ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಉಮಾ ಗೋಪಾಲಸ್ವಾಮಿ


ಉಮಾ ಗೋಪಾಲಸ್ವಾಮಿ

ಡಾ. ಉಮಾ ಗೋಪಾಲಸ್ವಾಮಿ ಅವರು ಸಂಗೀತ ಕಲಾವಿದೆಯಾಗಿ ಮತ್ತು ಸಂಗೀತ ಶಾಸ್ತ್ರಜ್ಞೆಯಾಗಿ ಪ್ರಸಿದ್ಧರಾಗಿದ್ದವರು. ಇಂದು ಅವರ ಸಂಸ್ಮರಣೆ ದಿನ. 

ಉಮಾ ಗೋಪಾಲಸ್ವಾಮಿ 1946ರ ಆಗಸ್ಟ್ 15ರಂದು ಜನಿಸಿದರು.  ಚೆನ್ನರಾಯಪಟ್ಟಣದಲ್ಲಿ ಜನಿಸಿದ ಇವರು, ಮೈಸೂರಿನಲ್ಲಿ ಪದವಿ ಗಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಪ್ರಥಮ ವಿದ್ಯಾರ್ಥಿ ತಂಡದಲ್ಲೊಬ್ಬರಾಗಿ ಎಂ. ಎ. ಪದವಿ ಗಳಿಸಿದರು.   ಬೆಂಗಳೂರಿನಲ್ಲಿ ನೆಲೆಸಿದ್ದ ಉಮಾ ಅವರು,  ತಮ್ಮ ಪುತ್ರಿ ಪ್ರಸಿದ್ಧ ಚಲನಚಿತ್ರ ಮತ್ತು ನೃತ್ಯ ಕಲಾವಿದೆ ಲಕ್ಷ್ಮೀ ಗೋಪಾಲಸ್ವಾಮಿ ಅವರ ಕಲೆ ಮತ್ತು ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಮಾರ್ಗದರ್ಶಿಯಾಗಿ ಬಹು ದೊಡ್ಡ ಪಾತ್ರವಹಿಸಿದವರು.

ಉಮಾ ಗೋಪಾಲಸ್ವಾಮಿ ಅವರು ಹುಟ್ಟು ಸಂಗೀತಗಾರ್ತಿ.  ಸಂಗೀತದಲ್ಲಿನ ಶಾಸ್ತ್ರೀಯತೆಗೆ ಅಪಾರ ಬದ್ಧತೆಯ ಒಲವನ್ನಿರಿಸಿಕೊಂಡಿದ್ದವರು.  ಮಹಾನ್ ವಿದ್ವಾನ್ ಆರ್. ಕೆ. ಶ್ರೀಕಂಠನ್ ಅವರ ಪ್ರಧಾನ ಶಿಷ್ಯೆಯರಲ್ಲಿ ಒಬ್ಬರಾಗಿದ್ದ ಉಮಾ ಅವರು, ಆಕಾಶವಾಣಿಯ 'ಎ' ಶ್ರೇಣಿಯ ಕಲಾವಿದೆಯಾಗಿದ್ದರು.

ಉಮಾ ಗೋಪಾಲಸ್ವಾಮಿ ಅವರು 1996ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ 'ಸಂಗೀತ ಸಂಪ್ರದಾಯ ಪ್ರದರ್ಶನ' ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಗಳಿಸಿದ್ದರು. ಮಹಾನ್ ವಿದ್ವಾನ್ ಡಿ. ಕೆ. ಜಯರಾಮನ್ ಅವರ ಮಾರ್ಗದರ್ಶನ ಗಳಿಸಿದ ಉಮಾ ಅವರು ಅವರ ನೆಚ್ಚಿನ ಶಿಷ್ಯೆಯೂ ಆಗಿದ್ದರು.  1990ರ ದಶಕದಲ್ಲಿ ಉಮಾ ಅವರ 'ಸುಬ್ಬರಾಮ ದೀಕ್ಷಿತರ ಕೃತಿಗಳ' ಕುರಿತಾದ ಪ್ರಾತ್ಯಕ್ಷಿಕೆಗೆ ಸಂಗೀತ ಅಕಾಡೆಮಿಯಿಂದ ಶ್ರೇಷ್ಟ ಪ್ರಸ್ತುತಿಯ ಗೌರವ ಸಂದಿತು.  ಉಮಾ ಅವರು ಬೆಂಗಳೂರು ದೂರದರ್ಶನ ಕೇಂದ್ರದಿಂದ ರಾಷ್ಟ್ರೀಯ ಪ್ರಸಾರಕ್ಕೆ ಸಂಗೀತ ಕಾರ್ಯಕ್ರಮ ನೀಡಿದ ಪ್ರಥಮ ಮಹಿಳಾ ಕಲಾವಿದರು. 

ಸಂಗೀತ ಕಲಾವಿದೆ ಮತ್ತು ಸಂಗೀತ ಶಾಸ್ತ್ರಜ್ಞೆ ಆಗಿದ್ದ ಡಾ. ಉಮಾ ಗೋಪಾಲಸ್ವಾಮಿ ಅವರಿಗೆ ಶಾಸ್ತ್ರೀಯ ಸಂಗೀತವೇ ಅಲ್ಲದೆ ಕನ್ನಡ ಜಾನಪದ ಸಂಗೀತದಲ್ಲೂ ಅಪಾರ ಜ್ಞಾನವಿತ್ತು. ಸಂಗೀತ ಶಿಕ್ಷಕಿಯಾಗಿ ಅವರು ಅನೇಕರಿಗೆ ಅಕ್ಕರೆಯಿಂದ ಉದಾರವಾಗಿ ಸಂಗೀತ ಕಲಿಸಿದ್ದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿಯೂ ಹಲವಾರು ವರ್ಷಗಳ ಕಾಲ ಅತಿಥಿ ಉಪನ್ಯಾಸಕರಾಗಿ ಬೋಧಿಸುತ್ತಿದ್ದರು.  ಭಾವ ಪ್ರಧಾನ ಸಂಗೀತ ಪ್ರಸ್ತುತಿಗೆ ಹೆಸರಾಗಿದ್ದ ಅವರನ್ನು ಅವರ ಆಪ್ತ ಬಳಗದವರು ಡಾ. ಎಂ. ಎಲ್. ವಸಂತಕುಮಾರಿ ಅವರಿಗೆ ಹೋಲಿಸುವುದಿತ್ತು. 

ಡಾ. ಉಮಾ ಗೋಪಾಲಸ್ವಾಮಿ ಅವರು 2023ರ ಅಕ್ಟೋಬರ್ 19ರಂದು ಈ ಲೋಕವನ್ನಗಲಿದರು. ಈ ಮಹಾನ್ ಚೇತನಕ್ಕೆ ನಮನ.


Uma Gopalaswamy 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ