ಶೈಲಜಾ ಸುರೇಶ್
ಶೈಲಜಾ ಸುರೇಶ್
ಶೈಲಜಾ ಸುರೇಶ್ ಅವರು ಬರಹಗಾರ್ತಿಯಾಗಿ ಮತ್ತು ಲೇಖಿಕಾ ಸಾಹಿತ್ಯ ವೇದಿಕೆಯ ಸಂಚಾಲಕಿಯಾಗಿ ಹೆಸರಾಗಿದ್ದಾರೆ.
ಶೈಲಜಾ ಅವರು 1964ರ ಅಕ್ಟೋಬರ್ 2ರಂದು ಹಾಸನದಲ್ಲಿ ಜನಿಸಿದರು. ತಂದೆ ಹೆಚ್. ಹನುಮಂತಪ್ಪ. ತಾಯಿ ಸಾವಿತ್ರಮ್ಮ. ಇವರ ಶಾಲೆ ಮತ್ತು ಕಾಲೇಜು ವ್ಯಾಸಂಗ ಹಾಸನದಲ್ಲಿ ನೆರವೇರಿತು.
ಶೈಲಜಾ ಸುರೇಶ್ ಅವರು ಬರಹಗಳಲ್ಲಿ ಕಥೆ, ಕಾದಂಬರಿ, ಆಕಾಶವಾಣಿ - ದೂರದರ್ಶನಗಳ ರೂಪಕಗಳು ಮುಂತಾದ ವೈವಿಧ್ಯಗಳಿವೆ. ಅವರೊಬ್ಬ ಹವ್ಯಾಸಿ ಪತ್ರಕರ್ತೆಯೂ ಆಗಿದ್ದಾರೆ.
ಶೈಲಜಾ ಅವರ 250ಕ್ಕೂ ಹೆಚ್ಚು ಸಣ್ಣಕಥೆಗಳು ಸುಧಾ, ಮಯೂರ, ತರಂಗ, ತುಷಾರ, ಕರ್ಮವೀರ, ಕಸ್ತೂರಿ, ಪ್ರಿಯಾಂಕಾ, ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಕನ್ನಡ ಪ್ರಭ, ವಿಜಯ ಕರ್ನಾಟಕ ಸೇರಿದಂತೆ ನಾಡಿನ ಎಲ್ಲ ನಿಯತಕಾಲಿಕಗಳಲ್ಲಿ ಪ್ರಕಟಗೊಳ್ಳುತ್ತ ಬಂದಿವೆ. ಇವರ ಹಲವು ಕಾದಂಬರಿಗಳು ಧಾರಾವಾಹಿಯಾಗಿ ತರಂಗ, ಮಂಗಳ, ಕರ್ಮವೀರಗಳಲ್ಲಿ ಪ್ರಕಟವಾಗಿವೆ. ಸುಮಾರು 25 ಕೃತಿಗಳು ಪ್ರಕಟಗೊಂಡಿವೆ. ಇಂದಿರಾ, ಹೃದಯರಾಗ, ಬಾಳಿನ ಹೊಂಬೆಳಕು, ಪ್ರವಲ್ಲಿಕಾ, ಬರೆದೆ ನೀನು ನಿನ್ನ ಹೆಸರ, ಮಾಮರವೆಲ್ಲೊ ಕೋಗಿಲೆಯೆಲ್ಲೊ ಕಾದಂಬರಿಗಳು; ಹೊಂಗನಸು, ಬದುಕ ಭಿತ್ತಿಯ ಚಿತ್ರಗಳು ಮುಂತಾದ ಕಥಾಸಂಕಲನಗಳು; ಯತ್ರ ನಾರ್ಯಸ್ತು ಪೂಜ್ಯಂತೆ, ಮೊಗ್ಗರಳಿ ಹೂವಾಗಿ, ಅನಾವರಣ, ಮಳಕೆಯೊಡೆದ ಬೀಜಗಳು ಮುಂತಾದ ಸಂಪಾದನೆಗಳು; ಬದುಕು ಬರಿಯ ಭ್ರಮೆಯೆ, ಅಕ್ಕಮ್ಮ, ಬಾನುಲಿ ರೂಪಕಗಳು ಮುಂತಾದವು ಇವುಗಳಲ್ಲಿ ಸೇರಿವೆ. ಇವರು ನಾಟಕಗಳನ್ನೂ ರಚಿಸಿದ್ದು ಹವ್ಯಾಸಿ ಪತ್ರಿಕಾ ಸಂಪಾಕಿಯೂ ಆಗಿದ್ದಾರೆ.
ಶೈಲಜಾ ಅವರ ಬರಹ ಮತ್ತು ಪ್ರಸ್ತುತಿಯ ಅನೇಕ ಕಾರ್ಯಕ್ರಮಗಳು ಆಕಾಶವಾಣಿ ಮತ್ತು ಕಿರುತೆರೆಗಳಲ್ಲಿ ಮೂಡಿವೆ. ಇವರು 2000ದ ವರ್ಷದಿಂದ ಮೊದಲ್ಗೊಂಡು ಲೇಖಿಕಾ ಸಾಹಿತ್ಯ ವೇದಿಕೆಯ ಸಂಚಾಲಕಿಯಾಗಿ ಅನೇಕ ಯಶಸ್ವೀ ಕಾರ್ಯಕ್ರಮಗಳ ರೂವಾರಿಯಾಗಿದ್ದಾರೆ. ಅವರು ಹಾಸನ ಜಿಲ್ಲಾ ಕನ್ನಡ ಲೇಖಕಿಯರ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷಿಣಿಯಾಗಿ (1999-2001) ಮತ್ತು 'ಕಿಶೋರವೃಂದ' ನಿರ್ದೇಶಕಿಯಾಗಿ ಸಹಾ ಕಾರ್ಯನಿರ್ವಹಿಸಿದ್ದರು.
ಶೈಲಜಾ ಸುರೇಶ್ ಅವರು ಕರ್ಮವೀರ ದೀಪಾವಳಿ ವಿಶೇಷಾಂಕ : ಪ್ರಥಮ ಬಹುಮಾನ 1997, ತುಷಾರ ಎಚ್.ಎಂ.ಟಿ. ಕಥಾಪ್ರಶಸ್ತಿ 2000, ಸಂಕ್ರಮಣ ಹನಿಗವನ ಪ್ರಶಸ್ತಿ 2000, ಕರ್ನಾಟಕ ಲೇಖಕಿಯರ ಸಂಘದ ಪ್ರೇಮಾಭಟ್ ದತ್ತಿನಿಧಿ ಬಹುಮಾನ, ಅನುಪಮಾ ನಿರಂಜನ ಕಥಾಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಸೇವಾರತ್ನ ಪ್ರಶಸ್ತಿ, ಮುಂತಾದ ಅನೇಕ ಬಹುಮಾನಗಳಿಗೆ ಭಾಜನರಾಗಿದ್ದರು. ಅವರಿಗೆ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ದೇವರ ದಾಸಿಮಯ್ಯ ಪ್ರಶಸ್ತಿ, ಸಾಹಿತ್ಯ ಸೇತು ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.
ಶೈಲಜಾ ಸುರೇಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Shylaja Suresh
ಕಾಮೆಂಟ್‌ಗಳು