ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಧನವಂತರಿ


 ಧನ್ವಂತರಿ


ಧನ್ವಂತರಿ ದೇವತೆಗಳ ವೈದ್ಯ ಹಾಗೂ ಆಯುರ್ವೇದ ಶಾಸ್ತ್ರ ಪ್ರವರ್ತಕನೆಂದು ಖ್ಯಾತ. ಆದರೂ ಈತನೊಬ್ಬ ಕಾಲ್ಪನಿಕ ವ್ಯಕ್ತಿ. ಈತನ ಹೆಸರು ವೇದಗಳಲ್ಲಿ ಸೂಚಿತವಾಗಿಲ್ಲ. 

ಕೌಶಿಕ ಸೂತ್ರದಲ್ಲಿ ಈತನ ಹೆಸರು ಪ್ರಾಯಶಃ 
ಮೊತ್ತಮೊದಲು ಸೂಚಿತವಾಗಿದೆ ಎನ್ನಬಹುದು. ರಾಮಾಯಣ ಮತ್ತು ಪುರಾಣಗಳಲ್ಲಿ ಈತ ಹಾಲಿನ ಕಡಲನ್ನು ಕಡೆದಾಗ ಹೊರಬಂದ ಹದಿನಾಲ್ಕು ರತ್ನಗಳಲ್ಲೊಬ್ಬನೆಂದು ಉಕ್ತವಾಗಿದೆ. ಹಾಗೆ ಹೊರ ಬಂದಾಗ ಈತ ಬಿಳಿಯ ಉಡುಪುಗಳನ್ನು ಧರಿಸಿದ್ದು ಕೈಗಳಲ್ಲಿ ಅಮೃತ ತುಂಬಿರುವ ಕಲಶವನ್ನು ಹಿಡಿದುಬಂದ. ಭಗವತ ಪುರಾಣದಲ್ಲಿ ಈತ ವಿಷ್ಣುವಿನ ಹನ್ನೆರಡನೆಯ ಅವತಾರವೆಂದು ಉಕ್ತವಾಗಿದೆ. ಬ್ರಹ್ಮ ವೈವರ್ತಪುರಾಣದಲ್ಲಿ ಈತ ಸರ್ವವಿಷ ಚಿಕಿತ್ಸೆ ಹಾಗೂ ಇತರ ಚಿಕಿತ್ಸೆಗಳಲ್ಲಿ ಪ್ರವೀಣನೆಂದು ಹೇಳಿದೆ. ಈತನ ಭಾವಚಿತ್ರ ರೀತಿಯ ಪ್ರತಿಮೆಯ ವಿಚಾರವಾಗಿ ಭಾಗವತಪುರಾಣ ಮಾರ್ಕಂಡೇಯ ಪುರಾಣ ವಿಷ್ಣುಧರ್ಮೋತ್ತರ ಪುರಾಣ ವಿಷ್ಣು ಪುರಾಣಗಳಲ್ಲೂ ಶಿಲ್ಪರತ್ನ ಸಮರಾಂಗಣಸೂತ್ರಧಾರ ಎಂಬ ಶಿಲ್ಪಶಾಸ್ತ್ರ ಗ್ರಂಥಗಳಲ್ಲಿಯೂ ವಿವರಣೆಗಳಿವೆ. ಆದರೆ ಈ ಗ್ರಂಥಗಳಲ್ಲಿ ವರ್ಣಿತವಾಗಿರುವಂತೆ ಇರುವ ಧನ್ವಂತರಿಯ ವಿಗ್ರಹ ಇದುವರೆಗೂ ದೊರೆತಿರುವಂತೆ ತೋರುವುದಿಲ್ಲ.

ಎರಡನೆಯದಾಗಿ ಮಹಾಭಾರತಕ್ಕೆ ಸೇರಿದ ಹರಿವಂಶ ಪುರಾಣದಲ್ಲಿ ಅಷ್ಟಾಂಗ ಆಯುರ್ವೇದ ಶಾಸ್ತ್ರ ಪ್ರವರ್ತಕನಾದ ಕಾಶಿರಾಜನ ವಂಶದಲ್ಲಿ ಈತ ಜನ್ಮ ತಾಳಿದನೆಂದೂ ಕಾಶಿ ರಾಜ ಅಥವಾ ಧನ್ವರಾಜನ ಮಗನಾದ್ದರಿಂದ ಈತನನ್ನು ಧನ್ವಂತರಿ ಎಂದು ಕರೆಯಲಾಯಿತೆಂದೂ ಸೂಚಿತವಾಗಿದೆ. ಕಾಶಿರಾಜರ ವಂಶವೃಕ್ಷ ಹರಿವಂಶದಲ್ಲಿ ಈ ರೀತಿ ಸೂಚಿತವಾಗಿದೆ : ಕಾಶೇಯ - ದೀರ್ಘತಪಸ್ಸು - ಧನ್ವ- ಧನ್ವಂತರಿ - ಕೇತುಕಾಮ - ಭೀಮರಥ (ಭೀಮಸೇನ) - ದಿವೋದಾಸ - ಪ್ರತರ್ದನ - ವತ್ಸ - ಅಲರ್ಕ. ಕಾಶೇಯನ ಪೌತ್ರನಾದ ಧನ್ವ ಹಾಲಿನ ಸಮುದ್ರವನ್ನು ಕಡೆದ ಸಮಯದಲ್ಲಿ ಉತ್ಪನ್ನವಾದ ಅಬ್ಜ ದೇವತೆಯ ಆರಾಧನೆಯಿಂದ ಅಬ್ಜಾವತಾರನಾದ ಧನ್ವಂತರಿಯನ್ನು ಮಗನನ್ನಾಗಿ ಪಡೆದ. ಧನ್ವಂತ ಭರದ್ವಾಜರಿಂದ ಆಯುರ್ವೇದದ ಉಪದೇಶಗಳನ್ನು ಪಡೆದು ಆ ವಿಜ್ಞಾನವನ್ನು ಶಲ್ಯ, ಶಾಕಲ್ಯ, ಕಾಯಚಿಕಿತ್ಸಾ, ಭೂತವಿದ್ಯಾ, ಕೌಮಾರಭೃತ್ಯ, ಅಗದತಂತ್ರ, ರಸಾಯನಶಾಸ್ತ್ರ ಮತ್ತು ವಾಜೀಕರಣ ತಂತ್ರಗಳೆಂದು ಎಂಟು ಭಾಗಗಳಾಗಿ ಶಿಷ್ಯರಿಗೆ ಉಪದೇಶಿಸಿದ.

ಮೂರನೆಯದಾಗಿ ಸುಶ್ರುತ ಸಂಹಿತೆಯಲ್ಲಿ ಕಾಶಿಯ ರಾಜನಾದ ದಿವೋದಾಸನೇ ಧನ್ವಂತರಿ ಎಂದು ಹೇಳಿದೆ. ಈತ ಆಯುರ್ವೇದದಲ್ಲಿ ಪಾರಂಗತನಾಗಿದ್ದುದರಿಂದ ಈತನನ್ನು ಧನ್ವಂತರಿ ದಿವೋದಾಸನೆಂದು ಕರೆಯುತ್ತಾರೆ. ಅಗ್ನಿಪುರಾಣ ಮತ್ತು ಗರುಡ ಪುರಾಣಗಳಲ್ಲಿ ವೈದ್ಯ ಧನ್ವಂತರಿಯ ವಂಶದಲ್ಲಿ ನಾಲ್ಕನೆಯವನೇ ದಿವೋದಾಸನೆಂಬ ಉಲ್ಲೇಖವಿದೆ. ಅಗ್ನಿಪುರಾಣದಲ್ಲಿ ಮನುಷ್ಯ, ಕುದುರೆ, ಹಸುಗಳಿಗೆ ಸಂಬಂಧಿಸಿದ ಆಯುರ್ವೇದಜ್ಞಾನ ಧನ್ವಂತರಿ ದಿವೋದಾಸ ಮತ್ತು ಸುಶ್ರುತರ ನಡುವಿನ ಗುರು ಶಿಷ್ಯ ಸಂಭಾಷಣೆಯ ರೂಪದಲ್ಲಿ ವರ್ಣಿತವಾಗಿದೆ. ಧನ್ವಂತರಿದಿವೋದಾಸ ಸುಶ್ರುತನಿಗೆ ಆಯುರ್ವೇದವನ್ನು ಉಪದೇಶಿಸಿದನೆಂದು ಹೇಳಿದೆ. ಎರಡನೆಯ ಚಂದ್ರಗುಪ್ತ ವಿಕ್ರಮಾದಿತ್ಯನ ಆಸ್ಥಾನದ ನವಮಣಿಗಳೆಂದು ಪ್ರಸಿದ್ಧರಾದವರಲ್ಲಿ ಭಿಷಗ್ವರ ಧನ್ವಂತರಿಯೂ ಒಬ್ಬ.

ನಾಲ್ಕನೆಯದಾಗಿ ಶಲ್ಯ ಶಾಸ್ತ್ರದಲ್ಲಿ ಪಾರಂಗತರಾದವರನ್ನು ಧನ್ವಂತರಿ ಎಂದೂ ಕರೆಯುತ್ತಾರೆ. ಸುಶ್ರುತ ಸಂಹಿತೆಯ ಪ್ರಕಾರ ಆಯುರ್ವೇದದ ಎಂಟು ಅಂಗಗಳಲ್ಲಿ ಶಲ್ಯವೇ ಪ್ರಧಾನವಾದುದರಿಂದ ಶಲ್ಯ ಅಂಗದಲ್ಲಿ ನಿಪುಣನಾದ ವೈದ್ಯನನ್ನು ಪ್ರಾರಂಭದಲ್ಲಿ ಧನ್ವಂತರಿ ಎಂದೇ ಕರೆಯುತ್ತಿದ್ದರು. ವೈದ್ಯರನ್ನು ಮೂರು ವಿಧವಾಗಿ ವಿಂಗಡಿಸಿ ಒಂದೇ ರೋಗಕ್ಕೆ ನೂರು ಔಷಧಿಗಳನ್ನು ಬಲ್ಲವನನ್ನು ವೈದ್ಯನೆಂದೂ ಇನ್ನೂರು ಔಷಧಿಗಳನ್ನು ಬಲ್ಲವನನ್ನು ಭಿಷಕ್ ಎಂದೂ ಮೂನ್ನೂರು ಔಷಧಿಗಳನ್ನು ಬಲ್ಲವನನ್ನು ಧನ್ವಂತರಿ ಎಂದು ಕರೆಯುತ್ತಿದ್ದರು. ವೈದ್ಯ ಚಿಕಿತ್ಸೆಯಲ್ಲಿ ನಿಪುಣನಾದವನನ್ನು ಅನಂತರ ಧನ್ವಂತರಿ ಎಂದು ಕರೆಯಲಾಯಿತು.

ಅಭಿಧಾನ ರಾಜೇಂದ್ರಕೋಶವೆಂಬ ಜೈನ ವಿಶ್ವಕೋಶದಲ್ಲಿ ಧನ್ವಂತರಿ ವಿಜಯಪುರದ ರಾಜನಾದ ಕನಕರಥನ ವೈದ್ಯನೆಂದು ಸೂಚಿತವಾಗಿದೆ. ಈ ರೀತಿ ಧನ್ವಂತರಿ ಎಂಬ ಮಾತು ಮೊದಲು ಸ್ವರ್ಗೀಯ ವ್ಯಕ್ತಿ ಎನಿಸಿ ಅನಂತರ ಕಾಲ್ಪನಿಕ ವ್ಯಕ್ತಿಯಾಗಿ ಆಮೇಲೆ ಎರಡನೆಯ ಚಂದ್ರಗುಪ್ತ ವಿಕ್ರಮನ ಆಸ್ಥಾನದ ನವರತ್ನಗಳಲ್ಲಿ ಒಬ್ಬನೆಂದೆನಿಸಿ ಚಾರಿತ್ರಿಕ ವ್ಯಕ್ತಿಯಾಗಿ ಕೊನೆಗೆ ನಿಪುಣನಾದ ವೈದ್ಯನೆಂಬ ಆರ್ಥದಲ್ಲಿ ರೂಢಿಗೆ ಬಂತು.

ಸ್ಕಾಂದ ಗರುಡ ಮತ್ತು ಮಾರ್ಕಂಡೇಯ ಪುರಾಣಗಳಲ್ಲಿರುವ ಕಥೆಯ ಪ್ರಕಾರ ಗಾವಲನೆಂಬ ಋಷಿ ಸಂಚರಿಸುತ್ತಿರುವಾಗ ಬಹಳ ಬಾಯಾರಿದವನಾಗಿ ದಾರಿಯಲ್ಲಿ ನೀರನ್ನು ಹೊತ್ತು ಬರುತ್ತಿದ್ದ ವೈಶ್ಯಕನ್ಯೆಯಾದ ವೀರಭದ್ರಾ ಎಂಬಾಕೆಯಿಂದ ನೀರು ಪಡೆದು ತೃಪ್ತನಾಗಿ ಆಕೆಗೆ ಉತ್ತಮವಾದ ಮಗನಾಗಲೆಂದು ಆಶೀರ್ವದಿಸಿದನೆಂದೂ ಕಾಲಕ್ರಮೇಣ ಆಕೆಯಲ್ಲಿ ಜನಿಸಿದ ಗಂಡು ಮಗು ಬಾಲ್ಯದಲ್ಲಿಯೇ ಸಕಲಶಾಸ್ತ್ರಗಳಲ್ಲಿ ಪಾರಂಗತನಾಗಿ ಅಶ್ವಿನೀಕುಮಾರರಿಂದ ಆಯುರ್ವೇದವನ್ನು ಕಲಿತು ಧನ್ವಂತರಿ ಎಂದು ಪ್ರಖ್ಯಾತನಾಗಿ ವೈದ್ಯಶಾಸ್ತ್ರ ಪ್ರವರ್ತಕನಾದನೆಂದೂ ವರ್ಣಿತವಾಗಿದೆ.

ಧನ್ವಂತರಿಯ ಹೆಸರಿನಲ್ಲಿ ಪ್ರಸಿದ್ಧವಾದ ಹಲವಾರು ಗ್ರಂಥಗಳಿವೆ. ಅವನ್ನು ಈ ರೀತಿ ಸೂಚಿಸಬಹುದು : 1. ಧನ್ವಂತರಿ ಔಷಧ ಪ್ರಯೋಗ 2. ಕಾಲಜ್ಞಾನ 3. ಚಿಕಿತ್ಸಾ ತತ್ತ್ವಜ್ಞಾನ 4. ಚಿಕಿತ್ಸಾದೀಪಿಕಾ 5. ಚಿಕಿತ್ಸಾಸಾರ 6. ಬಾಲಚಿಕಿತ್ಸಾ 7. ಯೋಗಚಿಂತಾಮಣಿ 8. ಯೋಗದೀಪಿಕಾ 9. ವಿದ್ಯಾಪ್ರಕಾಶಚಿಕಿತ್ಸಾ 10. ಧನ್ವಂತರಿ ಗುಣಾಗುಣಯೋಗಶತ 11. ಧನ್ವಂತರಿ ಗ್ರಂಥ 12. ಧನ್ವಂತರಿ ನಿಘಂಟು 13. ಧನ್ವಂತರಿ ಪಂಚಕ 14. ಧನ್ವಂತರಿ ವಿಲಾಸ 15. ಧನ್ವಂತರಿ ಸಾರನಿಧಿ 16. ನಿಬಂಧ ಸಂಗ್ರಹ 17. ವೈದ್ಯಭಾಸ್ಕರೋದಯ 18. ವೈದ್ಯವಿದ್ಯಾವಿನೋದ ಮತ್ತು 19. ಆಯುರ್ವೇದ ಸಾರಾವಳಿ.

ಧನ್ವಂತರಿಯ ಕೃತಿಗಳೆಂದು ಸೂಚಿತವಾಗಿರುವ ಈ ಗ್ರಂಥಗಳು ಹೆಚ್ಚಾಗಿ ಅವನ ಜನಪ್ರಿಯತೆಯನ್ನು ಸೂಚಿಸುತ್ತವೆ. ಈ ಗ್ರಂಥಗಳಲ್ಲಿ ಧನ್ವಂತರಿ ನಿಘಂಟು ಅತ್ಯಂತ ಪ್ರಾಚೀನವಾದುದು.

ಧನ್ವಂತರಿಯನ್ನು ನೆನೆವಾಗ ಗೋಪಾಲದಾಸರು ರಚಿಸಿರುವ ಈ ಗೀತೆ ನೆನಪಾಗುತ್ತಿದೆ:

ಆವ ರೋಗವು ಎನಗೆ ದೇವ ಧನ್ವಂತ್ರಿ
ಸಾವಧಾನದಿ ಎನ್ನ ಕೈಪಿಡಿದು ನೋಡಯ್ಯ

ಹರಿಮೂರ್ತಿಗಳು ಎನ್ನ ಕಂಗಳಿಗೆ ಕಾಣಿಸವು
ಹರಿಯ ಕೀರ್ತನೆಯು ಕೇಳಿಸದು ಕಿವಿಗೆ
ಹರಿಮಂತ್ರ ಸ್ತೋತ್ರ ಬಾರದು ಎನ್ನ ನಾಲಿಗೆಗೆ
ಹರಿಪ್ರಸಾದವ ಜಿಹ್ವೆ ಸವಿಯದಯ್ಯ

ಹರಿಪಾದ ಸೇವೆಗೆ ಹಸ್ತಗಳು ಚಲಿಸವು
ಗುರುಹಿರಿಯರಂಘ್ರಿಗೆ ಶಿರ ಬಾಗದು
ಹರಿಯ ನಿರ್ಮಾಲ್ಯವಾಘ್ರಾಣಿಸದು ನಾಸಿಕವು
ಹರಿಯಾತ್ರೆಗಳಿಗೆನ್ನ ಕಾಲೇಳದಯ್ಯ

ಅನಾಥಬಂಧು ಗೋಪಾಲವಿಠ್ಠಲರಾಯ
ಎನ್ನ ಭಾಗದ ವೈದ್ಯ ನೀನೆ ನೀನೇ
ಅನಾದಿಕಾಲದ ಭವರೋಗ ಕಳೆಯಯ್ಯ
ನಾನೆಂದಿಗೂ ಮರೆಯೆ ನಿನ್ನ ಉಪಕಾರ
                                          
ಮಾಹಿತಿ ಆಧಾರ: ಮೈಸೂರು ವಿಶ್ವಕೋಶ

Dhanwantari

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ