ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಜಾ ರವಿ ವರ್ಮ


 ರಾಜಾ ರವಿ ವರ್ಮ


ಮೈಸೂರಿನ ಅರಮನೆಗಳ ಗೋಡೆಗಳನ್ನು ಅಲಂಕರಿಸಿರುವ ಚಿತ್ರ ವರ್ಣ ವೈಭೋಗಗಳ ಪ್ರತಿ ಚೌಕಟ್ಟಿನ ತುದಿಯಲ್ಲೂ ಒಬ್ಬ ರಾಜನ ಹೆಸರಿದೆ.  ಆ ರಾಜನೇ ರಾಜಾ ರವಿ ವರ್ಮ.  ಅವರು ರಾಜ ಎಂದು ಕರೆಸಿಕೊಂಡದ್ದು ಲಾರ್ಡ್ ಕರ್ಜನ್ ಎಂಬ ವೈಸರಾಯ್ ಗೌರವ ಪ್ರಧಾನ ಮಾಡಿದ ಸಂದರ್ಭದಲ್ಲಿ.  ಹಾಗೆ ಕರೆದಿದ್ದು ಆಗಿನ ತಿರುವಾಂಕೂರು  ದೊರೆ ಮೂಲಂ ತಿರುನಾಳರ ಪ್ರತಿಷ್ಠೆಯನ್ನೇ ಕೆಣಕಿತ್ತು.  ರಾಜರೆಲ್ಲರೂ ಹಾಗೇ ತಾನೇ.  ಅವರಿಗೆ ರಾಜಸ್ಥಾನ ಮುಖ್ಯ, ರಾಜತನವಲ್ಲ.  ಮೈಸೂರಿನ ಪ್ರಧಾನ ಅರಮನೆ, ಹಿಂದಿನ ಅರಮನೆಯಾದ ಜಗನ್ಮೋಹನ ಅರಮನೆಗಳಲ್ಲಿ ಒಂದು ಸುತ್ತು ಸುತ್ತಿದರೆ ಈ ರಾಜಾ ರವಿವರ್ಮರ  ಮೋಹಕ ಕಲೆಯ ಮೋಡಿಗೆ ಒಲಿಯದಿರಲು ಸಾಧ್ಯವೇ ಇಲ್ಲ.  ಒಂದು ರೀತಿಯಲ್ಲಿ ದಕ್ಷಿಣ ಭಾರತದಲ್ಲಿ ಕಾಣುತ್ತಿರುವ ಬಹುತೇಕ ದೇವರ ಪಟಗಳು ಮತ್ತು  ಕ್ಯಾಲೆಂಡರುಗಳಲ್ಲಿ ಕಾಣುತ್ತಿರುವ ಬಹುತೇಕ ದೇವತೆಗಳ ಕಲ್ಪನೆಗಳನ್ನು ಹೆಚ್ಚು ಜಾರಿಗೆ ತಂದವರು ರಾಜಾ ರವಿವರ್ಮರೇ.  

ಈ ವಿಶ್ವದಲ್ಲಿ ಅನೇಕ ಪ್ರಸಿದ್ಧ ಚಿತ್ರಕಾರರಿದ್ದಾರೆ.  ಅವರೆಲ್ಲರ ಚಿತ್ರಗಳನ್ನು ಆಸ್ವಾದಿಸಲು ವಿವಿಧ ಕಲಾಭಿರುಚಿ ಬೇಕು.  ರಾಜಾ ರವಿವರ್ಮರ ಚಿತ್ರಗಳೆಲ್ಲಾ ಕಳೆದ ಒಂದೂವರೆ ಶತಮಾನದ ಭಾರತೀಯ ಬದುಕಿನ ಅವಿಭಾಜ್ಯ ಅಂಗಗಳೇ ಆಗಿವೆ.  ವಿದೇಶಿಯರ ಸ್ತಬ್ಧ ‘ಗಿಡ – ನೀರು - ದೋಣಿ – ಚಂದ್ರ’ಗಳ ಚಿತ್ರಗಳ ಜಾಗದಲ್ಲಿ ದೇವರ ಪಟಗಳ, ಕ್ಯಾಲೆಂಡರುಗಳ ಚಿತ್ರಗಳನ್ನು ಸರಬರಾಜು ಮಾಡಿದ ಕೀರ್ತಿ ರಾಜಾ ರವಿವರ್ಮರಿಗೆ ಸೇರುತ್ತದೆ.  

ಭಾರತೀಯ ಪಾರಂಪರಿಕ ಚಿತ್ರಕಲೆಗೆ ವಿದೇಶಿ ವರ್ಣರಂಜಿತ ಚಮತ್ಕಾರವನ್ನು ಬೆರೆಸಿದವರು ರವಿವರ್ಮ.  ಟ್ರಾವಂಕೂರು ಸಂಸ್ಥಾನಕ್ಕೆ ಸೇರಿದ ರವಿವರ್ಮರು 1848ರ ಏಪ್ರಿಲ್ 29ರಂದು ಜನಿಸಿದರು.  ಅವರ ತಂದೆ ಎಜುಮಾವಿಲ್ ನೀಲಕಂಠನ್ ಭತ್ತಾದ್ರಿಪಾದ್  ಮಹಾನ್ ವಿದ್ವಾಂಸರು.  ಅವರ ತಾಯಿ ಉಮಯಾಂಬ ಥಂಪುರತ್ತಿ ಮಹಾನ್ ಕವಯತ್ರಿ.  ಅವರ ಕೃತಿ ‘ಪಾರ್ವತಿ ಸ್ವಯಂವರಂ’ ಎಂಬ ಕೃತಿಯನ್ನು ಅವರ ಕಾಲಾನಂತರದಲ್ಲಿ ರವಿವರ್ಮರು ಪ್ರಕಟಿಸಿದರು.  ಅವರ ಪೂರ್ವಜರು ಮಲಬಾರಿನ ಬೇಯಿಪೋರ್ ರಾಜ ಮನೆತನಕ್ಕೆ ಸೇರಿದ್ದರೆಂಬ ಉಲ್ಲೇಖ ಕೂಡಾ ಇದೆ.  

ರವಿವರ್ಮರು ರಾಮಸ್ವಾಮಿ ನಾಯ್ಡು ಅವರಿಂದ  ಜಲಚಿತ್ರಕಲೆಯನ್ನೂ ಡಚ್ ಕಲಾವಿದ ಥಿಯೋಡರ್ ಜೆನ್ಸನ್ ಅವರಿಂದ ತೈಲ ವರ್ಣಚಿತ್ರ ಕಲೆಯನ್ನೂ ಕಲಿತರು.  

ರಾಜಾ ರವಿಮರ್ಮರ ಪ್ರಸಿದ್ಧ ಚಿತ್ರಗಳೆಲ್ಲವೂ ಭಾರತೀಯ ಪುರಾಣ ಕಲೆಗಳನ್ನು ಚಿತ್ರಿಸುವಂತಾಗಿವೆ. 'ದಮಯಂತಿಯ ಹಂಸ ಸಂಭಾಷಣೆ’, ‘ಕೃಷ್ಣನ ರಾಯಭಾರ’, ‘ಜಟಾಯು ಸಂಹಾರ’, ‘ಅರ್ಜುನನಲ್ಲಿ  ಸುಭದ್ರೆಯ ಕುರಿತಾದ ಮೋಹ’, ‘ಶ್ರೀರಾಮಚಂದ್ರನಿಗೆ  ಸಮುದ್ರರಾಜನ ಮೇಲುಂಟಾದ ಕೋಪ’, ‘ಶಂತನು ಮತ್ತು ಮತ್ಸ್ಯಗಂಧಿ’, ‘ಶಕುಂತಲೆಯ ಅನ್ಯಮನಸ್ಕತೆ’,  ‘ಶಕುಂತಲೆಯ ಪ್ರೇಮಪತ್ರ’, ‘ಇಂದ್ರಜಿತ್ತುವಿನ ದಿಗ್ವಿಜಯ’,  ‘ಭಿಕ್ಷೆ ನೀಡುತ್ತಿರುವ ಮಹಿಳೆ’, ‘ಹಳ್ಳಿಯ ಹುಡುಗಿ’, ‘ಶ್ರೀರಾಮ ಪಟ್ಟಾಭಿಷೇಕ’ ,  ‘ರಾಧೆಯ ವಿರಹ’, ‘ಶ್ರೀಮನ್ನಾರಾಯಣ’, ‘ಮಹಾಲಕ್ಷ್ಮಿ’, ‘ನರಸಿಂಹ’, ‘ಪರಶಿವನ ಸಂಸಾರ’, ‘ಸಿದ್ಧಿ ಬುದ್ಧಿಯರ ವರಿಸಿದ ಗಣಪ’ ಹೀಗೆ ಅವರಿಂದ ಚಿತ್ರಿತವಾದ ದೇವ ದೇವತೆಗಳು, ಜನಪದ ನಾಯಕ ನಾಯಕಿಯರು, ಸಂಗೀತ-ನಾಟ್ಯ-ಸಾಂಸ್ಕೃತಿಕ-ಪ್ರೇಮಭರಿತ ಔನ್ನತ್ಯ ಭಾವಗಳು ಅನೇಕ.

ನಮ್ಮ ದೇಶದಲ್ಲಿನ ಸಾವಿರಾರು ವರ್ಷಗಳ ಶಿಲ್ಪಕಲೆಗಳಲ್ಲಿ, ಇಲ್ಲಿನ ಜನಪದವು  ಕಲ್ಪಿಸಿಕೊಂಡಿರುವ  ದೇವ ದೇವತೆಗಳು ಮತ್ತು ಅವರ ಉನ್ನತ ಭಾವಗಳು ನಿರಂತರವಾಗಿ ನೆಲೆಗೊಂಡಿವೆ.  ಆಧ್ಯಾತ್ಮದ ಅಂತರಾಳದ ಭಾವವನ್ನು ಪರಮಾತ್ಮವೆಂದು ಪೂಜಿಸಿದ ವಿಶ್ವದಲ್ಲಿ ಕಲೆ ಸಂಸ್ಕೃತಿಗಳು ಮೂಡಿಸಿದ ಚಿತ್ರಗಳು ಕ್ರಮೇಣವಾಗಿ ದೇವತೆಗಳಿಗೆ ಮನುಷ್ಯ ರೂಪವನ್ನು ಸೃಷ್ಟಿಸುವುದರಲ್ಲಿ ಅಥವಾ ಆರೋಪಿಸುವುದರಲ್ಲಿ ಪ್ರಮುಖ ಪಾತ್ರವಹಿಸಿವೆ.  ಕಳೆದ ಒಂದೂವರೆ ಶತಮಾನದಲ್ಲಿ ರಾಜಾ ರವಿವರ್ಮರ ಚಿತ್ರಗಳು ಇಂತಹ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಿವೆ.  

ಸುಮಾರು 58 ವರ್ಷಗಳು ಮಾತ್ರ ಬಾಳಿದ ರವಿವರ್ಮರು 1906ರ ಅಕ್ಟೋಬರ್ 2ರಂದು ನಿಧನರಾದರು.  

ರಾಜಾ ರವಿವರ್ಮರು ರೂಪದರ್ಶಿಯೋರ್ವರನ್ನು ತಮ್ಮ ಚಿತ್ರಕಲೆಗಳಿಗೆ ಸ್ಪೂರ್ತಿಯಾಗಿ ಬಳಸಿದ್ದರೆಂದು ಹಲವು ಕಥಾನಕಗಳಿವೆ. ರಾಜಾ ರವಿವರ್ಮರ ಚಿತ್ರಕಲೆ ಪ್ರದರ್ಶನ, ಕಲೆಗಳಾದ ರಂಗಭೂಮಿ ಮತ್ತು ಸಿನಿಮಾದಂತಹ  ಮಾಧ್ಯಮದಲ್ಲಿ ಕೂಡಾ ಪ್ರಭಾವಿಸಿರುವುದನ್ನು ನಿಚ್ಚಳವಾಗಿ ಗುರುತಿಸಬಹುದಾಗಿದೆ.

On the birth anniversary of Raja Ravi Varma 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ