ರೋಹಿಣಿ ಮೋಹನ್
ರೋಹಿಣಿ ಮೋಹನ್
ಆತ್ಮೀಯರಾದ ಡಾ. ರೋಹಿಣಿ ಮೋಹನ್ ಸುಗಮ ಸಂಗೀತ ಕಲಾವಿದರಾಗಿ ಹೆಸರಾಗಿದ್ದಾರೆ. ಇವರು ಸುಗಮ ಸಂಗೀತದ ಉಪನ್ಯಾಸಗಳು ಮತ್ತು ಬರಹಗಳಿಗೆ ಸಹಾ ಹೆಸರಾಗಿದ್ದಾರೆ.
ಅಕ್ಟೋಬರ್ 15 ರೋಹಿಣಿ ಅವರ ಜನ್ಮದಿನ.
ಅವರು ಮೈಸೂರಿನಲ್ಲಿ ಜನಿಸಿದರು. ತಂದೆ ಎಂ. ಎಸ್. ನಾಗರಾಜ್ ನಿವೃತ್ತ ಮ್ಯಾಜಿಸ್ಟ್ರೇಟ್. ತಾಯಿ ಅನಸೂಯಾ. ರೋಹಿಣಿ ಅವರು ಮೈಸೂರು ವೈದ್ಯಕೀಯ ಕಾಲೇಜಿನಿಂದ ವೈದ್ಯಕೀಯ ಪದವಿ ಪಡೆದು ಡಾ. ರೋಹಿಣಿ ಆಗಿದ್ದಾರೆ. ಪತಿ ರಾಮ ಮೋಹನ್ ಉದ್ಯಮಿಯಾಗಿದ್ದಾರೆ.
ರೋಹಿಣಿ ಅವರು ಬಾಲ್ಯದಲ್ಲೇ ಹಾಡಲು ಪ್ರಾರಂಭಿಸಿದರು. ಆರು ವರ್ಷ ವಯಸ್ಸಿನಲ್ಲಿ ಆಕಾಶವಾಣಿಯ ಮಕ್ಕಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಂತರ ಶಾಲಾ ಮತ್ತು ಕಾಲೇಜು ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ಅನೇಕ ಬಹುಮಾನಗಳನ್ನು ಗೆದ್ದರು. ತಮ್ಮ ಬಹುತೇಕ ವಿದ್ಯಾರ್ಥಿ ಜೀವನದಲ್ಲಿ ಅವರು ಪ್ರತಿಭಾನ್ವಿತ ವಿದ್ಯಾರ್ಥಿ ಪುರಸ್ಕಾರ ಗಳಿಸಿದ್ದರು.
ರೋಹಿಣಿ ಅವರು ಶ್ರೀಮತಿ ಲಕ್ಷ್ಮಿ ಅವರಲ್ಲಿ ಕರ್ನಾಟಕ ಸಂಗೀತವನ್ನು , ಎಚ್. ಆರ್. ಲೀಲಾವತಿ ಅವರಲ್ಲಿ 12 ವರ್ಷಗಳಿಗಿಂತ ಹೆಚ್ಚು ಕಾಲ ಸುಗಮ ಸಂಗೀತವನ್ನು ಮತ್ತು ಕುಶಾಲ ಜಗನ್ನಾಥ ಅವರಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಸಾಧನೆಯನ್ನು ಮಾಡಿದ್ದಾರೆ. ರೋಹಿಣಿ ಅವರು ಆಕಾಶವಾಣಿಯಲ್ಲಿ ಎ-ಗ್ರೇಡ್ ಗೌರವಾನ್ವಿತ ಕಲಾವಿದೆ.
ರೋಹಿಣಿ ಅವರು ದೇಶದ ಎಲ್ಲೆಡೆ ಮತ್ತು ವಿದೇಶದಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಕರ್ನಾಟಕದಾದ್ಯಂತ ಕುಟುಂಬ ಯೋಜನೆ ಕುರಿತು ಜನರಿಗೆ ಶಿಕ್ಷಣ ನೀಡುವ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಡಾ. ರೋಹಿಣಿ ಮೋಹನ್ ಅವರು ಸಹನೆ ವಜ್ರದ ಕವಚ, ಕನಸು, ಬೆಳದಿಂಗಲು (ರಾಷ್ಟ್ರಕವಿ ಕುವೆಂಪು ಅವರ ಹಾಡುಗಳ ಸಂಕಲನ) ಜೀವನ-ಕಲೆ, ಮಿಲನ, ಭಾವ ಸೌರಭ ಮತ್ತು ಭಾವ-ಭಕ್ತಿ ಮುಂತಾದ ಅನೇಕ ಆಲ್ಬಂ ಮೂಡಿಸಿದ್ದಾರೆ.
ಡಾ. ರೋಹಿಣಿ ಮೋಹನ್ ಅವರು ಸುಗಮ ಸಂಗೀತದ ವಿವಿಧ ಅಂಶಗಳ ಕುರಿತು ಕಾರ್ಯಾಗಾರ, ವಿಚಾರಗೋಷ್ಠಿಗಳು ಮತ್ತು ಉಪನ್ಯಾಸಗಳನ್ನು ನೀಡುತ್ತಾ ಬಂದಿದ್ದಾರೆ. ಸಂಗೀತ ಕ್ಷೇತ್ರದ ಕಲಾವಿದರ ಬಗ್ಗೆ ಲೇಖನಗಳನ್ನು ಬರೆದಿದ್ದಾರೆ. ಇವರು ರಚಿಸಿದ 'ಸುಗಮ ಸಂಗೀತ ಸಾಮ್ರಾಜ್ಞಿ ಎಚ್. ಆರ್. ಲೀಲಾವತಿ' ಕೃತಿ ಪ್ರಸಿದ್ಧಿ ಪಡೆದಿದೆ
ಡಾ. ರೋಹಿಣಿ ಮೋಹನ್ ಶಿವರಾಮ ಕಾರಂತರ ಸಂಗೀತ ನಾಟಕ ಕಿಸ್ಸಾ ಗೌತಮಿ, ಗೀತಾ ರಾಮಾಯಣ, ವೀರ ವಿರಾಗಿಣಿ ಅಕ್ಕ ಮಹಾದೇವಿ ಮತ್ತು ಪ್ರೇಮ ಕಾಶ್ಮೀರ ಮುಂತಾದವುಗಳ ಸಂಗೀತದಲ್ಲಿ ಭಾಗಿಯಾಗಿದ್ದಾರೆ.
ಡಾ. ರೋಹಿಣಿ ಮೋಹನ್ ಅವರಿಗೆ ಕರ್ನಾಟಕ ಕಲಾಶ್ರೀ, ಆರ್ಯಭಟ ಪ್ರಶಸ್ತಿ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ. ಅವರು 2001 ರಿಂದ 2004 ರವರೆಗೆ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿದ್ದರು. ಭಾವನಾ ಸುಗಮ ಸಂಗೀತ ಅಕಾಡೆಮಿಯ ಸ್ಥಾಪಕರು ಮತ್ತು ನಿರ್ದೇಶಕರಾಗಿದ್ದಾರೆ. 'ಇಂದು-ರೋಹಿಣಿ' ಸುಗಮ ಸಂಗೀತ ಟ್ರಸ್ಟಿನ ಸಹಸಂಸ್ಥಾಪಕರಾಗಿದ್ದಾರೆ.
Happy birthday Rohini Mohan
ಕಾಮೆಂಟ್‌ಗಳು