಮತ್ತು ಬದುಕಿನ ನಡುವೆ ಇರುವ ಕೊಂಡಿಯ ಸಂವೇದನೆ ಎಲ್ಲೋ ನಮ್ಮನ್ನು ಮೀಟುವ ಪರಿ ಇನಿದಾದದ್ದು.


ಆತ್ಮೀಯ ಸರಳ ಸುಂದರ ಸಂವೇದನಾಶೀಲ ಬರಹಗಾರ್ತಿ ಪ್ರೇಮಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆ.


ಮಳೆಬಂದು ನಿಂತಮೇಲೆ ಕೊನೆ ಹನಿಯೊಂದು ಜೀಕುತಿದೆ

ಕಡಲೆದೆಯೊಲವಿನ ಕೋಟಿ ಕಣಗಳಿರಬಹುದೇ ಅದರೊಳಗೆ? 


ಎಂಬ ಅವರ ಮಾತು ಕೇಳಿದ ಮೇಲೆ ನಾ ಏನನ್ನು ತಾನೇ ಮುಕ್ತಾಯಗೊಳಿಸುವುದು.

Happy birthday Prema Tmr 🌷🌷🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ